×
Ad

ಅಪರೂಪದ ಅಪ್ಪ-ಮಗನ ಅನುಬಂಧದ ಕಥೆ

Update: 2025-09-13 16:56 IST

ಚಿತ್ರ: s/o ಮುತ್ತಣ್ಣ

ನಿರ್ದೇಶಕ: ಶ್ರೀಕಾಂತ್ ಹುಣಸೂರು

ನಿರ್ಮಾಪಕಿ: ಬಿ.ಎಂ. ಮಂಜುಳಾ

ತಾರಾಗಣ: ಪ್ರಣಾಮ್ ದೇವರಾಜ್, ಖುಷಿ ರವಿ, ರಂಗಾಯಣ ರಘು ಮೊದಲಾದವರು.

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಅಪ್ಪ ಮಗನ ಸಂಬಂಧವನ್ನು ಸಾರುವ ಸಿನೆಮಾ. ಆದರೆ ಹಾಗಂತ ಪ್ರೇಕ್ಷಕನ ಮೇಲೆ ಭಾವನೆಗಳನ್ನು ಬಲವಂತವಾಗಿ ಹೇರುವುದಿಲ್ಲ ಎನ್ನುವುದೇ ಚಿತ್ರದ ವಿಶೇಷತೆ.

ಕಥೆ ಶುರುವಾಗುವುದು ಕಾಶಿಯಿಂದ. ಆದರೆ ಶುರುವಾದಷ್ಟೇ ವೇಗದಲ್ಲಿ ಕಥಾ ನಾಯಕ ಶಿವು ಕಾಶಿ ಸೇರಲು ಕಾರಣವಾದ ಹಿನ್ನೆಲೆ ಕರ್ನಾಟಕದಲ್ಲೇ ಕಾಣುತ್ತದೆ. ಅಲ್ಲಿಂದ ಶಿವು ಮತ್ತು ತಂದೆ ನಿವೃತ್ತ ಮೇಜರ್ ಮುತ್ತಣ್ಣನ ಅನುಬಂಧಗಾಥೆ ಆರಂಭ. ಆ ಹಳೆಮನೆಯಲ್ಲಿ ತಂದೆ ಮಗ ಮಾತ್ರ ವಾಸವಾಗಿರುತ್ತಾರೆ. ಅಪ್ಪನಿಗೆ ಕ್ಯಾಪ್ಟನ್ ಎಂದು ಕರೆಯುವ ಪುತ್ರ. ಅರವತ್ತೈದರ ಅಪ್ಪನಿಗೆ ವಯೋ ಸಹಜ ಸಕ್ಕರೆ ಕಾಯಿಲೆಯೊಂದೇ ಅಸೌಖ್ಯ. ಆದರೆ ಬೆಳಗ್ಗಿನ ಕಾಫಿಯಿಂದ ಹಿಡಿದು ರಾತ್ರಿಯ ಊಟದ ತನಕ ಪುತ್ರನದೇ ಅಡುಗೆ. ಅಷ್ಟೇ ಅಲ್ಲ ನಿತ್ಯರಾತ್ರಿ ತಾರಸಿ ಮೇಲೆ ಜತೆಯಾಗಿಯೇ ಮದ್ಯ ಸೇವನೆ. ಇಬ್ಬರ ನಡುವಿನ ಮಾತುಗಳನ್ನು ಕೇಳಿದರೆ ತಂದೆ-ಮಗ ಹೀಗೂ ಮಾತನಾಡಬಹುದೇ ಎನ್ನುವ ಸಂದೇಹ ಮೂಡದಿರದು. ಮಧ್ಯಂತರದ ಹೊತ್ತಿಗೆ ಈ ಸಂದೇಹಕ್ಕೆ ಪರಿಹಾರವೂ ಸಿಗುತ್ತದೆ. ಆದರೆ ಅಷ್ಟರಲ್ಲಾಗಲೇ ಒಂದು ಸಮಸ್ಯೆ ಶುರುವಾಗಿರುತ್ತದೆ.

ಅಪ್ಪನಿಗೆ ಮದ್ದು ನೀಡಲು ಬಂದಾಕೆ ಪುತ್ರನಿಗೆ ಮುದ್ದಾಗಿ ಕಾಣುತ್ತಾಳೆ. ಡಾಕ್ಟರ್ ಸಾಕ್ಷಿಯನ್ನು ಅಗ್ನಿಸಾಕ್ಷಿಯಾಗಿ ಮನೆಗೆ ಕರೆಸಲು ಶಿವು ಯೋಜನೆ ಹಾಕುತ್ತಾನೆ. ಮಗನ ಅಭಿಲಾಷೆಗೆ ತಂದೆ ಮುತ್ತಣ್ಣನ ಪ್ರತಿಕ್ರಿಯೆ ಏನು? ಸಾಕ್ಷಿಯ ತಂದೆಯ ಕನಸೇನಾಗಿತ್ತು? ಶಿವು ಕಾಶಿಗೆ ಹೋಗಿದ್ದೇಕೆ? ಜೋಡಿ ಪ್ರೇಮಿಗಳ ಕಥೆ ಏನಾಯಿತು ಎನ್ನುವ ಪ್ರಶ್ನೆಗಳಿಗೆ ಚಿತ್ರಮಂದಿರದಲ್ಲಿ ಉತ್ತರ ಕಂಡುಕೊಳ್ಳಬಹುದು.

ಮುತ್ತಣ್ಣನ ಪುತ್ರನಾಗಿ ದೇವರಾಜ್ ಪುತ್ರ ಪ್ರಣಾಮ್ ನಟಿಸಿದ್ದಾರೆ. ಮೊದಲ ನೋಟದಲ್ಲೇ ಇಷ್ಟವಾಗಬಲ್ಲ ಮುಖಭಾವದ ನಟ. ಹೃದಯ ತುಂಬಿ ಬರುವಂಥ ನಗು. ನಗುತ್ತಲೇ ಕಣ್ಣಾಲಿ ತುಂಬಿ ಭಾವುಕತೆ ತೋರಬಲ್ಲ ಪ್ರತಿಭಾವಂತ. ಹಾಡಿಗೆ ಹೆಜ್ಜೆ ಹಾಕುವಾಗಲೂ ತಮ್ಮದೇ ಹೆಚ್ಚುಗಾರಿಕೆಯ ಛಾಪು. ಶಿವು ಪಾತ್ರಕ್ಕೆ ಸಿಕ್ಕ ಅವಕಾಶವನ್ನು ಚೊಕ್ಕವಾಗಿಯೇ ಬಳಸುವಲ್ಲಿ ಪ್ರಣಾಮ್ ಗೆದ್ದಿದ್ದಾರೆ. ಶಿವು ತಂದೆ ಮುತ್ತಣ್ಣನಾಗಿ ರಂಗಾಯಣ ರಘು ಎಂದಿನಂತೆ ರಂಗಾದ ಅಭಿನಯ ನೀಡಿದ್ದಾರೆ. ಮಾಜಿ ಕ್ಯಾಪ್ಟನ್‌ನ ಗರ್ವ, ಮಕ್ಕಳಿಂದ ದೂರಾಗಿರುವ ತಂದೆಯ ಅಸಹಾಯಕತೆ, ಶಿವು ಮೇಲಿರುವ ಕಾಳಜಿ ಎಲ್ಲವನ್ನೂ ಸಮರ್ಥವಾಗಿ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ದಿನಸಿ ಅಂಗಡಿ ಹುಡುಗನಲ್ಲಿ ಮಾತನಾಡುವಾಗ ಟಿಪಿಕಲ್ ರಂಗಾಯಣ ರಘು ಶೈಲಿ ಪ್ರತ್ಯಕ್ಷಗೊಳ್ಳುತ್ತದೆ.

ತಂದೆ ಮಗನ ಕಥೆಯಲ್ಲಿ ತಿರುವು ಶುರುವಾಗುವುದೇ ಸಾಕ್ಷಿಯ ಪ್ರವೇಶದಿಂದ. ಸಾಕ್ಷಿಯಾಗಿ ಖುಷಿಗೆ ಅಂಥ ಅವಕಾಶಗಳೇನೂ ಇಲ್ಲ. ಆದರೆ ಮೊದಲ ತಿರುವು ಸೃಷ್ಟಿಯಾಗುವುದೇ ಖುಷಿಯ ಪ್ರವೇಶದಿಂದ. ಪ್ರತೀ ಬಾರಿ ಖುಷಿ ಕಾಣಿಸಿಕೊಂಡಾಗಲೂ ಏನಾದರೊಂದು ಹೊಸ ಬೆಳವಣಿಗೆ ನಡೆಯುವ ಮೂಲಕ ಖುಷಿಯ ಪಾತ್ರ ಪ್ರಾಧಾನ್ಯತೆ ಪಡೆಯುತ್ತಾ ಹೋಗುತ್ತದೆ. ಈ ಎಲ್ಲ ಸಂದರ್ಭಕ್ಕೆ ಬೇಕಾದ ತುಂಟತನ, ಆಕ್ರೋಶ, ಪಶ್ಚಾತ್ತಾಪ ಹೀಗೆ ಎಲ್ಲ ಭಾವಕ್ಕೂ ಸಲ್ಲುತ್ತೇನೆಂದು ಸಾಬೀತು ಮಾಡಿದ್ದಾರೆ.

ಈ ಚಿತ್ರದಲ್ಲಿ ಪಾತ್ರಧಾರಿಗಳು ಕಡಿಮೆ. ಪರದೆ ಮೇಲೆ ಮೂರನೇ ಪಾತ್ರವಾಗಿ ಎಂಟ್ರಿಕೊಡುವ ದಿನಸಿ ಅಂಗಡಿಯ ಯುವಕ ಗಿರೀಶ್ ಶಿವಣ್ಣನ ನಟನೆಯಿಂದ ದೃಶ್ಯ ಹೊಸ ಕಳೆ ಪಡೆದುಕೊಳ್ಳುತ್ತದೆ. ಗಂಭೀರ ಮುಖದಲ್ಲೇ ಹಾಸ್ಯ ನೀಡುವುದು ಗಿರೀಶ್ ಶಕ್ತಿ. ಒಂದಷ್ಟು ದಿನಸಿ ಅಂಗಡಿಯಲ್ಲಿ ತೆಲುಗು ಮಾತಾಡುವುದು ಬೆಂಗಳೂರಲ್ಲಿ ಸಹಜ. ಆದರೆ ಅದನ್ನೇ ಕಾರಣವಾಗಿಸಿ ಆ ಭಾಷೆಯನ್ನೇ ಹೆಚ್ಚು ಬಳಸಿರುವುದು ಅದರಲ್ಲೂ ಹಾಸ್ಯಕ್ಕೆಂದೇ ಬಳಸಿರುವುದು ಅಕ್ಷಮ್ಯ.

ತಂದೆ ಮಗನ ಹಾಡು ವಿಭಿನ್ನವಾಗಿದೆ. ಆದರೆ ಹಾಡಲ್ಲೇ ನೀಡಿದ ಸಂದೇಶ-ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಸುತ್ತಾಡಿದ್ದು!

ಕೆಲವೊಂದು ದೃಶ್ಯಗಳಲ್ಲಿ ಸಂಭಾಷಣೆಗಳು ಚೆನ್ನಾಗಿಯೇ ಇದ್ದರೂ ಸಾಂದರ್ಭಿಕವಲ್ಲದೆ ಪ್ರಾಸಕ್ಕಾಗಿ ತುರುಕಿದಂಥ ಅನುಭವ ನೀಡುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಅಪ್ಪನ ಹುಡುಕಾಟಕ್ಕಾಗಿ ಹೊರಟ ಶಿವು ತನ್ನ ಪರ್ಸ್‌ನಲ್ಲಿರುವ ಫೋಟೊ ತೋರಿಸಿ ಪರಿಚಯ ಕೇಳುವುದು ನಾಟಕೀಯವಾಗಿದೆ. ಯಾಕೆಂದರೆ ಕೈನಲ್ಲೇ ಮೊಬೈಲ್ ಫೋನಿದ್ದರೂ ಅದರಲ್ಲಿ ಫೋಟೊ ಇಟ್ಟುಕೊಳ್ಳದೆ ಪರ್ಸ್‌ನಲ್ಲಿ ಇರಿಸಿರುವುದು ತಮಾಷೆಯಾಗಿದೆ. ಸಿನೆಮಾ ಆರಂಭದಲ್ಲೇ ಶಿವು ಮನೆಗೆ ಸಾಕ್ಷಿಯ ಚಿತ್ರ ಬಂದು ಸೇರುತ್ತದೆ. ಆದರೆ ಅದರ ಹಿನ್ನೆಲೆ ಅಥವಾ ಮುನ್ನೆಲೆ ಕೊನೆಯವರೆಗೂ ಬಯಲಾಗುವುದಿಲ್ಲ. ಇಂಥ ಸಣ್ಣ ಪುಟ್ಟ ಗೊಂದಲಗಳ ಹೊರತಾಗಿ ಇದೊಂದು ಅಪ್ಪಟ ಕೌಟುಂಬಿಕ ಚಿತ್ರ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕರ ಪಾತೂರು

contributor

Similar News