ಗುಜರಿ ಅಂಗಡಿಯಿಂದ ಅಂತಾರಾಷ್ಟ್ರೀಯ ಪ್ರಶಸ್ತಿಯವರೆಗೆ ಸಾಧಕರೊಬ್ಬರ ಯಶೋಗಾಥೆ
ಕುಂದಾಪ್ರ ಕನ್ನಡಕ್ಕೆ ಮೊದಲ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಪ್ರಶಸ್ತಿ, ಬ್ಯಾರಿ ಭಾಷೆಯಲ್ಲಿ ಮೊದಲ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ತಂದು ಕೊಟ್ಟ ಯಾಕೂಬ್ ಖಾದರ್ ಗುಲ್ವಾಡಿ
ಕುಂದಾಪುರ: ತಾಲೂಕಿನ ಗುಲ್ವಾಡಿ ಎಂಬ ನದಿಗಳಿಂದ ಆವೃತ್ತವಾದ ಪುಟ್ಟ ಗ್ರಾಮದ ನಿವಾಸಿ ಯಾಕೂಬ್ ಖಾದರ್ ಗುಲ್ವಾಡಿಯವರು ಕುಂದಾಪ್ರ ಕನ್ನಡಕ್ಕೆ ಮೊದಲ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಪ್ರಶಸ್ತಿ ಅಲ್ಲದೇ, ಬ್ಯಾರಿ ಭಾಷೆಯಲ್ಲಿ ಚಲನಚಿತ್ರ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ. ಹೊಟ್ಟೆಪಾಡಿಗಾಗಿ ಗುಜರಿಯಂಗಡಿ ನಡೆಸುತ್ತಿದ್ದ ಯಾಕೂಬ್ ತನಗಿದ್ದ ಸಿನೆಮಾ, ಸಾಹಿತ್ಯಾಸಕ್ತಿಗಳ ಮೂಲಕ ಸಾಧನೆ ಶಿಖರಕ್ಕೇರಿದ ಯಶೋಗಾಥೆಯಿದು.
‘ಟ್ರಿಪಲ್ ತಲಾಖ್’ಗೆ ಪ್ರಶಸ್ತಿಯ ಗರಿ: ಮೈಸೂರಿನಲ್ಲಿ ನಡೆದ 2018 ಮತ್ತು 2019ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾಕೂಬ್ ಖಾದರ್ ಗುಲ್ವಾಡಿಯವರ ಚೊಚ್ಚಲ ನಿರ್ದೇಶನದ ‘ಟ್ರಿಪಲ್ ತಲಾಖ್’ ಬ್ಯಾರಿ ಭಾಷೆಯ ಸಿನಿಮಾಕ್ಕೆ 2019ನೇ ಸಾಲಿನ ಕನ್ನಡದ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಅತ್ಯುತ್ತಮ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ್ದರು.
2017ರಲ್ಲಿ ತನ್ನ ಗುಲ್ವಾಡಿ ಟಾಕೀಸ್ ಸಂಸ್ಥೆಯ ಮೂಲಕ ಯಾಕೂಬ್ ಮೊದಲಾಗಿ ‘ರಿಸರ್ವೇಶನ್’ ಎಂಬ ಕುಂದಾಪುರ ಕನ್ನಡದಲ್ಲಿ ಸಿನೆಮಾ ನಿರ್ಮಿಸಿದ್ದು, ಅದು ರಾಷ್ಟ್ರ ಪ್ರಶಸ್ತಿ (ರಜತಕಮಲ) ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಇದೀಗ ಇದೇ ಸಂಸ್ಥೆಯ ಬ್ಯಾನರ್‌ನಲ್ಲಿ ಕನ್ನಡದ ಪ್ರಾದೇಶಿಕ ಭಾಷೆಯಾದ ಬ್ಯಾರಿ ಭಾಷೆಯಲ್ಲಿ ನಿರ್ಮಿಸಿದ ಸಿನೆಮಾ ‘ಟ್ರಿಪಲ್ ತಲಾಖ್’ ರಾಜ್ಯ ಪ್ರಶಸ್ತಿ ಪಡೆಯುವ ಮೂಲಕ ಸುದ್ದಿ ಮಾಡಿದೆ. ಮುಂಬೈನ ಪ್ರಭು ನಾರಾಯಣ ಸುವರ್ಣ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ಜೊತೆಯಾಗಿ ತಮ್ಮ ಗುಲ್ವಾಡಿ ಟಾಕೀಸ್ ಸಂಸ್ಥೆಯ ಮೂಲಕ ಈ ಸಿನೆಮಾ ನಿರ್ಮಿಸಿದ್ದರು.
ಅರಸಿ ಬಂದ ಪ್ರಶಸ್ತಿಗಳು: ಇವರ ಸಾಧನೆಗಾಗಿ 2005ರಲ್ಲಿ ಸುನಾಮಿ ಸಂತ್ರಸ್ತರ ಕಾರ್ಯಾಚರಣೆಗೆ ಕೇಂದ್ರ ಸರಕಾರದ ಗೌರವ, 2012ರಲ್ಲಿ ಅಬುಧಾಬಿ ಕರ್ನಾಟಕ ಸಂಘದ ಗೌರವ, 2016ರಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪುರಸ್ಕಾರ(ರಾಜ್ಯಪ್ರಶಸ್ತಿ), 2017ರಲ್ಲಿ ರಿಸರ್ವೇಶನ್ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ(ರಜತ ಕಮಲ), 2018ರಲ್ಲಿ ರಿಸರ್ವೇಶನ್ ಚಿತ್ರಕ್ಕೆ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಸಿನೆಮಾ ಪ್ರಶಸ್ತಿ, 2019ರಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯ ಮಟ್ಟದ ಗೌರವ, 2019ರಲ್ಲಿ ಟ್ರಿಪಲ್ ತಲಾಖ್ ಚಿತ್ರಕ್ಕೆ ರಾಜ್ಯ ಪ್ರಶಸ್ತಿ (ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ), 2022ರಲ್ಲಿ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2023ರಲ್ಲಿ ಸೌದಿ ಅರಬಿಯಾ ಕನ್ನಡ ಸಂಘದ ಗೌರವ, 2024ರಲ್ಲಿ ಅಮೆರಿಕದ ಪ್ರತಿಷ್ಠಿತ ’ಅಕ್ಕ’ ಸಮ್ಮೇಳನದ ಗೌರವಕ್ಕೆ ಪಾತ್ರರಾಗಿದ್ದಾರೆ.
ವಿವಿಧ ದೇಶಗಳಲ್ಲಿ ನಡೆಯುವ ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಗಳು ಮತ್ತು ವಿಶ್ವ ಕನ್ನಡ ಸಮ್ಮೇಳನಗಳಲ್ಲಿ ಭಾಗವಹಿಸುವ ಸಲುವಾಗಿ ಯಾಕೂಬ್ ಖಾದರ್ ಗುಲ್ವಾಡಿಯವರು ಅಮೆರಿಕ, ಇಂಗ್ಲೆಂಡ್, ಕೆನಡಾ, ದುಬೈ, ತಾಂಝೇನಿಯ, ಮಲೇಶ್ಯ, ಕೀನ್ಯಾ, ಸಿಂಗಾಪುರ, ಇಂಡೋನೇಶ್ಯ, ಥೈಲ್ಯಾಂಡ್, ಸೌದಿ ಅರಬಿಯ, ಒಮಾನ್, ಮಾಲ್ಡೀವ್ಸ್, ಶ್ರೀಲಂಕಾ, ಅಂಡಮಾನ್ - ನಿಕೊಬಾರ್ ಪ್ರವಾಸ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಶ್ರೀಲಂಕಾ ಒಂದು ಸುಂದರ ದ್ವೀಪ ರಾಷ್ಟ್ರ, ಅಂಡಮಾನ್ ಮತ್ತು ಸುನಾಮಿ, ನನ್ನ ಫಾರೀನ್ ಟೂರಿಂಗ್ ಟಾಕೀಸ್ ಎಂಬ ಮೂರು ಪ್ರವಾಸ ಕಥನಗಳನ್ನು ಯಾಕೂಬ್ ಬರೆದಿದ್ದಾರೆ. ಕ್ರಿಯಾಶೀಲ ವ್ಯಕ್ತಿತ್ವದ ಇವರು ಕೋಟೇಶ್ವರದ ಯುವ ಮೆರಿಡಿಯನ್ ಆವರಣದಲ್ಲಿ ಪಾರಂಪರಿಕ ವಸ್ತುಗಳ ಸಂಗ್ರಹ, ಗುಲ್ವಾಡಿಯ ತಮ್ಮ ಗುಜರಿ ಅಂಗಡಿ ಮುಂಭಾಗದಲ್ಲಿ ಕಿರು ಗ್ರಂಥಾಲಯ ನಿರ್ಮಿಸಿ ಗಮನ ಸೆಳೆದಿದ್ದರು.
ಗುಜರಿ ಅಂಗಡಿಯಿಂದ ಪ್ರಾರಂಭ: ಮೂಲತಃ ಬ್ಯಾರಿ ಮನೆ ಮಾತಿನ (ಆಡು ಭಾಷೆ) ಯಾಕೂಬ್ ಖಾದರ್ ಗುಲ್ವಾಡಿ ಹೆಚ್ಚಿನ ವಿದ್ಯಾಭ್ಯಾಸ ಇಲ್ಲದ ಕಾರಣಕ್ಕೆ ತನ್ನ ಊರು ಗುಲ್ವಾಡಿಯಲ್ಲಿ ಸ್ವಂತಕ್ಕೊಂದು ಗುಜರಿ ಅಂಗಡಿ ಇಟ್ಟುಕೊಂಡಿದ್ದರು. ಸಾಹಿತ್ಯ, ಓದು, ಸಿನೆಮಾದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಯಾಕೂಬ್ ಕನ್ನಡದ ಹೆಸರಾಂತ ನಿರ್ದೇಶಕ ಡಾ.ಗಿರೀಶ ಕಾಸರವಳ್ಳಿಯವರ ರಾಷ್ಟ್ರ ಪ್ರಶಸ್ತಿ (ಸ್ವರ್ಣ ಕಮಲ) ವಿಜೇತ ‘ಗುಲಾಬಿ ಟಾಕೀಸ್’ ಸಿನೆಮಾದಲ್ಲಿ ಹಿರಿಯ ನಟಿ ಉಮಾಶ್ರೀಯವರಿಗೆ ವಸ್ತ್ರ ವಿನ್ಯಾಸ ಮಾಡುವ ಮೂಲಕ ಸಿನೆಮಾ ರಂಗ ಪ್ರವೇಶಿಸಿದರು.
ಯಾಕೂಬ್ ಖಾದರ್ ಗುಲ್ವಾಡಿ ಮುಂದೆ ನಿಖಿಲ್ ಮಂಜು ಲಿಂಗೇಗೌಡ ನಿರ್ದೇಶನದ ಮೂರು ರಾಜ್ಯ ಪ್ರಶಸ್ತಿ, ಎರಡು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪಡೆದ ಕುಂದಾಪ್ರ ಕನ್ನಡದ ‘ಹಜ್’ ಸಿನೆಮಾಕ್ಕೆ ವಸ್ತ್ರ ವಿನ್ಯಾಸ ಮತ್ತು ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಂತರದ ದಿನಗಳಲ್ಲಿ ಮೂಲ ಯಕ್ಷಗಾನದ ಕಥಾ ಹಂದರ ಹೊಂದಿರುವ ‘ಗೆರೆಗಳು’ ಎಂಬ ಕನ್ನಡ ಸಿನೆಮಾದಲ್ಲಿ ಯಕ್ಷಗಾನದ ಮೇರು ಕಲಾವಿದರಾದ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳ್ಕೂರು ಕೃಷ್ಣಯಾಜಿಯವರೊಂದಿಗೆ ಕೆಲಸ ಮಾಡಿದರು. ಮುಂದೆ ಕನ್ನಡದ ಇನ್ನೊಬ್ಬರು ಹಿರಿಯ ಪ್ರತಿಭಾವಂತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ರ ಇಸ್ಟಕಾಮ್ಯ ಮತ್ತು ಇಂಡಿಯ ವರ್ಸಸ್ ಇಂಗ್ಲೆಂಡ್‌ನಲ್ಲೂ ಕೆಲಸ ಮಾಡಿದ್ದರು.
ಇವೆಲ್ಲದರ ಮಧ್ಯೆಯೂ ಪ್ರಸಕ್ತ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ, ದಕ್ಷಿಣ ಕನ್ನಡ/ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ(ಕೆಡಿಪಿ) ತ್ರೈಮಾಸಿಕ ಸಭೆಯ ಸದಸ್ಯರಾಗಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ, ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ, ಉಡುಪಿ ಜಿಲ್ಲಾ ವಕ್ಫ್ ಮಂಡಳಿಯ ಸದಸ್ಯರಾಗಿ ಜೊತೆಗೆ ಹಲವು ಸಮಾಜಮುಖಿ ಸಂಘ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.