ಯುವರ್ ಆನರ್..... ಸಂವಿಧಾನವನ್ನು ಪಾಲಿಸಿ, ಸಾವರ್ಕರ್ ಸಂಹಿತೆಯನ್ನಲ್ಲ?!
ಸಾಂದರ್ಭಿಕ ಚಿತ್ರ
ಯುವರ್ ಆನರ್ (?)..!
ದೆಹಲಿ ಸಂಚಿನ ಅಪರಾಧಗಳ ಅನುಶ್ರೇಣಿಯಲ್ಲಿ
ಉಮರನ, ಇಮಾಮನ ಪಾತ್ರ ದೊಡ್ಡದೆಂದು
ಅದಕೆಂದೆ ಜಾಮೀನು ದಕ್ಕದೆಂದು..
ಮೋದಿ ಕಾನೂನುಗಳಿಗೆ ಮತ್ತಷ್ಟು
ಮುಳ್ಳುಗಳನ್ನೂ ಸೇರಿಸಿಬಿಟ್ಟಿರಿ...
ಆದರೆ ಯುವರ್ ಆನರ್,
ನನಗೊಂದು ಅನುಮಾನ..!
ಕೊಲ್ಲುಕೊಲ್ಲೆಂದ ನರಸಿಂಗಾನಂದ
ಹಂಚುತ್ತಲೇ ಇದ್ದಾನೆ ಭರ್ಜಿಗಳನ್ನು
ಹೇಗೆ ಕೊಟ್ಟಿರಿ ಜಾಮೀನನ್ನು?
ಅಪರಾಧಗಳ ಅನುಶ್ರೇಣಿಯಲ್ಲಿ
ನರಸಿಂಗನ ಸ್ಥಾನವೇನು?
ಗೊಲಿಮಾರೋ ಎಂದ ಅನುರಾಗ
ಮೋದಿಯ ಕ್ಯಾಬಿನೆಟ್ಟಿನಲ್ಲಿ ಹೇಗೆ ಮಂತ್ರಿಯಾದನು?
ದಾಖಲಿಸಲಿಲ್ಲವೇಕೆ ಕೇಸನ್ನು, ಯುವರ್ ಆನರ್
ಅಪರಾಧಗಳ ಅನುಶ್ರೇಣಿಯಲ್ಲಿ
ಈ ಠಾಕೂರನ ಸ್ಥಾನವೇನು?
ಶಿಕ್ಷೆ ಮಾಫಿ ಮಾಡಿ ನೀವೇ
ಸ್ವಚ್ಛಂದವಾಗಿ ಬದುಕಲು ಬಿಟ್ಟಿರೇಕೆ
ಸರ್ದಾರ್ ಪುರದ ಮುಸ್ಲಿಮರ ಹಂತಕರನ್ನು?
ಅಪರಾಧಗಳ ಶ್ರೇಣಿಯಲ್ಲಿ
ಮುಸ್ಲಿಮ್ ಹತ್ಯೆಗೆ ಸ್ಥಾನವೇ ಇಲ್ಲವೇನು?
ರೈತರನ್ನು ಕೊಂದ ಸಂಘಿಸಂಸದನ ಮಗನಿಗೆ ವರ್ಷವೊಂದರಲ್ಲೇ ಹೇಗೆ ಸುಪ್ರೀಂ ಜಾಮೀನು?
ಯುವರ್ ಆನರ್
ಅಪರಾಧಗಳ ಅನುಶ್ರೇಣಿಯಲ್ಲಿ
ಈ ಅಶಿಶ್ ಮಿಶ್ರನ ಸ್ಥಾನವೇನು?
ಆದರೆ,
ಭರ್ಜಿಯ ಬದಲು ಪ್ರೀತಿಯನ್ನು ,
ದ್ವೇಶದ ಬದಲು ಕ್ರಾಂತಿ ಕನಸನ್ನು ಹಂಚಿದ
ಉಮರರನ್ನು, ಇಮಾಮರನ್ನು, ಕಬೀರ ಜ್ಯೋತಿಗಳಿಗೆ ಮಾತ್ರ
ವಿಧಿಸುತ್ತಲೇ ಇದ್ದೀರಿ
ಕೊನೆಗಾಣದ ಸೆರೆಯನ್ನು ..
ಯುವರ್ ಆನರ್ , ಹಾಗೆಂದೇ ನನಗೀ ಅನುಮಾನ...
ನಿಮ್ಮದು ಅಪರಾಧಗಳ ಶ್ರೇಣಿಕರಣವೋ?
ಆರೋಪಿಗಳ ನಾಮಾಧಾರಿತ ಶ್ರೇಣಿಕರಣವೋ?
ಬೆಸೆದ ರಕ್ತದ ಮೂಲ ಹುಡುಕುವ
ಸಂಘದರಮನೆಯ ಸಂಚನ್ನು
ಕಾನೂನೆಂದು ಘೋಷಿಸಿಬಿಟ್ಟಿರಿ ..
ಭಾರತವನ್ನು ಕೂಡಿ ಬೆಸೆವ
ಬೀದಿ ಬೆಸುಗೆಯ ಕಸುಬನ್ನು
ದೇಶದ್ರೋಹಿಗಳ ಸಂಚೆಂದು ಮಾನ್ಯ ಮಾಡಿದಿರಿ !
ಯುವರ್ ಆನರ್,
ಕೂಡಿಸುವುದು ಸಂಚೋ?
ಒಡೆಯುವುದು ಸಂಚೋ?
ದೆಹಲಿಯ ಬೀದಿಗಳು ಸಂಚೋ ?
ಪ್ರಧಾನಿಯ ಗುಪ್ತ ಕಾರ್ಯಸೂಚಿ ಸಂಚೋ?
ಯುವರ್ ಆನರ್..
ನೀವು ಪಾಲಿಸುತ್ತಿರುವುದೇನು?
ಸಮಾನ ಕಾನೂನಿನ ಸಂವಿಧಾನವನ್ನೋ ?
ತಾರತಮ್ಯದ ಸಾವರ್ಕರ್ ಸಂಹಿತೆಯನ್ನೋ ?
-ಶಿವಸುಂದರ್