×
Ad

ಬಾನು-ದೀಪಾ ಬರಹದ ಬಗ್ಗೆ...

Update: 2025-06-05 12:18 IST

ಕನ್ನಡದ ಹಿರಿಯ ಕತೆಗಾರ್ತಿ ಬಾನು ಮುಷ್ತಾಕ್ ಅವರ ಕತೆಗಳ ಮರು ಓದಿಗೆ ಬೂಕರ್ ಪ್ರಶಸ್ತಿ ಸಡನ್ ಆದ ಒತ್ತಾಸೆ ನೀಡಿದೆ. ಇದು ಬಾನು ಅವರ ಕತೆಗಳ ಮರು ಓದಷ್ಟೇ ಅಲ್ಲ, ಇತರ ಗಮನಾರ್ಹ ಲೇಖಕರ ಮರು ಓದಿಗೂ ನಮ್ಮನ್ನು ಹಚ್ಚಬೇಕಿದೆ. ಈ ಮರು ಓದು 25 ವರ್ಷಗಳಿಗೊಮ್ಮೆಯಾದರೂ ನಡೆಯಲೇ ಬೇಕು. ಯಾಕೆಂದರೆ ಆಗ ಹೊಸ ತಲೆಮಾರು ತಯಾರಾಗಿರುತ್ತದೆ. ಹಳೆ ತಲೆಮಾರು ಮರು ಓದಿನ ಮೂಲಕ ಹೊಸ ಒಳನೋಟಗಳನ್ನು ಪಡೆಯಲೂ ಬಹುದು.

ಈ ಹಿಂದೆ 25 ವರ್ಷಗಳ ಕಾಲಾವಧಿ ಅಂದರೆ ಬಲು ಸುದೀರ್ಘ ಅನ್ನಿಸುತ್ತಿತ್ತು! ಉದಾ: 50ರ ಕೃತಿಗಳು 75ರ ವೇಳೆಗೆ ಓದಿಸಿಕೊಂಡ ಬಗೆ, ಅಂಚಿಗೆ ಸರಿದ ಬಗೆ ಗಮನಿಸಬೇಕು. 75ರ ವೇಳೆಗೆ ಅಂದರೆ ಸುಮಾರಾಗಿ ನನ್ನ ತಲೆಮಾರಿನ ಆರಂಭಕ್ಕೆ 50ರ ದಶಕದ ಅನೇಕ ಕೃತಿ/ಲೇಖಕರು ಮಾಸಿಹೋಗಿದ್ದರು. ಓದಿನ ನಿಕಷದ ಬಗೆ ಅದು. ನಂತರದ ಐವತ್ತು ವರ್ಷಗಳಲ್ಲಿ ಈ ರೀತಿಯ ಮಥನ ನಡೆದೇ ಇಲ್ಲ. ಈಗೀಗಂತೂ ಫೇಸ್‌ಬುಕ್‌ನಲ್ಲಿ ತಮ್ಮ ಕೃತಿಗಳ ಬಗ್ಗೆ ಬಂದ ಗುಡ್ ವಿಲ್ ಸ್ಪಂದನೆಗಳನ್ನು ಮರು ಪ್ರಕಟಿಸುವುದೇ ಓದು ಅನ್ನಿಸಿದೆ. ಇರಲಿ.

ದೀಪಾ ಅವರು ಬಾನು ಕತೆಗಳ ಓದಿಗೆ ಕನ್ನಡಿಗರನ್ನೇ ಹಚ್ಚಿದ್ದಾರೆ. ಇದು ಇಂಗ್ಲಿಷ್‌ನ ಪ್ರಭಾವಳಿಯ ವ್ಯಂಗ್ಯ ಕೂಡಾ. ಬಾನು ಅವರ ಕತೆಗಳನ್ನು ದೀಪಾ ಅವರ ಅನುವಾದದ ಜೊತೆಗೇ ಈಗ ಓದುವ ಕ್ರಮ ಶುರುವಾದರೆ ಒಳ್ಳೆಯದೇ..

ಬಾನು ಅವರ ಕತೆಗಳು ಅನಾವರಣಗೊಳಿಸುವ ಸಾಮಾಜಿಕ ಲೋಕದ ಬಗ್ಗೆ ತುಂಬಾ ಮಂದಿ ಗಣ್ಯ ವಿಮರ್ಶಕರು ಬರೆದಿದ್ದಾರೆ. ಅದು ಗಣನೀಯ.

ಮೂಲತಃ ಅವರು ಕತೆ ಬರೆವ ಅಪ್ರೋಚ್‌ನಲ್ಲಿರುವ ಆಂತರಿಕ ವಿಮರ್ಶೆಯ ಹೆಜ್ಜೆ ಹಾದಿ ಎಲ್ಲರ ಗಮನ ಸೆಳೆದಿದೆ. ಕತೆಯಾಗಿಸುವುದೆಂದರೆ ರೂಪಾಂತರದ ಕೌಶಲ್ಯದ ಮೂಲಕ ಅದಕ್ಕೊಂದು ಕಲಾಕೃತಿಯ ಸ್ವರೂಪ ನೀಡುವುದು. ಕತೆಯ ಒಳಗಿರುವ ‘ಕಥಾ ಸಾರಾಂಶ’ ಈ ಪ್ರಕ್ರಿಯೆ ಬಗ್ಗೆ ಹೆಚ್ಚೇನನ್ನೂ ಹೇಳದು. ಅವರ ಕೆಲವು ಕತೆಗಳಲ್ಲಿರುವ ಮೆಲೊಡ್ರಮಾಟಿಕ್ ವಿವರಣೆ ಕತೆಯನ್ನು ಅಳ್ಳಕಗೊಳಿಸಿರುವ ಬಗ್ಗೆ ಈಗಾಗಲೇ ವಿಮರ್ಶಕರು ಹೇಳಿದ್ದಾರೆ. ಆದರೆ ಅವರ ‘ಗೆದ್ದಿರುವ’ ಕತೆಗಳ ನೆರೇಟಿವ್‌ನ ಹವಣಿಕೆ ಕುತೂಹಲಕಾರಿಯಾದದ್ದು.

ದೀಪಾ ಅವರು ಅನುವಾದಕ್ಕೆ ಆಯ್ಕೆ ಮಾಡಿಕೊಂಡಿರುವ ಕತೆಗಳು ಈ ಚಲನೆಯನ್ನು ಗ್ರಹಿಸಲು ಯತ್ನಿಸಿವೆ.

ಬಾನು ಅವರ ಕತೆಗಳು ಕೂಡಾ ಆಂಶಿಕವಾಗಿ ಕನ್ನಡಕ್ಕೆ ಅನುವಾದಗೊಂಡ ರಚನೆಗಳೆಂಬುದನ್ನು ನಾವು ಗಮನಿಸಬೇಕು. ಒಂದು ಸಾಮಾಜಿಕ/ಭಾಷಿಕ ವಲಯಕ್ಕೆ ಸೇರಿದ ರೈಟರ್ ಒಬ್ಬರು ವಿಸ್ತೃತ (ಡಾಮಿನೆಂಟ್) ಭಾಷಾ ವಲಯಕ್ಕೆ ಈ ಅನುಭವವನ್ನು ಪ್ರಸ್ತುತಪಡಿಸಲು ಬಳಸುವ ತಂತ್ರ ಇದು. ಬಾನು ಅವರ ಕತೆಗಳಲ್ಲಿ ಈ ಕನ್ನಡ ಮತ್ತು ಕನ್ನಡಕ್ಕೆ ಅನುವಾದವಾದ ಭಾಷಾ ನುಡಿಗಟ್ಟುಗಳ ಹೆಣಿಗೆ ಸೀಮ್ ಲೆಸ್ ಆಗಿದೆ.

ಕನ್ನಡದಲ್ಲಿ ಈ ರೀತಿಯ ಭಾಷಾ ಬಳಕೆ ಬಗ್ಗೆ ದ್ವಂದ್ವ ಇದೆ. ಕಾರಂತರಂತಹವರು ಸ್ಥಳೀಯ/ಸಾಮುದಾಯಿಕ ವಿಶಿಷ್ಟ ನುಡಿಗಟ್ಟು, ಅಭಿವ್ಯಕ್ತಿಗಳನ್ನೂ ಸರಳ ಕನ್ನಡಕ್ಕೆ ರೂಪಾಂತರಿಸಿ ಬರೆಯುತ್ತಿದ್ದರು. ಅವರ ಕಾದಂಬರಿಗಳಲ್ಲಿ ತುಳು ಅಥವಾ ಇನ್ಯಾವುದೇ ಭಾಷಿಕ intrusion ಇಲ್ಲ!

ಆದರೆ ಈ ನಿಲುವು ಬಹುತೇಕವಾಗಿ ಗಣನೆಗೆ ಬರಲಿಲ್ಲ. ಉತ್ತರ ಕರ್ನಾಟಕದ ಹಿರಿಯ ಬರಹಗಾರರು ಈ ಸ್ಯಾನಿಟೈಸ್ಡ್ ಕನ್ನಡ ಬಳಸಲೇ ಇಲ್ಲ. ಕೃಷ್ಣಮೂರ್ತಿ ಪುರಾಣಿಕ, ಮಿರ್ಜಿ ಅಣ್ಣಾರಾಯರಿಂದ ಹಿಡಿದು ಎಲ್ಲಾ ಲೇಖಕರು ತಮ್ಮ ನೆಲದ ಕನ್ನಡದ ಬನಿಯನ್ನು ಅನುಭವ ಲೋಕದ ಪ್ರಸ್ತುತಿಗೆ ಬಳಸಿದವರೆ. ದೇವನೂರ ಮಹಾದೇವ ತೆಗೆದುಕೊಂಡ ಜಿಗಿತ ಈ ನೆಲೆಯಿಂದ ಚಾರಿತ್ರಿಕ.

ಇದು ಭಾಷಿಕ ಪ್ರಸ್ತುತಿಯ ಬಗ್ಗೆ.

ಇನ್ನೊಂದು ಅಂಶ, ನಮ್ಮಲ್ಲೇ ಇರುವ ಸಮುದಾಯಗಳು ಅಕ್ಷರ ಲೋಕಕ್ಕೆ ತೆರೆದುಕೊಂಡ ಚಾರಿತ್ರಿಕ ಗತಿ.

ಕೊಡಗಿನ ಗೌರಮ್ಮ, ತ್ರಿವೇಣಿಯಂಥಾ ಲೇಖಕರು, ಈಗಾಗಲೇ ಅಕ್ಷರ ಲೋಕಕ್ಕೆ ತೆರೆದುಕೊಂಡ ಬ್ರಾಹ್ಮಣ ವಲಯಕ್ಕೆ ಸೇರಿದ್ದರು. ಆದರೆ ಅಲ್ಲೂ ಕೂಡಾ ಹೆಣ್ಣಿನ ಲೋಕದೃಷ್ಟಿಯ ಪ್ರಸ್ತುತಿಗೆ ಇವರೇ ಬರಬೇಕಾಯಿತು.(ತಿರುಮಲಾಂಬ ಅವರಿಂದ ಹಿಡಿದು ಎಂ.ಕೆ. ಇಂದಿರಾವರೆಗೆ) ಈ ಬರೆಹಗಳಲ್ಲಿರುವ ನಿರೂಪಣಾ ಸರಳತೆಯೂ ಒಂದು ಚಾರಿತ್ರಿಕ ಜರೂರಿನ ಕಾರಣಕ್ಕೇ ಇದೆ.

ಸರಳ ಸಾಮ್ಯ ಕೊಡುವುದಾದರೆ ಪ್ರತಿಯೊಬ್ಬನೂ ಕಾಗುಣಿತ ಕಲಿವ ರೋಮಾಂಚನದ ಮೂಲಕವೇ ಬದುಕಿನ ಲೋಕವ್ಯಾಪಾರಕ್ಕೆ ಕಾಲಿಡುವುದಷ್ಟೇ. ಆದ್ದರಿಂದಲೇ ತಡವಾಗಿ ಈ ಅಕ್ಷರ ಲೋಕ ಪ್ರವೇಶಿಸಿದ, ದಲಿತ, ಮುಸ್ಲಿಮ್ ಬರಹಗಾರರು ಕೂಡಾ ಅನುಭವ ಲೋಕದ ಪ್ರಸ್ತುತಿಯ ತುರ್ತನ್ನು ನಿಭಾಯಿಸುವ ಹೊರೆಯನ್ನು ಅನುಭವಿಸಿದ್ದಾರೆ.

ಶೈಲಿ/ತಾಂತ್ರಿಕತೆಯಿಂದ ಹೊಸತನವನ್ನು ಕಾಣಬಯಸುವ ಯರೋಪಿಯನ್ ಭಾಷೆಗಳ ಸಂದರ್ಭ ಬೇರೆಯೇ ಇರಬೇಕು. ಅಲ್ಲಿ ಭಾಷಾ ಪ್ರವೇಶಕ್ಕೆ ಸಾಮಾಜಿಕ ಶ್ರೇಣೀಕರಣದ ತಡಮೆ ಮಾಯವಾಗಿ ದಶಕಗಳೇ ಸಂದಿವೆ. ಆದರೆ ನಮ್ಮಲ್ಲಿ ಇನ್ನೂ ಸಾಹಿತ್ಯ ಲೋಕವನ್ನು ಪ್ರವೇಶಿಸಲು ಬಾಕಿ ಇರುವ ಹತ್ತಾರು ಸಾಮಾಜಿಕ ಲೋಕಗಳಿವೆ. ಅಂಚಿಗೆ ಸರಿದಿರುವ ಬಹುತೇಕ ಜಾತಿ, ಪಂಗಡಗಳಿಗೆ ತಮ್ಮದೇ ಆದ ಭಾಷಾ ಲೋಕವೂ ಇದೆ. ಅವು ಅಭಿವ್ಯಕ್ತಿ ಪಡೆಯಲು ಇನ್ನೆಷ್ಟು ಕಾಲ ಬೇಕೋ. ಈ ಅನುಭವ ಲೋಕ ಅದರ ಸಾಮಾಜಿಕ ಅಡಿಷನಲ್ ವಿವರಗಳಿಗಾಗಿ ನಮ್ಮ ಗಮನ ಸೆಳೆಯಬೇಕಾದದ್ದು ಸಾಮಾಜಿಕ ಸಂವೇದನೆಯ ಭಾಗ.

ಬಾನು ಮುಷ್ತಾಕ್ ಆಗಲೀ, ಬೊಳುವಾರು ಆಗಲೀ ಈ ರೀತಿಯ ಒಂದು ಹಾದಿ ಮಾಡಿ ಕೊಟ್ಟಿದ್ದಾರೆ.

ದೀಪಾ ಅವರು ಇಂಗ್ಲಿಷ್‌ಗೆ ಅನುವಾದ ಮಾಡಿದ ಬಗೆಯನ್ನು ಗಮನಿಸಿದರೆ ಆಂತರಿಕವಾಗಿ ಬಾನು ಕನ್ನಡ ಲೋಕಕ್ಕೇ ತನ್ನ ಅನುಭವ ಲೋಕವನ್ನು ಪ್ರಕಟಿಸಿದ ಬಗೆಯನ್ನು ನೋಡುವುದು ಸಾಧ್ಯವಾಗುತ್ತದೆ. ನೇರ ಅನುವಾದದ ಕ್ರಿಯೆ ಬಗ್ಗೆ ಹೇಳುವುದಾದರೆ,

ನಮ್ಮ ಬಹುತೇಕ ಅನುವಾದಗಳಲ್ಲಿ ಎರಡು ಬಗೆಯ ಅಪ್ರೋಚ್ ಇದೆ. ಮೊದಲನೆಯದು, ಸರ್ವರ್ ಮೈಂಡ್ ಸೆಟ್ ಎಂದು ನಾನು ತಮಾಷೆಗೆ ಹೇಳುವುದಿದೆ. ಅಂದರೆ ವಿದೇಶಿಯನೊಬ್ಬ ಹೋಟೆಲಿಗೆ ಬಂದರೆ ಆತನೆದುರು ದೋಸೆ ಇಟ್ಟು, ‘‘ಇದು ದೋಸೆ, ಆದರೆ ಇದಕ್ಕೆ ದೋಸಾ ಎಂದು ಬೇರೆಯವರು ಕರೆಯುತ್ತಾರೆ. ಇದನ್ನು ತಿನ್ನುವುದು ಹೀಗೆ..’’ ಎಂಬಿತ್ಯಾದಿ ಮಾರ್ಗದರ್ಶಿ ವಿವರಗಳನ್ನು ನೀಡುವುದು. Its served with an expectation of approval ಅವನು ‘‘ಆಹ್ಞಾ..’’ ಎಂದು ತಲೆತೂಗಬೇಕು.

ಎರಡನೆಯದು ಇಂಗ್ಲಿಷ್ ಓದುಗನಿಗೆ ಅರ್ಥವಾಗಬಹುದಾದ, ಆತನ ಹೊಕ್ಕುಬಳಕೆಯ ನುಡಿಗಟ್ಟು ಮೂಲಕ ಈ ಅನ್ಯ ಅನುಭವ ಲೋಕವನ್ನು ಮುಂದಿಡುವುದು. ರೊಟ್ಟಿಗೆ ಬ್ರೆಡ್ ಎಂದು ಬರೆದ ಕಾಲವಿತ್ತು. ಆಮೇಲೆ ರೋಟಿ ಮಾನ್ಯವಾದ ಮೇಲೆ ರೋಟಿ ಎಂದು ಬರೆಯುವುದು ರೂಢಿ ಆಯಿತು.

ಇವರೆಡರ ಹಿಂದೆ ಇಂಗ್ಲಿಷ್ ಕುರಿತಾದ ಇನ್ನೊಂದು ಬಗೆಯ ಸಬ್ಮಿಸಿವ್ ಧೋರಣೆ ಢಾಳಾಗಿ ಇದೆ. ಅಚ್ಚರಿ ಎಂದರೆ ನಮ್ಮ ಬಹುತೇಕ ಅನುವಾದಕರು ವೃತ್ತಿಯಲ್ಲಿ ಇಂಗ್ಲಿಷ್ ಮೇಷ್ಟ್ರಗಿರಿ ಮಾಡುತ್ತಾ ಕನ್ನಡದ ಕೃತಿಗಳನ್ನು ಅನುವಾದ ಮಾಡಿ ಕನ್ನಡಕ್ಕೆ ಸೇವೆ ಸಲ್ಲಿಸಿದ್ದಾರೆ, ನಿಜ. ಆದರೆ ಈ ಅನುವಾದಗಳಲ್ಲಿ ಈ ವಿಚಿತ್ರವಾದ ಒಂದು ಸೈಕಾಲಾಜಿಕಲ್ ಒತ್ತಡ ಇರುವುದನ್ನು ನಾನು ನನ್ನ ಸೀಮಿತ ಓದಿನಲ್ಲಿ ಕಂಡಿದ್ದೇನೆ.

ತಮಿಳು, ಮಲಯಾಳಂ ಕೃತಿಗಳ ಇಂಗ್ಲಿಷ್ ಅನುವಾದಗಳಲ್ಲಿ ಒಂದು ಸ್ಮೂತ್ ಫ್ಲೋ ಕಂಡು ಆ ಭಾಷಿಕರಲ್ಲಿ ಈ ಬಗ್ಗೆ ವಿಚಾರಿಸಿದ್ದೇನೆ. ಬಶೀರ್, ಮುರುಗನ್ ಕೃತಿಗಳ ಅನುವಾದಗಳು ಲೋಪವಿಲ್ಲದಂತೆ ದಾಟಿವೆ ಎಂದು ಅವರು ಹೇಳಿದರು. ಆದರೆ ಅಲ್ಲೂ ಸ್ಥಳೀಯ ವಿವರಗಳ ಬಗ್ಗೆ ಗಮನಸೆಳೆವ ಇಟಾಲಿಕ್ಸ್ ಪ್ರಯೋಗ ಇದೆ!

ದೀಪಾ ಇದನ್ನು ಒಂದು ಎಸ್ಕೇಪ್ ವೆಲಾಸಿಟಿಯ ಭಂಡತನದಲ್ಲಿ ಮೀರಿರುವ ರೀತಿ ಕುತೂಹಲಕಾರಿ. ದೀಪಾ ಮತ್ತು ನಮ್ಮ ಇನ್ನೊಬ್ಬ ಪ್ರತಿಭಾಶಾಲಿ ಅನುವಾದಕಿ ಮೈತ್ರೇಯಿ ಕರ್ನೂರು ಇಬ್ಬರೂ ಅಕಾಡಮಿಕ್ ಸುಳಿಯಲ್ಲಿ ಸಿಲುಕದಿರುವ ಕಾರಣ ಇದು ಸಾಧ್ಯವಾಯಿತೇ ಎಂಬ ಬಗ್ಗೆ ‘ಸಂಶೋಧನೆ’ ನಡೆಸಬಹುದು!!

ಇಂಗ್ಲಿಷ್ ಓದುಗ ತನ್ನ ಭಾಷಾ ಪ್ರಯೋಗವನ್ನು ಓದಲು ದೀಪಾ ನಡ್ಜ್ ಮಾಡುತ್ತಾರೆಯೇ ವಿನಃ ಅವನಿಗೆಂದು ವಿವರ ನೀಡುತ್ತಿಲ್ಲ.

ಬಾನು ಮತ್ತು ದೀಪಾ ಅವರಿಗಿರುವ ಸಾಮ್ಯ ಇದು. ಬಾನು ಅವರ ನೆರೇಶನ್‌ನಲ್ಲಿ ಉರ್ದು ಭಾಷಿಕ ಅನುಭವದ ನುಡಿಗಟ್ಟು ಕನ್ನಡದೊಂದಿಗೆ ಯಾವ ವಿವರಣೆಯ ಹಂಗೂ ಇಲ್ಲದೆ ಬೆರೆತಿದೆ. ಈ ಲಕ್ಷಣವನ್ನು ದೀಪಾ ಗ್ರಹಿಸಿ ಇಂಗ್ಲಿಷ್‌ನಲ್ಲೂ ಬಳಸಿ ಇಂಗ್ಲಿಷ್ ಓದುಗರಿಗೆ ಒಂದು ವಿಶಿಷ್ಟ ಸಹಾಯ ಮಾಡಿದ್ದಾರೆ! ಅದೇನೆಂದರೆ ಆ ಓದುಗ ಈ ಭಾಷಿಕ ಪ್ರಯೋಗದ ಅರ್ಥ ಸಂದರ್ಭಗಳನ್ನು ಅರಿಯುವ ಅಡಿಷನಲ್ ಪ್ರಯತ್ನ ಮಾಡಬೇಕು. ಸಾಹಿತ್ಯದ ಓದು ಸಲೀಸಾದರೆ ಅದು ಅರ್ಥ ವ್ಯಾಪ್ತಿ, ಆಳಗಳನ್ನೇ ಕುಗ್ಗಿಸಬಲ್ಲುದು.

ದೀಪಾ ಅವರ ಈ ಅನುವಾದದ ವೈಶಿಷ್ಟ್ಯತೆ ಬಗ್ಗೆ ಇನ್ನಷ್ಟು ವಿವರವಾಗಿ ಬರೆಯಬೇಕು, ಅದು ಆಮೇಲೆ.

ಆದರೆ ಕೆಲವೊಂದು ಚೇತೋಹಾರಿ ಲಾಘವತೆ ಬಗ್ಗೆ ಹೇಳಬೇಕು. ಡಬ್.. ಎಂಬ ಕನ್ನಡದ ಪದ, ವಸ್ತುವೊಂದು ನೆಲಕ್ಕೆ ಬೀಳುವ ಸದ್ದನ್ನು ಹಿಡಿವ ಪದ. ಆಡಿಟರಿ. ದೀಪಾ ಇಂಗ್ಲಿಷಲ್ಲೂ ಸಲೀಸಾಗಿ dabb ಎಂದೇ ಬರೆಯುತ್ತಾರೆ! ಇಟಾಲಿಕ್ಸ್ ಇಲ್ಲದೇ.

ಒಂದೆರಡು ಕತೆಗಳನ್ನು ಸಾಲು ಸಾಲು ಮೂಲ- ಅನುವಾದ ಸಹಿತ ಓದಿದಾಗ ದೀಪಾ ಅವರ ಅನುವಾದ ರಿಮಾರ್ಕೆಬಲ್ ಅನ್ನಿಸಿತು. ಸಂಗೀತದಲ್ಲಿ ಪಿಟೀಲು ವಾದಕನ ಪರಿಣತಿ ತರಹ. ಹಾಡುವ ಪಲುಕನ್ನು ಕ್ಷಣಕ್ಷಣದ ಮಿಂಚಿನ ವೇಗದಲ್ಲಿ ಅನುಸರಿಸುವ ಪರಿಣತಿ ಅದು. ಅದೆಷ್ಟು ಕುಶಲವೆಂದರೆ ನಾವು ಈ mastery ಬಗ್ಗೆ ಪ್ರತ್ಯೇಕವಾಗಿ ಯೋಚಿಸಿದ್ದೇ ಇಲ್ಲ. ಅದನ್ನು ಸಲೀಸಾಗಿ ಗ್ರಹಿಸುವುದು ರೂಢಿಯಾಗಿದೆ. ದೀಪಾ ಅಷ್ಟರಮಟ್ಟಿಗೆ ಮೂಲವನ್ನು ಹಿಡಿದಿಟ್ಟಿದ್ದಾರೆ.

***

ಹುಳುಕು ಹುಡುಕಲೇ ಬೇಕು ಎಂದು ಪ್ರತಿಜ್ಞೆ ಮಾಡಿದವನಂತೆ ಒಂದೆರಡು ಕತೆ ಓದಿದಾಗ ನನಗೆ ಕೇವಲ ಎರಡು ನುಡಿಗಟ್ಟುಗಳಲ್ಲಿ ಮಾತ್ರಾ ಸಮಸ್ಯೆ ಕಂಡಿತು.

1. ‘I need someone to look after the children after all that is why’ ಎಂಬ ವಾಕ್ಯವಿದೆ.

ಮೂಲದಲ್ಲಿ, ‘‘ಮಕ್ಕಳನ್ನು ನೋಡಿಕೊಳ್ಳಲು ಯಾರಾದರೂ ಬೇಕಲ್ಲ.. ಅದಕ್ಕೆ’’ ಎಂಬ ವಾಕ್ಯವಿದೆ. ಕನ್ನಡದಲ್ಲಿ ಒಂದು ಮುಜುಗರ, ಹಿಂಜರಿಕೆಯ ಟೊಳ್ಳು ಸಮರ್ಥನೆಯ ಧ್ವನಿಯಿದೆ.

ಇಂಗ್ಲಿಷಿನಲ್ಲಿ ಅದು ನೇರ ಅಸೆರ್ಟಿವ್ ವಾಕ್ಯವಾಗಿದೆ.

ಹಾಗೆಯೇ, ‘Fire Rain’ ಕತೆಯಲ್ಲಿ ‘Dawood began to see this as a grave problem’ ಎಂಬ ವಾಕ್ಯವಿದೆ.

ಮೂಲದಲ್ಲಿ, ‘ದಾವೂದನ ನೋಟಕ್ಕಂತೂ ಇದೊಂದು ದೊಡ್ಡ ಮಸಲತ್ತಾಗಿಯೇ ಕಾಣತೊಡಗಿತು!’’ ಎಂದಿದೆ. ಮಸಲತ್ತು ಅಂದರೆ conspiracy.

ಇವು ಕತೆಯ ಓದಿಗೇ ಭಂಗ ತರುವಂಥಾ ಅರ್ಥ ಸ್ಖಾಲಿತ್ಯ ಉಂಟು ಮಾಡಿಲ್ಲ. ಇನ್ನೂ ಶಾರ್ಪ್ ಆಗಬಹುದಿತ್ತೇನೋ ಎಂಬ ಸೂಚಿ ಅಷ್ಟೆ.

ಆದರೆ ಬಾನು ಅವರ ಕತೆಗಳ ಟೋನ್, ಮೂಡ್, ವಿಷಾದ, ವ್ಯಂಗ್ಯಗಳನ್ನು ದೀಪಾ ಅದ್ಭುತವಾಗಿ ಹಿಡಿದಿದ್ದಾರೆ.

***

ಇನ್ನೊಂದು ಅಂಶ, ಇದು ಕಥನ, ಅನುವಾದಕ್ಕೆ ನೇರವಾಗಿ ಸಂಬಂಧಿಸಿದ್ದಲ್ಲ. ಬಾನು ಒಂದು ಪುರುಷಾಧಿಕಾರದ ಸಾಮಾಜಿಕ ವ್ಯವಸ್ಥೆಯ ಒಳಗೇ ಬೆಳೆದು ಬವಣೆಪಟ್ಟು ಗಮನಿಸಿದವರು. ದೀಪಾ ನಮ್ಮ ಸಾಮಾಜಿಕ ಜಾತಿ ಶ್ರೇಣಿಯ ಉನ್ನತ ಜಾತಿಗೆ (ಹವ್ಯಕ) ಸೇರಿದವರು. ದ.ಕ.ದ ಹವ್ಯಕ ಭಾಷೆಯ ಲಿಂಗ ತಿರಸ್ಕಾರ ವಿಚಿತ್ರವಾದದ್ದು. ದ.ಕ.ದ (ಕುಂಬ್ಳೆ ಸೀಮೆ) ಹವ್ಯಕ ಭಾಷೆಯಲ್ಲಿ ಉಳಿದ ಭಾಷೆಗಳಲ್ಲಿರುವಂತೆ ಮೂರು ಲಿಂಗಗಳಿಲ್ಲ. ಎರಡೇ ಇರೋದು!! ಬ್ರಾಹ್ಮಣ ಪುರುಷ ಮಾತ್ರ ಪುಲ್ಲಿಂಗ. ಬಾಕಿ ಸಮಸ್ತವೂ (ತಾಯಿ, ಹೆಂಡತಿ, ಉಳಿದೆಲ್ಲಾ ಮನುಷ್ಯರು, ಪ್ರಾಣಿಗಳು, ಟೇಬಲ್ ಕುರ್ಚಿ ಸಹಿತ ವಸ್ತುಗಳು) ನಪುಂಸಕ ಲಿಂಗ!!

ಹವ್ಯಕ ಮಹಿಳೆಯೊಬ್ಬಳು ಈ ಬಗ್ಗೆ ಎಚ್ಚರಗೊಂಡಲ್ಲಿ ಅದು ಸಂವೇದನೆಯನ್ನು ಹೇಗೆ ರೂಪಿಸಬಹುದು ಎಂಬುದು ಕುತೂಹಲಕಾರಿ. ಬಾನು ಜಗತ್ತಿನೊಳಗೆ ಪ್ರವೇಶಿಲು ಈ ಸಾಮ್ಯತೆಯ awareness ಧಾರಾಳವಾಯಿತು!

***

ಒಂದು ಕೃತಿಯ ಟೋನ್, ಶೈಲಿ, ಅದು ಸೃಷ್ಟಿಸುವ ವಾತಾವರಣ, ಇವೆಲ್ಲವನ್ನೂ ಹಿಡಿವ ಸಿದ್ಧತೆ ಒಬ್ಬ ಟ್ರಾನ್ಸ್‌ಲೇಟರ್‌ಗೆ ಮುಖ್ಯ. ದೀಪಾ ಅವರ ಈ ಸೂಕ್ಷ್ಮ ಧ್ಯಾನಶೀಲತೆ ಮುಂದಿನ ಅನುವಾದಕರಿಗೆ ತೋರುಬೆರಳಾಗಬೇಕು. ಲಿಟರರಿ ಏಜೆಂಟ್ ಹುಡುಕುವುದು ಹೇಗೆ ಎಂಬಿತ್ಯಾದಿ ಲೌಕಿಕದ ಬಗ್ಗೆ ಚುರುಕಾಗುವ ಮೊದಲು ಕೃತಿಯನ್ನು ಮರು ಸೃಷ್ಟಿಸುವ ಕೌಶಲ್ಯದತ್ತ ದುಡಿಯಬೇಕಿದೆ. ಯೋಗವೆಂದರೆ ಕರ್ಮಸು ಕೌಶಲಂ ಅಲ್ಲವೇ?

ಇಂಗ್ಲಿಷಿಗೆ ಅನುವಾದಿಸುವ ಜನ ನಮ್ಮಲ್ಲಿ ಕಡಿಮೆ. ಕನ್ನಡಕ್ಕೆ ಅನುವಾದಿಸುವವರು ಸಾಕಷ್ಟಿದ್ದಾರೆ. ಆದರೆ ಈ ಕನ್ನಡದ ಅನುವಾದಗಳು ಹೇಗಿವೆಯೆಂದರೆ ಇಂಗ್ಲಿಷ್ ಅನುವಾದದ ಓದೇ ಹೆಚ್ಚು ನೆಮ್ಮದಿ ಕೊಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಪಿ. ಸುರೇಶ

contributor

Similar News