ಆಗ್ರಾ ಕೆಂಪುಕೋಟೆ: ಮೊಘಲ್ ಸಾಮ್ರಾಜ್ಯದ ಶಕ್ತಿ, ವಾಸ್ತುಶಿಲ್ಪ, ಕಲೆಯ ಸಂಗಮ
ಆಗ್ರಾ: ಭಾರತದ ಇತಿಹಾಸದಲ್ಲಿ ಅನನ್ಯ ಸ್ಥಾನ ಹೊಂದಿರುವ ಉತ್ತರಪ್ರದೇಶದ ಆಗ್ರಾದಲ್ಲಿರುವ ಕೆಂಪು ಕೋಟೆ, ಮೊಗಲ್ ಸಾಮ್ರಾಜ್ಯದ ರಾಜಕೀಯ ಶಕ್ತಿ ಮತ್ತು ವಾಸ್ತುಶಿಲ್ಪ, ಕಲೆಯ ಸಂಗಮವಾಗಿದೆ. ಯಮುನಾ ನದಿಯ ತೀರದಲ್ಲಿರುವ ಈ ಕೋಟೆ, ಕೇವಲ ಕೆಂಪು ಕಲ್ಲಿನ ಗೋಡೆಗಳ ಸಂಕಲನವಲ್ಲ, ಆಡಳಿತ, ಕಲೆ, ಸಂಸ್ಕೃತಿ ಮತ್ತು ಧಾರ್ಮಿಕ ಸಹ ಜೀವನದ ಸಂಕೇತವಾಗಿದೆ.
ಆಗ್ರಾ ಕೋಟೆಯ ಮೂಲ ಇತಿಹಾಸವು ಮೊಗಲ್ ಚಕ್ರವರ್ತಿ ಜಲಾಲುದ್ದೀನ್ ಮುಹಮ್ಮದ್ ಅಕ್ಬರ್ ಕಾಲದಿಂದ ಆರಂಭವಾಗುತ್ತದೆ. ಕ್ರಿ.ಶ.1565ರಲ್ಲಿ ಅಕ್ಬರ್ ಆಗ್ರಾವನ್ನು ತಮ್ಮ ರಾಜಧಾನಿಯಾಗಿ ಘೋಷಿಸಿದರು ಮತ್ತು ರಕ್ಷಣಾತ್ಮಕ ಹಾಗೂ ಆಡಳಿತಾತ್ಮಕ ಉದ್ದೇಶಕ್ಕಾಗಿ ಈ ಕೋಟೆಯ ನಿರ್ಮಾಣ ಪ್ರಾರಂಭಿಸಿದರು.
ನಂತರ ಜಹಾಂಗೀರ್ ಮತ್ತು ಶಾಹ್‌ಜಹಾನ್ ಅವರ ಕಾಲದಲ್ಲಿ ಈ ಕೋಟೆ ಕಲಾತ್ಮಕ ವೈಭವ ಪಡೆದುಕೊಂಡಿತು. ಕೆಂಪು ಕೋಟೆಯು ಇಸ್ಲಾಮಿಕ್, ಪರ್ಷಿಯನ್ ಮತ್ತು ಭಾರತೀಯ ವಾಸ್ತುಶಿಲ್ಪದ ಕಲಾತ್ಮಕ ಮಿಶ್ರಣವಾಗಿದ್ದು, 2.5 ಕಿ.ಮೀ ಉದ್ದದ ಗೋಡೆಗಳಿಂದ ಆವರಿಸಲ್ಪಟ್ಟಿದೆ.
ಅಮರ್ ಸಿಂಗ್ ಗೇಟ್: ಈ ಕೋಟೆಯ ಪ್ರಮುಖ ಪ್ರವೇಶ ದ್ವಾರಕ್ಕೆ ಅಮರ್ ಸಿಂಗ್ ಗೇಟ್ ಎಂದು ಹೆಸರಿಡಲಾಗಿದೆ. ಮೊಗಲ್ ಶಿಲ್ಪಕಲೆಯ ಶ್ರೇಷ್ಠತೆಯನ್ನು ಪ್ರದರ್ಶಿಸುವ ಈ ಪ್ರವೇಶದ್ವಾರವು ರಕ್ಷಣಾತ್ಮಕ ಮತ್ತು ವೈಭವೋಪೇತ ವಾಸ್ತುಶಿಲ್ಪದ ಉದಾಹರಣೆಯಾಗಿಯೂ ಪರಿಗಣಿಸಲ್ಪಟ್ಟಿದೆ.
ಅಮರ್ ಸಿಂಗ್ ರಾಥೋರ್ ರಾಜಸ್ಥಾನದ ಜೋಧ್‌ಪುರದ ರಾಜವಂಶದ ಸದಸ್ಯರಾಗಿದ್ದರು. ಮೊಗಲ್ ಸೇನೆಯ ಸೇನಾಪತಿಯಾಗಿದ್ದರು. ಒಮ್ಮೆ ಕೋಟೆಯ ಗೋಡೆಯಿಂದ ಕುದುರೆಯ ಮೇಲೆ ಹಾರಿ ಪಾರಾಗಿದ್ದರು ಎಂಬ ಪ್ರಸಿದ್ಧ ಕಥೆಯಿದೆ. ಅವರ ಸಾಹಸ, ಪರಾಕ್ರಮದ ಗೌರವಾರ್ಥ ಕೋಟೆಯ ಪ್ರವೇಶ ದ್ವಾರಕ್ಕೆ ಅಮರ್ ಸಿಂಗ್ ಗೇಟ್ ಎಂದು ಹೆಸರಿಡಲಾಗಿದೆ. ಇದಕ್ಕೂ ಮುನ್ನ ಈ ದ್ವಾರವನ್ನು ಅಕ್ಬರಿ ಗೇಟ್ ಎಂದು ಕರೆಯಲಾಗುತ್ತಿತ್ತು.
ಸುಮಾರು 4 ಸಾವಿರ ಕಾರ್ಮಿಕರು ಈ ಕೋಟೆಯ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದರು. ಆಗಿನ ಕಾಲಕ್ಕೆ ಸುಮಾರು 35 ಲಕ್ಷ ರೂ.ಗಳನ್ನು ಈ ಕೋಟೆಯ ನಿರ್ಮಾಣಕ್ಕಾಗಿ ಖರ್ಚು ಮಾಡಲಾಗಿತ್ತು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈ ಕೋಟೆಯ ಶೇ.75ರಷ್ಟು ಭಾಗ ಭಾರತೀಯ ಸೇನೆಯ ವಶದಲ್ಲಿದೆ. ಮೊಗಲರು ಹಾಗೂ ಬ್ರಿಟಿಷರ ಆಳ್ವಿಕೆಯಲ್ಲೂ ಈ ಕೋಟೆಯ ಬಹುಮುಖ್ಯ ಭಾಗ ಸೇನೆಯ ಸುಪರ್ದಿಯಲ್ಲೆ ಇತ್ತು.
ಜಹಾಂಗೀರ್ ಸ್ನಾನ ಕುಂಡ: ಕೋಟೆಯ ಒಳಗೆ ಪ್ರವೇಶಿಸುತ್ತಿದ್ದಂತೆ ಕಂಡು ಬರುವುದು ಜಹಾಂಗೀರ್‌ನ ಸ್ನಾನ ಕುಂಡ. ಇದು ಒಂದೇ ಕಲ್ಲಿನಲ್ಲಿ ಕೆತ್ತಿ ನಿರ್ಮಿಸಲಾಗಿದೆ. ಈ ಕುಂಡದ ಮೇಲೆ ಹತ್ತಲು ಹಾಗೂ ಒಳಗೆ ಇಳಿಸಲು ಮೆಟ್ಟಿಲುಗಳನ್ನು ಕೆತ್ತಲಾಗಿದೆ. ಈ ಸ್ನಾನ ಕುಂಡವನ್ನು ಜಹಾಂಗೀರ್‌ನ ಮೊದಲ ಜನ್ಮದಿನಾಚರಣೆ ಪ್ರಯುಕ್ತ ಅವರ ಸೋದರ ಮಾವ ರಾಜ ಮಾನ್ ಸಿಂಗ್ ಉಡುಗೊರೆಯಾಗಿ ನೀಡಿದ್ದರು.
ಜಹಾಂಗೀರ್ ಮಹಲ್: ರಾಜಸ್ಥಾನದ ಕಲೆ, ವಾಸುಶಿಲ್ಪದ ಪ್ರತೀಕವಾಗಿರುವ ಜಹಾಂಗೀರ್ ಮಹಲ್ ಅನ್ನು ಅಕ್ಬರ್ ತಮ್ಮ ಪುತ್ರ ಜಹಾಂಗೀರ್‌ಗಾಗಿ ನಿರ್ಮಾಣ ಮಾಡಿಸಿದ್ದರು. ಇದರಲ್ಲಿ ಗ್ರಂಥಾಲಯ, ಬೇಸಿಗೆ ಹಾಗೂ ಚಳಿಗಾಲದಲ್ಲಿ ವಾಸಿಸಲು ಪ್ರತ್ಯೇಕ ಅರಮನೆಗಳನ್ನು ನಿರ್ಮಿಸಲಾಗಿದೆ.
‘ಪಲ್ಲಕ್ಕಿ’ ಆಕಾರದ ಅರಮನೆ: ಶಾಹ್‌ಜಹಾನ್ ತಮ್ಮ ಪುತ್ರಿಯರಾದ ರೋಷನ್ ಆರಾ ಹಾಗೂ ಜಹಾನ್ ಆರಾ ಅವರಿಗಾಗಿ ‘ಪಲ್ಲಕ್ಕಿ’ ಆಕಾರದಲ್ಲಿ ಅಮೃತಶಿಲೆಯಿಂದ ನಿರ್ಮಿಸಿರುವ ಅರಮನೆಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿವೆ.
ಅಂಗೂರಿ ಬಾಗ್: ದ್ರಾಕ್ಷಿ ಉದ್ಯಾನ (ಅಂಗೂರಿ ಬಾಗ್)ದಲ್ಲಿ ಕಾಶ್ಮೀರದಿಂದ ಕೆಂಪು ಮಣ್ಣು ತರಿಸಿ, ಭೂಮಿ ಹದ ಮಾಡಿ ದ್ರಾಕ್ಷಿಯನ್ನು ಬೆಳೆಯಲಾಗುತ್ತಿತ್ತು. ಆ ದ್ರಾಕ್ಷಿಯಿಂದಲೆ ಶಾಹ್‌ಜಹಾನ್ ಹಾಗೂ ವಿಶೇಷ ಅತಿಥಿಗಳಿಗಾಗಿ ದ್ರಾಕ್ಷಾರಸವನ್ನು ಸಿದ್ಧಪಡಿಸಲಾಗುತಿತ್ತು. ಉದ್ಯಾನದ ಮಧ್ಯದಲ್ಲಿರುವ ನೀರಿನ ಕಾರಂಜಿ ಆಕರ್ಷಣೀಯವಾಗಿದೆ.
ಖಾಸ್ ಮಹಲ್: ಶಾಹ್‌ಜಹಾನ್ ಹಾಗೂ ಮುಮ್ತಾಝ್ ಅವರ ‘ಖಾಸ್ ಮಹಲ್’ನ ಗೋಡೆಗಳ ಮೇಲೆ ಚಿನ್ನ, ರತ್ನಗಳನ್ನು ಅಳವಡಿಸಲಾಗಿತ್ತು. ಸೂರ್ಯನ ಬೆಳಕು ಈ ಖಾಸ್ ಮಹಲ್‌ನ ಒಳಗಡೆ ಪ್ರವೇಶಿಸಿದಾಗ ಇಡೀ ಅರಮನೆ ಚಿನ್ನದ ಹೊಳಪಿನ ಬಣ್ಣದಿಂದ ಕಂಗೊಳಿಸುತ್ತಿತ್ತು.
ಶೀಶ್ ಮಹಲ್: ಶೀಶ್ ಮಹಲ್‌ನಲ್ಲಿ ಅಳವಡಿಸಲಾಗಿರುವ ಗಾಜಿನ ತುಂಡುಗಳನ್ನು ಸಿರಿಯಾದಿಂದ ತರಿಸಲಾಗಿತ್ತು. ಈ ಮಹಲ್‌ನಲ್ಲಿ ಒಂದು ಮೇಣದ ಬತ್ತಿಯನ್ನು ಉರಿಸಿದರೆ ಅದರ ಬೆಳಕಿನ ಪ್ರತಿಫಲನ ಸಾವಿರಾರು ಗಾಜಿನ ತುಂಡುಗಳ ಮೇಲೆ ಬಿದ್ದು, ಇಡೀ ಮಹಲ್ ಜಗಮಗಿಸುತ್ತಿತ್ತು.
ಮುಸಮ್ಮನ್ ಬುರ್ಜ್: ಔರಂಗಜೇಬ್ ಮೊಗಲ್ ಸಾಮ್ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ತನ್ನ ತಂದೆ ಶಾಹ್‌ಜಹಾನ್ ಅನ್ನು ಮುಸಮ್ಮನ್ ಬುರ್ಜ್‌ನಲ್ಲಿ ಎಂಟು ವರ್ಷಗಳ ಕಾಲ ಗೃಹ ಬಂಧನದಲ್ಲಿ ಇರಿಸಿದ್ದರು. ಇಲ್ಲಿಂದ ತಾಜ್ ಮಹಲ್ ಸ್ಪಷ್ಟವಾಗಿ ಗೋಚರಿಸುತ್ತದೆ. ಅಲ್ಲದೇ, ಶಾಹ್‌ಜಹಾನ್ ನಮಾಝ್ ಮಾಡಲು ಅನುಕೂಲವಾಗುವಂತೆ ಮೀನಾ ಮಸೀದಿ ನಿರ್ಮಿಸಿಕೊಟ್ಟಿದ್ದರು.
ಅಕ್ಬರಿ ಮಹಲ್‌ನ ಅವಶೇಷಗಳು!
ಅಕ್ಬರ್ ತಮ್ಮ ಕುಟುಂಬದೊಂದಿಗೆ ವಾಸಿಸಲು ಕೋಟೆಯ ಆವರಣದ ಒಳಗೆ ಕೆಂಪುಕಲ್ಲು ಹಾಗೂ ಬಿಳಿ ಅಮೃತಶಿಲೆಯಿಂದ ನಿರ್ಮಿಸಿದ್ದ ಅಕ್ಬರಿ ಮಹಲ್‌ನ ಅವಶೇಷಗಳು ಮಾತ್ರ ಈಗ ಉಳಿದಿವೆ. ಜಹಾಂಗೀರ್ ಮಹಲ್ ಹಾಗೂ ಮೋತಿ ಮಸೀದಿಗಳ ನಡುವೆ ಇರುವಂತಹ ಅಕ್ಬರಿ ಮಹಲ್ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ.
ದೀವಾನ್ ಎ ಖಾಸ್
ಖಾಸಗಿ ಸಭೆಗಳನ್ನು ನಡೆಸಲು ನಿರ್ಮಿಸಲಾದ ವೈಭವಶಾಲಿ ಅರಮನೆ ದೀವಾನ್ ಎ ಖಾಸ್. ಅದೇ ರೀತಿ, ಜನಸಾಮಾನ್ಯರ ಅಹವಾಲು ಆಲಿಸಲು ದೀವಾನ್ ಎ ಆಮ್ ಅನ್ನು ನಿರ್ಮಿಸಲಾಗಿದೆ. ಅರಮನೆಯ ಆವರಣದೊಳಗೆ ಮಹಿಳೆಯರು ನಮಾಝ್ ನಿರ್ವಹಿಸಲು ಶಾಹ್‌ಜಹಾನ್ ‘ನಗೀನಾ ಮಸೀದಿ’ ನಿರ್ಮಿಸಿದ್ದರು. ಭಾರತದ ಸಾಂಸ್ಕೃತಿಕ ಪರಂಪರೆಯ ಅಜರಾಮರ ಅಧ್ಯಾಯವಾಗಿ, ಆಗ್ರಾದ ಕೆಂಪು ಕೋಟೆ ಶಾಶ್ವತವಾಗಿ ಇತಿಹಾಸದ ಹೃದಯದಲ್ಲಿ ನೆಲೆ ನಿಂತಿದೆ.