×
Ad

ಮಂಡ್ಯ ಜಿಲ್ಲೆೆಯಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ

Update: 2025-08-01 15:20 IST

ಮಂಡ್ಯ : ಅವಧಿಗೆ ಮುನ್ನವೇ ಜಿಲ್ಲೆಯ ರೈತರ ಜೀವನಾಡಿ ಕೃಷ್ಣರಾಜಸಾಗರ ಜಲಾಶಯ(ಕೆಆರ್‌ಎಸ್) ಭರ್ತಿಯಾಗಿ ನಾಲೆಯಲ್ಲಿ ನೀರು ಹರಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಗರಿಗೆದರಿದೆ. ಜತೆಗೆ, ತುಂತುರು ಮಳೆಯೂ ಆಗುತ್ತಿರುವುದರಿಂದ ರೈತರ ಮೊಗದಲ್ಲಿ ಭರವಸೆಯ ನಗು ಅರಳಿದೆ.

ಸಾಮಾನ್ಯವಾಗಿ ಜಲಾಶಯ ಭರ್ತಿಯಾಗುತ್ತಿದ್ದುದು ಆಗಸ್ಟ್ ನಂತರ. ಬಳಿಕ ಕೃಷಿ ಚಟುವಟಿಕೆಗೆ ನಾಲೆಯಲ್ಲಿ ನೀರುಹರಿಸಲಾಗುತ್ತಿತ್ತು. ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ಎರಡು ತಿಂಗಳು ಮೊದಲೇ ಜಲಾಶಯ ಭರ್ತಿಯಾಗಿರುವುದು ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರಿನ ಒಳಹರಿವು ಇರುವುದರಿಂದ ಜುಲೈನಲ್ಲೇ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.

ಜಿಲ್ಲೆಯ ಪ್ರಮುಖ ಬೆಳೆ ಭತ್ತ. ಜತೆಗೆ ವಾಣಿಜ್ಯ ಬೆಳೆ ಕಬ್ಬು. ಜಲಾಶಯದ ಅಚ್ಚುಕಟ್ಟು ಪ್ರದೇಶದ ಬಹು ತೇಕ ಭಾಗದಲ್ಲಿ ಭತ್ತದ ಬಿತ್ತನೆ ಕಾರ್ಯ ಆರಂಭವಾಗಿದ್ದರೆ, ಕೆಲವು ಭಾಗದಲ್ಲಿ ಕಬ್ಬಿನ ಬಿತ್ತನೆಯೂ ನಡೆಯುತ್ತಿದೆ. ಹದವಾದ ಮಳೆ ಬಿದ್ದಿರುವುದರಿಂದ ಮಳೆಯಾಶ್ರಿತ ಖುಷ್ಕಿ ಭೂಮಿಯಲ್ಲೂ ಬಿತ್ತನೆಗೆ ಭೂಮಿ ಹದಗೊಳಿಸಲಾಗುತ್ತಿದೆ.

ಜಲಾಶಯದ ವಿಶ್ವೇಶ್ವರಯ್ಯ ನಾಲೆಯ ಹತ್ತಿರದ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ಭತ್ತದ ಪೈರು ಬೆಳೆದು ನಾಟಿ ಕಾರ್ಯ ಆರಂಭವಾಗಿದ್ದರೆ, ಇನ್ನು ನಾಲೆಯ ತುದಿ(ಟೈ ಲ್ಯಾಂಡ್) ಪ್ರದೇಶದಲ್ಲಿ ಭತ್ತ ಒಟ್ಲು ಬಿಡುವ ಕಾರ್ಯ ವಾರದಿಂದ ಭರದಿಂದ ಸಾಗಿದೆ. ಇದೇ ವೇಳೆಗೆ ನಾಟಿಗೆ ಗದ್ದೆಯನ್ನು ಉತ್ತು, ಹದಗೊಳಿಸುವಲ್ಲಿ ರೈತರು ತೊಡಗಿದ್ದಾರೆ.

ಜಲಾಶಯದಲ್ಲಿ ಸಾಕಷ್ಟು ನೀರು ಇದ್ದ ಹಿನ್ನೆಲೆಯಲ್ಲಿ ಪೂರ್ವ ಮುಂಗಾರಿನಲ್ಲಿ(ಬೇಸಗೆ ಬೆಳೆ) ಭರ್ಜರಿ ಫಸಲು ರೈತರ ಕೈಸೇರಿದೆ. ಈ ಹಂಗಾಮಿನಲ್ಲಿ ಹೆಚ್ಚಾಗಿ ರಾಗಿ ಫಸಲು ಹಾಕಲಾಗಿತ್ತು.

ಇದಲ್ಲದೆ, ದ್ವಿದಳ ಧಾನ್ಯ ಬೆಳೆಗಳಾದ ಎಳ್ಳು, ಹಲಸಂದೆ, ಉದ್ದು, ಹೆಸರು ಮತ್ತು ಮುಸುಕಿನ ಜೋಳದ ಫಸಲು ಬಂದಿದೆ. ಇದರಿಂದ ಒಂದಷ್ಟು ದುಡ್ಡು ರೈತರ ಕೈಸೇರಿರುವುದರಿಂದ ಮುಂಗಾರು ಹಂಗಾಮಿನ ಕೃಷಿ ವೆಚ್ಚಕ್ಕೆ ಅನುಕೂಲವಾಗಿದೆ.

ಪೂರ್ವ ಮುಂಗಾರುವಿನಲ್ಲಿ 25,513 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 24,471 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.95.9ರಷ್ಟು ಸಾಧನೆಯಾಗಿದೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ 1.66 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದೆ. ಭತ್ತ 55,605 ಹೆಕ್ಟೇರ್ ಮತ್ತು ಕಬ್ಬು 42,130 ಹೆಕ್ಟೇರ್ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ ಕಬ್ಬು (ತನಿ) ಶೇ.31.8 ಮತ್ತು ಕಬ್ಬು (ಕೂಳೆ) ಶೇ/27.5ರಷ್ಟು ಬಿತ್ತನೆಯಾಗಿದೆ ಎನ್ನುತ್ತದೆ ಕೃಷಿ ಇಲಾಖೆ ಮಾಹಿತಿ.

ಜಿಲ್ಲೆಯಲ್ಲಿ 256 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಹಾಗೂ ಚಿಲ್ಲರೆ ರಸಗೊಬ್ಬರ ಮಾರಾಟ ಪರವಾನಿಗೆ ಹೊಂದಿರುವ 283 ಖಾಸಗಿ ಮಾರಾಟಗಾರರಿಂದ ರಸಗೊಬ್ಬರ ಮಾರಾಟವಾಗುತ್ತಿದೆ. ಹೋಬಳಿಗೊಂದರಂತೆ ಇರುವ 31 ರೈತಸಂಪರ್ಕ ಕೇಂದ್ರಗಳು ಮತ್ತು ಖಾಸಗಿ ಮಾರಾಟಗಾರರಲ್ಲಿ ಬಿತ್ತನೆ ಬೀಜ ಸಿಗುತ್ತಿದೆ. ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗಿದಂತೆ ಕ್ರಮವಹಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಬೆಳೆಗೆ ನೀರಿನ ಸಮಸ್ಯೆಯಾಗದು’

ಕನ್ನಂಬಾಡಿ ಕಟ್ಟೆ(ಕೆಆರ್‌ಎಸ್ ಜಲಾಶಯ) ಬೇಗವೇ ಭರ್ತಿಯಾಗಿದ್ದು, ಕೆರೆಕಟ್ಟೆಗಳು ತುಂಬಿವೆ. ಹಲವಾರು ರೈತರು ಜಮೀನಿನಲ್ಲಿ ನೀರಿನ ಹೊಂಡಗಳನ್ನು ನಿರ್ಮಿಸಿಕೊಂಡಿದ್ದು ಅವುಗಳೂ ತುಂಬಿವೆ. ತಿಂಗಳಲ್ಲಿ ಒಂದೆರಡು ಮಳೆಯಾಗುವ ನಿರೀಕ್ಷೆ ಇದೆ. ಒಂದು ವೇಳೆ ನಾಲೆಯಲ್ಲಿ ನೀರು ಬರುವುದು ಸ್ವಲ್ಪ ತಡವಾದರೂ ಹೊಂಡದಲ್ಲಿ ಹಿಡಿದಿಟ್ಟುಕೊಳ್ಳುವ ನೀರಿನಿಂದ ಬೆಳೆ ಉಳಿಸಿಕೊಳ್ಳಬಹುದು. ಹಾಗಾಗಿ ಈ ಬಾರಿ ಬೆಳೆಗೆ ನೀರಿನ ಸಮಸ್ಯೆಯಾಗದು ಎಂಬುದು ರೈತರ ಅಭಿಪ್ರಾಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News