×
Ad

ಕಲಬುರಗಿ: ಬತ್ತಿದ ಭೀಮೆ; ಭೀಕರ ಬರಗಾಲಕ್ಕೆ ರೈತರು ತತ್ತರ!

ಬಚಾವತ್ ಆಯೋಗದ ಪ್ರಕಾರ ‘ಬರ’ದ ನೀರು

Update: 2026-07-14 22:06 IST

ಕಲಬುರಗಿ : ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದ ಹಲವು ಜಲಮೂಲಗಳು ಬತ್ತಿದ್ದು, ಕಲಬುರಗಿ ಜಿಲ್ಲೆಯ ಜೀವನಾಡಿಯಾಗಿರುವ ಭೀಮಾ ನದಿ ಈ ಬಾರಿ ನೀರಿಲ್ಲದೆ ಬಿಕೋ ಎನ್ನುತ್ತಿದೆ. ನದಿಯನ್ನು ಅವಲಂಬಿಸಿರುವ ಅಫಜಲಪುರ, ಜೇವರ್ಗಿ ಹಾಗೂ ಶಹಾಬಾದ್ ಭಾಗಗಳ ಸಾವಿರಾರು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಉಳಿಸಿಕೊಳ್ಳಲು ಮಳೆಯತ್ತ ಚಿತ್ತ ನೆಟ್ಟಿದ್ದಾರೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರಕಾರ ತಕ್ಷಣ ಧಾವಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

ಜೂನ್ ತಿಂಗಳ ಎರಡನೇ ವಾರದಲ್ಲಿ ಸುರಿದ ಮಳೆಯಿಂದ ಸಂತಸಗೊಂಡ ರೈತರು ಬೀಜ, ರಸಗೊಬ್ಬರ, ಕ್ರಿಮಿನಾಶಕ ಇನ್ನಿತರ ಕೃಷಿ ಪರಿಕರಗಳನ್ನು ಖರೀದಿಸಿ ಬಿತ್ತನೆಗೆ ಸಜ್ಜುಗೊಂಡಿದ್ದರು. ಇದೇ ಸಂದರ್ಭದಲ್ಲಿ ಕೆಲವು ರೈತರು ಬಿತ್ತನೆ ಕಾರ್ಯ ಮಾಡಿದರೆ ಇನ್ನೂ ಕೆಲವರು ಮತ್ತಷ್ಟು ಮಳೆಗಾಗಿ ಕಾದಿದ್ದರು. ಇದೀಗ ಮಳೆ ಕೊರತೆಯಿಂದಾಗಿ ಬಿತ್ತನೆ ಮಾಡಿದ ಭೂಮಿಗಳಲ್ಲಿ ಚಿಗುರಿದ ಬೆಳೆಯೂ ಒಣಗಿಹೋಗುತ್ತಿದೆ. ಇನ್ನೊಂದೆಡೆ, ಬಿತ್ತನೆ ಮಾಡದೆ ಇರುವ ರೈತರು ಕೃಷಿ ಬೀಜ ರಸಗೊಬ್ಬರಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಭೂಮಿಯನ್ನು ಬೀಳು ಬಿಟ್ಟಿದ್ದಾರೆ.

ನೀರಿಲ್ಲದೆ ಒಣಗಿದ ಕಬ್ಬು :

ಮಳೆ ಹಿನ್ನಡೆಯಾಗಿದ್ದರಿಂದ ನದಿ ತೀರದ ಜಮೀನುಗಳು ಹಾಗೂ ಅಫಜಲಪುರ, ಆಳಂದ, ಜೇವರ್ಗಿ ತಾಲೂಕುಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳೆದಿರುವ ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿರುವ ಕಬ್ಬು, ಉದ್ದು, ಹೆಸರು ಮತ್ತಿತ್ತರ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿವೆ. ಸಾಲ ಮಾಡಿ ಕೃಷಿ ಆರಂಭಿಸಿದ್ದ ರೈತರು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಕೈತಪ್ಪುವ ಆತಂಕದಲ್ಲಿದ್ದಾರೆ.

ಸೊನ್ನ ಬ್ಯಾರೇಜ್‌ನಲ್ಲಿ 0.248 ಟಿಎಂಸಿ ಮಾತ್ರ ನೀರು :

ಮಹಾರಾಷ್ಟ್ರದಿಂದ ಹರಿಯುವ ಭೀಮಾ ನದಿಯು ಅಫಜಲಪುರ, ಜೇವರ್ಗಿ, ಶಹಾಬಾದ್ ತಾಲೂಕಿನ ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಿಗೆ ನೀರು ಒದಗಿಸುತ್ತದೆ. ಇತ್ತ ದಿಢೀರ್ ಮಳೆ ಬಂದಾಗ ಸೊನ್ನ ಬ್ರಿಡ್ಜ್ ಕಮ್ ಬ್ಯಾರೇಜ್‌ನಲ್ಲಿ ವೈಜ್ಞಾನಿಕವಾಗಿ ನೀರು ಸಂಗ್ರಹಣೆ ಮಾಡದೆ ಇರುವುದರಿಂದ ಬೇಸಿಗೆಯಲ್ಲಿ ನೀರಿನ ಬವಣೆ ಹೆಚ್ಚಾಗಲು ಕಾರಣವಾಗಿದೆ. 3.166 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿರುವ ಬ್ಯಾರೇಜ್‌ನಲ್ಲಿ ಪ್ರಸ್ತುತ ಕೇವಲ 0.248 ಟಿಎಂಸಿ ನೀರು ಮಾತ್ರ ಉಳಿದಿದ್ದು, ನದಿ ತೀರದ ಗ್ರಾಮಗಳಲ್ಲೂ ನೀರಿನ ಅಭಾವ ತೀವ್ರಗೊಂಡಿದೆ.

ಬಚಾವತ್ ಆಯೋಗ ಪ್ರಕಾರ ಬರದ ನೀರು :

ಬಚಾವತ್ ಆಯೋಗದ ಪ್ರಕಾರ, ಮಹಾರಾಷ್ಟ್ರದ ಸೋಲಾಪುರದ ಉಜ್ಜನಿ ಬಳಿ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಅಣೆಕಟ್ಟಿನಿಂದ 15 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಮಳೆಗಾಲದಲ್ಲಿ ಪ್ರವಾಹ ಬಂದಾಗ ನೀಡುವ ನೀರು ಬೇಕಾದ ಸಂದರ್ಭದಲ್ಲಿ ಬಿಡುಗಡೆ ಆಗುವುದಿಲ್ಲ. ಈ ಬಗ್ಗೆ ರಾಜ್ಯ ಸರಕಾರ ಮಧ್ಯಪ್ರವೇಶಿಸಿ ಮಹಾರಾಷ್ಟ್ರ ಸರಕಾರಕ್ಕೆ ಮನವೊಲಿಸಿ ನೀರು ಬಿಡುವಂತೆ ಒತ್ತಾಯಿಸಬೇಕು. ಇಲ್ಲದಿದ್ದರೆ ಬಚಾವತ್ ಆಯೋಗವನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಬೇಕು. ಆದರೆ ಈ ಬಗ್ಗೆ ಸರಕಾರ ನಿರ್ಲಕ್ಷ್ಯ ವಹಿಸಿವೆ ಎನ್ನುತ್ತಾರೆ ರೈತ ಶ್ರೀಮಂತ ಬಿರಾದಾರ.

ಮುಗಿಯದ 450 ಕೋಟಿ ರೂ.ಗಳ ಪೈಪ್ಲೈನ್ ಕಾಮಗಾರಿ :

ಭೀಮಾ ನದಿಯ ನೀರನ್ನು ಆಳಂದ ತಾಲೂಕಿನ ವಿವಿಧ ಹಳ್ಳಿಗಳಿಗೆ ಹಾಗೂ ಕೊರಳ್ಳಿಯಲ್ಲಿರುವ ಅಮರ್ಜಾ ಡ್ಯಾಮಿಗೆ ನೀರು ಹರಿಸಲು ರೂಪಿಸಿರುವ ಅಂದಾಜು 450 ಕೋಟಿ ರೂ. ವೆಚ್ಚದ ಪೈಪ್ಲೈನ್ ಕಾಮಗಾರಿಯ ವೇಗ ಕುಂಠಿತಗೊಂಡಿದೆ. ಏಳು ವರ್ಷಗಳ ಹಿಂದೆ ಶುರುವಾದ ಕಾಮಗಾರಿ ಇನ್ನೂ ಮುಗಿದಿಲ್ಲ. ಒಂದುವೇಳೆ ಈ ಕಾಮಗಾರಿ ಪೂರ್ಣಗೊಂಡರೆ ಆಳಂದ ತಾಲೂಕಿನಲ್ಲಿ ನೀರು ಪೂರೈಕೆ ಆಗಲಿದೆ. ನೀರಾವರಿಗೆ ಶಿರಪೂರ ಮಾದರಿ ಯಶಸ್ವಿ ಎನ್ನುತ್ತಾರೆ. ಆದರೆ ನಿಜಾರ್ಥದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಳಂದ ರೈತರು ಆರೋಪಿಸಿದ್ದಾರೆ.

ಈ ಭಾಗದಲ್ಲಿ 30 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬಿತ್ತನೆ ಕಾರ್ಯ ಆಗಿಲ್ಲ, ರಾಜ್ಯದ ಬರಪೀಡಿತವಾಗಿ ನರಳುತ್ತಿದ್ದರು ಕೃಷಿ ಸಚಿವರೇ ಇಲ್ಲ. ಸರಕಾರದಲ್ಲಿ ರೈತರ ಗೋಳು ಕೇಳುವವರು ಯಾರು ಇಲ್ಲ. ಸಿಎಂ ಕಾಟಾಚಾರಕ್ಕೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕೂಡಲೇ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಘೋಷಿಸಬೇಕು.

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ನೀರಾವರಿ ಯೋಜನೆಗಳಿಗೆ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡಲಾಗಿರುತ್ತದೆ. ಆದರೆ, ಅನುದಾನ ಎಲ್ಲಿ ಹೋಗುತ್ತದೆ ಎನ್ನುವುದು ಶಾಸಕರು, ಅಧಿಕಾರಿಗಳು ಬಹಿರಂಗಪಡಿಸಬೇಕು. ಭೀಮಾ ನದಿಯ ನೀರು ಈವರೆಗೂ ವೈಜ್ಞಾನಿಕವಾಗಿ ಸಂಗ್ರಹಣೆ ಆಗುತ್ತಿಲ್ಲ. ಮಹಾರಾಷ್ಟ್ರದ ಉಜ್ಜನಿ ಡ್ಯಾಮ್‌ನಿಂದ ನೀರು ಹರಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಬರಗಾಲ ಮುಕ್ತ ಮಾಡಲು ಅಫಜಲಪುರ ಶಾಸಕರಿಗೆ ಇಚ್ಛಾಶಕ್ತಿಯೇ ಇಲ್ಲದಿರುವುದು ದುರಂತ.

-ಶ್ರೀಮಂತ ಬಿರಾದಾರ, ರೈತ ಹೋರಾಟಗಾರ

ರಾಜ್ಯ ಸರಕಾರ ಬರಪೀಡಿತ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಿ, ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು. ರೈತರು ಬ್ಯಾಂಕುಗಳು, ಸಹಕಾರ ಸಂಘಗಳು ಹಾಗೂ ಖಾಸಗಿ ಸಾಲದ ಒತ್ತಡಕ್ಕೆ ಸಿಲುಕಿದ್ದು, ಅವರಿಗೆ ತಕ್ಷಣದ ಆರ್ಥಿಕ ನೆರವು ಅತ್ಯಗತ್ಯವಾಗಿದೆ.

-ಇಬ್ರಾಹಿಂ ಪಟೇಲ್ ಯಾಳವಾರ, ಜೇವರ್ಗಿ ರೈತ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ದಸ್ತಗೀರ ನದಾಫ್ ಯಳಸಂಗಿ

contributor

Similar News