ಗ್ಯಾಸ್ ಕಂಪೆನಿಗಳೊಂದಿಗೆ ಸಂಚು, ಭ್ರಷ್ಟಾಚಾರ ಆರೋಪ : ಪ್ರತಿಪಕ್ಷ ನಾಯಕರ ಪಿಎಸ್ ಸಹಿತ ಹಲವರಿಗೆ ನೋಟಿಸ್
ಬೆಂಗಳೂರು : ಅನಿಲ ಸರಬರಾಜು ಸಂಸ್ಥೆಗಳ ಜೊತೆ ಸಂಚು ರೂಪಿಸಿ ಭ್ರಷ್ಟಾಚಾರ ಎಸಗಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಸಲ್ಲಿಸಬೇಕು ಎಂದು ರೇರಾದ ಹಾಲಿ ಅಧ್ಯಕ್ಷ ರಾಕೇಶ್ ಸಿಂಗ್, ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಆಪ್ತ ಕಾರ್ಯದರ್ಶಿ ತುಕಾರಾಮ ಕಲ್ಯಾಣಕರ ಸೇರಿದಂತೆ ಇನ್ನಿತರ ಅಧಿಕಾರಿಗಳಿಗೆ ಲೋಕಾಯುಕ್ತರು ನಿರ್ದೇಶಿಸಿದ್ದಾರೆ.
ರಾಜ್ಯ ಅನಿಲ ಸರಬರಾಜು ನೀತಿ ಜಾರಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಲವು ವಾಸ್ತವ ಸಂಗತಿಗಳನ್ನು ಮರೆಮಾಚಿದ್ದಾರೆ ಮತ್ತು ದುರುದ್ದೇಶದಿಂದ ಬೊಕ್ಕಸಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿಯು ಲೋಕಾಯುಕ್ತರಿಗೆ ದಾಖಲೆ ಸಹಿತ 2025ರ ಎಪ್ರಿಲ್‌ನಲ್ಲಿ ದೂರು ದಾಖಲಿಸಿತ್ತು.
ಈ ದೂರಿನ ಕುರಿತು ವಿಚಾರಣೆಗೆ ಕೈಗೆತ್ತಿಕೊಂಡಿರುವ ಲೋಕಾಯುಕ್ತರು 5 ತಿಂಗಳ ನಂತರ ಆಪಾದಿತ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಲೋಕಾಯುಕ್ತರು ಕಳಿಸಿರುವ ನೋಟಿಸ್‌ಪ್ರತಿ ಮತ್ತು ಕರ್ನಾಟಕ ರಾಷ್ಟ್ರ ಸಮಿತಿಯ ಸಲ್ಲಿಸಿದ್ದ ದೂರಿನ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ದೂರುದಾರರು ಸಲ್ಲಿಸಿರುವ ದೂರು ಮತ್ತು ದಾಖಲಾತಿ ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳಿಸಲಾಗಿದೆ. ಈ ಕುರಿತು ನಿಮ್ಮ ಆಕ್ಷೇಪಣೆ/ಉತ್ತರವನ್ನು ಸೂಕ್ತ ದಾಖಲಾತಿಗಳೊಂದಿಗೆ ತ್ವರಿತವಾಗಿ ದ್ವಿಪತ್ರಿಯಲ್ಲಿ 2025ರ ಅಕ್ಟೋಬರ್ 6ರೊಳಗೆ ನಮ್ಮ ಕಚೇರಿಗೆ ತಪ್ಪದೇ ಸಲ್ಲಿಸಬೇಕು ಎಂದು ರಾಕೇಶ್ ಸಿಂಗ್, ತುಕಾರಾಮ ಕಲ್ಯಾಣಕರ್, ಲಕ್ಷ್ಮೀಸಾಗರ್, ಚನ್ನಕೇಶವ, ಹೇಮಂತ್ ಲೋಕಾಯುಕ್ತರು ನಿರ್ದೇಶಿಸಿರುವುದು ಗೊತ್ತಾಗಿದೆ.
ಆಪಾದಿತ ಅಧಿಕಾರಿಗಳ ಪೈಕಿ ರಾಕೇಶ್ ಸಿಂಗ್ ಅವರು ನಿವೃತ್ತರಾಗಿದ್ದಾರೆ ಮತ್ತು ರೇರಾದ ಹಾಲಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿಯಾಗಿದ್ದ ತುಕಾರಾಮ ಕಲ್ಯಾಣಕರ ಅವರು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಆಪ್ತ ಕಾರ್ಯದರ್ಶಿಯಾಗೆ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮೀಸಾಗರ್ ಅವರು ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ, ಚನ್ನಕೇಶವ ಅವರು ಶಾಖಾಧಿಕಾರಿ ಮತ್ತು ಹೇಮಂತ್ ಎಂಬವರು ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ.
ದೂರಿನಲ್ಲೇನಿದೆ? :
ರಾಜ್ಯ ನಗರ ಅನಿಲ ಸರಬರಾಜು ನೀತಿ ಜಾರಿಗೆ ಬಂದಲ್ಲಿ ಬಿಬಿಎಂಪಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಲಿತ್ತು. ಆದರೆ ಈ ಆರ್ಥಿಕ ನಷ್ಟವನ್ನು ಮುನ್ನೆಲೆಗೆ ತರದೇ ಮರೆಮಾಚುವ ದುರುದ್ದೇಶದಿಂದಲೇ ಅನಿಲ ಸರಬರಾಜು ಸಂಸ್ಥೆಗಳ ಜೊತೆ ಈ ಅಧಿಕಾರಿಗಳು ಸಂಚು ರೂಪಿಸಿದ್ದರು. ಈ ಮೂಲಕ ಭ್ರಷ್ಟಾಚಾರ ಎಸಗಿರುವ ಈ ಅಧಿಕಾರಿಗಳು ಬಿಬಿಎಂಪಿಯ ಅಭಿಪ್ರಾಯ ಮತ್ತು ಮತ್ತು ಆಂತರಿಕ ಆರ್ಥಿಕ ಸಲಹೆಗಾರರ ಅಭಿಪ್ರಾಯ ಪಡೆದಿಲ್ಲ. ಬದಲಿಗೆ ಕಡತವನ್ನು ನೇರವಾಗಿ ಜಂಟಿ ನಿರ್ದೇಶಕರ ಅಭಿಪ್ರಾಯಕ್ಕಾಗಿ ಕಳಿಸಲಾಗಿತ್ತು ಎಂದು ದೂರಿನಲ್ಲಿ ಮಂಜುನಾಥ್ ಅವರು ಆಪಾದಿಸಿದ್ದರು.
ರಾಜ್ಯ ನಗರ ಅನಿಲ ವಿತರಣೆ ನೀತಿ ಜಾರಿಗೆ ಬಂದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಆಗುವ ನಷ್ಟದ ಬಗ್ಗೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ನಿಖರ ಮಾಹಿತಿ ನೀಡದೇ ನೀತಿ ಜಾರಿಗೆ ಬರುವುದಕ್ಕೆ ಅಧಿಕಾರಿ, ನೌಕರರು ಕಾರಣರಾಗಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.
ರಾಜ್ಯ ನಗರ ಅನಿಲ ವಿತರಣೆ ನೀತಿಯು ಇಷ್ಟೊಂದು ಅಗಾಧ ಪ್ರಮಾಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಪರಿಣಾಮಗಳಿಗೆ ಕಾರಣವಾಗಲಿದೆ. ಆದರೂ ನಗರಾಭಿವೃದ್ಧಿ ಇಲಾಖೆಯು ತನ್ನ ಅಭಿಪ್ರಾಯ ದಾಖಲಿಸಿಲ್ಲ. ಹೀಗಾಗಿ ರಾಜ್ಯ ನಗರ ಅನಿಲ ವಿತರಣೆ ನೀತಿ ಜಾರಿಗೆ ತರುವುದರಿಂದ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯೂ ಸಚಿವ ಸಂಪುಟವನ್ನು ದಿಕ್ಕು ತಪ್ಪಿಸಿದೆ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.