×
Ad

ಸಂವಿಧಾನದ ಅಡಿಯಲ್ಲಿ ನ್ಯಾಯಾಧೀಶರನ್ನು ಮಹಾಭಿಯೋಗಗೊಳಿಸುವಿಕೆಯ ಸುತ್ತ...

Update: 2025-07-31 14:46 IST

ಭಾರತದ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಮಹಾಭಿಯೋಗಗೊಳಿಸುವಿಕೆಯ (Impeachment) ಇತಿಹಾಸ ನೋಡಿದಾಗ ಮೊದಲಿಗೆ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವಿ. ರಾಮಸ್ವಾಮಿ ವಿರುದ್ಧ ನಿರ್ಣಯವನ್ನು ಮಾಡಲಾಗಿತ್ತು. ಅವರು ಪಂಜಾಬ್ ಮತ್ತು ಹರ್ಯಾಣದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ಅತಿಯಾದ ವೆಚ್ಚದ ಆರೋಪವನ್ನು ಹೊರಿಸಿ 1993ರಲ್ಲಿ ನಿರ್ಣಯನ್ನು ಮಂಡಿಸಲಾಯಿತು. ನಂತರ ಈ ನಿರ್ಣಯಣವು ಲೋಕಸಭೆಯಲ್ಲಿ ಪರಾಭವಗೊಂಡಿತು. ಮುಂದೆ 2011ರಲ್ಲಿ ಕಲ್ಕತ್ತಾ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸೌಮಿತ್ರ ಸೇನ್ ವಿರುದ್ಧ ರಾಜ್ಯಸಭೆಯಲ್ಲಿ ನಿರ್ಣಯನ್ನು ಅಂಗೀಕರಿಸಲಾಯಿತು. ಈ ವಿಷಯವನ್ನು ಲೋಕಸಭೆಯು ಕೈಗೆತ್ತಿಕೊಳ್ಳುವ ಮೊದಲೇ ಆ ನ್ಯಾಯಾಧೀಶರು ರಾಜೀನಾಮೆಯನ್ನು ನೀಡಿದ್ದರು. ಇತ್ತೀಚೆಗೆ, ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾರವರ ಮನೆಯಲ್ಲಿ ನಗದು ಹಣ ಪತ್ತ್ತೆಯಾಗಿರುವ ಸಂಬಂಧ ಪ್ರತಿಪಕ್ಷಗಳು ಅವರನ್ನು ವಜಾಗೊಳಿಸುವ ಪ್ರಸ್ತಾವ ಮಾಡಿವೆ.

ಸಂವಿಧಾನ ಅಡಿಯಲ್ಲಿ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಹೇಗೆ ಮಹಾಭಿಯೋಗಗೊಳಿಸುತ್ತಾರೆ ಎಂಬುದನ್ನು ನೋಡುವುದಾದರೆ...

ನ್ಯಾಯಾಂಗದಲ್ಲಿನ ಉನ್ನತ ನ್ಯಾಯಾಧೀಶರ ವಿರುದ್ಧ ಮಂಡಿಸಬಹುದಾದ ಮಹಾಭಿಯೋಗದ ನಿರ್ಣಯ ವಿಧಿಸುವಾಗ ಸಂವಿಧಾನದಲ್ಲಿ ಅಗಾಧವಾದ ಕಾರ್ಯವಿಧಾನವನ್ನು ನಿಗದಿಪಡಿಸಲಾಗಿದೆ. ಸಂವಿಧಾನವು ನ್ಯಾಯಾಧೀಶರನ್ನು ಅವರ ಹುದ್ದೆಯಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ನಿಗದಿಪಡಿಸುವಾಗ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ವಿಧಿ 124(4) ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ವಿಧಿ 218ರಂತೆ ಎರಡು ವಿಧಿಗಳಲ್ಲಿ ವಿಂಗಡಿಸಿದೆ. ಭಾರತದ ಸಂವಿಧಾನ ವಿಧಿ 124(4), (5)ರ ಅಡಿಯಲ್ಲೇ ಒದಗಿಸಲಾದ ರೀತಿಯಲ್ಲಿ ರಾಷ್ಟ್ರಪತಿಗಳು ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಅವರ ಹುದ್ದೆಯಿಂದ ತೆಗೆದುಹಾಕಬಹುದು ಎಂದು ಹೇಳುತ್ತದೆ. ಅಸಮರ್ಥತೆಯ, ಅನುಚಿತ ವರ್ತನೆಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ತೆಗೆದು ಹಾಕಬಹುದು ಎಂದು ಸಂವಿಧಾನವು ಹೇಳುತ್ತದೆ. ಸಂಸತ್ತಿನ ಪ್ರತಿಯೊಂದು ಸದನವೂ ಆ ಸದನದ ಒಟ್ಟು ಸದಸ್ಯರ ಬಹುಮತದಿಂದ ಬೆಂಬಲಿತವಾದ ಭಾಷಣದ ನಂತರ ಅಂಗೀಕರಿಸಿದ ರಾಷ್ಟ್ರಪತಿಗಳ ಆದೇಶ ಹಾಗೂ ಆ ಸದನದಲ್ಲಿ ಹಾಜರಿದ್ದ ಮತ್ತು ಮತ ಚಲಾಯಿಸಿದ ಮೂರನೇ ಎರಡರಷ್ಟು ಸದಸ್ಯರ ಬಹುಮತದಿಂದ ಸಾಬೀತಾದ ಅನುಚಿತ ವರ್ತನೆ ಅಥವಾ ಅಸಮರ್ಥತೆಯ ಆಧಾರದ ಮೇಲೆ ತೆಗೆದುಹಾಕುವಿಕೆಯನ್ನು ಅದೇ ಅಧಿವೇಶನದಲ್ಲಿ ರಾಷ್ಟ್ರಪತಿ ಸಲ್ಲಿಸಬೇಕಾಗಿರುತ್ತದೆ. ‘ನ್ಯಾಯಾಧೀಶರ ದುರ್ವರ್ತನೆ ಅದು ನ್ಯಾಯಪೀಠದಲ್ಲಿ ನಡೆದರೂ ಅಥವಾ ನ್ಯಾಯಪೀಠದ ಹೊರಗೆ ನಡೆದರೂ ನ್ಯಾಯದ ಆಡಳಿತದಲ್ಲಿ ಸಾರ್ವಜನಿಕ ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ ಮತ್ತು ದೇಶದ ಕಾನೂನಿನ ಬಗ್ಗೆ ಸಾರ್ವಜನಿಕ ಗೌರವವನ್ನು ಹಾನಿಗೊಳಿಸುತ್ತದೆ, ಅದರ ಬಗ್ಗೆ ಏನೂ ಮಾಡಲಾಗುವುದಿಲ್ಲವೆಂದು ಕಂಡು ಬಂದರೆ ಹಾನಿ ಸರಿಪಡಿಸಲಾಗುವುದಿಲ್ಲ’ ಎಂದು ಜೆ.ಆರ್. ಸ್ಪೆಂಸಾರ್‌ರವರ ‘ಜ್ಯಾಕ್‌ಸನ್ಸ್ ಮೆಷನೆರಿ ಆಫ್ ಜಸ್ಟಿಸ್’ 8ನೇ ಆವೃತ್ತಿ ಪುಟ 369-70ರಲ್ಲಿ ಬರೆಯಲಾಗಿದೆ. ಇದನ್ನು ಕೆ. ವೀರಸ್ವಾಮಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲೂ ಸಹ ಉಲ್ಲೇಖಿಸಲಾಗಿದೆ.

ನ್ಯಾಯಾಧೀಶರ (ವಿಚಾರಣೆ) ಕಾಯ್ದೆ-1968 ತನಿಖೆಯ ಕಾರ್ಯವಿಧಾನ ಮತ್ತು ದುರ್ಬಳಕೆಯ ಪುರಾವೆಯನ್ನು ವ್ಯಾಖ್ಯಾನಿಸುತ್ತದೆ. ಸಂಸತ್ತಿನ ಯಾವುದೇ ಸದನದಲ್ಲಿ ವಾಗ್ದಂಡನೆ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ಲೋಕಸಭೆಯ ಕನಿಷ್ಠ 100 ಸಂಸದರು ಅಥವಾ ಕನಿಷ್ಠ 50 ರಾಜ್ಯಸಭಾ ಸಂಸದರು ಪ್ರಸ್ತಾವಕ್ಕೆ ಸಹಿ ಹಾಕಬೇಕಾಗುತ್ತದೆ. ನ್ಯಾಯಧೀಶರ (ವಿಚಾರಣೆ) ಕಾಯ್ದೆಯ ಸೆಕ್ಷನ್ 3 ಮತ್ತು 6(2)ರ ಪರಿಣಾಮವೇನೆಂದರೆ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ಪ್ರಸ್ತಾವವನ್ನು ಬಾಕಿ ಇಡಲಾಗುತ್ತದೆ ಮತ್ತು ಸಮಿತಿಯು ನ್ಯಾಯಾಧೀಶರು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಪ್ರಸ್ತಾವವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಹಾಗೂ ಸಂಸತ್ತಿನ ಪ್ರತಿಯೊಂದು ಸದನವೂ ಈ ಸಂವಿಧಾನದ ನಿಬಂಧನೆಗಳಿಗೆ ಒಳಪಟ್ಟು ನಿಯಮಗಳನ್ನು ರಚಿಸಬಹುದು ಎಂದು 124ನೇ ವಿಧಿಯು ಸ್ಪಷ್ಟವಾಗಿ ಹೇಳುತ್ತದೆ. ಕೃಷ್ಣಸ್ವಾಮಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಮತ್ತು ಸರೋಜಿನಿ ರಾಮಸ್ವಾಮಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ‘ನ್ಯಾಯಾಧೀಶರ (ವಿಚಾರಣೆ) ಕಾಯ್ದೆಯು ವಜಾ ಮಾಡುವ ಪ್ರಕ್ರಿಯೆಯ ನ್ಯಾಯಾಂಗ ಮತ್ತು ರಾಜಕೀಯ ಅಂಶ ಗಳೆರಡರ ಸಾಂವಿಧಾನಿಕ ತತ್ವಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ. ಅಂತಿಮ ಅಧಿಕಾರವು ಸಂಸತ್ತಿನ ಬಳಿ ಉಳಿಯುತ್ತದೆ, ಅಂದರೆ ತನಿಖಾ ಸಮಿತಿಯು ನ್ಯಾಯಾಧೀಶರು ಆರೋಪಗಳಲ್ಲಿ ತಪ್ಪಿತಸ್ಥರೆಂದು ತೀರ್ಮಾನವನ್ನು ದಾಖ ಲಿಸಿದರೂ ನ್ಯಾಯಾಧೀಶರನ್ನು ವಜಾ ಮಾಡುವ ಶಿಫಾರಸನ್ನು ರಾಷ್ಟ್ರಪತಿಗೆ ಸಲ್ಲಿಸದಿರಲು ನಿರ್ಧರಿಸಲು ಸಂಸತ್ತು ಮುಕ್ತವಾಗಿದೆ.

ಆದರೆ, ಸಮಿತಿಯು ನ್ಯಾಯಾಧೀಶರು ತಪ್ಪಿತಸ್ಥರಲ್ಲ ಎಂಬ ತೀರ್ಮಾನವನ್ನು ದಾಖಲಿಸಿದರೆ, ತೆಗೆದುಹಾಕುವ ಪ್ರಕ್ರಿಯೆಯಲ್ಲಿ ರಾಜಕೀಯ ಅಂಶಕ್ಕೆ ಯಾವುದೇ ಆಯ್ಕೆ ಇರುವುದಿಲ್ಲ. ಕಾನೂನು ನಿಜಕ್ಕೂ ನ್ಯಾಯಾಧೀಶರ ಹೊಣೆಗಾರಿಕೆ ಮತ್ತು ನ್ಯಾಯಾಂಗ ಸ್ವಾತಂತ್ರ್ಯದ ಮೌಲ್ಯಗಳ ಪರಿಕಲ್ಪನೆಯನ್ನು ಸಮನ್ವಯಗೊಳಿಸುವ ಒಂದು ಸುಸಂಸ್ಕೃತ ಶಾಸನವಾಗಿದೆ. ನ್ಯಾಯಾಧೀಶರ (ವಿಚಾರಣೆ) ಕಾಯ್ದೆಯ ನಿಬಂಧನೆಗಳು ಸಾಂವಿಧಾನಿಕ ಯೋಜನೆಗೆ ವಿರುದ್ಧವಾಗಿದ್ದಲ್ಲ’ ಎಂದು ಉಲ್ಲೇಖಿಸಲಾಗಿದೆ.

1999ರಲ್ಲಿ ಸರ್ವೋಚ್ಚ ನ್ಯಾಯಾಲಯವು ಉನ್ನತ ನ್ಯಾಯಾಂಗದ ಸದಸ್ಯರ ವಿರುದ್ಧದ ಆರೋಪಗಳ ತನಿಖೆಗಾಗಿ ಆಂತರಿಕ ಕಾರ್ಯವಿಧಾನದ ಮಾರ್ಗಸೂಚಿಗಳನ್ನು ಅಂಗೀಕರಿಸಿತು. ಈ ಪ್ರಕ್ರಿಯೆಯ ಅಡಿಯಲ್ಲಿ, ಈ ವಿಷಯವನ್ನು ಮೊದಲು ಆಂತರಿಕ ಸಮಿತಿಯು ಪರಿಶೀಲಿಸುತ್ತದೆ. ಆರೋಪಗಳು ನಿಜವೆಂದು ಸಾಬೀತಾದರೆ, ಸಿಜೆಐ ಆ ನ್ಯಾಯಾಧೀಶರನ್ನು ರಾಜೀನಾಮೆ ನೀಡುವಂತೆ ಕೇಳಬಹುದು. ನ್ಯಾಯಾಧೀಶರು ನಿರಾಕರಿಸಿದರೆ, ಸಿಜೆಐ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿ, ಅವರನ್ನು ವಜಾಗೊಳಿಸಲು ಸಂಸದೀಯ ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತೆ ಕೇಳಿಕೊಳ್ಳುತ್ತಾರೆ. ಸ್ಪೀಕರ್/ಅಧ್ಯಕ್ಷರು ಲಭ್ಯವಿರುವ ವಿಷಯಗಳನ್ನು ಪರಿಗಣಿಸಿ ಮತ್ತು ಅವರು ಸೂಕ್ತವೆಂದು ಭಾವಿಸುವಂತಹ ವ್ಯಕ್ತಿಗಳೊಂದಿಗೆ ಸಮಾಲೋಚಿಸಿ ನಂತರ, ನ್ಯಾಯಾಧೀಶರ ವಿರುದ್ಧದ ಆರೋಪದ ತನಿಖೆಗಾಗಿ ಪ್ರಥಮ ದೃಷ್ಟಿಯಲ್ಲಿ ಪ್ರಕರಣವನ್ನು ರೂಪಿಸಲಾಗಿದೆ ಎಂದು ಅಭಿಪ್ರಾಯವನ್ನು ರೂಪಿಸಿದರೆ ಅವರು ನ್ಯಾಯಾಧೀಶರ (ವಿಚಾರಣೆ) ಕಾಯ್ದೆ ಕಲಂ 3(2)ರ ಪ್ರಕಾರ ನ್ಯಾಯಾಂಗ ಪದಾಧಿಕಾರಿಗಳ ಸಮಿತಿಯನ್ನು ರಚಿಸುತ್ತಾರೆ. ತನಿಖಾ ಸಮಿತಿಯು ತಾನು ಮಾಡಿದ ತನಿಖೆಯ ಕೊನೆಯಲ್ಲಿ ನ್ಯಾಯಾಧೀಶರು ತಪ್ಪಿತಸ್ಥರಲ್ಲ ಎಂಬ ತೀರ್ಮಾನವನ್ನು ದಾಖಲಿಸಿದರೆ ತನಿಖೆ ಸಮಿತಿಯು ದಾಖಲಿಸಿದ ತಪ್ಪಿತಸ್ಥರಲ್ಲ ಎಂಬ ತೀರ್ಮಾನವನ್ನು ಪರಿಗಣಿಸಲು ಯಾರಿಗೂ, ಸಂಸತ್ತಿಗೂ ಅಧಿಕಾರ ನೀಡದೆ ಈ ಪ್ರಕ್ರಿಯೆಯು ಕೊನೆಗೊಳ್ಳುತ್ತದೆ. ತನಿಖಾ ಸಮಿತಿಯು ಮಾಡಿದ ತೀರ್ಮಾನವು ನ್ಯಾಯಾಧೀಶರು ತಪ್ಪಿತಸ್ಥರು ಎಂದು ಕಂಡುಬಂದರೆ, ಸಮಿತಿಯ ವರದಿಯೊಂದಿಗೆ ನ್ಯಾಯಾಧೀಶರನ್ನು ವಜಾಗೊಳಿಸುವ ಪ್ರಸ್ತಾವವನ್ನು ಮತ್ತು ಅವರನ್ನು ವಜಾಗೊಳಿಸುವಿಕೆಯ ವಿರುದ್ಧ ಸಂಬಂಧಪಟ್ಟ ನ್ಯಾಯಾಧೀಶರು ತೋರಿಸಿದ ಕಾರಣ ಯಾವುದಾದರೂ ಇದ್ದರೆ, ಅದನ್ನು ಸೇರಿದಂತೆ ಲಭ್ಯವಿರುವ ಇತರ ಸಾಮಗ್ರಿಗಳನ್ನು ಸಂಸತ್ತು ಪರಿಗಣಿಸುತ್ತದೆ. ಇದಕ್ಕಾಗಿ ನ್ಯಾಯಾಂಗ ವಿಚಾರಣೆ ಕಾಯ್ದೆಯ ಸೆಕ್ಷನ್ 4(2)ರ ಅಡಿಯಲ್ಲಿ ಸ್ಪೀಕರ್/ಅಧ್ಯಕ್ಷರು ವರದಿಯನ್ನು ಸಲ್ಲಿಸಿದ ನಂತರ ಅವರಿಗೆ ಅವಕಾಶ ನೀಡಬೇಕು.

ನ್ಯಾಯಾಧೀಶರು ಅಥವಾ ನಾಮನಿರ್ದೇಶಿತರು ಸಂಸತ್ತಿನ ಮುಂದೆ ತಮ್ಮ ವಾದವನ್ನು ಮಂಡಿಸಲು ಅವಕಾಶವಿದೆ. ಮತದಾನದ ವಿಷಯಕ್ಕೆ ಬಂದಾಗ, ನಿರ್ಣಯವನ್ನು ವಿಶೇಷ ಬಹುಮತದಿಂದ ಅಂಗೀಕರಿಸಬೇಕು, ಅಂದರೆ ಹಾಜರಿರುವ ಮತ್ತು ಮತದಾನ ಮಾಡುವ ಮೂರನೇ ಎರಡರಷ್ಟು ಸದಸ್ಯರ ಬೆಂಬಲದಿಂದ ಇದು ಸದನದ ಒಟ್ಟು ಬಲದ ಅರ್ಧಕ್ಕಿಂತ ಕಡಿಮೆ ಇರಬಾರದು. ಈ ಪ್ರಕ್ರಿಯೆಯನ್ನು ಇತರ ಸದನದಲ್ಲಿ ಪುನರಾವರ್ತಿಸಬೇಕು, ಅನುಮೋದನೆ ದೊರೆತರೆ ಸಂಸತ್ತು ನ್ಯಾಯಾಧೀಶರ ಪದಚ್ಯುತಿಗೆ ಕೋರಿ ರಾಷ್ಟ್ರಪತಿಗೆ ಕಳುಹಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪುನೀತ್ ಎನ್.

contributor

Similar News