ಬೆಂಗಳೂರು | ಖಾಸಗಿ ಬಸ್‌ಗಳ ಅನಧಿಕೃತ ನಿಲುಗಡೆಯಿಂದ ವಾಹನ ದಟ್ಟಣೆ
ಬೆಂಗಳೂರು : ನಗರದಲ್ಲಿ ಖಾಸಗಿ ಬಸ್‌ಗಳ ಅನಧಿಕೃತ ನಿಲುಗಡೆ ಹೆಚ್ಚಾಗುತ್ತಿದ್ದು, ಇದರಿಂದ ರಾತ್ರಿಯ ವೇಳೆ ನಗರದ ಪ್ರಮುಖ ರಸ್ತೆಗಳು ಮತ್ತು ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆಯಾಗುತ್ತಿದೆ. ಮೆಜೆಸ್ಟಿಕ್, ಮಾರುಕಟ್ಟೆ, ಆನಂದ್‌ರಾವ್ ಸರ್ಕಲ್ ಸುತ್ತಮುತ್ತ ವಾಹನ ಸವಾರ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಪ್ರತಿನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ.
ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಆನಂದ್‌ರಾವ್ ಸರ್ಕಲ್, ಯಶವಂತಪುರ, ಜಾಲಹಳ್ಳಿ ಕ್ರಾಸ್, ಟಿನ್‌ಫ್ಯಾಕ್ಟರಿ, ಹೆಬ್ಬಾಳ, ಕೆ.ಆರ್.ಪುರಂ, ಮೈಸೂರು ರಸ್ತೆಯಲ್ಲಿರುವ ಬಾಪೂಜಿನಗರ, ಕೆಂಗೇರಿ ಸೇರಿದಂತೆ ಮತ್ತಿತರ ಭಾಗಗಳಲ್ಲಿನ ರಸ್ತೆಗಳಲ್ಲಿ ರಾತ್ರಿಯ ವೇಳೆ ಖಾಸಗಿ ಬಸ್‌ಗಳು ಅನಧಿಕೃತವಾಗಿ ನಿಲುಗಡೆ ಮಾಡುತ್ತಿದೆ. ಇದರಿಂದ ಸಾರ್ವಜನಿಕ ಬಸ್‌ಗಳಲ್ಲಿ ಪ್ರಯಾಣ ಮಾಡುವವರಿಗೂ ತೀವ್ರ ತೊಂದರೆಯಾಗುತ್ತಿದೆ.
ನಗರದ ಹೃದಯ ಭಾಗಗಳಾದ ಮೆಜೆಸ್ಟಿಕ್ ಮತ್ತು ಅಕ್ಕಪಕ್ಕದ ರಸ್ತೆಗಳು, ಕೆ.ಆರ್.ಮಾರುಕಟ್ಟೆಯ ಚಾಮರಾಜಪೇಟೆಗೆ ಹೋಗುವ ರಸ್ತೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಖಾಸಗಿ ಬಸ್‌ಗಳು ಗಂಟೆಗಟ್ಟಲೇ ನಿಲ್ಲುವುದು ಸಾಮಾನ್ಯ. ಈ ವೇಳೆ ಕಲಾಸಿಪಾಳ್ಯದಿಂದ ಕೆಂಗೇರಿ, ಸುಂಕದಕಟ್ಟೆ, ಜಾಲಹಳ್ಳಿಗೆ ಹೋಗುವ ಬಿಎಂಟಿಸಿ ಬಸ್‌ಗಳು ಕಳಾಸಿಪಾಳ್ಯ ಬಸ್‌ಸ್ಟಾಂಡ್ ಬಿಟ್ಟು, 500 ಮೀಟರ್ ಕ್ರಮಿಸಲು ಕನಿಷ್ಟ 20ರಿಂದ 40 ನಿಮಿಷಗಳು ತೆಗೆದುಕೊಳ್ಳುತ್ತಿವೆ.
ಹಾಗೆಯೇ ರಾತ್ರಿಯ ವೇಳೆ ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಮೆಜೆಸ್ಟಿಕ್‌ವರೆಗೆ ಮತ್ತು ಮೆಜೆಸ್ಟಿಕ್‌ನಿಂದ ಕಾಪೊರೇಷನ್ ವೃತ್ತದ ವರೆಗೆ ವಾಹನ ದಟ್ಟಣೆ ಹೆಚ್ಚಾಗಲು, ಮೆಜೆಸ್ಟಿಕ್ ಸುತ್ತಮುತ್ತ ನಿರ್ಮಾಣವಾಗಿರುವ ಖಾಸಗಿ ಬಸ್‌ಗಳ ಅನಧಿಕೃತ ನಿಲ್ದಾಣಗಳೂ ಒಂದು ಕಾರಣವಾಗಿದೆ.
ಬಹುತೇಕ ಟ್ರಾವಲ್ ಎಜೆನ್ಸಿಗಳು ಕೆ.ಆರ್.ಮಾರುಕಟ್ಟೆಯ ಕಲಾಸಿಪಾಳ್ಯದಲ್ಲಿ ಹಾಗೂ ಮೆಜೆಸ್ಟಿಕ್ ಸುತ್ತಮುತ್ತಲಿದ್ದು, ಬೆಂಗಳೂರಿನ ದೇಶದ ವಿವಿಧ ಸ್ಥಳಗಳಿಗೆ ತೆರಳುವ ಬಸ್ ಟಿಕೆಟ್‌ಗಳನ್ನು ಬುಕ್ ಮಾಡಿರುವ ಕಾರಣ, ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಗಂಟೆಗಟ್ಟೆಲೇ ಕಾಯುತ್ತವೆ. ಸಂಜೆ ವೇಳೆ ಕೆ.ಆರ್.ಮಾರುಕಟ್ಟೆಯ ಕಲಾಸಿಪಾಳ್ಯದಿಂದ ಚಾಮರಾಜಪೇಟಗೆ ಹೋಗುವ ಮಾರ್ಗದಲ್ಲಿ ಸುಮಾರು 30ಕ್ಕೂ ಅಧಿಕ ಐಷಾರಾಮಿ ಬಸ್‌ಗಳು ನಿಂತಿರುವುದು ಸಾಮಾನ್ಯವಾಗಿರುತ್ತದೆ. ಅಲ್ಲದೆ ಹೊರ ರಾಜ್ಯಗಳಿಗೆ ಈ ಬಸ್‌ಗಳು ಕೇವಲ ಜನರನ್ನು ಮಾತ್ರ ಕೊಂಡೊಯ್ಯುವುದಿಲ್ಲ. ಬದಲಿಗೆ ಬಸ್‌ಗಳಿಗೆ ಸರಕು ಸಾಗಿಸುತ್ತವೆ. ಮೂರು ಚಕ್ರದ ವಾಹನಗಳು ಸೇರಿ ಟೆಂಪೋಗಳ ಮೂಲಕ ಬಸ್‌ಗಳಿಗೆ ಈ ಸರಕುಗಳನ್ನು ತುಂಬಿಸಲಾಗುತ್ತಿದೆ. ಹೀಗೆ ತುಂಬಿಸುವಾಗ ಬಸ್‌ಗಳು ಹೆಚ್ಚು ಕಾಲ ರಸ್ತೆಯಲ್ಲಿಯೇ ನಿಲ್ಲಬೇಕಾಗುತ್ತದೆ. ಇದರಿಂದ ವಾಹನ ದಟ್ಟನೆಯಾಗುತ್ತಿದೆ.
ಇನ್ನು ಇಲ್ಲಿನ ಫ್ರೀಡಂ ಪಾರ್ಕ್‌ನಿಂದ ಆನಂದ್ ರಾವ್ ಸರ್ಕಲ್‌ವರೆಗೆ ಗಂಟೆಗಟ್ಟಲೇ ವಾಹನ ದಟ್ಟಣೆ ಉಂಟಾಗುತ್ತದೆ. ಈ ರಸ್ತೆಯುದ್ದಕ್ಕೂ ಖಾಸಗಿ ಬಸ್‌ಗಳು ನಿಂತಿರುತ್ತವೆ. ಇಲ್ಲಿ ಯಾವುದೇ ಸರಕಾರಿ ಬಸ್‌ಗಳು ಓಡಾಡುವುದಿಲ್ಲ. ಆದರೆ ದ್ವಿಚಕ್ರ ವಾಹನಗಳು, ಕಾರುಗಳು, ಸರಕು ಸಾಗಾಟ ವಾಹನಗಳು ಓಡಾಡುತ್ತದೆ. ಖಾಸಗಿ ಬಸ್‌ಗಳು ನಿಂತಿರುವ ಕಾರಣಕ್ಕೆ ಸಂಭವಿಸುವ ವಾಹನ ದಟ್ಟನೆಯು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತದೆ.
ವಾರದ ರಜೆ, ಹಬ್ಬದ ಸಂದರ್ಭಗಳಲ್ಲಿ ನರಕ ಯಾತನೆ :
ಬೆಂಗಳೂರಿನಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿಕೊಂಡರೆ ವಾರದ ರಜೆ, ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಮಂದಿ ತಮ್ಮ ಊರುಗಳಿಗೆ ಹೋಗಲು ಖಾಸಗಿ ಬಸ್‌ಗಳಲ್ಲಿ ಸೀಟ್‌ಗಳನ್ನು ಬುಕ್ ಮಾಡಿಕೊಂಡಿರುತ್ತಾರೆ. ಇದರಿಂದ ನಗರದ ಕೆಲ ಭಾಗಗಳಲ್ಲಿ ಸುಮಾರು ಎರಡು ಗಂಟೆಗಳವರೆಗೆ ವಾಹನ ದಟ್ಟನೆ ಉಂಟಾಗುತ್ತದೆ. ಆಗ ಮೇಲ್ಸೇತುವೆಗಳ ಮೇಲೆಯೂ ವಾಹನ ದಟ್ಟಣೆಯುಂಟಾಗುತ್ತದೆ. ವಾಹನ ಚಲಾಯಿಸಲು ನರಕ ಯಾತನೆಯನ್ನು ಅನುಭವಿಸಬೇಕಾಗುತ್ತದೆ.
ಸಾರಿಗೆ ಇಲಾಖೆ, ಬೆಂಗಳೂರು ಸಂಚಾರಿ ಪೋಲೀಸ್ ಹಾಗೂ ಬಿಬಿಎಂಪಿ ಸಮನ್ವಯವನ್ನು ಸಾಧಿಸಿ, ಖಾಸಗಿ ಬಸ್‌ಗಳ ಅನಧಿಕೃತ ನಿಲ್ದಾಣಗಳಿಂದ ಉಂಟಾಗುವ ಸಮಸ್ಯೆಯನ್ನು ಬಗೆಹರಿಸಬೇಕು. ನೆರೆ ರಾಜ್ಯಗಳಿಗೆ, ಜಿಲ್ಲೆಗಳಿಗೆ ತೆರಳುವ ಖಾಸಗಿ ಬಸ್‌ಗಳಿಗೆ ನಗರದಲ್ಲಿ ಪ್ರತ್ಯೇಕ ನಿಲ್ದಾಣಗಳನ್ನು ನಿರ್ಮಿಸಬೇಕು. ಇದರಿಂದ ವಾಹನ ದಟ್ಟನೆ ಸಮಸ್ಯೆ ನಿವಾರಣೆ ಆಗಬಹುದು.
-ಶಿವಕುಮಾರ್, ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿ