ಬಡ ವಿದ್ಯಾರ್ಥಿಗಳ ಪಾಲಿನ ಅನ್ನದಾತ ಬಸವಣ್ಣ
20 ರೂ.ಗೆ ಹೊಟ್ಟೆ ತುಂಬಾ ಊಟ: ವ್ಯಾಪಕ ಮೆಚ್ಚುಗೆ
ಚಿಕ್ಕಮಗಳೂರು, ಆ.5: ಪೈಪೋಟಿಯ ಈ ಯುಗದಲ್ಲಿ ಹೋಟೆಲ್, ಕ್ಯಾಂಟೀನ್ ವ್ಯಾಪಾರ ನಡೆಸುವುದು ಅತ್ಯಂತ ಸಾಹಸ, ಕಷ್ಟದ ಕೆಲಸವಾಗಿದೆ. ಆದರೆ, ಜಿಲ್ಲೆಯಲ್ಲೊಬ್ಬರು ಸಣ್ಣದೊಂದು ಕ್ಯಾಂಟೀನ್ ನಡೆಸುತ್ತಾ ಆ ಕ್ಯಾಂಟೀನ್‌ಗೆ ಬರುವ ಸರಕಾರಿ ಕಾಲೇಜುಗಳ ನೂರಾರು ಬಡ ವಿದ್ಯಾರ್ಥಿ ಗಳಿಗೆ ಕೇವಲ 20 ರೂಪಾಯಿಗೆ ಹೊಟ್ಟೆ ತುಂಬಾ ಊಟ ನೀಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆಚರಣದಲ್ಲಿ ಕಳೆದೊಂದು ದಶಕದಿಂದ ‘ಜೀವಿತಾ’ ಹೆಸರಿನ ಕ್ಯಾಂಟೀನ್ ನಡೆಸುತ್ತಿರುವ ಬಸವಣ್ಣ ಸರಕಾರಿ ಕಾಲೇಜುಗಳ ಬಡ ವಿದ್ಯಾರ್ಥಿಗಳ ಪಾಲಿಗೆ ಅಕ್ಷರಶಃ ಅನ್ನದಾತರಾಗಿದ್ದಾರೆ. ಲಾಭದ ವ್ಯವಹಾರಗಳ ನಡುವೆ ಮಾನವೀಯತೆ ಮಾಯವಾಗುತ್ತಿರುವ ಈ ಹೊತ್ತಿನಲ್ಲಿ ಬಡ ಕಾಲೇಜು ಮಕ್ಕಳಿಗೆ ಕಡಿಮೆ ದರದಲ್ಲಿ ಹೊಟ್ಟೆ ತುಂಬಾ ಊಟ ನೀಡುವ ಮೂಲಕ ಮಾನವೀಯತೆಗೆ ಕೊರತೆ ಇಲ್ಲ ಎಂದು ಬಸವಣ್ಣ ತೋರಿಸಿಕೊಟ್ಟಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಸಣ್ಣ ಜಾಗದಲ್ಲಿ ಬಸವಣ್ಣ ಅವರು ಕಳೆದೊಂದು ದಶಕ ದಿಂದ ಕ್ಯಾಂಟೀನ್ ನಡೆಸುತ್ತಿದ್ದಾರೆ. ಸರಕಾರಿ ರಜಾ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ಈ ಕ್ಯಾಂಟೀನ್ ಡಿಸಿ, ಎಸ್ಪಿ ಕಚೇರಿ, ಜಿಲ್ಲಾ ಗ್ರಂಥಾಲಯ, ಕೋರ್ಟ್, ಆಹಾರ ಇಲಾಖೆ ಕಚೇರಿಗೆ ಬರುವ ಸಾರ್ವಜನಿಕರಿಗೆ ಕಾಫಿ, ಟೀ ಯೊಂದಿಗೆ ಊಟ, ತಿಂಡಿಯನ್ನು ಪೂರೈಕೆ ಮಾಡುತ್ತಿದೆ. ಮಧ್ಯಾಹ್ನದ ವೇಳೆ ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೇವಲ 20 ರೂ.ಗೆ ತಟ್ಟೆ ತುಂಬಾ ಅನ್ನ ನೀಡುವ ಮೂಲಕ ವಿದ್ಯಾರ್ಥಿಗಳ ನೆಚ್ಚಿನ ಬಸವಣ್ಣ ಆಗಿದ್ದಾರೆ.
ಸಾಮಾನ್ಯವಾಗಿ ಈ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನದ ಊಟಕ್ಕೆ 50-60 ರೂ. ನಿಗದಿ ಮಾಡಲಾಗಿದೆ. ಸರಕಾರಿ ಕಚೇರಿಗಳಿಗೆ ಬರುವ ಜನರು ಈ ದರ ನೀಡಿ ಊಟ ಮಾಡುತ್ತಿದ್ದಾರೆ. ಆದರೆ, ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಬಂದಲ್ಲಿ ಅವರಿಗೆ ಹೊಟ್ಟೆ ತುಂಬ ಊಟ ನೀಡಿ ಕೇವಲ 20 ರೂ. ಮಾತ್ರ ಪಡೆಯುತ್ತಿದ್ದಾರೆ. ಬಸವಣ್ಣ ಈ ಕಾಯಕವನ್ನು ಕಳೆದ 10 ವರ್ಷಗಳಿಂದಲೂ ಮಾಡುತ್ತಿದ್ದು, ಇಂದಿಗೂ ಜೀವಿತಾ ಕ್ಯಾಂಟೀನ್ ಸಮೀಪದಲ್ಲಿರುವ ಜೂನಿಯರ್ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕ್ಯಾಂಟೀನ್‌ನ ಖಾಯಂ ಗ್ರಾಹಕರಾಗಿದ್ದಾರೆ.
20 ರೂಪಾಯಿಯ ಊಟದಲ್ಲಿ ಅನ್ನ, ಸಾಂಬಾರ್, ಉಪ್ಪಿನಕಾಯಿ, ಹಪ್ಪಳ, ಮೊಸರು ಇರುವುದರಿಂದ ವಿದ್ಯಾರ್ಥಿಗಳು ಖುಷಿಯಿಂದ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದಾರೆ. ಡಿಸಿ ಕಚೇರಿಗೆ ಬರುವವರು ಕಚೇರಿ ಕೆಲಸ ಆಗುತ್ತೋ? ಇಲ್ಲವೋ? ಗೊತ್ತಿಲ್ಲ. ಆದರೆ, ಬಸವಣ್ಣನ ಕ್ಯಾಂಟೀನ್‌ಗೆ ಒಂದು ವಿಸಿಟ್ ಮಾಡಿಯೇ ಮಾಡುತ್ತಾರೆ.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಊಟ ಇಲ್ಲದೆ ಪಾಠ ಕೇಳಬಾರದು, ವ್ಯಾಸಂಗ ನಿಲ್ಲಿಸಬಾರದು ಎಂಬ ಸದುದ್ದೇಶದಿಂದ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಊಟ ಕೊಡುತ್ತಿರುವುದಾಗಿ ಬಸವಣ್ಣ ಹೇಳುತ್ತಾರೆ.
ಬಸವಣ್ಣ ಅವರ ಈ ಸೇವಾ ಮನೋಭಾವನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.