×
Ad

ಕರಡಿ ಜತೆಗೆ ಜೀವ ಸವೆಸುವ ‘ಕರಡಿ ಖಲಂದರ್’

Update: 2025-11-26 09:33 IST

ಕರಡಿಗಳನ್ನು ಕಳಕೊಂಡ ಖಲಂದರ್‌ಗಳಿಗೆ ಮಾನಸಿಕ ಖಿನ್ನತೆ ಬಹಳ ದಿನ ಕಾಡಿತು. ಕಡೆಗೆ ಬದುಕು ಕಟ್ಟಿಕೊಳ್ಳಲು ಈಚಲು ಚಾಪೆ ಹೆಣೆಯುವುದು. ಫ್ಯಾಕ್ಟರಿಗಳಲ್ಲಿ ತಯಾರಾದ ಪ್ಲಾಸ್ಟಿಕ್ ಚಾಪೆಗಳನ್ನು ಮಾರುವುದು, ಭೂಮಾಲಕರ ಹೊಲ ಗದ್ದೆಗಳಲ್ಲಿ ಕೃಷಿಕಾರ್ಮಿಕರಾಗಿ ದುಡಿಯುವುದೇ ಮುಂತಾದ ಕೆಲಸ ಮಾಡತೊಡಗಿದರು. ನನಗೆ ತಿಳಿದಂತೆ ಖಲಂದರ್‌ಗಳಲ್ಲಿ ಒಬ್ಬರೂ ಪದವೀಧರರಿಲ್ಲ. ಈಗಲೂ ಬಹಳಷ್ಟು ಜನ ಅನಕ್ಷರಸ್ಥರು, ಒಬ್ಬರಿಗೂ ಸರಕಾರದ ನಾಲ್ಕನೇ ದರ್ಜೆ ಕೆಲಸವೂ ಸಿಕ್ಕಿಲ್ಲ. ಬಡತನದಿಂದಾಗಿ ಅನೇಕರು ಪೌಷ್ಟಿಕಾಂಶದ ಕೊರತೆಯಿಂದ ನರಳುತಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿ ನಾನೂ ಒಬ್ಬ ಅಲೆಮಾರಿಯಂತೆ ಅಲೆದಾಡುತ್ತಾ ಕೊಪ್ಪಳ ಜಿಲ್ಲೆಗೆ ಕಾಲಿಟ್ಟಾಗ ನನ್ನ ಬರುವಿಕೆಗೆಂದೇ ಕಾಯುತ್ತಿದ್ದವನಂತೆ ರಾಜಾಸಾಬ್ ಎಂಬ ಕರಡಿ ಆಡಿಸುವಾತ ಬಂದು ತನ್ನ ಊರಿಗೆ ಬಂದು ಕರಡಿಗಳೊಂದಿಗಿನ ತಮ್ಮ ಬದುಕನ್ನು ನೋಡಬೇಕೆಂದು ಪಟ್ಟು ಹಿಡಿದ. ಕರಡಿ ಖಲಂದರ್‌ಗಳು ಎಸ್.ಸಿ. ಪಟ್ಟಿಗೆ ಸೇರುತ್ತಾರೋ ಅಥವಾ ಈ ಸಮುದಾಯ ಮುಸ್ಲಿಮ್ ಧರ್ಮಕ್ಕೆ ಸೇರಿರುವುದರಿಂದ ಪ್ರವರ್ಗ 2(ಬಿ)ಗೆ ಬರುತ್ತಾರೋ ಎಂಬ ಗೊಂದಲವಿತ್ತು. ಜಾತಿ ಪಟ್ಟಿ ನೋಡಿದಾಗ ಕರಡಿ ಖಲಂದರ್‌ಗಳು ಹಿಂದುಳಿದ ವರ್ಗಗಳ ಪ್ರವರ್ಗ ಒಂದಕ್ಕೆ ಬರುತ್ತಾರೆ ಎಂಬುದು ತಿಳಿದ ಮೇಲೆ, ಅದು ನನ್ನ ವ್ಯಾಪ್ತಿಗೇ ಬರುತ್ತದೆಂದು ಮನವರಿಕೆ ಆದಮೇಲೆ ರಾಜಾಸಾಬ್ ಅವರ ಊರಿಗೆ ಹೋಗಲು ಸಿದ್ಧನಾದೆ.

ಕೊಪ್ಪಳ ಜಿಲ್ಲೆಯ ಮಂಗಳಾಪುರ ಒಂದು ಸಣ್ಣ ಹಳ್ಳಿ, ಅತ್ಯಂತ ಬಡತನದಿಂದ ಆವರಿಸಿದ್ದ ಈ ಗ್ರಾಮವನ್ನು ಸುತ್ತಾಡಿದಾಗ ನನಗೆ ಆದ ಅನುಭವ ವರ್ಣನಾತೀತ! ಇಡೀ ಬೀದಿ, ಮನೆ, ಜಗುಲಿಗಳಲ್ಲಿ ಕರಡಿಗಳು ಮನುಷ್ಯರೊಂದಿಗೆ ಅತ್ಯಂತ ಸಹಜವಾಗಿ ಒಡನಾಡುತ್ತಾ ಬದುಕು ಕಟ್ಟಿಕೊಂಡಿದ್ದವು. ನಡುಮನೆಯಲ್ಲಿ ಮಲಗಿದ್ದ ಕರಡಿಯ ಮೇಲೆ ಕಾಲು ಹಾಕಿಕೊಂಡು ನಿದ್ದೆಗೆ ಜಾರಿದ್ದ ಮಗು ಹೆತ್ತ ತಾಯಿ ಮೇಲೆ ಕಾಲು ಹಾಕಿಕೊಂಡು ಮಲಗಿದಂತೆಯೇ ನಿದ್ರಿಸುತ್ತಿತ್ತು. ಬೀದಿಯಲ್ಲಿ ಮಕ್ಕಳೊಂದಿಗೆ ಆಟ ಆಡುವ ಕರಡಿಗಳು. ಮನೆ ಮುಂದೆ ಕುಳಿತು ಮೊಸರಲ್ಲಿ ಮುದ್ದೆ ಕಲಸಿ ಕರಡಿಗೆ ತಿನ್ನಿಸುತ್ತಿದ್ದ ಖಲಂದರ್ ಕುಟುಂಬಗಳು. ಇಲ್ಲಿ ಕರಡಿಗಳು ಮನೆಯಲ್ಲಿ ಸಾಕಿದ ನಾಯಿಗಳಂತೆ ಕಾಣುತ್ತಿದ್ದವು. ಒಂದು ಕರಡಿಯನ್ನು ಕರೆತಂದು ನನಗೆ ಸಲಾಂ ಮಾಡಿಸಿದರು, ಆ ಕರಡಿಯ ಕೈಯಲ್ಲಿ ಏನೆಲ್ಲಾ ಆಟ ಆಡಿಸಿ ತೋರಿಸಿದರು. ಕರಡಿಗಳೊಂದಿಗೆ ಭಿಕ್ಷೆಗೆ ಹೋದಾಗ ಸಹಜವಾಗಿ ಆಡಿಸುವ ಆಟಗಳು ಅವು.

ಕರ್ನಾಟಕದ ಬಳ್ಳಾರಿ, ಕೊಪ್ಪಳ, ಕೋಲಾರ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಖಲಂದರ್ ಸಮುದಾಯದವರು ನೆಲೆಸಿದ್ದಾರೆ. ಹೊಸಪೇಟೆ ತಾಲೂಕಿನ ಹಂಪನಕಟ್ಟೆ, ಹಡಗಲಿ ತಾಲೂಕಿನ ಕರಡಿ ಐನಹಳ್ಳಿ, ಗಂಗಾವತಿ ತಾಲೂಕಿನ ಹುಲಿಹೈದರ, ಹಿರೇಖೇಡ, ರಾಯಚೂರಿನ ಕಾಟಗಲ್, ಧಾರವಾಡದ ಕಲಘಟಗಿ, ಶಿವನಾಪುರ, ಬೆಳಗಾವಿಯ ಖಾನಾಪುರ, ಚಿಕ್ಕಹಂಗರಹಳ್ಳಿ, ರಾಮದುರ್ಗದ ಯಗುದ್ದಿ, ಕೋಲಾರ ಜಿಲ್ಲೆಯ ಅರಲುಕುಂಟೆ ಪ್ರದೇಶಗಳಲ್ಲಿ ಕರಡಿ ಖಲಂದರ್‌ಗಳ ಸಮುದಾಯ ಕಾಣುತ್ತದೆ.

ನಾವು ಚಿಕ್ಕಂದಿನಲ್ಲಿ ಕರಡಿ ಆಡಿಸುವವರನ್ನು ನೋಡಿರುತ್ತೇವೆ. ಯಾರಾದರೂ ಸಿರಿವಂತರ ಅಂಗಳದಲ್ಲಿ, ಸಂತೆ ಮೈದಾನದಲ್ಲಿ, ಜಾತ್ರೆಗಳಲ್ಲಿ ಕರಡಿ ಆಡಿಸುತಿದ್ದರು. ಮಕ್ಕಳು ಹಾಸಿಗೆಯಲ್ಲಿ ಉಚ್ಚೆ ಮಾಡಿಕೊಳ್ಳುವುದನ್ನು ತಪ್ಪಿಸಲು ಈ ಕರಡಿಗಳ ಕೂದಲಲ್ಲಿ ತಾಯತ ಮಾಡಿ ಮಗುವಿನ ನಡುವಿಗೋ, ಕತ್ತಿಗೋ ಕಟ್ಟುತಿದ್ದರು. ಊರುಬೀದಿ ಸುತ್ತಾಡಿ ಕರಡಿ ಆಡಿಸುತ್ತಾ ಸುಸ್ತಾಗುತಿದ್ದ ಖಲಂದರ್‌ಗಳು ಪಾಳು ಮಂಟಪದಲ್ಲೋ, ಹಾಳುಬಿದ್ದ ಛತ್ರಗಳಲ್ಲೋ, ಶಾಲೆಗಳ ಪಡಸಾಲೆಗಳಲ್ಲೋ ಮಲಗುತಿದ್ದರು. ಬಹುಶಃ ಈಗಿನ ತಲೆಮಾರಿಗೆ ಈ ದೃಶ್ಯಗಳು ಕಾಣಸಿಗಲಾರವು.

ವರಕವಿ ದ.ರಾ. ಬೇಂದ್ರೆಯವರ ‘ಕರಡಿ ಕುಣಿತ’ ಕವನ ಬಹಳ ಜನಪ್ರಿಯವಾಗಿತ್ತು..

‘‘ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು

ಕಂಬಳಿ ಹೊದ್ದಾವಾ ಬಂದಾನ.

ಗುಣುಗುಣು ಗುಟ್ಟುತ, ಕಡಗವ ಕುಟ್ಟುತ

ಕರಡಿಯನಾಡಿಸುತ ನಿಂದಾನ..’’

ಎಂಬ ಕವನವನ್ನು ಐದನೇ ತರಗತಿಗೆ ಪಠ್ಯವಾಗಿ ಇಟ್ಟಿದ್ದ ನೆನಪು ಇಂದಿಗೂ ಹಸಿರಾಗಿದೆ.

ಹಾವು ಮತ್ತು ಕೋತಿ ಆಡಿಸುವವರನ್ನು ಸಹಜವಾಗಿ ‘ಮದಾರಿ’ ಎಂದು ಕರೆಯುತ್ತಾರೆ. ಆದರೆ ಕರಡಿ ಆಡಿಸುವವರನ್ನು ಕರಡಿ ಖಲಂದರ್ ಎಂದೇ ಕರೆಯುತ್ತಾರೆ. ಇದು ಭಾರತದ ಪ್ರಾಚೀನ ಸಮುದಾಯಗಳಲ್ಲೊಂದು. ಇಡೀ ಭಾರತದ ಬೇರೆ ಬೇರೆ ರಾಜ್ಯಗಳಲ್ಲೂ ಕರಡಿ ಖಲಂದರ್‌ಗಳು ವಾಸಿಸುತ್ತಿದ್ದಾರೆ. ನೂರಾರು ವರ್ಷಗಳ ಹಿಂದೆ ಕರಡಿಗಳನ್ನು ಕಾಡಿನಿಂದ ನಾಡಿಗೆ ಕರೆತಂದು ಅವುಗಳನ್ನು ಪಳಗಿಸಿ ಕರಡಿ ಆಟ ಆಡಿಸುತ್ತಾ ಅವುಗಳ ಸಂತಾನವನ್ನು ಬೆಳೆಸಿದ್ದಾರೆ. ಇವರ ಬಳಿ ಇವರೊಂದಿಗೇ ಬದುಕಿರುವ ಕರಡಿಗಳಿಗೆ ಕಾಡಿನ ಪರಿಚಯವೇ ಇಲ್ಲ. ಈ ವಾಸ್ತವವನ್ನು ಅರಿಯದ ಪ್ರಾಣಿ ದಯಾ ಸಂಘದವರು ಕರಡಿ ಆಡಿಸುವವರ ವಿರುದ್ಧ ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡುತ್ತಾರೆ. ಅರಣ್ಯ ಇಲಾಖೆಯವರು ಹಿಂದೂ ಮುಂದೂ ಯೋಚಿಸದೆ ಈ ಕರಡಿಗಳನ್ನು ಖಲಂದರ್‌ಗಳಿಂದ ಕಸಿದುಕೊಂಡು ಕಾಡಿಗೆ ಬಿಡುತ್ತಾರೆ. ಕರಡಿಗಳನ್ನು ಖಲಂದರ್‌ಗಳಿಂದ ಕಿತ್ತು ಒಯ್ಯುವಾಗಿನ ದೃಶ್ಯಗಳನ್ನು ನೋಡಬೇಕು. ಮಕ್ಕಳನ್ನು ಕಳಕೊಂಡ ಅಪ್ಪ ಅಮ್ಮಂದಿರಂತೆ ಖಲಂದರ್‌ಗಳು ಗೋಳಾಡಿದರೆ, ಅಪ್ಪ ಅಮ್ಮನನ್ನು ಕಳಕೊಂಡ ಮಕ್ಕಳಂತೆ ಈ ಕರಡಿಗಳು ಗೊಳೋ ಎಂದು ಆಕ್ರಂದಿಸುತ್ತಾ ಕಣ್ಣೀರು ಸುರಿಸುತ್ತವೆ. ಅರಣ್ಯ ಇಲಾಖೆಯವರು ಕಾಡಿಗೆ ಬಿಟ್ಟ ಕರಡಿಗಳಿಗೆ ಕಾಡಿನ ಪರಿಚಯವೇ ಇರಲ್ಲ, ಇವು ತಲೆತಲಾಂತರಗಳಿಂದ ಊರುಕೇರಿಗಳಲ್ಲಿ ಜನಸಂದಣಿಯೊಂದಿಗೆ ಒಡನಾಡುತ್ತಾ ಖಲಂದರ್‌ಗಳ ಮನೆಗಳಲ್ಲೇ ಹುಟ್ಟಿ ಅಲ್ಲೇ ಬದುಕುತ್ತಿದ್ದವು. ಇವು ಕಾಡಲ್ಲಿ ಆಹಾರ ಪಡೆಯುವ ಮಾರ್ಗ ತೋಚದೆ ಹಸಿವಿನಿಂದ ದಾರುಣವಾಗಿ ಸತ್ತರೆ, ಕರಡಿಗಳನ್ನು ಕಳಕೊಂಡು ಬದುಕು ಕಟ್ಟಿಕೊಳ್ಳಲಾರದ ಖಲಂದರ್‌ಗಳ ಕುಟುಂಬಗಳೂ ಹಸಿವಿನಿಂದ ಕಂಗಾಲಾಗುತ್ತವೆ. ಇತ್ತ ಕುಲಕಸುಬನ್ನು ಕಳಕೊಂಡ ಖಲಂದರ್ ಗಳು ಏನೂ ಮಾಡಲು ದಿಕ್ಕುತೋಚದೆ ತಾವೂ ಹಸಿವಿನಿಂದ ಸಾಯುತ್ತಾರೆ. ಶೋಕಿಗಾಗಿ ಪ್ರಾಣಿದಯಾ ಸಂಘಗಳನ್ನು ಕಟ್ಟಿಕೊಂಡ ವ್ಯಾಪಾರಿಗಳಿಗಾಗಲಿ, ಅರಣ್ಯ ಇಲಾಖೆಯ ಅಧಿಕಾರಿಶಾಹಿಗಾಗಲಿ ಕರಡಿ ಮತ್ತು ಖಲಂದರ್ ಗಳ ನಡುವಿನ ಜೀವ ಸರಪಳಿಯ ಸೂಕ್ಷ್ಮಗಳು ಅರ್ಥವಾಗಲ್ಲ.

ಹಿಂದೆ ಖಲಂದರ್‌ಗಳಿಗೆ ಕರಡಿ ಸಾಕಲು ಮತ್ತು ಕರಡಿಯಾಟ ಆಡಿಸಲು ಸರಕಾರದ ನಿರ್ಬಂಧ ಇರಲಿಲ್ಲ. ಆದರೆ 1972ರಲ್ಲಿ ವನ್ಯಪ್ರಾಣಿ ರಕ್ಷಣಾ ಕಾಯ್ದೆ ಬಂದ ನಂತರ ಖಲಂದರ್‌ಗಳಿಗೆ ಸಂಕಷ್ಟಗಳು ಎದುರಾಗತೊಡಗಿದವು. ಕರಡಿ ಹೊಂದಿರುವ ಕಾರಣ ಮುಗ್ಧ ಖಲಂದರ್‌ಗಳನ್ನು ಜೈಲಿಗೂ ಹಾಕಲಾಯಿತು, ಅವರ ಮೇಲೆ ಕೇಸುಗಳನ್ನು ಹಾಕಿ ಹಿಂಸಿಸಲಾಯಿತು. ಕರಡಿ ಮತ್ತು ಖಲಂದರ್‌ಗಳ ಕರುಳ ಸಂಬಂಧವನ್ನು ಬೇರ್ಪಡಿಸುವುದು ಸರಕಾರಕ್ಕೆ ದೊಡ್ಡ ಸವಾಲಾಯಿತು. ಕರಡಿಗಳನ್ನು ಪ್ರಾಣಿದಯಾ ಸಂಘ ಮತ್ತು ಅರಣ್ಯ ಇಲಾಖೆಯಿಂದ ಕಾಪಾಡಿಕೊಳ್ಳಲು ಖಲಂದರ್‌ಗಳು ಕರಡಿಗಳನ್ನು ತಮ್ಮ ಕುಟುಂಬಗಳೊಂದಿಗೆ ಹೊರಡಿಸಿಕೊಂಡು ರಾಜಾಸ್ಥಾನ, ಗುಜರಾತ್, ಉತ್ತರಪ್ರದೇಶ ಮುಂತಾದೆಡೆಗೆ ವಲಸೆ ಹೋಗತೊಡಗಿದರು. ಕರಡಿಗಳನ್ನು ಯಾವುದೇ ವಾಹನಗಳಲ್ಲಿ ಹತ್ತಿಸಿಕೊಳ್ಳುವುದಿಲ್ಲ ಈ ಕಾರಣಕ್ಕೆ ಕರಡಿ, ಮಕ್ಕಳು, ಮಹಿಳೆಯರು, ಮದುಕರೊಂದಿಗೆ ಸಾವಿರಾರು ಮೈಲಿ ಮಳೆ, ಬಿಸಿಲು, ಚಳಿ, ಚಂಡಮಾರುತಗಳನ್ನು ಲೆಕ್ಕಿಸದೆ ನಡೆದೇ ಹೋಗತೊಡಗಿದರು. ಇಷ್ಟಾದರೂ ತಮ್ಮ ಹೆತ್ತ ಮಕ್ಕಳಂತಿದ್ದ ಕರಡಿಗಳನ್ನು ಉಳಿಸಿಕೊಳ್ಳಲು ಈ ನತದೃಷ್ಟ ಖಲಂದರ್‌ಗಳಿಗೆ ಸಾಧ್ಯವಾಗಲಿಲ್ಲ. ಇವರಿಂದ ಕಸಿದು ಬನ್ನೇರುಘಟ್ಟ ಅರಣ್ಯಕ್ಕೆ ಬಿಟ್ಟ 280 ಕರಡಿಗಳಲ್ಲಿ ಒಂದೂ ಉಳಿಯಲಿಲ್ಲ. ಅವು ಕಾಯಿಲೆ ಬಿದ್ದು ನರಳುವಾಗ ಅವನ್ನು ನೋಡಲು, ಕನಿಷ್ಠ ಸಾಂಪ್ರದಾಯಿಕ ಚಿಕಿತ್ಸೆ ನೀಡಲು ಹೋಗಿದ್ದ ನಮ್ಮ ರಾಜಾಸಾಬ್ ಮತ್ತಿತರ ಖಲಂದರ್‌ಗಳನ್ನು ಬನ್ನೇರುಘಟ್ಟ ಅರಣ್ಯದೊಳಕ್ಕೇ ಬಿಡಲಿಲ್ಲ.

ಕರಡಿಗಳನ್ನು ಕಳಕೊಂಡ ಖಲಂದರ್‌ಗಳಿಗೆ ಮಾನಸಿಕ ಖಿನ್ನತೆ ಬಹಳ ದಿನ ಕಾಡಿತು. ಕಡೆಗೆ ಬದುಕು ಕಟ್ಟಿಕೊಳ್ಳಲು ಈಚಲು ಚಾಪೆ ಹೆಣೆಯುವುದು. ಫ್ಯಾಕ್ಟರಿಗಳಲ್ಲಿ ತಯಾರಾದ ಪ್ಲಾಸ್ಟಿಕ್ ಚಾಪೆಗಳನ್ನು ಮಾರುವುದು, ಭೂಮಾಲಕರ ಹೊಲ ಗದ್ದೆಗಳಲ್ಲಿ ಕೃಷಿಕಾರ್ಮಿಕರಾಗಿ ದುಡಿಯುವುದೇ ಮುಂತಾದ ಕೆಲಸ ಮಾಡತೊಡಗಿದರು. ನನಗೆ ತಿಳಿದಂತೆ ಖಲಂದರ್‌ಗಳಲ್ಲಿ ಒಬ್ಬರೂ ಪದವೀಧರರಿಲ್ಲ. ಈಗಲೂ ಬಹಳಷ್ಟು ಜನ ಅನಕ್ಷರಸ್ಥರು, ಒಬ್ಬರಿಗೂ ಸರಕಾರದ ನಾಲ್ಕನೇ ದರ್ಜೆ ಕೆಲಸವೂ ಸಿಕ್ಕಿಲ್ಲ. ಬಡತನದಿಂದಾಗಿ ಅನೇಕರು ಪೌಷ್ಟಿಕಾಂಶದ ಕೊರತೆಯಿಂದ ನರಳುತಿದ್ದಾರೆ.

ನಮ್ಮ ಆಯೋಗದಿಂದ ಮಂಗಳಾಪುರ ಮತ್ತು ಹುಲಿಹೈದರಕ್ಕೆ ಹೋಗಿದ್ದಾಗ ಅವರ ಪರಿಸ್ಥಿತಿ ನೋಡಿ ಜಿಲ್ಲಾಧಿಕಾರಿಗಳಿಗೆ ತಲಾ ಎರಡು ಎಕರೆ ಭೂಮಿ ನೀಡುವಂತೆ ಆದೇಶ ಮಾಡಿ ನಂತರ ನನ್ನ ಕೈಲಾದ ಪ್ರಯತ್ನವನ್ನೆಲ್ಲ ಮಾಡಿದ್ದೆ. ಈ ಸತತ ಪ್ರಯತ್ನದಿಂದ 45 ಎಕರೆ ಭೂಮಿಯೇನೋ ಇಪ್ಪತ್ತೈದು ಕುಟುಂಬಕ್ಕೆ ಮಂಜೂರಾಯಿತು (ಮಂಗಲಾಪುರಕ್ಕೆ 10 ಎಕರೆ ಹುಲಿಹೈದರಕ್ಕೆ 35 ಎಕರೆ) ಆದರೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಹಣ ಇಲ್ಲವೆಂದು ಇದು ಇಂದಿಗೂ ನನೆಗುದಿಗೆ ಬಿದ್ದಿದೆ. ಅಂತೆಯೇ ನಿವೇಶನ ನೀಡಲೂ ಪ್ರಯತ್ನಿಸಿದ್ದೆವು. ಅದರಲ್ಲಿ 200 ಕುಟುಂಬಗಳಿಗೆ ಚಿಕ್ಕೇಡ ಮತ್ತು ಹುಲಿಹೈದರ ದಲ್ಲಿ ನಿವೇಶನ ನೀಡಲು ಮಂಜೂರು ಆಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇವೂ ಜನಕ್ಕೆ ಈವರೆಗೂ ತಲುಪಿಲ್ಲ.

ಇಂತಹ ಸಣ್ಣ ಸಮುದಾಯಗಳ ಏಳಿಗೆಗಾಗಿಯೇ ಜನ್ಮವೆತ್ತಿ ಬರುವ ಬಾಬಾಸಾಹೇಬ ಅಂಬೇಡ್ಕರ್, ದೇವರಾಜ ಅರಸು ಅಂತಹವರಿ ಗಾಗಿ ಈ ದಿಕ್ಕೆಟ್ಟ ಜನ ಕಾಯುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಎಸ್. ದ್ವಾರಕಾನಾಥ್

contributor

Similar News