×
Ad

ಇವರಾರೂ ಕ್ಷಮೆ ಯಾಚಿಸಲಿಲ್ಲ!: ಭಗವತಿ ಚರಣ್ ವೊಹ್ರಾ-ಕ್ರಾಂತಿಯ ಸೈದ್ಧಾಂತಿಕ ಚಿಲುಮೆ

ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!

Update: 2025-12-04 10:34 IST

ಭಾಗ - 3

‘‘ಶ್ರದ್ಧಾವಂತ ಯುವಕರು ಬಡವರಿಗೆ ಧಾನ್ಯ ಹಂಚುವುದು, ರೋಗಿಗಳ ಶುಶ್ರೂಷೆ ಮಾಡುವುದನ್ನು ನೋಡುತ್ತಿದ್ದೇವೆ. ಅವರ ಕೆಲಸ ನಿಸ್ವಾರ್ಥತೆಯದ್ದು; ಉದಾತ್ತವಾದದ್ದು. ಆದರೆ ಈ ಔದಾರ್ಯ ನಮ್ಮ ದೇಶದ ಬಡತನ, ಅನಾರೋಗ್ಯವನ್ನು ಹೋಗಲಾಡಿಸದು; ಅಷ್ಟೇಕೆ ಯಾವ ದೇಶದ್ದೂ!’’ -ಭಗವತಿ ಚರಣ್‌ವೊಹ್ರಾ ಬರೆದ ಸಾಲುಗಳಿವು.

ಭಗವತಿ ಚರಣ್‌ವೊಹ್ರಾ ಹಿಂದುಸ್ತಾನ್ ರಿಪಬ್ಲಿಕನ್ ಆರ್ಮಿ (HSRA)ಯ ಸ್ಥಾಪಕ, ಸಿದ್ಧಾಂತಿ, ಸಂಘಟಕ. ಈತ ಬೆಳೆಸಿದ ಭಗತ್‌ಸಿಂಗ್, ರಾಜಗುರು, ಚಂದ್ರಶೇಖರ ಆಝಾದ್ ನಮಗೆ ಗೊತ್ತು. ಇವರನ್ನು ಹೊಗಳುವಾಗ ಅವರ ಸಿದ್ಧಾಂತವನ್ನು ಮರೆಮಾಚಿ ಹೊಗಳುವ ಪ್ರವೃತ್ತಿ ಇದೆ.

ಸಿರಿವಂತಿಕೆಯಿಂದ ಬಡತನದತ್ತ ಪಯಣ: ಭಗವತಿ ಚರಣ್‌ಲಾಹೋರ್‌ನ ಬಲು ಸಿರಿವಂತ, ಬ್ರಿಟಿಷರಿಗೆ ವಿಧೇಯವಾಗಿದ್ದ ಕುಟುಂಬದಲ್ಲಿ 1903ರ ನವಂಬರ್ 15ರಂದು ಜನಿಸಿದರು. 15ನೇ ವರ್ಷಕ್ಕೆ ದುರ್ಗಾದೇವಿಯೊಂದಿಗೆ ಇವರ ವಿವಾಹವಾಯಿತು. (ದುರ್ಗಾ ದೇವಿ ಇನ್ನೊಬ್ಬ ಮಹಾನ್ ಕ್ರಾಂತಿಕಾರಿ ಮಹಿಳೆ) ಜಲಿಯನ್‌ವಾಲಾ ಬಾಗ್‌ನ ಘೋರ ಘಟನೆಯಿಂದ ವಿಚಲಿತರಾದ 16ರ ಹರೆಯದ ಭಗವತಿ ಚರಣ್, ಲಾಹೋರಿನ ಭೂಗತ ಕ್ರಾಂತಿಕಾರಿಗಳ ಗೆಳತನ ಮಾಡಿದರು.(ಭಗತ್‌ಸಿಂಗ್, ಸುಖದೇವ್, ಯಶ್‌ಪಾಲ್..)ಅಸಹಕಾರ ಚಳವಳಿ ಸ್ಥಗಿತಗೊಂಡಿದ್ದರಿಂದ ಅಸಮಾಧಾನಗೊಂಡಿದ್ದ ಈ ಯವಕರು ರಶ್ಯದ ಕ್ರಾಂತಿಯನ್ನು ಗಮನಿಸಿದರು. ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಈ ಯುವಕರು ಮನ ಸೋತರು. ಬಡ ರೈತರು ಮತ್ತು ಕಾರ್ಮಿಕರನ್ನು ಸಂಘಟಿಸಲು ಭಗವತಿ ಚರಣ್ ಮತ್ತು ಭಗತ್‌ಸಿಂಗ್ ನೌಜವಾನ್ ಭಾರತ್ ಸಭಾವನ್ನು 1926ರಲ್ಲಿ ಸ್ಥಾಪಿಸಿದರು.

ಕಾಂಗ್ರೆಸ್ ಚಳವಳಿಯಿಂದ ಹಿಂದೆ ಸರಿದ ಕಾರಣಕ್ಕೆ ಉಂಟಾದ ನಿರ್ವಾತ ತುಂಬಲು ಈ ಯುವಕರು ಸಮಾಜವಾದಿ ಕ್ರಾಂತಿಯ ಯೋಜನೆ ಹಾಕಿಕೊಂಡರು. ತನ್ನ ಸದಸ್ಯರು ಯಾವುದೇ ಕೋಮುವಾದಿ ಸಂಘಟನೆಯ ಸದಸ್ಯರಾಗಿರಕೂಡದು ಎಂಬ ನಿಯಮ ಕೂಡಾ ಜಾರಿ ಮಾಡಿದರು. ಈ ತಾತ್ವಿಕ ಬದ್ಧತೆ ಎಷ್ಟಿತ್ತೆಂದರೆ ಹಿಂದೂ ಕೋಮು ರಾಜಕಿಯದ ಬಗ್ಗೆ ಅನುಕಂಪ ಹೊಂದಿದ್ದಾರೆ ಎಂಬ ಕಾರಣಕ್ಕೆ ಲಾಲಾ ಲಜಪತ್‌ರಾಯ್‌ವಿರುದ್ಧ ಪ್ರಚಾರವನ್ನೂ ಕೈಗೊಂಡಿದ್ದರು.

ಕಾರ್ಯಾಚರಣೆಯ ಮೂಲಕವೇ ಪ್ರಚಾರ ಎಂಬ ನಿಲುವಿನ ಮೇರೆಗೆ ಬ್ರಿಟಿಷ್ ಪೊಲೀಸ್ ಅಧಿಕಾರಿ ಸಾಂಡರ್ಸ್ ಹತ್ಯೆಯ ಬಳಿಕ ಭಗವತಿ ಚರಣ್ ಭೂಗತರಾದರೆ, ಭಗತ್‌ಸಿಂಗ್ ಮತ್ತು ಬಟುಕೇಶ್ವರ ದತ್‌ಪಾರ್ಲಿಮೆಂಟಿಗೆ ಹುಸಿ ಬಾಂಬ್ ಎಸೆದು ಬಂಧನಕ್ಕೊಳಗಾದರು.

ಭಗತ್‌ಸಿಂಗ್ ಮತ್ತು ದತ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸುವ ಲೆಕ್ಕಾಚಾರದೊಂದಿಗೇ ಚಂದ್ರಶೇಖರ ಆಝಾದ್ ಮತ್ತು ಭಗವತಿ ಚರಣ್, ವೈಸರಾಯ್ ಪ್ರಯಾಣಿಸುತ್ತಿದ್ದ ರೈಲನ್ನು ಸ್ಫೋಟಿಸುವ ಕಾರ್ಯಾಚರಣೆ ನಡೆಸಿದರು. ಅಲ್ಪದರಲ್ಲಿ ಇರ್ವಿನ್ ಪಾರಾದರು.

ಗಾಂಧೀಜಿ ಈ ಕೃತ್ಯವನ್ನು ಖಂಡಿಸಿ ‘ಬಾಂಬಿನ ಮತ’ ಎಂಬ ಲೇಖನ ಬರೆದರು. ಇದಕ್ಕೆ ಉತ್ತರವಾಗಿ ಭಗವತಿ ಚರಣ್ ‘ಬಾಂಬಿನ ತತ್ವ’ ಎಂಬ ಪ್ರತ್ಯುತ್ತರ ನೀಡಿದರು.

ಭಗತ್‌ಸಿಂಗ್‌ರನ್ನು ಜೈಲಿನಿಂದ ಬಿಡಿಸುವ ಯೋಜನೆಯ ಅಂಗವಾಗಿ ಭಗವತಿ ಚರಣ್ ತನ್ನ ಸಂಗಾತಿಗಳೊಂದಿಗೆ ರಾವಿ ನದಿ ದಂಡೆಯಲ್ಲಿ ಬಾಂಬ್ ಒಂದನ್ನು ಪರೀಕ್ಷಾರ್ಥ ಸ್ಫೋಟಿಸುವಾಗ ಅದು ಭಗವತಿ ಚರಣ್ ಕೈಯಲ್ಲೇ ಸ್ಫೋಟವಾಗಿ ಭಗವತಿ ಗಂಟೆಗಟ್ಟಲೆ ನರಳಿ ತೀರಿಕೊಂಡರು. ಆಗ ಭಗವತಿ ವಯಸ್ಸು 27. ಆತನ ಮಡದಿ ದುರ್ಗಾ ತನ್ನ ಐದು ವರ್ಷದ ಮಗನ ಸಹಿತ ಸಂಘಟನೆಯ ಜವಾಬ್ದಾರಿ ಹೊತ್ತರು. ಭಗವತಿ ಚರಣ್‌ಸಾವಿನೊಂದಿಗೆ ಚಂದ್ರಶೇಖರ್ ಆಝಾದ್ ಅವರ ಅರ್ಧ ಶಕ್ತಿಯೇ ಉಡುಗಿದಂತಾಯಿತು. ಶೀಘ್ರ ಆಝಾದ್ ಅಲಹಾಬಾದ್‌ನ ಪೊಲೀಸ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದರೆ, ಭಗತ್‌ಸಿಂಗ್, ಸುಖ್‌ದೇವ್, ರಾಜಗುರು 1931 ಮಾರ್ಚ್ 23ರಂದು ಗಲ್ಲಿಗೇರಿಸಲ್ಪಟ್ಟರು.

ಇಲ್ಲಿಗೆ ಭಾರತದ ಕ್ರಾಂತಿಕಾರಿ ಹೋರಾಟದ ಬಹು ದೊಡ್ಡ ಅಧ್ಯಾಯ ಅಂತ್ಯವಾಯಿತು; ನಿಜ. ಆದರೆ ಅವರು ಕನಸು ಕಂಡ ಸಿದ್ಧಾಂತದ ಪ್ರಣಾಳಿಕೆ?.

ಭಗವತಿ ಚರಣ್, ಆಝಾದ್, ಭಗತ್‌ಸಿಂಗ್ ಮುಖ್ಯವಾಗುವುದು ಈ ಕ್ರಾಂತಿಕಾರಿ ಹೆಜ್ಜೆಯಿಂದಷ್ಟೇ ಅಲ್ಲ, ತಮಗಿದ್ದ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆಯ ಕಾರಣಕ್ಕೆ. ಭಗವತಿ ಚರಣ್ HSRA ಮತ್ತು ನೌಜವಾನ್‌ಭಾರತ್ ಸಭಾದ ಪ್ರಣಾಳಿಕೆಯನ್ನು ಬರೆದರು. ತಾತ್ವಿಕ ಸಮರ್ಥನೆಯ ಉತ್ತರವನ್ನು ಸುದೀರ್ಘವಾಗಿ ಗಾಂಧಿಗೆ ನೀಡಿದರು. ಆ ಕಾಲ ಸಂದರ್ಭದ ಅರಾಜಕತೆಯೇ ಕ್ರಾಂತಿಗೆ ಯುವಕರನ್ನು ಸೆಳೆವ ಅವಕಾಶ ಎಂದು ಭಗವತಿ ಚರಣ್ ಬಗೆದರು. ಇದರ ಭಾಗವಾಗಿಯೇ ಮಾರ್ಕ್ಸಿಸ್ಟ್ ದೃಷ್ಟಿಕೋನದ ವಸಾಹತುಶಾಹಿ ಚರ್ಯೆ ಬಗ್ಗೆ ವಿಶ್ಲೇಷಣೆ ನಡೆಸಿದರು.

ಭಗವತಿ ಚರಣ್ ವೊಹ್ರಾ ಅವರು ಬರೆದ ಪ್ರಣಾಳಿಕೆಯ ಮುಖ್ಯ ಭಾಗಗಳನ್ನು ಇಲ್ಲಿ ನೀಡಿದ್ದೇನೆ.

‘‘ವಿದೇಶಿ ಯಜಮಾನಿಕೆ ಮತ್ತು ಆರ್ಥಿಕ ಶೋಷಣೆಯು ಭಾರತದ ಬಹುಸಂಖ್ಯಾತ ಕಾರ್ಮಿಕರು ಮತ್ತು ಬಡರೈತರನ್ನು ನಿತ್ರಾಣಗೊಳಿಸಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಯು ಭಾರತದ ಕೈಗಾರಿಕೆಗಳನ್ನು ಮಂಕಾಗಿಸಿದೆ. ಜೊತೆಗೆ ನಮ್ಮ ಕಾರ್ಮಿಕ ವರ್ಗ ವಿದೇಶಿ ಮತ್ತು ಭಾರತೀಯ ಬಂಡವಾಳಶಾಹಿಗಳ ಹೊಡೆತವನ್ನು ಅನುಭವಿಸಬೇಕಾಗಿದೆ. ದೇಶೀಯ ಬಂಡವಾಳಶಾಹಿ ನಮ್ಮ ಜನಸ್ತೋಮಕ್ಕೆ ದ್ರೋಹ ಬಗೆದು ವಿದೇಶಿ ಬಂಡವಾಳಶಾಹಿ ಜೊತೆ ಕೈಜೋಡಿಸುತ್ತಿದೆ. ಭಾರತೀಯ ಬಂಡವಾಳಶಾಹಿ ವಿದೇಶಿ ಬಂಡವಾಳಶಾಹಿಯ ಕಿರಿಯ ಪಾಲುದಾರ ಅಷ್ಟೆ.

ಇದಕ್ಕೇನು ಪರಿಹಾರ? ಕ್ರಾಂತಿಯನ್ನು ಪ್ರಕೃತಿಯೂ ಇಷ್ಟಪಡುತ್ತದೆ. ಅದಿಲ್ಲದೆ ಮಾನುಷ ಜಗತ್ತಿನ ಪ್ರಗತಿ ಸಾಧ್ಯವಿಲ್ಲ. ಕ್ರಾಂತಿಯೆಂದರೆ ವಿವೇಚನಾರಹಿತ ಕೊಲೆಗಳಲ್ಲ. ಅಲ್ಲೊಂದಿಷ್ಟು ಬಾಂಬು, ಇಲ್ಲೊಂದಿಷ್ಟು ಬಂದೂಕಿನ ಗುಂಡು ಹಾರಿಸುವುದಲ್ಲ. ನಾಗರಿಕತೆಯ ಕುರುಹನ್ನು ಅಳಿಸುವ ಚಳವಳಿ ಅಲ್ಲ. ಕ್ರಾಂತಿಯು ದೇವ ವಿರೋಧೀ ಇರಬಹುದು. ಆದರೆ ಖಂಡಿತವಾಗಿಯೂ ಮನುಷ್ಯ ವಿರೋಧೀ ಅಲ್ಲ. ಅದು ಹಳೆಯದು ಗಿ/S ಹೊಸದು; ಬದುಕು ಮತ್ತು ಸಾವಿನ ನಡುವಿನ; ಬೆಳಕು ಮತ್ತು ಅಂಧಕಾರದ ನಡುವಿನ ಹೋರಾಟ. ಕ್ರಾಂತಿಯೇ ನಿಯಮ, ಕ್ರಾಂತಿಯೇ ವ್ಯವಸ್ಥೆ, ಕ್ರಾಂತಿಯೇ ಸತ್ಯ.

ಭವಿಷ್ಯದ ಕಾರ್ಯಕ್ರಮ ಈ ದೇಶದ ಶೇ. 90 ಮಂದಿಗೆ ಸ್ವರಾಜ್‌ತರುವುದೇ ಆಗಿದೆ. ನಮ್ಮ ನಾಯಕರು (ಕಾಂಗ್ರೆಸ್ ನಾಯಕರು) ಹಲವಾರು ಸಲಹೆಗಳನ್ನು ಮುಂದಿಟ್ಟರೂ ಸಮೂಹವನ್ನು ಜಾಗೃತಗೊಳಿಸುವ ಕೆಲಸ ಮಾಡಿಲ್ಲ. ರಶ್ಯದ ಯುವಕರಂತೆ ನಮ್ಮ ಯುವಕರೂ ಹಳ್ಳಿಗಳಲ್ಲಿದ್ದು ಅವರಿಗೆ ಭಾರತದ ಕ್ರಾಂತಿ ಅಂದರೇನು ಎಂದು ಅವರಿಗೆ ಮನನ ಮಾಡಬೇಕಿದೆ. ಇದು ಒಂದು ದಿನ, ಒಂದು ವರ್ಷದ ಕೆಲಸ ಅಲ್ಲ. ದಶಕಗಳ ನಿಸ್ವಾರ್ಥ ತ್ಯಾಗಕ್ಕೆ ತಯಾರಾಗಬೇಕು. ಕ್ರಾಂತಿಕಾರಿ ಎಂದರೆ ಬಾಂಬು ರಿವಾಲ್ವರ್‌ಗಳನ್ನು ಧರಿಸಿದವನಲ್ಲ.

ಈ ಕ್ರಾಂತಿ ಬಂಡವಾಳಶಾಹಿಯ ಮರಣ ಶಾಸನ ಮಾತ್ರವಲ್ಲ ಎಲ್ಲಾ ತಾರತಮ್ಯಗಳ ನಿವಾರಣೆ ಕೂಡಾ. ನಾವು ಶ್ರಮಿಕ ವರ್ಗದ ಆಧಿಪತ್ಯವನ್ನು ಸ್ಥಾಪಿಸಿ ಸಾಮಾಜಿಕ ಪರಪುಟ್ಟರನ್ನು ರಾಜಕೀಯ ಅಧಿಕಾರಸ್ಥಾನದಿಂದ ಹೊರದೂಡುತ್ತೇವೆ. ತಮ್ಮ ತರುವಾಯದ ತಲೆಮಾರು, ತಮ್ಮ ಉತ್ತರಾಧಿಕಾರಿಗಳು ಸಂತೋಷದ ಬಾಳುವೆ ನಡೆಸಬಹುದು ಎಂಬ ಕನಸಿನೊಂದಿಗೆ ಈ ಧೀರೊದಾತ್ತ ಯುವಕರು ಸಾವನ್ನು ಅಪ್ಪಲು ತಯಾರಿದ್ದಾರೆ.

ಭಯೋತ್ಪಾದಕ ಕೃತ್ಯಗಳಿಗೆ ನಮ್ಮನ್ನು ಹೊಣೆ ಮಾಡಲಾಗುತ್ತಿದೆ. ಆದರೆ ಈ ಕೃತ್ಯ ಕ್ರಾಂತಿಕಾರಿಗಳ ಉದ್ದೇಶವೇ ಅಲ್ಲ. ಇದೊಂದೇ ಸ್ವಾತಂತ್ರ್ಯ ತರಬಲ್ಲುದು ಎಂದು ಅವರು ನಂಬುವುದಿಲ್ಲ. ಬ್ರಿಟಿಷರು ಭಯೋತ್ಪಾದನೆ ಮೂಲಕ ನೆಲೆ ಊರಿದ್ದಾರೆ. ಅದನ್ನು ಪ್ರತಿ ಕೃತ್ಯದ ಮೂಲಕವೇ ಎದುರಿಸಬೇಕಾಗಿದೆ. ಕ್ರಾಂತಿಯ ಈ ಕೃತ್ಯಗಳು ಶೋಷಕರಲ್ಲಿ ಭಯ ಸೃಷ್ಟಿಸುತ್ತದೆ.’’

ಈ ಪ್ರಣಾಳಿಕೆಯಲ್ಲಿ ಭಗವತಿ ಚರಣ್ ಕೋಮುವಾದವನ್ನು ಖಂಡತುಂಡವಾಗಿ ವಿರೋಧಿಸುತ್ತಾರೆ.

‘‘ಒಂದು ಅಶ್ವತ್ಥ ಮರದ ರೆಂಬೆ ಮುರಿದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುತ್ತದೆ. ಒಂದು ಪುಸ್ತಕದ ಹಾಳೆ ಹರಿದರೆ ಮುಸ್ಲಿಮರು ರಕ್ತದಾಹಿಗಳಾಗುತ್ತಾರೆ. ಪ್ರಾಣಿಗಳಿಗಿಂತ ಮನುಷ್ಯ ಮುಖ್ಯವಾಗಬೇಕು. ಆದರೆ ಇಲ್ಲಿ ಪವಿತ್ರ ಪ್ರಾಣಿಯ ಹೆಸರಿನಲ್ಲಿ ತಲೆ ಒಡೆದುಕೊಳ್ಳುತ್ತಿದ್ದೇವೆ. ಈ ಕೋಮುವಾದ ವಿದೇಶಿ ಶತ್ರುವಿಗೆ ಅನುಕೂಲಕರವಾಗಿದೆ. ನಮ್ಮದೇ ದೇಶದ ಈ ಕೋಮುವಾದಿ ನಾಯಕರು ಹುಸಿ ವಿಷಯವನ್ನು ಮುಂದೆ ಮಾಡಿ ನಿಜ ವಿಷಯಕ್ಕೆ ಪರದೆ ಎಳೆಯುತ್ತಿದ್ದಾರೆ.

ಧಾರ್ಮಿಕ ಮೌಢ್ಯ ಮತ್ತು ಧಾರ್ಮಿಕ ಅತಿರೇಕದ ನಂಬಿಕೆ ನಮ್ಮ ಪ್ರಗತಿಗೇ ಮಾರಕ. ಆದ್ದರಿಂದಲೇ ಮುಕ್ತ ಚಿಂತನೆ ಮತ್ತು ವೈಚಾರಿಕತೆ ಯುವಕರಲ್ಲಿರಬೇಕು. ವರ್ಗ ಆಧಾರಿತ ರಾಜಕೀಯವೊಂದೇ ಕೋಮುವಾದಕ್ಕೆ ಅಂತ್ಯ ಹೇಳಬಲ್ಲುದು. ಶ್ರಮಿಕ ವರ್ಗವನ್ನು ಕೋಮು ಗಲಭೆಗಳ ವಿರುದ್ಧ ಸಂಘಟಿಸಬೇಕಿದೆ.’’

ಭಗತ್‌ಸಿಂಗ್ ಸಹಿತ ಈ ಎಲ್ಲಾ ಕ್ರಾಂತಿಕಾರಿಗಳು ಏರು ತಾರುಣ್ಯದಲ್ಲೇ ಹುತಾತ್ಮರಾಗಿದ್ದಾರೆ. ಆದರೆ ಆ ವಯಸ್ಸಿನೊಳಗೇ ಅವರಲ್ಲಿದ್ದ ಸೈದ್ಧಾಂತಿಕ ಸ್ಪಷ್ಟತೆ, ಓದು, ಬರವಣಿಗೆಯ ನಿಖರತೆ ನಮ್ಮನ್ನು ಕಾಡಬೇಕು. ಸಾವಿಗೆ ಹಿಂಜರಿಯದ ಕ್ರಿಯಶೀಲತೆಯೊಂದಿಗೆ ಸಮಸಮಾಜದ ಕನಸು ಕೂಡಾ.

ಅಂದ ಹಾಗೆ ಸಾವರ್ಕರ್ ಅಥವಾ ಗೋಳ್ವಾಲ್ಕರ್ ಅವರ ಬರಹಗಳಲ್ಲಿ ಇಂಥಾ ಒಂದು ಪ್ಯಾರಾ ಸಿಕ್ಕಿದರೆ ಹೇಳಿ!!

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುರೇಶ್ ಕಂಜರ್ಪಣೆ

contributor

Similar News