×
Ad

ಭಾಲ್ಕಿ ಕೋಟೆ ಮರು ನಿರ್ಮಾಣ ಕಾರ್ಯ ಪ್ರಾರಂಭ

Update: 2025-06-04 14:03 IST

ಬೀದರ್: ಭಾಲ್ಕಿ ಕೋಟೆಯ ಗೋಡೆಗಳ ಮರು ನಿರ್ಮಾಣ ಕೆಲಸ ನಡೆಯುತ್ತಿದ್ದು, ಸಾರ್ವಜನಿಕರ ಬಹು ದಿನಗಳ ಬೇಡಿಕೆ ಈಡೇರುವಂತಾಗಿದೆ.

‘ವಾರ್ತಾ ಭಾರತಿ’ಯಲ್ಲಿ ಎ.14ರಂದು ‘ಬೀಳುವ ಹಂತಕ್ಕೆ ತಲುಪಿದ ಭಾಲ್ಕಿ ಕೋಟೆ, ಆತಂಕದಲ್ಲಿ ಸಾರ್ವಜನಿಕರು’ ಎನ್ನುವ ತಲೆ ಬರಹದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ಐತಿಹಾಸಿಕ ಕೋಟೆಯ ಹೊರ ಗೋಡೆಯು ಕೆಳಗಿನ ಭಾಗ ಕುಸಿದು ಬಿದ್ದಿತ್ತು. ಅದರ ಪಕ್ಕದಲ್ಲಿಯೇ ನಗರದ ಪ್ರಮುಖ ರಸ್ತೆಯೊಂದು ಹಾದುಹೋಗುತ್ತದೆ. ಹಾಗೆಯೇ ಕೋಟೆಯ ಒಳಗಡೆ ಖಾಸಗಿ ಶಾಲೆ, ಮಂದಿರ, ಮಸೀದಿಗಳಿದ್ದು, ಇದು ಮಕ್ಕಳು, ವಿದ್ಯಾರ್ಥಿಗಳು ಸೇರಿ ನೂರಾರು ಜನರು ಓಡಾಡುವ ಸ್ಥಳವಾಗಿದೆ.

ಈ ಕೋಟೆಯ ಮರು ನಿರ್ಮಾಣದ ಕೆಲಸ ಆಗದೇ ಹೋದರೆ ಈ ಮಳೆಗಾಲದಲ್ಲಿ ಬಿದ್ದು ಅನಾಹುತಗಳು ಸಂಭವಿಸುವಂತಿತ್ತು. ಕೋಟೆಯ ಒಳಭಾಗದಲ್ಲಿ ಕೆಲವೊಂದು ಕಡೆಗೆ ಗೋಡೆ ದುರಸ್ಥಿ ಕಾರ್ಯ ನಡೆದರೂ ಕೋಟೆಯ ಹೊರ ಗೋಡೆಯು ಸಂಪೂರ್ಣವಾಗಿ ಬೀಳುವ ಹಂತಕ್ಕೆ ತಲುಪಿತ್ತು.

‘ವಾರ್ತಾ ಭಾರತಿ’ ಯ ವಿಶೇಷ ವರದಿಯ ನಂತರ ಕೋಟೆಯ ಹೊರಗೋಡೆಯ ದುರಸ್ಥಿ ಕೆಲಸ ಕೂಡ ಕೈಗೊಳ್ಳಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸರಕಾರ ಈ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ಎಂದು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಕೋಟೆಯ ಒಳಭಾಗದಲ್ಲಿ ತುಂಬಾ ಸ್ಥಳವಿದ್ದು, ಅಲ್ಲಿ ಸಂಪೂರ್ಣವಾಗಿ ಪೊದೆಗಳು ಬೆಳೆದು ಸಾರ್ವಜನಿಕರ ಬಹಿರ್ದೆಸೆಗೆ ಮೀಸಲಾಗಿದೆ. ಅದನ್ನೆಲ್ಲ ಸ್ವಚ್ಛ ಮಾಡಿ ಅಲ್ಲೊಂದು ಉದ್ಯಾನವನ ಅಥವಾ ಹೂವಿನ ತೋಟ ನಿರ್ಮಿಸಬೇಕು. ಇದರಿಂದಾಗಿ ನಗರದ ಆ ಭಾಗದ ಜನರಿಗೆ ವಾಯುವಿಹಾರಕ್ಕೆ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರ ಬೇಡಿಕೆಯಾಗಿದೆ.

ಪುರಾತತ್ವ ಇಲಾಖೆ ವತಿಯಿಂದ ಕೋಟೆಯ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಶಾಸಕರು ಹಾಗೂ ಸಚಿವರು ವಿಶೇಷ ಕಾಳಜಿ ವಹಿಸಿ ಕೋಟೆಯ ಒಳ ಆವರಣದಲ್ಲಿ ಒಂದು ಹೂವಿನ ತೋಟ ನಿರ್ಮಿಸಬೇಕು ಎಂಬುದು ಇಲ್ಲಿಯ ಜನರ ಬಹು ದಿನದ ಬೇಡಿಕೆ.

- ಪ್ರವೀಣ್ ಮೊರೆ, ಸಾಮಾಜಿಕ ಕಾರ್ಯಕರ್ತ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಶೇನ ಫುಲೆ

contributor

Similar News