×
Ad

ಬಿಹಾರ ಸೋಲು: ‘ಇಂಡಿಯಾ’ ಒಕ್ಕೂಟದ ಒಗ್ಗಟ್ಟಿಗೆ ಮುಳುವಾಗಲಿದೆಯೇ?

Update: 2025-11-18 09:20 IST

2023ರಲ್ಲಿ ರಚನೆಯಾದ ‘ಇಂಡಿಯಾ’ ಒಕ್ಕೂಟದ ಪಾಲಿಗೆ ಬಿಜೆಪಿ ಪ್ರಾಬಲ್ಯ ಎದುರಿಸುವಲ್ಲಿ ಒಂದು ದೊಡ್ಡ ಒಗ್ಗಟ್ಟಿನ ಪರೀಕ್ಷೆಯಾಗಿ ಬಿಹಾರ ಚುನಾವಣೆ ಎದುರಾಗಿತ್ತು.

ಬಿಹಾರದ ಸೋಲಿನ ನಂತರ ಇಂಡಿಯಾ ಮೈತ್ರಿಕೂಟ ತೀರಾ ದುರ್ಬಲವಾಗಿ ಕಾಣಿಸತೊಡಗಿದೆ.

2014ರ ನಂತರ ವಿಪಕ್ಷಗಳು ಪ್ರಬಲ ಪೈಪೋಟಿ ನೀಡಲಾಗದ ಹಿನ್ನೆಲೆಯಲ್ಲಿ ಒಗ್ಗಟ್ಟಿನಿಂದ ಎದುರಿಸುವ ಹೆಜ್ಜೆಯಾಗಿ ‘ಇಂಡಿಯಾ’ ಮೈತ್ರಿಕೂಟ ರೂಪುಗೊಂಡಿತ್ತು.

2024ರಲ್ಲಿ ಅದು ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಭಯ ಉಂಟುಮಾಡಿತೆಂಬುದು ಕೂಡ ಸುಳ್ಳಲ್ಲ.

ಪರಸ್ಪರ ಪೈಪೋಟಿಯಲ್ಲಿರುವ ಪಕ್ಷಗಳೇ ಒಂದಾಗಿದ್ದ ‘ಇಂಡಿಯಾ’ ಮೈತ್ರಿಕೂಟದಲ್ಲಿ ವಿರೋಧಾಭಾಸಗಳಿದ್ದರೂ, ಪರಸ್ಪರ ಬೆಂಬಲಿಸುವ ಒಂದು ಸೂತ್ರವನ್ನು ಕಂಡುಕೊಳ್ಳುವಲ್ಲಿ ಅದು ಯಶಸ್ವಿಯಾಗಿತ್ತು. ಕಳೆದ ವರ್ಷ ಜಾರ್ಖಂಡ್ ಮತ್ತು ಜಮ್ಮು ಕಾಶ್ಮೀರದಲ್ಲಿ ಈ ಸೂತ್ರ ನೆರವಿಗೆ ಬಂತು.

ಬಿಹಾರ ಚುನಾವಣೆ ವಿರೋಧ ಪಕ್ಷಗಳ ಈ ಮೈತ್ರಿಕೂಟಕ್ಕೆ ನಿರ್ಣಾಯಕ ಪರೀಕ್ಷೆಯಾಗಿತ್ತು. ಅದರ ಪ್ರಮುಖ ಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೆಡಿಯು-ಬಿಜೆಪಿ ಮೈತ್ರಿಕೂಟಕ್ಕೆ ದೊಡ್ಡ ಸವಾಲನ್ನು ಒಡ್ಡುವುದು ಮುಖ್ಯವಾಗಿತ್ತು. ಬಂಗಾಳ ಮತ್ತು ತಮಿಳುನಾಡಿನಲ್ಲಿ ಮುಂದಿನ ವರ್ಷ ಚುನಾವಣೆಗಳಿರುವ ಹಿನ್ನೆಲೆಯಲ್ಲಿ ಬಿಹಾರ ಚುನಾವಣೆ ಬಹಳ ಮಹತ್ವದ್ದಾಗಿತ್ತು.

ಆದರೆ ಬಿಹಾರ ಚುನಾವಣೆ ‘ಇಂಡಿಯಾ’ ಮೈತ್ರಿಕೂಟದ ಪಾಲಿಗೆ ಕಹಿಯಾಗಿದೆ. ಈಗ ‘ಇಂಡಿಯಾ’ ಒಕ್ಕೂಟದೊಳಗಿನ ಮೈತ್ರಿಪಕ್ಷಗಳೇ ಅಪಸ್ವರ ತೆಗೆಯತೊಡಗಿವೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ಗೆ ತಕ್ಷಣದ ಸವಾಲು ಕೂಡ ಪಶ್ಚಿಮ ಬಂಗಾಳದಲ್ಲಿನ ಸನ್ನಿವೇಶವೇ ಆಗಿದೆ.

ಟಿಎಂಸಿ ಮತ್ತು ಕಾಂಗ್ರೆಸ್ ನಡುವಿನ ಪೈಪೋಟಿಯಲ್ಲಿ ನಿರ್ಣಾಯಕವಾಗುವ ಅಂಶವೆಂದರೆ ಬಂಗಾಳದಲ್ಲಿನ ದೊಡ್ಡ ಪ್ರಮಾಣದ ಅಲ್ಪಸಂಖ್ಯಾತ ಜನಸಂಖ್ಯೆ.

ಬೇರೆ ರಾಜ್ಯಗಳಲ್ಲಿ ನಿರ್ದಿಷ್ಟವಾಗಿ ಮುಸ್ಲಿಮ್ ಮತಗಳನ್ನು ಸೆಳೆಯುವ ಪಕ್ಷಗಳನ್ನು ಬಿಜೆಪಿಯ ಬಿ ಟೀಂ ಎಂದು ಸ್ವತಃ ಕಾಂಗ್ರೆಸ್ ಟೀಕಿಸುತ್ತದೆ. ಹಾಗಿರುವಾಗ ಬಂಗಾಳದಲ್ಲಿ ಅದು ಟಿಎಂಸಿ ದೃಷ್ಟಿಯಲ್ಲಿ ಅಂಥದೇ ಆಪಾದನೆಗೆ ತುತ್ತಾದರೆ ಅಚ್ಚರಿಯಿಲ್ಲ. ಅಂದರೆ, ‘ಇಂಡಿಯಾ’ ಮೈತ್ರಿಕೂಟದ ಒಗ್ಗಟ್ಟು ಮುರಿಯುವ ಸೂಚನೆಗಳು ಇವಾಗಿವೆ.

‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ವಿಪಕ್ಷ ಒಕ್ಕೂಟಗಳು ತಮ್ಮ ಗ್ರಹಿಕೆ ಬದಲಿಸಬೇಕಿರುವ ಅಗತ್ಯದ ಬಗ್ಗೆ ಹೇಳಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸಿರುವುದರ ಕಡೆ ಗಮನ ಸೆಳೆದಿರುವ ಅವರು, ದೇಶದ ಮಹಿಳೆಯರೊಂದಿಗೆ ಮಾತನಾಡಿ, ಅವರಿಲ್ಲದೆ ಪರ್ಯಾಯ ಇರಲು ಸಾಧ್ಯವಿಲ್ಲ ಎಂದು ಸಲಹೆ ಕೊಟ್ಟಿದ್ದಾರೆ.

ಅವರ ಈ ಪೋಸ್ಟ್‌ಗೆ ಬಂದಿರುವ ಪ್ರತಿಕ್ರಿಯೆ ಗಮನಾರ್ಹವಾಗಿದೆ.

ಕಡೆಗೂ ಒಬ್ಬರಾದರೂ ಈ ಚುನಾವಣೆಯ ಫಲಿತಾಂಶವನ್ನು ನಿಜವಾಗಿಯೂ ವಿಶ್ಲೇಷಿಸಿದ್ದಾರೆ. ಕೇವಲ ಮತಗಳ್ಳತನ, ಪ್ರಜಾಪ್ರಭುತ್ವದ ಕೊಲೆ ಎಂದು ಹೇಳುವ ಬದಲು, ಗಮನಿಸಬೇಕಾದ ಅಂಶದ ಕಡೆ ನೋಡಿದ್ದಾರೆ ಎಂದು ಜನರು ಹೇಳಿದ್ದಾರೆ.

ಇದು ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡ ಕಾಮೆಂಟ್ ಆಗಿದ್ದರೂ, ಬಹುಶಃ ಪ್ರಾದೇಶಿಕವಾಗಿ ಚುನಾವಣೆಯ ವಿಷಯಗಳನ್ನು ಗುರುತಿಸುವಲ್ಲಿ ಪಕ್ಷಗಳು ವಿಫಲವಾಗುತ್ತಿರುವ ಬಗೆಗಿನ ಟೀಕೆಯೂ ಆಗಿದೆ. ನಿಜವಾದ ವಿಷಯಗಳ ಕಡೆ ಗಮನ ಹರಿಸುವುದು ಮುಖ್ಯ ಮತ್ತು ಪ್ರಬಲವಾದ ವಿರೋಧಪಕ್ಷದ ಅಗತ್ಯವಿದೆ ಎನ್ನುವುದನ್ನು ಅದು ಹೇಳುತ್ತದೆ.

‘ಇಂಡಿಯಾ’ ಒಕ್ಕೂಟ ರಾಷ್ಟ್ರಮಟ್ಟದಲ್ಲಿ ಮಾತ್ರ, ರಾಜ್ಯ ಚುನಾವಣೆಗಳಿಗೆ ಅಲ್ಲ ಎನ್ನುವ ದುರ್ಬಲ ಸೂತ್ರ ಕೂಡ ದೊಡ್ಡ ಹೊಡೆತ ಕೊಡುವ ಅಂಶವಾಗಿದೆ. ಅವು ಯಾವಾಗ ಒಂದಾಗಿರುತ್ತವೆ, ಯಾವಾಗ ಎದುರಾಳಿಗಳಾಗುತ್ತವೆ ಮತ್ತು ಈ ಎರಡೂ ಮನಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂಬುದೆಲ್ಲವೂ ವಿಚಿತ್ರವಾಗಿದೆ.

ಬಿಹಾರದಲ್ಲಿನ ಸೋಲಿನ ವಿಷಯಕ್ಕೆ ಬಂದರೆ, ಪ್ರಚಾರ ಮತ್ತು ಜಂಟಿ ಕಾರ್ಯತಂತ್ರ ರೂಪಿಸುವಲ್ಲಿ ಬಹಳ ತಡವಾಯಿತೆಂದು ಈಗಾಗಲೇ ಹಲವರು ದೂಷಿಸುತ್ತಿದ್ದಾರೆ.

ಮೈತ್ರಿಯೊಳಗಿನ ಪ್ರಮುಖ ಪಕ್ಷಗಳೇ ಪರಸ್ಪರ ಕಚ್ಚಾಟಕ್ಕೆ ನಿಂತವು. ಇದಲ್ಲದೆ, ಬಿಜೆಪಿಯ ಜಂಗಲ್ ರಾಜ್ ನಿರೂಪಣೆಯನ್ನು ಮೀರಿ ನಿಲ್ಲಲು ಅದಕ್ಕೆ ಸಾಧ್ಯವಾಗದೇ ಹೋಯಿತೆ ಎಂಬ ಪ್ರಶ್ನೆಯೂ ಇದೆ.

ಜಾತಿ ಸಮೀಕರಣಗಳನ್ನು ಕಂಡುಕೊಳ್ಳುವಲ್ಲಿ ವಿಫಲವಾದದ್ದು, ಹೇಗೆ ಬಿಹಾರದಲ್ಲಿ ತಾವು ಪ್ರಸ್ತುತ ಎಂಬುದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿನ ವಿಫಲತೆ ಎಲ್ಲವೂ ಅದರ ಸೋಲಿಗೆ ಪಾಲು ಕೊಟ್ಟಿವೆ.

ಸೀಟಿಗಾಗಿ ಕಚ್ಚಾಡುವ ಸ್ಥಿತಿಯಲ್ಲಿ ಒಗ್ಗಟ್ಟು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಇದೆ. ಮೈತ್ರಿಯನ್ನು ಮತ್ತೆ ಹಳಿಗೆ ತರಲು ಪಕ್ಷಗಳು ಪ್ರತಿಷ್ಠೆಗೆ ಬೀಳದೆ, ಮೈತ್ರಿಗೆ ಅನುಕೂಲವಾಗಬಲ್ಲ ಸೀಟು ಹಂಚಿಕೆ ಸೂತ್ರವನ್ನು ಒಮ್ಮನಸ್ಸಿನಿಂದ ತೆಗೆದುಕೊಳ್ಳುವುದು ಅವಶ್ಯವಾಗುತ್ತದೆ.

ಬಿಹಾರದಲ್ಲಿ ಕದನ ಕಣಕ್ಕೆ ಅಣಿಯಾಗುವ ಹಂತವಾದ ಸೀಟು ಹಂಚಿಕೆ ಮಾತುಕತೆಗಳೇ ವಿಫಲವಾದವು. ಕಡೆಗೆ ಅದರ ಫ್ರೆಂಡ್ಲಿ ಫೈಟ್ ಎಂಬುದಂತೂ ಅತ್ಯಂತ ಹಾಸ್ಯಾಸ್ಪದ ಪ್ರಯೋಗ ಮಾತ್ರವಾಗಿ ಉಳಿಯಿತು. ಕಣದಲ್ಲಿರುವಾಗ ಎಲ್ಲರಿಗೂ ತಮ್ಮನ್ನು ಮಾತ್ರ ಸಾಬೀತುಪಡಿಸಿಕೊಳ್ಳುವ ತುರ್ತು ಇದ್ದುದು ಸಹಜವೇ ಆಗಿತ್ತು. ಅದು ಅವರವರದೇ ಮತಗಳನ್ನು ಒಡೆಯಿತು ಮತ್ತು ಕಾರ್ಯಕರ್ತರಲ್ಲಿನ ಗೊಂದಲಕ್ಕೆ ಕಾರಣವಾಯಿತು.

‘ಇಂಡಿಯಾ’ ಒಕ್ಕೂಟದ ಪಕ್ಷ ಬಿಹಾರದ ಪಕ್ಕದ ರಾಜ್ಯದಲ್ಲಿ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಅದು ಮೊದಲು ಸೀಟು ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ತಾನೇ ಕಣಕ್ಕಿಳಿಯುವ ಮಾತಾಡಿತು, ಕೊನೆಗೆ ಅದರಿಂದ ಹಿಂದೆ ಸರಿದರೂ ಪ್ರಚಾರಕ್ಕೆ ಬರಲೇ ಇಲ್ಲ

ಮೈತ್ರಿಕೂಟದ ಪ್ರಮುಖ ಮುಖಗಳಾದ ತೇಜಸ್ವಿ ಯಾದವ್ ಹಾಗೂ ರಾಹುಲ್ ಗಾಂಧಿ ನಡುವೆಯೇ ಸಹಮತವಿಲ್ಲ, ಅವರಿಬ್ಬರ ಮಧ್ಯೆ ಬಿರುಕು ಬಂದಿದೆ ಎಂಬ ಮಾತುಗಳು ಚುನಾವಣಾ ಪ್ರಚಾರದ ಹೊತ್ತಲ್ಲೇ ವ್ಯಾಪಕವಾಗಿ ಹರಡಿತು. ಅವರಿಬ್ಬರ ಚುನಾವಣಾ ಪ್ರಚಾರದಲ್ಲೂ ಆ ಅನುಮಾನಗಳು ದೂರವಾಗುವ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ

ಸಿಎಂ ಅಭ್ಯರ್ಥಿ ಹಾಗೂ ಇನ್ನೊಬ್ಬ ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕನ ನಡುವೆಯೇ ಸಮನ್ವಯ ಇಲ್ಲ ಎಂಬುದು ಮತದಾರರಿಗೆ ಯಾವ ಸಂದೇಶ ರವಾನಿಸುತ್ತದೆ?

ಮೈತ್ರಿಕೂಟದ ಪಕ್ಷಗಳೇ ಒಂದರ ವಿರುದ್ಧ ಇನ್ನೊಂದು ಸ್ಪರ್ಧೆಗೆ ಇಳಿದಾಗ ಅದನ್ನು ತಕ್ಷಣ ಸರಿಪಡಿಸುವ, ಮನವೊಲಿಸುವ ಕೆಲಸ ಆಗಬೇಕಿತ್ತು. ಬಿಜೆಪಿಯಲ್ಲಿ ಅದಾಗಿದೆ. ಆದರೆ ‘ಇಂಡಿಯಾ’ ಒಕ್ಕೂಟದಲ್ಲಿ ಅದಾಗಲೇ ಇಲ್ಲ

‘ಇಂಡಿಯಾ’ ಒಕ್ಕೂಟದೊಳಗಿನ ಪಾಲುದಾರರ ಸ್ಥಳೀಯ ಮಹತ್ವಾಕಾಂಕ್ಷೆ ಮತ್ತು ಪ್ರತಿಷ್ಠೆ ಘರ್ಷಣೆಗೆ ಎಡೆ ಮಾಡಿಕೊಟ್ಟಿತು. ಕಡೆಗೆ ಆಂತರಿಕ ಬಿರುಕುಗಳು ಎನ್‌ಡಿಎ ತನ್ನ ಸ್ಥಾನ ಬಲಪಡಿಸಿಕೊಳ್ಳಲು ಸ್ವತಃ ಅವಕಾಶ ಮಾಡಿಕೊಟ್ಟಿತು ಎಂಬುದು ನಿಜ.

ಫ್ರೆಂಡ್ಲಿ ಫೈಟ್ ಎನ್ನುವುದು ಮೈತ್ರಿಕೂಟದೊಳಗಿನ ಪಕ್ಷಗಳ ನಡುವೆ ತೀವ್ರ ಅಪನಂಬಿಕೆ ಇದೆ ಎಂಬುದನ್ನೇ ಸೂಚಿಸಿದೆ. ಕಡೆಗೆ ಅದೇ ‘ಇಂಡಿಯಾ’ ಮೈತ್ರಿಕೂಟದ ಕೆಟ್ಟ ಸ್ಥಿತಿಗೆ ಕಾರಣವಾಗಿದೆ. ಈಗ ಹೀನಾಯ ಸೋಲನ್ನುಂಡು ಕೂರುವಂತಾಗಿದೆ.

ಬಿಹಾರ ಚುನಾವಣೆಯಲ್ಲಿನ ಕಾಂಗ್ರೆಸ್‌ನ ಅತಿ ಕಳಪೆ ಪ್ರದರ್ಶನವಂತೂ ಮೈತ್ರಿಕೂಟದೊಳಗಿನ ಅದರ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಕಾಂಗ್ರೆಸ್ ಸ್ಪರ್ಧಿಸಿದ್ದ 61 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಮಾತ್ರ ಗೆದ್ದಿತು. ಇದು ಕಾಂಗ್ರೆಸ್ ಪಾಲಿನ ಮತ್ತೊಂದು ದೊಡ್ಡ ಹಿನ್ನಡೆ.

ಎನ್‌ಡಿಎ ದೊಡ್ಡ ಮಟ್ಟದಲ್ಲಿ ಸಾಧಿಸಿದ ಗೆಲುವು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳನ್ನು ನಾಶಮಾಡಿದೆ.

ಈಗ ಗೆದ್ದಿರುವ ಕನಿಷ್ಠ ಮಟ್ಟದ ಸೀಟುಗಳು ವಿಪಕ್ಷ ಒಕ್ಕೂಟದ ಪಾಲಿಗೆ ನಿರಾಶಾದಾಯಕ ಮಾತ್ರವಲ್ಲ, ಮತಗಳ್ಳತನದ ಆರೋಪಕ್ಕೂ ದೊಡ್ಡ ಹಿನ್ನಡೆ.

ಬಿಹಾರದಲ್ಲಿನ ಸೋಲು, ಅದರಲ್ಲೂ ಕಾಂಗ್ರೆಸ್‌ನ ಸೋಲು ಕೇಂದ್ರದಲ್ಲಿ ಅದರ ಮುಂದಾಳತ್ವದ ‘ಇಂಡಿಯಾ’ ಮೈತ್ರಿಕೂಟದಲ್ಲಿ ದೊಡ್ಡ ಬದಲಾವಣೆಗೆ ಒತ್ತಾಯ ಹೆಚ್ಚಲು ಕಾರಣವಾಗಬಹುದು. ನಾಯಕತ್ವದ ಪ್ರಶ್ನೆ ದೊಡ್ಡದಾಗಿ ತಲೆಯೆತ್ತಬಹುದು.

ಮುಂದಿನ ವರ್ಷ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಮತ್ತು ಕೇರಳದಲ್ಲಿ ಚುನಾವಣೆಗಳಿದ್ದು, ಬಿಹಾರದ ಫಲಿತಾಂಶ ಇಂಡಿಯಾ ಒಕ್ಕೂಟದ ಮುಂದಿನ ನಡೆಗಳ ಮೇಲೆ ಖಂಡಿತ ಪರಿಣಾಮ ಬೀರಲಿದೆ.

ಅದು ನಿಜವಾಗಿಯೂ ದೃಢವಾಗಿ ನಿಲ್ಲಲಿದೆಯೇ ಅಥವಾ ಒಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರ ಏನಿರುತ್ತದೆಯೊ ಗೊತ್ತಿಲ್ಲ. ಅದು ಒಡೆದುಹೋದರೆ, ಅದೇ ಎನ್‌ಡಿಎ ಪಾಲಿನ ಮತ್ತೊಂದು ದೊಡ್ಡ ಗೆಲುವಾಗಿಬಿಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಿನಯ್ ಕೆ.

contributor

Similar News