×
Ad

ಹಸಿರು ಹೊದಿಕೆ ನಡುವೆ ಮನಮೋಹಕ ಚಕ್ರಾ-ಸಾವೆಹಕ್ಲು ಜಲಾಶಯ

Update: 2025-06-23 13:42 IST

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಅಣೆಕಟ್ಟೆಗಳ ತವರೂರು ಎಂದೇ ಪ್ರಸಿದ್ಧಿ. ಚಕ್ರಾ ಮತ್ತು ಸಾವೆಹಕ್ಲು ಶಿವಮೊಗ್ಗ ಜಿಲ್ಲೆಯ ಅವಳಿ ಜಲಾಶಯಗಳು ಎಂಬುದು ಮತ್ತೊಂದು ವಿಶೇಷ. ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ತಾಯಂದಿರು ಎಂಬ ಶ್ರೇಯ, ಸಾವೆಹಕ್ಲು ಹಾಗೂ ಚಕ್ರಾ (ಅಣೆಕಟ್ಟು) ಜಲಾಶಯಗಳದ್ದು.

ಐದು ದಶಕಕ್ಕೂ ಹಳೆಯದಾದ ಈ ಜಲಾಶಯಗಳು ಮಳೆಗಾಲದಲ್ಲಿ ತನ್ನ ವೈಭವವನ್ನು ಹೆಚ್ಚಿಸಿಕೊಳ್ಳುತ್ತವೆ. ಈ ಅವಳಿ ಜಲಾಶಯ ನೋಡಲು ರಾಜ್ಯ,ದೇಶ,ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.

ಚಕ್ರಾ ಅಣೆಕಟ್ಟು: ಮಲೆನಾಡಿನ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಡಿಯಲ್ಲಿರುವ ಚಕ್ರಾ ಜಲಾಶಯವು ಚಕ್ರಾ ನದಿಯ ಒಂದು ಭಾಗ. ಈ ಚಕ್ರಾ ನದಿಗೆ ಅಡ್ಡಲಾಗಿ ಚಕ್ರಾ ಅಣೆಕಟ್ಟು ನಿರ್ಮಿಸಲಾಗಿದೆ. ರಾಕ್‌ಫಿಲ್ ವಿನ್ಯಾಸದಲ್ಲಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಚಕ್ರಾ ಜಲಾಶಯ ಶಿವಮೊಗ್ಗ ಜಿಲ್ಲೆಯ ಹೊಸನಗರದ ನಗರ ಹೋಬಳಿಯಲ್ಲಿದೆ.

ಸಮತೋಲನ ಜಲಾಶಯವಾಗಿ ಕಾರ್ಯನಿರ್ವಹಿಸಲು ಮತ್ತು ಲಿಂಗನಮಕ್ಕಿ ಜಲಾಶಯಕ್ಕೆ ನೀರನ್ನು ಪೂರೈಸಲು ಚಕ್ರಾ ಅಣೆಕಟ್ಟನ್ನು ನಿರ್ಮಿಸಲಾಗಿದೆ.

ಚಕ್ರಾ ಅಣೆಕಟ್ಟು ಎಲ್ಲ ಕಡೆಗಳಲ್ಲಿಯೂ ರಮಣೀಯ ಸೌಂದರ್ಯದಿಂದ ಆವೃತವಾದ ಅದ್ಭುತ ತಾಣವಾಗಿದೆ. ಪ್ರಕೃತಿಯ ಸಮೃದ್ಧಿ ಮತ್ತು ಶಾಂತ ವಾತಾವರಣವು ದೂರದ ಮತ್ತು ಹತ್ತಿರದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜನರು ನಗರದ ಜಂಜಾಟದಿಂದ ದೂರವಾಗಿ ಶಾಂತ ಸಮಯವನ್ನು ಆನಂದಿಸಲು ಈ ಸ್ಥಳ ಸೂಕ್ತವಾಗಿದೆ.

ಚಕ್ರಾ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಲು ಪ್ರವಾಸಿಗರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್‌ನಿಂದ ವಿಶೇಷ ಅನುಮತಿಯನ್ನು ಪಡೆಯಬೇಕಾಗುತ್ತದೆ.

ಚಕ್ರಾ ಅಣೆಕಟ್ಟು ತಲುಪುವುದು ಹೇಗೆ?:

ಶಿವಮೊಗ್ಗದಿಂದ ಹೊಸನಗರ ತಾಲೂಕಿನಲ್ಲಿರುವ ಮಾಸ್ತಿಕಟ್ಟೆಗೆ ಹೋಗಿ(ಶಿವಮೊಗ್ಗದಿಂದ 100 ಕಿ.ಮೀ., ಮಾಸ್ತಿಕಟ್ಟೆಯಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ) ಸ್ವಂತ ವಾಹನದಲ್ಲಿ ಹೋದರೆ ಒಳಿತು.

ಸಾವೆಹಕ್ಲು ಅಣೆಕಟ್ಟು: ಹೊಸನಗರ ತಾಲೂಕಿನ ಸಾವೆಹಕ್ಲು ಎಂಬ ಸುಂದರ ಪರಿಸರದಲ್ಲಿ ಸಾವೆಹಕ್ಲು ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. 1980ರಲ್ಲಿ ನಿರ್ಮಿಸಲಾದ ಈ ಮಣ್ಣಿನ ಅಣೆಕಟ್ಟು 53 ಮೀಟರ್ ಎತ್ತರವಿದೆ. 1.90 ಟಿಎಂಸಿ ಸಾಮರ್ಥ್ಯದ ಜಲಾಶಯದ ಅಗಲ 8 ಮೀಟರ್, ಉದ್ದ 575 ಮೀ. ಇದೆ. ಇದು ಚಕ್ರಾ ವಿಮುಖ ಯೋಜನೆಯಲ್ಲಿ ಬರುವ ಪ್ರಮುಖ ಉಪನದಿಯಾಗಿದೆ. ಇದರಿಂದ ವರಾಹಿ ಮತ್ತು ಲಿಂಗನಮಕ್ಕಿ ಅಣೆಕಟ್ಟಿಗೆ ನೀರು ಪೂರೈಕೆಯಾಗುತ್ತದೆ. ಇದು ಈ ಪ್ರದೇಶಕ್ಕೆ ನೀರಿನ ಸಂಗ್ರಹದ ಪ್ರಮುಖ ಮೂಲವಾಗಿದೆ. ಗರಿಷ್ಠ ನೀರು ಸಂಗ್ರಹ ಮಾಡುವ ಉದ್ದೇಶದಿಂದ ಸಾವೆಹಕ್ಲು ಜಲಾಶಯವನ್ನು ಡಕ್ ಬಿಲ್ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ.

ಈ ಅಣೆಕಟ್ಟೆಯಿಂದ ಕಾಲುವೆ ವ್ಯವಸ್ಥೆಯ ಮೂಲಕ ಲಿಂಗನಮಕ್ಕಿ ಜಲಾಶಯಕ್ಕೆ ನೀರು ಹರಿಸಲಾಗುತ್ತದೆ. ಸಾವೆಹಕ್ಲು ಅಣೆಕಟ್ಟು ತುಂಬಿ ಹರಿಯಲು ಗೇಟ್ ವ್ಯವಸ್ಥೆ ಇಲ್ಲ. ಬದಲಿಗೆ ಇಲ್ಲಿ ದೊಡ್ಡ ಗುಂಡಿಯನ್ನು ಚೌಕಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿಂದ ನೀರು ಬೀಳುವುದನ್ನು ನೋಡುವುದೇ ಚೆಂದ. ನೀರು ಸೀದಾ ಲಿಂಗನಮಕ್ಕಿ ಜಲಾಶಯಕ್ಕೆ ಹರಿದು ಹೋಗುತ್ತದೆ. ಇದು ಮಲೆನಾಡಿನಲ್ಲಿ ಜೋರಾಗಿ ಮಳೆ ಬಂದಾಗ ಮಾತ್ರ ನೋಡಲು ಸಾಧ್ಯ.

ನೀರಿನ ಸೌಂದರ್ಯದ ಜೊತೆಗೆ, ಜಲಾಶಯವು ಸುತ್ತಮುತ್ತಲಿನ ಕಾಡುಗಳಿಂದ ಕೂಡಿದ ಬೆಟ್ಟಗಳಿಗೂ ಪ್ರಸಿದ್ಧವಾಗಿದೆ. ಮಳೆಗಾಲದಲ್ಲಿ ಮಂಜು ಕವಿದ ಮೋಡಗಳಿಂದ ಜಲಾಶಯವು ಅದ್ಭುತವಾಗಿ ಕಾಣುತ್ತದೆ.

ಇದು ಕೆಪಿಸಿಯವರ ವ್ಯಾಪ್ತಿಯಲ್ಲಿ ಇರುವುದರಿಂದ ಇಲ್ಲಿ ಪ್ರವಾಸಿಗರಿಗೆ ಪ್ರವೇಶ ಸಿಗುವುದಿಲ್ಲ.ಇದಕ್ಕೆ ಕೆಪಿಸಿಯವರ ಅನುಮತಿ ಬೇಕೇಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರತ್ ಪುರದಾಳ್

contributor

Similar News