×
Ad

ಜಿಲ್ಲೆಯ ಹೆಸರಿನ ಬದಲಾವಣೆ : ಪರಿಗಣಿಸಬೇಕಾದ ಮಾನದಂಡಗಳು

Update: 2025-07-21 13:01 IST

ಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಭಿನ್ನ ಅಭಿಪ್ರಾಯಗಳು ಪ್ರಕಟವಾಗುತ್ತಿವೆ. ಪ್ರಸ್ತುತ ಬಳಕೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆ ಎಂಬ ಹೆಸರನ್ನು ಕೈಬಿಟ್ಟು, ಮಂಗಳೂರು ಜಿಲ್ಲೆ ಎಂದು ಹೆಸರಿಡಬೇಕೆಂದು ವ್ಯಕ್ತಿ ಅಥವಾ ಸಂಘಟನೆಯ ನೆಲೆಯಲ್ಲಿ ಪ್ರಸ್ತಾವ ಬಂದಿರಬಹುದು. ಆದರೆ ಈ ಪ್ರಸ್ತಾವವನ್ನು ಸರಕಾರವು ಅಧಿಕೃತವಾಗಿ ಪರಿಶೀಲಿಸುವ ಮೊದಲು ಕೆಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.

ಹೆಸರು ಬದಲಾವಣೆಗೆ ಒಳಗಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡಿರುವ ಭೂಪ್ರದೇಶವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿದೆ. ತುಳುನಾಡು, ಪರಶುರಾಮ ಕ್ಷೇತ್ರ, ಕರಾವಳಿ ಪ್ರದೇಶ, ಮಂಗಳೂರು, ಕೆನರಾ, ಸೌತ್ ಕೆನರಾ, ದಕ್ಷಿಣ ಕನ್ನಡ ಮೊದಲಾದುವು. ತುಳುನಾಡು ಪಾರಂಪರಿಕ ಹೆಸರು, ಪ್ರಾಚೀನ ಹೆಸರು. ಪರಶುರಾಮ ಕ್ಷೇತ್ರ ಮುಂತಾದದ್ದು ಪುರಾಣ ಸಂಬಂಧಿಯಾಗಿವೆ. ಇವುಗಳಲ್ಲಿ ಮುಖ್ಯವಾಗುವ ಹೆಸರುಗಳು ತುಳುನಾಡು, ಸೌತ್ ಕೆನರಾ ಮತ್ತು ದಕ್ಷಿಣ ಕನ್ನಡ. ಸೌತ್ ಕೆನರಾ ಆಮೇಲೆ ದಕ್ಷಿಣ ಕನ್ನಡ ಅಂತ ಬದಲಾಗಿ ಒಂದು ಜಿಲ್ಲೆ ಇದ್ದಾಗ ಅದರಲ್ಲಿ ಈಗಿನ ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿದ್ದುವು. ಆಮೇಲೆ ದಕ್ಷಿಣ ಕನ್ನಡ ಜಿಲ್ಲೆಯು ಉಡುಪಿ ಮತ್ತು ದಕ್ಷಿಣ ದಕ್ಷಿಣ ಜಿಲ್ಲೆ ಎಂದು ವಿಭಜನೆ ಆಯಿತು. ಹಿಂದಣ ದಿನಗಳು ನೆನಪಿಗೆ ಬಂದು ಸಾಂಸ್ಕೃತಿಕ , ಭಾಷಿಕ ಮತ್ತಿತರ ಸಂಗತಿಗಳನ್ನು ವಿವರಿಸುವಾಗ ಈಗಲೂ ನಾವು ಅವಿಭಜಿತ ಜಿಲ್ಲೆ ಎಂದು ಹೇಳಿ ಈ ಎರಡು ಜಿಲ್ಲೆಗಳ ನಡುವಣ ಬಹುಮುಖೀ ಸಂಬಂಧಗಳನ್ನು ಜ್ಞಾಪಿಸಿಕೊಳ್ಳುತ್ತೇವೆ. ಒಂದು ಜಿಲ್ಲೆ ಎರಡಾಗಿ ವಿಭಜನೆಗೊಂಡಾಗ ಒಂದು ಜಿಲ್ಲೆಗೆ ಉಡುಪಿ ಅಂತ ಹೆಸರಿಟ್ಟಾಗಲೂ ದಕ್ಷಿಣ ಕನ್ನಡ ಜಿಲ್ಲೆ ಎಂಬ ಹೆಸರು ಬದಲಾಗಲಿಲ್ಲ. ದಕ್ಷಿಣ ಕನ್ನಡ ಅಂತಲೇ ಉಳಿಯಿತು. ಇಂತಹ ಒಂದು ದಕ್ಷಿಣ ಕನ್ನಡ ಎಂಬ ಹೆಸರನ್ನು ತೆಗೆದು ಮಂಗಳೂರು ಎಂದು ಬದಲಾಯಿಸುವ ಉದ್ದೇಶ ಏನು? ಸಮರ್ಥನೆಗಳೇನು? ತುಳು ಯಾಕೆ ನೆನಪಿಗೆ ಬರಲಿಲ್ಲ?

ದಕ್ಷಿಣ ಕನ್ನಡ ಜಿಲ್ಲೆಯನ್ನು ಎರಡು ಜಿಲ್ಲೆಗಳನ್ನಾಗಿ ಮಾಡುವಾಗ ಜಿಲ್ಲಾಕೇಂದ್ರವಾಗಿ ಉಡುಪಿಯ ಹೆಸರು ಗಣನೆಗೆ ಬಂತು. ದಕ್ಷಿಣ ಕನ್ನಡದ ಬದಲು ಜಿಲ್ಲಾ ಕೇಂದ್ರವಾಗಿದ್ದ ಮಂಗಳೂರು ಹೆಸರು ಪರಿಗಣನೆಗೆ ಬರಲಿಲ್ಲ. ಕಾರಣ ಎಂದರೆ ಅದರ ಅಗತ್ಯವೇ ಇರಲಿಲ್ಲ. ಮಂಗಳೂರು ಎಂಬ ಹೆಸರು ಎಷ್ಟು ಪ್ರಾಚೀನವಾಗಿದ್ದರೂ ಅದನ್ನು ನಗರದ ಹೆಸರಿನ ಹಿನ್ನೆಲೆಯಲ್ಲಿ ವಿವರಿಸಬಹುದಷ್ಟೆ. ಜಿಲ್ಲೆಗೆ ಹೆಸರಿಡುವ ಹಿನ್ನೆಲೆಯಲ್ಲಿ ಮಂಗಳೂರು ಹೆಸರಿನ ಪ್ರಾಚೀನತೆಗೆ ಮಹತ್ವವಾಗಲೀ ಅನನ್ಯತೆಯಾಗಲೀ ಇಲ್ಲ. ಮಂಗಳೂರು ಪರಿಗಣನೆಗೆ ಬಾರದಿರಲು, ತುಳು ಜಿಲ್ಲೆ/ ತುಳುನಾಡು ಜಿಲ್ಲೆ/ ತುಳುವ ಜಿಲ್ಲೆ ಇವುಗಳಲ್ಲಿ ಒಂದು ಹೆಸರನ್ನು ಈ ಜಿಲ್ಲೆಗೆ ಇಡಲೇಬೇಕೆಂಬ ಹಕ್ಕೊತ್ತಾಯ ಬಹಳ ಕಾಲದಿಂದ ಅತ್ಯಂತ ಪ್ರಬಲವಾಗಿ ನಡೆದುಬರುತ್ತಿದ್ದುದು ಬಹಳ ಮುಖ್ಯವಾದ ಕಾರಣವಾಗಿತ್ತು. ಮೊದಮೊದಲು ಕೋರಿಕೆಯಾಗಿದ್ದ ಈ ಒತ್ತಾಯ ಕಾಲಕ್ರಮೇಣ ಪ್ರತಿಭಟನೆ , ಹೋರಾಟದ ಹಾದಿ ಹಿಡಿದದ್ದು ಈ ನಾಡಿನ ಜನರಿಗೆ ತಿಳಿದಿರುವ ವಿಚಾರ. ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ , ತುಳು ಜಿಲ್ಲೆ ಎಂಬ ಹೆಸರು ಇಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸೇರಿಸಲು ಒತ್ತಾಯ, ಚುನಾವಣಾ ಭಾಷಣಗಳಲ್ಲಿ ಜನರಿಗೆ ಆಶ್ವಾಸನೆ ನೀಡಿದ್ದು ಎಲ್ಲವೂ ನಡೆದಿದೆ. ಇಷ್ಟೆಲ್ಲ ನಡೆದಿದ್ದರೂ ತುಳು ಜಿಲ್ಲೆ ಎಂಬ ಹೆಸರನ್ನು ಸರಕಾರ ಇಡಲಿಲ್ಲ ಅಥವಾ ತುಳುವ ನಾಯಕರಿಗೆ ಇಡಿಸಲಾಗಲಿಲ್ಲ.

ಇದಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಉಡುಪಿಯ ತುಳುವ ಮಹಾಸಭಾದಲ್ಲಿ ಕೈಗೊಂಡಿದ್ದ ಒಂದು ಐತಿಹಾಸಿಕ ನಿರ್ಣಯ. ಕಳೆದ ಶತಮಾನದ ಆರಂಭದ ದಶಕಗಳಲ್ಲಿ ತುಳುವ ಸಾಹಿತ್ಯ ಮಾಲೆಯ ಮೂಲಕ ಹತ್ತಕ್ಕಿಂತ ಹೆಚ್ಚು ತುಳು ಕೃತಿಗಳ ಪ್ರಕಟಣೆೆ, ತುಳು ಪತ್ರಿಕೆಯ ಕೆಲಸಗಳು, ಎಸ್.ಯು.ಪಣಿಯಾಡಿ, ಪೊಳಲಿ ಶೀನಪ್ಪ ಹೆಗ್ಗಡೆ, ನಾರಾಯಣ ಕಿಲ್ಲೆ ಹೀಗೆ ಅನೇಕರ ನೇತೃತ್ವದ ತುಳು ಪರ ಹೋರಾಟಗಳು ಸಾಹಿತ್ಯದ ಜೊತೆಗೆ ರಾಜಕೀಯವೂ ಸೇರಿದಂತೆ ಹಲವು ಪ್ರಯತ್ನಗಳು ತುಳು ತಲೆ ಎತ್ತಿ ನಿಲ್ಲುವಂತೆ ಮಾಡಲು ನಡೆದಿವೆ. ತುಳುವ ಸಭಾ ತೆಗೆದುಕೊಂಡಿದ್ದ , ತುಳುವಿನ ಮಟ್ಟಿಗೆ ನಿರ್ಣಾಯಕವಾಗಿದ್ದ ನಿರ್ಣಯವೇ ಪ್ರತ್ಯೇಕ ತುಳು ರಾಜ್ಯದ ಬೇಡಿಕೆಯಾಗಿತ್ತು. ಅದನ್ನು ಕೈಬಿಡಲು ಇದ್ದ ಒಂದೇ ಒಂದು ಕಾರಣ ಆಗ ಕರ್ನಾಟಕಾದ್ಯಂತ ನಡೆಯುತ್ತಿದ್ದ ಕರ್ನಾಟಕ ಏಕೀಕರಣ ಹೋರಾಟ ವನ್ನು ದುರ್ಬಲಗೊಳಿಸುವುದು ಸಾಧುವಲ್ಲ ಎಂಬುದಾಗಿತ್ತು. ಕನ್ನಡದ ಪರವಾದ ಹೋರಾಟಕ್ಕೆ ಕೈಜೋಡಿಸಲು ತುಳುವಿನ ಮುಂಚೂಣಿಯಲ್ಲಿದ್ದ ನಾಯಕರು ನಿರ್ಣಯಿಸಿದರು ಮತ್ತು ಮುಂದೆ ತುಳು ರಾಜ್ಯ , ತುಳು ಜಿಲ್ಲೆ ಅಸ್ತಿತ್ವಕ್ಕೆ ಬಂದೀತೆಂಬ ಭರವಸೆ ಆ ಕಾಲದ ತುಳು ನಾಯಕರಲ್ಲಿ ಇತ್ತು. ತುಳುವಿಗೆ ಪ್ರಾಶಸ್ತ್ಯ ಸಿಕ್ಕೀತೆಂಬ ವಿಶ್ವಾಸ ಇತ್ತು. ತುಳು ಭಾಷೆ, ಸಾಹಿತ್ಯ, ನೆಲ, ಸಂಸ್ಕೃತಿ, ಬದುಕಿನ ಅಭ್ಯುದಯಕ್ಕಾಗಿ ಹೆಣಗಿದ ಬಹುಮಂದಿ ಹಿರಿಯರ ನಿರೀಕ್ಷೆಯ ಕೊನೆಯ ಆಸೆಯೇ ತುಳು ಜಿಲ್ಲೆ ಎಂಬ ಹೆಸರು. ಕೇರಳಕ್ಕೆ ಸೇರಿದ ಕಾಸರಗೋಡು ಮತ್ತು ಉಡುಪಿ ಪ್ರತ್ಯೇಕ ಜಿಲ್ಲೆಗಳಾದಾಗ ಅಖಂಡ ತುಳು ಜಿಲ್ಲೆ ಕನಸು ಭಗ್ನವಾಗಿತ್ತು! ತುಳು ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಾಯಿಸಿ ಮಂಗಳೂರು ಎಂದು ಇಡುವುದಕ್ಕೆ ಈ ವರೆಗಿನ ಹೋರಾಟ, ಬೇಡಿಕೆ, ಒತ್ತಾಯಗಳ ಸಮರ್ಥನೆ ಇಲ್ಲವೇ ಇಲ್ಲ. ಮಂಗಳೂರು ಹೆಸರಿನ ಪ್ರಸ್ತಾವವೇ ಆಕಸ್ಮಿಕ. ವಿಸ್ತಾರವಾದ ಜಿಲ್ಲೆಯನ್ನು ಇನ್ನಷ್ಟು ಸಂಕುಚಿತಗೊಳಿಸಿ ಮಂಗಳೂರಿಗೆ ಸೀಮಿತಗೊಳಿಸುವ ಅಗತ್ಯವೇ ಇಲ್ಲ.

ಮಂಗಳೂರು ಎಂಬುದು ನಗರದ ಹೆಸರು. ಈ ಹೆಸರು ಕೂಡ ಬಹಳ ಪ್ರಾಚೀನವಾಗಿದೆ , ಪ್ರಾಚೀನ ಶಾಸನಗಳಲ್ಲಿ ಉಲ್ಲೇಖವಿದೆ. ವಿದೇಶಿ ಪ್ರವಾಸಿಗರ ಬರಹಗಳಲ್ಲಿ ಬಳಕೆಯಾಗಿದೆ. ಮಂಗಳಾದೇವಿ ಯಿಂದ ಮಂಗಳೂರು ಬಂದಿದೆ. ಮಂಗಳಾಪುರ, ಮೈಕಾಲ, ಕುಡ್ಲ ಎಂಬ ಹೆಸರುಗಳಿದ್ದರೂ ಮಂಗಳೂರು ಎಂದು ಹೆಸರಿಟ್ಟರೆ ಅದು ಸರಿಯಾಗುತ್ತದೆ.... ಹೀಗೆಲ್ಲ ಮಂಗಳೂರು ಹೆಸರಿನ ಬಗ್ಗೆ ಸಮರ್ಥನೆ ಮಾಡುವುದರಲ್ಲಿ, ವಾದ ಹೂಡುವುದರಲ್ಲಿ ಗಟ್ಟಿ ತಿರುಳು ಇಲ್ಲ. ರಾಜ್ಯದ ಹೆಸರು ರಾಜಧಾನಿಗೆ, ಜಿಲ್ಲೆಯ ಹೆಸರು ಜಿಲ್ಲಾಕೇಂದ್ರಕ್ಕೆ ಇರಬೇಕೆಂದೇನೂ ಇಲ್ಲ. ದಕ್ಷಿಣ ಕನ್ನಡ ಬೇಡ ಎಂಬುದಕ್ಕೆ ಬೇಕಾದರೆ ಕಾರಣಗಳಿವೆ. ಆದರೆ ಮಂಗಳೂರು ಹೆಸರಿಡಿ ಎಂಬುದಕ್ಕೆ ಸಕಾರಣ ಸಮರ್ಥನೆಗಳಿಲ್ಲ. ಹೆಸರಿಟ್ಟರೆ ಅದು ತಪ್ಪು ನಿರ್ಧಾರ . ಕನ್ನಡದಲ್ಲಿ ದಕ್ಷಿಣ ಎಂಥದ್ದು, ಉತ್ತರ ಎಂಥದ್ದು. ಕನ್ನಡ ಎಂಬುದು ಕರ್ನಾಟಕಾಂತರ್ಗತ ಆಗಿರುವುದರಿಂದ ದಕ್ಷಿಣ ಕನ್ನಡ ಎಂಬ ಹೆಸರನ್ನು ಬದಲಾಯಿಸಬೇಕು ಎಂಬ ಭಾವನೆ ಸರಿಯಾಗಿಯೇ ಇದೆ. ಆದರೆ ಅದು ಸಾಧ್ಯವಾಗದೆ ಇರುವಾಗ ಇದ್ದಕ್ಕಿದ್ದಂತೆ ಮಂಗಳೂರು ಹೆಸರನ್ನು ಎಳೆದು ತಂದಿರುವ ಉದ್ದೇಶವೇನು? ತುಳುವರ ಪ್ರಾತಿನಿಧಿಕ ಸಂಸ್ಥೆ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ತುಳುವರ ಜಿಲ್ಲಾವಾರು ರಾಜ್ಯವಾರು ಸಂಘ ಸಂಸ್ಥೆಗಳು ಇಂತಹ ಪ್ರಸ್ತಾವವನ್ನು ವಿದ್ವಾಂಸರ ಸಮ್ಮುಖದಲ್ಲಿ ಚರ್ಚಿಸಿ ಅಂಗೀಕರಿಸಿವೆಯೇ?

ತುಳು ಜಿಲ್ಲೆ ಎಂದು ಹೆಸರಿಡಬೇಕೆಂಬ ಬೇಡಿಕೆಗೆ ಇರುವ ಕಾರಣಗಳನ್ನು ಸಮರ್ಥನೆಗಳನ್ನು ನಾನಿಲ್ಲಿ ಮತ್ತೆ ಎಳೆಎಳೆಯಾಗಿ ವಿವರಿಸುವ ಅಗತ್ಯವಿಲ್ಲ. ತುಳು ದ್ರಾವಿಡ ವರ್ಗದ ಭಾಷೆಗಳಲ್ಲೊಂದು. ಪಂಚದ್ರಾವಿಡ ಪರಿಕಲ್ಪನೆಯಲ್ಲಿ ಸೇರಿದೆ. ಮೂಲದ್ರಾವಿಡದಿಂದ ಮೊದಲು ಪ್ರತ್ಯೇಕಗೊಂಡ ಭಾಷೆ. ಕೊಡಗು ಭಾಷೆಗೆ ಜಿಲ್ಲೆಯ ಹೆಸರಿನ ಮಾನ್ಯತೆ ಸಿಕ್ಕಿದೆ. ತುಳು ಅತ್ಯಂತ ಸಮೃದ್ಧವಾದ ಜಾನಪದ ಪರಂಪರೆಯನ್ನು ಹೊಂದಿದೆ. ಸಿರಿ, ಕೋಟಿಚೆನ್ನಯ ಮಹಾಕಾವ್ಯಗಳು ಜಾಗತಿಕ ಮನ್ನಣೆ ಗಳಿಸಿವೆ. ಮೌಖಿಕ ಮಹಾಕಾವ್ಯಗಳಾಗಿ ಪಾಡ್ದನಗಳು ಜಗತ್ತಿನ ಸಂಸ್ಕೃತಿ ವಿದ್ವಾಂಸರ ಅಧ್ಯಯನಕ್ಕೆ ಒಳಗಾಗಿವೆ. ಪರಿಪೂರ್ಣ ರಂಗಭೂಮಿ ಎಂಬ ಮನ್ನಣೆಗೆ ಪಾತ್ರವಾಗಿರುವ ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ, ಸಿರಿ ಆರಾಧನೆಗಳು ತುಳು ನೆಲದಲ್ಲಿ ಜೀವಂತವಾಗಿವೆ. ಐದಾರು ಶತಮಾನಗಳ ಲಿಖಿತ ಸಾಹಿತ್ಯ ಪರಂಪರೆಯನ್ನು ತುಳು ಹೊಂದಿದೆ. ತುಳು ರಾಜ್ಯದ ಎರಡನೆಯ ಭಾಷೆಯಾಗಿ ಮಾನ್ಯತೆ ಪಡೆಯಬೇಕೆಂಬ ಉದ್ದೇಶದಿಂದ ರಾಜ್ಯ ಸರಕಾರಕ್ಕೆ ಸಲ್ಲಿಸಿದ ವರದಿಯನ್ನು ಓದಿದವರಿಗೆ/ಓದಿದರೆ ತುಳು ಜಿಲ್ಲೆ ಎಂಬ ಹೆಸರು ಯಾಕೆ ಅತ್ಯಂತ ಸೂಕ್ತ ಎಂದು ಮನವರಿಕೆಯಾಗಬಹುದು. ತುಳು ಜಿಲ್ಲೆ ಎಂಬ ಹೆಸರಿನ ಬೇಡಿಕೆಯನ್ನು ತಣ್ಣಗಾಗಿಸುವ, ಇಲ್ಲವಾಗಿಸುವ, ದಿಕ್ಕುತಪ್ಪಿಸುವ, ದುರ್ಬಲಗೊಳಿಸುವ ಕೆಲಸವನ್ನು ಮಂಗಳೂರು ಮಾಡಲು ಹೊರಟಂತಿದೆ !

ಜಿಲ್ಲೆಯ ಹೆಸರು ಬದಲಾಯಿಸುವುದು ಮಕ್ಕಳಾಟಿಕೆಯಲ್ಲ. ಅದು ಆಡಳಿತಾತ್ಮಕವಾಗಿಯೂ ದೊಡ್ಡ ಕೆಲಸ. ಇಡೀ ಜಿಲ್ಲೆಯ ದಾಖಲೆಗಳಲ್ಲಿ ಜಿಲ್ಲೆಯ ಹೆಸರು ಬದಲಾಗಬೇಕು. ವ್ಯಕ್ತಿ ಸಂಬಂಧಿಯಾದ ಅನೇಕ ದಾಖಲೆಗಳಲ್ಲಿ ತಿದ್ದುಪಡಿಯಾಗಬೇಕು. ಸಾವಿರಾರು ಫಲಕಗಳನ್ನು ತಿದ್ದಿ ಬರೆಯಬೇಕು. ಅಂದರೆ ಮಂಗಳೂರು ಜಿಲ್ಲೆ ಅಂತ ಒಮ್ಮೆ ಘೋಷಣೆಯಾದರೆ ಮತ್ತೆ ತುಳು ಜಿಲ್ಲೆ ಯ ಪ್ರಸ್ತಾವ ಮಾಡುವುದು ಕನಸಿನ ಮಾತು. ದಕ್ಷಿಣ ಕನ್ನಡ ಅಂತ ಇರುವುದಕ್ಕಿಂತ ಮಂಗಳೂರು ಅಂತ ಬದಲಾಯಿಸಿದರೆ ಆಗುವ ಅನಾಹುತ ಬಲು ದೊಡ್ಡದು.

ಇಡಿಯ ಜಿಲ್ಲೆಯನ್ನು ಸಾಂಸ್ಕೃತಿಕ, ಭಾಷಿಕ, ಸಾಮುದಾಯಿಕ, ಪ್ರಜಾಸತ್ತಾತ್ಮಕ, ಜಾತ್ಯತೀತ, ಭೌಗೋಳಿಕ ಹೀಗೆ ಎಲ್ಲಾ ಆಯಾಮಗಳಲ್ಲಿ ತುಳು ಜಿಲ್ಲೆ ಎಂಬ ಹೆಸರು ಪ್ರತಿನಿಧಿಸುವಷ್ಟೂ ಮಂಗಳೂರು ಎಂಬ ಹೆಸರು ಪ್ರತಿನಿಧಿಸಲಾರದು. ಈಗ ಇರುವ ದಕ್ಷಿಣ ಕನ್ನಡ ಎಂಬ ಹೆಸರೂ ಪ್ರತಿನಿಧಿಸುವುದಿಲ್ಲ ಎಂಬುದೂ ನಿಜವೇ. ತುಳುವಿಗೆ ನಿರ್ದಿಷ್ಟ ಜಾತಿಯ ಸಂಬಂಧ ನಿರ್ಬಂಧ ಇಲ್ಲ. ಸಂಪರ್ಕ ಭಾಷೆಯಾಗಿ ಎಲ್ಲರೂ ಈ ಭಾಷೆಯಲ್ಲಿ ವ್ಯವಹರಿಸುತ್ತಾರೆ. ತುಳು ತುಳುನಾಡಿನ ಭಾಷೆ. ಅತ್ಯಧಿಕ ಸಂಖ್ಯೆಯ ಜನರು ಮಾತನಾಡುವ ಭಾಷೆ. ಶ್ರೀಮಂತವಾಗಿ ಬೆಳೆದಿರುವ ಭಾಷೆ. ಶಿಕ್ಷಣ ಮಾಧ್ಯಮವಾಗಿಯೂ ಅಳವಡಿಕೆಯಾಗಿರುವ ಭಾಷೆ. ನಾಡಿನ ಸಾಂಸ್ಕೃತಿಕ ಪರಂಪರೆಗಳನ್ನು ಕಟ್ಟಿಕೊಟ್ಟಿರುವ ಭಾಷೆ. ನಾಡಿನ ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವ ವ್ಯಾಪಕತೆ ತುಳುವಿನ ಬಹುಮಖ್ಯ ಲಕ್ಷಣ. ಭಾಷೆಯ ಆಧಾರದಲ್ಲಿ ರಾಜ್ಯಕ್ಕೆ ಹೆಸರುಗಳಿವೆ. ಬಾಗೇನಹಳ್ಳಿ ಭಾಗ್ಯಪುರ ಆದುದಕ್ಕೂ ಮಂಗಳೂರು ಹೆಸರನ್ನು ಜಿಲ್ಲೆಗೆ ಇಡುವುದಕ್ಕೂ ಯಥಾರ್ಥ ಸಂಬಂಧವೇ ಇಲ್ಲ. ಕರ್ನಾಟಕ ರಾಜ್ಯದ ಎರಡನೆಯ ದೊಡ್ಡ ಭಾಷೆ ಎಂಬ ಮನ್ನಣೆಗೆ ಅರ್ಹವಾಗಿರುವ ತುಳುವನ್ನು ಪರಿಗಣಿಸಿ ಈಗಲಾದರೂ ದಕ್ಷಿಣ ಕನ್ನಡ ಜಿಲ್ಲೆ ಎಂಬ ಹೆಸರನ್ನು ಬದಲಾಯಿಸಿ ತುಳು ಜಿಲ್ಲೆ ಅಂತ ಇಟ್ಟರೆ ನ್ಯಾಯಸಮ್ಮತವಾಗುತ್ತದೆ. ತುಳು ಜಿಲ್ಲೆ ಇಲ್ಲ ಎಂದಾದರೆ ಮಂಗಳೂರು ಬೇಡ ಎಂಬ ವಿವೇಕ ಇರಲಿ. ಇವತ್ತು ತುಳುವಿನ ಹೆಸರು ಈ ಜಿಲ್ಲೆಗೆ ಇಡದೆ ಇರಬಹುದು. ಮುಂದೊಂದು ದಿನ ಸಣ್ಣ ರಾಜ್ಯಗಳಾಗುವ ಕಾಲದಲ್ಲಿ ತುಳುವಿನ ಕನ್ನೆನೆಲ ಕಾಸರಗೋಡು, ತುಳುನಾಡು, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗಿನ ಕೆಲವು ಭಾಗಗಳು ಎಲ್ಲ ಒಂದುಗೂಡಿ ತುಳು ರಾಜ್ಯ ಉದಯಿಸುವ ಸುವರ್ಣ ಕಾಲ ಬರಬಹುದು! ಬೇಡಿಕೆ ನ್ಯಾಯವಾಗಿದ್ದರೆ ಅದನ್ನು ಈಡೇರಿಸಬೇಕು. ಮೆಟ್ಟಿದರೆ ನ್ಯಾಯಸಮ್ಮತ ಬೇಡಿಕೆ ಪುಟಿದೇಳುತ್ತದೆ. ತುಳಿದರೆ ಅದು ಪ್ರತ್ಯೇಕತೆಯ ಕೂಗಿಗೆ ನಾಂದಿಯಾಗುತ್ತದೆ. ಇದು ಅನೇಕ ದೇಶಗಳ/ ರಾಜ್ಯಗಳ ಕತೆ. ತುಳುವರು ಕನ್ನಡದ ಜೊತೆಗೆ ಇದ್ದಾರೆ. ಜೊತೆಯಲ್ಲಿ ಕರೆದುಕೊಂಡುಹೋಗಬೇಕಾದುದು ಹಿರಿಯಣ್ಣ/ ಹಿರಿಯಕ್ಕ ಸ್ಥಾನದಲ್ಲಿರುವ ಕನ್ನಡಮ್ಮನ ಪ್ರೀತಿಯ ಕೆಲಸ ಎಂದು ನಿವೇದಿಸಿಕೊಳ್ಳುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಕೆ. ಚಿನ್ನಪ್ಪ ಗೌಡ

contributor

Similar News