×
Ad

ಮನ್ಸಲಾಪುರ, ಮರ್ಚೆಡ್ ಕೆರೆಗಳಲ್ಲಿ ವಿದೇಶಿ ಹಕ್ಕಿಗಳ ಕಲರವ

Update: 2025-12-29 12:27 IST

ಬಿಸಿಲುನಾಡು ಎಂದು ಕರೆಯಲ್ಪಡುವ ರಾಯಚೂರಿನ ಮನ್ಸಲಾಪುರ ಹಾಗೂ ಮರ್ಚೆಡ್ ಕೆರೆಗಳು ವಲಸೆ ಹಕ್ಕಿಗಳ ಆಕರ್ಷಕ ತಾಣವಾಗಿ ಮಾರ್ಪಟ್ಟಿದೆ. ಬಗೆಬಗೆಯ ವಿದೇಶಿ ಹಕ್ಕಿಗಳು ಆಶ್ರಯ ಪಡೆದಿದ್ದು ನೋಡುಗರಲ್ಲಿ ಬೆರಗು ಮೂಡಿಸಿದೆ.

ರಾಯಚೂರು ತಾಲೂಕಿಗೆ ಒಳಪಟ್ಟರೂ ಮನ್ಸಲಾಪುರ ಕೆರೆ ಹಾಗೂ ಮರ್ಚೆಡ್ ಕೆರೆ ಜಿಲ್ಲಾ ಕೇಂದ್ರದ ಅನತಿ ದೂರದಲ್ಲಿವೆ. 298ಎಕರೆ ವಿಶಾಲವಾದ ಮನ್ಸಲಾಪುರ ಕೆರೆಗೆ

ಹರಡಿಕೊಂಡಿದ್ದು ಪರಸ್ಪರ ಪಕ್ಕದಲ್ಲಿದೆ. ವರ್ಷವಿಡೀ ನೀರನ್ನು ಉಳಿಸಿಕೊಳ್ಳುವ ಈಕೆರೆಗಳು ವಲಸೆ ಹಕ್ಕಿಗಳಿಗೆ ಆಕರ್ಷಣೀಯ ಸ್ಥಳವಾಗಿವೆ. ಛಳಿಗಾಲದಲ್ಲಿ ವಲಸೆ ಹಕ್ಕಿಗಳು ಇಲ್ಲಿ ಬರುತ್ತವೆ. ವರ್ಷದ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಠಿಕಾಣಿ ಹೂಡುತ್ತವೆ. 2012ರಿಂದ ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತಿವೆ. ಚಳಿಗಾಲದಲ್ಲಿ ಆಹಾರ ಹುಡುಕುತ್ತಾ ಬರುವ ಪಕ್ಷಿಗಳು ಗೂಡು ಕಟ್ಟುವುದು, ಸಂತಾನೋತ್ಪತ್ತಿ ಮಾಡುವುದು, ಬೇಟೆಯಾಡಿ ಆಹಾರ ಕಂಡುಕೊಳ್ಳಲು ಮುಂದಾಗುತ್ತವೆ. ಬಗೆಬಗೆಯ ಹಕ್ಕಿಗಳು ಮುಸ್ಸಂಜೆಯಲ್ಲಿ ವೇಳೆ ಹಾರುವ ದೃಶ್ಯವು ಮನಮೋಹಕವಾಗಿರುತ್ತದೆ.

ವಿವಿಧ ಜಾತಿಯ ಹಕ್ಕಿಗಳು: ಹೊಂಡ ಕೊಕ್ಕರೆ, ಬಾರ್ ಹೆಡೆಡ್ ಗೂಸ್, ಸ್ಪೂನ್ ಬಿಲ್, ಸ್ಪಾಟ್ ಬಿಲ್ಡ್, ರಿಂಗ್ ಪ್ಲೋವರ್, ಪೇಂಟೆಡ್ ಸ್ಟಾರ್ಕ್, ಗ್ರೇ ಹೆರ್-ಆನ್, ಪಾಂಡ್ ಹೆರಾನ್, ಕಪ್ಪು ಬಾಲದ ಗಾಡ್ವಿಟ್, ರೆಡ್ಶ್ಯಾಂಕ್, ಐಬಿಸ್, ಕಾಮನ್ ಸ್ಯಾಂಡ್ಪೈಪರ್, ಕಿಂಕ್‌ಫಿಷರ್, ಕಾರ್ಮೊರಂಟ್, ಗ್ರೇಟರ್ ಫ್ಲೆಮಿಂಗೊ, ಈಜಿಪ್ಟಿನ ರಣಹದ್ದು, ಕಪ್ಪು ಗಾಳಿಪಟ, ಪೇಂಟೆಡ್ ಸ್ಟಾರ್ಕ್, ಕಂದು ತಲೆಯ ಗಲ್ ಸೇರಿದಂತೆ ಸುಮಾರು 282 ಜಾತಿಯ ಪಕ್ಷಿಗಳು ಮಂಗೋಲಿಯಾ, ಕಾಂಬೋಡಿಯಾ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನದಂತಹ ವಿವಿಧ ದೇಶಗಳಿಂದ ವಲಸೆ ಬರುತ್ತವೆ.

ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡದ ಪಕ್ಷಿಗಳು ಇತ್ತೀಚೆಗೆ ಎರಡು ಕೆರೆಗಳಿಗೆ ವಲಸೆ ಬರಲು ಪ್ರಾರಂಭಿಸಿವೆ. ಈ ಪ್ರದೇಶವನ್ನು ಅಭಿವೃದ್ಧಿಪಡಿಸಿ ಪ್ರಮುಖ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಬೇಕು ಎಂದು ಅನೇಕ ಪಕ್ಷಿ ಪ್ರೇಮಿಗಳ ಆಶಯವಾಗಿತ್ತು.

ಪಕ್ಷಿಧಾಮಕ್ಕೆ ಯೋಜನೆ: ಮನ್ಸಲಾಪುರ, ಮರ್ಚೆಡ್ ಕೆರೆಯನ್ನು ಪಕ್ಷಿಧಾಮವನ್ನಾಗಿ ಮಾಡಲು ಬೆಂಗಳೂರು ಮೂಲದ ಏಕತಾ ಸಂಸ್ಥೆಯೊಂದು ಮುಂದೆ ಬಂದಿದ್ದು ಪಕ್ಷಿಧಾಮ ಮಾಡಲು ಕನಸು ಹೊತ್ತಿದ್ದು ಇದೀಗ ನನಸಾಗುವ ಕಾಲ ಸನ್ನಿಹದಲ್ಲಿದೆ.

ಮನ್ನಲಾಪೂರ ಮತ್ತು ಮರ್ಚೇಡ್ ಕೆರೆಗೆ ಆಹಾರ ಅರಸಿ ವಿವಿಧ ಜಾತಿಯ ಪಕ್ಷಿಗಳು ಉತ್ತರ ಭಾರತ ಸೇರಿದಂತೆ ವಿದೇಶಗಳಿಂದ ಇಲ್ಲಿಗೆ ಬರುತ್ತವೆ. ಬಣ್ಣಬಣ್ಣದ ವಿಭಿನ್ನ ಪಕ್ಷಿಗಳ ಆಗಮನ ಪಕ್ಷಿ ಪ್ರೇಮಿಗಳು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸುತ್ತವೆ. ಅನೇಕರು ಸಂಜೆಯ ವೇಳೆ ವಿವಿಧೆಡೆಯಿಂದ ಬರುತ್ತಾರೆ. ಪಕ್ಷಿಗಳು ಪ್ರತಿ ವರ್ಷ ಕೆಲ ಕಾಲ ವಿಶ್ರಾಂತಿ ಪಡೆದು, ಮತ್ತೆ ಇಲ್ಲಿಂದ ಹೊರಡುತ್ತವೆ.

ಈ ಕೆರೆಯನ್ನು ಪಕ್ಷಿಧಾಮ ವನ್ನಾಗಿಸಲು ಮನ್ಸಲಾಪೂರ ಗ್ರಾಮಸ್ಥರು, ಮತ್ತು ಪಕ್ಷಿ ಪ್ರೇಮಿಗಳ ಕನಸಾಗಿತ್ತು, ಈ ಬಗ್ಗೆ ಅರಣ್ಯ ಇಲಾಖೆಗೂ ಮನವರಿಕೆ ಮಾಡಿಕೊಟ್ಟಿತು. ಇದೀಗ ಪಕ್ಷಿಧಾಮವನ್ನಾಗಿ ಮಾಡಿ ಈ ಪ್ರದೇಶವನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಬೆಂಗಳೂರಿನ ಏಕತಾ ಸಂಸ್ಥೆ ಮುಂದೆ ಬಂದಿದೆ.

ಏಕತಾ ಸಂಸ್ಥೆಯ ಮುಖ್ಯಸ್ಥ ಉಲ್ಲಾಸ್ ನೇತೃತ್ವದ ತಂಡ ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವೇಂದ್ರ ಬೋರಡ್ಡಿ ಮತ್ತು ಮೀನುಗಾರಿ ಇಲಾಖೆ ಮಹಾಮಂಡಳಿ ನಿರ್ದೆಶಕ ಸೈಯದ್ ಅವರೊಂದಿಗೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಎರಡು ಕೆರೆಯ ಸುಮಾರು 800 ಎಕರೆ ಪ್ರದೇಶದಲ್ಲಿ ಪಕ್ಷಿಧಾಮ ಮಾಡಲು ಮುಂದೆ ಬಂದ ಏಕತಾ ಸಂಸ್ಥೆಯು ಪಕ್ಷಿಧಾಮದ ನೀಲ ನಕ್ಷೆ ತಯಾರಿಸಿ ಮುಂದಿಟ್ಟಿದ್ದಾರೆ. ಪಕ್ಷಿಧಾಮ ಮಾಡಲು ಸುಮಾರು 2 ಸಾವಿರ ಕೋಟಿ ಮೊತ್ತದ ಪ್ರಾಜೆಕ್ಟ್ ತಯಾರಿಸಿ ಪಕ್ಷಿಧಾಮಕ್ಕೆ ಬೇಕಾಗಿರುವ ಅಗತ್ತ ಸೌಲಭ್ಯಗಳು ಪಕ್ಷಿಗಳು ಕೆರೆಯಲ್ಲಿ ಕುಳಿತುಕೊಳ್ಳಲು ವಿಶ್ರಾಂತಿ ಪಡೆಯಲು ಅವಕಾಶ ಒದಗಿಸಿಕೊಡಲಾಗುತ್ತದೆ, ಪ್ರವಾಸಿಗರನ್ನು ಸೆಳೆಯಲು ಬೋಟಿಂಗ್ ವ್ಯವಸ್ಥೆ, ಜೊತೆಗೆ ಮೀನುಗಾರಿಕೆಗೂ ಮತ್ತಷ್ಟು ಪ್ರೋತ್ಸಾಹ ನೀಡಲಾಗುತ್ತದೆ.

ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಮತ್ತು ಪ್ರವಾಸಿಗರು ಉಳಿದುಕೊಳ್ಳಲು ಗೆಸ್ಟ್ ಹೌಸ್ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಸ್ಥಳೀಯರಿಗೂ ಉದ್ಯೋಗ ಒದಗಿಸಲು ಅವಕಾಶ ಸಿಕ್ಕಂತಾಗುತ್ತದೆ. ಗಿಡಮರಗಳನ್ನು ಬೆಳೆಸಲು ಸೂಕ್ತ ಕ್ರಮ, ಮತ್ತು ಕೆರೆಯ ಮೇಲಿರುವ ಪ್ರಸಿದ್ಧ ಸಿದ್ದಲಿಂಗೇಶ್ವರ ದೇವಸ್ಥಾನವು ಅತ್ಯಂತ ಪುರಾತನ ಕಾಲದಿಂದಲೂ ಜನಮನ್ನಣೆ ಗಳಿಸಿದ್ದು, ಇದು ಪ್ರವಾಸಿ ತಾಣವನ್ನಾಗಿಸಲು ಸಂಸ್ಥೆಯು ಕೈಜೋಡಿಸಲು ಮುಂದಾಗಿದೆ.

ಪಕ್ಷಿಧಾಮವನ್ನಾಗಿ ಮಾಡಲು ಗ್ರಾಮದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.

ಮನ್ಸಲಾಪುರ ಹಾಗೂ ಮರ್ಚೆಡ್ ಕೆರೆಗಳ ಬಳಿ ಪಕ್ಷಿಧಾಮ ಮಾಡಲು ಮುಂದಾಗಿರುವ ಏಕತಾ ಸಂಸ್ಥೆಯ ನಿರ್ಧಾರ ಖುಷಿ ತಂದಿದೆ. ಇದು ಈ ಭಾಗದ ಜನರ, ಪಕ್ಷಿಪ್ರೇಮಿಗಳ ಅನೇಕ ವರ್ಷಗಳ ಬೇಡಿಕೆಯೂ ಆಗಿತ್ತು. ಸಂಸ್ಥೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು.

-ರಾಘವೇಂದ್ರ ಬೋರೆಡ್ಡಿ,ಮನ್ಸಲಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ

ನಮ್ಮ ರಾಯಚೂರಿನ ಮನ್ಸಲಾಪುರ ಒಂದು ಅಘೋಷಿತ ಪಕ್ಷಿಧಾಮ. ಇದನ್ನು ಅಧಿಕೃತಗೊಳಿಸಬೇಕಿದೆ. ಇಲ್ಲಿ ತರಹೇವಾರಿ ಪಕ್ಷಿಗಳು ವಲಸೆ ಬರುತ್ತಿದ್ದುದನ್ನು ನೋಡಿದ್ದೇನೆ, ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದೇನೆ. ಪಕ್ಕದ ಮರ್ಚೆಡ್ ಕೆರೆಯೂ ಪಕ್ಷಿಗಳ ಆವಾಸ ಸ್ಥಾನವಾಗಿದೆ. ಮನುಷ್ಯರ ಓಡಾಟ ಕಡಿಮೆ ಇರುವಿಕೆ, ಹಸಿರು ವಾತಾವರಣ, ನೀರಿನ, ಆಹಾರದ ಸೌಲಭ್ಯ, ಕಡಿಮೆ ಮಾಲಿನ್ಯ ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಪಕ್ಷಿಗಳು ಇಲ್ಲಿ ನೆಲೆಸಿವೆ. ಮನ್ಸಲಾಪುರ ಪಕ್ಷಿಧಾಮ ಆಗಲೇಬೇಕೆಂದು ಒತ್ತಾಯಿಸುತ್ತೇನೆ.

-ಈರಣ್ಣ ಬೆಂಗಾಲಿ, ಪಕ್ಷಿ ಛಾಯಾಗ್ರಾಹಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು

contributor

Similar News