ಸಿಲಿಕಾನ್ ಬೀಚ್ ಆಗಲಿದೆ ಕರಾವಳಿ: ರೋಹಿತ್ ಭಟ್
ಕಳೆದ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಐಟಿ ಪಾರ್ಕ್ ರಚನೆ ಆಗುವ ಕುರಿತ ಕೂಗು ಕೇಳಿ ಬರುತ್ತಲೇ ಇದೆ. ಅದಕ್ಕೀಗ ಪುಷ್ಟಿ ಎನ್ನುವಂತೆ ಸಾಕಷ್ಟು ಬೆಳವಣಿಗೆ ಕಾಣುತ್ತಿದ್ದು, ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಡಿ ಇಟ್ಟಿದೆ.
ದಕ್ಷಿಣ ಕನ್ನಡ, ಉಡುಪಿಯನ್ನು ಐಟಿ ಹಬ್ ಎಂದು ಮುಂದಿನ ದಿನಗಳಲ್ಲಿ ಕರೆಯಬಹುದೇ? ಇಲ್ಲಿರುವ ಸಾಮರ್ಥ್ಯ, ಸವಾಲು, ಸಾಧ್ಯತೆಗಳೇನು? ಈ ನಿಟ್ಟಿನಲ್ಲಿ wrkwrk, 99 games, Robosoft Technologies ಸಂಸ್ಥಾಪಕರು ಮತ್ತು ದೇಶದ ಐಟಿ ಕ್ಷೇತ್ರದ ನಾಯಕರಲ್ಲಿ ಒಬ್ಬರಾದ ರೋಹಿತ್ ಭಟ್ ಅವರನ್ನು ಸಂದರ್ಶಿಸಿದಾಗ ಸಿಕ್ಕ ಉತ್ತರದ ಸಾರಾಂಶ ಇಲ್ಲಿದೆ. ಪೂರ್ತಿ ವೀಡಿಯೊವನ್ನು ವಾರ್ತಾ ಭಾರತಿ YouTube ಚಾನಲ್‌ನಲ್ಲಿ ವೀಕ್ಷಿಸಿ.
ಮಂಗಳೂರು ಬುದ್ಧಿವಂತರ ಜಿಲ್ಲೆ. ಇಲ್ಲಿ ಬಂದರು ಇದೆ, ವಿಮಾನ ನಿಲ್ದಾಣ ಇದೆ ಎಲ್ಲಾ ಕ್ಷೇತ್ರದಲ್ಲೂ ಸಾಕಷ್ಟು ಸಾಧ್ಯತೆಗಳಿದ್ದರೂ ಅಭಿವೃದ್ಧಿಯಲ್ಲಿ ಮಾತ್ರ ಇನ್ನೂ ಹಿಂದೆ ಉಳಿದಿದೆ ಅಂತ ಅನಿಸುತ್ತಾ?
ಹೌದು. ಬೆಂಗಳೂರು ಆಗಲೇ ಬೆಳೆದಾಗಿತ್ತು. ಕಂಪೆನಿಗಳು ಇಲ್ಲಿಗೆ ಬಂದು ಅದ್ಭುತ ಪ್ರತಿಭೆಗಳಿಗೆ ಒಳ್ಳೆಯ ಸಂಬಳದ ಜೊತೆಗೆ ಸವಲತ್ತುಗಳನ್ನು ಕೊಟ್ಟು ಮಹಾನಗರಗಳಿಗೆ ಕರೆಸಿಕೊಳ್ಳುತ್ತಿತ್ತು. ಇಂತಹ ವ್ಯವಸ್ಥೆಗಳನ್ನು ಕಲ್ಪಿಸಲು ಇಲ್ಲಿ ದೂರದೃಷ್ಟಿ ಇರಲಿಲ್ಲ. ಆದರೂ ಕೆಲವು ಕಂಪೆನಿಗಳು ಸಾಕಷ್ಟು ಪರಿಶ್ರಮ ಪಡುತ್ತಿದ್ದವು. ಉದಾಹರಣೆಗೆ ನಮ್ಮ Robosoft ನಲ್ಲಿ 2021ರಲ್ಲಿ 1,000 ಮಂದಿ ಉದ್ಯೋಗದಲ್ಲಿ ಇದ್ದರು. ಆದರೆ ಈಗ ಕಾಲ ಬದಲಾಗುತ್ತಿದೆ. ವಿಶ್ವದರ್ಜೆಯ ಕಂಪೆನಿಗಳನ್ನು ಇಲ್ಲಿಗೆ ಕರೆಸುವ ಪ್ರಯತ್ನ ಜಾರಿಯಲ್ಲಿದೆ. ಇದು ಯಶಸ್ವಿಯಾಗುವ ಎಲ್ಲಾ ಲಕ್ಷಣಗಳೂ ಇದೆ.
ಈ ಭಾಗದಲ್ಲಿ ಐಟಿ ಕ್ಷೇತ್ರದ ಬೆಳವಣಿಗೆಗೆ ಕಳೆದೆರಡು ವರ್ಷಗಳಿಂದ ಸಾಕಷ್ಟು ಪ್ರಯತ್ನ ಪಡುತ್ತಿದ್ದೀರಿ. ಪ್ರಗತಿ ಹೇಗಿದೆ?
ನಾನು ಮಾತ್ರ ಅಲ್ಲ. ಹಲವರು ಪ್ರಯತ್ನಪಟ್ಟಿದ್ದಾರೆ. Karnataka Digital Economy Mission ಬಂದ ನಂತರ ಅದರ ಉದ್ದೇಶಗಳಲ್ಲಿ ಒಂದಾದ ಬಿಯಾಂಡ್ ಬೆಂಗಳೂರು ವೇಗ ಪಡೆಯಿತು. ಇದರ ಮುಖಾಂತರ ಇಂಡಸ್ಟ್ರಿ ಗ್ರೂಪ್ ಮಾಡಿದರು. ಈ ಮೂಲಕ ಸರಕಾರ ಮಾತ್ರ ಅಲ್ಲ ಖಾಸಗಿ ಸಂಸ್ಥೆಗಳು ಇದಕ್ಕೆ ಉತ್ತೇಜನ ನೀಡಬೇಕೆಂದು ಸೂಚನೆ ಸಿಕ್ಕಿತು. ಈ ಊರಿಗೆ ದೊಡ್ಡ ಕಂಪೆನಿಗಳು ಬರಬೇಕು ಪ್ರತಿಭೆಗಳು ಇಲ್ಲೇ ಉಳಿಯಬೇಕು ಅಂತಾದಲ್ಲಿ 3 ವಿಷಯಗಳು ಮುಖ್ಯ.Best of Life, Best of Office Infrastructure, Best of Talent. ಮೊದಲನೆಯದು ಇಲ್ಲಿತ್ತು. ಆದರೆ ಉಳಿದೆರಡು ಇರಲಿಲ್ಲ. ದೊಡ್ಡ ಸಂಸ್ಥೆಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಇಲ್ಲೇ ಮಾಡಿ ಕೊಟ್ಟರೆ ತಕ್ಷಣಕ್ಕೆ ಇಲ್ಲಿಗೆ ಬಂದು ಕೆಲಸ ಆರಂಭಿಸಲು ಅವರಿಗೆ ಅನುಕೂಲ ಆಗುತ್ತದೆ.ಹಾಗಾಗಿ ನಾನೊಂದು ಕಂಪೆನಿ ಸ್ಥಾಪಿಸಿದೆ. ವಿಶ್ವದರ್ಜೆಯ ವ್ಯವಸ್ಥೆ ಕಲ್ಪಿಸಿದೆ. ಡೆನ್ಮಾರ್ಕ್‌ನ
ಒಂದು ಕಂಪೆನಿ ನಮ್ಮ ಪೂರ್ತಿ ಜಾಗವನ್ನು ಕಾಯ್ದಿರಿಸಿತು. ನಮಗೆ ಸ್ಫೂರ್ತಿ ಸಿಕ್ಕಿತು. ಇತರ ಕೆಲವು ಕಂಪೆನಿಗಳು ಕೂಡ ಇದನ್ನು ಅಳವಡಿಸಿದವು. ಕಳೆದೆರಡು ವರ್ಷಗಳಲ್ಲಿ ಕರಾವಳಿ ಭಾಗದಲ್ಲಿ 8,000 ಮಂದಿಗೆ ಉದ್ಯೋಗ ಸೃಷ್ಟಿಯಾಗಿದೆ.
ಅಂಕಿ ಅಂಶದ ಪ್ರಕಾರ ದ.ಕ. ದಲ್ಲಿ 280 ಉಡುಪಿಯಲ್ಲಿ 130 ಕ್ಕೂ ಹೆಚ್ಚು Sಣಚಿಡಿಣ uಠಿs ಇದೆ. ಆದರೆ ಅಭಿವೃದ್ಧಿಯಲ್ಲಿ ವೇಗ ಪಡೆಯುತ್ತಿಲ್ಲ. ಯಾಕಾಗಿ?
ನಮ್ಮ ಭಾಗದಲ್ಲಿನ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 15 Incubation centreಗಳಿವೆ. ಕಂಪೆನಿಗಳನ್ನು ಆರಂಭಿಸಲು ಮತ್ತು ಆರಂಭವಾದ ಕಂಪೆನಿಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ. Start up ಆರಂಭವಾಗಿ ಒಂದು ಹಂತ ತಲುಪಿದ ನಂತರ ಅವರಿಗೆ ಸರಿಯಾದ ಮಾರ್ಗದರ್ಶನ ಸಿಗುವುದಿಲ್ಲ. ಇದನ್ನು ಗುರುತಿಸಿ ನಾವು ಖಿie ಮಂಗಳೂರು ಸ್ಥಾಪಿಸಿದೆವು. ಯಶಸ್ವೀ ಉದ್ಯಮಿಗಳು ಆರಂಭಿಕರಿಗೆ ಇಲ್ಲಿ ಮಾರ್ಗದರ್ಶನ ನೀಡುತ್ತಾರೆ. 10 ಮಂದಿಯಿಂದ ಆರಂಭವಾಗಿ ಈಗ 110 ಜನರಿದ್ದಾರೆ. 40 ಮಂದಿ ಅನುಭವಸ್ಥರು ಉಳಿದವರಿಗೆ ಆರ್ಥಿಕ ಸಹಕಾರ ಸೇರಿದಂತೆ ಎಲ್ಲಾ ರೀತಿಯ ಮಾರ್ಗದರ್ಶನ ನೀಡುತ್ತಿದ್ದಾರೆ. ಇನ್ನೂ ಹೆಚ್ಚು ಉದ್ಯಮಿಗಳು ಬಂದು ಸೇರಿಕೊಳ್ಳುತ್ತಿದ್ದಾರೆ.
ಐಟಿ ಕ್ಷೇತ್ರದಲ್ಲಿ ಉದ್ಯೋಗ ಬಯಸುತ್ತಿರುವ ಯುವ ಪ್ರತಿಭೆಗಳಿಗೆ ಹೊರ ರಾಜ್ಯದಲ್ಲಿ ಸಿಗುವ ಸಂಬಳ, ಸವಲತ್ತು ಇಲ್ಲಿ ಸಿಗುತ್ತಿಲ್ಲ ಎನ್ನುವ ಆಕ್ಷೇಪ ಇದೆ. ಇದನ್ನು ಹೇಗೆ ಸುಧಾರಿಸಬಹುದು?
ಇದಕ್ಕೆ ನಾವು Home coming ಅಂತ ಕ್ಯಾಂಪೇನ್ ಆರಂಭಿಸಿದೆವು. ಇಲ್ಲಿರುವ ವಿಶ್ವದರ್ಜೆಯ ಕಂಪೆನಿಗಳಿಗೆ ಅಷ್ಟೇ ಸಾಮರ್ಥ್ಯದ ಉದ್ಯೋಗಿಗಳ ಅವಶ್ಯಕತೆ ಇದೆ. ಹಾಗಾಗಿ ನಗರಗಳಲ್ಲಿ ಇರುವ ಇಂತಹ ಉನ್ನತ ದರ್ಜೆಯ ಉದ್ಯೋಗಿಗಳಿಗೆ ಇಲ್ಲಿರುವ ಅವಕಾಶದ ಕುರಿತು ಮಾಹಿತಿ ನೀಡಿ ಆಕರ್ಷಿಸಿದೆವು. ಅವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಇಲ್ಲೇ ಕೊಡುವ ಪ್ರಯತ್ನ ನಡೆಯುತ್ತಿದೆ ಮತ್ತು ನಾವು ಯಶಸ್ವಿಯಾಗುತ್ತಿದ್ದೇವೆ.
ಕೋರ್ಸ್ ಮುಗಿಸಿ ಹೊರ ಬರುವ ಉತ್ತಮ ಸಾಮರ್ಥ್ಯ ಇರುವ ವಿದ್ಯಾರ್ಥಿಗಳಿಗೆ ಬೇಕಾದ ತರಬೇತಿ ಸವಲತ್ತುಗಳನ್ನು ನೀಡಿ ಇಲ್ಲೇ ಉಳಿಸಿಕೊಳ್ಳಲು ಸಾಧ್ಯವಿಲ್ಲವೇ?
ಪ್ರತಿ ವರ್ಷ ಇಲ್ಲಿ 15 ಸಾವಿರ ಇಂಜಿನಿಯರ್ಸ್ 40 ಸಾವಿರ ಪದವೀಧರರು ಪಾಸ್ ಆಗುತ್ತಾರೆ. ನಮ್ಮಲ್ಲಿ ಅಷ್ಟು ಅವಕಾಶಗಳು ಇಲ್ಲ. ಆದರೆ ಇಲ್ಲಿ ಹೆಚ್ಚು ಕಂಪೆನಿಗಳು ಬಂದ ಹಾಗೆ ಅವಕಾಶಗಳು ಹೆಚ್ಚಾಗುವುದು ನಿಶ್ಚಿತ. ಈ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಜಾರಿ ಇವೆ. ಮುಂದೆ ನಮ್ಮ ಪ್ರತಿಭೆಗಳು ಇಲ್ಲೇ ಉಳಿದುಕೊಳ್ಳಬಹುದು.
ಕರಾವಳಿ ಅಂದರೆ ಪ್ರತಿಭೆಗಳ ಭಂಡಾರ. ಕ್ಷೇತ್ರ ಯಾವುದೇ ಇರಲಿ ಇಲ್ಲಿ ಪ್ರತಿಭೆಗಳಿಗೆ ಕೊರತೆ ಎನ್ನುವುದೇ ಇಲ್ಲ. ಆದರೂ ಪ್ರತಿಭಾ ಪಲಾಯನ ಆಗುತ್ತಿದೆ. ಯಾಕೆ?
ಇಲ್ಲಿ ಅವಕಾಶ ಕಡಿಮೆ ಇದೆ. ಆದ್ರೆ ಮುಂದೆ ಸೃಷ್ಟಿ ಆಗುತ್ತದೆ, ಹೆದರಬೇಕಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 40 ಕಂಪೆನಿಗಳು ಇಲ್ಲಿ ಸ್ಥಾಪನೆಗೊಂಡಿವೆ. 3 ಮಂದಿಯಿಂದ ಆರಂಭವಾದ ಕಂಪೆನಿಯೊಂದು ಈಗ ನೂರಾರು ಮಂದಿಯನ್ನು ಹೊಂದಿದೆ. ಬೆಂಗಳೂರನ್ನು ‘ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ’ ಎಂದು ಕರೆಯುತ್ತೇವೆ. ಮುಂದೆ ಕರಾವಳಿ ಅಂದರೆ ಕಾಸರಗೋಡಿನಿಂದ ಕಾರವಾರದವರೆಗಿನ ಪ್ರದೇಶವನ್ನು ‘ಸಿಲಿಕಾನ್ ಬೀಚ್ ಆಫ್ ಇಂಡಿಯಾ’ ಎಂದು ಕರೆಯಬಹುದು. ಮುಂದಿನ 20 ತಿಂಗಳಲ್ಲಿ 1 ಮಿಲಿಯನ್ ಚದರ ಅಡಿಯ ಕಚೇರಿ ಸೃಷ್ಟಿಯಾಗುತ್ತದೆ. ವಿಶ್ವದರ್ಜೆಯ ಸವಲತ್ತುಗಳು ಇಲ್ಲೇ ಸಿಗುತ್ತದೆ. ಮುಂದಿನ 1 ವರ್ಷದಲ್ಲಿ 40 ಹೊಸ ಕಂಪೆನಿಗಳು ಇಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಗಳಿವೆ.
ಮಂಗಳೂರನ್ನು ಐಟಿ ಹಬ್ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಆಸಕ್ತಿ ತೋರಿದೆ. ಇದು ಕಾರ್ಯರೂಪಕ್ಕೆ ಬಂದಲ್ಲಿ ಕರಾವಳಿ ಯಾವ ರೀತಿಯಲ್ಲಿ ಬೆಳವಣಿಗೆ ಹೊಂದಬಹುದು?
ಇದು ಬಹಳ ಒಳ್ಳೆಯ ವಿಷಯ. ಇದು ಬಿಯಾಂಡ್ ಬೆಂಗಳೂರು ಯೋಜನೆಗೆ ಪುಷ್ಟಿ ನೀಡುತ್ತದೆ. ಆದಷ್ಟು ಶೀಘ್ರದಲ್ಲಿ ಕೆಲಸ ಆರಂಭವಾಗಲಿ ಎಂದು ಆಶಿಸುತ್ತೇನೆ.
ಈ ನಿಟ್ಟಿನಲ್ಲಿ ನೀವು ಸರಕಾರಕ್ಕೆ ಏನು ಸಲಹೆ ನೀಡಲು ಬಯಸುತ್ತೀರಿ?
ಬೆಂಗಳೂರಿನಲ್ಲಿ ಸುಮಾರು 25 ಲಕ್ಷ ಐಟಿ ಉದ್ಯೋಗಿಗಳು ಇದ್ದಾರೆ. ಕರಾವಳಿಯವರು ಸುಮಾರು 2 ಲಕ್ಷ ಮಂದಿ ಇರ ಬಹುದು. ಅದೇ ರೀತಿ ಶಿವಮೊಗ್ಗ, ದಾವಣಗೆರೆ ಹೀಗೆ ಬೇರೆ ಬೇರೆ ಜಿಲ್ಲೆಗಳಿಂದ ಸಾಕಷ್ಟು ಮಂದಿ ಇದ್ದಾರೆ. ಸರಕಾರ ಕಂಪೆನಿಗಳಿಗೆ ಬಿಯಾಂಡ್ ಬೆಂಗಳೂರು ಅನುಷ್ಠಾನಗೊಳಿಸಲು ಸೌಲಭ್ಯ ಒದಗಿಸುವ ಮೂಲಕ ಉತ್ತೇಜನವನ್ನು ಮೊದಲು ನೀಡಬೇಕು.
ಕೊನೆಯದಾಗಿ ಏನು ಹೇಳಲು ಬಯಸುತ್ತೀರಿ?
ನಮ್ಮದು ಸಿಲಿಕಾನ್ ಬೀಚ್ ಪ್ರೋಗ್ರಾಂ ಅಂತ ಎನ್‌ಜಿಒ ಒಂದಿದೆ. ಊರು ಬಿಟ್ಟವರು ವಾಪಾಸ್ ಬನ್ನಿ. ನಿಮಗೆ ಬೇಕಾದ ಎಲ್ಲಾ ಸಹಕಾರವನ್ನು ನಾವು ಈ ಮೂಲಕ ನೀಡುತ್ತೇವೆ. ನಿಮ್ಮ ದೊಡ್ಡ ಕಂಪೆನಿಯ ಸಣ್ಣ ಬ್ರಾಂಚ್ ಅನ್ನು ಊರಿನಲ್ಲಿ ಆರಂಭಿಸಿ. ಮುಂದಿನ ಒಂದು ವರ್ಷದಲ್ಲಿ 100 ಕಂಪೆನಿ ಇಲ್ಲಿಗೆ ಬರಬೇಕು ಎನ್ನುವುದು ನಮ್ಮ ಆಶಯ. ನಿಮ್ಮ ಯಶಸ್ಸಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ. ಹೆಚ್ಚಿನ ಮಾಹಿತಿಗಾಗಿ siliconbeachprogram.comಗೆ ಲಾಗಿನ್ ಆಗಿ.