×
Ad

ಯಂತ್ರಚಾಲಿತ ರೋಬೋಟಿಕ್ ಸ್ಕ್ಯಾವೆಂಜರ್ ಬ್ಯಾಂಡಿಕೂಟ್‌ಗೆ ಚಾಲನೆ ನೀಡಿದ ಆಯುಕ್ತ ಜುಬೀನ್

Update: 2025-07-25 11:06 IST

ರಾಯಚೂರು, ಜು.24: ಮಲಹೊರುವ ಪದ್ಧತಿಯನ್ನು ಕಾನೂನಿನ ಮೂಲಕ ನಿಷೇಧಿಸಿದ್ದರೂ ದೇಶದ ಅಲ್ಲಲ್ಲಿ ಕಾರ್ಮಿಕರನ್ನು ಮ್ಯಾನ್ ಹೋಲ್‌ಗಳನ್ನು ಸ್ವಚ್ಛಗೊಳಿಸಲಾಗುತ್ತಿತ್ತು ಹಾಗೂ ಮ್ಯಾನ್ ಹೋಲ್‌ಗಳಲ್ಲಿ ಅನೇಕರು ಸಾವನ್ನಪ್ಪಿರುವುದು ವರದಿಯಾಗುತ್ತಿದೆ. ಈ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ನಿವಾರಣೆ ಮಾಡುವ ನಿಟ್ಟಿನಲ್ಲಿ ರಾಯಚೂರು ಮಹಾನಗರ ಪಾಲಿಕೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಂಪೂರ್ಣ ಯಂತ್ರಚಾಲಿತ ರೋಬೋಟಿಕ್ ಸ್ಕ್ಯಾವೆಂಜರ್ ಬ್ಯಾಂಡಿಕೂಟ್ ಯಂತ್ರವನ್ನು ಬಳಸಲು ಮುಂದಾಗಿದೆ.

ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ರಾಯಚೂರನ್ನು ಕೊಳಕು ನಗರ ಎಂದು ಹೊರ ಜಿಲ್ಲೆಗಳಿಂದ ಬರುವ ಅನೇಕ ಅಧಿಕಾರಿಗಳು ಹೀಯಾಳಿಸಿದ್ದೂ ಇದೆ. ಈ ಅಪವಾದದಿಂದ ಮುಕ್ತಗೊಂಡು, ಸ್ಮಾರ್ಟ್ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ಹೊಸ ಪ್ರಯೋಗಕ್ಕೆ ಮುಂದಾಗಿ ಪಾಲಿಕೆಯ ಆಯುಕ್ತ ಜುಬೀನ್ ಮೊಹಪಾತ್ರ ಮತ್ತು ಪಾಲಿಕೆಯ ಪ್ರಭಾರ ಅಧ್ಯಕ್ಷ ಸಾಜೀದ್ ಸಮೀರ್ ರೋಬೋಟಿಕ್ ಸ್ಕ್ಯಾವೆಂಜರ್ ಬಳಕೆಗೆ ಚಾಲನೆ ನೀಡಿದರು.

ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಪಾಲಿಕೆಯ ಕಚೇರಿ ಮುಂದಿನ ರಸ್ತೆಯಲ್ಲಿನ ಮ್ಯಾನ್‌ಹೋಲ್‌ನ್ನು ನೂತನ ರೋಬೋಟಿಕ್ ಸ್ಕ್ಯಾವೆಂಜರ್ ಯಂತ್ರದ ಮೂಲಕ ಶುಚಿಗೊಳಿಸುವುದನ್ನು ಖುದ್ದು ವೀಕ್ಷಿಸುವ ಮೂಲಕ ಲೋಕಾರ್ಪಣೆಗೊಳಿಸಿರು.

ಬ್ಯಾಂಡಿಕೂಟ್ ಎಂಬ ರೋಬೊಟೆಕ್ ಸ್ಕ್ಯಾವೆಂಜರ್ ಕಾರ್ಮಿ ಕರ ಕೆಲಸವನ್ನು ಮಾಡುವುದಲ್ಲದೇ, ಮಾನವ ಪ್ರವೇಶವಿಲ್ಲದೆ ಮ್ಯಾನ್‌ಹೋಲ್‌ಗಳನ್ನು ನಿಖರವಾಗಿ ಮತ್ತು ಪರಿಣಾ ಮಕಾರಿಯಾಗಿ ಸ್ವಚ್ಛಗೊಳಿಸಲು ಅನುವು ಮಾಡಿಕೊಡುತ್ತದೆ. ಮ್ಯಾನ್ ಹೋಲ್ ಗಳನ್ನು ಸ್ವಚ್ಛಗೊಳಿಸುವಾಗ ಅನೇಕರು ಉಸಿರುಗಟ್ಟಿ, ಕಾರ್ಬನ್ ಮೋನಾಕ್ಸೈಡ್, ಮಿಥಿಲಿಯಂ ನಂತಹ ಅಪಾಯಕಾರಿ ಅನಿಲಗಳಿಂದ ಸಾವನ್ನಪ್ಪುತ್ತಾರೆ. ಇಂತಹ ದುರ್ಘಟನೆ ತಡೆಯಲು ಹಾಗೂ ವೈಜ್ಞಾನಿಕವಾಗಿ ಮಲ ಗುಂಡಿಗಳನ್ನು ಸ್ವಚ್ಛಗೊಳಿಸಿ ವಿಷಕಾರಿ ಅನಿಲ ಪತ್ತೆಹಚ್ಚಲು ವಿಷಕಾರಿ ಅನಿಲ ಸಂವೇಧಕಗಳು ಮತ್ತು ಕಡಿಮೆ-ಬೆಳಕಿನ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆಗಳಿಗಾಗಿ ಮಹತ್ವದ ಕ್ಯಾಮರಾಗಳನ್ನು ಈ ರೋಬೋಟ್ ಹೊಂದಿದೆ. ಜವಾಬ್ದಾರಿಯುತ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ನೈರ್ಮಲ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದೆ.

ಭಾರತೀಯ ಡೀಪ್‌ಟೆಕ್ ಕಂಪೆನಿ ಜೆನ್‌ರೋಬೋಟಿಕ್ಸ್ ಅಭಿವೃದ್ಧಿಪಡಿಸಿದ ಬ್ಯಾಂಡಿಕೂಟ್ ಯಂತ್ರವು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಮುಂದುವರಿದ ಮತ್ತು ಪರಿಣಾಮಕಾರಿಯಾದ ಯಂತ್ರವಾಗಿದೆ. ಮಾನವ ಚಲನೆಯನ್ನು ಅನುಕರಿಸುವ ಈ ರೋಬೋಟಿಕ್ ಯಂತ್ರವು ತೋಳು ಬಳಸಿ ಮಾನವರಂತೆ ಕಾರ್ಯ ನಿರ್ವಹಿಸುತ್ತದೆ. ಮೊಟ್ಟಮೊದಲ ಬಾರಿಗೆ ಬೆಂಗಳೂರಿನಲ್ಲಿ ಇಂತಹ ಯಂತ್ರ ಬಳಸಿದರೂ ಅದು ಸಂಪೂರ್ಣ ರೋಬೋಟೆಕ್ ಆಗಿರದೇ ಅನೇಕ ನ್ಯೂನತೆಗಳಿದ್ದವು. ಈ ಯಂತ್ರ ಸಂಪೂರ್ಣ ರೋಬೊಟಿಕ್ ಆಗಿದೆ ಎಂದು ಪಾಲಿಕೆಯ ಆಯುಕ್ತರು ತಿಳಿಸಿದರು.

ಮಹಾನಗರ ಪಾಲಿಕೆಯಲ್ಲಿ 35 ವಾರ್ಡ್‌ಗಳು ಬರುತ್ತವೆ. 45 ಲಕ್ಷ ವೆಚ್ಚದಲ್ಲಿ ಬ್ಯಾಂಡಿಕೂಟ್ ಯಂತ್ರಕ್ಕೆ ವೆಚ್ಚವಾಗಿದ್ದು, ಇದಕ್ಕೆ 6 ಕ್ಯಾಮರಾಗಳಿವೆ, ಡೀಸೆಲ್ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಮಲದ ಗುಂಡಿಗಳ ಒಳಹೊಕ್ಕು ಆಳಕ್ಕೆ ಇಳಿದು 10ರಿಂದ 15 ನಿಮಿಷಗಳ ಒಳಗೆ ಒಂದು ಗುಂಡಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಪ್ರತಿ ದಿನ ಗರಿಷ್ಠ 15 ನಿಮಿಷ ಬಳಸಿದರೂ ದಿನಕ್ಕೆ 12ರಿಂದ 17ಗುಂಡಿಗಳು ಸ್ವಚ್ಛಗೊಳಿಸಲಿದೆ. ಪಾಲಕೆಯಲ್ಲಿ ಸಾಕಷ್ಟು ಅನುದಾನವಿರದ ಕಾರಣ ಒಂದೇ ಯಂತ್ರ ತಂದಿದ್ದು ಇದರ ಕಾರ್ಯವೈಖರಿ ನೋಡಿ ಇನ್ನೂ ಎರಡು ಯಂತ್ರಗಳನ್ನು ಖರೀದಿಸಲಾಗುವುದು ಆ ಮೂಲಕ ಸ್ವಚ್ಛ ನಗರವನ್ನಾಗಿ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತೆ ಜುಬೀನ್ ಮೋಹಪಾತ್ರ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ,ರಾಯಚೂರು

contributor

Similar News