ಕಾಂಗ್ರೆಸ್‌ನಲ್ಲಿ ತಣಿಯದ ಅಸಮಾಧಾನ
ಕಾಂಗ್ರೆಸ್ ನಾಯಕರು ಹಾಗೂ ಹೈಕಮಾಂಡ್, ಸಂಪುಟ ವಿಸ್ತರಣೆ ಮಾಡುವಾಗ ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕಿತ್ತು. ಅದ್ಯಾಕೊ ಮೈಮರೆತರು. ಎಲ್ಲ ಜಾತಿ, ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಡಬೇಕಿತ್ತು. ಸಮರ್ಥರನ್ನು ಸಂಪುಟಕ್ಕೆ ನೇಮಕ ಮಾಡಬೇಕಿತ್ತು. ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರಿಗೆ ಕೊರತೆಯಿಲ್ಲ. ಸಚಿವರ ಪಟ್ಟಿಯನ್ನು ದಿಲ್ಲಿಗೆ ಕಳಿಸುವ ಮೊದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಮತ್ತಿತರರು ಬೆಂಗಳೂರಲ್ಲೇ ಕುಳಿತು ಕೊಡು -ಕೊಳ್ಳುವ ಮೂಲಕ ಸರ್ವಸಮ್ಮತ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್‌ಗೆ ಕಳಿಸಬಹುದಿತ್ತು. ಅದರೊಳಗೆ ಏನಾದರೂ ಅಲ್ಪಸ್ವಲ್ಪ ಬದಲಾವಣೆಗಳಿದ್ದರೆ ರಾಹುಲ್, ಸೋನಿಯಾ ಮಾಡುತ್ತಿದ್ದರು. ಹೀಗೆ ಮಾಡಿದ್ದರೆ ಗೋಜಲು, ಗೊಂದಲ ಇರುತ್ತಿರಲಿಲ್ಲ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ‘ಸಂಪುಟ ಸಂಕಟ’ ಎರಡು ತಿಂಗಳು ಕಳೆದರೂ ನಿವಾರಣೆಯಾಗಿಲ್ಲ. ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದು ಜೂನ್ 3ರಂದು. ಆರಂಭದಿಂದ ಗೊಂದಲ- ಗೋಜಲು. ಅಪಸ್ವರ- ಬಂಡಾಯ. ಮಂತ್ರಿ ಸ್ಥಾನ ಸಿಗಲಿಲ್ಲವೆಂದು ಹಲವರಿಗೆ ಅತೃಪ್ತಿ. ಮಂತ್ರಿ ಆದವರಿಗೂ ಸಂಪೂರ್ಣ ತೃಪ್ತಿ ಇಲ್ಲ. ಎಲ್ಲರನ್ನೂ ಸಂಭಾಳಿಸಿಕೊಂಡು ಮುಂದಿನ ಒಂದೂವರೆ ವರ್ಷ ಸರಕಾರ ಮುನ್ನಡೆಸುವುದು ತಂತಿಯ ಮೇಲಿನ ನಡಿಗೆಯೇ ಸರಿ.
ಡಿಕೆಶಿ ಮುಖ್ಯಮಂತ್ರಿ ಕನಸು ಸುಲಭವಾಗಿ ಕೈಗೂಡಿತು. ಪಕ್ಷದ ಹೈಕಮಾಂಡ್ ಕೇಳಿದ ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರು. ಇಷ್ಟು ಸುಲಭವಾಗಿ ಬಿಕ್ಕಟ್ಟು ಬಗೆಹರಿಯಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಒಂದು ಹಂತದಲ್ಲಿ, ‘‘ಐದು ವರ್ಷ ನಾನೇ ಮುಖ್ಯಮಂತ್ರಿ. ನನಗೆ ಬಹುಮತವಿದೆ’’ ಎಂದು ಸಿದ್ದರಾಮಯ್ಯ ಗುಡುಗಿದ್ದರು. ಅದೇ ರೀತಿ ಶಿವಕುಮಾರ್, ‘‘ನಾನು ಮುಖ್ಯಮಂತ್ರಿ ಆಗೇ ಆಗುತ್ತೇನೆ’’ ಎಂದು ಪಣ ತೊಟ್ಟಿದ್ದರು. ಇಬ್ಬರ ಹೇಳಿಕೆಗಳು ‘ಅಧಿಕಾರ ಹಸ್ತಾಂತರ ಸುಲಭವಲ್ಲ’ ಎಂಬ ಸುಳಿವು ನೀಡಿದ್ದಂತೂ ದಿಟ.
ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿ ಬಿಟ್ಟು ಉತ್ತಮ ಮೇಲ್ಪಂಕ್ತಿ ಹಾಕಿದ್ದಾರೆ. ಅಧಿಕಾರ ಬಿಟ್ಟಿರುವುದರಿಂದ ಅವರಿಗೆ ನೋವಾಗಿಲ್ಲ. ಆದರೆ, ರಾಜೀನಾಮೆ ಕೊಡಿಸಿದ ವಿಧಾನ ಬೇಸರ ತರಿಸಿದೆ. ರಾಜೀನಾಮೆಗೆ ಎರಡು ತಿಂಗಳ ಮೊದಲು ರಾಹುಲ್ ಗಾಂಧಿ, ‘‘ಮುಖ್ಯಮಂತ್ರಿ ಆಗಿ ನೀವೇ ಮುಂದುವರಿಯುವಿರಿ’’ ಎಂದು ಭರವಸೆ ನೀಡಿದ್ದರಂತೆ. ಎರಡು ತಿಂಗಳಲ್ಲಿ ಅವರ ಪ್ಲೇಟ್ ಬದಲಾಗಿದೆ. ‘‘ನೀವು ರಾಜೀನಾಮೆ ಕೊಡಬೇಕು’’ ಎಂದು ಮೇ ಅಂತ್ಯಕ್ಕೆ ಸೂಚಿಸಿದರು, ಈ ಬೆಳವಣಿಗೆ ನೋವು ಮಾಡಿತು ಎಂದು ಸಿದ್ದರಾಮಯ್ಯ ಆಪ್ತರ ಬಳಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ನಿಲುವು ದಿಢೀರ್ ಬದಲಾಗಲು ಕಾರಣವೂ ಇತ್ತು. ಸಿದ್ದರಾಮಯ್ಯನವರ ನಾಯಕತ್ವ ಬದಲಾವಣೆಗೆ ಆಗ್ರಹಿಸುವ ಮನವಿ ಪತ್ರ ಕೈಯಲಿತ್ತು. ಅದರಲ್ಲಿ ಹಲವು ಶಾಸಕರ ಸಹಿಗಳಿದ್ದವು. ಮಾಜಿ ಮುಖ್ಯಮಂತ್ರಿಗಳಿಗೆ ನಿಷ್ಠರಾಗಿದ್ದ ಸಚಿವ ಸತೀಶ್ ಜಾರಕಿಹೊಳಿ ಅದನ್ನು ಹೈಕಮಾಂಡ್‌ಗೆ ತಲುಪಿಸಿದ್ದರು ಎಂಬ ಸುದ್ದಿ ಕಾಂಗ್ರೆಸ್ ಪಕ್ಷದೊಳಗೆ ಹರಿದಾಡಿತು. ತಮ್ಮ ಪದಚ್ಯುತಿಗೆ ತೆರೆಮರೆಯಲ್ಲಿ ಏನು ನಡೆಯಿತು ಎಂಬುದನ್ನು ಮುಂದೊಂದು ದಿನ ಮಾಜಿ ಮುಖ್ಯಮಂತ್ರಿ ಬಹಿರಂಗಪಡಿಸಬಹುದು.
ತೀರಾ ಇತ್ತೀಚಿನವರೆಗೆ ಡಿಕೆಶಿ ಮತ್ತು ಸತೀಶ್ ನಡುವೆ ಉತ್ತಮ ಸ್ನೇಹ ಸಂಬಂಧ ಇರಲಿಲ್ಲ. ನಾಯಕತ್ವ ಕಿತ್ತಾಟದ ಸಮಯದಲ್ಲಿ ಬೆಳಗಾವಿ ರಾಜಕಾರಣಿಯೊಬ್ಬರು ಇಬ್ಬರನ್ನು ಒಂದು ಕಡೆ ಸೇರಿಸಿ, ರಾಜಿ ಸೂತ್ರ ಹೆಣೆದಿದ್ದರು. ಅದರಂತೆ, ತಮ್ಮನ್ನು ಬೆಂಬಲಿಸಿದರೆ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಭರವಸೆ ನೀಡಿದ್ದರು. ಎಲ್ಲವೂ ನಿರೀಕ್ಷೆಯಂತೆ ನಡೆಯಿತು. ಮುಖ್ಯಮಂತ್ರಿ ಬದಲಾದರು. ಈ ವಿಷಯ ಸಿದ್ದರಾಮಯ್ಯನವರ ಕಿವಿಗೂ ಬಿತ್ತು. ಮುಂದೆ ಆಗಿದ್ದೆಲ್ಲವೂ ಉಲ್ಟಾಪಲ್ಟ. ಸತೀಶ್‌ಗೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಪಟ್ಟ ಎರಡೂ ಸಿಗಲಿಲ್ಲ. ಸಿಕ್ಕಿದ್ದು ಸಂಪುಟ ದರ್ಜೆ ಸಚಿವ ಸ್ಥಾನ ಮಾತ್ರ.
ಹಾಗೆ ನೋಡಿದರೆ, ಸತೀಶ್ ಅವರನ್ನು ಹೀರೊ ಮಾಡಿದ್ದೇ ಸಿದ್ದರಾಮಯ್ಯ ಕ್ಯಾಂಪ್. ರಾಜ್ಯದೆಲ್ಲೆಡೆ ಇರುವ ವಾಲ್ಮೀಕಿ ಸಮಾಜದ ದೊಡ್ಡ ನಾಯಕ ಜಾರಕಿಹೊಳಿ. ಬಿಜೆಪಿಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಇದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸಚಿವ ನಾಗೇಂದ್ರ ವಿರುದ್ಧ ಸೋತಿದ್ದಾರೆ. ಸತೀಶ್‌ಗೆ ಸದ್ಯ ಸಮುದಾಯದಲ್ಲಿ ಪ್ರತಿಸ್ಪರ್ಧಿ ಯಾರೂ ಇಲ್ಲ. ಹೀಗಾಗಿ, ‘ಅಹಿಂದ’ ನಾಯಕರಾಗಿ ಗುರುತಿಸಿಕೊಳ್ಳಲು ಹೊರಟಿದ್ದಾರೆ. ಅದಕ್ಕೆ ನೀರೆರೆದಿದ್ದೂ ಸಿದ್ದರಾಮಯ್ಯ. ಬೆಳಗಾವಿ ಸಮಾವೇಶವೊಂದರಲ್ಲಿ, ‘‘ನನ್ನ ತಂದೆಯ ಬಳಿಕ ಸತೀಶ್ ಅವರೇ ಅಹಿಂದ ವರ್ಗದ ಉತ್ತರಾಧಿಕಾರಿ’’ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಘೋಷಿಸಿದರು. ‘‘2028ಕ್ಕೆ ನಾನೂ ಮುಖ್ಯಮಂತ್ರಿ ಅಭ್ಯರ್ಥಿ’’ ಎಂದು ಹೇಳಿಕೊಂಡಿದ್ದ ಸತೀಶ್ ಅವರಿಗೆ ಇದರಿಂದ ಲಾಭವೇ ಆಯಿತು. ಅವರ ಹಾದಿಗೆ ಈಗ ಸಿದ್ದರಾಮಯ್ಯ ಅಡ್ಡಿ ಆಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಿರಿಯ ನಾಯಕ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಬಿ.ಕೆ. ಹರಿಪ್ರಸಾದ್ ಪಾಲಾಗಿದೆ. ಹರಿ ಅವರಿಗೆ ಬೆಂಬಲವಾಗಿ ನಿಂತಿದ್ದೇ ಮಾಜಿ ಮುಖ್ಯಮಂತ್ರಿ. ರಾಜಕಾರಣದಲ್ಲಿ ಸಮೀಕರಣಗಳು ಹೇಗೆ ಬದಲಾಗುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೇ. ‘ಕೈ’ ನಾಯಕರ ಕಿತ್ತಾಟ ಅರ್ಥವಾಗಬೇಕಾದರೆ ಪಕ್ಷದೊಳಗಿನ ಆಳ-ಅಗಲ ತಿಳಿದಿರಬೇಕು. ಇಲ್ಲದಿದ್ದರೆ ಏನೂ ಗೊತ್ತಾಗುವುದಿಲ್ಲ.
ಡಿಕೆಶಿ ಮತ್ತು ಅವರ ಸಂಪುಟದ ಸಚಿವರು ಪ್ರಮಾಣ ಸ್ವೀಕರಿಸುವವರೆಗೆ ಎಲ್ಲವೂ ಸರಿಯಿತ್ತು. ಖಾತೆ ಹಂಚಿಕೆ ಆಗುತ್ತಿದ್ದಂತೆ ಅಸಮಾಧಾನ ಸ್ಫೋಟಿಸಿತು. ಮೊದಲ ಕಂತಿನಲ್ಲಿ ಸಂಪುಟಕ್ಕೆ ಸೇರಿದ ರಾಮಲಿಂಗಾ ರೆಡ್ಡಿ ಹಾಗೂ ಕೃಷ್ಣ ಬೈರೇಗೌಡ ಇಬ್ಬರಿಗೂ ಬಿಡಿಎ, ಬಿಎಂಆರ್‌ಡಿಎ ಒಳಗೊಂಡು ಬೆಂಗಳೂರು ಅಭಿವೃದ್ಧಿ ಖಾತೆ ಬೇಕಿತ್ತು. ‘‘ಈ ಖಾತೆ ಕೊಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ’’ ಎಂದು ಬೇಸರಗೊಂಡು ರೆಡ್ಡಿ ರಾಜೀನಾಮೆಗೆ ಮುಂದಾಗಿದ್ದರು. ಕೃಷ್ಣ ಬೈರೇಗೌಡ ದಿಲ್ಲಿಗೇ ದೌಡಾಯಿಸಿದ್ದರು. ಕೊನೆಗೂ ಅವರನ್ನು ಸಮಾಧಾನಪಡಿಸಿ ಸಮಸ್ಯೆ ಪರಿಹರಿಸಲಾಯಿತು.
ಈ ತಿಂಗಳ 3ರಂದು ನಡೆದ ಎರಡನೇ ಹಂತದ ಸಂಪುಟ ವಿಸ್ತರಣೆಯ ಬಳಿಕ ಅಸಮಾಧಾನ ಇನ್ನಷ್ಟು ಹೆಚ್ಚಾಗಿದೆ. ಮೊದಲೇ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಿದೆ. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಅನೇಕ ಹಿರಿಯ ನಾಯಕರು ಕೆಂಡಾಮಂಡಲವಾಗಿದ್ದಾರೆ. ಡಿಕೆಶಿ ಅವರಿಗೆ ಜೇನುಗೂಡಿಗೆ ಕೈ ಹಾಕಿದ ಅನುಭವವಾಗಿರಬೇಕು. ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಮಯದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪ ಎದುರಿಸಿದ್ದ ಝಮೀರ್ ಅಹಮದ್ ಖಾನ್ ಅವರನ್ನು ಪುನಃ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡ ಕ್ರಮವನ್ನು ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಮರ್ಥಿಸಿಕೊಳ್ಳಲಾಗುತ್ತಿಲ್ಲ. ‘ಝಮೀರ್ ಅವರಿಗೆ ಸಚಿವ ಸ್ಥಾನ ಕೊಡುವುದಾದರೆ ಕೆ.ಎನ್. ರಾಜಣ್ಣನವರಿಗೆ ಏಕಿಲ್ಲ. ಅವರು ಮಾಡಿದ ಅಪರಾಧವೇನು?’ ಎಂದು ಅನೇಕರು ಕೇಳುತ್ತಿದ್ದಾರೆ. ಸಮರ್ಥರಾಗಿದ್ದರೂ ಕೆಲವು ಹಿರಿಯರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿರುವ ಹಿಂದಿನ ತರ್ಕವನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ ಭಾಗಿಯಾದ ಆರೋಪಕ್ಕೆ ಒಳಗಾಗಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಗೇಂದ್ರ ಅವರಿಗೆ ಪುನಃ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದನ್ನು ಅನೇಕರು ಕಟುವಾಗಿ ಟೀಕಿಸುತ್ತಿದ್ದಾರೆ. ಗುರುವಾರದಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷ ಬಿಜೆಪಿ ಗದ್ದಲ ಎಬ್ಬಿಸುವುದಾಗಿ ಪ್ರಕಟಿಸಿವೆ. ಇದರಿಂದ ಸರಕಾರ ಮುಜುಗರಕ್ಕೆ ಸಿಕ್ಕಿಕೊಳ್ಳಬಹುದು. ನಾಗೇಂದ್ರ ಅವರ ವಿರುದ್ಧ ಇರುವ ಪ್ರಕರಣಗಳು ಇತ್ಯರ್ಥವಾಗಿಲ್ಲ. ಅವಸರ ಬಿದ್ದು ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ಅದರ ಅಗತ್ಯವಿರಲಿಲ್ಲ. ಶಿವಕುಮಾರ್ ಸ್ಥಿತಿ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತಾಗಿದೆ.
ಕಾಂಗ್ರೆಸ್ ನಾಯಕರು ಹಾಗೂ ಹೈಕಮಾಂಡ್, ಸಂಪುಟ ವಿಸ್ತರಣೆ ಮಾಡುವಾಗ ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕಿತ್ತು. ಅದ್ಯಾಕೊ ಮೈಮರೆತರು. ಎಲ್ಲ ಜಾತಿ, ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಡಬೇಕಿತ್ತು. ಸಮರ್ಥರನ್ನು ಸಂಪುಟಕ್ಕೆ ನೇಮಕ ಮಾಡಬೇಕಿತ್ತು. ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರಿಗೆ ಕೊರತೆಯಿಲ್ಲ. ಸಚಿವರ ಪಟ್ಟಿಯನ್ನು ದಿಲ್ಲಿಗೆ ಕಳಿಸುವ ಮೊದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಮತ್ತಿತರರು ಬೆಂಗಳೂರಲ್ಲೇ ಕುಳಿತು ಕೊಡು-ಕೊಳ್ಳುವ ಮೂಲಕ ಸರ್ವಸಮ್ಮತ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್‌ಗೆ ಕಳಿಸಬಹುದಿತ್ತು. ಅದರೊಳಗೆ ಏನಾದರೂ ಅಲ್ಪಸ್ವಲ್ಪ ಬದಲಾವಣೆಗಳಿದ್ದರೆ ರಾಹುಲ್, ಸೋನಿಯಾ ಮಾಡುತ್ತಿದ್ದರು. ಹೀಗೆ ಮಾಡಿದ್ದರೆ ಗೋಜಲು, ಗೊಂದಲ ಇರುತ್ತಿರಲಿಲ್ಲ. ಬಹುತೇಕರು ಒಪ್ಪಿಕೊಂಡು ಸುಮ್ಮನಾಗುತ್ತಿದ್ದರು. ದೊಡ್ಡ ಮಟ್ಟದ ಅತೃಪ್ತಿ ಅಸಮಾಧಾನಗಳಿಗೆ ಆಸ್ಪದವಿರುತ್ತಿರಲಿಲ್ಲ.
ಸಚಿವರ ನೇಮಕಕ್ಕೆ ಸಂಬಂಧಿಸಿದಂತೆ ಏನಾದರೂ ಮಾನದಂಡ ನಿಗದಿಪಡಿಸಬೇಕಿತ್ತು. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಸಚಿವರ ಕಾರ್ಯಕ್ಷಮತೆ ಒರೆಗೆ ಹಚ್ಚಬೇಕಿತ್ತು. ಅವರೊಳಗೇ ಅರ್ಹರನ್ನು ನೇಮಿಸಬಹುದಿತ್ತು. ಇಲ್ಲವೇ, ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಅಧಿಕಾರ ಹಂಚಿಕೆಯಾದಂತೆ, ಹಿಂದಿನ ಸರಕಾರದಲ್ಲಿದ್ದ ಎಲ್ಲರನ್ನು ಬಿಟ್ಟು ಹೊಸಬರಿಗೆ ಅವಕಾಶ ಕೊಡಬಹುದಿತ್ತು. ಅದಾಗಿದ್ದರೂ ಅತೃಪ್ತಿ-ಬಂಡಾಯ ಇರುತ್ತಿರಲಿಲ್ಲ. ಈ ಅಂಕಣದಲ್ಲಿ ಕಳೆದ ವಾರವೂ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು.
ಡಿಕೆಶಿ ಸಂಪುಟದ ಎರಡನೇ ಕಂತಿನ ವಿಸ್ತರಣೆಯಿಂದ ಯಾರಿಗೂ ಸಮಾಧಾನವಾದಂತಿಲ್ಲ. ಬೇರೆಯವರು ಬಿಡಿ, ಸ್ವತಃ ಶಿವಕುಮಾರ್ ಅವರಿಗೇ ತೃಪ್ತಿಯಿದ್ದಂತಿಲ್ಲ. ಸಂಪುಟ ರಚನೆ, ವಿಸ್ತರಣೆ, ಪುನರ‌್ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಆದರೆ, ಅವರು ಹೇಳಿದ ಎಲ್ಲರಿಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ. ಇನ್ನು ಸಿದ್ದರಾಮಯ್ಯ ಅವರಿಗೂ ಈ ವಿಸ್ತರಣೆ ಸಿಟ್ಟು ತರಿಸಿದೆ. ಅವರ ಕೆಲ ಆಪ್ತರನ್ನು ಸಂಪುಟದಿಂದ ಹೊರಗಿಡಲಾಗಿದೆ. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರನ್ನು ಪರಿಗಣಿಸಿಲ್ಲ. ಶಿವಣ್ಣನವರ ಕುರುಬ ಸಮಾಜದವರು. ಮಾಜಿ ಮುಖ್ಯಮಂತ್ರಿಗೆ ಆಪ್ತರು. ಬೇಡ, ಬೇಡವೆಂದರೂ ಇದೇ ಸಮಾಜದ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿ ಮುಜುಗರ ಮಾಡಲಾಯಿತು. ಸಿದ್ದರಾಮಯ್ಯ ಗುಟುರು ಹಾಕಿದ್ದರಿಂದ ಕೊನೆ ಗಳಿಗೆಯಲ್ಲಿ ತಪ್ಪಿಸಲಾಯಿತು. ಈ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗಲಿಲ್ಲ. ಸಿದ್ದರಾಮಯ್ಯನವರ ಆಪ್ತ ಮೂಲಗಳ ಪ್ರಕಾರ, ಅವರನ್ನು ಸಮಾಧಾನಪಡಿಸಲು ಸುರ್ಜೆವಾಲ ಮತ್ತು ಕೆ.ಸಿ. ವೇಣುಗೋಪಾಲ್ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಅವರ ಸಂಪರ್ಕಕ್ಕೂ ಸಿಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಮೌನಕ್ಕೆ ಶರಣಾಗಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಮಾತನಾಡುತ್ತಿಲ್ಲ.
ಶಿವಕುಮಾರ್ ಸಂಪುಟದಲ್ಲಿ ಎಲ್ಲ ಜಾತಿ, ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಮೇಲ್ನೋಟಕ್ಕೆ ಅದು ಒಕ್ಕಲಿಗರು, ಲಿಂಗಾಯತರ ಸಂಪುಟದ ರೀತಿ ಕಾಣುತ್ತಿದೆ. ಸಣ್ಣಪುಟ್ಟ ಜಾತಿಗಳನ್ನು ಲೆಕ್ಕಕ್ಕೇ ಇಟ್ಟಿಲ್ಲ. ತೋರಿಸುವುದಕ್ಕೂ ಸಂಪುಟದಲ್ಲಿ ಒಬ್ಬ ಮಹಿಳೆಯೂ ಇಲ್ಲ. ಸದ್ಯ ಖಾಲಿ ಇರುವುದು ಒಂದು ಸ್ಥಾನ. ಅದು ಮಹಿಳೆಗಾಗಿ ಉಳಿಸಲಾಗಿದೆ. ಎರಡನೇ ಕಂತಿನಲ್ಲಿ ಸಚಿವರಾದವರಿಗೆ ಖಾತೆ ಹಂಚಿದ ಮೇಲೆ ಅಸಮಾಧಾನ ಯಾವ ಹಂತ ಮುಟ್ಟುವುದೋ?
ವಿಧಾನಮಂಡಲ ಅಧಿವೇಶನದ ಬಳಿಕ ಸಂಪುಟದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಏನು ಬದಲಾವಣೆ ಆಗುವುದೋ ನೋಡಬೇಕು.ಮಳೆಗಾಲದ ಅಧಿವೇಶನ ಡಿಕೆಶಿ ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಬಹುದು. ಆಡಳಿತ ಪಕ್ಷಕ್ಕಿರುವ ಒಂದು ಸಮಾಧಾವೆಂದರೆ, ವಿರೋಧ ಪಕ್ಷ ಬಿಜೆಪಿ ದುರ್ಬಲ ಆಗಿರುವುದು.
ಹಿರಿಯ ಲೇಖಕ, ಪತ್ರಕರ್ತ, ರಾಜಕೀಯ ವಿಶ್ಲೇಷಕ ಹೊನಕೆರೆ ನಂಜುಂಡೇಗೌಡ ಇವರ ‘ನೆಲದನಿ’ ಅಂಕಣ ಪ್ರತೀ ಗುರುವಾರ ಪ್ರಕಟಗೊಳ್ಳುತ್ತದೆ.
-ಸಂಪಾದಕ