Sandur | ಕುರೇಕುಪ್ಪ ಪುರಸಭೆಯಾದರೂ ಸೌಲಭ್ಯ ನಗಣ್ಯ

ಜನರಿಗೆ ನಿತ್ಯ ಪರದಾಟ: ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಒತ್ತಾಯ

Update: 2026-08-13 12:32 IST

ಸಂಡೂರು: ಪುರಸಭೆಯಾಗಿ ಮೇಲ್ದರ್ಜೆಗೇರಿ ಬರೋಬ್ಬರಿ 11 ವರ್ಷ ಕಳೆದರೂ ಕುರೇಕುಪ್ಪ ಪಟ್ಟಣದ ಜನರಿಗೆ ಸರಕಾರಿ ಆರೋಗ್ಯ ಸೇವೆ ಇನ್ನೂ ಕೈಗೆಟುಕದ ಸ್ಥಿತಿಯಲ್ಲಿದೆ. ಜನಸಂಖ್ಯೆ ತಕ್ಕಂತೆ ಆರೋಗ್ಯ ಸೇವೆ ನೀಡದ ಸರಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡವರು, ಕಟ್ಟಡ ಕಾರ್ಮಿಕರು, ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಸಾವಿರಾರು ಜನರು ಅನಾರೋಗ್ಯಕ್ಕೆ ಒಳಗಾದಾಗ ಚಿಕಿತ್ಸೆಗಾಗಿ ದೂರದ ಸರಕಾರಿ ಆರೋಗ್ಯ ಕೇಂದ್ರಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಖಾಸಗಿ ಆಸ್ಪತ್ರೆಗಳ ದುಬಾರಿ ಚಿಕಿತ್ಸೆ :

ಕುರೇಕುಪ್ಪ ಪಟ್ಟಣ ಹಾಗೂ ಸುತ್ತಮುತ್ತಲಿನ ಜನರಿಗೆ ಅನಾರೋಗ್ಯ ಉಂಟಾದಾಗ ದುಬಾರಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ಆರ್ಥಿಕ ಹೊರೆಯಾಗಿದೆ. ಮತ್ತೊಂದೆಡೆ, ಸರಕಾರಿ ಆರೋಗ್ಯ ಸೇವೆ ಪಡೆಯಲು ತೋರಣಗಲ್ಲಿನ ಸಮುದಾಯ ಆರೋಗ್ಯ ಕೇಂದ್ರದತ್ತ ತೆರಳುತ್ತಾರೆ. ಇದರಿಂದ ಪ್ರಯಾಣದ ವೆಚ್ಚ, ಸಮಯದ ವ್ಯಯ ಹಾಗೂ ತುರ್ತು ಸಂದರ್ಭಗಳಲ್ಲಿ ಸಮಸ್ಯೆಗಳು ಬಾಧಿಸುತ್ತಿವೆ.

ಗ್ರಾಪಂ ಪುರಸಭೆ ಮೇಲ್ದರ್ಜೆಗೇರಿದರೂ ಸೌಲಭ್ಯ ಮರೀಚಿಕೆ :

ಕುರೇಕುಪ್ಪ ಗ್ರಾಪಂ ಪುರಸಭೆಯಾಗಿ ಮೇಲ್ದರ್ಜೆಗೇರಿಸಿ ಸುಮಾರು 11 ವರ್ಷವಾಗಿವೆ. ಈ ಅವಧಿಯಲ್ಲಿ ಪಟ್ಟಣದ ಜನಸಂಖ್ಯೆ ಹಾಗೂ ವಸತಿ ಪ್ರದೇಶಗಳು ಗಣನೀಯವಾಗಿ ವಿಸ್ತರಿಸಿವೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಆಡಳಿತ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕುರೇಕುಪ್ಪ ಪುರಸಭೆ ಕೇಂದ್ರ ಸ್ಥಾನದಲ್ಲಿಯೇ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿ, ವೈದ್ಯರು, ಶುಶ್ರೂಷಕರು ಹಾಗೂ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಜನಸಂಖ್ಯೆ ಹಾಗೂ ಆರೋಗ್ಯದ ಅಗತ್ಯವನ್ನು ಪರಿಗಣಿಸಿ ಸರಕಾರ ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣಕಾರರ ಫೆಡರೇಶನ್, ರಾಜ್ಯ ಪ್ರಾಂತ ರೈತ ಸಂಘ, ಒಂಟಿ ಮಹಿಳೆಯರ ಸಂರಕ್ಷಣಾ ಸಂಘಟನೆ, ನಾಗರಿಕರು ಆಗ್ರಹಿಸಿದ್ದಾರೆ.

ಕುರೇಕುಪ್ಪ ಪುರಸಭೆಯ ಸರ್ವೇ ನಂಬರ್ 35/2ರಲ್ಲಿ 0.85 ಸೆಂಟ್ಸ್ ಖಾಲಿ ಜಾಗವನ್ನು ಕಂದಾಯ ಇಲಾಖೆ ಈಗಾಗಲೇ ಸರ್ವೇ ನಡೆಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಮೀಸಲಿಟ್ಟಿದೆ. ಜಿಪಂ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಜಾಗ ಯೋಗ್ಯವಾಗಿದೆ ಎಂದು ಒಪ್ಪಿಗೆ ಸೂಚಿಸಿದ್ದಾರೆ. ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಆದಷ್ಟು ಬೇಗನೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿ ಆರಂಭವಾಗಲಿದೆ.

-ಅರುಣ್ ಕುಮಾರ್, ಮುಖ್ಯಾಧಿಕಾರಿ, ಕುರೇಕುಪ್ಪ ಪುರಸಭೆ

ಜಿಂದಾಲ್ ಸೇರಿದಂತೆ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾದ ಬಳಿಕ ಈ ಭಾಗದಲ್ಲಿ ಶ್ವಾಸಕೋಶ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿವೆ ಎಂಬ ಆತಂಕ ಜನರಲ್ಲಿ ಮೂಡಿದೆ. ಕೆಮ್ಮು, ದಮ್ಮು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಜನರು ಬಳಲುತ್ತಿರುವ ಸಂದರ್ಭದಲ್ಲಿ, ಸರಕಾರಿ ಆರೋಗ್ಯ ಕೇಂದ್ರ ಇಲ್ಲದಿರುವುದು ಅತ್ಯಂತ ಬೇಸರ ತರಿಸಿದೆ. ಈ ಕುರಿತು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ. ಇನ್ನಾದರೂ ಸರಕಾರವು ಜನರ ಆರೋಗ್ಯದ ದೃಷ್ಟಿಯಿಂದ ಕುರೇಕುಪ್ಪದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತ್ವರಿತವಾಗಿ ಆರಂಭಿಸಬೇಕು.

-ಹೊನ್ನೂರು ಸ್ವಾಮಿ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಕ್ಷಣಾ ವೇದಿಕೆ, ಕುರೇಕುಪ್ಪ ಪುರಸಭೆ ಘಟಕ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಮಹಮ್ಮದ್ ಖಾಸೀಂ

contributor

Similar News