ಆಫ್ರಿಕನ್ ಬುಡಕಟ್ಟು ಮೂಲದ ‘ಸಿದ್ದಿ’ಗಳು
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಸಿದ್ದಿಗಳಿಗೆ ಯಾವುದರಲ್ಲೂ ಸಮರ್ಪಕ ಪ್ರಾತಿನಿಧ್ಯ ಸಿಕ್ಕಿಲ್ಲ. ಬಹಳಷ್ಟು ನಿರುದ್ಯೋಗ, ಬಡತನ, ಅನಾರೋಗ್ಯ ಮತ್ತು ಹಸಿವುಗಳಿಂದ ಇವರು ಇನ್ನೂ ಹೊರಬರಲಾಗಿಲ್ಲ. ಇವರು ಕಾಡನ್ನೇ ಆಶ್ರಯಿಸಿ ಬದುಕುತ್ತಿರುವುದರಿಂದ ಕನಿಷ್ಠ ಇವರಿಗೆ ಕಾಡಿನ ರಕ್ಷಣೆಯ ಗಾರ್ಡ್‌ಗಳನ್ನಾಗಿ, ಸಫಾರಿಗಳ ಗೈಡ್ ಗಳನ್ನಾಗಿ, ವಾಹನ ಚಾಲಕರನ್ನಾಗಿ ಸರಕಾರಿ ಕೆಲಸ ನೀಡಬಹುದಿತ್ತು. ಆದರೆ ಸರಕಾರದ ಕಣ್ಣಿಗೆ ಇಲ್ಲಿನ ದಲಿತರು, ಆದಿವಾಸಿಗಳು, ಅಲೆಮಾರಿಗಳೇ ಕಾಣಲ್ಲ ಎಂಬ ಪರಿಸ್ಥಿತಿಯಲ್ಲಿ ಎಂದೋ, ಎಲ್ಲಿಂದಲೋ ಬಂದ ಈ ಕಪ್ಪು ಜನರು ಹೇಗೆ ಕಾಣಿಯಾರು..?
ಹಿಂದುಳಿದ ವರ್ಗಗಳ ಆಯೋಗದ ಬಹಿರಂಗ ವಿಚಾರಣೆ ಸಂದರ್ಭದಲ್ಲಿ ನೀಗ್ರೋ ಹೆಣ್ಣುಮಗಳೊಬ್ಬಳು ಆಯೋಗದ ಮುಂದೆ ಉತ್ತರಕನ್ನಡ ಕಡೆಯ ‘ಧನಗಾರ್ ಗೌಳಿ’ ಸಮುದಾಯದ ಪರವಾಗಿ ಸುಂದರ ಇಂಗ್ಲಿಷ್‌ನಲ್ಲಿ ವಿಚಾರ ಮಂಡಿಸಿದಳು. ನಾನು ಕುತೂಹಲಗೊಂಡು ಆಕೆಯ ಹಿನ್ನೆಲೆಯ ಕುರಿತು ಕೇಳಿದೆ, ಆಕೆ ಒಂದು ಎನ್.ಜಿ.ಒ. ಮೂಲಕ ಇಂತಹ ಬುಡಕಟ್ಟುಗಳ ಜತೆ ಕೆಲಸ ಮಾಡುತ್ತಿದ್ದಳು. ಆಯೋಗದ ವಿಚಾರಣೆ ನಂತರ ಆಕೆಯ ಸಮುದಾಯವಾದ ‘ಸಿದ್ದಿ’ಗಳ ಕುರಿತು ಕೇಳತೊಡಗಿದೆ. ಆ ಹೆಣ್ಣುಮಗಳ ಮೂಲಕ ನನಗೆ ಸಿದ್ದಿಗಳ ಲೋಕ ಪರಿಚಯವಾಗತೊಡಗಿತು.
ಸಿದ್ದಿಗಳ ಬದುಕನ್ನು ಹುಡುಕುತ್ತಾ ಉತ್ತರ ಕನ್ನಡದ ಯಲ್ಲಾಪುರ, ಹಳಿಯಾಳ, ಜೋಯ್ಡಾ, ದಾಂಡೇಲಿ ಮುಂತಾದ ಕಡೆ ಸಾಕಷ್ಟು ಸಲ ಓಡಾಡಿದೆ..
ಸಿದ್ದಿಗಳದು ಕರ್ನಾಟಕದ ಒಂದು ವಿಶೇಷ ಬುಡಕಟ್ಟು ಸಮುದಾಯ. ಇವರ ಬೇರು ಆಫ್ರಿಕಾದಲ್ಲಿದೆ. ಸುಮಾರು 300-400 ವರ್ಷಗಳ ಹಿಂದೆ ಪೋರ್ಚುಗೀಸರು, ಅರಬ್ ವ್ಯಾಪಾರಿಗಳು ಮತ್ತು ಬಹಮನಿ, ವಿಜಯನಗರ ರಾಜರ ಸೇನೆಯ ಗುಲಾಮರಾಗಿ ಆಫ್ರಿಕಾದಿಂದ ಕರೆತಂದ ಕಪ್ಪು ಜನರು ಇವರು. ಮುಖ್ಯವಾಗಿ ಈಸ್ಟ್ ಆಫ್ರಿಕಾ, ಕೀನ್ಯಾ, ತಾಂಜಾನಿಯಾ, ಇಥಿಯೋಪಿಯಾ ಕಡೆಯಿಂದ ಈ ಸಮುದಾಯ ಬಂದಿರಬಹುದೆಂದು ಮಾನವಶಾಸ್ತ್ರಜ್ಜರು ಅಭಿಪ್ರಾಯ ಪಡುತ್ತಾರೆ. ‘ಸಿದ್ದಿ’ ಎಂಬುದು ಅರೇಬಿಕ್ ಪದವಾಗಿದ್ದು ಇದರ ಅರ್ಥ ‘ಸಾಹಿಬ್’ ಅಥವಾ ‘ಯಜಮಾನ’. ಹಿಂದೂ, ಕ್ರೈಸ್ತ, ಮುಸ್ಲಿಮ್ ಮೂರೂ ಮತಗಳಲ್ಲಿ ಸಿದ್ದಿ ಜನಾಂಗ ಹಂಚಿಹೋಗಿದ್ದು, ಈ ಮೂರು ಧರ್ಮಗಳನ್ನು ಪಾಲಿಸುವವರಾಗಿದ್ದಾರೆ. ಕನ್ನಡ, ಕೊಂಕಣಿ, ಮರಾಠಿ ಭಾಷೆಗಳನ್ನು ಮಾತನಾಡುವ ಸಿದ್ದಿಗಳು ಬಹುತೇಕ ಉತ್ತರಕನ್ನಡ ಜಿಲ್ಲೆಯಲ್ಲಿ ಕನ್ನಡ, ಕೊಂಕಣಿ ಮಿಶ್ರಿತ ‘ಸಿದ್ದಿಕನ್ನಡ’ ಮಾತನಾಡುತ್ತಾರೆ.
ಕರ್ನಾಟಕದಲ್ಲಿ ಮೂರು ಮುಖ್ಯ ಸಿದ್ದಿ ವಸಾಹತುಗಳಿವೆ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಜೋಯ್ಡಾ ಅತೀ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳು, ದಾಂಡೇಲಿ ಬಳಿಯೂ ಸಿದ್ದಿ ಜನಾಂಗ ಇದೆ.
ಬೆಳಗಾವಿಯ ಖಾನಾಪುರದ ಕಾಡಿನ ಮಧ್ಯೆ ಕೆಲ ಗ್ರಾಮಗಳಲ್ಲಿ ನೆಲೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ, ಕುಂದಾಪುರದ ಕಡೆ ಕೆಲವರಿದ್ದಾರೆ.ಒಟ್ಟಾರೆ ಕರ್ನಾಟಕದಲ್ಲಿ ಅಂದಾಜು 50,000 ಸಿದ್ದಿಗಳ ಜನಸಂಖ್ಯೆ ಇದೆ.
ಕರ್ನಾಟಕದಲ್ಲಿ ಎಸ್.ಟಿ. ಪಟ್ಟಿಯಲ್ಲಿರುವ ಸಿದ್ದಿಗಳ ಸಾಂಪ್ರದಾಯಿಕ ವೃತ್ತಿ ಕೃಷಿ ಕೂಲಿ, ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸುವುದು, ಕೃಷಿ, ಮೀನುಗಾರಿಕೆ. ಈಚೀಚೆಗೆ ಸೇನೆ, ಪೊಲೀಸ್, ಸರಕಾರಿ ಕೆಲಸಕ್ಕೂ ಹೋಗುತ್ತಿದ್ದಾರೆ
ಇವರು ನುಡಿಸುವ ‘ಧಮಾಲ್’ ಪ್ರಪಂಚದಲ್ಲೇ ಪ್ರಸಿದ್ಧಿಯಾದ ಆಫ್ರಿಕನ್ ಡ್ರಮ್ ನೃತ್ಯ. ಯಲ್ಲಾಪುರದ ಸಿದ್ದಿಗಳು ಇದಕ್ಕೆ ಅತ್ಯಂತ ಪ್ರಖ್ಯಾತರಾಗಿದ್ದಾರೆ. ಉರೂಸ್, ಈದ್, ದೀಪಾವಳಿ, ಕ್ರಿಸ್ಮಸ್ ಎಲ್ಲವನ್ನೂ ಸಂಭ್ರಮದಿಂದ ಆಚರಿಸುತ್ತಾರೆ
ಪೋರ್ಚುಗೀಸರು ಭಾರತಕ್ಕೆ ಸುಮಾರು ಐದು ನೂರು ವರ್ಷಗಳ ಹಿಂದೆ ಹಿಡಿದು ತಂದು ಮಾರಾಟ ಮಾಡಿದ ನೀಗ್ರೋ ಜನಾಂಗವೇ ಈ ಸಿದ್ದಿಯರು. ಆಫ್ರಿಕಾದ ನಿಗೂಢ ಪ್ರದೇಶದಿಂದ ಅಪರಿಚಿತ ದೇಶವೊಂದಕ್ಕೆ ಬಂದ ಈ ಜನಾಂಗ ಭಾರತದ ಎಲ್ಲಾ ಬದಲಾದ ಸರ್ವಾಧಿಕಾರಿಗಳ ಆಡಳಿತಕ್ಕೆ ಹಸ್ತಾಂತರಗೊಂಡು ಎಲ್ಲಾ ಶೋಷಣೆಗಳಿಗೂ ಬಲಿಯಾದವರು. ಬಹುತೇಕ ಗುಲಾಮರಾಗೇ ತಲೆತಲಾಂತರಗಳನ್ನು ಕಳೆದವರು. ತಮ್ಮದೇ ಚಹರೆಗಳುಳ್ಳ ಸಂಸ್ಕೃತಿಗಳನ್ನು ಕಟ್ಟಿಕೊಳ್ಳಲಾಗಲೇ ಇಲ್ಲ. ಇದರ ಪರಿಣಾಮ ತಮ್ಮದೇ ಆದ ಅಸ್ಮಿತೆಯನ್ನು ಉಳಿಸಿಕೊಳ್ಳಲೂ ಆಗಲಿಲ್ಲ. ಆಫ್ರಿಕಾದ ಪೂರ್ವ ಕರಾವಳಿಯ ಜಂಬೇಸಿ ನದಿಯ ಆಸುಪಾಸಿನಿಂದ ಇವರನ್ನು ಹಿಡಿದು ತರಲಾಯಿತು ಎಂಬ ಇತಿಹಾಸವಿದೆ. ಶಿದಿ, ಶಿದಿಮಾ, ಕಾಫಿರ, ಮೂರ್ ಎಂಬ ಹೆಸರುಗಳಿಂದಲೂ ಇವರನ್ನು ಕರೆಯಲಾಗುತ್ತಿತ್ತು. ಕಡುಕಪ್ಪು ಬಣ್ಣ, ಎತ್ತರದ ನಿಲುವು, ದಪ್ಪ ತುಟಿ, ಗುಂಗುರು ಕೂದಲು ಇವರ ದೈಹಿಕ ಚಹರೆ. ಹಿಂದೂ, ಮುಸ್ಲಿಮ್, ಕ್ರೈಸ್ತ ಧರ್ಮಗಳನ್ನು ಅನುಸರಿಸುವ ಸಿದ್ದಿಗಳನ್ನು ಭಾರತೀಯ ಚಹರೆಯವರು ಮದುವೆಯಾಗಿರುವ ಉದಾಹರಣೆಗಳು ಕಡಿಮೆ. ಭಾರತೀಯರಲ್ಲಿ ನೀಗ್ರೋ ಚಹರೆಯವರ ಬಗ್ಗೆ ಇರುವ ಅಸಡ್ಡೆ ಮತ್ತು ಕಡುಕಪ್ಪು ಬಣ್ಣದ ಬಗ್ಗೆ ಇರುವ ನಿರ್ಲಕ್ಷ್ಯ ಇದಕ್ಕೆ ಕಾರಣವಿರಬಹುದು. ಸಿದ್ದಿಯರ ಮೂಲಧರ್ಮ ಆಫ್ರಿಕಾದ ಕಾಡುಗಳಲ್ಲೇ ಉಳಿದುಹೋಗಿ ಅರಬರ ಪ್ರಭಾವದಿಂದ ಮುಸ್ಲಿಮರಾಗಿ, ಪೋರ್ಚುಗೀಸರ ಪ್ರಭಾವದಿಂದ ಕ್ರೈಸ್ತರಾಗಿ ಮತ್ತು ಭಾರತೀಯ ಹಿಂದೂ ಧರ್ಮದಿಂದ ಪ್ರಭಾವಿತರಾಗಿ ಹಿಂದೂ ಧರ್ಮವನ್ನು ನೆಚ್ಚಿಕೊಂಡಿದ್ದಾರೆ. ಆದರೆ ಸಿದ್ದಿಗಳಲ್ಲಿರುವ ಹಿಂದೂ, ಮುಸ್ಲಿಮ್, ಕ್ರೈಸ್ತರು ಪರಸ್ಪರ ಅಂತರ್‌ಧರ್ಮೀಯ ವಿವಾಹಗಳಾಗಿರುವ ಉದಾಹರಣೆಗಳು ಸಾಕಷ್ಟಿವೆ.
ಹಂಪಿ ವಿಶ್ವವಿದ್ಯಾನಿಲಯದ ಜಾನಪದ ತಜ್ಞರಾಗಿದ್ದ ಪ್ರೊ.ಹಿ.ಚಿ. ಬೋರಲಿಂಗಯ್ಯನವರ ಉಪಸಂಸ್ಕೃತಿಗಳ ಅಧ್ಯಯನ ಮಾಲೆಯಲ್ಲಿನ ಸಿದ್ದಿಯರ ಸಂಸ್ಕೃತಿ ಅಧ್ಯಯನದಲ್ಲಿ ಸಿದ್ದಿ ಸಮುದಾಯದ ಸಾಕಷ್ಟು ಮಾಹಿತಿ ಇರುವುದು ಗಮನಾರ್ಹ. ಉತ್ತರ ಕನ್ನಡ ಜಿಲ್ಲೆಯ ಜಾನಪದ ತಜ್ಞರೊಬ್ಬರು ಹೇಳುವಂತೆ ಗುಲಾಮಗಿರಿಯಿಂದಲೇ ಈ ನಾಡಿನಲ್ಲಿ ಬದುಕು ಆರಂಭಿಸಿದ ಸಿದ್ದಿಯರಿಗೆ ಅತ್ಯಂತ ಬಲಾಢ್ಯ ದೇಹವಿದ್ದರೂ ಆಳುವ ವರ್ಗದ ದಬ್ಬಾಳಿಕೆಗೆ ಸಿಲುಕಿದ ಇವರು ನಲುಗಿ, ನುಜ್ಜಾಗಿ ಪ್ರತಿಭಟನೆಯ ಸತ್ವವನ್ನೇ ಕಳೆದುಕೊಂಡಿದ್ದಾರೆ. ಬೌದ್ಧಿಕ ಮೇಲ್ಮೈಯನ್ನು ಸಾಧಿಸಿದ ನಾಗರಿಕ ಜಗತ್ತನ್ನು ಕಂಡಾಗ ಇವರಿಗೆ ಅಗೋಚರ ಭಯ! ಆದರೆ ಕಾಡಲ್ಲಿ ಮಾತ್ರ ಇವರ ಬದುಕು ನಿರ್ಭೀತ. ನಾಳಿನ ಚಿಂತೆಯಿಲ್ಲದೆ ಕಾಡಿನ ಪ್ರಾಣಿಗಳಂತೆ ಮುಗ್ಧವಾಗಿ ‘ಇಂದಿಗೆ ಉಣಲಿಕ್ಕೆ ಸಿಕ್ಕರೆ ಆಯಿತು’ ಎನ್ನುವಂತೆ ಬದುಕುತ್ತಾರೆ. ಈ ಸಮುದಾಯ ಅತ್ಯಂತ ನಂಬಿಗಸ್ತರು, ಅಮಾಯಕರು ಮತ್ತು ಪ್ರಾಮಾಣಿಕರು. ಪರಿಸರಕ್ಕೆ ಹೊಂದಿಕೊಂಡು ಹೋಗುವ ಸರಳ ಜೀವಿಗಳು.
ಇವರು ದೇಶಿಯ ಪರಿಸರದ ಪ್ರಭಾವದಿಂದ ‘ಪುಗಡಿ’ ನೃತ್ಯವನ್ನು ಕಲಿತಿದ್ದಾರೆ. ಈ ನೃತ್ಯಕ್ಕೆ ಸಿದ್ದಿ ಸ್ಪರ್ಶವನ್ನು ನೀಡಿದ್ದಾರೆ. ಇವರು ನುಡಿಸುವ ‘ಡಮಾಮಿ’ ಎದೆ ನಡುಗಿಸುವ ಗಂಡು ಕಲೆಯಾದರೆ ‘ಪುಗಡಿ’ ಕಲಾತ್ಮಕ ಲಾಲಿತ್ಯದ ನವಿರಾದ ಹೆಣ್ಣುಮಕ್ಕಳ ನೃತ್ಯವಾಗಿದೆ.
ಮೂಲತಃ ಬೇಟೆ, ಅರಣ್ಯ ಉತ್ಪನ್ನಗಳ ಸಂಗ್ರಹಣೆ ಮತ್ತು ಕುಮರಿ ಬೇಸಾಯ ಪದ್ಧತಿಯಲ್ಲಿ ಕೃಷಿ ಮಾಡುವವರಾಗಿದ್ದಾರೆ. ಈಗೀಗ ಅಪ್ಪಟ ಭಾರತೀಯರೇ ಆಗಿಬಿಟ್ಟಿರುವ ಸಿದ್ದಿಗಳು ಕ್ರೀಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇವರ ದೇಹದಾರ್ಡ್ಯ ಮತ್ತು ಒರಟುತನ ಕ್ರೀಡೆಗೆ ಹೇಳಿ ಮಾಡಿಸಿದಂತಿದೆ. ಇವರಿಗೆ ಇನ್ನಷ್ಟು ಕ್ರೀಡಾ ತರಬೇತಿ ನೀಡಿ, ಆರ್ಥಿಕ ಸಹಾಯ ನೀಡಿದರೆ ಅಂತರ್‌ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾರತಕ್ಕೆ ಒಳ್ಳೆಯ ಹೆಸರು ತರಬಲ್ಲರು.
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಸಿದ್ದಿಗಳಿಗೆ ಯಾವುದರಲ್ಲೂ ಸಮರ್ಪಕ ಪ್ರಾತಿನಿಧ್ಯ ಸಿಕ್ಕಿಲ್ಲ. ಬಹಳಷ್ಟು ನಿರುದ್ಯೋಗ, ಬಡತನ, ಅನಾರೋಗ್ಯ ಮತ್ತು ಹಸಿವುಗಳಿಂದ ಇನ್ನೂ ಹೊರಬರಲಾಗಿಲ್ಲ. ಕಾಡನ್ನೇ ಆಶ್ರಯಿಸಿ ಬದುಕುತ್ತಿರುವುದರಿಂದ ಕನಿಷ್ಠ ಇವರಿಗೆ ಕಾಡಿನ ರಕ್ಷಣೆಯ ಗಾರ್ಡ್‌ಗಳನ್ನಾಗಿ, ಸಫಾರಿಗಳ ಗೈಡ್ ಗಳನ್ನಾಗಿ, ವಾಹನ ಚಾಲಕರನ್ನಾಗಿ ಸರಕಾರಿ ಕೆಲಸ ನೀಡಬಹುದಿತ್ತು. ಆದರೆ ಸರಕಾರದ ಕಣ್ಣಿಗೆ ಇಲ್ಲಿನ ದಲಿತರು, ಆದಿವಾಸಿಗಳು, ಅಲೆಮಾರಿಗಳೇ ಕಾಣಲ್ಲ ಎಂಬ ಪರಿಸ್ಥಿತಿಯಲ್ಲಿ ಎಂದೋ, ಎಲ್ಲಿಂದಲೋ ಬಂದ ಈ ಕಪ್ಪು ಜನರು ಹೇಗೆ ಕಾಣಿಯಾರು..?