ಸಾಮ್ರಾಜ್ಯಶಾಹಿ ವಿರುದ್ಧದ ಸಿಡಿಲಾದ ಫಿಡೆಲ್ ಕಾಸ್ಟ್ರೋಗೆ-100

Update: 2026-08-13 10:37 IST

ಫಿಡೆಲ್ ಕಾಸ್ಟ್ರೋ ಜಗತ್ತು ಕಂಡ ಅತ್ಯಂತ ಒಬ್ಬ ಕ್ರಾಂತಿಕಾರಿ ನಾಯಕ. ರಾಜನೀತಿಜ್ಞ ಮತ್ತು 20ನೇ ಶತಮಾನದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರು. ಅಷ್ಟುಮಾತ್ರವೇ ಆಗಿದ್ದರೆ ಅದರಲ್ಲಿ ವಿಶೇಷವೇನೂ ಇರುತ್ತಿರಲಿಲ್ಲ. ಕೇವಲ ಕೂಗಳತೆ ದೂರದಲ್ಲಿರುವ ಅಮೆರಿಕ ಸಾಮ್ರಾಜ್ಯಶಾಹಿ ಎನ್ನುವ ವಿಶ್ವದ ಬಲಾಢ್ಯ ಶಕ್ತಿಯ ವಿರುದ್ಧ ಸೆಣಸಿದ ಪ್ರತಿರೋಧದ ಸಂಕೇತ. ಒಂದು ಸಣ್ಣ ದ್ವೀಪ ರಾಷ್ಟ್ರ ಕ್ಯೂಬಾವನ್ನು ಐದು ದಶಕಗಳ ಕಾಲ ಮುನ್ನಡೆಸಿ 600ಕ್ಕೂ ಅಧಿಕ ಬಾರಿ ಅಮೆರಿಕ ರೂಪಿಸಿದ ಸಂಚಿನಿಂದ ಪಾರಾಗಿ ಸಮಾಜವಾದ ಇಲ್ಲವೇ ಸಾವು ಎನ್ನುವ ಘೋಷಣೆ ಮೂಲಕ ಕೋಟ್ಯಂತರ ಜನರ ಹೃದಯದಲ್ಲಿ ಸಮತೆಯ ಕಿಡಿ ಹೊತ್ತಿಸಿದ ಸಮರ ಸೇನಾನಿ.

ಇದೇ ಆಗಸ್ಟ್ 13 2026 ಫಿಡೆಲ್ ಜನ್ಮದಿನ. ಮಾತ್ರವಲ್ಲ ಇದು ಶತಮಾನೋತ್ಸವ ವರ್ಷ ಕೂಡ. ಇದನ್ನು ಕ್ಯೂಬಾ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರು ಫಿಡೆಲ್ ಕ್ಯಾಸ್ಟ್ರೋರನ್ನು 100 ವರ್ಷಗಳ ಜನ್ಮದಿನದ ಮೂಲಕ ಸ್ಮರಿಸುತ್ತಿದ್ದಾರೆ. ರಾಜಧಾನಿ ಹವಾನಾದಲ್ಲಿ ನೂರಾರು ದೇಶಗಳಿಂದ ತೆರಳಲಿರುವ ಸಾವಿರಾರು ರಾಜಕೀಯ ನಾಯಕರು ಈ ಸ್ಮರಣೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಮಧ್ಯಪ್ರಾಚ್ಯದ ಇರಾನ್ ಮೇಲೆ ಯುದ್ಧ ಸಾರಿ ಮಣ್ಣುಮುಕ್ಕುತ್ತಿರುವ ಅಮೆರಿಕ ಮಗ್ಗಲುಮುಳ್ಳಾಗಿರುವ ಕ್ಯೂಬಾದ ಮೇಲೆ ‘ಭಯೋತ್ಪಾದಕ ರಾಷ್ಟ್ರ’ ಎನ್ನುವ ಹಣೆಪಟ್ಟಿ ಕಟ್ಟಿ ಹೊಸಕಿ ಹಾಕಲು ಹೊರಟಿರುವ ಈ ಹೊತ್ತಿನಲ್ಲಿ ಫಿಡೆಲ್-ಜನ್ಮ ಶತಮಾನೋತ್ಸವ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಫಿಡೆಲ್ ಬದುಕಿನ ಪಯಣ

ಫಿಡೆಲ್ 1926ರಲ್ಲಿ ಕ್ಯೂಬಾದ ಓರಿಯೆಂಟೆ ಪ್ರಾಂತದ ಬಿರಾನ್‌ನಲ್ಲಿ, ಸ್ಪ್ಯಾನಿಷ್ ವಲಸೆಗಾರ ರೈತ ಆಂಜೆಲ್ ಕಾಸ್ಟ್ರೋ ಮತ್ತು ಲಿನಾ ರೂಜ್ ದಂಪತಿಗೆ ಜನಿಸಿದರು. ದೊಡ್ಡ ಕಬ್ಬಿನ ತೋಟದಲ್ಲಿ ಬೆಳೆದ ಅವರು, ಶ್ರೀಮಂತಿಕೆ ಮತ್ತು ಗ್ರಾಮೀಣ ಕಾರ್ಮಿಕರ ಬಡತನ ಎರಡನ್ನೂ ಏಕಕಾಲದಲ್ಲೇ ಕಂಡವರು.

ಚಿಕ್ಕಂದಿನಿಂದಲೇ ಬಂಡಾಯ ಮತ್ತು ಕುತೂಹಲಶೀಲ ಗುಣಹೊಂದಿದ್ದ ಫಿಡೆಲ್ ಸ್ಯಾಂಟಿಯಾಗೋ ಮತ್ತು ಹವಾನಾದಲ್ಲಿನ ಜೆಸ್ಯೂಟ್ ಶಾಲೆಗಳಲ್ಲಿ ಮತ್ತು ನಂತರ ಹವಾನಾ ವಿಶ್ವವಿದ್ಯಾನಿಲಯದ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. 1940 ದಶಕದಲ್ಲಿ ಅಲ್ಲಿಯೇ ರಾಜಕೀಯವಾಗಿ ಸಕ್ರಿಯರಾದ ಅವರು ಕ್ಯೂಬನ್ ಸರ್ವಾಧಿಕಾರ, ಅಮೆರಿಕದ ಪ್ರಭುತ್ವ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಪ್ರತಿಭಟಿಸಿದರು. ಮೊಂಕಾಡಾ ದಾಳಿಯ ನಂತರ ಅವರ ವಿಚಾರಣೆಯ ವೇಳೆಯ ಅವರ ‘‘ಇತಿಹಾಸವು ನನ್ನನ್ನು ನಿರ್ದೋಷಿ ಎಂದು ಘೋಷಿಸುತ್ತದೆ’’ (‘‘History will absolve me’’) ಎನ್ನುವ ಪ್ರಸಿದ್ಧ ಹೇಳಿಕೆ ಕ್ರಾಂತಿಕಾರಿ ಫಿಡೆಲ್ ಅವರ ಹೆಸರನ್ನು ಜಾಗತಿಕವಾಗಿ ಚಿರಸ್ಥಾಯಿಗೊಳಿಸಿತು ಮತ್ತು ಭವಿಷ್ಯದ ಕ್ಯೂಬಾದ ಹಾದಿಯನ್ನು ಸ್ಪಷ್ಟಗೊಳಿಸಿತು.

ಹೋರಾಟದ ಹೆಜ್ಜೆಗಳು

ಮೊಂಕಾಡಾ ಸೇನಾ ನೆಲೆಯ ದಾಳಿ, 1953:

26ನೇ ವಯಸ್ಸಿನಲ್ಲಿ, ಅವರು ಬಟಿಸ್ಟಾ ಅವರ ಮಿಲಿಟರಿ ವಿರುದ್ಧ 135 ಬಂಡಾಯಗಾರರನ್ನು ಮುನ್ನಡೆಸಿದರು. ದಾಳಿ ವಿಫಲವಾಯಿತು, ಅನೇಕರು ಕೊಲ್ಲಲ್ಪಟ್ಟರು ಮತ್ತು ಫಿಡೆಲ್ ಅವರನ್ನು ಸೆರೆಯಲ್ಲಿಡಲಾಯಿತು. ಆದರೆ ಜೈಲಿನಿಂದ ಅವರು ತಮ್ಮ ರಕ್ಷಣಾ ಭಾಷಣವನ್ನು ಕ್ರಾಂತಿಯ ಘೋಷಣೆಯನ್ನಾಗಿ ಮಾರ್ಪಡಿಸಿದರು.

ಕ್ಯೂಬನ್ ಕ್ರಾಂತಿ, 1956-1959

ಮೆಕ್ಸಿಕೋದಲ್ಲಿ ಗಡಿಪಾರು ಜೀವನದ ನಂತರ, ಫಿಡೆಲ್ ಗ್ರಾನ್ಮ ಎಂಬ ದೋಣಿಯಲ್ಲಿ 82 ಹೋರಾಟಗಾರರೊಂದಿಗೆ ಕ್ಯೂಬಾದತ್ತಾ ಹೊರಟು ಸಿಯೆರಾ ಮೆಸ್ಟ್ರಾ ಪರ್ವತಗಳಲ್ಲಿ ಅವಿತುಕೊಂಡು ಗೆರಿಲ್ಲಾ ಸೈನ್ಯವನ್ನು ನಿರ್ಮಿಸಿ ಹವಾನಾವನ್ನು ನಾಲ್ಕು ಕಡೆಗಳಿಂದ ಸುತ್ತುವರಿದು ದಾಳಿ ನಡೆಸಿದರು. ಫಿಡಲ್ ಈ ಆಗಮನವನ್ನು ಕ್ಯೂಬಾ ಜನತೆ ವಿರೋಚಿತ ಸ್ವಾಗತ ನೀಡಿ ಸಂಭ್ರಮಿಸಿದರು. ಪರಿಣಾಮ 1959ರ ಜನವರಿ 1 ರಂದು, ಅಮೆರಿಕ ಕೈಗೊಂಬೆ ಬಟಿಸ್ಟಾ ಸರ್ವಾಧಿಕಾರ ಪತನವಾಯಿತು. 32ನೇ ವಯಸ್ಸಿನಲ್ಲಿ, ಫಿಡೆಲ್ ಕ್ಯೂಬಾದ ಪ್ರಧಾನ ಮಂತ್ರಿಯಾದರು.

ಸಾಟಿ ಇಲ್ಲದ ಸಾಧನೆಗಳು

ಫಿಡಲ್ ಕ್ಯಾಸ್ಟ್ರೋ, ಚೆಗುವೆರಾ, ರೌಲ್ ಕ್ಯಾಸ್ಟ್ರೋ ಮೊದಲಾದ ಕ್ರಾಂತಿಕಾರಿಗಳ ನೇತೃತ್ವದಲ್ಲಿ ಆಡಳಿತ ಆರಂಭಿಸಿದ ಕ್ಯೂಬಾ 1961ರ ಸಾಕ್ಷರತಾ ಅಭಿಯಾನ ಮೂಲಕ ಕೇವಲ ಒಂದು ವರ್ಷದೊಳಗೆ, ಕ್ಯೂಬಾ ತನ್ನನ್ನು ನಿರಕ್ಷರತೆಯಿಂದ ಮುಕ್ತವೆಂದು ಘೋಷಿಸಿಕೊಂಡಿತು ಇದೊಂದು ಜಾಗತಿಕವಾಗಿ ಸಾಟಿಯಿಲ್ಲದ ಸಾಧನೆಯಾಯಿತು.

ಭೂ ಸುಧಾರಣೆಗಳು, ಆರೋಗ್ಯ ಮತ್ತು ಶಿಕ್ಷಣದ ಸಾರ್ವತ್ರೀಕರಣ ಬ್ಯಾಂಕುಗಳ ರಾಷ್ಟ್ರೀಕರಣ ಮೊದಲಾದ ಜನಪರ ಕಾರ್ಯಕ್ರಮಗಳನ್ನು ಅಧಿಕಾರಕ್ಕೇರಿದ ಕೆಲವೇ ವರ್ಷಗಳಲ್ಲಿ ಜಾರಿಗೊಳಿಸಿತು ಮತ್ತು ಕ್ಯೂಬಾವನ್ನು ಸಮಾಜವಾದಿ ರಾಜ್ಯವೆಂದು ಘೋಷಿಸಲಾಯಿತು.

ಫಿಡೆಲ್ ಸುಮಾರು 49 ವರ್ಷಗಳ ಕಾಲ ಕ್ಯೂಬಾವನ್ನು ಮುನ್ನಡೆಸಿದರು, ಮೊದಲು 1959-2008ರವರೆಗೆ ಪ್ರಧಾನ ಮಂತ್ರಿಯಾಗಿ, ನಂತರ ಅಧ್ಯಕ್ಷರಾಗಿ 2008ರವರೆಗೆ ಆರೋಗ್ಯ ಕಾರಣಗಳಿಂದ ಅಧಿಕಾರವನ್ನು ತಮ್ಮ ಸಹೋದರ ರೌಲ್‌ಗೆ ಹಸ್ತಾಂತರಿಸುವವರೆಗೆ ಆಡಳಿತಗಾರರಾಗಿ, ಅವರು ಪ್ರಮುಖ ನಾಲ್ಕು ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸಿದ್ದರು.

ಆರೋಗ್ಯ: ಕ್ಯೂಬಾ ಸಾರ್ವತ್ರಿಕ, ಉಚಿತ ವ್ಯವಸ್ಥೆಯನ್ನು ನಿರ್ಮಿಸಿತು ಮತ್ತು ಜಾಗತಿಕವಾಗಿ ವೈದ್ಯರ ರಫ್ತುದಾರನಾಯಿತು. ಕ್ಯೂಬನ್ ವೈದ್ಯಕೀಯ ತಂಡಗಳು ವಿಶ್ವದಾದ್ಯಂತ ವಿಪತ್ತುಗಳು ಮತ್ತು ಸಾಂಕ್ರಾಮಿಕ ರೋಗಗಳಲ್ಲಿ ಸೇವೆ ಸಲ್ಲಿಸಿದವು.

ಶಿಕ್ಷಣ: ಕ್ಯೂಬಾ ವಿಶ್ವವಿದ್ಯಾನಿಲಯದವರೆಗೆ ಉಚಿತ ಶಿಕ್ಷಣ, ವಿಜ್ಞಾನ, ಕ್ರೀಡೆ ಮತ್ತು ಸಂಸ್ಕೃತಿಗೆ ಆದ್ಯತೆ ನೀಡಿತು.

ಸ್ವಾವಲಂಬನೆ: 1960ರಲ್ಲಿ ವಿಧಿಸಲಾದ ಅಮೆರಿಕದ ನಿರ್ಬಂಧದ ಹೊರತಾಗಿಯೂ, ಕ್ಯೂಬಾ ಕಠಿಣ ಪರಿಸ್ಥಿತಿಗಳಲ್ಲಿ ಜೈವಿಕ ತಂತ್ರಜ್ಞಾನ, ಲಸಿಕೆಗಳು ಮತ್ತು ಕೃಷಿಯನ್ನು ಅಭಿವೃದ್ಧಿಪಡಿಸಿತು.

ಜನತೆಯ ನಡುವೆ ಒಡನಾಟ: ಫಿಡೆಲ್ ಅವರ ಶೈಲಿ ನೇರವಾಗಿತ್ತು ದೀರ್ಘ ಭಾಷಣಗಳು ಮತ್ತು ಜನರೊಂದಿಗೆ ನಿರಂತರ ಸಂಪರ್ಕ. ತಮ್ಮ ನಂತರವೂ ಉಳಿದುಕೊಳ್ಳುವ ಸಾಂಸ್ಥಿಕ ಸಂಸ್ಥೆಗಳನ್ನು ನಿರ್ಮಿಸುವುದರತ್ತ ಅವರ ಗಮನ ಕೇಂದ್ರೀಕರಣಗೊಂಡಿತ್ತು.

ಅಮೆರಿಕನ್ ಸಾಮ್ರಾಜ್ಯಶಾಹಿ ಜಗತ್ತಿನಾದ್ಯಂತ ಸಣ್ಣ ಸಣ್ಣದೇಶಗಳ ವಿರುದ್ಧದ ಎಲ್ಲ ಬಗೆಯ ದಿಗ್ಬಂಧನಗಳ ವಿರುದ್ಧ ನಿರಂತರ ಸೆಣಸುವುದು ಮತ್ತು ಅಂತರ್‌ರಾಷ್ಟ್ರೀಯ ವೇದಿಕೆಗಳ ಮೂಲಕ ಅದರ ಶೋಷಣಾ ಮುಖವನ್ನು ಬಯಲುಗೊಳಿಸಿ ಹೋರಾಟ ನಿರತ ದೇಶಗಳಿಗೆ ಸೌಹಾರ್ದ ಬೆಂಬಲ ನೀಡಲಾಯಿತು.

ಸಾಮ್ರಾಜ್ಯಶಾಹಿ ವಿರುದ್ಧದ ಸಿಡಿಲು

ಫಿಡೆಲ್ ತಮ್ಮ ರಾಜಕೀಯ ಹೋರಾಟವನ್ನು ಸಾಮ್ರಾಜ್ಯಶಾಹಿ ವಿರೋಧಿ ಎಂದು ವ್ಯಾಖ್ಯಾನಿಸಿದರು. ಅವರು ಕ್ಯೂಬಾದ ಹೋರಾಟವನ್ನು ಸಾರ್ವಭೌಮತ್ವಕ್ಕಾಗಿನ ಜಾಗತಿಕ ಹೋರಾಟದ ಭಾಗವಾಗಿ ಕಂಡರು. ಸಾಮ್ರಾಜ್ಯಶಾಹಿ ಶೋಷಣೆ ವಿರುದ್ಧದ ಸಿಡಿಲಾಗಿ ಸಿಡಿದರು. ಇದರ ಪರಿಣಾಮವಾಗಿ ಅವರು ಅಮೆರಿಕದ 600ಕ್ಕೂ ಹೆಚ್ಚು ಹತ್ಯೆಯ ಪ್ರಯತ್ನಗಳನ್ನು ದೃಢವಾಗಿ ಹಿಮ್ಮೆಟ್ಟಿಸಿದರು ಮತ್ತು ಅಮೆರಿಕದ ನಿರಂತರ ಆರ್ಥಿಕ ನಿರ್ಬಂಧ ನಡುವೆಯೂ ದಶಕಗಳ ಕ್ಯೂಬಾದ ಜನತೆಯನ್ನು ಹಸಿವು, ಬಡತನ ಹಾಗೂ ರೋಗರುಜಿನಗಳಿಂದ ಬದುಕುಳಿಸಿದರು.

ಕ್ಯೂಬಾ ಉಳಿಯಬೇಕಾದರೆ ಮೊದಲು ಜಗತ್ತು ಉಳಿಯಬೇಕೆಂದು ಪ್ರತಿಪಾದಿಸಿ ಫಿಡಲ್ ಆಂಗೋಲಾ, ಮೊಝಾಂಬಿಕ್ ಮತ್ತು ನಿಕರಾಗುವಾದ ಸ್ವಾತಂತ್ರ್ಯ ಚಳವಳಿಗಳನ್ನು ಬೆಂಬಲಿಸಿದರು. 1988ರಲ್ಲಿ ಆಂಗೋಲಾದಲ್ಲಿ ವರ್ಣಭೇದ ನೀತಿ ಬೆಂಬಲಿತ ಪಡೆಗಳನ್ನು ಸೋಲಿಸಲು ಕ್ಯೂಬನ್ ಸೈನ್ಯಗಳು ಸಹಾಯ ಮಾಡಿದವು, ಇದು ದಕ್ಷಿಣ ಆಫ್ರಿಕಾಕ್ಕೆ ಒಂದು ಮಹತ್ವದ ತಿರುವು. ವಿಶ್ವಸಂಸ್ಥೆಯಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿ ಸಣ್ಣ ರಾಷ್ಟ್ರಗಳು ವಿದೇಶಿ ಹಸ್ತಕ್ಷೇಪವಿಲ್ಲದೆ ತಮ್ಮದೇ ಆದ ಮಾರ್ಗವನ್ನು ಆರಿಸಿಕೊಳ್ಳುವ ಹಕ್ಕನ್ನು ಹೊಂದಿವೆ ಎಂದು ವಾದಿಸಿದರು. ‘‘ಕ್ರಾಂತಿಯು ಗುಲಾಬಿ ಹಾಸಿಗೆಯಲ್ಲ. ಕ್ರಾಂತಿಯು ಭವಿಷ್ಯ ಮತ್ತು ಭೂತಕಾಲದ ನಡುವಿನ ಹೋರಾಟ’’ ಎಂದು ಪ್ರತಿಪಾದಿಸಿದರು.

ಫಿಡೆಲ್ 25 ನವೆಂಬರ್ 2016ರಂದು ನಿಧನರಾದರು. ಆ ಬಳಿಕವೂ ಅವರ ಹೋರಾಟದ ಪರಂಪರೆ ಕ್ಯೂಬಾದ ಜನರ ಮನಸ್ಸಿನಲ್ಲಿ ಹಾಗೂ ಜಗತ್ತಿನ ಕೋಟ್ಯಂತರ ಜನರ ಹೃದಯದಲ್ಲಿ ಈಗಲೂ ಪ್ರಬಲವಾಗಿಯೇ ಉಳಿದಿದೆ. ಅವರು ಕ್ಯೂಬಾವನ್ನು ಅಮೆರಿಕ ಬೆಂಬಲಿತ ಸರ್ವಾಧಿಕಾರದಿಂದ ವಿಮೋಚನೆಗೊಳಿಸಿದ್ದು ಮಾತ್ರವಲ್ಲ ಹತ್ತು ಹಲವು ನಿರ್ಬಂಧಗಳ ಹೊರತಾಗಿಯೂ ಸಾರ್ವತ್ರಿಕ ಸಾಕ್ಷರತೆ ಮತ್ತು ಸದೃಢವಾದ ಆರೋಗ್ಯವನ್ನು ನಿರ್ಮಿಸಿದರು ಮತ್ತು ವಿಶ್ವಾದ್ಯಂತ ಎಲ್ಲ ಬಗೆಯ ಶೋಷಣೆಯ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸಿದ ರಾಷ್ಟ್ರವನ್ನಾಗಿ ಮಾರ್ಪಡಿಸಿದರು.

ಆಗಸ್ಟ್ 13ರ ಅವರ 100ನೇ ಹುಟ್ಟುಹಬ್ಬದಂದು, ಕ್ಯೂಬಾ ಕೇವಲ ಒಬ್ಬ ನಾಯಕನನ್ನು ಮಾತ್ರ ಸ್ಮರಿಸುತ್ತಿಲ್ಲ ಬದಲಾಗಿ ಒಂದು ಸಣ್ಣ ದೇಶವು ಎಂತಹ ಬಲಾಢ್ಯ ಶತ್ರುವನ್ನು ಎದುರಿಸಿಯೂ ಸ್ವಾಭಿಮಾನಿಯಾಗಿ ನಿಲ್ಲಬಲ್ಲದು, ಒಂದು ದೇಶದ ಎಂದರೆ ಅದೊಂದು ಸಾಮೂಹಿಕ ಒಳಿತಿಗಾಗಿ ತ್ಯಾಗ ಮತ್ತು ಇತಿಹಾಸವನ್ನು ಬದಲಾಯಿಸಲು ಧೈರ್ಯ ಮಾಡುವವರಿಂದ ರಚಿಸಲಾಗುತ್ತದೆ ಎಂಬುದನ್ನು ಮತ್ತೆ ಸಾಬೀತುಪಡಿಸಲು ಮತ್ತು ಅದು ಕ್ರಮಿಸಿದ ವಿರೋಚಿತ ದಾರಿಗಳನ್ನು ಅನಾವರಣಗೊಳಿಸಲು ಹೊರಟಿದೆ.

‘‘ನಾನು ಕ್ಯೂಬನ್ ಸಮಾಜವಾದಿ ಮತ್ತು ಕ್ಯೂಬನ್ ರಾಷ್ಟ್ರೀಯವಾದಿಯೂ ಆಗಿದ್ದೇನೆ’’ ಎನ್ನುವ ಫಿಡೆಲ್ ಕಾಸ್ಟ್ರೋ, ‘‘ಅಕಾಶದಲ್ಲಿ ಮೋಡವಿದೆ ಎಂದ ಮಾತ್ರಕ್ಕೆ ಸೂರ್ಯನಿಲ್ಲ ಎಂದರ್ಥವಲ್ಲ. ನಾಲ್ಕುಮಳೆ ಹನಿ ಉದುರಿ ಮೋಡಗಳು ಸರಿದರೆ ಜಗತ್ತಿನಲ್ಲಿರುವ ಪ್ರತಿಯೊಬ್ಬನಿಗೂ ಒಂದೊಂದು ಸೂರ್ಯನಿದ್ದಾನೆ’’ ಎಂದು ಭರವಸೆಯ ಬೆಳಕ ನೀಡಿದ್ದಾರೆ.

ಕ್ಯೂಬಾ ಫಿಡೆಲ್ ಅವರ ಜನ್ಮ ಶತಮಾನೋತ್ಸವ ಆಚರಿಸುತ್ತಿರುವಾಗ ಫಿಡಲ್ ಕೇವಲ ಕ್ಯೂಬಾಕ್ಕೆ ಮಾತ್ರವಲ್ಲ ಜಗದಗಲ ಸಮಾನತೆಗಾಗಿ ಕನವರಿಸುತ್ತಿರುವ ಕೋಟ್ಯಂತರ ಜನರಿಗೆ ಅಂದು-ಇಂದು ಮತ್ತು ಮುಂದೆಯೂ ಸ್ಫೂರ್ತಿಯ ಸೆಲೆಯಾಗಿಯೇ ಇರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ. ಮಹಾಂತೇಶ, ಬೆಂಗಳೂರು

contributor

Similar News