ವಿಧಾನಸೌಧದಲ್ಲಿ ಸಚಿವರ ಕೊಠಡಿಗಳಿಗೆ ಕೋಟ್ಯಂತರ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡವರಿಗೆ ಹಂಚಿಕೆ ಮಾಡಿರುವ ಕೊಠಡಿಗಳನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ನವೀಕರಣ ಮಾಡುತ್ತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ಒಂದೆಡೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಸ್ಥಿತಿ ತಲೆದೋರಿದ್ದು, ಬರಗಾಲದಿಂದಾಗಿ ರೈತರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿಧಾನಸೌಧದಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಸಚಿವರು ತಮ್ಮ ಕೊಠಡಿಗಳನ್ನು ನವೀಕರಣಗೊಳಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ವಿಧಾನಸೌಧದಲ್ಲಿ ಸಚಿವರಿಗೆ ಹಂಚಿಕೆಯಾಗಿರುವ ಕೆಲವು ಕೊಠಡಿಗಳಲ್ಲಿ ಒಳಾಂಗಣ ವಿಸ್ತೀರ್ಣ ಹೆಚ್ಚಿಸಲು ಸಮೀಪದ ಕೊಠಡಿಗಳ ಗೋಡೆಗಳನ್ನು ಒಡೆಯಲಾಗುತ್ತಿದೆ. ಇದರಿಂದಾಗಿ ವಿಧಾನಸೌಧದ ಕಟ್ಟಡ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವಂತಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ನವೀಕರಣ ಕಾಮಗಾರಿಯ ನೆಪದಲ್ಲಿ ಸಚಿವರ ಕೊಠಡಿಗಳಲ್ಲಿ ಒಳಾಂಗಣ ವಿನ್ಯಾಸ, ಶೌಚಾಲಯ ಹಾಗೂ ನೆಲಕ್ಕೆ ಹೊಸ ಟೈಲ್ಸ್, ವಿಶ್ರಾಂತಿ ಕೊಠಡಿ, ಸಂದರ್ಶಕರ ಕೊಠಡಿ ರಚನೆ ಮಾಡಲಾಗುತ್ತಿದೆ. ಅಲ್ಲದೇ ಹೊಸದಾಗಿ ಐಷಾರಾಮಿ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ.
ವಿಧಾನಸೌಧದ 330 ಮತ್ತು 330ಎ ಕೊಠಡಿಗಳ ಮಧ್ಯಭಾಗದ ಗೋಡೆ ಒಡೆದು ಹಾಕಲಾಗಿದೆ. ಅದೇ ರೀತಿ ವಿಕಾಸಸೌಧದಲ್ಲಿನ ಸಚಿವರ ಕೊಠಡಿಗಳಲ್ಲೂ ಸೌಂದರ್ಯೀಕರಣದ ಉದ್ದೇಶದಿಂದ ಗೋಡೆಗಳು ಹಾಗೂ ಕಪಾಟುಗಳಿಗೆ ಪಾಲಿಶ್, ವಿದ್ಯುದೀಕರಣ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.
ಸಮ್ಮೇಳನ ಸಭಾಂಗಣ ನವೀಕರಣ:
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದ (ಕೊಠಡಿ ಸಂಖ್ಯೆ 334) ನವೀಕರಣ ಕಾಮಗಾರಿಗೂ ಕೋಟ್ಯಂತರ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಎಚ್.ಸಿ. ಬಾಲಕೃಷ್ಣ ಅವರಿಗೆ ವಿಧಾನಸೌಧದಲ್ಲಿ ಹಂಚಿಕೆ ಮಾಡಿರುವ ಕೊಠಡಿ ಸಂಖ್ಯೆ 339, 339ಎ, ಬಸವಂತಪ್ಪ ಅವರಿಗೆ ಹಂಚಿಕೆ ಮಾಡಿರುವ ಕೊಠಡಿ ಸಂಖ್ಯೆ 343, 343ಎ, ವಿಕಾಸಸೌಧದಲ್ಲಿ ಬಸವರಾಜ ರಾಯರೆಡ್ಡಿ ಅವರಿಗೆ ಹಂಚಿಕೆ ಮಾಡಿರುವ ಕೊಠಡಿ ಸಂಖ್ಯೆ 406, 407ರಲ್ಲಿಯೂ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರರಾಗಿರುವ ನಿವೃತ್ತ ಐಎಎಸ್ ಅಧಿಕಾರಿ, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಅಧ್ಯಕ್ಷ ಎಲ್.ಕೆ. ಅತೀಕ್ ಸೇರಿದಂತೆ ಮುಖ್ಯಮಂತ್ರಿಯ ಸಲಹೆಗಾರರಿಗೆ ನೀಡಿರುವ ಕೊಠಡಿಗಳಲ್ಲೂ ಗೋಡೆಗಳನ್ನು ಒಡೆದು ನವೀಕರಣ ಕೆಲಸ ನಡೆಯುತ್ತಿದೆ.