ಪಶ್ಚಿಮಘಟ್ಟದಲ್ಲಿ ಸಿಹಿನೀರಿನ ಏಡಿಯ ಹೊಸ ಪ್ರಭೇದ ಪತ್ತೆ
ಕೊಲ್ಲೂರು ಮೀಸಲು ಅರಣ್ಯದಲ್ಲಿ ಕಂಡುಬಂದ ಘಟಿಯಾನಾ ಕರ್ನಾಟಕ
ಉಡುಪಿ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ರುವ ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಮೇಗಿನಿ ವ್ಯಾಲಿ ಮೀಸಲು ಅರಣ್ಯದಲ್ಲಿ ಹೊಸ ಪ್ರಭೇದದ ಸಿಹಿನೀರಿನ ಏಡಿಯೊಂದನ್ನು ಪತ್ತೆಯಾಗಿದೆ.
ಪಶ್ಚಿಮಘಟ್ಟಕ್ಕೆ ಮಾತ್ರ ಸೀಮಿತವಾದ ಸ್ಥಳೀಯ ವಾಗಿ ಮಾತ್ರ ಕಂಡು ಬರುವ (ಎಂಡಮಿಕ್) ಪ್ರಭೇದವನ್ನು ಗಸ್ತು ಅರಣ್ಯ ಪಾಲಕ ಅಜ್ಮೀರ್ ಕೆ. ಪತ್ತೆ ಮಾಡಿದ್ದು, ಇದಕ್ಕೆ ‘ಘಟಿಯಾನಾ ಕರ್ನಾಟಕ’ ಎಂಬುದಾಗಿ ವೈಜ್ಞಾನಿಕ ಹೆಸರನ್ನು ಇಡಲಾಗಿದೆ. ಸಾಮಾನ್ಯವಾಗಿ ‘ಕರ್ನಾಟಕ ಘಾಟ್ ಏಡಿ’ ಎಂದು ಹೆಸರಿಸಲಾಗಿದೆ.
ಈ ಏಡಿಯ ಪ್ರಭೇದವು ಕೊಲ್ಲೂರು ವನ್ಯಜೀವಿ ವಲಯದ ಮೇಗಿನಿ ವ್ಯಾಲಿ, ಮಾದಿಬರೆ, ಮುರ್ಕೊಡಿಹೊಲ, ಗುಂಡು ಬೇರು, ಕೊರತಿಕಲ್ ಬರೆ, ಕೊರಕೊಪ್ಪದ ಹೊಲ, ಜನ್ನಲಾಣೆ, ಅಬ್ಬಿಗುಡ್ಡೆ ಹಾಗೂ ಚಿತ್ತೂರು ಮೀಸಲು ಅರಣ್ಯ ಪ್ರದೇಶದ ಸುತ್ತಮುತ್ತಲಿನ 35 ಕಿ.ಮೀ. ವ್ಯಾಪ್ತಿಯಲ್ಲಿ ಕಂಡುಬರುತ್ತದೆ. ಈ ಪ್ರಭೇದವು ಸಮುದ್ರಮಟ್ಟದಿಂದ ಸುಮಾರು 60 ರಿಂದ 250 ಮೀಟರ್ ಎತ್ತರದಲ್ಲಿ ಕಾಣ ಸಿಗುತ್ತದೆ.
ಎಂಟನೇ ಪ್ರಭೇದ: ಭಾರತದ ಪಶ್ಚಿಮಘಟ್ಟಗಳಲ್ಲಿ ಈವರೆಗೆ ಒಟ್ಟು 14 ಬಗೆಯ ಘಟಿಯಾನ ಏಡಿ ಪ್ರಭೇದಗಳನ್ನು ಪತ್ತೆ ಮಾಡಲಾಗಿದೆ. ಕರ್ನಾಟಕದ ಪಶ್ಚಿಮಘಟ್ಟದಲ್ಲಿ ಈವರೆಗೆ ಏಳು ಘಟಿಯಾನ ಪ್ರಭೇದದ ಏಡಿಗಳು ಪತ್ತೆಯಾಗಿದ್ದವು.
ಇದೀಗ ಪಶ್ಚಿಮಘಟ್ಟದಲ್ಲಿ ಕಂಡುಬರುವ ಘಟಿಯಾನಾ ಪ್ರಭೇದದ 15ನೇ ಹೊಸ ಏಡಿ ಪ್ರಭೇದ ಇದಾಗಿದೆ ಎಂದು ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆ ಸಂಸ್ಥೆಯು ದೃಢಪಡಿಸಿದೆ. ಅದೇ ರೀತಿ ಕರ್ನಾಟಕದಲ್ಲಿ ಕಂಡುಬಂದಿರುವ ಎಂಟನೆಯ ಪ್ರಭೇದ ಇದಾಗಿದೆ.
ಕರ್ನಾಟಕದಲ್ಲಿ ಕಂಡುಬಂದ ಈವರೆಗೆ ಪ್ರಭೇದಗಳಾದ ಘಾಟಿಯಾನ ಬಸಾಲ್ಟಿಕೋಲಾ, ಘಾಟಿಯಾನ ಅಟ್ರೋಪರ್ಪ್ಯೂರಿಯಾ, ಘಾಟಿಯಾನ ರೌಕ್ಸಿ, ಘಾಟಿಯಾನ ದ್ವಿವಣಾರ್, ಘಾಟಿಯಾನ ಸ್ಯಾಂಗ್ವಿನೊಲೆಂಟಾ, ಘಾಟಿಯಾನ ದ್ವಿರೂಪಾ, ಘಾಟಿಯಾನ ಧೃತಿಯಾರಂ ಎಂಬುದಾಗಿ ಹೆಸರಿಸಲಾಗಿತ್ತು.
ಈ ಏಳು ಪ್ರಭೇದದ ಏಡಿಗಳಿಗೆ ರಾಜ್ಯದ ಹೆಸರನ್ನು ಸೂಚಿಸದೆ ಇರುವುದರಿಂದ ಮತ್ತು ರಾಜ್ಯಕ್ಕೆ ಗೌರವ ಸಮರ್ಪಿಸುವ ಉದ್ದೇಶದಿಂದಾಗಿ ಈ ಹೊಸ ಏಡಿ ಪ್ರಭೇದಕ್ಕೆ ‘ಘಾಟಿಯಾನ ಕರ್ನಾಟಕ’ ಎಂಬ ಹೆಸರನ್ನು ನೀಡಲಾಗಿದೆ. ಈಗ ಹೊಸದಾಗಿ ಕಂಡುಬಂದಿರುವ ಈ ಏಡಿಯನ್ನು ಸ್ಥಳೀಯವಾಗಿ ‘ಮಳೆ ಏಡಿ’ ಎಂಬುದಾಗಿ ಕರೆಯುತ್ತಿದ್ದರು.
ಬೇಸಿಗೆಯಲ್ಲೂ ಪತ್ತೆ: ಹೊಸ ಪ್ರಭೇದದ ಗಂಡು ಏಡಿ, ಗಾಢ ನೇರಳೆ ಬಣ್ಣ ಮತ್ತು ಮುಂಭಾಗ ಆಕಾರದ ತಿಳಿ ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಏಡಿ ಬೂದು, ನೇರಳೆ ಹಾಗೂ ಗಾಢ ಬೂದು, ಕಂದು ಬಣ್ಣಗಳ ಮಿಶ್ರಣದಿಂದ ಕೂಡಿರುತ್ತದೆ. ಇವು ಮಳೆಗಾಲ ದಲ್ಲಿ ಸಂತಾನೋತ್ಫತ್ತಿ ನಡೆಸುತ್ತವೆ. ಇವು ಮರದ ಪೊಟರೆ ಮತ್ತು ಜಂಬಿಟ್ಬಿಗೆ(ಲ್ಯಾಟರೈಟ್) ಬಂಡೆ ಗಳ ನೀರು ತುಂಬಿದ ರಂಧ್ರಗಳಲ್ಲಿ ವಾಸಿಸುತ್ತವೆ.
ಈ ಏಡಿಗಳು ಬೇಸಿಗೆಯಲ್ಲಿಯೂ ಕಂಡು ಬರುತ್ತದೆ. ಯಾಕೆಂದರೆ ಇವುಗಳ ಆವಾಸಸ್ಥಾನವು ನಿತ್ಯಹರಿದ್ವರ್ಣ ಮತ್ತು ಅರೆ ನಿತ್ಯಹರಿದ್ವರ್ಣ ಕಾಡುಗಳಿಂದ ಕೂಡಿರುವುದರಿಂದ, ಬೇಸಿಗೆ ಯಲ್ಲಿಯೂ ಇಲ್ಲಿ ತೇವಾಂಶದ ಪ್ರಮಾಣವು ತುಲನಾತ್ಮಕವಾಗಿ ಹೆಚ್ಚಾಗಿರುತ್ತದೆ.
ಅಲ್ಲದೆ ಮಾವಿನಕಾರು, ಜಡ್ಕಲ್ ಮತ್ತು ಸೌಪರ್ಣಿಕಾ ನದಿಗಳು ವರ್ಷದ ಹಲವು ತಿಂಗಳುಗಳ ಕಾಲ ಹರಿಯುವುದರಿಂದ, ಮರಗಳ ರಂಧ್ರಗಳು ಹಾಗೂ ಇತರ ನೈಸರ್ಗಿಕ ಕುಳಿಗಳಲ್ಲಿ ಬೇಸಿಗೆಯ ಅವಧಿಯಲ್ಲಿಯೂ ನೀರು ಸಂಗ್ರಹವಾಗಿರುತ್ತದೆ. ಈ ನೀರಿನಿಂದ ಕೂಡಿದ ರಂಧ್ರಗಳು ಮತ್ತು ಕುಳಿಗಳು ಏಡಿಗಳಿಗೆ ಅನುಕೂಲಕರವಾದ ಪ್ರಮುಖ ಸೂಕ್ಷ್ಮ ಆವಾಸಸ್ಥಳಗಳಾಗಿ ಕಾರ್ಯನಿರ್ವಹಿಸುತ್ತವೆ.
ಹೀಗಾಗಿ, ಸುತ್ತಮುತ್ತಲಿನ ಪ್ರದೇಶಗಳು ಒಣಗಿದರೂ ಸಹ, ಈ ಸೂಕ್ಷ್ಮಆವಾಸಸ್ಥಳಗಳಲ್ಲಿ ಅಗತ್ಯವಾದ ತೇವಾಂಶ ಮತ್ತು ನೀರು ಲಭ್ಯವಿರುವುದರಿಂದ, ಈ ಏಡಿಗಳು ಬೇಸಿಗೆಯಲ್ಲಿಯೂ ಕಂಡುಬರುತ್ತವೆ. ಕುಳಿಗಳಲ್ಲಿ ಸಂಗ್ರಹವಾಗುವ ಎಲೆ, ಕೊಳೆಯುತ್ತಿರುವ ಸಸ್ಯದ ಭಾಗ, ತೊಗಟೆ, ಪಾಚಿ ಹಾಗೂ ಇತರ ಸಾವಯವ ಪದಾರ್ಥಗಳು ಆಹಾರವಾಗಿ ಈ ಏಡಿಗಳು ಸೇವಿಸುತ್ತದೆ ಎಂದು ಗಸ್ತು ಅರಣ್ಯ ಪಾಲಕ ಅಜ್ಮೀರ್ ಕೆ. ತಿಳಿಸಿದ್ದಾರೆ.
ಪಶ್ಚಿಮಘಟ್ಟಗಳಲ್ಲಿ ಅಗಾಧ ಪ್ರಮಾಣದಲ್ಲಿ ಜೀವವೈವಿಧ್ಯಗಳಿವೆ. ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ಕೂಡ ನಡೆಯಬೇಕಿವೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಒತ್ತಡದ ನಡುವೆಯೂ ಪಶ್ಚಿಮಘಟ್ಟದಲ್ಲಿ ಮಾತ್ರ ಕಂಡುಬರುವ ಹೊಸ ಏಡಿ ಪ್ರಭೇದವನ್ನು ಪತ್ತೆ ಹಚ್ಚಿದ್ದಾರೆ. ಈ ರೀತಿ ಸಂಶೋಧನೆಯಲ್ಲಿ ತೊಡಗುವ ಸಿಬ್ಬಂದಿಗೆ ನಾವು ಎಲ್ಲ ರೀತಿಯಲ್ಲೂ ಪ್ರೋತ್ಸಾಹ ನೀಡುತ್ತೇವೆ.
-ರುಥ್ರನ್ ಪಿ., ಉಪಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ಉಪವಿಭಾಗ