×
Ad

10ನೇ ತರಗತಿ ಉತ್ತೀರ್ಣರಾಗಲು ಅಂಕಗಳ ಇಳಿಕೆ : ಶಿಕ್ಷಣದ ಗುಣಮಟ್ಟ ಹಳ್ಳ ಹಿಡಿಯುತ್ತಿದೆಯೇ?

Update: 2025-10-19 11:29 IST

ಪ್ರಸ್ತುತ ಕರ್ನಾಟಕ ರಾಜ್ಯ ಸರಕಾರ ಮಾಡುತ್ತಿರುವ ಹಲವಾರು ಶೈಕ್ಷಣಿಕ ನಿರ್ಧಾರಗಳಲ್ಲಿ ಅತ್ಯಂತ ಶೋಚನೀಯ ಸೂಜಿಗದ ಸಂಗತಿಗಳು ಹೆಚ್ಚಾಗುತ್ತಿವೆ. ಯಾರಿಗೋ ಲಾಭ ಮಾಡಲು ಹೋಗಿ, ಸರಕಾರಿ ಶಾಲಾ ಮಕ್ಕಳ ಭವಿಷ್ಯದ ಮೇಲೆ ಕೊಡಲಿಪೆಟ್ಟು ಕೊಡುತ್ತಿದೆ. ತಮ್ಮ ಅಧಿಕಾರದ ಅವಧಿಯಲ್ಲಿ ಫಲಿತಾಂಶ ಹೆಚ್ಚಿಸಿದ್ದೇವೆ ಎಂದು ಹೇಳಿಕೊಳ್ಳುವ ಸಲುವಾಗಿ ಹಾಗೂ ಖಾಸಗಿ ಶಾಲೆಯವರ ಶುಲ್ಕ ಹೆಚ್ಚಿಸುವಲ್ಲಿ ನೇರವಾಗಿ ನೆರವಾಗುವ ನಿರ್ಧಾರ ಮಾಡುತ್ತಿದ್ದಾರೆ. 2025-26ನೇ ಸಾಲಿನಿಂದ ಹತ್ತನೇ ತರಗತಿ ಪರೀಕ್ಷೆಯ ಉತ್ತೀರ್ಣಕ್ಕೆ ಆಂತರಿಕ ಅಂಕ 20, ಬಾಹ್ಯಪರೀಕ್ಷೆಯಲ್ಲಿ 13 ಅಂಕ ಸೇರಿ 33 ಅಂಕಗಳಿಸಿದರೆ ಸಾಕು ಅಥವಾ ವಿಷಯವಾರು 30 ಅಂಕ ಅಂದರೆ ಆಂತರಿಕ 20 ಅಂಕ ಬಾಹ್ಯಪರೀಕ್ಷೆ ಯಲ್ಲಿ 10 ಅಂಕಗಳಿಸಿದರೂ ಉತ್ತೀರ್ಣ ಎಂದು ಘೋಷಣೆ ಮಾಡಿಯೇಬಿಟ್ಟಿದೆ. ರಾಜ್ಯದ ಹಲವಾರು ಪ್ರಸಿದ್ಧ ಸಾಹಿತಿಗಳು, ಖ್ಯಾತ ಶಿಕ್ಷಣ ತಜ್ಞರ ತೀವ್ರ ವಿರೋಧದ ನಡುವೆಯೂ ರಾಜ್ಯ ಸರಕಾರ ಇದನ್ನು ಜಾರಿಗೆ ತಂದಿದೆ. ಈ ಪದ್ಧತಿಯಿಂದ ಈಗಾಗಲೇ ಕುಸಿದಿರುವ ಶಿಕ್ಷಣದ ಗುಣಮಟ್ಟ ಮತ್ತಷ್ಟು ಕುಸಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ಪದ್ಧತಿಯನ್ನು ಜಾರಿಗೆ ತರುವಲ್ಲಿ ಸರಕಾರದ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ಬಹಳ ದೊಡ್ಡದಿದೆ ಎನ್ನುವ ಸಂಶಯ ಕಾಡುತ್ತಿದೆ. ಕಾರಣ ಇಷ್ಟೇ, ರಾಜ್ಯ ಪಠ್ಯಕ್ರಮದ ಶಾಲೆ ಹಾಗೂ ಸಿ.ಬಿ.ಎಸ್.ಇ. ಪಠ್ಯಕ್ರಮದ ಶಾಲೆಗಳಲ್ಲಿ ಶುಲ್ಕ ನೀತಿಯಲ್ಲಿ ವ್ಯತ್ಯಾಸವಿದೆ. ರಾಜ್ಯಪಠ್ಯಕ್ರಮದ ಶಾಲೆಗಳಲ್ಲಿ ರೂ.40,000ದಿಂದ 50,000 ಶುಲ್ಕವಿದ್ದರೆ ಸಿ.ಬಿ.ಎಸ್.ಇ. ಪಠ್ಯಕ್ರಮದ ಶಾಲೆಗಳಲ್ಲಿ ರೂ. 1 ಲಕ್ಷಕ್ಕಿಂತಲೂ ಹೆಚ್ಚಿದೆ. ತಮ್ಮ ಶುಲ್ಕ ಹೆಚ್ಚಿಸಿಕೊಳ್ಳಲು ತಮ್ಮ ಶಾಲೆಗಳಲ್ಲೂ ಸಿ.ಬಿ.ಎಸ್.ಇ. ಪಠ್ಯಕ್ರಮ ಹಾಗೂ ಪರೀಕ್ಷಾ ಪದ್ಧತಿ ಇದೆ ಎಂದು ಬಿಂಬಿಸಿ ದಾಖಲಾತಿ ಹೆಚ್ಚಿಸಿಕೊಳ್ಳುವ ಹುನ್ನಾರ ಇದರ ಹಿಂದೆ ಅಡಗಿರಬಹುದು. ಇದು ಶಿಕ್ಷಣ ಇಲಾಖೆಗೆ ಅರ್ಥವಾದಂತಿಲ್ಲ ಅಥವಾ ರಾಜ್ಯದ ಅನೇಕ ರಾಜಕಾರಣಿಗಳು ಕೂಡಾ ಇದರಲ್ಲಿ ನೇರವಾಗಿ ಧುಮುಕಿದಂತೆ ಭಾಸವಾಗುತ್ತದೆ. ಇದರಿಂದ ಆಗುವ ಅನನುಕೂಲಗಳ ಬಗ್ಗೆ ಸರಕಾರ ಚಿಂತಿಸದೆ ಜಾರಿ ಮಾಡಲು ಹೊರಟಿರುವುದು ಅತ್ಯಂತ ವಿಷಾದನೀಯ.

ವಿದ್ಯಾರ್ಥಿಗಳು ಕಲಿಕೆಯ ಬಗೆಗಿನ ಆಸಕ್ತಿಯನ್ನು ಸಂಪೂರ್ಣ ಕಳೆದುಕೊಳ್ಳುವುದಿರಲಿ, ಕಲಿಸಬೇಕೆಂಬ ಬದ್ಧತೆ ಹೊಂದಿರುವ ಶಿಕ್ಷಕರು ಕಲಿಸುವ ಆಸಕ್ತಿ ಕಳೆದುಕೊಳ್ಳುತ್ತಾರೆ. ಪಾಠ ಮಾಡದೆ ಅನ್ಯಕಾರ್ಯಗಳಲ್ಲಿ ತೊಡಗಿಕೊಳ್ಳುವ ಶಿಕ್ಷಕರಿಗೆ ವರದಾನವಾಗುತ್ತದೆ. ಇದರಿಂದಾಗಿ ಶಾಲೆಗಳು ಎಸೆಸೆಲ್ಸಿ ಸರ್ಟಿಫಿಕೇಟ್ ಪಡೆದ ಅವಿದ್ಯಾವಂತ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಕಾರ್ಖಾನೆಯಾಗುತ್ತವೆ. ಎಸೆಸೆಲ್ಸಿ ಎಂಬ ಕಾರಣಕ್ಕೆ ಹಾಗೂ ಶಾಲೆಯ ಫಲಿತಾಂಶದ ದೃಷ್ಟಿಯಿಂದ ನಡೆಯುತ್ತಿದ್ದ, ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆ ನಿಂತು ಹೋಗುತ್ತವೆ. ಕೇವಲ 10 ಅಂಕಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದಕ್ಕಾಗಿ ಬೋರ್ಡ್ ಪರೀಕ್ಷೆ ಬೇಕಾ? ಇದಕ್ಕಿಂತ ಆಂತರಿಕ ಅಂಕಗಳಿಗೆ ಹೆಚ್ಚಿನ ಮಹತ್ವವಿದೆ. ಎಸೆಸೆಲ್ಸಿ ಬೋರ್ಡ್ ಪ್ರಶ್ನೆಪತ್ರಿಕೆ ತಯಾರಿಕೆಗೆ, ಪರೀಕ್ಷೆಗೆ, ಮೌಲ್ಯಮಾಪನ, ಮರು ಮೌಲ್ಯಮಾಪನ ಇತ್ಯಾದಿ ಕಾರ್ಯಗಳಿಗೆ ನೂರಾರು ಕೋಟಿ ರೂ. ವ್ಯಯಿಸುವ ಅಗತ್ಯವಾದರೂ ಏನಿದೆ? ಅಲ್ಲಿರುವ ಸಿಬ್ಬಂದಿಗೆ ವೇತನ ನೀಡುವುದು ವ್ಯರ್ಥವಲ್ಲವೇ? ಇದರ ಬದಲಾಗಿ ಪರೀಕ್ಷಾ ಬೋರ್ಡ್‌ನ್ನು ಮುಚ್ಚಿಸಿ ಶಾಲಾ ಹಂತದಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲವೇ? ಆಗ ಕನಿಷ್ಠ ಪರೀಕ್ಷಾ ಬೋರ್ಡ್ ಮತ್ತು ಹತ್ತನೇ ತರಗತಿಯ ಘನತೆಯಾದರೂ ಉಳಿಯುತ್ತದೆ.

2023ರವರೆಗೆ ಫಲಿತಾಂಶದ ಬಗ್ಗೆ ಯಾರೊಬ್ಬರೂ ಮಾತನಾಡಲಿಲ್ಲ. ಕಾರಣ ಅಲ್ಲಿಯವರೆಗೆ ಎಲ್ಲರೂ ನಕಲು ಮಾಡಿಸುವ ಘನಂಧಾರಿ ಕೆಲಸದಿಂದ ಫಲಿತಾಂಶ ಹೆಚ್ಚು ಬರುತ್ತಿತ್ತು. 2023-24, 2024-25ರಲ್ಲಿ ಸಿ.ಸಿ.ಟಿ.ವಿ. ವೆಬ್‌ಕಾಸ್ಟಿಂಗ್ ಪರಿಣಾಮದಿಂದ ಫಲಿತಾಂಶ ಸ್ವಲ್ಪ ಮಟ್ಟಿಗೆ ಕುಸಿತವಾಯಿತು. ಆದರೂ 2024-25ನೇ ಸಾಲಿನಲ್ಲಿ ಶಾಲೆ ಮತ್ತು ಇಲಾಖಾ ಹಂತದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ಫಲಿತಾಂಶ ಏರಿಕೆಯಾಗಿದ್ದಲ್ಲದೆ, ವಿದ್ಯಾರ್ಥಿಗಳ ವೈಯಕ್ತಿಕ ಅಂಕ ಗಳಿಕೆಯಲ್ಲಿಯೂ ಏರಿಕೆಯಾಗಿದೆ. ಇದೇ ಪದ್ಧತಿಯನ್ನು ಇನ್ನು ಎರಡು-ಮೂರು ವರ್ಷಗಳ ಕಾಲ ಮುಂದುವರಿಸಿದ್ದರೆ, ಖಂಡಿತವಾಗಿಯೂ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಫಲಿತಾಂಶ ದೊರಕುವುದರಲ್ಲಿ ಎರಡು ಮಾತಿರಲಿಲ್ಲ. ತಮ್ಮ ಶಿಕ್ಷಣ ಸಂಸ್ಥೆಗಳ ಫಲಿತಾಂಶವನ್ನು ಹೆಚ್ಚಿಸಿಕೊಳ್ಳಲೇಬೇಕೆಂದು ಹಠಕ್ಕೆ ಬಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳು ಸಿ.ಬಿ.ಎಸ್.ಇ. ಮಾದರಿ ಫಲಿತಾಂಶ ಪದ್ಧತಿಗೆ ಮೊರೆ ಹೋಗಿ ಪರೀಕ್ಷಾ ಮಂಡಳಿಯ ಅಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸರಕಾರದ ಅಧಿಕಾರಿಗಳು ಕೂಡ ಈ ಕೆಲಸಕ್ಕೆ ಕೈಜೋಡಿಸಿ, ಜಾರಿಗೆ ತರಲು ಉತ್ಸುಕರಾಗಿದ್ದರು. ಇವರಿಬ್ಬರೂ ಸೇರಿಕೊಂಡು ಸರಕಾರಿ ಶಾಲೆಗಳು ಹಾಗೂ ಬಡ ವಿದ್ಯಾರ್ಥಿಗಳ ಕಲಿಕಾ ಭವಿಷ್ಯವನ್ನು ಮುಗಿಸಲು ಹೊರಟಂತಿದೆ. ಶಿಕ್ಷಣ ಸಚಿವರಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಇದು ಅರ್ಥವಾಗುತ್ತಿಲ್ಲ.

ಎಲ್ಲರೂ ಸಿ.ಬಿ.ಎಸ್.ಇ. ಮಾದರಿಯನ್ನು ಅಳವಡಿಸಿಕೊಳ್ಳುವುದೇ ಆದಲ್ಲಿ ಅಲ್ಲಿರುವ ಪಠ್ಯಕ್ರಮ, ಪ್ರಶ್ನೆಪತ್ರಿಕೆ ರಚನೆಯಲ್ಲಿ ಅನುಸರಿಸುವ ಮಾನದಂಡ, ಪರೀಕ್ಷಾ ಪದ್ಧತಿ, ಮೌಲ್ಯಮಾಪನ ಪದ್ಧತಿ, ಆಂತರಿಕ ಅಂಕಗಳ ಮೌಲ್ಯಮಾಪನ ಪದ್ಧತಿ, ಭಾಷಾ ವಿಷಯಗಳಿಗಿರುವ ಅಂಕಗಳನ್ನು ಪರಿಗಣಿಸಲಿ. ಕೇವಲ ಫಲಿತಾಂಶಕ್ಕೆ ಮಾತ್ರ ಅಳವಡಿಸಿಕೊಳ್ಳುತ್ತಿರುವ ಹುನ್ನಾರವಾದರೂ ಏನು? ಈ ಪದ್ಧತಿಯನ್ನು ಅಳವಡಿಸಿಕೊಳ್ಳಬಾರದು ಎಂದು ಹಲವಾರು ಆಕ್ಷೇಪಣೆಗಳು ಬಂದಿದ್ದರೂ ಯಾವುದನ್ನು ಪರಿಗಣಿಸದೆ ಏಕಪಕ್ಷೀಯವಾಗಿ ನಿಯಮ ಜಾರಿ ಮಾಡಿದ್ದು ತಪ್ಪು. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ವಿರೋಧಿಸುವ ರಾಜ್ಯ ಸರಕಾರ ಅದರ ಆಧಾರಿತ ಸಿ.ಬಿ.ಎಸ್.ಇ. ಮಾದರಿ ಉತ್ತೀರ್ಣ ಪದ್ಧತಿಯನ್ನು ಮಾತ್ರ ಏಕೆ ಪರಿಗಣಿಸಬೇಕು?

ಸಿ.ಬಿ.ಎಸ್.ಇ. ಪರೀಕ್ಷಾ ಪದ್ಧತಿಯು ಸಂಪೂರ್ಣವಾಗಿ ರಾಷ್ಟ್ರೀಯ ಶಿಕ್ಷಣನೀತಿಯನ್ನು ಆಧರಿಸಿದೆ. ಕೇಂದ್ರದ ಪಠ್ಯಕ್ರಮ ಹಾಗೂ ಪರೀಕ್ಷಾ ಪದ್ಧತಿ ಇದೆ. ಪ್ರಶ್ನೆ ಪತ್ರಿಕೆಯಲ್ಲಿ ಅನ್ವಯಿಕ ಅಂತಹ ಪ್ರಶ್ನೆಗಳು ಹೆಚ್ಚಿರುತ್ತವೆ. ಪಠ್ಯಪುಸ್ತಕವನ್ನು ಓದಿ ಅರ್ಥೈಸಿಕೊಂಡರಷ್ಟೇ ಉತ್ತರ ಬರೆಯಲು ಸಾಧ್ಯ. ಆಂತರಿಕ ಅಂಕಗಳ ಮೌಲ್ಯಮಾಪನ ವಸ್ತುನಿಷ್ಠ ಮತ್ತು ಪಾರದರ್ಶಕವಾಗಿರುತ್ತದೆ. ಆಂತರಿಕ ಮೌಲ್ಯಮಾಪನಕ್ಕೆ ಮಾನದಂಡ ನಿಗದಿಯಾಗಿರುತ್ತದೆ. ಕೇವಲ 2 ಭಾಷೆ ಮತ್ತು 3 ಕೋರ್ ವಿಷಯಗಳಿರುತ್ತವೆ. ಎಲ್ಲಾ ವಿಷಯಗಳಿಗೂ 100 ಅಂಕಗಳನ್ನು ನಿಗದಿ ಮಾಡಲಾಗಿರುತ್ತದೆ. ವರ್ಷಕ್ಕೆ ಎರಡು ಪರೀಕ್ಷೆಗಳು ಮಾತ್ರ ಇರುತ್ತದೆ. 5ನೇ ತರಗತಿಯಿಂದಲೇ ಅನುತ್ತೀರ್ಣ ಪದ್ಧತಿ ಜಾರಿಯಲ್ಲಿರುತ್ತದೆ, ಮೌಲ್ಯಮಾಪನ ಪ್ರಕ್ರಿಯೆ ಬಿಗಿಯಾಗಿರುತ್ತದೆ. ಒಂದು ಉತ್ತರ ಪತ್ರಿಕೆಯನ್ನು ಎರಡೆರಡು ಬಾರಿ ಮೌಲ್ಯಮಾಪನ ಮಾಡಿದ ನಂತರ ಫಲಿತಾಂಶ ಘೋಷಣೆಯಾಗುತ್ತದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಬಹಳ ಕಡಿಮೆ ಇರುತ್ತದೆ. ಮರುಮೌಲ್ಯಮಾಪನದ ನಂತರ ಅಂಕಗಳಿಕೆಯಲ್ಲಿ ಬಹಳ ವ್ಯತ್ಯಾಸ ಇರುವುದಿಲ್ಲ. ಇದ್ದರೂ ಹೆಚ್ಚೆಂದರೆ 3ರಿಂದ 4 ಅಂಕಗಳಿರಬಹುದು. ಬೋರ್ಡ್ ಪರೀಕ್ಷೆಯಲ್ಲಿ ಒಂದಂಕಿಯ ಅಂಕ ಬಂದಿದ್ದು ಅಥವಾ ಅನುತ್ತೀರ್ಣರಾಗಿದ್ದು ಆಂತರಿಕ ಅಂಕ ನೀಡುವಿಕೆಯಲ್ಲಿ ಹೆಚ್ಚಳವಾಗಿದ್ದರೆ ಅಂತಹ ಶಾಲೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುತ್ತದೆ. ಸಿ.ಬಿ.ಎಸ್.ಇ. ಶಾಲೆಗಳ ಪೋಷಕರು ವಿದ್ಯಾವಂತರು, ಸ್ಥಿತಿವಂತರೂ ಆಗಿರುತ್ತಾರೆ. ಕೇವಲ 10 ಅಥವಾ 13 ಅಂಕಗಳಿಗೆ ಸೀಮಿತರಾಗಿರುವುದಿಲ್ಲ.

ಇನ್ನು ರಾಜ್ಯಪರೀಕ್ಷಾ ಪದ್ಧತಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ರಾಜ್ಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವ ಸಂಬಂಧ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಇನ್ನೂ ಜಾರಿಯಾಗಿಲ್ಲ. ರಾಜ್ಯಪಠ್ಯಕ್ರಮ ಇದ್ದರೂ ಸಿ.ಬಿ.ಎಸ್.ಇ. ಪರೀಕ್ಷಾ ಪದ್ಧತಿಯನ್ನು ಉತ್ತೀರ್ಣಕ್ಕಾಗಿ ಮಾತ್ರ ಅಳವಡಿಸಿಕೊಳ್ಳಲಾಗುತ್ತಿದೆ. ಪಠ್ಯಪುಸ್ತಕದ ನೇರ ಪ್ರಶ್ನೆಗಳೇ ಹೆಚ್ಚಿರುತ್ತವೆ. ಒಂದೆರಡು ಅನ್ವಯಿಕ ಅಂತಹ ಪ್ರಶ್ನೆಗಳಿರುತ್ತವೆ ಅಷ್ಟೆ. ಪಠ್ಯಪುಸ್ತಕದ ಅಭ್ಯಾಸದ ಪ್ರಶ್ನೆಗಳೇ ಹೆಚ್ಚಿರುತ್ತವೆ ಎಲ್.ಬಿ.ಎ. ಪ್ರಶ್ನೆಕೋಠಿಯಲ್ಲಿರುವ ಪ್ರಶ್ನೆಗಳೇ ಇರಬೇಕು ಎಂಬ ಕಡ್ಡಾಯ ನಿಯಮ ಹೇರಲಾಗಿದೆ. ಆಂತರಿಕ ಅಂಕಗಳ ಮೌಲ್ಯಮಾಪನ ವ್ಯಕ್ತಿನಿಷ್ಠವಾಗಿರುತ್ತದೆ ಮತ್ತು ಯಾವುದೇ ಪಾರದರ್ಶಕತೆ ಇರುವುದಿಲ್ಲ.

ತಮಗಿಷ್ಟ ಬಂದಂತೆ ಅಂಕ ನೀಡಬಹುದು. ಯಾವುದೇ ಮಾನದಂಡವಿಲ್ಲ. ಒಂದಂಕಿ ಗಳಿಸಿದ ವಿದ್ಯಾರ್ಥಿ ಕೂಡ 20ಕ್ಕೆ 20 ಆಂತರಿಕ ಅಂಕ ಪಡೆದ ಉದಾಹರಣೆಯಿದೆ. 3 ಭಾಷೆ ಮತ್ತು 3 ಕೋರ್ ವಿಷಯ ಒಟ್ಟು 6 ವಿಷಯ ಗಳು ಇರುತ್ತವೆ. ಪ್ರಥಮ ಭಾಷೆ 125 ಅಂಕ, ಉಳಿದ ವಿಷಯಗಳಿಗೆ 100 ಅಂಕಗಳು ನಿಗದಿಯಾಗಿರುತ್ತದೆ. ವರ್ಷಕ್ಕೆ ಮೂರು ಪರೀಕ್ಷೆಗಳು ಇರುತ್ತವೆ.

9ನೇ ತರಗತಿಯವರೆಗೆ ಕಲಿಯದೆ ಇದ್ದರೂ, ಗೈರುಹಾಜರಾದರೂ ಕಡ್ಡಾಯ ಉತ್ತೀರ್ಣ ಪದ್ಧತಿ ಜಾರಿಯಲ್ಲಿದೆ. ಒಂದು ಬಾರಿ ಮಾತ್ರ ಮೌಲ್ಯಮಾಪನವಾಗುತ್ತದೆ. ಫಲಿತಾಂಶ ಬೇಗನೆ ಪ್ರಕಟವಾಗುತ್ತದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚು ಇರುತ್ತದೆ. ಮರು ಮೌಲ್ಯಮಾಪನದ ನಂತರ 20ರಿಂದ 30 ಅಂಕಗಳ ವ್ಯತ್ಯಾಸವಾಗಿರುವ ಉದಾಹರಣೆ ನಮ್ಮ ಮುಂದಿದೆ. ಮರು ಮೌಲ್ಯಮಾಪನದ ನಂತರ ರಾಜ್ಯಕ್ಕೆ ಟಾಪರ್ ಆಗಿರುವ ಉದಾಹರಣೆ ಇದೆ. ಇಂತಹ ನಿದರ್ಶನಗಳು ಸಾಕಷ್ಟಿದ್ದರೂ ಇದುವರೆಗೂ ಯಾವುದೇ ಕಾರಣ ಕೇಳಿ ನೋಟಿಸ್ ನೀಡಲಾಗಿಲ್ಲ. ರಾಜ್ಯದ ಸರಕಾರಿ ಶಾಲೆಗಳ ಮಕ್ಕಳ ಪೋಷಕರು ಅವಿದ್ಯಾವಂತರು, ಬಡವರು, ಕೂಲಿ ಕಾರ್ಮಿಕರಾಗಿರುತ್ತಾರೆ. ಇವರಿಗೆ 10 ಅಥವಾ 13 ಅಂಕಗಳಷ್ಟೇ ಅವರ ಗುರಿಯಾಗುತ್ತದೆ.

ಸರಕಾರದ ಈ ಅವೈಜ್ಞಾನಿಕ ನಿಯಮದಿಂದ ಪ್ರತೀ ವಿಷಯದಲ್ಲಿ ಸಂಭವನೀಯ ಪ್ರಶ್ನೆಗಳನ್ನು ಅಭ್ಯಾಸ ಮಾಡಿದರೆ ನಿರಾಯಾಸವಾಗಿ ಕನಿಷ್ಠ 10 ಅಂಕಗಳನ್ನು ಗಳಿಸಬಹುದು. ಉದಾಹರಣೆ: ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ಪಠ್ಯಪುಸ್ತಕದ ಗದ್ಯ, ಪದ್ಯ, ಪೂರಕ ಪಾಠಗಳನ್ನು ಅಭ್ಯಾಸ ಮಾಡದೆಯೇ ಪಠ್ಯಪುಸ್ತಕದ ಹೊರತಾದ ಪ್ರಶ್ನೆಗಳನ್ನು ಅಭ್ಯಾಸ ಮಾಡಿದರೆ ಕನಿಷ್ಠ ಅಂಕಗಳನ್ನು ಗಳಿಸಬಹುದು. ಗಾದೆಮಾತು-3 ಅಂಕಗಳು, ಪತ್ರಲೇಖನ-5 ಅಂಕಗಳು, ಪ್ರಬಂಧ-5 ಅಂಕಗಳು, ಅಪಠಿತ ಗದ್ಯ-4 ಅಂಕಗಳು, ಒಟ್ಟು 17 ಅಂಕಗಳು, ಇತರ ವಿಷಯಗಳಲ್ಲೂ 10 ಅಥವಾ 13 ಅಂಕ ಸಂಭವನೀಯ ಪ್ರಶ್ನೆಗಳನ್ನು ಕಲಿಸಿದರೆ ಸಾಕು. ಶಿಕ್ಷಕರ ಕೆಲಸ ಸರಳವಾಯಿತು. ಫಲಿತಾಂಶ ಹೆಚ್ಚಾಗುತ್ತದೆ. ಇದರಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷಿಸುವುದು ಸಾಧ್ಯವೇ ಯೋಚಿಸಿ.

ಈ ಅವೈಜ್ಞಾನಿಕ ಪದ್ಧತಿಯೊಂದಿಗೆ ಮತ್ತೊಂದು ಅವೈಜ್ಞಾನಿಕ ಪದ್ಧತಿಯನ್ನು ಜಾರಿಗೆ ತರಲು ಹೊರಟಿದ್ದಾರೆ. ಭಾರತ ದೇಶದ ಯಾವುದೇ ರಾಜ್ಯಗಳಲ್ಲಿಯೂ ಇಲ್ಲದ, ಸಿ.ಬಿ.ಎಸ್.ಇ. ಪಠ್ಯಕ್ರಮದಲ್ಲಿಯೂ ಇಲ್ಲದ ಪ್ರಶ್ನೆಪತ್ರಿಕೆ ರಚನೆ ಮಾಡುವಾಗ, ಪ್ರಶ್ನೆಪತ್ರಿಕೆ ರಚನಾಕಾರರು ಮಾತ್ರ ಅನುಸರಿಸಬೇಕಾದ ನೀಲನಕಾಶೆಯನ್ನು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ನೀಡಬೇಕು ಎಂದು 29 ಅಂಶಗಳ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಇದರ ಪ್ರಕಾರ ಯಾವ ಘಟಕದಲ್ಲಿ ಎಷ್ಟು ಅಂಕಗಳ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂಬ ಮಾಹಿತಿಯನ್ನು ಮೊದಲೇ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ನೀಡಲಾಗುತ್ತದೆ. ಒಂದರ್ಥದಲ್ಲಿ ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ಲೀಕ್ ಮಾಡಿದಂತಾಗುತ್ತದೆ. ಇದರಿಂದ ಶಿಕ್ಷಕರು ಹೆಚ್ಚಿನದನ್ನು ಕಲಿಸದೆ, ಯಾವ ಗದ್ಯದಿಂದ, ಯಾವ ಪದ್ಯದಿಂದ ಅಥವಾ ಯಾವ ಘಟಕದಿಂದ ಎಷ್ಟು ಅಂಕಗಳ ಪ್ರಶ್ನೆಗಳನ್ನು ಕೇಳಲಾಗುತ್ತದೆಯೋ ಆ ಅಂಕಗಳ ಪ್ರಶ್ನೆಗಳಿಗೆ ಮಾತ್ರ ಸಿದ್ಧ ಮಾಡುತ್ತಾರೆ. ಉಳಿದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮತ್ತು ಕಲಿಯುವ ಯೋಚನೆಯನ್ನು ಸಹ ಮಾಡದಂತೆ ಸರಕಾರ ಮಾಡ ಹೊರಟಿದೆ. ಒಟ್ಟಿನಲ್ಲಿ ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಮುಂದೆ ಯಾವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ಸಹ ಸ್ಪರ್ಧಿಸದಂತೆ, ಉನ್ನತ ಹುದ್ದೆಗಳನ್ನು ಅಲಂಕರಿಸದಂತೆ ಮಾಡಿ, ಬಾವಿಯೊಳಗಿನ ಕಪ್ಪೆಗಳನ್ನಾಗಿ ಮಾಡಲು ಹೊರಟಿದೆ. ಬಡವರು, ದಲಿತರು, ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡಮಕ್ಕಳ ಭವಿಷ್ಯದಲ್ಲಿ ಅವರ ವೃತ್ತಿ ಬದುಕು ದುಸ್ತರವಾಗಲಿದೆ.

ಸರಕಾರ ಬದಲಾವಣೆ ತರುವುದಾದರೆ ಪ್ರಮುಖವಾಗಿ ಉತ್ತೀರ್ಣದ ಮಾನದಂಡವನ್ನು ಈಗಿರುವ ಶೇ. 35ಕ್ಕೆ ಬದಲಾಗಿ 30ಕ್ಕೆ ಇಳಿಸಿ, ಆಂತರಿಕ ಅಂಕಗಳನ್ನು ಪರಿಗಣಿಸುವುದೇ ಆದಲ್ಲಿ ಶೇಕಡ 10 ಅಂಕಗಳನ್ನು ಪರಿಗಣಿಸಿ, ಪ್ರಶ್ನೆ ಪತ್ರಿಕೆಯನ್ನು ಸರಳೀಕರಣಗೊಳಿಸಲಿ.

ಕೊನೆಯ ಸಾಲು: ಇವತ್ತು ಪಡೆದ ಶಿಕ್ಷಣ, ಭವಿಷ್ಯದ ಬದುಕಿಗೆ ಸಹಾಯಕವಾಗಬೇಕು. ನಾವು ಎಡವಿದಾಗ ಊರುಗೋಲಾಗಬೇಕು. ಪ್ರಸ್ತುತ ಹತ್ತನೇ ತರಗತಿಯ ಬದಲಾದ ಪರೀಕ್ಷಾ ಪದ್ಧತಿಯಿಂದ ಇದು ದೂರವಾಗುತ್ತದೆ. ಪರೀಕ್ಷೆಯೆಂದರೆ, ಪ್ರತಿಯೊಬ್ಬ ವಿದ್ಯಾರ್ಥಿ ಸ್ವಸಾಮರ್ಥ್ಯದಿಂದ ಯಾರ ಹಂಗಿಲ್ಲದೆ ಕಲಿತು ಉತ್ತೀರ್ಣರಾಗುವಂತಿರಬೇಕು. ಇದರಿಂದ ಖಂಡಿತವಾಗಿಯೂ ಶಿಕ್ಷಣದ ಗುಣಮಟ್ಟ ಉಳಿಯುತ್ತದೆ. ಸರಕಾರಿ ಶಾಲೆಗಳು ಉಳಿಯುತ್ತವೆ. ಬಡವರು ಕೂಲಿ ಕಾರ್ಮಿಕರ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವಂತಾಗುತ್ತದೆ. ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಯೋಚಿಸಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಂ. ವಿಶ್ವನಾಥ ಮರತೂರ

contributor

Similar News