ನಿವೇಶನ, ಪಿಂಚಣಿ ಹೆಚ್ಚಳಕ್ಕೆ ಬೇಡಿಕೆ: 50ಕ್ಕೂ ಅಧಿಕ ಸಂತ್ರಸ್ತೆಯರ ಅಳಲು
ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರ ಯಾತನೆ
ಬೆಂಗಳೂರು: ಸಾವು ನೋವಿನ ಮಧ್ಯೆ ಬದುಕು ಮುನ್ನಡೆಸುತ್ತಿರುವ ರಾಜ್ಯದ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರ ಯಾತನೆ ಕೇಳುವವರು ಇಲ್ಲದಂತಾಗಿದೆ. ಅರ್ಥಿಕ ಬಿಕ್ಕಟ್ಟಿನಿಂದ ಸರಿಯಾಗಿ ಚಿಕಿತ್ಸೆ ಸಿಗದೇ ತನ್ನ ಸಂಪೂರ್ಣ ಆರೋಗ್ಯ ಹದಗೆಟ್ಟುತ್ತಿವೆ. ಅಲ್ಲದೇ 10 ವರ್ಷಕ್ಕೂ ಹಿಂದಿನಿಂದ 50ಕ್ಕೂ ಅಧಿಕ ಆ್ಯಸಿಡ್ ಸಂತ್ರಸ್ತೆಯರ ಬೇಡಿಕೆಯಾಗಿರುವ ನಿವೇಶನ, ಪಿಂಚಣಿ ಹೆಚ್ಚಳಕ್ಕಾಗಿ ಇನ್ನಾದರೂ ಸರಕಾರ ಕಿವಿ ಕೊಡಲಿದೆಯಾ? ಎಂಬಿತ್ಯಾದಿಗಳ ಕುರಿತು ‘ವಾರ್ತಾ ಭಾರತಿ’ಯೊಂದಿಗೆ ಸಂತ್ರಸ್ತೆಯರು ಅಳಲು ತೋಡಿಕೊಂಡಿದ್ದಾರೆ.
ಆ್ಯಸಿಡ್ ಸಂತ್ರಸ್ತೆಯರಿಗಿಲ್ಲ ನೆಲೆ: ಆ್ಯಸಿಡ್ ದಾಳಿಗೆ ಒಳಗಾದ ಅರ್ಧದಷ್ಟು ಸಂತ್ರಸ್ತೆಯರಿಗೆ ಸ್ವಂತ ಮನೆಯೇ ಇಲ್ಲ. 2003ರಿಂದಲ್ಲೂ ಸ್ವಂತಃ ನಿವೇಶನಕ್ಕಾಗಿ ಸಂಬಂಧಪಟ್ಟ ಇಲಾಖೆಗಳಿಗೆ ಅಲೆದಾಡುತ್ತಿದ್ದೇವೆ. ಆದರೆ ಇದುವರೆಗೂ ನಮಗೆ ಯಾವುದೇ ಸಕರಾತ್ಮಕ ಸ್ಪಂದನೆ ಸಿಗುತ್ತಿಲ್ಲ. ಪಿಂಚಣಿ ಹಣದ ಮುಕ್ಕಾಲು ಅಂಶವನ್ನು ಮನೆ ಬಾಡಿಗೆಗೆ ಕಟ್ಟುತ್ತಿದ್ದೇವೆ ಎಂದು 2002ರಲ್ಲಿ ತನ್ನ ಪತಿಯಿಂದ ಆ್ಯಸಿಡ್ ದಾಳಿಗೆ ಒಳಗಾದ ತುಮಕೂರು ಜಿಲ್ಲೆಯ ಜಯಲಕ್ಷ್ಮೀ ಎನ್ನುತ್ತಾರೆ.
ಎಡೆಬಿಡದೆ ಕಾಡುವ ಆರೋಗ್ಯ ಸಮಸ್ಯೆ: ಆ್ಯಸಿಡ್ ದಾಳಿಯ ಘಟನೆಗಳು ಬದುಕುಳಿದವರ ಮೇಲೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಪರಿಣಾಮ ಬೀರುತ್ತವೆ. ಬೇಸಿಗೆ ಕಾಲದಲ್ಲಿ ಚರ್ಮದಲ್ಲಿ ವಿಪರೀತವಾಗಿ ಹದಗೆಡುತ್ತವೆ, ದಿನಾಲೂ ಕಣ್ಣಿಗೆ ಡ್ರಾಪ್ಸ್, ಮೂಗಿನಲ್ಲಿ ಉಸಿರಾಟ ಮಾಡಲು ವಿಪರೀತ ಕಷ್ಟ ಅನುಭವಿಸುತ್ತೇವೆ. ದುಡ್ಡಿಲ್ಲದೇ ಅಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿಲ್ಲ, ನಾವು ತಿಂಗಳಿಗೆ ಸಾವಿರಾರು ರೂ. ಚಿಕಿತ್ಸೆ ಪಡೆದುಕೊಳ್ಳಲು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ. ಸಂತ್ರಸ್ತೆಯೊಬ್ಬರು ಶಸ್ತ್ರಚಿಕಿತ್ಸೆ ಮಾಡಲು ಹಣವಿಲ್ಲದೇ ಸಾವನ್ನಪ್ಪಿದ್ದರು. ಬದುಕುಳಿದವರು ತಮ್ಮ ಕೆಲಸವನ್ನು ಸಹ ಕಳೆದುಕೊಳ್ಳುತ್ತಾರೆ. ಮಾಸಿಕ ಖಿನ್ನತೆಗೂ ಒಳಗಾಗುತ್ತಾರೆ. ಹೀಗಿರುವಾಗ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿಬಿಟ್ಟಿದೆ ಎಂದು ಸಂತ್ರಸ್ತೆ ಜಯಲಕ್ಷ್ಮೀ ಬವಣೆ ತೋಡಿಕೊಂಡಿದ್ದಾರೆ.
ಒಂದು ವರ್ಷದಲ್ಲಿ 20 ಶಸ್ತ್ರ ಚಿಕಿತ್ಸೆ: 1989ರಲ್ಲಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ, ಮದುವೆಗೆ ಒಪ್ಪಿಲ್ಲ ಎಂದು ಆ್ಯಸಿಡ್ ದಾಳಿ ನಡೆಸಿದ್ದಾರೆ. ಬರೊಬ್ಬರಿ ಒಂದು ವರ್ಷಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 20 ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಅದರೂ ಸಂಪೂರ್ಣ ಗುಣಮುಖವಾಗಿಲ್ಲ. ಮನೆಯಲ್ಲೇ ಬಂಧಿಯಾಗಿ
ದ್ದೆ. ಮೂವತ್ತು ವರ್ಷದಲ್ಲಿ ಸರಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದು ಸರೋಜಾ ಆಳಲು ತೋಡಿಕೊಂಡರು.
ಕಾನೂನಿನ ನೆರವು ಅಗತ್ಯ: ನನಗೆ 19 ವಯಸ್ಸಿನಲ್ಲಿ ಆ್ಯಸಿಡ್ ದಾಳಿಯಾಗುತ್ತದೆ. ಆಗ ನನಗೆ 2 ವರ್ಷದ ಮಗು ಇತ್ತು. ಸಾವು ಬದುಕಿನ ಹೋರಾಟ ಮಾಡಿ ಮಗುವಿಗೋಸ್ಕರ ಬದುಕಿದ್ದೇನೆ. ಈಗ 12 ವರ್ಷ ಆಗಿದೆ. ಅಂದಿನ ಘಟನೆಯ ಕುರಿತು ಕೇಸ್ ಹೇಗೆ ನಡೆಯುತ್ತಿದೆ ಅನ್ನುವುದು ತಿಳಿಯುತ್ತಿಲ್ಲ. ಇನ್ನು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಕೇಸ್‌ಗಾಗಿ ಅಲೆದಾಟ ಮಾಡಬೇಕಾಅಥವಾ ವಕೀಲರೊಂದಿಗೆ ಸಮಾಲೋಚನೆ ನಡೆಸಬೇಕೆಂಬುವುದರ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಸರಕಾರ ಆ್ಯಸಿಡ್ ದಾಳಿಗೆ ಒಳಪಟ್ಟವರಿಗೆ ಕಾನೂನಿನ ನೆರವು ನೀಡಲು ಮುಂದಾಗಬೇಕೆಂದು ಹಾವೇರಿ ಜಿಲ್ಲೆಯ ಸಂತ್ರಸ್ತೆ ರತ್ನಾ ಚಲವಾದಿ ಎನ್ನುತ್ತಾರೆ.
ಪಿಂಚಣಿ ಹೆಚ್ಚಿಸಲಿ
ನಮ್ಮ ಸಮೀಕ್ಷೆಯಲ್ಲಿ ಒಟ್ಟು 148 ಮಂದಿ ಆ್ಯಸಿಡ್ ಸಂತ್ರಸ್ತೆಯರು ಇದ್ದರು, ಈಗ ಸಂಪರ್ಕದಲ್ಲಿ ಸುಮಾರು 54 ಮಂದಿಯಷ್ಟು ಮಹಿಳೆಯಿರಿದ್ದಾರೆ. ತೆರೆ ಮರೆಯಲ್ಲಿರುವ ಇನ್ನಷ್ಟು ಸಂತ್ರಸ್ತೆಯರನ್ನು ಸರಕಾರ ಗುರುತಿಸಿ ಅವರಿಗೆ ಸರಿಯಾದ ಮೂಲಭೂತ ಸೌಕರ್ಯವನ್ನು ಒದಗಿಸಬೇಕಾಗಿದೆ. ಸರಕಾರ ನೀಡುವ 10 ಸಾವಿರ ರೂ. ಪಿಂಚಣಿ ಸಾಲುತ್ತಿಲ್ಲ. ದುಬಾರಿ ದಿನಸಿ ಸಾಮಗ್ರಿಗಳು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶುಲ್ಕದ ಹೊರೆಯಿರುವಾಗ ಈ ಪಿಂಚಣಿ ಮೊತ್ತ ಸಾಕಾಗುವುದಿಲ್ಲ. ಸರಕಾರ ಪಿಂಚಣಿ ಮೊತ್ತವನ್ನು ಹೆಚ್ಚಿಸಬೇಕು. ಸಂತ್ರಸ್ತೆಯರಿಗೆ ನೀಡುವ 5 ಲಕ್ಷ ರೂ. ಸಾಲಕ್ಕಾಗಿ ಬ್ಯಾಂಕ್ ಹೋದರೆ ದಾಖಲೆ ಕೊರತೆ ನೆಪದಲ್ಲಿ ಸಾಲ ಸಿಗುತ್ತಿಲ್ಲ ಎಂಬುದು ಸಂತ್ರಸ್ತೆಯರ ಆರೋಪವಾಗಿದೆ.
ಪ್ರೇಮ ವೈಫಲ್ಯ, ಕುಟುಂಬ ಕಲಹ, ಕೆಲಸದ ಸ್ಥಳಗಳಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿರುವ ಅವಿವಾಹಿತ ಯುವತಿಯರ ಪಾಡು ಕೂಡ ಶೂಚನೀಯ ಸ್ಥಿತಿಗೆ ತಲುಪಿದೆ. ಕಣ್ಣು, ಮೂಗು, ಕಿವಿ ಎಲ್ಲವನ್ನು ಕಳೆದುಕೊಂಡವರು ಸಹ ಇದ್ದಾರೆ. ಕೆಲವರಿಗೆ ಕುತ್ತಿಗೆ ಮೇಲೆತ್ತಲು ಆಗುವುದಿಲ್ಲ. ಕೈಗಳ ಸ್ನಾಯುಗಳು ಕೂಡ ಅಸಹಾಯಕವಾಗಿವೆ. ಇಂತಹ ಸಂದರ್ಭದಲ್ಲಿ ಇವರಿಗೆ ಸರಿಯಾದ ಹೆಲ್ತ್ ಕಾರ್ಡ್ ಕೂಡ ಇಲ್ಲ .
-ಜಯಲಕ್ಷ್ಮೀ, ಸಂತ್ರಸ್ತೆ