ಪ್ರಜಾತಂತ್ರ ಮತ್ತು ಚುನಾಯಿತ ಸರಕಾರದ ಉತ್ತರದಾಯಿತ್ವ
ಪ್ರಜಾತಂತ್ರದಲ್ಲಿ ಸಾಂವಿಧಾನಿಕ ಹುದ್ದೆಗಳಿಗೆ ವಿಶೇಷ ಸ್ಥಾನವಿದೆ. ಅವುಗಳ ಘನತೆಯನ್ನು ಸರಕಾರ ಹೆಚ್ಚಿಸಬೇಕು, ಸ್ವಾಯತ್ತೆಯನ್ನು ರಕ್ಷಿಸಬೇಕು. ಕಳೆದ ದಶಕದಲ್ಲಿ ಸಂಸತ್ತಿನ ಉಭಯ ಸಭಾಧ್ಯಕ್ಷರ ವರ್ತನೆಗಳು ಅವರು ಸರಕಾರದ ಕೈಗೊಂಬೆಗಳೆಂಬ ಭಾವನೆಯನ್ನು ಹುಟ್ಟಿಸುತ್ತವೆ. ಇದನ್ನು ತಡೆಯುವ ಜವಾಬ್ದಾರಿ ಸರಕಾರದ ಮೇಲಿದೆ. ಅದೇ ರೀತಿ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳಾದ ನ್ಯಾಯಾಂಗ ಮತ್ತು ಚುನಾವಣಾ ಆಯೋಗಗಳನ್ನು ತನ್ನ ಹಿಡಿತದಲ್ಲಿ ತರುವ ಪ್ರಯತ್ನಗಳನ್ನು ಸರಕಾರವು ಮಾಡುತ್ತಲೇ ಇದೆ. ಆಳುವ ಪಕ್ಷದ ಸದಸ್ಯರು ಸುಪ್ರೀಂ ಕೋರ್ಟಿನ ಮೇಲೆ ಗಂಭೀರವಾದ ಆರೋಪಗಳನ್ನು ಮಾಡಿದರೂ ಸರಕಾರವು ಕ್ರಮ ಕೈಗೊಂಡಿಲ್ಲ. ಚುನಾಯಿತ ಸರಕಾರವೊಂದು ತನ್ನ ಉತ್ತರದಾಯಿತ್ವದಿಂದ ವಿಮುಖವಾದಾಗ ಅದು ಸಂವಿಧಾನದ ಆಶಯಕ್ಕೆ ವಿರೋಧವಲ್ಲವೇ?
✍️ ಟಿ.ಆರ್. ಭಟ್
ಜೂನ್ 25ನೇ ತಾರೀಕನ್ನು ಸಂವಿಧಾನದ ಹತ್ಯೆಯ ದಿನ ಎಂದು ಆಚರಿಸಲು ನರೇಂದ್ರ ಮೋದಿ ಸರಕಾರವು ಆರಂಭಿಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ 50 ವರ್ಷಗಳ ಹಿಂದೆ ಆರಂಭವಾದ ಒಂದು ಕರಾಳ ಅಧ್ಯಾಯವನ್ನು ದೇಶವು ನೆನಪಿಸಿಕೊಳ್ಳಬೇಕೆಂಬುದು ಇದರ ಘೋಷಿತ ಉದ್ದೇಶ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಜೂನ್ 25, 1975ರಲ್ಲಿ ಜಾರಿಗೆ ತಂದ ‘ಆಂತರಿಕ ಆಪತ್ಕಾಲ (internal emergency)’ ಅವರು ಸಂವಿಧಾನಕ್ಕೆ ಎಸಗಿದ ಘೋರ ಅಪಚಾರವೇ ಆಗಿತ್ತು. ಆದರೆ ದೇಶದ ಪ್ರಬುದ್ಧ ಮತದಾರರು ಮಾರ್ಚ್ 1977ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಅವರನ್ನೂ, ಅವರ ಕಾಂಗ್ರೆಸನ್ನೂ ಹೀನಾಯವಾಗಿ ಸೋಲಿಸಿ ಸಂವಿಧಾನದ ಮಹತ್ವವನ್ನು ಎತ್ತಿ ಹಿಡಿದದ್ದು ದೇಶದ ಚರಿತ್ರೆಯಲ್ಲಿಯ ಒಂದು ಪ್ರಮುಖ ಮೈಲಿಗಲ್ಲು.
ಆ ಕರಾಳದಿನವನ್ನು ಸರಕಾರವು ನೆನಪಿಸುವಾಗಲೇ ಅಂತಹ ಘಟನೆಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳುವ ಬಾಧ್ಯತೆ ಸರಕಾರಕ್ಕೆ ಇದೆ. 11 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರಕಾರ ಸಂವಿಧಾನಕ್ಕೆ ಎಷ್ಟು ಬದ್ಧವಾಗಿದೆ ಎಂಬುದರ ಕುರಿತು ವಸ್ತುನಿಷ್ಠವಾದ ಚರ್ಚೆ ಇಂದು ಅಗತ್ಯ. ಈ ವಿಮರ್ಶೆಯ ಒಂದು ಪ್ರಮುಖ ಮಾನದಂಡ ಚುನಾಯಿತ ಸರಕಾರವು ಎಷ್ಟರ ಮಟ್ಟಿಗೆ ಪ್ರಜೆಗಳಿಗೆ ಉತ್ತರದಾಯಿಯಾಗಿದೆ ಎಂಬುದು.
ಉತ್ತರದಾಯಿತ್ವ ಎಂದರೆ ಏನು?
ಪ್ರಜಾತಂತ್ರವ್ಯವಸ್ಥೆಯಲ್ಲಿ ಚುನಾಯಿತ ಸರಕಾರವು (ಅರ್ಥಾತ್‌ಮಂತ್ರಿಮಂಡಲವು) ಅಧಿಕಾರವನ್ನು ಸ್ವೀಕರಿಸುವಾಗ ತಾವು ಸಂವಿಧಾನಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಪ್ರತಿಜ್ಞೆಯನ್ನು ಮಾಡಬೇಕು. ರಾಜಪ್ರಭುತ್ವಕ್ಕೆ ಭಿನ್ನವಾಗಿ ಪ್ರಜಾಸತ್ತೆಯಲ್ಲಿ ಸರಕಾರದ ನಿರ್ಧಾರಗಳಲ್ಲಿ ಪಾರದರ್ಶಕತೆ ಅತೀ ಅಗತ್ಯ; ಅವುಗಳ ಬಗ್ಗೆ ಜನಪ್ರತಿನಿಧಿಗಳ ನಡುವೆ ಮುಕ್ತ ಚರ್ಚೆಯೂ ಅಗತ್ಯ. ಕಾಲಕಾಲಕ್ಕೆ ಪ್ರತಿನಿಧಿಗಳ ಸಭೆಯಾದ ಸಂಸತ್ತಿನಲ್ಲಿ ವಿಷಯಗಳನ್ನು ಮಂಡಿಸಿ ಚರ್ಚೆಗೆ ಅವಕಾಶ ನೀಡಬೇಕು. ಮಂತ್ರಿಮಂಡಲದ ಕಾರ್ಯವೈಖರಿಯ ಬಗ್ಗೆ ಮುಕ್ತ ಚರ್ಚೆಯಾಗಬೇಕು. ವೈಫಲ್ಯಗಳಿದ್ದರೆ ಕಾರಣಗಳನ್ನು ವಿವರಿಸಿ, ಅವುಗಳನ್ನು ಸರಿಪಡಿಸುವ ದಾರಿಯನ್ನು ಸಂಸತ್ತಿನ ಮುಂದಿಡಬೇಕು. ವೈಫಲ್ಯಗಳಿಗೆ ಸಂಬಂಧಪಟ್ಟವರು ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಬೇಕು. ಒಟ್ಟಿನಲ್ಲಿ ಚುನಾಯಿತ ಸರಕಾರವು ತನ್ನ ಅಧಿಕಾರಾವಧಿಯಲ್ಲಿ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದೇನೆ ಎಂದು ರಾಷ್ಟ್ರಕ್ಕೆ ಮನವರಿಕೆ ಮಾಡಬೇಕು.
ಯಾರಿಗೆ ಸರಕಾರವು ಉತ್ತರದಾಯಿಯಾಗಿರಬೇಕು?
ತಾನು ಪ್ರಜೆಗಳಿಗೆ ಉತ್ತರದಾಯಿ ಎಂದು ಅಧಿಕಾರ ಹಿಡಿದಿರುವ ಸರಕಾರವು ಹೇಗೆ ತೋರಿಸಿಕೊಡಬೇಕು? ಅಧಿಕಾರ ಸ್ವೀಕರಿಸುವಾಗ ಅಥವಾ ಅದರ ಮೊದಲು ಕೊಟ್ಟ ಆಶ್ವಾಸನೆಗಳ ಬಗ್ಗೆ ಸಂಸತ್ತಿಗೆ ವರದಿ ನೀಡಬೇಕು. ದೇಶದ ಒಳಗೂ ವಿದೇಶಗಳಲ್ಲಿಯೂ ನಡೆಯುತ್ತಿರುವ ವಿದ್ಯಮಾನಗಳು ಪ್ರಜೆಗಳ ಮೇಲೆ ಗಂಭೀರವಾದ ಪರಿಣಾಮ ಉಂಟು ಮಾಡುವ ಸಂದರ್ಭದಲ್ಲಿ ಅವುಗಳ ಬಗ್ಗೆ ಸಂಸತ್ತಿನಲ್ಲಿ ಮುಕ್ತವಾಗಿ ಚರ್ಚೆ ನಡೆಸಿ ಆ ಬಗ್ಗೆ ಸರಕಾರವು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಬೇಕು. ಅಗತ್ಯಬಿದ್ದಾಗ ಸಂಸತ್ತಿನ ಸಭೆಯನ್ನು ತುರ್ತಾಗಿ ಕರೆದು ಜನಪ್ರತಿನಿಧಿಗಳಿಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುವುದೂ ಸರಕಾರದ ಜವಾಬ್ದಾರಿ. ಕೆಲವೊಮ್ಮೆ ಸಂಸದರೇ ಚರ್ಚೆಗೆ ಆಗ್ರಹಿಸಿದರೆ ಸರಕಾರವು ಅದಕ್ಕೆ ಅವಕಾಶನೀಡುವುದು ಅದರ ಕರ್ತವ್ಯ.
ಪ್ರಧಾನ ಮಂತ್ರಿ ಕೇಂದ್ರಿತ ಪದ್ಧತಿ
ಭಾರತದ ಪ್ರಜಾತಂತ್ರವು ಇಂಗ್ಲೆಂಡ್‌ನಂತೆ ಕ್ಯಾಬಿನೆಟ್ ವ್ಯವಸ್ಥೆ ಮಾದರಿಯಲ್ಲಿದೆ. ಜನರಿಂದ ಆಯ್ಕೆಯಾಗಿ ಬಂದ ಪ್ರತಿನಿಧಿಗಳು ತಮ್ಮಲ್ಲಿ ಸೂಕ್ತರಾದವರನ್ನು ಪ್ರಧಾನ ಮಂತ್ರಿಯನ್ನಾಗಿ ಆರಿಸಿ ಆಡಳಿತದ ಸೂತ್ರವನ್ನು ಅವರ ಕೈಗೆ ನೀಡುತ್ತಾರೆ. ಪ್ರಧಾನ ಮಂತ್ರಿ ಚುನಾಯಿತ ಪ್ರತಿನಿಧಿಗಳಲ್ಲಿ ತಮಗೆ ಸರಿಕಂಡವರನ್ನು ಮಂತ್ರಿಮಂಡಲದ ಸದಸ್ಯರನ್ನಾಗಿ ನೇಮಿಸುತ್ತಾರೆ. ತಾತ್ವಿಕವಾಗಿ ಮಂತ್ರಿಮಂಡಲದಲ್ಲಿ ಎಲ್ಲ ಸದಸ್ಯರೂ ಸಮಾನರಾದರೂ, ಪ್ರಧಾನ ಮಂತ್ರಿ ಸಮಾನರಲ್ಲಿ ಮೊದಲನೆಯವರು ಮತ್ತು ಸರಕಾರದ ಮುಖ್ಯಸ್ಥರು. ಹಾಗಾಗಿ ಇತರರಿಗಿಂತ ಅವರ ಜವಾಬ್ದಾರಿ ಗುರುತರವಾದುದು. ಸರಕಾರದ ಯಶಸ್ಸು ಹಾಗೂ ವೈಫಲ್ಯಗಳಿಗೆ ಅವರು ಉತ್ತರದಾಯಿಯಾಗುತ್ತಾರೆ.
ಈ ನೆಲೆಯಲ್ಲಿ ಪ್ರಧಾನ ಮಂತ್ರಿಯರು ಪ್ರಮುಖ ವಿಷಯಗಳ ಕುರಿತು ಸಂಸತ್ತಿನಲ್ಲಿ ಆಗುವ ಚರ್ಚೆಗಳಲ್ಲಿ ಭಾಗವಹಿಸಬೇಕು; ವಿಶೇಷ ಸಂದರ್ಭಗಳಲ್ಲಿ ತಾವಾಗಿಯೇ ಸಂಸತ್ತನ್ನು ಉದ್ದೇಶಿಸಿ ಮಾತನಾಡಬೇಕು. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಬೇಕು; ತಮ್ಮ ಸ್ಥಾನದ ಘನತೆಯನ್ನು ಸದಾ ಕಾಪಾಡಬೇಕು. ಮಂತ್ರಿಗಳು ಅಥವಾ ಪಕ್ಷದ ಸದಸ್ಯರು ಸಂಸತ್ತಿನ ಒಳಗೆ ಆಕ್ಷೇಪಾರ್ಹವಾಗಿ ವರ್ತಿಸಿದರೆ, ಅದರ ಘನತೆಗೆ ಕುಂದು ಉಂಟುಮಾಡಿದರೆ, ಅವರ ಬಗ್ಗೆ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿ ಕೂಡಾ ಪ್ರಧಾನ ಮಂತ್ರಿಯ ಮೇಲೆ ಇದೆ.
ಕಳೆದ ದಶಕದ ಬೆಳವಣಿಗೆ
ಕಳೆದ 11 ವರ್ಷಗಳಲ್ಲಿ ಆಡಳಿತಸೂತ್ರವನ್ನು ವಹಿಸಿದ ನರೇಂದ್ರ ಮೋದಿ ಸರಕಾರದ ಕೊರತೆಗಳು ಎದ್ದು ಕಾಣುತ್ತವೆ. ಈ ಕೊರತೆಗಳನ್ನು ಮೂರು ವಿಷಯಗಳಿಂದ ಅರ್ಥಮಾಡಿಕೊಳ್ಳಬಹುದು: ಸಂಸತ್ತಿನಲ್ಲಿ ಪ್ರಧಾನಿಯ ವರ್ತನೆ, ಸಂಸತ್ತಿನಲ್ಲಿನ ಚರ್ಚೆಗಳು ಮತ್ತು ಸಾಂವಿಧಾನಿಕ ಹುದ್ದೆಗಳಿಗೆ ಸರಕಾರವು ಕೊಡುವ ಗೌರವ.
2014ರಲ್ಲಿ ಮೊದಲ ಬಾರಿ ಸಂಸತ್ತನ್ನು ಪ್ರವೇಶಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದ್ಭವನದ ಮೆಟ್ಟಲಿಗೆ ಬಾಗಿ ನಮಸ್ಕರಿಸಿ ಇದು ದೇಶದ ಪವಿತ್ರವಾದ ದೇಗುಲ ಎಂದಿದ್ದರು. ಬೇರೆ ಬೇರೆ ಸಂದರ್ಭಗಳಲ್ಲಿ ನಮ್ಮ ಪ್ರಜಾತಂತ್ರವ್ಯವಸ್ಥೆಯನ್ನು ನ್ಯಾಯವಾಗಿಯೇ ಕೊಂಡಾಡಿದ್ದರು. ಅವರ ವರ್ತನೆ ಮತ್ತು ಹೇಳಿಕೆಗಳು ಹೊಸ ಭರವಸೆಯನ್ನು ಹುಟ್ಟಿಸಿದ್ದವು ಎಂದರೆ ತಪ್ಪಲ್ಲ.
ಆದರೆ ಮುಂದಿನ ದಶಕದಲ್ಲಿ ಸಂಸತ್ತಿನ ಒಳಗೆ ಅವರ ವರ್ತನೆ, ಮಾತಿನ ವೈಖರಿ ಈ ಭರವಸೆಯನ್ನು ಹುಸಿಗೊಳಿಸಿದವು. ಚರ್ಚೆಗಳಲ್ಲಿ ಮಾತನಾಡುವಾಗ ವಿಷಯದ ಬಗ್ಗೆ ಒತ್ತು ನೀಡುವುದರ ಬದಲು, ಹಿಂದಿನ ಸರಕಾರಗಳನ್ನು, ವಿರೋಧಪಕ್ಷದ ಪ್ರತಿನಿಧಿಗಳನ್ನು ವ್ಯಕ್ತಿಗತವಾಗಿ ಟೀಕಿಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಸಭ್ಯತೆಯ ಲಕ್ಷ್ಮಣ ರೇಖೆಯನ್ನು ಮೀರಿ ವರ್ತಿಸಿದ್ದೂ ಇದೆ. (ಸಂಸದೆ ರೇಣುಕಾ ಚೌಧುರಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ನಿವೃತ್ತರಾಗುತ್ತಿದ್ದ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ-ಇವರ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿಯವರು ಆಡಿದ್ದ ಮಾತುಗಳು ತಮ್ಮ ಸ್ಥಾನದ ಮತ್ತು ಸಂಸತ್ತಿನ ಘನತೆಗೆ ಹಾನಿಕಾರಕವಾಗಿದ್ದವು).
ಇನ್ನೊಂದು ಪ್ರಮುಖ ವಿಷಯವೆಂದರೆ ಸರಕಾರ ಕೈಗೊಂಡ ನೀತಿ ನಿರ್ಧಾರಗಳ ಬಗ್ಗೆ ಇತ್ತೀಚೆಗಿನ ವರ್ಷಗಳಲ್ಲಿ ಮುಕ್ತ ಚರ್ಚೆಗಳಾಗುವುದೇ ಇಲ್ಲ. 2016ರಲ್ಲಿ ಮಾಡಿದ ನೋಟು ರದ್ದತಿ ಮತ್ತು 2020ರಲ್ಲಿ ದೇಶದಾದ್ಯಂತ ಹರಡುತ್ತಿದ್ದ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೇರಿದ ಲಾಕ್‌ಡೌನ್ ಇವೆರಡು ಏಕಪಕ್ಷೀಯ ನಿರ್ಧಾರಗಳು ಜನಸಾಮಾನ್ಯರ ಬದುಕುಗಳನ್ನು ಅಸಹನೀಯವಾಗಿಸಿದ್ದವು. ಈ ಘಟನೆಗಳು ಚುನಾಯಿತ ಸರಕಾರದ ಉತ್ತರದಾಯಿತ್ವದ ಬಗ್ಗೆ ಕನ್ನಡಿ ಹಿಡಿಯುತ್ತವೆ. ಇಡೀ ದೇಶದ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಿ, ಲಕ್ಷಾಂತರ ಉದ್ಯೋಗ ನಷ್ಟ, ಕಿರು ಮತ್ತು ಮಧ್ಯಮ ಉದ್ದಿಮೆಗಳ ಮುಳುಗಡೆ, ದೇಶದ ಒಟ್ಟು ಸಂಪಾದನೆಯಲ್ಲಿ ತೀವ್ರ ಕಡಿತಕ್ಕೆ ಕಾರಣವಾದ ನಿರ್ಧಾರದ ಬಗ್ಗೆ ಚುನಾಯಿತ ಸರಕಾರವು ಸಂಸತ್ತಿನಲ್ಲಿ ತನ್ನ ವೈಫಲ್ಯವನ್ನು ಮರೆಮಾಚಿತ್ತು. ಅದೇ ರೀತಿ ಕೋವಿಡ್‌ಸಾಂಕ್ರಾಮಿಕದಿಂದ ವ್ಯವಸ್ಥೆಯ ಲೋಪದಿಂದ ಉಂಟಾದ ಸಾವುನೋವುಗಳ ಬಗ್ಗೆ ನೈಜ ಮಾಹಿತಿಯನ್ನು ದೇಶದ ಮುಂದಿಡಲು ಹಿಂಜರಿದಿತ್ತು. ತಮ್ಮ ನಿರ್ಧಾರದ ಪರಿಣಾಮಗಳ ಬಗ್ಗೆ ಉತ್ತರಿಸಲು ಸರಕಾರವು ಯಾವತ್ತೂ ಪ್ರಯತ್ನಿಸಲೇ ಇಲ್ಲ.
ಇನ್ನೊಂದು ಆತಂಕಕಾರಿಯಾದ ಬೆಳವಣಿಗೆ ಮಣಿಪುರದ ಜನಾಂಗೀಯ ಕ್ಷೋಭೆ. 2023ಮೇ ತಿಂಗಳಿನಲ್ಲಿ ಆರಂಭವಾದ ಸಮಸ್ಯೆ ಈಗಾಗಲೇ ನೂರಾರು ಜೀವಗಳ ಬಲಿ ತೆಗೆದುಕೊಂಡಿದೆ; ಸಾವಿರಾರು ಕುಟುಂಬಗಳು ಮನೆಗಳನ್ನು ಕಳೆದು ಕೊಂಡಿವೆ. ಈ ಬಗ್ಗೆ ಪ್ರಧಾನಿಯವರು ರಾಜ್ಯಕ್ಕೆ ಭೇಟಿ ಕೊಡುವುದಿರಲಿ, ಸಂಸತ್ತನ್ನು ಉದ್ದೇಶಿಸಿ ಒಂದು ಶಬ್ದವನ್ನು ಉದ್ಗರಿಸಿಲ್ಲ. ದೇಶದ ಒಂದು ರಾಜ್ಯದಲ್ಲಿ ನಿರಂತರ ಅಶಾಂತಿ ನೆಲೆಸಿದಾಗ ಚುನಾಯಿತ ಸರಕಾರ ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲಿಗೆ ಸ್ವತಃ ಭೇಟಿ ನೀಡಿ ಪೀಡಿತರಿಗೆ ಸಾಂತ್ವನ ಹೇಳಿ ಅವರ ಪುನರ್ವಸತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡುವುದು ದೇಶದ ಸರ್ವೋಚ್ಚ ನಾಯಕರೆನಿಸಿದ ಪ್ರಧಾನಿಯ ಜವಾಬ್ದಾರಿ.
ಪ್ರಜಾತಂತ್ರದಲ್ಲಿ ನೈತಿಕ ಹೊಣೆಗಾರಿಕೆಯನ್ನು ಮಂತ್ರಿಗಳು ವಹಿಸಿಕೊಳ್ಳಬೇಕು. ತಮ್ಮ ಸುಪರ್ದಿಯಲ್ಲಿರುವ ಕ್ಷೇತ್ರಗಳಲ್ಲಿ ಆಡಳಿತವರ್ಗದ ವೈಫಲ್ಯದಿಂದ ಅವಘಡಗಳಾಗಿ ಸೊತ್ತು ಮತ್ತು ಜೀವಹಾನಿಯಾದಾಗ, ಸಂಬಂಧಪಟ್ಟ ಮಂತ್ರಿಗಳು ನೈತಿಕ ನೆಲೆಯಲ್ಲಿ ಉತ್ತರದಾಯಿಗಳಾಗುತ್ತಾರೆ. ಹಿಂದೆ ಅನೇಕ ಕೇಂದ್ರ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರದಲ್ಲಿ ಗಂಭೀರವಾದ ವೈಫಲ್ಯಗಳಾದಾಗ ಮತ್ತು ನ್ಯಾಯಾಲಯಗಳು ಸರಕಾರದ ದೋಷವನ್ನು ತೋರಿಸಿಕೊಟ್ಟಾಗ ಪದತ್ಯಾಗ ಮಾಡಿದ್ದರು. ಚೀನಾದ ಆಕ್ರಮಣದ ಸಂದರ್ಭದ ರಕ್ಷಣಾ ಮಂತ್ರಿ ವಿ.ಕೆ. ಕೃಷ್ಣ ಮೆನನ್, ರೈಲು ಮಂತ್ರಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ನಿತೀಶ್ ಕುಮಾರ್, ನಾಗರಿಕ ವಿಮಾನಯಾನ ಮಂತ್ರಿ ಮಾಧವರಾವ್‌ಸಿಂಧ್ಯಾ, ಕರ್ನಾಟಕದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, (ಹರ್ಷದ್‌ಮೆಹ್ತಾ ವಂಚನೆಯ ಸಂದರ್ಭದಲ್ಲಿ ಅರ್ಥಮಂತ್ರಿಯಾಗಿದ್ದ) ಮನಮೋಹನ್ ಸಿಂಗ್ ಮುಂತಾದವರು ಈ ಸಂಪ್ರದಾಯವನ್ನು ಭದ್ರಗೊಳಿಸಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಅತ್ಯಂತ ಗಂಭೀರವಾದ ರೈಲು ಅವಘಡಗಳಾಗಿ ಅಪಾರ ಜೀವ ಹಾನಿಯಾದರೂ ದೇಶದ ರೈಲ್ವೆ ಮಂತ್ರಿಗಳು ನೈತಿಕತೆಯ ಬಗ್ಗೆ ನಿರ್ಲಿಪ್ತರಾಗಿದ್ದಾರೆ! ಭದ್ರತಾ ಲೋಪದಿಂದಾಗಿ 2019ರಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಪುಲ್ವಾಮದಲ್ಲಿ ಹಾಗೂ ಈ ವರ್ಷ ಎಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ 26 ಮಂದಿ ಪ್ರವಾಸಿಗಳು ಜೀವ ಕಳಕೊಂಡರೂ ಗೃಹ ಸಚಿವಾಲಯವು ನೈತಿಕ ಜವಾಬ್ದಾರಿಯನ್ನು ಹೊತ್ತಿಲ್ಲ.
ಪ್ರಜಾತಂತ್ರದಲ್ಲಿ ಸಾಂವಿಧಾನಿಕ ಹುದ್ದೆಗಳಿಗೆ ವಿಶೇಷ ಸ್ಥಾನವಿದೆ. ಅವುಗಳ ಘನತೆಯನ್ನು ಸರಕಾರ ಹೆಚ್ಚಿಸಬೇಕು, ಸ್ವಾಯತ್ತೆಯನ್ನು ರಕ್ಷಿಸಬೇಕು. ಹೋದ ದಶಕದಲ್ಲಿ ಸಂಸತ್ತಿನ ಉಭಯಸಭಾಧ್ಯಕ್ಷರ ವರ್ತನೆಗಳು ಅವರು ಸರಕಾರದ ಕೈಗೊಂಬೆಗಳೆಂಬ ಭಾವನೆಯನ್ನು ಹುಟ್ಟಿಸುತ್ತವೆ. ಇದನ್ನು ತಡೆಯುವ ಜವಾಬ್ದಾರಿ ಸರಕಾರದ ಮೇಲಿದೆ. ಅದೇ ರೀತಿ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳಾದ ನ್ಯಾಯಾಂಗ ಮತ್ತು ಚುನಾವಣಾ ಆಯೋಗಗಳನ್ನು ತನ್ನ ಹಿಡಿತದಲ್ಲಿ ತರುವ ಪ್ರಯತ್ನಗಳನ್ನು ಸರಕಾರವು ಮಾಡುತ್ತಲೇ ಇದೆ. ಆಳುವ ಪಕ್ಷದ ಸದಸ್ಯರು ಸುಪ್ರೀಂ ಕೋರ್ಟಿನ ಮೇಲೆ ಗಂಭೀರವಾದ ಆರೋಪಗಳನ್ನು ಮಾಡಿದರೂ ಸರಕಾರವು ಕ್ರಮ ಕೈಗೊಂಡಿಲ್ಲ.
ಚುನಾಯಿತ ಸರಕಾರವೊಂದು ತನ್ನ ಉತ್ತರದಾಯಿತ್ವದಿಂದ ವಿಮುಖವಾದಾಗ ಅದು ಸಂವಿಧಾನದ ಆಶಯಕ್ಕೆ ವಿರೋಧವಲ್ಲವೇ?
ನೆನಪಿನಷ್ಟೇ ಅಗತ್ಯ ಅದರ ಪಾಠಗಳು
ಪ್ರಜೆಗಳು ಚುನಾಯಿಸಿದ ಸರಕಾರದ ಮೇಲೆಯೇ ಪ್ರಜಾಸತ್ತೆಯ ಮೌಲ್ಯವನ್ನು ಕಾಪಾಡುವ ಜವಾಬ್ದಾರಿ ನೆಲೆಸಿದೆ. ಆದರೆ ಹೋದ ದಶಕದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಚುನಾಯಿತ ಸರಕಾರವೇ ಈ ಜವಾಬ್ದಾರಿಯನ್ನು ತೃಪ್ತಿಕರವಾಗಿ ನಿರ್ವಹಿಸಿಲ್ಲ ಎಂಬುದು ನಮ್ಮ ಮುಂದಿರುವ ಕಟು ವಾಸ್ತವ. ಈ ಹಿನ್ನೆಲೆಯಲ್ಲಿ ಸಂವಿಧಾನವನ್ನು ಅರ್ಥಪೂರ್ಣವಾಗಿ ಕಾರ್ಯರೂಪಕ್ಕೆ ತರುವಲ್ಲಿ ಸರಕಾರವೇ ಆತ್ಮಾವಲೋಕನ ಮಾಡುವ ಅಗತ್ಯ ದೇಶದ ಮುಂದಿದೆ. ಹಳೆಯ ಘಟನೆಗಳಿಂದ ಪಾಠಗಳನ್ನು ಕಲಿತರೆ ಮಾತ್ರ ಅವುಗಳನ್ನು ನೆನಪಿಸಿಕೊಂಡದ್ದು ಸಾರ್ಥಕವಾಗುತ್ತದೆ.