ಹದಗೆಟ್ಟ ಎಂ.ಜಿ.ರಸ್ತೆ: ಮುಂದುವರಿದ ಸಾರ್ವಜನಿಕರ ಪರದಾಟ
ಕಲಬುರಗಿ: ಉತ್ತರ ಮತಕ್ಷೇತ್ರದ ಹೃದಯ ಭಾಗದ ಪ್ರಮುಖ ರಸ್ತೆಯಾಗಿರುವ ಎಂ.ಜಿ ರಸ್ತೆ ತೀವ್ರವಾಗಿ ಹದಗೆಟ್ಟು ಪ್ರತಿನಿತ್ಯ ಸಾವಿರಾರು ವಾಹನ ಸವಾರರು ಶಾಸಕರಿಗೆ ಹಿಡಿಶಾಪ ಹಾಕುತ್ತಾ ರಸ್ತೆಯ್ಲಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದ್ದು, ಭಾರೀ ಗಾತ್ರದ ಗುಂಡಿಗಳು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.
ಮನ್ನೂರ್ ಆಸ್ಪತ್ರೆಯ ಮುಂಭಾಗದ ಆದರ್ಶನಗರ ಕಾಲನಿ, ಕಲಬುರಗಿ ಮಹಾನಗರ ಪಾಲಿಕೆ, ಸೂಪರ್ ಮಾರ್ಕೆಟ್, ಜಿ.ಟಿ.ಎನ್.ಟಿ.ಸಿ ಕಾಲೇಜು, ಜಗತ್ ವೃತ, ಸಂತ್ರಾಶವಾಡಿ, ಕೆಬಿಎನ್ ದರ್ಗಾ ರಸ್ತೆಯನ್ನು ಸಂಪರ್ಕಿಸುವ 1.5 ಕಿ.ಮಿ. ಉದ್ದದ ಎಂ.ಜಿ ರಸ್ತೆ ಸುಮಾರು ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟು ರಸ್ತೆಯಲ್ಲಿ ಗುಂಡಿಗಳೇ ಪಾರಮ್ಯವಹಿಸಿವೆ. ಗುಂಡಿಗಳಲ್ಲಿ ಮಳೆ ನೀರು ನಿಂತು ಗುಂಡಿ ಯಾವುದೂ ರಸ್ತೆ ಯಾವುದು ಎಂಬುದು ತಿಳಿಯದೇ ವಾಹನ ಸವಾರರು ಮತ್ತು ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.ಆಸ್ಪತ್ರೆ, ಶಾಲಾ-ಕಾಲೇಜು, ವಿವಿಧ ಕಚೇರಿಗಳಿಗೆ ತೆರಳುವ ಪ್ರಮುಖ ರಸ್ತೆಗಳಲ್ಲಿ ಇದು ಒಂದಾಗಿದೆ. ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕಿ ಕನೀಝ್ ಫಾತೀಮಾ, ಪ್ರತಿದಿನ ಸಾವಿರಾರರು ವಾಹನಗಳು ಓಡಾಡುವ ಪ್ರಮುಖ ರಸ್ತೆಯ ಅಭಿವೃದ್ಧಿಯನ್ನು ನಿರ್ಲಕ್ಷಿಸಿ, ಬೆಂಗಳೂರನಲ್ಲಿ ವಾಸವಾಗಿರುವುದರಿಂದ ಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಕುಂಠಿತವಾಗಿದೆ. ಶಾಸಕರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬೇಕೆಂದು ಆದರ್ಶ ನಗರ ನಿವಾಸಿ ನಾಗರಾಜ್ ಮುಧೋಳ ಆಗ್ರಹಿಸಿದ್ದಾರೆ.
4.5 ಕೋಟಿ ರೂ. ಅನುದಾನ: ಕಾಮಗಾರಿ ಆರಂಭಕ್ಕೆ ಸೂಚನೆ
ಮನ್ನೂರ್ ಆಸ್ಪತ್ರೆಯಿಂದ ಸಂತ್ರಾಶವಾಡಿಯ ಎಂ.ಜಿ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿಯವರ ವಿಶೇಷ ಪ್ಯಾಕೇಜ್‌ನಲ್ಲಿ 4.5 ಕೋಟಿ ರೂ. ವೆಚ್ಚದ ಅನುದಾನ ಸಿಕ್ಕಿದೆ. ಸಂತ್ರಾಶವಾಡಿಯಿಂದ ಗಂಜವರೆಗಿನ ರಸ್ತೆ ನಿರ್ಮಾಣಕ್ಕೂ ಅನುಮೊದನೆ ದೊರೆತಿದೆ. ನಿರಂತರ ಮಳೆಯಿಂದ ಕಾಮಗಾರಿ ಪ್ರಾರಂಭವಾಗಿಲ್ಲ. ಶೀಘ್ರ ಕಾಮಗಾರಿ ಪ್ರಾರಂಭಕ್ಕೆ ಸೂಚನೆ ನೀಡಿದ್ದೇನೆ ಎಂದು ಕಲಬುರಗಿ ಉತ್ತರ ಮತಕ್ಷೇತ್ರ ಶಾಸಕಿ ಕನೀಝ್ ಫಾತೀಮಾ ಹೇಳಿದ್ದಾರೆ.
ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾಗ ಮುಖ್ಯಮಂತ್ರಿ ಪ್ಯಾಕೇಜ್ ನಲ್ಲಿ ರಸ್ತೆ ನಿರ್ಮಾಣಕ್ಕೆ 3 ಕೋಟಿ ವರೆಗೆ ಅನುಮೋದನೆ ಸಿಕ್ಕಿದೆ. ಶೀಘ್ರ ರಸ್ತೆ ನಿರ್ಮಾಣ ಮಾಡುತ್ತೇವೆ ಎಂದು ಭರಸೆ ನೀಡಿದ್ದರು. ಆದರೆ ಇಲ್ಲಿವರೆಗೆ ಯಾವುದೇ ಕ್ರಮ ಆಗಿಲ್ಲ. ಸಂಪೂರ್ಣ ರಸ್ತೆ ಹದಗೆಟ್ಟಿರುವುದರಿಂದ ಬಹಳಷ್ಟು ತೊಂದರೆಗಳು ಅನುಭವಿಸುವಂತಾಗಿದೆ.
-ಜಗದೇವ್ ಗುತ್ತೇದಾರ್, ಎಂ.ಜಿ ನಗರ ನಿವಾಸಿ ಕಲಬುರಗಿ
ಎರಡು ಮೂರು ಬಾರಿ ಗುಂಡಿಗಳನ್ನು ಮುಚ್ಚಿದೇವೆ. ಗುಂಡಿಗಳಗಾತ್ರ ದೊಡ್ಡದಾಗಿರುವುದರಿಂದ ಜನರಿಗೆ ತೊಂದರೆ ಆಗುತ್ತಿದೆ. ನಿರಂತರ ಮಳೆಯಿಂದ ರಸ್ತೆಯ ಮೇಲೆ ದೊಡ್ಡ ಗುಂಡಿಗಳಾಗಿ ಜನರಿಗೆ ತೊಂದರೆ ಆನುಭವಿಸುತ್ತಿದ್ದಾರೆ. ಮಳೆ ನಿಂತ ತಕ್ಷಣ ಗುಂಡಿ ಮುಚ್ಚುವ ಕೆಲಸ ಪ್ರಾರಂಭಿಸುತ್ತೇವೆ. ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಆರು ತಿಂಗಳಲ್ಲಿ ಸಂಪೂರ್ಣ ರಸ್ತೆ ನಿರ್ಮಾಣ ಮಾಡಲಾವುದು.
-ಸಿಂಧೆ ಅವಿನಾಶ್ ಸಂಜೀವನ್, ಆಯುಕ್ತರು ಕಲಬುರಗಿ ಮಹಾನಗರ ಪಾಲಿಕೆ.