×
Ad

ಜಿಲ್ಲೆಯಿಂದ ಜಿಲ್ಲೆಗೆ ಕಾಲ್ಚೆಂಡಿನಂತಾದ ಗ್ರಾಮ: ಕೆಸರಿನಲ್ಲಿ ಗ್ರಾಮಸ್ಥರು

ಗಡಿ ಗೊಂದಲವೇ ಸಮಸ್ಯೆಗೆ ಮೂಲ

Update: 2026-01-22 14:45 IST

ಕೊಟ್ಟೂರು: ವಿಜಯನಗರ ಜಿಲ್ಲೆಯ ಹರಪನ ಹಳ್ಳಿ ತಾಲೂಕಿನ ಗಡಿಭಾಗದಲ್ಲಿರುವ ಹಗರಿ ಗಜಾಪುರ ಗ್ರಾಮವು ರಾಜಕೀಯ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದ ಕಾರಣದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಸ್ವಾತಂತ್ರ್ಯ ದೊರೆತ ಏಳು ದಶಕಗಳ ಬಳಿಕವೂ ಈ ಗ್ರಾಮಕ್ಕೆ ಡಾಂಬರು ರಸ್ತೆ ಕೂಡಾ ಲಭ್ಯವಾಗಿಲ್ಲ. ಮಳೆಗಾಲದಲ್ಲಂತೂ ಕೆಸರಿನಲ್ಲೇ ಸಂಚಾರ.!

ಹಗರಿ ಗಜಾಪುರ ಗ್ರಾಮವು ಹಿಂದೆ ಅಖಂಡ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿತ್ತು. ಜೆ.ಎಚ್. ಪಾಟೇಲ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹರಪನಹಳ್ಳಿ ತಾಲೂಕನ್ನು ನೂತನ ದಾವಣಗೆರೆ ಜಿಲ್ಲೆಗೆ ಸೇರಿಸಲಾಯಿತು. ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಮತ್ತೆ ಬಳ್ಳಾರಿ ಜಿಲ್ಲೆಗೆ ಮರುಸೇರಿಸಲಾಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ನೂತನ ವಿಜಯನಗರ ಜಿಲ್ಲೆಗೆ ಸೇರಿಸಲಾಯಿತು. ಈ ರೀತಿಯ ನಿರಂತರ ಜಿಲ್ಲೆ ಹಾಗೂ ತಾಲೂಕು ಬದಲಾವಣೆಗಳಿಂದ ಗ್ರಾಮಸ್ಥರು ಆಡಳಿತಾತ್ಮಕ ಗೊಂದಲಕ್ಕೊಳಗಾಗಿ ಪರದಾಡುತ್ತಲೇ ಬಂದಿದ್ದಾರೆ.

ಕೊಟ್ಟೂರಿನಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿರುವ ಹಗರಿ ಗಜಾಪುರ ಗ್ರಾಮವು ವ್ಯಾಪಾರ, ಶಿಕ್ಷಣ ಹಾಗೂ ದೈನಂದಿನ ವಹಿವಾಟುಗಳಿಗೆ ಕೊಟ್ಟೂರಿನ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದೆ. ಹಗರಿ ಗಜಾಪುರ ಪಕ್ಕದ ಗೌರಿಪುರ, ಬಸವನಾಳು, ಕೆಸರಹಳ್ಳಿ, ಬಳಗನೂರು, ಮೈದೂರು ಸೇರಿದಂತೆ ಹಲವು ಗ್ರಾಮಗಳ ರೈತರು ಕೊಟ್ಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯನ್ನೇ ಆಶ್ರಯಿಸಿದ್ದಾರೆ.

ಪ್ರತಿದಿನ ಈ ಗ್ರಾಮ ಮಾರ್ಗವಾಗಿ ಸಾರಿಗೆ ಸಂಸ್ಥೆಯ ಸುಮಾರು ಒಂಬತ್ತು ಬಸ್ ಗಳು ಸಂಚರಿಸುತ್ತಿದ್ದು, ಉತ್ತಮ ಪ್ರಯಾಣಿಕ ಸಂಗ್ರಹವೂ ಇದೆ. ಆದರೆ ಇಷ್ಟೆಲ್ಲಾ ಚಟುವಟಿಕೆಗಳ ನಡುವೆಯೂ ರಸ್ತೆ ಅಭಿವೃದ್ಧಿಯ ವಿಚಾರದಲ್ಲಿ ಗ್ರಾಮಸ್ಥರು ಯಾರನ್ನು ಪ್ರಶ್ನಿಸಬೇಕು ಎಂಬ ಗೊಂದಲದಲ್ಲಿದ್ದಾರೆ. ಕಾರಣ, ಕೊಟ್ಟೂರು-ಹಗರಿ ಗಜಾಪುರ ಸಂಪರ್ಕ ರಸ್ತೆ ಮೂರು ಕಿಲೋಮೀಟರ್ ಹರಪನಹಳ್ಳಿ ತಾಲೂಕು ಹಾಗೂ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು, ಉಳಿದ ಮೂರು ಕಿಲೋ ಮೀಟರ್ ಕೊಟ್ಟೂರು ತಾಲೂಕು ಹಾಗೂ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ. ಹರಪನಹಳ್ಳಿ ಕ್ಷೇತ್ರದ ಶಾಸಕರನ್ನು ಸಂಪರ್ಕಿಸಿದರೆ, ತಮ್ಮ ವ್ಯಾಪ್ತಿಯಲ್ಲಿರುವ ಮೂರು ಕಿಲೋಮೀಟರ್ ರಸ್ತೆ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡುತ್ತಾರೆ. ಆದರೆ ಉಳಿದ ಮೂರು ಕಿಲೋಮೀಟರ್ ರಸ್ತೆ ಅಭಿವೃದ್ಧಿಗೆ ಯಾರು ಹೊಣೆ? ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ.

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಇದುವರೆಗೆ ಕೇವಲ ಭರವಸೆಗಳಷ್ಟೇ ಸಿಕ್ಕಿದೆ. ಆದರೆ, ಯಾವುದೂ ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಸ್ತೆ ಸೌಕರ್ಯವಿಲ್ಲದ ಕಾರಣ ಮಳೆಗಾಲದಲ್ಲಿ ಸಂಚಾರ ಅಸ್ತವ್ಯಸ್ತವಾಗುತ್ತಿದ್ದು, ಕೆಸರಿನಲ್ಲೇ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಈ ಬಾರಿಯ ಮಳೆಗಾಲದ ಮುನ್ನವಾದರೂ ಗ್ರಾಮಕ್ಕೆ ಡಾಂಬರು ರಸ್ತೆ ಬರುವುದೇ ಎಂದು ಗ್ರಾಮಸ್ಥರು ‘ನೆಲ ನೋಡುತ್ತಾ’ ಕಾದು ಕೂತಿದ್ದಾರೆ.

ಹಗರಿ ಗಜಾಪುರ ಗ್ರಾಮ ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದರೂ, ಗ್ರಾಮಸ್ಥರು ವ್ಯಾಪಾರ, ಶಿಕ್ಷಣ ಸೇರಿದಂತೆ ನಾನಾ ವಹಿವಾಟುಗಳಿಗೆ ಕೊಟ್ಟೂರಿನ ಮೇಲೆಯೇ ಅವಲಂಬಿತರಾಗಿದ್ದಾರೆ. ಕೊಟ್ಟೂರು ಗ್ರಾಮಸ್ಥರ ಜಮೀನುಗಳು ಹಗರಿ ಗಜಾಪುರ ಕಂದಾಯ ಗ್ರಾಮದೊಂದಿಗೆ ಹೊಂದಿಕೊಂಡಿದ್ದು, ಎರಡೂ ಗ್ರಾಮಗಳ ಜನರಿಗೆ ಈ ರಸ್ತೆ ಅತ್ಯಂತ ಅವಶ್ಯಕವಾಗಿದೆ.

- ಕೆ.ಸತೀಶ್ ಕುಮಾರ್ ಗ್ರಾಮಸ್ಥ, ಹಗರಿ ಗಜಾಪುರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News