×
Ad

ಮುದ್ದೇಬಿಹಾಳ ನಗರಸಭೆ ಆಗುವುದು ಯಾವಾಗ?

Update: 2026-01-24 13:37 IST

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಕೇಂದ್ರ ಇಂದು ಕೇವಲ ಸಾಮಾನ್ಯ ಪಟ್ಟಣವಲ್ಲ. ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ವ್ಯಾಪಾರ-ವಹಿವಾಟಿನ ವಿಸ್ತರಣೆ, ಶಿಕ್ಷಣ, ಆರೋಗ್ಯ, ಸಾರಿಗೆ ಕ್ಷೇತ್ರಗಳ ಬೆಳವಣಿಗೆ, ಬ್ಯಾಂಕ್‌ಗಳು, ಮಾರುಕಟ್ಟೆಗಳು ಹಾಗೂ ಸರಕಾರಿ ಕಚೇರಿಗಳ ವ್ಯವಸ್ಥೆಯಿಂದ ಹೊಂದಿದ ಪಟ್ಟಣ ಈಗಾಗಲೇ ನಗರ ಸ್ವರೂಪ ಪಡೆದುಕೊಂಡಿದೆ. ಆದರೂ ಆಡಳಿತಾತ್ಮಕವಾಗಿ ಇನ್ನೂ ಪುರಸಭೆ ಸ್ಥಾನಮಾನಕ್ಕೆ ಸೀಮಿತವಾಗಿರುವುದು ಯಾಕೆ? ಎಂಬ ಪ್ರಶ್ನೆ ಇಲ್ಲಿನ ಜನರನ್ನು ಕಾಡುತ್ತಿದೆ.

ರಾಜ್ಯ ಸರಕಾರದ ನಿಯಮಾವಳಿಗಳ ಪ್ರಕಾರ ನಿರ್ದಿಷ್ಟ ಜನಸಂಖ್ಯೆ, ಆದಾಯ ಮೂಲಗಳು, ವ್ಯಾಪಾರ ಚಟುವಟಿಕೆಗಳು ಹಾಗೂ ಮೂಲಸೌಕರ್ಯಗಳ ಮಾನದಂಡಗಳನ್ನು ಪೂರೈಸಿದರೆ ಪಟ್ಟಣವನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಬಹುದು. ಈ ಎಲ್ಲ ಮಾನದಂಡಗಳನ್ನು ಮುದ್ದೇಬಿಹಾಳ ಹೊಂದಿದ್ದು, ಬಹಳ ಹಿಂದೆಯೇ ನಗರಸಭೆಯಾಗಬೇಕಿತ್ತು ಎನ್ನುವುದು ಕೇವಲ ಜನಾಭಿಪ್ರಾಯವಲ್ಲ, ವಾಸ್ತವವೂ ಹೌದು.

ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚುತ್ತಿದೆ. ವ್ಯಾಪಾರ ವಹಿವಾಟು ತಾಲೂಕು ಮಟ್ಟವನ್ನು ಮೀರಿ ಜಿಲ್ಲಾ ಮಟ್ಟದಂತಾಗಿದೆ. ಖಾಸಗಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು, ಬ್ಯಾಂಕ್‌ಗಳು ಹಾಗೂ ಸುತ್ತಮುತ್ತಲ ಗ್ರಾಮಗಳ ಜನಸಂಚಾರ ಮುದ್ದೇಬಿಹಾಳ ಪಟ್ಟಣವನ್ನು ಪ್ರಮುಖ ಕೇಂದ್ರಬಿಂದುವಾಗಿಸಿದೆ. ಆದರೆ ಇನ್ನೊಂದೆಡೆ ಚರಂಡಿ ವ್ಯವಸ್ಥೆಯ ಅವ್ಯವಸ್ಥೆ, ಮುಖ್ಯ ಬಜಾರಿನಲ್ಲಿ ರಸ್ತೆ ಅಗಲೀಕರಣದ ಕೊರತೆ, ವೈಜ್ಞಾನಿಕ ಕಸ ನಿರ್ವಹಣೆಯ ಅಭಾವ, ಉದ್ಯಾನಗಳ ಕೊರತೆ, ಬೀದಿ ದೀಪಗಳ ಸಮಸ್ಯೆ ಮತ್ತು ಸಮರ್ಪಕ ಕುಡಿಯುವ ನೀರಿನ ಕೊರತೆ ಜನರನ್ನು ಪ್ರತಿದಿನವೂ ಬೆಂಬಿಡದೆ ಕಾಡುತ್ತಿದೆ.

ಮುದ್ದೇಬಿಹಾಳಕ್ಕೆ ನಗರಸಭೆ ಸ್ಥಾನಮಾನ ದೊರೆತರೆ ಸರಕಾರದಿಂದ ಹೆಚ್ಚಿನ ಅನುದಾನ, ವಿಶೇಷ ಯೋಜನೆಗಳು ಹಾಗೂ ನಗರಾಭಿವೃದ್ಧಿ ನಿಧಿಗಳ ಲಭ್ಯತೆ ಸಿಗಲಿದೆ. ಪುರಸಭೆ ಪಟ್ಟದಿಂದ ಹೊರಬಂದರೆ ಪಟ್ಟಣದ ಯುವಜನರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿ ಸಿಗುವುದರಿಂದ ಒಟ್ಟಾರೆ ಅಭಿವೃದ್ಧಿಗೆ ಹೊಸ ದಿಕ್ಕು ತೋರಿದಂತಾಗುತ್ತದೆ.

ಸ್ಥಳೀಯ ಶಾಸಕ ಹಾಗೂ ಸಾಬೂನು ಮತ್ತು ಮಾರ್ಜಕ ನಿಗಮದ ನಿಯಮಿತ ಅಧ್ಯಕ್ಷ ಸಿ.ಎಸ್. ನಾಡಗೌಡ ಅಪ್ಪಾಜಿ ಅವರು ಮುದ್ದೇಬಿಹಾಳವನ್ನು ನಗರಸಭೆಯನ್ನಾಗಿಸಲು ಮೊದಲ ಬಾರಿಗೆ ಧ್ವನಿ ಎತ್ತಿದವರು. ಅವರ ಪ್ರಯತ್ನದಿಂದ ಹಲವು ಯೋಜನೆಗಳು ಪಟ್ಟಣಕ್ಕೆ ಬಂದಿವೆ. ಇದೇ ವೇಳೆ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯನ್ನು ವಿಜಯಪುರ

ಕ್ಕಿಂತ ಮುದ್ದೇಬಿಹಾಳದಲ್ಲೇ ಸ್ಥಾಪಿಸಬೇಕು ಎಂಬ ಜನರ ಆಗ್ರಹವೂ ಕೇಳಿಬರುತ್ತಿದೆ.

ಬಿದರಕುಂದಿ, ಕುಂಟೋಜಿ, ಶಿರೋಳ, ಹಡಲಗೇರಿ ಸೇರಿ ಇನ್ನೂ ಕೆಲವು ಸುತ್ತಮುತ್ತಲ ಗ್ರಾಮಗಳನ್ನು ಮುದ್ದೇಬಿಹಾಳ ಪಟ್ಟಣಕ್ಕೆ ಸೇರಿಸಿದರೆ ಜನಸಂಖ್ಯೆ, ವ್ಯಾಪ್ತಿ ಹಾಗೂ ಸಂಪನ್ಮೂಲಗಳ ದೃಷ್ಟಿಯಿಂದ ಮುದ್ದೇಬಿಹಾಳದ ನಗರಸಭೆ ಸ್ಥಾನಮಾನ ಪಡೆಯುವ ಅರ್ಹತೆ ಮತ್ತಷ್ಟು ಬಲವಾಗುತ್ತದೆ. ಹಾಗಿದ್ದರೂ ನಗರಸಭೆ ಯಾಕೆ ಈ ಪ್ರಕ್ರಿಯೆಗೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ನಗರಸಭೆ ಸ್ಥಾನಮಾನ ಸಿಗದಿರುವುದಕ್ಕೆ ಕಾರಣ ಯಾರು?. ಇದು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ?. ಅಧಿಕಾರಿಗಳ ಉದಾಸೀನವೇ? ಅಥವಾ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ? ಎಂಬುದು ಪ್ರಶ್ನೆ ಜನರಲ್ಲಿ ಮೂಡಿದೆ. ಕೆಲಕಾಲ ಈ ವಿಷಯವನ್ನು ಮುನ್ನೆಲೆಗೆ ತಂದ ಬಳಿಕ ಮರೆತುಬಿಡುವ ಸಂಸ್ಕೃತಿಯೇ ಮುದ್ದೇಬಿಹಾಳದ ಅಭಿವೃದ್ಧಿಗೆ ಶಾಪವಾಗುತ್ತಿದೆ ಎಂದು ಪ್ರಗತಿಪರ ಸಂಘಟನೆಗಳು ಆರೋಪಿಸುತ್ತಿವೆ.

ಮುದ್ದೇಬಿಹಾಳ ನಗರಸಭೆ ವಿಚಾರದಲ್ಲಿ ನಾಗರಿಕರು, ವ್ಯಾಪಾರಸ್ಥರು, ವಿವಿಧ ಸಂಘಟನೆಗಳು, ಪತ್ರಕರ್ತರು ಹಾಗೂ ಜನಪ್ರತಿನಿಧಿಗಳು ಒಂದೇ ಧ್ವನಿಯಲ್ಲಿ ಮಾತನಾಡಿದಾಗ ಮಾತ್ರ ರಾಜ್ಯ ಸರಕಾರದ ಗಮನ ಸೆಳೆಯಲು ಸಾಧ್ಯ ಎನ್ನುವುದು ಅವರ ಜನಾಭಿಪ್ರಾಯ.

ವಿಜಯಪುರ ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಮುದ್ದೇಬಿಹಾಳ ಪಟ್ಟಣವು ವ್ಯಾಪಾರ, ಶಿಕ್ಷಣ ಹಾಗೂ ಸಾರಿಗೆ ದೃಷ್ಟಿಯಿಂದ ಮಹತ್ವ ಹೊಂದಿದೆ. ಪಟ್ಟಣದ ಅಭಿವೃದ್ಧಿಗೆ ವಿವಿಧ ಅವಧಿಗಳಲ್ಲಿ ಜನಪ್ರತಿನಿಧಿಗಳು ಹಲವು ಭರವಸೆಗಳನ್ನು ನೀಡಿದ್ದಾರೆ.

ಹಿಂದಿನ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಮುದ್ದೇಬಿಹಾಳಕ್ಕೆ ಆರ್ಟಿಒ ಹಾಗೂ ಎಸಿ ಕಚೇರಿ ಮಂಜೂರು ಮಾಡುವುದಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಅವರು ಆರ್ಟಿಒ ಕಚೇರಿ ಮಂಜೂರಾತಿ ಮಾಡಿದ್ದರು. ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಈಗಿನ ಶಾಸಕ ಸಿ.ಎಸ್. ನಾಡಗೌಡರ ಪ್ರಯತ್ನದಿಂದ ಕೃಷಿ ಸಂಶೋಧನಾ ಕೇಂದ್ರಕ್ಕೆ ಮಂಜೂರಾತಿ ದೊರೆತಿದ್ದರೂ, ಅದಿನ್ನೂ ಕಾರ್ಯಾರಂಭ ಮಾಡಿಲ್ಲ. ಜನಸಂಖ್ಯೆ ಆಧಾರದ ಮೇಲೆ ನಗರ ಪೊಲೀಸ್ ಠಾಣೆ, ಎಸಿ ಕಚೇರಿ ಹಾಗೂ ಗ್ರಾಮೀಣ ಬಸ್ ನಿಲ್ದಾಣ ಮುದ್ದೇಬಿಹಾಳಕ್ಕೆ ಅಗತ್ಯವಿದೆ. ಶಾಸಕರು ವಿಶೇಷ ಕಾಳಜಿಯಿಂದ ಮಂಜೂರು ಮಾಡಿಸಿದರೆ ಮುದ್ದೇಬಿಹಾಳ ಪಟ್ಟಣ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂಬುದು ಜನರ ಆಶಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಂದೇನವಾಜ ಕುಮಸಿ

contributor

Similar News