ಕರಾವಳಿಯ ನಿರ್ದಿಗಂತ ನಾಟಕೋತ್ಸವ: ಮೂರು ನಾಟಕಗಳ ಮೂರು ವಿಭಿನ್ನ ಚಿತ್ರಣ
ಇತ್ತೀಚೆಗೆ ಹಿರಿಯ ರಂಗ ಕಲಾವಿದ, ಸಿನೆಮಾ ನಟ ಪ್ರಕಾಶ್ ರೈ ನೇತೃತ್ವದ ಕರಾವಳಿಯ ನಿರ್ದಿಗಂತ ಉಡುಪಿಯಲ್ಲಿ ಆಯೋಜಿಸಿದ ನಾಟಕೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟ ಮೂರು ನಾಟಕಗಳ ಕುರಿತು...
ನಾಟಕ: ದೇವರ ಆತ್ಮಹತ್ಯೆ
ನಿರ್ದೇಶನ: ರಮೇಶ್ ಬೆಣಕಲ್
ಪ್ರಸ್ತುತಿ: ಸಂಗಮ ಕಲಾವಿದೆರ್ ಮಣಿಪಾಲ
ಹಾಸ್ಯ ಎನ್ನುವುದು ರಂಗಭೂಮಿಯ ಬಹಳ ಪ್ರಧಾನವಾದ ರಸ ಮತ್ತು ಪ್ರಸ್ತುತಿಯಲ್ಲಿ ಅಷ್ಟೇ ಕಷ್ಟವಾದ ರಸ ಗುಣವೂ ಹೌದು. ಒಂದು ಕರಾರುವಾಕ್ಕಾದ ಪದವನ್ನು ಅದರದ್ದೇ ಆದ ಕ್ಷಣದಲ್ಲಿ ಆ ಕ್ಷಣದ ಭಾವಾನುವರ್ತನೆಗೆ ಸಂವೇದಿಯಾಗಿ ಪ್ರೇಕ್ಷಕರಿಗೆ ಸಣ್ಣಗೆ ಕಚಗುಳಿಯಿಟ್ಟು ನಗಿಸುವ ಕಲೆ ನಿಜಕ್ಕೂ ಅದ್ಭುತವಾದದ್ದು. ಹಿಂದಿನ ಕಂಪೆನಿ ನಾಟಕಗಳ ಪ್ರಧಾನ ಭಾಗವಾಗಿ, ಮಂಗಳೂರಿನ ಪ್ರೊಫೆಷನಲ್ ತುಳು ರಂಗಭೂಮಿಯ ಪ್ರಧಾನ ಸರಕಾಗಿ ಶತಮಾನ ಕಾಲ ರಾರಾಜಿಸಿದ್ದ ಹಾಸ್ಯ ರಸ ಪ್ರಯೋಗ ರಂಗಭೂಮಿಯಲ್ಲಿ ಮುಖ್ಯವಾಹಿನಿಯಲ್ಲಿ ರಂಗದ ಮೇಲೆ ಕಾಣಿಸಿಕೊಂಡದ್ದು ಬಹಳ ಕಡಿಮೆ. ಕಾಣಿಸಿಕೊಂಡಾಗಲೂ ಹಾಸ್ಯ, ನಾಟಕದ ಪ್ರಧಾನ ಸರಕಾಗದೆ ಸಂಚಾರಿ ಭಾವಗಳಲ್ಲಿ ಹೊಸ ಪರಿಷ್ಕೃತ ರೂಪ ಪಡೆದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದೂ ಇದೆ.
ಕನ್ನಡದ ಹೆಸರಾಂತ ಲೇಖಕರಾದ ಬೀಚಿ ಮತ್ತು ಶ್ರೀನಿವಾಸ ವೈದ್ಯರ ಕಥೆಗಳ ಆಧಾರಿತ ರಂಗರೂಪದ ಪ್ರದರ್ಶನ, ಪ್ರಯೋಗ ರಂಗಭೂಮಿಯಲ್ಲಿ ಇಂತಹ ಹಾಸ್ಯ ರಸಾಯನದ ಬಹಳ ಅಪರೂಪದ ಪ್ರದರ್ಶನವಾಗಿ ದಾಖಲಾಯಿತು. ಸುಮಾರು ಹದಿನೈದು ಕಥೆಗಳನ್ನು ಅಥವಾ ಸನ್ನಿವೇಶಗಳನ್ನು ಹೆಣೆದು ಒಂದು ಎಳೆಯಾಗಿಸಿ ಹಾಸ್ಯ ಪ್ರವಾಹವಾಗಿ ರಂಗದ ಮೇಲೆ ಈ ಪ್ರಯೋಗ ಕಾಣಿಸಿಕೊಳ್ಳುತ್ತದೆ. ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕನ್ನಡ ಸರಕಾರಿ ಶಾಲೆಯ ಮಾಸ್ತರರ ಆತ್ಮಹತ್ಯೆಯ ಪ್ರಯತ್ನದ ಹಿನ್ನೆಲೆಯಲ್ಲಿ ರಂಗದ ಮೇಲೆ ತೆರೆದುಕೊಂಡ ಈ ಪ್ರಯೋಗ ಆ ಮಾಸ್ತರರ ಸಾಂಸಾರಿಕ ಜೀವನ, ಆರ್ಥಿಕ ಸಮಸ್ಯೆಗಳು, ಸಂಬಳ, ಸಾಲ, ಮನೆ ಬಾಡಿಗೆ, ಗಯ್ಯಾಳಿ ಹೆಂಡತಿ, ಗಂಡ ಹೆಂಡತಿ ಜಗಳ, ತವರುಮನೆ ಪ್ರಯಾಣ, ಪೆದ್ದ ಮಗ, ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬಾರದ ಊರಿನ ಜನ, ಹಳೆ ಪ್ರಣಯ, ಹೊಸ ಗಾಸಿಪ್‌ಗಳು, ಅಫೇರ್‌ಗಳು, ಡೌಟುಗಳು ಇವುಗಳ ಸುತ್ತ ತಿರುಗುತ್ತಲೇ ದೇಶದ ರಾಜಕಾರಣ, ಮತದಾನ ಪ್ರಕ್ರಿಯೆ, ವೋಟು ಚೋರಿ, ಮತ, ಮತದಾರ, ಪ್ರಜಾಪ್ರಭುತ್ವ ಬಗ್ಗೆನೂ ಮಾತಾಡುತ್ತದೆ. ಈ ಕಥೆಗಳಿಗೆ ತಕ್ಕಂತಹ ಉಪಮೆಗಳಾದ ಹೆಂಡ, ಸಾರಾಯಿ, ಪೊರಕೆ, ಸೌಟು, ಬಕೆಟ್ಟು, ಖಾಲಿ ಕೊಡ, ನಾಯಿ, ಮೊಬೈಲ್, ಛತ್ರಿ, ಪೇಪರ್, ಟೋಪಿಗಳು ವಿವಿಧ ರೂಪ ತಾಳಿಕೊಂಡು ರಂಗಕ್ಕಿಳಿಯುತ್ತವೆ. ಕೊನೆಗೆ ದೇವರು, ಯಮ, ನಾರದ ಪಾತ್ರಗಳೂ ಈ ಆತ್ಮಹತ್ಯೆಯಲ್ಲಿ ಜೊತೆಯಾಗುತ್ತವೆ.
ಒಬ್ಬ ಜನಸಾಮಾನ್ಯನ ಜೀವನದಲ್ಲಿ ಎಲ್ಲವೂ ಅಡಗಿದೆ. ಇಣುಕಿನೋಡಿದಾಗ ತತ್ವದರ್ಶನವಾಗುತ್ತದೆ ಎಂಬ ಬೀಚಿಯವರ ಮಾತಿನಂತೆ ನಿರ್ದೇಶಕರು ಕಾಮನ್ ಮ್ಯಾನ್‌ನ ಜೀವನದಲ್ಲಿ ಇಣುಕಿ ನೋಡಿ ಅಲ್ಲಿ ಹೆಕ್ಕಿ ತೆಗೆದ ರಸ ವಿಶೇಷಗಳಿಂದ ನಾಟಕ ಕಟ್ಟಿದ್ದಾರೆ. ಬಹುಶಃ ಸಾಮಾನ್ಯ ಮಧ್ಯಮ ವರ್ಗದ ಜನರ ಬದುಕಲ್ಲಿ ಮಾತ್ರ ಇಂತಹ ವರ್ಣರಂಜಿತವಾದ ಅಧ್ಯಾಯಗಳಿರುವುದು ಸಾಧ್ಯ. ಆದ್ದರಿಂದಲೇ ಹಾಸ್ಯ ಲೇಖಕರು ಮತ್ತು ನಾಟಕಕಾರರು ಇದನ್ನು ಆರಿಸಿಕೊಳ್ಳಲು ಮತ್ತು ಇಣುಕಿ ನೋಡಲು ಸಾಧ್ಯವಾಗಿರುವುದು. ಇಡೀ ಊರಿಗೆ ಕೇಳುವ ಹಾಗೆ ಜಗಳವಾಡುವ ಹೆಂಡತಿ, ಅಪ್ಪನನ್ನೇ ಅಮ್ಮನ ಮುಂದೆ ಸಂಕಷ್ಟಕ್ಕೆ ಸಿಕ್ಕಿಸಿ ಹಾಕುವ ಮಗರಾಯ, ಯಾರಾದರೊಬ್ಬ ಹೆಣ್ಣು ಮಗಳು ಗಂಡನಲ್ಲಿ ಮಾತಾಡುತ್ತಿದ್ದರೆ ಅದನ್ನೇ ಸಂಶಯದೃಷ್ಟಿಯಿಂದ ನೋಡಿ ಬೀದಿ ರಂಪಾಟ ಮಾಡುವ ಹೆಂಡತಿ. ಮಾತೆತ್ತಿದರೆ ನಾನು ನಿನ್ನ ಬಿಟ್ಟು ಹೋಗ್ತೇನೆ ಅನ್ನುವ ಗಂಡ, ಸೌಟು, ಲಟ್ಟಣಿಗೆಯಲ್ಲೇ ಮಾತನಾಡುವ ಹೆಂಡತಿ. ರಾತ್ರಿಯಿಡೀ ಮನೆಗೆ ಬರದಿದ್ದರೂ ತಲೆ ಕೆಡಿಸಿಕೊಳ್ಳದ ಹೆಂಡತಿ, ಹೆಂಡತಿಯೊಂದಿಗೆ ಮಗ ಮನೆಬಿಟ್ಟು ಹೊರಟರೂ ಆರು ತಿಂಗಳ ಸಂಬಳ ಬಂದಿಲ್ಲವೆಂದು ಗೋಗರೆಯುವ ಗಂಡ ಇತ್ಯಾದಿ ವಿಷಯಗಳು ಇಂದಿಗೂ ಸಾಮಾನ್ಯ ಜನರ ದಿನ ನಿತ್ಯದ ಬದುಕಾಗಿದೆ.
ಇಂತಹ ಸಾಮಾನ್ಯವಾದ ವಿಷಯಗಳನ್ನು ಇಟ್ಟುಕೊಂಡು ಪ್ರತಿಯೊಂದು ಫ್ರೇಮ್‌ನ್ನು ತೀರಾ ಶ್ರದ್ಧೆಯಿಂದ ಕ್ರಿಯಾಶೀಲವಾಗಿಸಿದ್ದಾರೆ ನಿರ್ದೇಶಕರು. ಪ್ರತೀ ಫ್ರೇಮ್‌ನ ಮಾತುಗಳು, ರಂಗ ಪರಿಕರಗಳು, ನಟರ ಆಯ್ಕೆ, ಚಲನಾ ವಿನ್ಯಾಸ, ಆಂಗಿಕ ವಿನ್ಯಾಸ, ದೃಶ್ಯ ಜೋಡಣೆ ಇವೆಲ್ಲದರಿಂದ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವುದರಲ್ಲಿ ಎರಡು ಮಾತಿಲ್ಲ. ಕೇವಲ ಹದಿನೈದು ಮಂದಿ ನಟರು ಐವತ್ತಕ್ಕೂ ಹೆಚ್ಚಿನ ಪಾತ್ರಗಳನ್ನು ನಿರ್ವಹಿಸುತ್ತಾ ನಾಟಕದ ಪ್ರತೀ ದೃಶ್ಯದಿಂದ ದೃಶ್ಯಕ್ಕೆ ವೈವಿಧ್ಯಮಯವಾಗಿ ಕಾಣಿಸಿಕೊಳ್ಳುತ್ತಾರೆ. ಇದರ ಹಿಂದೆ ನಟರ ದೊಡ್ಡ ಮಟ್ಟದ ಅಭ್ಯಾಸ, ದೀರ್ಘಕಾಲೀನ ತಾಲೀಮು ಮತ್ತು ಮುಖ್ಯವಾಗಿ ನಟರಲ್ಲಿ ಹವ್ಯಾಸಿ ರಂಗಭೂಮಿಗಿಂತಲೂ ಮಿಗಿಲಾದ ಒಂದು ಫ್ರೊಫೆಶನಲಿಸಂ ಇರಬೇಕಾಗುತ್ತದೆ. ಇದನ್ನು ಸಾಧ್ಯಗೊಳಿಸಿದ್ದಾರೆ ನಟರು ಮತ್ತು ನಿರ್ದೇಶಕರು. ಹಾಗಾಗಿ ಬಹಳ ವೇಗಗತಿಯಲ್ಲಿ ಸಿನಿಮೀಯ ರೀತಿಯಲ್ಲಿ ನಾಟಕ ಸಾಗುತ್ತದೆ. ಹತ್ತು ಹಲವು ವಿಚಾರಗಳನ್ನು ರಂಗದ ಮೇಲೆ ಎಳೆದು ತರುತ್ತದೆ.
ಇಲ್ಲಿ ನಿರ್ದೇಶಕರು ಉದ್ದೇಶಪೂರ್ವಕವಾಗಿಯೇ ಮೆಲೋಡ್ರಾಮಾದ ಕಸರತ್ತನ್ನು ನಾಟಕದುದ್ದಕ್ಕೂ ಬಳಸಿದ್ದಾರೆ. ನಟರ ಅಭಿನಯ ಮತ್ತು ಕಥಾ ನಿರೂಪಣೆಯಲ್ಲಿಯೂ ಈ ಮೆಲೋಡ್ರಾಮಾದ ತಂತ್ರ ನಿಚ್ಚಳವಾಗಿ ಕಾಣುತ್ತದೆ. ಹಲವು ಕಡೆಗಳಲ್ಲಿ ಇದು ಪಕ್ಕಾ ಕಮರ್ಶಿಯಲ್ ತುಳು ನಾಟಕದ ಫಾರ್ಮನ್ನು ಪಡೆದು ಕೊಳ್ಳುತ್ತದೆ. ಹಾಗಾಗಿಯೇ ಹಿಂದಿನ ಫ್ರೇಮ್‌ನಲ್ಲಿ ನಗಿಸಿದ ನಟ ಇನ್ನೊಂದು ದೃಶ್ಯದಲ್ಲಿ ಬೇರೆ ರೂಪದಲ್ಲಿ ಬರುವಾಗಲೇ, ಪ್ರೇಕ್ಷಕರು ನಗಲು ಶುರು ಮಾಡುತ್ತಾರೆ. ನಮ್ಮ ಜನಪ್ರಿಯ ತುಳು ನಾಟಕದ ಸ್ವಭಾವವಿದು. ಹಾಗಾದಾಗ ಪ್ರಯೋಗ ರಂಗಭೂಮಿಯ ಉದ್ದೇಶ ಶಿಥಿಲೀಕರಣಗೊಳ್ಳುತ್ತದೆ. ನಾಟಕ ಯಾವ ಪ್ರೇಕ್ಷಕರನ್ನು ತಲುಪಲು ಪ್ರಯತ್ನಿಸುತ್ತಿದೆ ಎಂಬುದನ್ನು ನಿರ್ದೇಶಕರು ಮತ್ತು ನಟರು ತಮ್ಮನ್ನು ತಾವೇ ಕೇಳಿಕೊಂಡರೆ ಮುಂದಿನ ಪ್ರಯೋಗಗಳಲ್ಲಿ ಹೊಸ ಸ್ವರೂಪವನ್ನು ಪಡೆದುಕೊಳ್ಳಬಹುದೇನೋ. ಇಲ್ಲದಿದ್ದರೆ ಹಳೇ ಸರಕು ಹೊಸ ಬಣ್ಣದಿಂದ ಕಂಗೊಳಿಸಬಹುದು ಅಷ್ಟೇ.
ನಾಟಕ: ಕೊಡಲ್ಲ ಅಂದ್ರೆ ಕೊಡಲ್ಲ
ನಿರ್ದೇಶನ: ಶಕೀಲ್ ಅಹ್ಮದ್
ಪ್ರಸ್ತುತಿ: ನಿರ್ದಿಗಂತ ಮೈಸೂರು
ರಂಗಭೂಮಿಯಲ್ಲಿ ಒಂದು ನಾಟಕಕ್ಕೆ ಎರಡು ಕೃತಿಗಳಿರುತ್ತವೆ. ಒಂದು ನಾಟಕಕಾರನ ಕೃತಿ ಮತ್ತೊಂದು ನಿರ್ದೇಶಕನ ರಂಗಕೃತಿ. ನಾಟಕಕಾರ ಬರೆದ ಕೃತಿಯನ್ನು ರಂಗಕೃತಿಯಾಗಿಸುವಲ್ಲಿ ನಿರ್ದೇಶಕನ ಸೃಜನಕ್ರಿಯೆ ಬಹಳ ಮುಖ್ಯವಾಗುತ್ತದೆ. ಐದು ದಶಕಗಳಾಚೆ ಇಟಲಿಯ ದಾರಿಯೋಪೋ ಬರೆದ ‘ಕಾಂಟ್ ಪೇ ವೋಂಟ್ ಪೇ’ ನಾಟಕ ಕರ್ನಾಟಕದ ನೆಲದಲ್ಲಿ ‘ಕೊಡಲ್ಲ ಅಂದ್ರೆ ಕೊಡಲ್ಲ’ ಹೆಸರಲ್ಲಿ ಪ್ರದರ್ಶನ ಕಾಣುತ್ತಿರುವ ಈ ಹೊತ್ತಿನಲ್ಲಿ ಭೌಗೋಳಿಕ ವ್ಯಾಪ್ತಿ ಮತ್ತು ಕಾಲವನ್ನು ಮೀರಿ ನಾಟಕವನ್ನು ಕಟ್ಟಬೇಕಾಗುತ್ತದೆ. ಈ ಸವಾಲನ್ನು ರಂಗಕೃತಿಯಲ್ಲಿ ಸಮರ್ಥವಾಗಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ, ಕೊಡಲ್ಲ ಅಂದ್ರೆ ಕೊಡಲ್ಲ ನಾಟಕ.
ತೆರಿಗೆ ಎಂಬ ವಿಷಯವನ್ನಿಟ್ಟುಕೊಂಡು ಕಟ್ಟಿದ ನಾಟಕವಿದು. ತೀರಾ ಸರಳವಾದ ರಂಗವಿನ್ಯಾಸದಲ್ಲಿ ಕೇವಲ ಐದು ಜನ ನಟರನ್ನು ಬಳಸಿಕೊಂಡು ಪೆಂಟೋ ಮೈಮ್ ವಿನ್ಯಾಸದಲ್ಲಿ ಆಕ್ರಮಣಶೀಲತೆಯ ಆಂಗಿಕ ಮತ್ತು ವೇಗವಾದ, ಅಷ್ಟೇ ಸ್ಪಷ್ಟವಾದ ವಾಚಿಕದೊಂದಿಗೆ ಪ್ರದರ್ಶನಗೊಳ್ಳುತ್ತದೆ. ನಟರ ದೇಹ, ಧ್ವನಿ ಮತ್ತು ಮನಸ್ಸಿನ ಉನ್ಮತ್ತ ಶಕ್ತಿಯನ್ನು ಬಯಸುವ ಈ ನಾಟಕ ಕೊನೆಗೆ ಪ್ರೇಕ್ಷಕರಲ್ಲಿ ನಟರ ಬಗೆಗೆ ಸಹಾನುಭೂತಿಯನ್ನು ಕಟ್ಟಿಕೊಡುತ್ತದೆ.
ಹೆಣ್ಣುಮಕ್ಕಳೆಲ್ಲಾ ಸೇರಿ ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ ಮಾಡಿದಾಗ ತಾವೂ ಅದರಲ್ಲಿ ಸೇರಿಕೊಂಡು ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಬಾಚಿಕೊಂಡು ಬರುವ ಇಬ್ಬರು ಸ್ನೇಹಿತೆಯರು, ಪೊಲೀಸರಿಂದ ಮತ್ತು ತಮ್ಮ ಗಂಡಂದಿರಿಂದ ಈ ಕಳ್ಳತನದ ವಸ್ತುಗಳನ್ನು ಅಡಗಿಸಿಡುವ ಪ್ರಯತ್ನದಲ್ಲಿ ಕೃತಕ ನಾಟಕೀಯ ಬಸಿರು ಬರಿಸಿಕೊಂಡು, ಅದಕ್ಕೊಂದು ಕಥೆ ಕಟ್ಟಿ, ಆ ಕಥೆ ರೆಕ್ಕೆ ಪುಕ್ಕ ಬೆಳೆಸಿಕೊಂಡು ಮಾಗಿ ಹಣ್ಣಾಗಿ, ಪುನರ್ ನಿರೂಪಿತಗೊಂಡು ಬೇರೆ ಬೇರೆ ರೂಪಗಳನ್ನು ಪಡೆದು ಕೊನೆಗೆ ಬಸಿರಿನ ನಾಟಕೀಯ ಪ್ರಸವದಲ್ಲಿ ಕೊನೆಯಾಗುತ್ತದೆ.
ನಾಟಕದ ತುಂಬಾ ಬಂದು ಹೋಗುವ ಕೆಳ ಮಧ್ಯಮ ವರ್ಗದ ಜನರ ದಿನನಿತ್ಯದ ಬವಣೆ, ನೋವು, ನೌಕರಿ, ಕನಸು ಎಲ್ಲವನ್ನು ತೆರೆದಿಡುತ್ತಾ, ಮನುಷ್ಯರನ್ನು ಕಟ್ಟಿಹಾಕಲು ಬಯಸುವ ಅಧಿಕಾರಿ ವರ್ಗ ಮತ್ತು ಆ ವ್ಯವಸ್ಥೆಗೆ ಸೆಡ್ಡು ಹೊಡೆಯುವ ನೌಕರಶಾಹಿ ಇವೆಲ್ಲದರ ಮೂಲಕ ತೆರಿಗೆ ಕಟ್ಟಬೇಕಾದ ಸ್ಥಿತಿಗೆ ಪ್ರಬಲ ವಿರೋಧವನ್ನೇ ನಾಟಕ ಒಡ್ಡುತ್ತದೆ. ಆದರೆ ಅಲ್ಲಲ್ಲಿ ತಟ್ಟುವ ಕೆಲವೇ ಕೆಲವು ಮಾತುಗಳ ಹೊರತಾಗಿ ನಾಟಕ ಗಂಭೀರವಾಗಿ ಯೋಚಿಸುವಂತೆ ಮಾಡುವುದಿಲ್ಲ. ಗೋದಾಮುಗಳಲ್ಲಿ ಕೃತಕ ಅಭಾವ ಸೃಷ್ಟಿಸಿ, ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿಸುವುದು, ಹೊಟ್ಟೆ ಹಸಿವು ತಣಿಸಲು ಪ್ರೇಕ್ಷಕರನ್ನು ಮಾತಾಡಿಸುವುದು, ಕಿಟಕಿ ಬಾಗಿಲು ಒಂದೇ ಆದರೆ ಅಕ್ಕ ಪಕ್ಕದವರ ಸಂಬಂಧ ಗಟ್ಟಿಯಾಗುವುದು. ಇಡೀ ಜೀವನ ಹೋರಾಟ ಮಾಡುತ್ತಿದ್ದರೆ ಬದುಕುವುದು ಯಾವಾಗ ಇವೆಲ್ಲ ಮಾತುಗಳು ನೆನಪಲ್ಲಿ ಉಳಿಯುವಂತೆ ಮಾಡುತ್ತದೆ.
ನಿರ್ದೇಶಕರು ಈ ಕಥೆಗೆ ನೀಡಿರುವ ಬಹು ಆಯಾಮದಿಂದಾಗಿ ನಾಟಕದುದ್ದಕ್ಕೂ ಹಾಸ್ಯ, ವ್ಯಂಗ್ಯ ಮತ್ತು ವಿಡಂಬನೆಗಳಿಂದಾಗಿ ಪ್ರೇಕ್ಷಕರನ್ನು ನಗೆಗಡಲಲ್ಲಿ ಮೀಯಿಸುತ್ತದೆ. ಸೀಮಾತೀತವಾದ ಅಭಿನಯ ಮತ್ತು ಮಾತುಗಳು ಈ ನಾಟಕದ ಶಕ್ತಿ. ಎರಡು ಮನೆಗೆ ಬಾಗಿಲು ಒಂದೇಯಾಗಿ, ಆ ಬಾಗಿಲೇ ಎರಡೂ ಮನೆಯ ಕಿಟಕಿಯಾಗಿ ರಂಗದ ಮೇಲೆ ಪ್ರಧಾನ ಪಾತ್ರವಾಗುತ್ತದೆ. ಏಕ ಬಾಗಿಲು ಮತ್ತು ಏಕ ಕಿಟಕಿಯ ತಂತ್ರವನ್ನು ಪರಿಣಾಮಕಾರಿಯಾಗಿ ಬಳಸಿದ ನಿರ್ದೇಶಕರು ಭವಿಷ್ಯದ ರಂಗದ ಮೇಲಿನ ಸಾಧ್ಯತೆಗಳನ್ನು ಮುಂದಿಡುತ್ತಾರೆ.
ಹಾಸ್ಯ ಈ ನಾಟಕದ ಪ್ರಧಾನ ರಸ. ಜನಸಾಮಾನ್ಯನೊಬ್ಬ ದಿನ ನಿತ್ಯ ಪಡುವ ಬೇನೆ ಇಲ್ಲಿ ಹಾಸ್ಯವಾಗಿ ನಾಟಕದುದ್ದಕ್ಕೂ ಹಾಸು ಹೊಕ್ಕಾಗಿದೆ. ವ್ಯವಸ್ಥೆಯ ಬಗೆಗಿನ ಅಸಹನೆ, ವ್ಯಂಗ್ಯ ವಿಡಂಬನೆಗೆ ಒಳಗಾಗಿ ಹಾಸ್ಯ ರಸಾಯನವಾಗುತ್ತದೆ. ಆದರೆ ನಾಟಕ ಬಲವಾಗಿ ಪ್ರತಿಪಾದಿಸಬೇಕಾದ ವಸ್ತು ವಿಷಯ ಈ ರಸಾಯನದೊಳಗೆ ಹೂತು ಹೋದಂತೆ ಭಾಸವಾಗುತ್ತದೆ. ಏಕತಾನತೆಯ ನಟನಾ ವಿನ್ಯಾಸದಿಂದಾಗಿಯೂ ದಾಟಬೇಕಾದ ವಿಡಂಬನೆಯ ಮಾತುಗಳು ದಡ ಸೇರುವುದಿಲ್ಲ. ಮಾತು ಈ ನಾಟಕದ ಶಕ್ತಿಯೂ ಹೌದು; ಮಾತು ಈ ನಾಟಕದ ಮಿತಿಯೂ ಹೌದು.
ನಾಟಕವೆಂದರೆ ಅದು ನೋಡುಗನ ಬೌದ್ಧಿಕ ಅಥವಾ ಸಾಮಾಜಿಕ ಅಥವಾ ಭಾವನಾತ್ಮಕ ಮನೋವಲಯವನ್ನಾದರೂ ತಟ್ಟಬೇಕು. ಹಾಸ್ಯ ಪ್ರೇಕ್ಷಕನ ಭಾವಕೋಶಗಳನ್ನು ತಟ್ಟಿ ಮಾತಾಡಿಸಲು ಸಾಧ್ಯವಾಗಿಲ್ಲವೆಂದಾದರೆ ಆ ಹಾಸ್ಯವೂ ಸಹ್ಯವಲ್ಲ.
ನಾಟಕ: ರಾಮ ಕೃಷ್ಣ ಶಿವ
ನಿರ್ದೇಶನ: ಗಣೇಶ್ ಮಂದಾರ್ತಿ
ಪ್ರಸ್ತುತಿ: ನಿರ್ದಿಗಂತ
ಕರಾವಳಿಯ ನಿರ್ದಿಗಂತ ಉತ್ಸವದಲ್ಲಿ ಪ್ರಯೋಗಕಂಡ ಮೇರು ರಂಗಕೃತಿ ‘ರಾಮ ಕೃಷ್ಣ ಶಿವ’. ಇಂಡಿಯಾದ ಆತ್ಮಗಳಂತಿರುವ ಈ ಮೂರು ವ್ಯಕ್ತಿಗಳು ಜೀವಧಾತುಗಳಾಗಿ ರಕ್ತಮಾಂಸಗಳಾಗಿ ಜನರೊಳಗೆ ಬೆರೆತು ಹೋದವರು. ಈ ಮೂರು ಹೆಸರುಗಳು ಪುರಾಣದ ಪಾತ್ರಗಳಾಗಿ, ಪೂರ್ಣತ್ವದ ಮಹತ್ ಸ್ವಪ್ನಗಳಾಗಿ, ಚಾರಿತ್ರಿಕ ವ್ಯಕ್ತಿಗಳಾಗಿ, ಸಾಂಸ್ಕೃತಿಕ ದಾರ್ಶನಿಕರಾಗಿ, ಧರ್ಮ ರಾಜಕಾರಣಿಗಳಾಗಿ, ಆರಾಧನೆಯ ದೈವೀಸ್ವರೂಪವಾಗಿ ಇಂಡಿಯಾದ ಉದ್ದಗಲಕ್ಕೆ ಹರಿದು ಹಂಚಿಹೋಗಿದ್ದಾರೆ, ಸತ್ತಿದ್ದಾರೆ, ಮತ್ತೆ ಹುಟ್ಟಿದ್ದಾರೆ, ಮತ್ತೆ ಸತ್ತು ಮತ್ತೆ ಹುಟ್ಟಿ ಹೊಸರೂಪಗಳಲ್ಲಿ ಮತ್ತೆ ಕಾಣಿಸಿದ್ದಾರೆ. ಅಷ್ಟು ಮಾತ್ರವಲ್ಲ, ಇಡೀ ಇಂಡಿಯಾದಲ್ಲಿ ಇದುವರೆಗೆ ನಡೆದ ಧರ್ಮರಾಜಕಾರಣದ ಅಧ್ವರ್ಯುಗಳಾಗಿ, ಕೋಮುಗಲಭೆಗಳ ಪಾತ್ರಗಳಾಗಿ ಈ ಮೂರು ಹೆಸರುಗಳು ಬಳಕೆಯಾಗುತ್ತಿರುವ ಈ ಕಾಲದಲ್ಲಿ, ಸುಮಾರು ಎಪ್ಪತ್ತೈದು ವರುಷಗಳ ಹಿಂದೆ ರಾಮಮನೋಹರ ಲೋಹಿಯಾರು ಬರೆದ ಮಹತ್ ಪ್ರಬಂಧವನ್ನು ರಂಗರೂಪಗೊಳಿಸಿದ್ದಾರೆ ನಿರ್ದೇಶಕ ಗಣೇಶ್ ಮಂದಾರ್ತಿ. ರಾಮ, ಕೃಷ್ಣ ಶಿವನ ಕುರಿತಾದ ಹೊಸ ಆಖ್ಯಾನ, ವ್ಯಾಖ್ಯಾನ ಮತ್ತು ಆರಾಧನೆಯ ಹೊಸ ದರ್ಶನವನ್ನು ರಂಗ ಕಾಣ್ಕೆಯಾಗಿ ನೀಡಿದ್ದಾರೆ.
ಅಲ್ಲಮನ ವಚನದಿಂದ ಲೋಹಿಯಾರನ್ನು ಪರಿಚಯಿಸಿದ ನಾಟಕ ಪೂರ್ವರಂಗದಲ್ಲಿ ರಾಮ, ಕೃಷ್ಣ ಶಿವರನ್ನು ಚಿತ್ರಿಸಲಿರುವ ಬಗೆಯನ್ನು ಆರಂಭದಲ್ಲೇ ಕೊಡುತ್ತದೆ. ರಾಮನ ಸೀಮಿತ ವ್ಯಕ್ತಿತ್ವವನ್ನು, ಕೃಷ್ಣನ ಸಮೃದ್ಧತೆಯನ್ನು ಮತ್ತು ಶಿವನ ಪ್ರಮಾಣಾತೀತ ವ್ಯಕ್ತಿತ್ವವನ್ನು ಹಂತಹಂತವಾಗಿ ರಂಗದ ಮೇಲೆ ತೆರೆದಿಡುತ್ತದೆ. ಶಬರಿಯ ರಾಮ, ಸೀತೆಯ ರಾಮ, ಗಾಂಧೀಜಿಯ ರಾಮ ಇವೆಲ್ಲದರಲ್ಲಿಯೂ ಲೋಹಿಯಾ ಕಂಡ ರಾಮನನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟ ನಿರ್ದೇಶಕರು ಅಂತಿಮವಾಗಿ ವಾಲಿಗೆ ಎಸಗಿದ ದ್ರೋಹ ಮತ್ತು ಶಂಭೂಕನ ಕೊಲೆ ಮಾಡಿದ ಅಪರಾಧಕ್ಕಾಗಿ ರಾಮನ ಮೇಲೆ ಕೊಲೆಗಾರ ಎಂದು ಷರಾ ಬರೆದು ಬಿಡುತ್ತಾರೆ.
ಕೃಷ್ಣನು ಕೂಡ ಕೊಲೆಗಾರನಾಗಿಯೇ ಕಾಣುತ್ತಾನೆ. ಕೋಲೂರಿಕೊಂಡು ಸುಧಾಮನಲ್ಲಿಗೆ ಬಂದ ಕೃಷ್ಣ ಸುಧಾಮರ ಸಂವಾದದಲ್ಲಿ ಇಡಿಯ ಕೃಷ್ಣ ಕಥೆ ರಂಗಕ್ಕಿಳಿಯುತ್ತದೆ. ರಾಮ ಕೊಲೆಯನ್ನು ಸಮರ್ಥಿಸುತ್ತಾ ಬಂದರೆ, ಕೃಷ್ಣ ತಾನು ಮಾಡಿರುವ ಕೃತ್ಯಗಳಿಗೆ, ತನ್ನ ಮೇಲಿರುವ ಆರೋಪಗಳಿಗೆ ಕರ್ಮದ ಮೂಲಕ ವ್ಯಾಖ್ಯಾನ ನೀಡುತ್ತಾನೆ. ಯಕ್ಷಗಾನ ತಾಳಮದ್ದಲೆಯ ಅರ್ಥಗಾರಿಕೆಯನ್ನು ನೆನಪಿಸುವ ಆಖ್ಯಾನವದು. ವರ್ತಮಾನದಲ್ಲಿ ಕಣ್ಣಿಗೆ ಕಾಣುವುದನ್ನು ಅವಲಕ್ಷಿಸಿದರೆ, ಮುಂದೆ ಕಣ್ಣಿಗೆ ಕಾಣದ ಅನುಭಾವವನ್ನು ಪಡೆಯುವುದನ್ನು ನಾವು ಕಳಕೊಂಡಂತೆ ಎಂಬ ಮಾತಿನಂತೆ ನಡಕೊಳ್ಳುವ ಕೃಷ್ಣ ರಾಮನಿಗಿಂತ ಹೆಚ್ಚು ಮನುಷ್ಯನಾಗುತ್ತಾನೆ. ಕುಂತಿಯ ಶಾಪ, ರಾಧೆಯ ದೇಹ ಮತ್ತು ಪ್ರಜ್ಞೆ ಮೀರಿದ ಪ್ರೀತಿಯ ಮುಂದೆ ಮತ್ತೆ ಕೃಷ್ಣನ ಮನುಷ್ಯತ್ವ ವ್ಯಕ್ತಗೊಳ್ಳುತ್ತಾ ಹೋಗುತ್ತದೆ. ಕೃಷ್ಣನ ಸಾವನ್ನು ದೇವಾನುದೇವತೆಗಳೆಲ್ಲ ಸೇರಿ ಮಾಡಿದ ಕೊಲೆ ಎಂದು ಆರೋಪಿಸುವ ನಿರ್ದೇಶಕರು ಕೃಷ್ಣನ ಸಾವಿನಲ್ಲಿ ರಘುಪತಿ ರಾಘವ ರಾಜಾರಾಮ್ ಹಾಡಿನ ಹಿನ್ನೆಲೆಯನ್ನು ಕೊಡುವುದರ ಮೂಲಕ ಗಾಂಧಿಯನ್ನು ನೆನಪಿಸುತ್ತಾರೆ. ರಾಮ, ಕೃಷ್ಣರನ್ನು ತನ್ನೊಳಗಿಟ್ಟುಕೊಂಡಿದ್ದ ಗಾಂಧಿ, ರಾಮನಿಂದ ಪೂರ್ಣತೆಯನ್ನೂ, ಕೃಷ್ಣನಿಂದ ರಾಜನೀತಿಯನ್ನು ಪಡೆದು, ರಾಮ ಮತ್ತು ಕೃಷ್ಣರಲ್ಲಿ ದೇವರಾಗ ಹೊರಟವರು ಯಾರು ಎಂಬ ಪ್ರಶ್ನೆಯನ್ನು ನಾಟಕ ಮುಂದಿಡುತ್ತದೆ.
ಆದರೆ ಶಿವ ಇವರಿಬ್ಬರಿಗಿಂತ ಭಿನ್ನವಾಗಿ ಗಾತ್ರಾತೀತವಾಗಿ ರಂಗಕ್ಕಿಳಿಯುತ್ತಾನೆ ಮತ್ತು ನಿರ್ದೇಶಕರಿಂದಲೂ ಸಹ್ಯವಾಗಿ ವಿಸ್ತಾರಗೊಳ್ಳುತ್ತಾನೆ. ರಾಮ ಮತ್ತು ಕೃಷ್ಣರ ಬಗ್ಗೆ ಇದ್ದ ಆರೋಪಗಳು ಶಿವನ ಬಗ್ಗೆ ಇದ್ದಂತಿಲ್ಲ; ಲೋಹಿಯಾರಿಗೂ ಕೂಡಾ. ಬ್ರಹ್ಮ ಮತ್ತು ವಿಷ್ಣುವಿನ ಶ್ರೇಷ್ಠತೆಯ ವ್ಯಸನವನ್ನು ಲೀಲಾಜಾಲವಾಗಿ ಜಾಲಾಡಿದ ಶಿವ, ಆದಿಶಕ್ತಿಯ ಕೋರಿಕೆಯ ಮೇರೆಗೆ ಪ್ರಕೃತಿ ಪುರುಷ ಸಮಾಗಮಕ್ಕೆ ಪುರುಷನಾಗುತ್ತಾನೆ. ಭಂಗಿ, ಹೆಂಡಗಳಿಂದ ತೀರಾ ಮಾನುಷ ಸ್ವರೂಪಿಯಾಗೇ ಕಾಣುವ ಶಿವ ‘ನಾನಿರುವದೇ ಹೀಗೆ’ ಎಂದು ಪ್ರತೀ ಹಂತದಲ್ಲೂ ತೋರಿಸಿಕೊಡುತ್ತಾನೆ. ರಾವಣನಿಗೆ ತನ್ನ ಪತ್ನಿ ಪಾರ್ವತಿಯನ್ನೇ ಕೊಡುವುದರ ಮೂಲಕ ಭದ್ರಕಾಳಿಯ ರೂಪದರ್ಶನ ಮಾಡುತ್ತಾನೆ. ಗಣಪತಿಗೆ ಆನೆಯ ತಲೆ ಜೋಡಿಸಿ ಟೀಕಾಕಾರರ ಮಾತುಗಳಿಗೆ ರಾಮನಂತೆ ಸಮರ್ಥನೆಯನ್ನೇ ಕೊಡುವುದಿಲ್ಲ. ಪಾರ್ವತಿಯೊಂದಿಗೆ ಪಂಥ ಕಟ್ಟಿ ನರ್ತಿಸಿದ ಶಿವ ಆದಿಯೋಗಿಯಾಗಿ ಆರಾಧನೆಯ ಔಚಿತ್ಯವನ್ನೇ ಪ್ರಶ್ನಿಸುತ್ತಾನೆ.
ವಾಲ್ಮೀಕಿ ರಾಮಾಯಣ, ಕುವೆಂಪು ರಾಮಾಯಣ, ಕುಮಾರವ್ಯಾಸ ಭಾರತದ ಅಗಾಧವಾದ ಅಧ್ಯಯನವಿರುವ ನಿರ್ದೇಶಕರು ಪರಿಪೂರ್ಣವಾದ ಶ್ರದ್ಧೆ ಮತ್ತು ವೈಚಾರಿಕತೆಯಿಂದ ರಂಗಪಠ್ಯವನ್ನು ಸಿದ್ಧಗೊಳಿಸಿಕೊಂಡಿದ್ದಾರೆ ಮತ್ತು ಅಷ್ಟೇ ತಾಳ್ಮೆಯಿಂದ ನಟರ ಆಂಗಿಕ ಮತ್ತು ವಾಚಿಕವನ್ನು ಕಟ್ಟಿದ್ದಾರೆ. ಹಾಗಾಗಿ ರಂಗ ಪ್ರಯೋಗವಾಗಿ ದೀರ್ಘ ಕಾಲ ಕಾಡುತ್ತದೆ. ಲೋಹಿಯಾರ ವಿಚಾರಗಳ ನಡುವೆ ನಿರ್ದೇಶಕರು ಹಲವೆಡೆ ಉದ್ದೇಶಪೂರ್ವಕವಾದ ಸೀಮೋಲ್ಲಂಘನ ಮಾಡಿದ್ದಾರೆ. ಈ ಸೀಮೋಲ್ಲಂಘನ ಸಹ್ಯವೇ ಆಗಿತ್ತು. ನಿರ್ದೇಶಕನಿಗೆ ರಂಗಪಠ್ಯದೊಂದಿಗೆ ತನ್ನ ಮತ್ತು ನಾಟಕದ ನಿಲುವನ್ನೂ ಒಟ್ಟೊಟ್ಟಿಗೆ ಕಟ್ಟಿಕೊಡುವ ಅನಿವಾರ್ಯತೆ ಇರುತ್ತದೆ.
ಕೇವಲ 5 ಮಂದಿ ಸಮರ್ಥ ನಟರಿಂದ ಕಟ್ಟಲ್ಪಟ್ಟ ನಾಟಕವಿದು. ರಾಮ, ಕೃಷ್ಣ ಮತ್ತು ಶಿವನ ಪಾತ್ರವನ್ನು ಒಬ್ಬನೇ ನಟ ನಿರ್ವಹಿಸುವುದು ಆಶಯದ ದೃಷ್ಟಿಯಿಂದ ಸರಿಯಾದುದೇ ಆಗಿದೆ. ಆದರೆ ರಾಮ ಕೃಷ್ಣರಲ್ಲಿ ಗಾಂಧಿಯನ್ನು ಕಾಣಿಸಿದ ನಾಟಕ, ಶಿವನಲ್ಲಿ ಶಿಶುನಾಳ ಷರೀಫರನ್ನು ಹುಡುಕುತ್ತದೆ. ವಾಲಿಯ ಪಾತ್ರವನ್ನು ಇದೇ ಪಾತ್ರಧಾರಿ ನಿರ್ವಹಿಸುವುದು ಮತ್ತು ರಾಮನ ಪಾತ್ರವನ್ನು ಆ ದೃಶ್ಯದಲ್ಲಿ ಇನ್ನೊಬ್ಬ ನಟ ನಿರ್ವಹಿಸುವುದು ವಾಲಿಯ ಬಾಯಿಯಲ್ಲಿ ರಾಮನ ಮಾತುಗಳನ್ನು ಆಡಿಸಲೆಂದೇ ಭಾವಿಸಬೇಕಾಗುತ್ತದೆ ಅಥವಾ ವಾಲಿಯ ಪಾತ್ರವನ್ನು ಬಲಯುತಗೊಳಿಸಲೋ..
ಇಡೀ ಇಂಡಿಯಾದ ಭೂಪಟ, ಕೆಲವೇ ಕೆಲವು ಮೆಟ್ಟಿಲುಗಳು, ಬಹಳ ಸರಳವಾಗಿ ಕಂಡರೂ ವಿಶಿಷ್ಟವಾದ ವಸ್ತ್ರವಿನ್ಯಾಸ, ಶಂಭೂಕನ ಪಾತ್ರವನ್ನು ನಿಸರ್ಗದ ಪ್ರೇಮಿಯಾಗಿ ರೂಪಿಸಲು ಚಿತ್ರ ಕಲಾವಿದನಾಗಿಸಿದ್ದು, ಧರ್ಮರಾಯನ ಪಾತ್ರವನ್ನು ತೀರಾ ವಾಚ್ಯಗೊಳಿಸಿರುವುದು ನಾಟಕಕ್ಕೆ ಪುರಾಣಕ್ಕಿಂತ ಸಮಕಾಲೀನ ವ್ಯಕ್ತಿತ್ವವನ್ನು ಕೊಡುತ್ತದೆ. ಇದರಿಂದ ಲೋಹಿಯಾ ಹೇಳಿದ ರಾಮ, ಕೃಷ್ಣ, ಶಿವರು ನಮ್ಮ ಸಮಕಾಲೀನ ವ್ಯಕ್ತಿಗಳು ಎಂಬ ಮಾತು ನಿಜಾರ್ಥದಲ್ಲಿ ಸಾಕಾರಗೊಳ್ಳುತ್ತದೆ.
ರಂಗಭೂಮಿ ಅನಾದಿ ಕಾಲದಿಂದಲೂ ಅಭಿವ್ಯಕ್ತಿಯ ಮಾಧ್ಯಮವಾಗಿ, ಹೋರಾಟದ ದಾರಿಯಾಗಿ ಮತ್ತು ಬಿಡುಗಡೆಯ ಹಂಬಲವಾಗಿ ತುಂಬಿಕೊಳ್ಳುತ್ತಾ ಬಂದಿದೆ. ರಂಗಭೂಮಿಯಲ್ಲಿ ಇದೀಗ ಕಳಚಿಕೊಳ್ಳುವ ಸಮಯ. ರಂಗದ ಮೇಲೆ ಮಾತ್ರವಲ್ಲ; ರಂಗದಾಚೆಗೂ. ನಾಟಕ ಕಳಚಿಕೊಳ್ಳಬೇಕು ರಂಗದ ಅದ್ದೂರಿತನವನ್ನು, ಕಳಚಿಕೊಳ್ಳಬೇಕು ವಸ್ತ್ರವಿನ್ಯಾಸಗಳ ಭಾರವನ್ನು, ಕಳಚಿಕೊಳ್ಳಬೇಕು ಮಾಯಾ ಬೆಳಕಿನ ಭ್ರಮಾತ್ಮಕ ಲೋಕವನ್ನು, ಕಳಚಿಕೊಳ್ಳಬೇಕು ಎದೆಯೊಳಗಿನ ಬಿಗುಮಾನವನ್ನು; ಬಂಡವಾಳಶಾಹಿಯ ಅಬ್ಬರವನ್ನು. ನಾಟಕ ಕಳಚಿಕೊಳ್ಳಬೇಕು ಪ್ರಭುತ್ವದ ಓಲೈಸುವಿಕೆಯನ್ನು ಮತ್ತು ಪ್ರಭುತ್ವವನ್ನೂ.