ಕೊಪ್ಪಳ ಜಿಲ್ಲಾಸ್ಪತ್ರೆಗೆ ಬೇಕಿದೆ ಇಂದಿರಾ ಕ್ಯಾಂಟೀನ್
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಇಂದಿರಾ ಕ್ಯಾಂಟೀನ್‌ನ ಅವಶ್ಯಕತೆ ಇದೆ. ಇಂದಿರಾ ಕ್ಯಾಂಟೀನ್ ಪ್ರಾರಂಭವಾದರೆ ಬಡಜನರಿಗೆ ಅನುಕೂಲವಾಗಲಿದೆ ಎಂಬ ಬೇಡಿಕೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಜಿಲ್ಲಾಸ್ಪತ್ರೆಗೆ ನಿರಂತರವಾಗಿ ರೋಗಿಗಳು ಬರುತ್ತಾರೆ. ಬರುವ ಬಡ ರೋಗಿಗಳ ಕುಟುಂಬದವರು, ರೋಗಿಗಳ ಸಹಾಯಕರು ಕೂಡ ಬಂದು ದಿನಗಟ್ಟಲೆ ಇಲ್ಲೇ ಇರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರು ಬೇರೆ ಕಡೆ ಹೋಗಿ ಊಟ ಮಾಡುವಷ್ಟು ಸಮಯವಾಗಲಿ ಅಥವಾ ಹಣವಾಗಲಿ ಅವರ ಬಳಿ ಇರುವುದಿಲ್ಲ, ಆಸ್ಪತ್ರೆಗೆ ಬರುವ ಬಹುತೇಕ ಜನರು ಬಡವರೇ ಆಗಿರುತ್ತಾರೆ. ಅದರಲ್ಲೂ ದೂರದ ಊರಿನಿಂದ ಬರುವವರೇ ಹೆಚ್ಚಾಗಿರುವುದರಿಂದ ಇಂದಿರಾ ಕ್ಯಾಂಟೀನ್‌ನ ಅವಶ್ಯಕತೆ ಎದ್ದು ಕಾಣುತ್ತಿದೆ.
ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸರಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್ ಯೋಜನೆಯು ನೂರಾರು ಬಡ ಜನರ ಹೊಟ್ಟೆಯ ಹಸಿವನ್ನು ನೀಗಿಸಲಿದೆ. ಬಡ ರೋಗಿಗಳಿಗೆ ಆಸ್ಪತ್ರೆಯ ವತಿಯಿಂದ ಊಟೋಪಚಾರದ ವ್ಯವಸ್ಥೆ ಇದ್ದು, ರೋಗಿಗಳ ಜೊತೆ ಬಂದವರಿಗೆ ಯಾವುದೇ ವ್ಯವಸ್ಥೆ ಇಲ್ಲ ಎಂಬ ದೂರು ಕೇಳಿಬಂದಿದೆ.
ಕೊಪ್ಪಳ ಜಿಲ್ಲಾಸ್ಪತ್ರೆಯು ಸುಮಾರು 250 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ನೂರು ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕೂಡ ಇರುವುದರಿಂದ ಕ್ಯಾಂಟೀನ್ ಬೇಡಿಕೆ ಹೆಚ್ಚಾಗಿದೆ. ಇಲ್ಲಿಂದ ಸ್ವಲ್ಪ ದೂರದಲ್ಲೇ ಜಿಲ್ಲಾಧಿಕಾರಿ ಮತ್ತು ಜಿಪಂ ಕಾರ್ಯಾಲಯಗಳು ಕೂಡ ಇರುವುದರಿಂದ ನಿತ್ಯ ರೈತರು, ಕೂಲಿ ಕಾರ್ಮಿಕರು, ಬಡವರು ಹಾಗೂ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಇವರಲ್ಲಿ ಹೆಚ್ಚಿನ ವರಿಗೆ 150-200ರೂ. ಕೊಟ್ಟು ಆಹಾರ ತಿನ್ನುವಷ್ಟು ಸಾಧ್ಯವಾಗುವುದಿಲ್ಲ.
ಸದ್ಯ ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಇಂದಿರಾಕ್ಯಾಂಟೀನ್ ಮಾತ್ರ ಇದ್ದು, ಇನ್ನೊಂದು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಒಂದು ಒಂದು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕ. ಆ ಮೂಲಕ ಸರಕಾರ ಬಡಜನರ ಹಸಿವು ನೀಗಿಸುವ ಕಾರ್ಯವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕು.
-ಎಂ.ಕೃಷ್ಣವಂಶಿ, ಸ್ಥಳೀಯ ನಿವಾಸಿ