×
Ad

ಜಿಲ್ಲೆಯಲ್ಲಿ ಮತ್ತೆ ಅಕ್ರಮ ಮರಳುಗಾರಿಕೆ ಸದ್ದು:‌ 19ದಿನಗಳಲ್ಲಿ 37 ಪ್ರಕರಣ, ದೇವದುರ್ಗಕ್ಕೆ ಸಿಂಹಪಾಲು

Update: 2026-01-22 13:58 IST

ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು, ನದಿ, ಹಳ್ಳಗಳನ್ನು ಬರಿದು ಮಾಡಿ ನೈಸರ್ಗಿಕ ಸಂಪನ್ಮೂಲ ಕೊಳ್ಳೆ ಹೊಡೆಯಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆ ಕುರಿತಂತೆ ಕೇವಲ ಜನವರಿ ತಿಂಗಳೊಂದರಲ್ಲಿ 37 ಪ್ರಕರಣ ದಾಖಲಾಗಿದ್ದು, ಈ ಪೈಕಿ ದೇವದುರ್ಗ ತಾಲೂಕಿನಲ್ಲೇ 21 ಪ್ರಕರಣಗಳು ದಾಖಲಾಗಿವೆ.

ರಾಜಕೀಯ ನಾಯಕರು, ಪೊಲೀಸರ ಚೇಲಾಗಳು ಅಕ್ರಮದಲ್ಲಿ ಭಾಗಿಯಾಗಿದ್ದು ಅಕ್ರಮ ಮರಳು ಸಾಗಾಟ ನಿಯಂತ್ರಣಕ್ಕೆ ತೊಡಕಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲೆಯ ಮಾನ್ವಿ, ಸಿಂಧನೂರು, ರಾಯಚೂರು, ದೇವದುರ್ಗ, ಮಸ್ಕಿ ತಾಲೂಕುಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದು ನಿಯಂತ್ರವಾಗುತ್ತಿಲ್ಲ. ಆಗಾಗ ಕೆಲ ಸಾಮಾಜಿಕ ಕಾರ್ಯಕರ್ತರು ಪತ್ರಿಕಾಗೋಷ್ಠಿ, ಹೋರಾಟ ಮಾಡುತ್ತಾರೆ. ಆದರೆ ಆಡಳಿತ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದಾಗ ಪ್ರಶ್ನಿಸಬೇಕಾದ ವಿರೋಧ ಪಕ್ಷದವರೂ ಧ್ವನಿ ಎತ್ತುತ್ತಿಲ್ಲ. ಇದಕ್ಕೆ ರಾಜಕೀಯ ಒಳ ಒಪ್ಪಂದ ಕಾರಣ. ಎಲ್ಲಾ ಪಕ್ಷದ ನಾಯಕರು, ಪರೋಕ್ಷವಾಗಿ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಹೋರಾಟಗಾರರೊಬ್ಬರು ತಿಳಿಸಿದ್ದಾರೆ.

ಅಕ್ರಮ ತಡೆಯಲು ಹೋದ ಶಾಸಕಿಗೆ ಬೆದರಿಕೆ?: ಜಿಲ್ಲೆಯ ದೇವದುರ್ಗ ತಾಲೂಕು ಅಕ್ರಮ ಮರಳು ಸಾಗಣೆ ವಿಷಯದಲ್ಲಿ ಸದಾ ಸುದ್ದಿಯಲ್ಲಿರುತ್ತದೆ. ದೇವದುರ್ಗ ತಾಲೂಕಿನಲ್ಲಿ ಮರಳು ಮಾಫಿಯಾದವರ ಅಟ್ಟಹಾಸ ಮೀರಿದೆ. ಅಕ್ರಮವಾಗಿ ಮರಳು ಸಾಗಣಿಕೆ ಮಾಡಲು ತಡೆಯಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರಿಂದ ನನ್ನ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ಖುದ್ದು ದೇವದುರ್ಗ ಶಾಸಕಿ ಕರೆಮ್ಮಾ ಜಿ.ನಾಯಕ ಅವರೇ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದನ್ನು ನೋಡಿದರೆ ಅಕ್ರಮ ದಂಧೆಕೋರರು ಎಷ್ಟು ಪ್ರಭಾವಿ ಇರಬಹುದು ಎಂಬುದು ಜಿಲ್ಲಾ ನಾಗರಿಕರ ಪ್ರಶ್ನೆಯಾಗಿದೆ.

ನೂರಾರು ಕೋಟಿ ಕಾಮಗಾರಿಗಳು ದೇವದುರ್ಗ ತಾಲೂಕಿನಲ್ಲಿ ನಡೆಯುತ್ತಿವೆ. ನಮಗೂ ಮರಳಿನ ಅವಶ್ಯಕತೆ ಇದೆ. ಕಾಮಗಾರಿಗಳಿಗೆ ಟ್ರ್ಯಾಕ್ಟರ್ ಮೂಲಕ ಮರಳನ್ನು ಪಡೆಯುತ್ತಿದ್ದೇವೆ. ಆದರೆ ಟಿಪ್ಪರ್‌ಗಳಲ್ಲಿ ಆಭ್ಯಂತರವಿಲ್ಲ ದೊಡ್ಡ ಟಿಪ್ಪರ್ ಗಳ ಮೂಲಕ ಮರಳನ್ನು ಬೇರೆ ರಾಜ್ಯಗಳಿಗೆ ಹಾಗೂ ಹೊರ ಜಿಲ್ಲೆಗಳಿಗೆ ರಾಯಲ್ಟಿ ಇಲ್ಲದೆ ಮರಳು ಸಾಗಿಸಲಾಗುತ್ತಿದೆ. ರಾಯಲ್ಟಿ ಇಲ್ಲದೆ ಮರಳು ಸಾಗಣೆಗೆ ಕಡಿವಾಣ ಹಾಕಿದ್ದಕ್ಕೆ ನನಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಕರೆಮ್ಮಾ ನಾಯಕ ಜಿಲ್ಲಾಧಿಕಾರಿ ನಿತಿಶ್ ಕೆ ಅವರಿಗೆ ಮಂಗಳವಾರ ಭೇಟಿಯಾಗಿ ಅಳಲು ತೋಡಿಕೊಂಡು ಪೊಲೀಸ್ ಇಲಾಖೆಯಿಂದ ರಕ್ಷಣೆ ಕೋರಿದ್ದು ಚರ್ಚೆಗೆ ಗ್ರಾಸವಾಗಿದೆ.

ಇಂತಹ ಘಟನೆ ಇದೇ ಮೊದಲೇನಲ್ಲ. ಅಕ್ರಮ ಮರಳು ಸಾಗಾಟವನ್ನು ಪ್ರಶ್ನಿಸಿದ ಅನೇಕರ ಮೇಲೆ ದಂಧೆಕೋರರು ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ ಮಾಡುವುದು, ಜೀವ ಬೆದರಿಕೆ ಹಾಕುವುದು ಆಗಾಗ ನಡೆಯುತ್ತದೆ. ಈ ಹಿಂದೆ ಮಾನ್ವಿ ತಾಲೂಕಿನಲ್ಲಿ ಅಕ್ರಮ ಮರಳು ಸಾಗಣೆ ತಡೆಯಲು ಹೋದ ಪೊಲೀಸ್ ಪೇದೆಯ ಮೇಲೆ ಟಿಪ್ಪರ್ ಹರಿಸಿ ಕೊಲೆ ಮಾಡಿದ ಘಟನೆಯೂ ಜರುಗಿದೆ.

ಕಳೆದ ವರ್ಷ ರೂ. 4.25 ಕೋಟಿ ಅಕ್ರಮ ಮರಳು ವಶ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಕ್ರಮ ಮರಳು ತಡೆಗಟ್ಟಲು ಕಾರ್ಯಪ್ರವೃತ್ತವಾಗಿದ್ದು 2025ರ ಜನವರಿಯಿಂದ ನವೆಂಬರ್ ವರೆಗೆ 4.25 ಕೋಟಿಗೂ ಹೆಚ್ಚು ಅಕ್ರಮ ಮರಳನ್ನು ಜಪ್ತಿ ಮಾಡಿದೆ. ಜನಸಾಮಾನ್ಯರು ಮನೆ ಕಟ್ಟಲು ಸುಲಭವಾಗಿ ಒಂದು ಟ್ರ್ಯಾಕ್ಟರ್ ಮರಳು ಸಿಗುವುದಿಲ್ಲ. ಹೆಚ್ಚಿನ ಹಣ ವಸೂಲಿಗಾಗಿ, ಅಕ್ರಮ ಮರಳು ದಂಧೆಕೋರರೇ ಕೃತಕ ಅಭಾವ ಸೃಷ್ಟಿಸುತ್ತಾರೆ.

ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳ ವ್ಯಾಪ್ತಿಯಲ್ಲಿ ಮರಳು ನಿರಂತರವಾಗಿ ಸಾಗಿಸುತ್ತಿದ್ದರೂ ಸಾಮಾನ್ಯ ಜನರು ಪ್ರಶ್ನೆ ಮಾಡುವಂಥ ಪರಿಸ್ಥಿತಿವಂತಹ ವಾತಾವರಣವಿಲ್ಲದಂತಾಗಿದೆ. ಅಕ್ರಮ ಮರಳು ತಡೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಕೆಲ ಇಲಾಖೆಗಳನ್ನೊಳಗೊಂಡ ಸಮಿತಿಯನ್ನು ಜಿಲ್ಲಾ ಮಟ್ಟದ ರಚನೆ ಮಾಡಿದರೂ ಸಮನ್ವಯತೆಯಿಂದ ಕೆಲಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ನದಿ ತೀರದಿಂದ ಮರಳು ಸಾಗಾಣಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರವಾನಗಿ ಒಬ್ಬರದ್ದು ಇದ್ದರೆ ಸಾಗಾಣಿಕೆ ಪ್ರಮಾಣ ಬೇರೆಯೊಂದು. ಕೆಲ ಜನಪ್ರತಿನಿಧಿಗಳ ಬೆಂಬಲಿಗರೇ ಮರಳು ಸಾಗಿಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಜಾಣ ಕುರುಡು ಅನುಸರಿಸುತ್ತಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ.

ದೇವದುರ್ಗ ತಾಲೂಕಿನಲ್ಲಿ ಅಕ್ರಮ ಮರಳು ಸಾಗಣೆ ಹೆಚ್ಚಾಗಿದೆ. ಅಕ್ರಮ ಮರಳು ಸಾಗಣೆ ತಡೆಗೆ ಮುಂದಾಗಿರುವ ಶಾಸಕಿ ಕರೆಮ್ಮಾ ಅವರ ಮನೆಗೆ ತೆರಳಿ ಕೆಲ ಟಿಪ್ಪರ್ ಮಾಲಕರು ಧಮ್ಕಿ ಹಾಕಿದ್ದು ಖಂಡನೀಯ. ಆರೋಪಿಗಳ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು.

-ಜಿ.ಬಸವರಾಜ, ಪ್ರಗತಿಪರ ಹೋರಾಟಗಾರ, ದೇವದುರ್ಗ

ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ತಡೆಗಟ್ಟಲು ಪೊಲೀಸ್ ಇಲಾಖೆ ಸನ್ನದ್ದವಾಗಿದ್ದು, 2026ರ ಜ.1ರಿಂದ 19 ವರೆಗೆ 37 ಪ್ರಕರಣ ದಾಖಲಾಗಿದೆ. ಈ ಪೈಕಿ ದೇವದುರ್ಗ ತಾಲೂಕಿನದ್ದು 21 ಪ್ರಕರಣಗಳು. ಇಲಾಖೆಯಿಂದ ಅಕ್ರಮ ತಡೆಯಲು ಎಲ್ಲಾ ಪ್ರಯತ್ನ ಮಾಡುತ್ತಿದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಸೇರಿ ಇತರೆ ಇಲಾಖೆಗಳು ಸಹಕಾರ ನೀಡಬೇಕು.

-ಅರುಣಾಂಗ್ಷು ಗಿರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು

contributor

Similar News