×
Ad

ಇಳಿವಯಸ್ಸಿನಲ್ಲೂ ಸಾವಯವ ಕೃಷಿ ನೆಚ್ಚಿಕೊಂಡ ದೇವಣ್ಣ

Update: 2025-12-01 15:10 IST

ಚಾಮರಾಜನಗರ: ವಯಸ್ಸಾಗುತ್ತಿದ್ದಂತೆ ಜೀವನದಲ್ಲಿ ವಿಶ್ರಾಂತಿ ಪಡೆಯುವವರೇ ಅಧಿಕ. ಇಳಿ ವಯಸ್ಸಿನಲ್ಲಿ ಕೃಷಿಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯೂ ವಿರಳವಾಗಿದೆ. ಆದರೆ ಚಾಮರಾಜನಗರ ತಾಲೂಕಿನಲ್ಲಿ ಇಳಿ ವಯಸ್ಸಿನಲ್ಲೂ ರೈತರೊಬ್ಬರು ನೈಸರ್ಗಿಕ ಕೃಷಿ ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ.

ಚಾಮರಾಜನಗರದ ಪಟ್ಟಣದ ಉಪ್ಪಾರ ಬಡಾವಣೆಯ ನಿವಾಸಿ ಎ.ನಂಜುಂಡಶೆಟ್ಟಿ(ದೇವಣ್ಣ)ರವರು ತಾಲೂಕಿನ ಕಾಡಹಳ್ಳಿ ಗ್ರಾಮದಲ್ಲಿ 6 ಎಕರೆ ಪ್ರದೇಶದಲ್ಲಿ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಭೂಮಿಯನ್ನು ಗುತ್ತಿಗೆ ನೀಡಿ ರಾಸಾಯನಿಕ ಬಳಕೆ ಮಾಡಿದ್ದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿತ್ತು. 3 ವರ್ಷಗಳಿಂದ ದೇವಣ್ಣ ಅವರೇ ಕೃಷಿಗಿಳಿದು ಭವಿಷ್ಯಕ್ಕಾಗಿ ಭೂಮಿ ಉಳಿಸಲು ರಾಸಾಯನಿಕ ಮುಕ್ತ ಕೃಷಿ ಆರಂಭಿಸಿದರು. ದೇವಣ್ಣ 63 ವರ್ಷ ವಯಸ್ಸಿನಲ್ಲೂ ಯುವಕರಿಗೆ ಸರಿಸಮಾನವಾಗಿ ಕೃಷಿ ಮಾಡುತ್ತಿದ್ದಾರೆ.

ಚಾಮರಾಜನಗರ ನಿವಾಸಿ ರೈತ ನಂಜುಂಡಶೆಟ್ಟಿ(ದೇವಣ್ಣ) ಅವರ ತೋಟದಲ್ಲಿ ಬಿಳಿ ಬದನೆ, 1,400 ಬಾಳೆ(200 ಪಚ್ಚಬಾಳೆ), 1,500 ಅಡಿಕೆ, 100 ತೆಂಗು, 4 ಸಪೋಟ(ವಿವಿಧ ಬಗೆ), 4 ಸೀಬೆ, 10 ಪರಂಗಿ(ವಿವಿಧ ತಳಿ), 50 ತೇಗ, 5 ಬೇವು, 5 ಹೆಬ್ಬೇವು ಬೆಳೆದಿದ್ದಾರೆ. ಈ ಹಿಂದೆ ಟೊಮೆಟೊ, ಮೆಣಸಿನಕಾಯಿ, ಬೂದುಗುಂಬಳ ಹಾಕಿದ್ದಾರೆ. ಇದರ ಜೊತೆಗೆ 10 ಕುರಿಗಳನ್ನೂ ಸಾಕಿದ್ದಾರೆ. ನಾಟಿ ತಳಿಯ ಎರಡು ಹಸುಗಳನ್ನು ಸಾಕಿದ್ದು, ಇದರ ಹಾಲು, ಬೆಣ್ಣೆ, ತುಪ್ಪ, ಮಜ್ಜಿಗೆಯನ್ನೂ ಮಾರಾಟ ಮಾಡುತ್ತಿದ್ದಾರೆ.

ನಂಜುಂಡಶೆಟ್ಟಿ ಅವರ ತೋಟದಲ್ಲಿ ಚೆಂಡುಹೂಗಳನ್ನು ಬೆಳೆಯಲಾಗಿದೆ. ಹೂ ಗಿಡಗಳ ಬದುವಿನಲ್ಲಿ ಟೊಮೆಟೊ ಹಾಕಿದ್ದಾರೆ. ದೀಪಾವಳಿ ಹಬ್ಬ ಹತ್ತಿರವಿದ್ದು, ಹೂವಿಗೆ ಉತ್ತಮ ಬೆಲೆ ಬರುವುದರಿಂದ ರೈತ ದೇವಣ್ಣ ಅವರಿಗೆ ಚೆಂಡು ಹೂ ಲಾಭ ತಂದುಕೊಡಬಹುದೆಂಬ ನಿರೀಕ್ಷೆ ಇದೆ. ಇದು ಕೇವಲ ಒಂದೇ ಬೆಳೆಗೆ ಸೀಮಿತವಾಗದೆ ಬೇರೆ ಬೇರೆ ಬೆಳೆಗಳನ್ನೂ ಬೆಳೆದರೆ ಸಕಾಲದ ಅಗತ್ಯ ವಸ್ತುವಿನ ಬೆಲೆ ಏರಿಕೆಯ ನೀತಿಗೆ ತಕ್ಕಂತೆ ಲಾಭ ಗಳಿಸಲು ಸಾಧ್ಯ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ.

ಸಾವಯವ ದ್ರಾವಣ ತಯಾರಿಕೆ: ರೈತ ನಂಜುಂಡಶೆಟ್ಟಿ (ದೇವಣ್ಣ) ಅವರು ಸಾವಯವ ದ್ರವ್ಯ ತಯಾರಿಸಿ ಬೆಳೆಗಳಿಗೆ ನೀಡುತ್ತಿದ್ದಾರೆ. ಈ ಸಾಂಪ್ರದಾಯಿಕ ವಿಧಾನವು ಹಿಂದಿನ ನಾಟಿ ಮತ್ತು ನೈಸರ್ಗಿಕ ವಿಧಾನಗಳನ್ನು ನೆನಪು ಮಾಡುತ್ತಿವೆ. ಬದನೆ, ಬಾಳೆ, ಅಡಿಕೆ ಮತ್ತು ಇತರ ಬೆಳೆಗಳಿಗೆ ರೋಗ ಬಾರದಿರಲು 15 ಲೀಟರ್ ನೀರಿಗೆ 1.5 ಗ್ರಾಂ ಇಂಗು ಬೆರೆಸಿ ಸಿಂಪಡಣೆ ಮಾಡುತ್ತಾರೆ. ಅಲ್ಲದೇ, 200 ಲೀಟರ್ ನೀರಿಗೆ 200 ಗ್ರಾಂ ನೆಲ್ಲಿಕಾಯಿ ಪುಡಿ, ನಾಟಿ ಹಸುವಿನ ಮಜ್ಜಿಗೆ ಬೆರೆಸಿ ಮೂರು ದಿನಗಳ ಬಳಿಕ ಕಲಸಿ ಬೆಳೆಗಳಿಗೆ ನೀಡುತ್ತಿದ್ದಾರೆ. ಈ ವಿಧಾನದಿಂದ ಬೆಳೆಗಳಿಗೆ ಅಂಟಿರುವ ರೋಗಬಾಧೆಯನ್ನು ತಡೆಯಲು ಸಾಧ್ಯ. ರಾಸಾಯನಿಕ ಔಷಧಿಗಳನ್ನು ಬಳಕೆ ಮಾಡುವ ಅಗತ್ಯವೂ ಬರುವುದಿಲ್ಲ ಎಂದು ರೈತ ದೇವಣ್ಣ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಇದರೊಂದಿಗೆ ಬೆಳೆಗಳ ಬೆಳವಣಿಗೆಗಾಗಿಯೂ ಈ ರೀತಿಯ ವಿಧಾನವನ್ನೇ ಅನುಸರಿಸುತ್ತಿದ್ದಾರೆ. ಸೆಗಣಿ, ಗಂಜಲ ಕಡಲೆಕಾಯಿ ಹಿಂಡಿ ಹಾಕಿ 6 ದಿನಗಳ ಬಳಿಕ ಬೆಳೆಗಳಿಗೆ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾ.ಅಶ್ವಥ್ ಕುಮಾರ್

contributor

Similar News