ಬಿಸಿಸಿಐ, ಐಪಿಎಲ್‌ಗೆ ಕೋಟಿಗಟ್ಟಲೆ ರೂ. ತೆರಿಗೆ ವಿನಾಯಿತಿ ಬೇಕಿತ್ತೇ?
ಐಪಿಎಲ್ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಲೀಗ್. ಅದರ ಈಗಿನ ಅಂದಾಜು ಮೌಲ್ಯ ಹನ್ನೆರಡರಿಂದ ಹದಿನಾರು ಬಿಲಿಯನ್ ಡಾಲರ್. ಅಂದರೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು.
ಸುಮ್ಮನೆ ಅಂದಾಜು ಮಾಡಿ ನೋಡಿ ಇದೆಷ್ಟು ದೊಡ್ಡ ಮೊತ್ತ ಅಂತ ?
ಇನ್ನು ಆರ್ಥಿಕ ವರ್ಷ 2024ರಲ್ಲಿ ಐಪಿಎಲ್‌ನ ಫ್ರಾಂಚೈಸಿಗಳ ಆದಾಯ ಡಬಲ್ ಆಗಿ 6,797 ಕೋಟಿ ರೂಪಾಯಿಯಾಗಿದೆ.
ಇಷ್ಟೆಲ್ಲಾ ವಹಿವಾಟು ಮಾಡುವ, ಅದರಿಂದ ದೊಡ್ಡ ಲಾಭ ಪಡೆಯುವ ಐಪಿಎಲ್ ಆಗಲಿ, ಬಿಸಿಸಿಐಯಾಗಲಿ ತೆರಿಗೆ ಪಾವತಿಸುವುದಿಲ್ಲ.
ಒಂದು ಕಡೆ ತೆರಿಗೆ ವಿನಾಯಿತಿ ಸಿಗುತ್ತಿದ್ದರೆ, ಯಾವ ಕಾರಣಕ್ಕಾಗಿ ವಿನಾಯಿತಿ ಸಿಗುತ್ತಿದೆಯೋ ಅದನ್ನೇ ಐಪಿಎಲ್ ನಾಶ ಮಾಡುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ.
ಕ್ರೀಡೆಯನ್ನು ಉತ್ತೇಜಿಸುವುದಕ್ಕಾಗಿ ಐಪಿಎಲ್‌ಗೆ ತೆರಿಗೆ ವಿನಾಯಿತಿ ಸಿಗುತ್ತಿದೆ. ಆದರೆ ಇದೇ ಐಪಿಎಲ್ ಕ್ರಿಕೆಟ್ ಆಟವನ್ನು ಅದರಲ್ಲೂ ವಿಶೇಷವಾಗಿ ಟೆಸ್ಟ್ ಕ್ರಿಕೆಟನ್ನು ನಾಶ ಮಾಡಿಬಿಟ್ಟಿದೆ ಎಂಬ ಆಕ್ರೋಶ ಕ್ರಿಕೆಟಿಗರಲ್ಲೇ ಇದೆ.
ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಾಧ್ಯಾಪಕ ಮಾಯಾಂಕ್ ಶ್ರೀವಾಸ್ತವ್ ಅವರು ಸಾರ್ವಜನಿಕವಾಗಿ ಐಪಿಎಲ್‌ನ ಹಣಕಾಸಿನ ವ್ಯವಹಾರಗಳ ಕುರಿತು ಒಂದು ಗಂಭೀರವಾದ ಪ್ರಶ್ನೆಯನ್ನು ಈ ಹಿಂದೆ ಎತ್ತಿದ್ದರು.
ಅವರ ಪ್ರಕಾರ, ಐಪಿಎಲ್‌ನಿಂದ ಪ್ರತೀ ವರ್ಷ ಹರಿದು ಬರುವ ಸಾವಿರಾರು ಕೋಟಿ ರೂಪಾಯಿಗಳ ಲಾಭಕ್ಕೆ ಸರಕಾರ ತೆರಿಗೆ ವಿಧಿಸಬೇಕು. ಈ ತೆರಿಗೆಯಿಂದ ಸಂಗ್ರಹವಾಗುವ ಬೃಹತ್ ಮೊತ್ತವನ್ನು ನಮ್ಮ ರಾಷ್ಟ್ರದ ವೈಜ್ಞಾನಿಕ ಸಂಶೋಧನೆ ಮತ್ತು ತಾಂತ್ರಿಕ ಅಭಿವೃದ್ಧಿಗೆ ವಿನಿಯೋಗಿಸುವುದರಿಂದ ದೇಶದ ಭವಿಷ್ಯಕ್ಕೆ ಹೊಸ ದಿಕ್ಸೂಚಿ ದೊರೆಯುತ್ತದೆ ಎಂದು ಅವರು ವಾದಿಸಿದ್ದರು.
ಶ್ರೀವಾಸ್ತವ್ ಅವರು ಅಂಕಿಅಂಶಗಳೊಂದಿಗೆ ತಮ್ಮ ವಾದವನ್ನು ಸಮರ್ಥಿಸುತ್ತಾರೆ.
2023ರಲ್ಲಿ ಐಪಿಎಲ್ ಅಂದಾಜು 5,120 ಕೋಟಿ ರೂಪಾಯಿಗಳ ದಾಖಲೆಯ ಲಾಭವನ್ನು ಗಳಿಸಿದೆ. ಇದರ ಒಟ್ಟು ವಾರ್ಷಿಕ ಆದಾಯವು 11,770 ಕೋಟಿ ರೂಪಾಯಿಗಳನ್ನು ಮುಟ್ಟಿದೆ. ಆದರೂ, ಬಿಸಿಸಿಐ ಈ ಅಗಾಧ ಪ್ರಮಾಣದ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಬಿಸಿಸಿಐ ಅನ್ನು ಭಾರತದ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಚಾರಿಟೇಬಲ್ ಸಂಸ್ಥೆ ಎಂದು ಪರಿಗಣಿಸಲಾಗಿರುವುದು.
ಆದರೆ, ಇದೇ ಸಂದರ್ಭದಲ್ಲಿ, ನಮ್ಮ ದೇಶದ ಸಂಶೋಧನಾ ಸಂಸ್ಥೆಗಳು ತಮ್ಮ ಪ್ರಯೋಗಾಲಯಗಳಿಗೆ ಅಗತ್ಯವಿರುವ ಅತ್ಯಾಧುನಿಕ ಉಪಕರಣಗಳಿಂದ ಹಿಡಿದು, ಸಂಶೋಧನೆಗೆ ಬಳಸುವ ತಂತ್ರಾಂಶಗಳ ಪರವಾನಿಗೆಗಳವರೆಗೆ ಎಲ್ಲದಕ್ಕೂ ತೆರಿಗೆಯನ್ನು ಪಾವತಿಸಬೇಕಾಗಿದೆ.
ಈ ವಿಚಿತ್ರ ಪರಿಸ್ಥಿತಿಯನ್ನು ಪ್ರಶ್ನಿಸುವ ಶ್ರೀವಾಸ್ತವ್ ಅವರು, ‘‘ಇಲ್ಲಿ ಮನರಂಜನೆಗೆ ಸರಕಾರದಿಂದ ಸಬ್ಸಿಡಿ ಸಿಗುತ್ತಿದೆ. ಆದರೆ ಸಂಶೋಧನೆಗೆ ಮಾತ್ರ ತೆರಿಗೆ ವಿಧಿಸಲಾಗುತ್ತಿದೆ’’ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಚಾರಿಟೇಬಲ್ ಸಂಸ್ಥೆ ಅಂದರೆ ಸೇವಾ ಸಂಸ್ಥೆ. ಬಿಸಿಸಿಐ ಯಾವ ಕೋನದಲ್ಲಾದರೂ ಸೇವಾ ಸಂಸ್ಥೆಯ ಹಾಗೆ ಕಾಣಿಸುತ್ತದೆಯೇ?
ಇತ್ತೀಚಿನ ಐಪಿಎಲ್‌ನ ವಾರ್ಷಿಕ ಆದಾಯವು 12,000 ಕೋಟಿಯಿಂದ 13,500 ಕೋಟಿ ರೂಪಾಯಿಗಳನ್ನು ದಾಟಿದೆ. ಇದು ಕೇವಲ ಬಿಸಿಸಿಐಗೆ ಬರುವ ಆದಾಯ ಮಾತ್ರ. ಐಪಿಎಲ್‌ನಲ್ಲಿ ಭಾಗವಹಿಸುವ ಫ್ರಾಂಚೈಸಿಗಳು ಗಳಿಸುವ ಲಾಭ ಬೇರೆಯೇ ಇದೆ.
ಗಮನಿಸಬೇಕಾದ ಅಂಶವೆಂದರೆ, ಬಿಸಿಸಿಐ ಮಾತ್ರವಲ್ಲದೆ, ಅನೇಕ ಬಿಲಿಯನೇರ್‌ಗಳ ಒಡೆತನದಲ್ಲಿರುವ ಐಪಿಎಲ್ ಫ್ರಾಂಚೈಸಿಗಳು ಸಹ ಬಂಡವಾಳ ಲಾಭದ ಮೇಲೆ ತೆರಿಗೆ ವಿನಾಯಿತಿಯನ್ನು ಅನುಭವಿಸುತ್ತಿದ್ದಾರೆ. ಅವರೂ ಸರಕಾರಕ್ಕೆ ಒಂದೇ ಒಂದು ರೂಪಾಯಿ ತೆರಿಗೆ ಕಟ್ಟುತ್ತಿಲ್ಲ.
ಆಟಗಾರರ ವೈಯಕ್ತಿಕ ಸಂಬಳಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತದೆಯೇ ಹೊರತು, ಫ್ರಾಂಚೈಸಿಗಳ ಬೃಹತ್ ಲಾಭ ಮತ್ತು ಬಿಸಿಸಿಐನ ಕೋಟ್ಯಂತರ ರೂಪಾಯಿಗಳ ಆದಾಯವು ಬಹುತೇಕ ಕಾರ್ಪೊರೇಟ್ ತೆರಿಗೆಯಿಂದ ವಿನಾಯಿತಿ ಪಡೆದಿದೆ.
ಒಂದು ವೇಳೆ ಐಪಿಎಲ್‌ನ ಲಾಭದ ಮೇಲೆ ಕೇವಲ ಶೇ. 40ರಷ್ಟು ತೆರಿಗೆಯನ್ನು ವಿಧಿಸಿದರೂ, ವಾರ್ಷಿಕವಾಗಿ ಅಂದಾಜು 6,000 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಸರಕಾರ ಸಂಗ್ರಹಿಸಬಹುದು ಎಂದು ಅಂದಾಜಿಸಲಾಗಿದೆ.
ಈ ಬೃಹತ್ ಮೊತ್ತವನ್ನು ನಮ್ಮ ದೇಶದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸುವುದರಿಂದ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಎಷ್ಟೆಲ್ಲಾ ಸಾಧಿಸಬಹುದು?
ಪ್ರಾಧ್ಯಾಪಕ ಶ್ರೀವಾಸ್ತವ್ ಅವರ ಲೆಕ್ಕಾಚಾರದ ಪ್ರಕಾರ, ಕೇವಲ ಮೂರು ವರ್ಷ ಶೇ. 40ರಷ್ಟು ತೆರಿಗೆಯನ್ನು ವಿಧಿಸಿದರೆ ಸುಮಾರು 15,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಬಹುದು. ಈ ಹಣದಿಂದ ನಾವು ಹತ್ತು ಹೊಸ ಐಐಟಿಗಳನ್ನು ಸ್ಥಾಪಿಸಬಹುದು ಅಥವಾ ಹೊಸ ತಂತ್ರಜ್ಞಾನ ಆವಿಷ್ಕಾರಗಳಿಗಾಗಿ ಒಂದು ರಾಷ್ಟ್ರೀಯ ನಿಧಿಯನ್ನು ರಚಿಸಬಹುದು.
ಫ್ರಾಂಚೈಸಿಗಳು ಗಳಿಸುವ ಲಾಭವನ್ನು ಸಹ ಸೇರಿಸಿದರೆ, ಪ್ರತೀ ವರ್ಷ ಹೆಚ್ಚುವರಿಯಾಗಿ 300ರಿಂದ 480 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಬಹುದು.
ಒಟ್ಟಾರೆಯಾಗಿ ನೋಡಿದರೆ, ಕೇವಲ ಐಪಿಎಲ್‌ನಿಂದ ಪ್ರತೀ ವರ್ಷ ಸುಮಾರು 6,000 ಕೋಟಿ ರೂಪಾಯಿ ತೆರಿಗೆ ಪಡೆದು ಅದನ್ನು ಸಂಶೋಧನೆಗೆ ಬಳಸಬಹುದು. ಆದರೆ, ಬಿಸಿಸಿಐ ಮಾತ್ರ ಒಂದು ರೂಪಾಯಿ ಆದಾಯ ತೆರಿಗೆಯನ್ನೂ ಪಾವತಿಸುವುದಿಲ್ಲ. ಏಕೆಂದರೆ ಭಾರತೀಯ ಕ್ರಿಕೆಟ್ ಅನ್ನು ಉತ್ತೇಜಿಸುವುದು ಅವರ ಮುಖ್ಯ ಗುರಿ ಎಂದು ಅವರು ವಾದಿಸುತ್ತಾರೆ.
ಇಲ್ಲಿ ನಾವು ಒಂದು ಗಂಭೀರವಾದ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ:
ಐಪಿಎಲ್ ನಿಜವಾಗಿಯೂ ಭಾರತದಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸುತ್ತಿದೆಯೇ ಅಥವಾ ಅದು ಕೇವಲ ಒಂದು ಲಾಭದಾಯಕ ಮನರಂಜನಾ ಉದ್ಯಮವಾಗಿ ಮಾರ್ಪಟ್ಟಿದೆಯೇ?
ಅದರಲ್ಲೂ ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ನಂತಹ ನಿಜವಾದ ಶೈಲಿಯ ಆಟದ ಮೇಲೆ ಇದರ ಪರಿಣಾಮವೇನು?
ಐಪಿಎಲ್ ಪ್ರಾರಂಭವಾದ ನಂತರ ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆ ಮತ್ತು ಮಹತ್ವ ಗಣನೀಯವಾಗಿ ಕಡಿಮೆಯಾಗಿದೆ. ಈಗಿನ ಪೀಳಿಗೆಯ ಕ್ರಿಕೆಟ್ ಆಟಗಾರರಿಗೆ ಟೆಸ್ಟ್ ಕ್ರಿಕೆಟ್‌ಗಿಂತ ಟಿ20 ಸ್ವರೂಪವೇ ಹೆಚ್ಚು ಆಕರ್ಷಕವಾಗಿದೆ. ಇದಕ್ಕೆ ಸ್ಪಷ್ಟವಾದ ಕಾರಣಗಳಿವೆ.
ಟಿ20 ಕ್ರಿಕೆಟ್‌ನಲ್ಲಿ ಆಟಗಾರರಿಗೆ ಹೆಚ್ಚು ಹಣ ದೊರೆಯುತ್ತದೆ ಮತ್ತು ಪಂದ್ಯಗಳು ಕಡಿಮೆ ಅವಧಿಯಲ್ಲಿ ಮುಗಿಯುತ್ತವೆ. ದೈಹಿಕ ಮತ್ತು ಮಾನಸಿಕ ಶ್ರಮದ ವಿಷಯಕ್ಕೆ ಬಂದರೆ, ಟೆಸ್ಟ್ ಕ್ರಿಕೆಟ್‌ಗೆ ಹೋಲಿಸಿದರೆ ಟಿ20 ಬಹಳಷ್ಟು ಸುಲಭ. ಹೆಚ್ಚು ಹಣ ಮತ್ತು ಕಡಿಮೆ ಕಷ್ಟ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಅದಕ್ಕಾಗಿಯೇ ಪ್ರಸ್ತುತ ಆಟಗಾರರು ಟಿ20 ಕ್ರಿಕೆಟ್‌ನತ್ತ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಿದ್ದಾರೆ.
ಆಟಗಾರರು ಮಾತ್ರವಲ್ಲ, ಕ್ರಿಕೆಟ್ ವೀಕ್ಷಕರಿಗೂ ಸಹ ಈಗ ಟಿ20 ಸ್ವರೂಪವೇ ಅಚ್ಚುಮೆಚ್ಚು. ಟಿ20 ಪಂದ್ಯಗಳಲ್ಲಿ ಚಿಯರ್ ಲೀಡರ್ ಗಳ ಡ್ಯಾನ್ಸ್, ಮ್ಯೂಸಿಕ್ ಮತ್ತು ಇತರ ಮನರಂಜನಾ ಅಂಶಗಳು ಹೇರಳವಾಗಿರುವುದರಿಂದ ಜನರು ಈ ಸ್ವರೂಪವನ್ನು ಹೆಚ್ಚು ಆನಂದಿಸುತ್ತಾರೆ.
ಕೊನೆಗೆ ವಿಶ್ಲೇಷಣೆ ಮಾಡುವವರೂ ಮನರಂಜನೆ ಒದಗಿಸುವವರ ಹಾಗೇ ವರ್ತಿಸುತ್ತಾರೆ.
ಟೆಸ್ಟ್ ಕ್ರಿಕೆಟ್‌ಗೆ ಮತ್ತು ಒಟ್ಟಾರೆ ಇಡೀ ಕ್ರಿಕೆಟ್‌ಗೆ ಐಪಿಎಲ್ ನಂತಹ ಕೂಟಗಳಿಂದ ಅದೆಷ್ಟು ನಷ್ಟವಾಗುತ್ತಿದೆ ಎಂಬುದು ಇನ್ನೊಂದು ಚರ್ಚೆಯ ವಿಚಾರ.
ಆದರೆ ಕೋಟ್ಯಂತರ ರೂಪಾಯಿ ಲಾಭ ಬಾಚಿಕೊಳ್ಳುವ ಐಪಿಎಲ್, ಬಿಸಿಸಿಐ ಸರಕಾರಕ್ಕೆ ವಂಚಿಸುತ್ತಿರುವ ತೆರಿಗೆಯ ಬಗ್ಗೆ ಮೊದಲು ಚರ್ಚೆಯಾಗಬೇಕಿದೆ.
ಐಪಿಎಲ್‌ನಂತಹ ಒಂದು ಬೃಹತ್ ಮನರಂಜನಾ ಉದ್ಯಮವು ಯಾವುದೇ ತೆರಿಗೆಯನ್ನು ಪಾವತಿಸದೆ ಇರುವುದು ನ್ಯಾಯೋಚಿತವೇ ಎಂಬುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಬಿಸಿಸಿಐ ಕ್ರಿಕೆಟ್ ಅನ್ನು ಉತ್ತೇಜಿಸುವ ನೆಪದಲ್ಲಿ ಕೋಟಿ ಕೋಟಿ ರೂಪಾಯಿಗಳ ಲಾಭವನ್ನು ತೆರಿಗೆ ವಿನಾಯಿತಿ ಪಡೆದುಕೊಳ್ಳುತ್ತಿದೆ.
ಕೋಟ್ಯಂತರ ಜನರು ಇವತ್ತಿಗೂ ಹಸಿವಿನಿಂದ ಮಲಗುವ, ತಲೆ ಮೇಲೆ ಸೂರಿಲ್ಲದ, ಸರಿಯಾದ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗದ, ಉತ್ತಮ ಶಿಕ್ಷಣ ಪಡೆಯಲು ಹರಸಾಹಸ ಪಡುತ್ತಿರುವ ನಮ್ಮ ದೇಶದಲ್ಲಿ ಬಿಸಿಸಿಐ ಹಾಗೂ ಐಪಿಎಲ್‌ಗೆ ಹೀಗೆ ಕೋಟಿಗಟ್ಟಲೆ ರೂಪಾಯಿ ವಿನಾಯಿತಿ ಕೊಡಬೇಕೇ?