ದೈಹಿಕ ಶಿಕ್ಷಣ ಶಾಲೆಯಿಂದ ಮಾಯವಾಗುತ್ತಿದೆಯೇ?
ರಾಜ್ಯ ಸರಕಾರ 2026-27ರಿಂದ ಮೌಲ್ಯಶಿಕ್ಷಣ ಎನ್ನುವ ಹೊಸ ವಿಷಯವನ್ನು ಶಾಲಾ ಪಠ್ಯದಲ್ಲಿ ಸೇರಿಸಲಿದೆ. ಆದರೆ, ದೈಹಿಕ ಶಿಕ್ಷಣವೇ ಕಾಣೆಯಾಗಿದ್ದು, ದೈಹಿಕ ಶಿಕ್ಷಣ ಏನಾಯಿತು? ಇನ್ನು ಮುಂದೆ ನಮ್ಮ ಪದನಾಮವೇನು ಆಗಲಿದೆ? ವೃಂದ ನೇಮಕಾತಿ ಬದಲಾಗುತ್ತದೆಯೇ? ಹೀಗೆ ಬದಲಾದರೆ ಮುಂದೆ ತರಬೇತಿ ಕಾಲೇಜಿನಲ್ಲಿಯೂ ಅದರ ಹೆಸರು ಬದಲಾಗುತ್ತದೆಯೇ? ಎಂದು ದೈಹಿಕ ಶಿಕ್ಷಣ ಶಿಕ್ಷಕರು ಚಿಂತಿತರಾಗಿದ್ದಾರೆ. ಈ ಸಂಬಂಧ ಸರಕಾರದಿಂದಾಗಲಿ ಇಲಾಖೆಯಿಂದಾಗಲಿ ಇನ್ನೂ ಸ್ಪಷ್ಟಮಾಹಿತಿ ಸಿಕ್ಕಿಲ್ಲ. ಒಂದು ಮೂಲದ ಪ್ರಕಾರ ದೈಹಿಕ ಶಿಕ್ಷಣದ ಹೆಸರನ್ನೇ ‘ಮೌಲ್ಯ ಶಿಕ್ಷಣ’ ಎಂದು ಬದಲಾಯಿಸಲಾಗಿದೆ. ಹಾಗಾದರೆ ಇದನ್ನು ಸರಕಾರಿ ಶಾಲೆಗಳಿಗೆ ಮಾತ್ರ ಸೀಮಿತಗೊಳಿಸಿ ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಕಡಿತಗೊಳಿಸಿರುವುದು ಯಾಕಾಗಿ ಎಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿ 2008ರಿಂದ ಪ್ರೊ.ಎಲ್.ಆರ್.ವೈದ್ಯನಾಥನ್ ವರದಿಯಂತೆ 6ರಿಂದ 10ನೇ ತರಗತಿವರೆಗೆ ಸರಕಾರಿ, ಅನುದಾನಿತ, ಅನುದಾನರಹಿತ ಶಾಲಾ ಮಕ್ಕಳಿಗೂ ದೈಹಿಕ ಶಿಕ್ಷಣ 7ನೇ ಪಠ್ಯವಾಗಿ ಜಾರಿಗೊಳಿಸಿ ಮೌಲ್ಯ ಮಾಪನ ನಡೆಸಲಾಗುತ್ತಿತ್ತು. ದೈಹಿಕ ಶಿಕ್ಷಣ ಶಿಕ್ಷಕರು ಇತರ ವಿಷಯಗಳ ಶಿಕ್ಷಕರಿಗೆ ಸಮಾನರಾಗಿದ್ದಾರೆ, ಅವರಿಗೆ ಆಡಳಿತಾತ್ಮಕವಾಗಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆಯನ್ನು ನೀಡುವುದರಿಂದ ದೈಹಿಕ ಶಿಕ್ಷಣದ ವಿಷಯದಲ್ಲಿಯೂ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು ಕೆಲಸ ಮಾಡಲು ಮತ್ತು ಮಕ್ಕಳನ್ನು ಶಿಸ್ತಾಗಿ ಚಟುವಟಿಕೆಯಲ್ಲಿ ತೊಡಗಿಸಲು ಸಾಧ್ಯ, ಹೀಗಾಗಿ ಅವರ ವೃಂದ ನೇಮಕಾತಿ ನಿಯಮ ಬದಲಿಸಲು ಒತ್ತಾಯವೂ ಕೇಳಿಬಂದಿತು. ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಖ್ಯಶಿಕ್ಷಕರ ಹುದ್ದೆ ನೀಡುವುದರ ಬಗ್ಗೆ ಸಹಶಿಕ್ಷಕರ ವಿರೋಧವಿದೆ. ದೈಹಿಕ ಶಿಕ್ಷಣದ ಬದಲಿಗೆ ಬೇರೆ ಹೆಸರು ಬಂದರೂ ಸಮಸ್ಯೆ ಆಗಲ್ಲ, ದೈಹಿಕ ಶಿಕ್ಷಣವನ್ನು ಹಿಂದಿನಿಂದ ಹೇಗೆ ನೋಡುತ್ತಿದ್ದೇವೆಯೇ ಹಾಗೆಯೇ ನೋಡುವ ಜನರಿಗೆ ಬದಲಾದ ವಿದ್ಯಮಾನಗಳಿಗೆ ಒಪ್ಪಿಸುವುದು ಕಷ್ಟ ಎಂಬುದು ಕೆಲವು ಅಧಿಕಾರಿಗಳ ವಿಶ್ಲೇಷಣೆ ಆಗಿತ್ತು. ಈ ವಿಷಯವಾಗಿ ಪರ-ವಿರೋಧಗಳ ನಡುವೆ ಡಾ. ವಿಶಾಲ್‌ರವರು 2022ರಲ್ಲಿ ದೈಹಿಕ ಶಿಕ್ಷಣವನ್ನು ಪಾತಾಳಕ್ಕೆ ಇಳಿಸಿಹೋದರು. ಇದರಿಂದ ತೇಜೋವಧೆಗೆ ಒಳಗಾದ ದೈಹಿಕ ಶಿಕ್ಷಣ ಶಿಕ್ಷಕರು ಹತಾಶರಾದರು. ಮಕ್ಕಳ ಹಿಡಿತ ಕೈ ತಪ್ಪಿ ಶಾಲೆಗಳಲ್ಲಿ ಅಶಿಸ್ತು ತಾಂಡವವಾಡಿತು. ಮೌಲ್ಯ ಶಿಕ್ಷಣದ ಕೂಗು ಕೇಳಿಬಂದಿತು.
ಈಗ ದೈಹಿಕ ಶಿಕ್ಷಣದ ಬಗ್ಗೆ ಹಲವು ಅನುಮಾನ ಕಾಡತೊಡಗಿದೆ. ದೈಹಿಕ ಶಿಕ್ಷಣವನ್ನು ಮೂಲೆಗುಂಪು ಮಾಡಿ ಕೆಲವು ಯೋಗಕೇಂದ್ರದಲ್ಲಿ ಯೋಗ ತರಬೇತಿ ಪಡೆದವರನ್ನು ನೇಮಿಸಲು ತೆರೆ ಮರೆಯಲ್ಲಿ ಕೆಲಸ ನಡೆಯುತ್ತಿದೆಯೇ? ಅಥವಾ ದೈಹಿಕ ಶಿಕ್ಷಣದ ಕತ್ತಿಗೆ ಕತ್ತರಿ ಇಟ್ಟು ಅವರನ್ನು ಮುಖ್ಯಶಿಕ್ಷಕರ ಹುದ್ದೆಯಿಂದ ವಂಚಿಸುವ ತಂತ್ರವೇ ಎಂಬುದು ದೈಹಿಕ ಶಿಕ್ಷಣ ವಲಯದಲ್ಲಿ ಕೇಳಿಬರುತ್ತಿದೆ.
ಒಟ್ಟಿನಲ್ಲಿ ದೈಹಿಕ ಶಿಕ್ಷಣ ಹಾವು ಏಣಿ ಆಟಕ್ಕೆ ಒಳಗಾಗಿ ಈಗ ಅವಸಾನದತ್ತ ಸಾಗಲು ಸಿದ್ಧವಾಗಿದೆ ಎಂಬಂತೆ ತೋರುತ್ತಿದೆ. ದೈಹಿಕ ಶಿಕ್ಷಣಕ್ಕೆ ಸರಕಾರ ನ್ಯಾಯ ಕೊಡಿಸಬೇಕೆಂದಿದ್ದರೆ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೂ ಮೌಲ್ಯಶಿಕ್ಷಣದಲ್ಲಿ ದೈಹಿಕ ಶಿಕ್ಷಣ ಸೇರಿಸಿ ಪಠ್ಯರಚಿಸಬಹುದಾಗಿತ್ತು.
ದೈಹಿಕ ಶಿಕ್ಷಣ ಎಂಬುದು ನೈಸರ್ಗಿಕವಾಗಿ ದೈಹಿಕ ಚಲನಾಶಾಸ್ತ್ರದ ಮೇಲೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳನ್ನು ರಂಜಿಸಿ ಹಾಜರಾತಿ, ಕಲಿಕೆಗೆ ಪೂರಕವಾಗಿ ಶಿಕ್ಷಣದಲ್ಲಿ ಸಂಯೋಜಿಸುವ ಒಂದು ಪಠ್ಯ ವಸ್ತು ಆಗಿದ್ದು ಅದು ಇತರ ಪಠ್ಯಗಳಂತೆ ಪ್ರಧಾನ ವಿಷಯವಾಗಲಿ. ಶಿಕ್ಷಣಕ್ಕೆ ಪೂರಕವಾಗಿರುವ ದೈಹಿಕ ಶಿಕ್ಷಣದ ಕತ್ತು ಹಿಸಕಲು ಸಾಧ್ಯವಿಲ್ಲ. ಅದಕ್ಕೊಂದು ಹೊಸರೂಪವನ್ನು ಸರಕಾರ ನೀಡಲಿ.
(ಲೇಖಕರು: ರಾಜ್ಯ ದೈಹಿಕ ಶಿಕ್ಷಣ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರು)