ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ನಿಜವಾಗಿಯೂ ಸ್ವಂತ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆಯೇ?
ಭಾರತದ ಉಪರಾಷ್ಟ್ರಪತಿ ರಾಜೀನಾಮೆ ನೀಡಿದ್ದಾರೆ. ಮತ್ತದಕ್ಕೆ ಕಾರಣ ಏನೆಂಬುದು ದೇಶಕ್ಕೆ ಗೊತ್ತಾಗಿಲ್ಲ.
ಇದು ಸಣ್ಣ ಘಟನೆಯಲ್ಲ.
ಈ ಹುದ್ದೆಯ ಸಾಂವಿಧಾನಿಕ ಘನತೆಯನ್ನು ಹತ್ತಿಕ್ಕಿದ್ದಾರೆ ಎಂಬ ಆರೋಪ ಅವರ ಮೇಲೆ ಸತತವಾಗಿ ಇತ್ತು. ಅವರ ರಾಜೀನಾಮೆಗೆ ಸಂಬಂಧಿಸಿದಂತೆ ರಾಜಕೀಯದಿಂದ ಘನತೆ ಮತ್ತು ಉದಾರತೆ ನಿರೀಕ್ಷಿಸುವುದು ಆಗದೆನ್ನಿಸುತ್ತದೆ. ಮೋದಿ ಸರಕಾರ ಇದ್ದಕ್ಕಿದ್ದಂತೆ ಸಾಂವಿಧಾನಿಕ ಘನತೆ ಬಗ್ಗೆ ಅರಿತುಕೊಂಡು ಅವರಿಂದ ರಾಜೀನಾಮೆ ಪಡೆಯುತ್ತಿದೆ ಎಂದೇನಲ್ಲ.
ಧನ್ಕರ್ ತಮ್ಮ ಆರೋಗ್ಯದ ಕಾರಣ ನೀಡಿ ದಿಢೀರನೇ ರಾಜೀನಾಮೆ ನೀಡಿದ್ದಾರೆ. ಹಗಲಲ್ಲಿ ರಾಜ್ಯಸಭೆಯ ಕಲಾಪ ನಡೆಸಿದವರು ರಾತ್ರಿ ರಾಜೀನಾಮೆ ಘೋಷಿಸಿಬಿಟ್ಟಿದ್ದಾರೆ. ರಾಜೀನಾಮೆ ಹಿಂಪಡೆಯಲು ಯಾವುದೇ ಒತ್ತಡವಿರಲಿಲ್ಲ ಮತ್ತು ಅದನ್ನು ಅಂಗೀಕರಿಸಲಾಯಿತು.
ರಾಜೀನಾಮೆಗೆ ಒಂದೇ ಒಂದು ಕಾರಣವನ್ನು ನೀಡಲಾಗುತ್ತಿದೆ ಮತ್ತು ಯಾರೂ ಅದನ್ನು ಒಪ್ಪುತ್ತಿಲ್ಲ ಅಥವಾ ಅದು ತೃಪ್ತಿಕರ ಕಾರಣವಾಗಿ ಕಂಡಿಲ್ಲ.ಆರೋಗ್ಯದ ಕಾರಣಕ್ಕೆ ಉಪ ರಾಷ್ಟ್ರಪತಿ ಹುದ್ದೆಗೆ ಯಾರು ರಾಜೀನಾಮೆ ನೀಡುತ್ತಾರೆ?
ಜುಲೈ 10ರಂದು ಜಗದೀಪ್ ಧನ್ಕರ್ ಜೆಎನ್‌ಯುನಲ್ಲಿ ಮಾತನಾಡುತ್ತ, ದೈವಿಕ ಹಸ್ತಕ್ಷೇಪವಿಲ್ಲದಿದ್ದರೆ ಆಗಸ್ಟ್ 2027 ರವರೆಗೆ ತಮ್ಮ ಅವಧಿ ಮುಗಿಯುವವರೆಗೆ ಹುದ್ದೆಯಲ್ಲಿ ಇರುತ್ತೇನೆ ಎಂದು ಹೇಳಿದ್ದರು. ಹಾಗಿರುವಾಗ, ಬೇರೇನೋ ಕಾರಣವಿಲ್ಲದೆ, ಜುಲೈ 21ರಂದು ಅವರು ಆರೋಗ್ಯದ ಕಾರಣ ನೀಡಿ ರಾಜೀನಾಮೆ ನೀಡುತ್ತಾರೆ ಎನ್ನುವುದು ನಂಬಲು ಸಾಧ್ಯವೇ?
ಜುಲೈ 23ರಂದು ಅವರು ರಾಜಸ್ಥಾನ ಪ್ರವಾಸ ಕೈಗೊಳ್ಳುವುದರ ಬಗ್ಗೆಯೂ ಜುಲೈ 21ರಂದೇ ಅಧಿಕೃತ ಘೋಷಣೆ ಮಾಡಲಾಗಿತ್ತು. ಈಗ ಅವರ ದಿಢೀರ್ ರಾಜೀನಾಮೆ ನೋಡಿದರೆ, ದೇಶದ ರಾಜಕೀಯ ಇಬ್ಬರು ವ್ಯಕ್ತಿಗಳ ಕೋಣೆಗೆ ಸೀಮಿತವಾಗಿದೆ ಮತ್ತು ಅವರನ್ನು ಹೊರತುಪಡಿಸಿ ಬೇರೆ ಯಾರಿಗೂ ಏನೂ ತಿಳಿದಿಲ್ಲ ಎಂಬುದನ್ನು ಹೇಳುತ್ತಿದೆ.
ಧನ್ಕರ್ ಬಂಗಾಳದ ರಾಜ್ಯಪಾಲ ಹುದ್ದೆಯಿಂದ ಭಾರತದ ಉಪ ರಾಷ್ಟ್ರಪತಿ ಹುದ್ದೆಯವರೆಗೆ ಎಲ್ಲಾ ಸಾಂವಿಧಾನಿಕ ಘನತೆಯೊಂದಿಗೆ ಆಟವಾಡುತ್ತಲೇ ಇದ್ದ ವ್ಯಕ್ತಿ. ಮೋದಿಯವರ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ತಕ್ಕಂತೆ ಅವರು ಕೆಲಸ ಮಾಡುತ್ತಿದ್ದರು. ಅದೇ ವ್ಯಕ್ತಿ ಇಂದು ಅವರಿಗೆ ಇದ್ದಕ್ಕಿದ್ದಂತೆ ನಿಷ್ಪ್ರಯೋಜಕ ಎನ್ನಿಸಿರುವಂತಿದೆಯೇ?.
ಸಾಂವಿಧಾನಿಕ ಹುದ್ದೆಗೆ ಧನ್ಕರ್ ರಾಜೀನಾಮೆ ನೀಡಿದ ನಂತರವೂ ಪ್ರಧಾನಿ ಮೋದಿ ಔಪಚಾರಿಕತೆಗಾಗಿ ತಕ್ಷಣ ಒಂದು ಟ್ವೀಟ್ ಕೂಡ ಮಾಡಿಲ್ಲ.
ಪ್ರಧಾನಿ ಮೋದಿಯವರ ಈ ಮೌನ ಬೇರೆಯದೇ ಅರ್ಥದ್ದಾಗಿದೆ. ನನ್ನ ಮುಂದೆ ಯಾರೂ ಏನೂ ಅಲ್ಲ ಎಂಬ ಅಹಂಕಾರದ ಮೌನ ಎಂದು ಅದನ್ನು ಕರೆಯಬಹುದು ಎಂದಿದ್ದಾರೆ ಖ್ಯಾತ ಪತ್ರಕರ್ತ ರವೀಶ್ ಕುಮಾರ್.
ಜುಲೈ 21ರ ರಾತ್ರಿ 9:25ಕ್ಕೆ ಉಪ ರಾಷ್ಟ್ರಪತಿಯವರ ಟ್ವಿಟರ್ ಹ್ಯಾಂಡಲ್‌ನಿಂದ ಜಗದೀಪ್ ಧನ್ಕರ್ ಅವರ ರಾಜೀನಾಮೆಯನ್ನು ಘೋಷಿಸಲಾಯಿತು. ಜುಲೈ 22ರ ಬೆಳಗ್ಗೆ ಮೋದಿ ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದರು. ಆದರೆ, ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ ಉಪರಾಷ್ಟ್ರಪತಿ ಆರೋಗ್ಯದ ಬಗ್ಗೆ ಮಧ್ಯಾಹ್ನ 12 ಗಂಟೆಯವರೆಗೂ ಪ್ರಧಾನಿಯಿಂದ ಯಾವುದೇ ಟ್ವೀಟ್ ಬರಲಿಲ್ಲ. ಮಧ್ಯಾಹ್ನ 12:13ಕ್ಕೆ, ಮೋದಿ ಧನ್ಕರ್ ರಾಜೀನಾಮೆಯ ಬಗ್ಗೆ ಟ್ವೀಟ್ ಮಾಡಿದರು ಮತ್ತು ಅವರಿಗೆ ಶುಭ ಹಾರೈಸಿದರು.
ಧನ್ಕರ್ ಅವರಿಗೆ ರಾಜ್ಯಸಭೆಯಲ್ಲಿ ಬೀಳ್ಕೊಡುಗೆ ಸಮಾರಂಭವೂ ನಡೆಯುವುದಿಲ್ಲ ಎಂದು ಹೇಳಲಾಗುತ್ತಿದೆ. ಧನ್ಕರ್ ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡುವುದಿಲ್ಲ ಎಂಬ ಊಹಾಪೋಹಗಳಿವೆ. ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಅವರೂ ಧನ್ಕರ್ ಅವರಿಗಾಗಿ ವಿದಾಯ ಭಾಷಣ ಮಾಡುವುದಿಲ್ಲ.
ಈ ಸಮಯದಲ್ಲಿ ಸಂಸತ್ತಿನ ಎರಡೂ ಅಧಿವೇಶನಗಳು ನಡೆಯುತ್ತಿವೆ. ಇದರ ಮಧ್ಯೆ, ರಾಜ್ಯಸಭೆಯ ಅಧ್ಯಕ್ಷರು ಮತ್ತು ದೇಶದ ಉಪ ರಾಷ್ಟ್ರಪತಿ ರಾಜೀನಾಮೆ ನೀಡಿದ್ದಾರೆ.
ಹಾಮಿದ್ ಅನ್ಸಾರಿ ಉಪರಾಷ್ಟ್ರಪತಿಯಾಗಿ ತಮ್ಮ ಅವಧಿ ಪೂರ್ಣಗೊಳಿಸಿದಾಗ, ರಾಜ್ಯಸಭೆಯಲ್ಲಿ ವಿದಾಯ ಸಮಾರಂಭ ನಡೆಸಲಾಯಿತು. ವಿದಾಯ ಭಾಷಣದಲ್ಲಿ ಪ್ರಧಾನಿ ಮೋದಿಯವರ ಹೇಳಿಕೆ ಬಹಳ ವಿವಾದಾತ್ಮಕವಾಗಿತ್ತು. ವಿದಾಯ ಸಮಾರಂಭದಲ್ಲಿ ಅವರು ಹಾಮಿದ್ ಅನ್ಸಾರಿ ಅವರ ಚಿಂತನೆಯ ಬಗ್ಗೆ ಕಮೆಂಟ್ ಮಾಡಿದ್ದರು.
‘‘ನಿಮ್ಮ ಅಧಿಕಾರಾವಧಿಯ ಬಹುಪಾಲು ಭಾಗ ಪಶ್ಚಿಮ ಏಶ್ಯಕ್ಕೆ ಸಂಬಂಧಿಸಿದೆ. ರಾಜತಾಂತ್ರಿಕರಾಗಿ, ನಿಮ್ಮ ಜೀವನದ ಹಲವು ವರ್ಷಗಳನ್ನು ಆ ವಲಯದಲ್ಲಿ ಕಳೆದಿದ್ದೀರಿ. ಅಲ್ಲಿಂದ ನಿವೃತ್ತರಾದ ನಂತರವೂ, ನಿಮ್ಮ ಹೆಚ್ಚಿನ ಕೆಲಸಗಳು ಹಾಗೆಯೇ ಉಳಿದಿವೆ. ಅದು ಅಲ್ಪಸಂಖ್ಯಾತರ ಆಯೋಗವಾಗಲಿ ಅಥವಾ ಅಲಿಗಢ ವಿಶ್ವವಿದ್ಯಾನಿಲಯವಾಗಲಿ, ನಿಮಗೆ ಒಂದು ವಲಯವಿದೆ. ಅದು ಹಾಗೆಯೇ ಇತ್ತು. ಆದರೆ ಈ 10 ವರ್ಷಗಳಲ್ಲಿ, ಸಂಪೂರ್ಣವಾಗಿ ವಿಭಿನ್ನವಾದ ಜವಾಬ್ದಾರಿ ನಿಮ್ಮ ಮೇಲೆ ಬಂದಿತು ಮತ್ತು ನೀವು ಸಂವಿಧಾನದ ವ್ಯಾಪ್ತಿಯಲ್ಲಿ ಪ್ರತೀ ಕ್ಷಣವೂ ಓಡಬೇಕಾಗಿತ್ತು. ಅದನ್ನು ಚೆನ್ನಾಗಿ ಪೂರೈಸಲು ನೀವು ಎಲ್ಲ ಪ್ರಯತ್ನಗಳನ್ನು ಮಾಡಿದ್ದೀರಿ. ನಿಮಗದೆಲ್ಲ ಸ್ವಲ್ಪ ಇಕ್ಕಟ್ಟಿನದ್ದಾಗಿದ್ದಿರಬಹುದು. ಆದರೆ ಇನ್ನು ಬಹುಶಃ ನಿಮಗೆ ಆ ಬಿಕ್ಕಟ್ಟು ಇರುವುದಿಲ್ಲ, ನೀವು ಸ್ವಾತಂತ್ರ್ಯವನ್ನು ಆನಂದಿಸುವಿರಿ ಮತ್ತು ನಿಮ್ಮ ಮೂಲ ಚಿಂತನೆಯ ಪ್ರಕಾರ ಕೆಲಸ ಮಾಡಲು ಮತ್ತು ಯೋಚಿಸಲು ನಿಮಗೆ ಅವಕಾಶ ಸಿಗುತ್ತದೆ’’ ಎಂದು ಮೋದಿ ಹೇಳುವಾಗ, ಆ ಮಾತಿನಲ್ಲಿಯ ವ್ಯಂಗ್ಯವನ್ನು ಅರ್ಥ ಮಾಡಿಕೊಳ್ಳಬಹುದಿತ್ತು.
ಹಾಮಿದ್ ಅನ್ಸಾರಿ ಅವರೊಂದಿಗೆ ಏನಾಯಿತೋ, ಜಗದೀಪ್ ಧನ್ಕರ್ ಅವರೊಂದಿಗೂ ಅದೇ ಆಗುತ್ತಿದೆ ಮತ್ತು ಆಗಲಿದೆ ಎಂದು ಕಾಣುತ್ತದೆ.
ಧನ್ಕರ್ ನಿಜವಾಗಿಯೂ ಏಕೆ ರಾಜೀನಾಮೆ ನೀಡಿದರು? ಇದಕ್ಕೆ ಯಾರ ಬಳಿಯೂ ನಿರ್ದಿಷ್ಟ ಉತ್ತರವಿಲ್ಲ.
ದಿಲ್ಲಿಯಲ್ಲಿ ಊಹಾಪೋಹಗಳೇ ಜೋರಾಗಿವೆ. ಮೋದಿ ಆಳ್ವಿಕೆಯಲ್ಲಿ ಇಷ್ಟು ದೊಡ್ಡ ರಾಜಕೀಯ ಸುದ್ದಿಯ ಬಗ್ಗೆ ಯಾರಿಗೂ ಯಾವುದೇ ಸುಳಿವು ಇಲ್ಲ. ಬಿಜೆಪಿಯವರೇ ಎಂಬಂತಿರುವ ಪತ್ರಕರ್ತರಿಗೂ ಏನಾಯಿತು ಎಂಬುದರ ಬಗ್ಗೆ ಯಾವುದೇ ಸುಳಿವು ಇಲ್ಲವೆ?
ರಾಜೀನಾಮೆ ಸುದ್ದಿ ಬಂದ ನಂತರ, ಸುದ್ದಿ ಸಂಸ್ಥೆ ‘ಎಎನ್‌ಐ’ನ ಟ್ವಿಟರ್ ಫೀಡ್‌ನಲ್ಲಿ ಹಲವು ಗಂಟೆಗಳ ಕಾಲ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗಳೇ ಹೆಚ್ಚಾಗಿ ಕಂಡವು. ಬಿಜೆಪಿ ನಾಯಕರಿಂದ ತಕ್ಷಣದ ಪ್ರತಿಕ್ರಿಯೆ ಇರಲಿಲ್ಲ. ಪಕ್ಷಕ್ಕೂ, ಪತ್ರಕರ್ತರಿಗೂ ಧನ್ಕರ್ ರಾಜೀನಾಮೆಯ ನಿಖರ ಕಾರಣ ಗೊತ್ತಿಲ್ಲ. ದೇಶ ಇನ್ನೂ ಹಲವಾರು ವಿಷಯಗಳಂತೆ ಈ ವಿಷಯದಲ್ಲೂ ಕತ್ತಲೆಯಲ್ಲಿದೆ.
ಮಂಗಳವಾರ ರಾತ್ರಿ ಎನ್‌ಡಿಟಿವಿ ಜೊತೆ ಮಾತಾಡಿರುವ ಎಎನ್‌ಐ ಸಂಪಾದಕಿ ಸ್ಮಿತಾ ಪ್ರಕಾಶ್ ಅವರು ‘‘ಧನ್ಕರ್ ಏನೋ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾರೆ, ಸರಕಾರದ ಜೊತೆ ಅವರು ಏನೋ ದೊಡ್ಡದೇ ಪ್ರಮಾದ ಮಾಡಿಕೊಂಡಿದ್ದಾರೆ’’ ಎಂದು ಹೇಳಿದ್ದಾರೆ. ಜೊತೆಗೆ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿಯವರ ಮೊನ್ನೆಯ ಹೇಳಿಕೆಯನ್ನು ನೆನಪಿಸಿದ್ದಾರೆ.
ಧನ್ಕರ್ ತಮ್ಮನ್ನು, ಜಯಾ ಬಚ್ಚನ್ ಅವರನ್ನು, ಇನ್ನೊಬ್ಬರನ್ನು ಅವಮಾನಿಸುತ್ತಿದ್ದರು. ರಾಜ್ಯಸಭೆಯಲ್ಲಿ ಮಾತಾಡಲು ಬಿಡುತ್ತಿರಲಿಲ್ಲ, ತನ್ನ ಚೇಂಬರ್‌ಗೆ ಬಂದು ಮಾತಾಡಲು ಹೇಳುತ್ತಿದ್ದರು ಎಂದು ಪ್ರಿಯಾಂಕಾ ಚತುರ್ವೇದಿ ಹೇಳಿದ್ದನ್ನು ಸ್ಮಿತಾ ಪ್ರಕಾಶ್ ಉಲ್ಲೇಖಿಸಿದ್ದಾರೆ.
ರಾಜ್ಯಸಭಾ ಸದಸ್ಯರು ಸದನದಲ್ಲಿ ಮಾತಾಡಬೇಕು, ಅವರನ್ನು ಮಾತಾಡಲು ಚೇಂಬರ್‌ಗೆ ಯಾಕೆ ಕರೆಯಬೇಕು ಎಂದು ಸ್ಮಿತಾ ಪ್ರಕಾಶ್ ಕೇಳಿದ್ದಾರೆ.
ದೇಶದಲ್ಲಿ ಸಾಂವಿಧಾನಿಕ ಹುದ್ದೆಗಳು ಮತ್ತು ಸಂಸ್ಥೆಗಳ ಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಎಂಬುದು ಗೊತ್ತೇ ಇರುವ ವಿಚಾರ. ಚುನಾವಣೆಗೆ ಸ್ವಲ್ಪ ಮೊದಲು, ಚುನಾವಣಾ ಆಯುಕ್ತ ಅರುಣ್ ಗೋಯಲ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡುತ್ತಾರೆ. ನೋಟ್ ಬ್ಯಾನ್ ನಂತರ, ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿ ಹೊರಟು ಹೋಗುತ್ತಾರೆ. ಅವರೇಕೆ ರಾಜೀನಾಮೆ ನೀಡಿದ್ದಾರೆಂದು ಯಾರಿಗೂ ತಿಳಿದಿಲ್ಲ. ಪ್ರಧಾನಿಯವರ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯಂ ಕೂಡ ವೈಯಕ್ತಿಕ ಕಾರಣಗಳ ನೆಪ ಹೇಳಿ ರಾಜೀನಾಮೆ ನೀಡಿದ್ದಾರೆ. ಈಗ ಜಗದೀಪ್ ಧನ್ಕರ್ ಅವರ ಸರದಿ.
ಧನ್ಕರ್ ಅವರನ್ನು ತೆಗೆದುಹಾಕಲಾಗಿದೆಯೇ? ಮತ್ತು ಪ್ರಧಾನಿ ನಡುವೆ ಏನೋ ನಡೆದಿದೆಯೆ? ಕಾಂಗ್ರೆಸ್ ಜಗದೀಪ್ ಧನ್ಕರ್ ಅವರ ಅಧಿಕಾರಾವಧಿಯನ್ನು ಆದರ್ಶ ಎಂದು ಕರೆಯಲು ಏಕೆ ತೊಡಗಿತು? ಈವರೆಗೂ ಧನ್ಕರ್ ಅವರ ವಿರುದ್ಧ ಹರಿಹಾಯುತ್ತಿದ್ದ ಕಾಂಗ್ರೆಸ್ ಅವರನ್ನು ಹೊಗಳುತ್ತಿದೆಯೆಂದರೆ, ನಿಜವಾಗಿಯೂ ಏನು ನಡೆದಿದೆ?
ವಿರೋಧ ಪಕ್ಷಗಳು ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಆದರೆ ಅವರ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ ತನ್ನ ನಿಲುವನ್ನು ಬದಲಾಯಿಸಿತು. ಮಲ್ಲಿಕಾರ್ಜುನ ಖರ್ಗೆ ಕೂಡ, ‘‘ರಾಜೀನಾಮೆ ಕಾರಣ ಧನ್ಕರ್ ಅವರಿಗೆ ಮಾತ್ರ ಗೊತ್ತು. ಇದರ ಬಗ್ಗೆ ನಾವು ಹೇಳಲು ಏನೂ ಇಲ್ಲ. ಸರಕಾರಕ್ಕೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಅದು ಸರಕಾರ ರಾಜೀನಾಮೆಯನ್ನು ಸ್ವೀಕರಿಸುತ್ತದೆಯೋ ಇಲ್ಲವೋ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ’’ ಎಂದರು.
ಮಾರ್ಚ್ ತಿಂಗಳಲ್ಲಿ ಧನ್ಕರ್ ಅವರನ್ನು ದಿಲ್ಲಿಯ ಏಮ್ಸ್‌ನ ಹೃದ್ರೋಗ ವಿಭಾಗಕ್ಕೆ ದಾಖಲಿಸಲಾಗಿತ್ತು. ಎದೆ ನೋವು ಮತ್ತು ಅಸ್ವಸ್ಥತೆ ಕಾರಣದಿಂದ ಅವರನ್ನು ಕ್ರಿಟಿಕಲ್ ಕೇರ್ ಯೂನಿಟ್‌ಗೆ ದಾಖಲಿಸಲಾಯಿತು. ಅಲ್ಲಿ ಅವರ ಆರೋಗ್ಯ ಸುಧಾರಿಸಿತು. ನಾಲ್ಕು ದಿನಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು. ಆ ಸಮಯದಲ್ಲಿ, ಪ್ರಧಾನಿ ಮೋದಿ ಧನ್ಕರ್ ಅವರನ್ನು ಭೇಟಿ ಮಾಡಲು ಹೋದರು.
ಜೂನ್ 25ರಂದು ಧನ್ಕರ್ ಉತ್ತರಾಖಂಡದ ಕುಮಾವೂನ್ ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಭಾಷಣ ಮಾಡಿದ ನಂತರ ಇದ್ದಕ್ಕಿದ್ದಂತೆ ಮೂರ್ಛೆ ಹೋದರು. ಸ್ಥಳದಲ್ಲಿದ್ದ ವೈದ್ಯರು ಅವರಿಗೆ ಚಿಕಿತ್ಸೆ ನೀಡಿದರು ಮತ್ತು ಅವರು ಚೇತರಿಸಿಕೊಂಡರು.
ಧನ್ಕರ್ ಚೆನ್ನಾಗಿದ್ದಾರೆ ಮತ್ತು ಅವರಿಗೆ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿರುವುದಾಗಿ ವರದಿಯಾಗಿತ್ತು.
ಅವರ ಆರೋಗ್ಯದ ಬಗ್ಗೆ ಈಗಾಗಲೇ ಮಾಹಿತಿ ಲಭ್ಯವಿದ್ದರೆ, ಗಂಭೀರ ಸಮಸ್ಯೆ ಇತ್ತು ಎಂದಾಗಿದ್ದರೆ, ಸದನದ ಕಲಾಪ ಪ್ರಾರಂಭವಾಗುವ ಮೊದಲು ಅವರು ಏಕೆ ರಾಜೀನಾಮೆ ನೀಡಲಿಲ್ಲ? ಸದನ ಮುಂದೂಡಲ್ಪಟ್ಟ ಕೆಲವೇ ಗಂಟೆಗಳ ನಂತರ ಅವರ ರಾಜೀನಾಮೆ ನಿರ್ಧಾರ ಹೊರಬೀಳುತ್ತದೆ.
ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಹುದ್ದೆಗಳನ್ನು ಹಿರಿಯರಿಗೇ ಪರಿಗಣಿಸಲಾಗುತ್ತದೆ. ಆ ವಯಸ್ಸಲ್ಲಿ ಕೆಲವು ವಯೋಸಹಜ ಅನಾರೋಗ್ಯಗಳು ಇರುವುದು ಸಹಜ. ಆದರೆ ಅದರಿಂದ ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆ ಆಗುವಷ್ಟು ಅನಾರೋಗ್ಯ ಅವರನ್ನು ಕಾಡುತ್ತಿತ್ತೇ?
ರಾಜೀನಾಮೆಗೂ ಮೊದಲು ಅದೇ ದಿನ ಧನ್ಕರ್ ಸದನದ ಕಲಾಪಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ನಾಯಕರನ್ನು ಪ್ರೀತಿಯಿಂದ ಭೇಟಿಯಾಗುತ್ತಿದ್ದರು. ಅವರ ಆರೋಗ್ಯ ಕೆಟ್ಟದಾಗಿದ್ದರೆ, ಅವರು ಆಸ್ಪತ್ರೆಗೆ ಹೋಗುತ್ತಿದ್ದರು. ಆದರೆ ಈ ರೀತಿಯ ಏನೂ ಆಗಲಿಲ್ಲ. ಆರೋಗ್ಯವೇ ಕಾರಣವಾಗಿದ್ದರೆ, ಮಡಿಲ ಮೀಡಿಯಾದ ಮಂದಿಗೂ ಅದು ಗೊತ್ತಿರಬೇಕಿತ್ತು.
ಜುಲೈ 21ರಂದು ಧನ್ಕರ್ ಸದನದ ಕಲಾಪ ನಡೆಸಿದರು. ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ರಾಜ್ಯಸಭೆಯ ವ್ಯವಹಾರ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಅವರು ಎರಡು ಬಾರಿ ವಹಿಸಿದ್ದರು. ಸಂಜೆ 4:30ಕ್ಕೆ ಧನ್ಕರ್ ಅಧ್ಯಕ್ಷತೆಯಲ್ಲಿ ಸಮಿತಿಯ ಸದಸ್ಯರು ಮತ್ತೆ ಸಭೆ ಸೇರಿದರು.
ಎಲ್ಲರೂ ಜೆ.ಪಿ. ನಡ್ಡಾ ಮತ್ತು ಕಿರಣ್ ರಿಜಿಜು ಅವರಿಗಾಗಿ ಕಾಯುತ್ತಿದ್ದರು. ಆದರೆ ಅವರು ಬರಲಿಲ್ಲ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಇಬ್ಬರೂ ಸಚಿವರು ಸಭೆಗೆ ಬರುವುದಿಲ್ಲ ಎಂದು ಧನ್ಕರ್ ಅವರಿಗೆ ವೈಯಕ್ತಿಕವಾಗಿ ತಿಳಿಸಿರಲಿಲ್ಲ. ಸಹಜವಾಗಿಯೇ ಇದರಿಂದ ಅವರಿಗೆ ಅಸಮಾಧಾನವಾಗಿತ್ತು ಮತ್ತು ಅವರು ಸಭೆಯನ್ನು ಮಂಗಳವಾರ ಮಧ್ಯಾಹ್ನ 1:00 ಗಂಟೆಗೆ ನಿಗದಿಪಡಿಸಿದರು.
ಸೋಮವಾರ ಮಧ್ಯಾಹ್ನ 1:00ರಿಂದ 4:30ರ ನಡುವೆ ಏನೋ ಗಂಭೀರವಾದ ಘಟನೆ ನಡೆದಿರಬೇಕು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಕಾರಣದಿಂದಾಗಿಯೇ ನಡ್ಡಾ ಮತ್ತು ರಿಜಿಜು ಉದ್ದೇಶಪೂರ್ವಕವಾಗಿ ಸಂಜೆಯ ಸಭೆಯಲ್ಲಿ ಭಾಗವಹಿಸಲಿಲ್ಲ ಎಂದು ಜೈರಾಂ ರಮೇಶ್ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಡ್ಡಾ, ನಾನು ಮತ್ತು ಕಿರಣ್ ರಿಜಿಜು ಸಭೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಉಪರಾಷ್ಟ್ರಪತಿ ಕಚೇರಿಗೆ ತಿಳಿಸಲಾಗಿದೆ ಎಂದು ಹೇಳಿದರು. ಆದರೆ ಎಲ್ಲರೂ ನಡ್ಡಾ ಮತ್ತು ರಿಜಿಜುಗಾಗಿ ಕಾಯುತ್ತಿದ್ದರು ಎಂದು ಪ್ರತಿಪಕ್ಷಗಳು ಹೇಳುತ್ತವೆ.
ವರದಿಗಳ ಪ್ರಕಾರ, ಅವರನ್ನು ಸಂಜೆ ಭೇಟಿಯಾದ ವಿರೋಧ ಪಕ್ಷದ ಸಂಸದರು ಸಹ ಧನ್ಕರ್ ಅವರ ಆರೋಗ್ಯದ ಬಗ್ಗೆ ಮಾತನಾಡಲಿಲ್ಲ. ಧನ್ಕರ್ ಆರೋಗ್ಯದಲ್ಲಿ ಯಾವುದೇ ಗಂಭೀರ ತೊಂದರೆಯಾದ ಯಾವ ಸೂಚನೆಗಳೂ ಇರಲಿಲ್ಲ. ಹಾಗಾಗಿಯೇ ಅವರು ಈ ಕಾರಣ ನೀಡಿರುವುದನ್ನು ಅನುಮಾನಿಸಲಾಗುತ್ತಿದೆ. ನಿಮ್ಮ ಆರೋಗ್ಯ ನೋಡಿಕೊಳ್ಳಲು ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವೈದ್ಯರು ಸಲಹೆ ನೀಡಿದರೆ?
ಅವರ ರಾಜೀನಾಮೆ ಪತ್ರದಲ್ಲಿ ಯಾವುದೇ ಗಂಭೀರ ಬಿಕ್ಕಟ್ಟಿನ ಉಲ್ಲೇಖವಿಲ್ಲ. ಹಾಗಾದರೆ ಇದ್ದಕ್ಕಿದ್ದಂತೆ ಏನಾಯಿತು?
ಉಪ ರಾಷ್ಟ್ರಪತಿಗಳು ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಅಡಚಣೆ ಒಡ್ಡಲಾಗುತ್ತಿತ್ತೆ? ಅವರ ವಿದೇಶ ಪ್ರವಾಸಗಳಿಗೆ ಅನುಮೋದನೆ ನೀಡುವ ವಿಷಯದಲ್ಲಿ ಘರ್ಷಣೆಗಳು ಹೆಚ್ಚತೊಡಗಿದ್ದವೆ? ಅವರು ಅವಮಾನ ಎದುರಿಸುವುದು ಶುರುವಾಗಿತ್ತೆ? ಹೀಗೆಲ್ಲ ಹಲವಾರು ಅನುಮಾನಗಳು ಹರಡುತ್ತಿವೆ.
ರಾಜ್ಯಸಭೆ ಕಲಾಪಗಳ ಸಂದರ್ಭದಲ್ಲಿ ಧನ್ಕರ್ ಅವರು, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸಲು ಲೋಕಸಭೆಯಲ್ಲಿ ಇದೇ ರೀತಿಯ ದೋಷಾರೋಪ ನಿರ್ಣಯ ಮಂಡಿಸಲಾಗಿದೆಯೇ ಎಂದು ಪರಿಶೀಲಿಸಲು ರಾಜ್ಯಸಭೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿದರು. ಅವರ ಪದಚ್ಯುತಿಗೆ ಇದು ಕೂಡ ಕಾರಣವಾಗಿರಬಹುದು ಎಂಬ ಒಂದು ಅನುಮಾನ ಕೂಡ ಹರಡಿದೆ.
ಅವರು ಅತಿಯಾಗಿ ಸಕ್ರಿಯರಾಗುತ್ತಿದ್ದಾರೆ ಎಂದು ಸರಕಾರ ಭಾವಿಸಿತೆ?
ಸಂವಿಧಾನದ ಚೈತನ್ಯವನ್ನು ಬಹಿರಂಗವಾಗಿ ತುಳಿದ ಧನ್ಕರ್ ಈಗ ರಾಜೀನಾಮೆ ನೀಡಿದ್ದಾರೆ. ಅವರ ನಂತರ ಅಂತಹ ನಾಯಕರ ಕೊರತೆ ಇರುತ್ತದೆ ಎಂದಲ್ಲ.
ರಾಜ್ಯಪಾಲ ಮತ್ತು ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುವಾಗ ಸಾಂವಿಧಾನಿಕ ನಿಯಮಗಳನ್ನು ಹೇಗೆ ಉಲ್ಲಂಘಿಸಲಾಗುತ್ತದೆ ಎಂಬುದಕ್ಕೆ ಅವರ ಹಾದಿ ಒಂದು ಉದಾಹರಣೆ.