ರಾಜಕೀಯ ನಾಯಕರ ಯಶಸ್ಸು ಜನರನ್ನು ಮರುಳುಗೊಳಿಸುವುದರಲ್ಲಿದೆಯೇ?
ರಾಜಕಾರಣಿಗಳು ಸುಳ್ಳು ಹೇಳುವುದು, ನಾಟಕ ಮಾಡುವುದು, ಗಿಮಿಕ್ ಪ್ರಹಸನಗಳಿಗೆ ಮೊರೆ ಹೋಗುವುದು ಇತ್ಯಾದಿ ಭಾರತೀಯ ರಾಜಕಾರಣದ ಒಂದು ಭಾಗವಾಗಿ ಬಿಟ್ಟಿದೆ. ಸಾಮಾನ್ಯವಾಗಿ ತಿಳುವಳಿಕೆಯುಳ್ಳ ಜನರು ಇವನ್ನೆಲ್ಲ ಹೆಚ್ಚು ಗಂಭೀರವಾಗಿ ಪರಿಗಣಿಸುವವರಲ್ಲ. ವಿಪರ್ಯಾಸವೆಂದರೆ ನಾಯಕನೊಬ್ಬನ ಅಭಿಮಾನಿ, ಅನುಯಾಯಿಗಳಿಗೆ ಇವೆಲ್ಲವೂ ಸತ್ಯ, ಸಹಜವೆಂಬಂತೆ ಭಾಸವಾಗುವುದೂ ನಿಜ. ಆದರೆ ಚುನಾವಣಾ ಸಂದರ್ಭದಲ್ಲಿ ನಾಯಕರು ನೀಡುವಂತಹ ಉಚಿತ ಯೋಜನೆ, ಕೊಡುಗೆಗಳ ಆಶ್ವಾಸನೆಗಳಿಗೆ ಜನರು ಮರುಳಾಗುವುದು ಸುಳ್ಳಲ್ಲ. ಜೊತೆಗೆ ಪಕ್ಷಗಳ ಕಾರ್ಯಸಾಧುವಲ್ಲದ ಭರವಸೆಗಳು ಹಾಗೂ ಭಾವನಾತ್ಮಕವಾದ ಮಾತುಗಳೂ ಜನರನ್ನು ತಟ್ಟುವುದಿದೆ. ಇಂತಹ ನಡೆಗಳು ಪ್ರಜ್ಞಾವಂತರಲ್ಲಿ ರಾಜಕಾರಣದ ಕುರಿತಾಗಿ ಖೇದವನ್ನೂ ನಗುವನ್ನೂ ಏಕಕಾಲದಲ್ಲಿ ಮೂಡಿಸುವುದುಂಟು.
ಈ ಮಾದರಿಯ ಕೆಲವು ಪ್ರಸಂಗಗಳನ್ನು ನೆನಪಿಸಿ ಕೊಳ್ಳ ಬಹುದು. ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರು ಕಳೆದ ಮೀಲಾದುನ್ನಬಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ‘‘ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆಯಿದೆ’’ ಎಂದಿದ್ದಾರೆ. ಪುನರ್ಜನ್ಮವೆಂಬುದು ನಂಬಿಕೆ. ಅದು ಇದೆಯೇ ಇಲ್ಲವೋ ಗೊತ್ತಿಲ್ಲ. ಮುಖ್ಯವಾಗಿ ಒಂದು ನಿರ್ದಿಷ್ಟ ಮತ ಧರ್ಮದಲ್ಲಿ ಹುಟ್ಟುವುದು ನಮ್ಮ ಕೈಯಲ್ಲೇನೂ ಇಲ್ಲ. ಯಾರೂ ಯಾವುದೇ ಜಾತಿ, ಮತದಲ್ಲಿ ಅರ್ಜಿ ಸಲ್ಲಿಸಿ ಹುಟ್ಟಲು ಸಾಧ್ಯವೂ ಇಲ್ಲ. ವಾಸ್ತವದಲ್ಲಿ ಇಂತಹದ್ದೇ ಮತ, ಧರ್ಮ ನಮಗೆ ಇಷ್ಟವಾಗಿದ್ದರೆ ಮತಾಂತರ ಆಗಲು ಸಂವಿಧಾನದಲ್ಲಿ ಅವಕಾಶವಿದೆ. ಈ ಸತ್ಯ ಶಾಸಕರಿಗೆ ಗೊತ್ತಿಲ್ಲದೆ ಇರಲು ಸಾಧ್ಯವಿಲ್ಲ. ಹಾಗಿದ್ದೂ ಈ ಮಾತನ್ನು ಅವರು ಹೇಳಿದ್ದಾರೆ ಎಂದರೆ ಅದು ಮತದಾರರನ್ನು ಮರುಳುಗೊಳಿಸುವ ಉದ್ದೇಶದಿಂದ ಆಡಿದ್ದ ಮಾತೆಂಬುದು ಸ್ಪಷ್ಟ.
ನರೇಂದ್ರ ಮೋದಿಯವರು 2014ರ ಚುನಾವಣಾ ಪ್ರಚಾರ ಸಂದರ್ಭದಲ್ಲಿ, ಸ್ವಿಸ್‌ಬ್ಯಾಂಕ್‌ನಲ್ಲಿರುವ ಭಾರತೀಯರ ಕಪ್ಪು ಹಣವನ್ನು ತಂದು ಪ್ರತಿಯೊಬ್ಬನ ಖಾತೆಗೆ ತಲಾ ರೂ. 15 ಲಕ್ಷದಂತೆ ಹಂಚಲಾಗುವುದೆಂದು ಹುಮ್ಮಸ್ಸಿನಿಂದ ಘೋಷಿಸಿ ಕೊಂಡಿರುವುದನ್ನು ಯಾರೂ ಮರೆಯಲಾರರು. ಅವರ ಪಕ್ಷ ಚುನಾವಣೆಯಲ್ಲಿ ಗೆದ್ದು ಅವರು ಪ್ರಧಾನಿಯೂ ಆದರು. ಕಪ್ಪು ಹಣ ಸ್ವಿಸ್ ಬ್ಯಾಂಕಿನಿಂದ ಭಾರತಕ್ಕೆ ಬರಲೂ ಇಲ್ಲ. ಜನರ ಖಾತೆಗೆ 15 ಲಕ್ಷ ರೂ. ಜಮೆ ಆಗಲೂ ಇಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷದವರು ಪದೇ ಪದೇ ಬಿಜೆಪಿಯನ್ನು ಲೇವಡಿ ಮಾಡುತ್ತಲೇ ಇದ್ದರು. ಕೊನೆಗೆ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ಮೋದಿಯವರ ಭರವಸೆ ಕೇವಲ ‘ಜುಮ್ಲಾ’ (ನುಡಿಕಟ್ಟು) ಆಗಿತ್ತು ಎಂಬ ಸ್ಪಷ್ಟೀಕರಣ ನೀಡಿದರು. ಈಗೀಗ ಭಾರತದ ರಾಜಕಾರಣದಲ್ಲಿ ಇಂತಹ ಉತ್ಪ್ರೇಕ್ಷಿತ ನುಡಿಕಟ್ಟುಗಳು, ಭಾವನಾತ್ಮಕ ಮಾತುಗಳದ್ದೇ ಮೇಲುಗೈ ಎಂಬಂತಾಗಿದೆ. ಪ್ರಬುದ್ಧ ಪ್ರಜಾತಂತ್ರದಲ್ಲಿ ಇವೆಲ್ಲ ಅನಪೇಕ್ಷಿತ, ಬಾಲಿಶ ಸಂಗತಿಗಳು. ನಮ್ಮ ನಾಯಕರಾದವರು ಯಾವಾಗ ಇದನ್ನು ಅರ್ಥ ಮಾಡಿಕೊಳ್ಳುತ್ತಾರೊ ಏನೋ?
ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು, ‘‘ಯಾರು ಜನರನ್ನು ಹೆಚ್ಚು ಮೂರ್ಖರನ್ನಾಗಿ ಮಾಡ ಬಲ್ಲರೋ ಅವರೇ ಅತ್ಯುತ್ತಮ ನಾಯಕರೆನಿಸಿ ಕೊಳ್ಳುತ್ತಾರೆ’’ ಎಂದು ಮಾರ್ಮಿಕವಾಗಿ ಹೇಳಿರುವ ಮಾತು ಸಮಕಾಲೀನ ರಾಜಕೀಯ ನಾಯಕರ ಅಂತರಂಗವನ್ನು ತೆರೆದಿಟ್ಟಂತಿದೆ. ನಾಗಪುರದಲ್ಲಿ ನಡೆದ ಅಖಿಲ ಭಾರತೀಯ ಮಹಾನುಭಾವ ಪರಿಷದ್ ಕಾರ್ಯಕ್ರಮದಲ್ಲಿ ಗಡ್ಕರಿಯವರು ಈ ಮಾತನ್ನು ಆಡಿದ್ದಾರೆ. ಅವರ ಭಾಷಣದ ನಡುವೆ ಬಂದಿರುವ ಮಾತುಗಳನ್ನು ಅಲ್ಲಿಗೆ ಸೀಮಿತ ಗೊಳಿಸಿದರೆ ತಪ್ಪಾದೀತು. ಅದಕ್ಕೆ ಸಂಬಂಧಿಸಿದ ಪೂರ್ಣ ಪಾಠ ಹೀಗಿದೆ: ‘‘ನಾನು ಕೆಲಸ ಮಾಡುವ ಕ್ಷೇತ್ರದಲ್ಲಿ ಮುಕ್ತವಾಗಿ ಸತ್ಯ ಮಾತನಾಡುವುದನ್ನು ನಿರ್ಬಂಧಿಸಲಾಗಿದೆ. ಎಲ್ಲರಿಗೂ ಅವರದ್ದೇ ಆದ ಉದ್ದೇಶಗಳಿವೆ. ಕೊನೆಗೆ ಯಾರು ಜನರನ್ನು ಹೆಚ್ಚು ಮೂರ್ಖರನ್ನಾಗಿ ಮಾಡ ಬಲ್ಲರೋ ಅವರೇ ಅತ್ಯುತ್ತಮ ನಾಯಕ ಎಂದೆನಿಸಿಕೊಳ್ಳುತ್ತಾರೆ. ಆದರೆ ಒಂದು ಮಾತ್ರ ಸತ್ಯ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿರುವಂತೆ ಅಂತಿಮ ವಿಜಯ ಎಂದಿಗೂ ಸತ್ಯದ್ದೇ ಆಗಿರಲಿದೆ.’’
ಈ ಅಭಿಪ್ರಾಯ ಅವರ ಪಕ್ಷವೂ ಸೇರಿದಂತೆ ಎಲ್ಲ ಪಕ್ಷದ ನಾಯಕರಿಗೂ ಅನ್ವಯವಾಗುವಂತಹದ್ದು.
ಇಂದು ದೇಶದಲ್ಲಿ ನಮ್ಮ ರಾಜಕೀಯ ನಾಯಕರ ಮಾತು ಮತ್ತು ನಡವಳಿಕೆಯನ್ನು ಗಮನಿಸಿದರೆ ಗಡ್ಕರಿಯವರ ಅಭಿಪ್ರಾಯ ಅಕ್ಷರಶಃ ನಿಜವೆನ್ನಿಸುತ್ತದೆ. ಅವ್ಯವಹಾರ, ಅಧಿಕಾರ ದಾಹ, ಸ್ವಜನಪಕ್ಷಪಾತಗಳಲ್ಲಿ ಮುಳುಗಿರುವ ನಮ್ಮ ನಾಯಕರ ಯಶಸ್ಸಿನ ಸೂತ್ರ ಜನರನ್ನು ಮರುಳು ಗೊಳಿಸುವುದರಲ್ಲಿದೆ ಎಂದೆನಿಸುತ್ತದೆ.
ಅವರ ಭಾಷಣ, ಹೇಳಿಕೆಗಳು, ನಡೆಗಳು ಇತ್ಯಾದಿಗಳನ್ನು ಸೂಕ್ಷ್ಮವಾಗಿ ಗಮನಿಸುವಷ್ಟು ಬುದ್ಧಿವಂತಿಕೆ ನಮ್ಮಲ್ಲಿದ್ದರೆ ಇದನ್ನು ಅರ್ಥ ಮಾಡಿಕೊಳ್ಳುವುದು ಸುಲಭ. ನಾಟಕೀಯ ಮಾತುಗಳು ಮತ್ತು ಗಿಮಿಕ್‌ಗಳು ಇಂದಿನ ಯಶಸ್ವಿ ರಾಜಕಾರಣದ ಲಕ್ಷಣದಂತಿದೆ. ಜನರನ್ನು ಭಾವನಾತ್ಮಕವಾಗಿ ಸೆಳೆಯುವಂತಹ ವಿಚಾರಗಳನ್ನು ಮುನ್ನೆಲೆಗೆ ತಂದು ಪಕ್ಷವನ್ನು ಅಧಿಕಾರಕ್ಕೆ ತರುವುದು ಪಕ್ಷ ಮುಂದಾಳುಗಳ ಕಾರ್ಯತಂತ್ರವಾಗಿ ಯಶಸ್ವಿಯೂ ಆಗಿದೆ. ಹಾಗೆಯೇ ಆರ್ಥಿಕ ಶಿಸ್ತನ್ನು ಬಲಿಕೊಟ್ಟು ಅಗ್ಗದ ಯೋಜನೆಗಳನ್ನು ಜಾರಿಗೆ ತರುವುದೂ ಇಂದಿನ ರಾಜಕಾರಣದ ಹೊಸ ಶೈಲಿ. ಇದನ್ನೇ ಜನರನ್ನು ಮರುಳುಗೊಳಿಸುವಂತಹ ತಂತ್ರಗಾರಿಕೆ ಎನ್ನುವುದು.
ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ದೇಶದ ಪ್ರಧಾನಿಯವರೆಗೂ ನಾಯಕರೆನಿಸಿಕೊಂಡವರು ಚುನಾವಣಾ ಸಂದರ್ಭಗಳಲ್ಲಿ ಜನರನ್ನು ಮರುಳುಗೊಳಿಸುವ ವಿವಿಧ ರೀತಿಯ ತಂತ್ರಗಾರಿಕೆಗೆ ಮೊರೆ ಹೋಗುತ್ತಾರೆ. ಜನಪ್ರಿಯ ನಾಯಕರೆನಿಸಿ ಕೊಂಡವರು ಜನರನ್ನು ಮೈದಡವಿ ಮಾತನಾಡುವುದರ ಜೊತೆಗೆ ಭರವಸೆಗಳ ಮಹಾಪೂರವನ್ನೇ ಮುಂದಿಡುತ್ತಾರೆ. ಇದನ್ನಾದರೂ ಸಹಿಸ ಬಹುದು. ಆದರೆ ಸಮಾಜವನ್ನು ಒಡೆಯುವಂತಹ ಕೋಮು ಪ್ರಚೋದಿತ ಉದ್ರೇಕಕಾರಿಯಾದ ಭಾಷಣಗಳನ್ನು ಸಹಿಸುವುದಾದರೂ ಹೇಗೆ? ಕೆಲವು ನಾಯಕರು ಇದನ್ನೇ ಬಂಡವಾಳವಾಗಿ ಇಟ್ಟು ಕೊಂಡು ರಾಜಕಾರಣದಲ್ಲಿ ಯಶಸ್ಸು ಕಂಡವರು. ಇವರು ಜನರನ್ನು ನಿರಂತರವಾಗಿ ಮೂರ್ಖರನ್ನಾಗಿ ಮಾಡಿಕೊಂಡು ಯಶಸ್ಸಿನ ಮೆಟ್ಟಿಲೇರಿಕೊಂಡು ಅಧಿಕಾರ ಅನುಭವಿಸುತ್ತಾರೆ. ವಿಪರ್ಯಾಸವೆಂದರೆ ಇಂತಹ ಅನೇಕ ಮಂದಿ ನಾಯಕರ ನಡೆ-ನುಡಿಗಳಲ್ಲಿ ಯಾವುದೇ ಸಂಬಂಧಗಳಿರುವುದಿಲ್ಲ. ಇವರ ರಾಜಕಾರಣಕ್ಕೆ ಯಾರೋ ಬಡ ಬೆಂಗಲಿಗರು ಬದುಕಿನಲ್ಲಿ ಅತಂತ್ರವಾಗಿ ಹೋಗುವುದು ನೋವಿನ ವಿಚಾರ.
ಈ ಪರಿಸ್ಥಿತಿಗೆ ರಾಜಕೀಯ ನಾಯಕರನ್ನು ಮಾತ್ರ ಟೀಕಿಸುವುದರಲ್ಲಿ ಅರ್ಥವಿಲ್ಲ. ನಮ್ಮ ಸಮಾಜ ಸಹ ಅದೇ ರೀತಿಯಿದೆ ಎಂದೆನಿಸುತ್ತದೆ. ಜನರಲ್ಲಿ ರಾಜಕೀಯ ಪ್ರಜ್ಞೆ ಮತ್ತು ಪ್ರಬುದ್ಧತೆಯ ಕೊರತೆ ಒಂದು ಕಡೆಯಾದರೆ, ಪಕ್ಷ ಮತ್ತು ಅವುಗಳ ನಾಯಕರ ಮೇಲಿನ ಅಂದಾಭಿಮಾನಗಳೂ ಇನ್ನೊಂದು ಕಡೆ ರಾಜಕಾರಣದ ದಿಕ್ಕನ್ನು ತಪ್ಪಿಸಿದಂತಿವೆ. ಕೆಳ ಹಂತದಲ್ಲಿ ಜನರ ವೈಯಕ್ತಿಕ ಸ್ವಾರ್ಥ, ದುರಾಸೆಗಳು ನಾಯಕರಿಗೆ ಮತ ಗಳಿಕೆಗೆ ಅನುಕೂಲ ಮಾಡಿಕೊಡುವಂತಿದೆ. ಚುನಾವಣೆ ಸಂದರ್ಭಗಳಲ್ಲಿ ಹಣ, ಹೆಂಡ, ಉಡುಗೊರೆಗಳನ್ನು ಹಂಚಿಕೆ ಮಾಡಿ ಅಧಿಕಾರಕ್ಕೆ ಏರುವುದು ಕೆಲವು ರಾಜಕಾರಣಿಗಳ ಯಶಸ್ಸಿನ ಸೂತ್ರ. ಮೇಲಿನ ಹಂತದಲ್ಲಿ ನಾಯಕರು ಮತ್ತು ಪಕ್ಷಗಳು ಭಾವನಾತ್ಮಕ ವಿಚಾರಗಳನ್ನು ಅಥವಾ ಸ್ವಯಂ ಕಲ್ಪಿತ ಭಯ-ಬೆದರಿಕೆಗಳನ್ನು ಮುಂದೊಡ್ಡಿ ಜನರ ಮತ ಸೆಳೆಯುವ ತಂತ್ರವನ್ನು ಹೂಡುತ್ತವೆ. ಈಗ ಎಲ್ಲ ಪಕ್ಷಗಳು ತಮ್ಮದೇ ಆದ ಐಟಿ ಸೆಲ್, ಮಾಧ್ಯಮ ವಿಭಾಗಗಳನ್ನು ಹೊಂದಿರುವುದರಿಂದ ಇಂತಹ ತಂತ್ರಗಾರಿಕೆಯನ್ನು ಜಾರಿ ಗೊಳಿಸಲು ಅನುಕೂಲವೂ ಇದೆ. ಕರ್ನಾಟಕ ಕಂಡ ಸಜ್ಜನ ರಾಜಕಾರಣಿ ಎಂ.ಪಿ. ಪ್ರಕಾಶ್ ಅವರ ಮಾತೊಂದು ಇಲ್ಲಿ ಉಲ್ಲೇಖನೀಯವೆಂದೆನಿಸುತ್ತದೆ. ‘‘ಜನರು ರಾಜಕಾರಣಿಗಳನ್ನು ಕೆಟ್ಟವರೆಂದು ದೂರುತ್ತಾರೆ. ಆದರೆ ಅವರೆಲ್ಲ ಇದೇ ಸಮಾಜದಿಂದ ಬಂದವರೆಂಬುದನ್ನು ಮರೆಯುತ್ತಾರೆ.’’ ನಮ್ಮ ಸಮಾಜ ಹೇಗಿದೆಯೋ ಅದೇ ರೀತಿ ಅವರನ್ನು ಪ್ರತಿನಿಧಿಸುವ ನಾಯಕರೂ ಇರುತ್ತಾರೆ ಎಂಬುದು ಅವರ ಮಾತಿನ ಇಂಗಿತ. ಇದು ಆತ್ಮಾವಲೋಕನಕ್ಕೆ ಹಚ್ಚುವಂತಹ ಮಾತು. ಇಂದಿನ ಪರಿಸ್ಥಿತಿಯಲ್ಲಿ ಎಲ್ಲ ರೀತಿಯ ಪೂರ್ವಾಗ್ರಹಗಳಿಂದ ಮುಕ್ತವಾದ ಆತ್ಮಾವಲೋಕನ ಅತ್ಯಂತ ಅಗತ್ಯವಾಗಿ ಸಾಧ್ಯವಾಗಬೇಕು.