ತಾಳಮೇಳವಿಲ್ಲದ ಶಿಕ್ಷಣ ಮತ್ತು ಉದ್ಯೋಗ ಮಾರುಕಟ್ಟೆ ಹಾಗೂ ಯುವಜನತೆಯ ಆಕ್ರೋಶ
ಶಿಕ್ಷಣ ಮತ್ತು ಉದ್ಯೋಗ ಎನ್ನುವುದು ಯುವಜನತೆಗೆ ಮರೀಚಿಕೆಯಂತಾಗಿದೆ ಅಥವಾ ಶಿಕ್ಷಣ ಪಡೆದಷ್ಟೂ ಉದ್ಯೋಗ ದೊರಕುವ ಸಾಧ್ಯತೆಗಳು ಕಡಿಮೆ ಎನ್ನುವ ಪರಿಸ್ಥಿತಿಯಿದೆ. ತಾವು ವಂಚನೆಗೆ ಒಳಗಾಗಿದ್ದೇವೆ ಎಂದು ಯುವಜನರು ಆಕ್ರೋಶಗೊಂಡಿದ್ದಾರೆ. ಅದು ಇಂದು ಬೀದಿಗಳಲ್ಲಿ ಪ್ರತಿಭಟನೆ ಸ್ವರೂಪ ಪಡೆದುಕೊಂಡಿದೆ.
‘ಭಾರತೀಯ ಯುವಜನರು ಏನು ಓದಲು ಬಯಸುತ್ತಾರೆ?’ ಎಂದು ಯಾರಾದರೂ ಪ್ರಶ್ನಿಸಿದರೆ ‘ಇಲ್ಲಿನ ಶಿಕ್ಷಣದ ಸಾರ್ವಜನಿಕ ನೀತಿಗಳೇನು? ವಿವಿಧ ಜ್ಞಾನಶಾಖೆಗಳ ವ್ಯಾಸಂಗ ಕ್ರಮವೇನು?(ಪೆಡಗಾಜಿ), ವಿಶ್ವವಿದ್ಯಾನಿಲಯದಿಂದ ಪಡೆದ ಪದವಿಯು ವಿದ್ಯಾರ್ಥಿಗಳನ್ನು ವಾಸ್ತವವಾಗಿ ಯಾವ ಅವಕಾಶಗಳತ್ತ ಕರೆದೊಯ್ಯುತ್ತದೆ?’ ಎಂದು ಮರು ಪ್ರಶ್ನಿಸಬೇಕಾಗುತ್ತದೆ. ದುರಂತವೆಂದರೆ ಆಡಳಿತ ನಡೆಸುತ್ತಿರುವ ಯಾವುದೇ ಸರಕಾರಕ್ಕೂ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಪ್ರಭುತ್ವಕ್ಕೆ ಸಾರ್ವಜನಿಕ ಶಿಕ್ಷಣದ ಸಬಲೀಕರಣದ ಕುರಿತು ಕಿಂಚಿತ್ತೂ ಆಸಕ್ತಿ ಇಲ್ಲ. ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಮತ್ತು ಆ ಮೂಲಕ ಮಾರುಕಟ್ಟೆ ಸರಕಾಗಿಸುವ ನೀತಿಯನ್ನು ರೂಪಿಸುತ್ತಿರುವ ಸರಕಾರಗಳಿಂದ ಯಾವುದೇ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ. ಶಿಕ್ಷಣದಲ್ಲಿ ಅಗಾಧ ಪ್ರಮಾಣದ ಅಸಮಾನತೆ ಸೃಷ್ಟಿಸಿರುವ ಪ್ರಭುತ್ವವು ಈ ಮೂಲಕ ವಂಚಿತ ಸಮುದಾಯದ ಯುವಜನತೆಯನ್ನು ಬೀದಿಗೆ ತಂದು ನಿಲ್ಲಿಸಿದೆ. ಈ ಕುರಿತು ಸಾಕಷ್ಟು ಚರ್ಚೆಗಳಾಗಿವೆ.
ನವಉದಾರೀಕರಣದ ಫಲವಾಗಿ ಪದವಿ ವ್ಯಾಸಂಗದ ಸಂದರ್ಭದಲ್ಲಿ ಎಲ್ಲಾ ವಿಷಯಗಳಿಗೂ ಸಮಾನ ಪ್ರಾಧಾನ್ಯ ದೊರಕುವುದಿಲ್ಲ. ಜಾಗತಿಕ ಮಾರುಕಟ್ಟೆಯ ಬೇಡಿಕೆ ಆಧರಿಸಿ ನಿರ್ದಿಷ್ಟ ವಿಷಯಗಳಿಗೆ ಮಾತ್ರ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ. ಈ ಮಾರುಕಟ್ಟೆ ಏರಿಳಿತವನ್ನು ಆಧರಿಸಿ ಶಿಕ್ಷಣ ನೀತಿ ರೂಪಿಸಿದ ಇಲ್ಲಿನ ಸರಕಾರಗಳು ಕಳೆದ ಮೂರು ದಶಕಗಳಿಂದ ಮಾನವಿಕ ವಿಭಾಗಗಳನ್ನು ನಿರ್ಲಕ್ಷಿಸಿ ಸ್ಟೆಮ್(ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ವೈದ್ಯಕೀಯ) ವಲಯಕ್ಕೆ ಪ್ರಾಮುಖ್ಯ ನೀಡುತ್ತಾ ಬಂದಿದೆ. ಇದರ ಫಲವಾಗಿ ಭಾಷೆ, ಸಾಹಿತ್ಯ, ಇತಿಹಾಸ, ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ ಮಾನವಶಾಸ್ತ್ರ, ರಂಗಭೂಮಿ ಮುಂತಾದ ವಿಷಯಗಳಿಗೆ ಪ್ರಾಧಾನ್ಯ ಕಡಿಮೆಯಾಗಿದೆ. ಈ ವಿಷಯಗಳು ಕೇವಲ ಜ್ಞಾನ ಕಲಿಕೆಗೆ ಮಾತ್ರ ಸೀಮಿತಗೊಂಡು ಉದ್ಯೋಗ ಸಾಧ್ಯತೆಗಳು ಮರೀಚಿಕೆಯಾಗಿದೆ. ವಂಚಿತ ಸಮುದಾಯಗಳ ಮೊದಲ ತಲೆಮಾರು ಮಾನವಿಕ ವಿಭಾಗದಲ್ಲಿ ವ್ಯಾಸಂಗ ಮುಗಿಸಿ ಪಧವೀಧರರಾಗುವ ಹೊತ್ತಿಗೆ ಅಲ್ಲಿನ ವಿಷಯಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಯಾವುದೇ ಮೌಲ್ಯವಿಲ್ಲದಂತಹ ವಾತಾವರಣ ಸೃಷ್ಟಿಯಾಗಿತ್ತು. ಶಿಕ್ಷಣ ಪಡೆದರೂ ನಿರುದ್ಯೋಗಿಗಳಾಗಿ ಉಳಿದುಕೊಂಡರು. ಸ್ಟೆಮ್ ವಿಭಾಗಗಳಲ್ಲಿ ಮುಂದುವರಿದ ಜಾತಿಗಳ, ಮಧ್ಯಮವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪದವಿ ಪಡೆದುಕೊಂಡು ಉದ್ಯೋಗವನ್ನೂ ಗಳಿಸಿದರು. ಇಂತಹ ಅಸಮಾನತೆಯನ್ನು ಸೃಷ್ಟಿಸಿದ ಪ್ರಭುತ್ವದ ಈ ವಿಧ್ವಂಸಕ ಶಿಕ್ಷಣ ನೀತಿಯಿಂದಾಗಿ ಯುವಜನತೆಯಲ್ಲಿ ಭವಿಷ್ಯದ ಕುರಿತು ಅನಿಶ್ಚಿತತೆ, ಆಕ್ರೋಶ, ಆತಂಕ ತುಂಬಿಕೊಂಡಿದೆ. ಜಂತರ್ ಮಂತರ್‌ನ ಪ್ರತಿಭಟನೆ ಅದರ ಒಂದು ಝಲಕ್.
ಆದರೆ ಈ ರೀತಿಯಾಗಿ ವಿಷಯವೊಂದಕ್ಕೆ ದಿಢೀರನೆ ಡಿಮ್ಯಾಂಡ್ ಸೃಷ್ಟಿಯಾಗುವ ಪ್ರಕ್ರಿಯೆಯು ಸಹ ನಿರೀಕ್ಷಿತ ಫಲ ಕೊಡುವುದಿಲ್ಲ. ಉದಾಹರಣೆಗೆ ಸದ್ಯದ ಸಂದರ್ಭದಲ್ಲಿ ವಾಣಿಜ್ಯ (ಕಾಮರ್ಸ್) ವಿಷಯಕ್ಕೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಈ ವ್ಯಾಸಂಗವು ಚಾರ್ಟರ್ಡ್ ಅಕೌಂಟೆನ್ಸಿ, ಬ್ಯಾಂಕಿಂಗ್, ಹಣಕಾಸು ಅಥವಾ ವ್ಯವಹಾರ ನಿರ್ವಹಣೆ ಕ್ಷೇತ್ರಗಳಲ್ಲಿ ವೃತ್ತಿಜೀವನಕ್ಕೆ ಸಿದ್ಧಗೊಳಿಸುತ್ತದೆ. ಆ ವಲಯಗಳಲ್ಲಿ ಉದ್ಯೋಗದ ಆಯ್ಕೆಗಳನ್ನು ತೆರೆದಿಡುತ್ತದೆ ಎನ್ನುವ ಕಾರಣಕ್ಕೆ ಜನಪ್ರಿಯತೆ ಪಡೆದುಕೊಂಡಿದೆ. ಈ ಡಿಮ್ಯಾಂಡ್ ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಹೆಚ್ಚೂ ಕಡಿಮೆ ಒಂದೇ ತೆರನಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರವೂ ಸಂಕೀರ್ಣವಾಗಿದೆ. ಇದರ ಫಲವಾಗಿ ವಾಣಿಜ್ಯ, ಬಿಬಿಎ, ಎಂಬಿಎ, ಸಿಎ ಕೋರ್ಸ್‌ಗಳ ಪ್ರಾಧಾನ್ಯ ಇರುವ ಕಾಲೇಜುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ ವ್ಯಾಸಂಗಕ್ರಮದ ಗುಣಮಟ್ಟ ಕಡೆಗಣಿಸಲ್ಪಟ್ಟಿದೆ. ಈ ವಾಣಿಜ್ಯ ಮತ್ತು ಸಂಬಂಧಿತ ವಿಷಯವನ್ನು ಆಯ್ಕೆ ಮಾಡಿಕೊಂಡು ಪದವೀಧರರಾದ ನಂತರ ಉದ್ಯೋಗದ ಸಾಧ್ಯತೆಗಳು ಆಯಾ ರಾಜ್ಯಗಳು ಅಳವಡಿಸಿಕೊಳ್ಳುವ ಆರ್ಥಿಕ ವ್ಯವಸ್ಥೆ ಮೇಲೆ ಅವಲಂಬಿತವಾಗಿರುತ್ತದೆ. ಸ್ಥಳೀಯ ಆರ್ಥಿಕತೆಯ ಸ್ವರೂಪವು ಈ ವಾಣಿಜ್ಯ ಸಂಬಂಧಿತ ವ್ಯಾಸಂಗಕ್ಕಿಂತ ಭಿನ್ನವಾಗಿದ್ದರೆ ಉದ್ಯೋಗದ ಅವಕಾಶಗಳೂ ವಿಭಿನ್ನವಾಗುತ್ತವೆ ಅಥವಾ ನಿರೀಕ್ಷಿಸಿದ ಉದ್ಯೋಗ ಸೃಷ್ಟಿಯಾಗುವುದಿಲ್ಲ.
ಇದನ್ನು ವಿಸ್ತರಿಸುವುದಾದರೆ ದಕ್ಷಿಣ ರಾಜ್ಯಗಳು ಸ್ಟೆಮ್ ವಿಭಾಗಗಳ ಉದ್ಯೋಗ ಮಾರುಕಟ್ಟೆಯಲ್ಲಿ ಉತ್ಪಾದನಾ, ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿವೆ. ಅಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಅನ್ವಯಿಕ ವಿಜ್ಞಾನಗಳಿಗೆ ಹೆಚ್ಚಿನ ಪ್ರಾಮುಖ್ಯ ಇದೆ. ಅಂದರೆ ಸ್ಥಳೀಯ ಆರ್ಥಿಕತೆಯು ಆ ಕ್ಷೇತ್ರಗಳಲ್ಲಿ ಉದ್ಯೋಗದ ಸ್ಪಷ್ಟ ಮಾರ್ಗಗಳನ್ನು ಒದಗಿಸುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ.
ಇನ್ನೊಂದು ಆಯಾಮದಲ್ಲಿ ವಿಶ್ಲೇಷಿಸುವುದಾದರೆ ಸಾರ್ವಜನಿಕ ನೀತಿ, ಕಾನೂನು, ಪತ್ರಿಕೋದ್ಯಮ, ಸಂಶೋಧನೆ ಅಥವಾ ನಾಗರಿಕ ಸೇವೆಗಳಲ್ಲಿ ಉದ್ಯೋಗ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಮಾನವಿಕ ಶಾಸ್ತ್ರದ ಪದವಿಯು ಆ ಉದ್ಯೋಗ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ದಾರಿಯಾಗುತ್ತದೆ. ಆದರೆ ಈ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಕಡ್ಡಾಯವಾಗಿರುವುದರಿಂದ ಪದವಿ, ಸ್ನಾತಕೋತ್ತರ ವ್ಯಾಸಂಗವು ಕೇವಲ ಕಾಟಾಚಾರಕ್ಕೆ ಸೀಮಿತಗೊಂಡು ವಿದ್ಯಾರ್ಥಿಗಳು ಕೋಚಿಂಗ್ ಮಾಫಿಯಾದ ತೆಕ್ಕೆಗೆ ಸಿಲುಕಿಕೊಳ್ಳುತ್ತಾರೆ. ಇಲ್ಲಿಯೂ ಅನುಕೂಲವಂತ ಕುಟುಂಬಗಳ, ರಾಜಕೀಯವಾಗಿ ಪ್ರಭಾವಿ ವಲಯದ ಮಕ್ಕಳು ಉದ್ಯೋಗ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರೆ ಗ್ರಾಮೀಣ ಭಾಗದ ಬಡಕುಟುಂಬಗಳ ವಿದ್ಯಾರ್ಥಿಗಳು ಎಂದಿನಂತೆ ಅನುತ್ತೀರ್ಣರಾಗಿ ಖಿನ್ನತೆಗೆ ಒಳಗಾಗುತ್ತಾರೆ. ಇದು ಸರಕಾರದ ಶಿಕ್ಷಣ ನೀತಿಯ ಫಲ.
ಎನ್‌ಇಪಿಯು ಬಹುಶಿಸ್ತೀಯ ವ್ಯಾಸಂಗಕ್ರಮವನ್ನು, ಇದಕ್ಕೆ ಹೊಂದಿಕೊಳ್ಳುವ ಪಠ್ಯಕ್ರಮಗಳನ್ನು ಶಿಫಾರಸು ಮಾಡುತ್ತದೆ. ಪೂರಕವಾಗಿ ಕೌಶಲ್ಯಾಧಾರಿತ ತರಬೇತಿ ಮತ್ತು ಪ್ರಮಾಣಪತ್ರಗಳನ್ನು ಪರಿಚಯಿಸಬೇಕೆಂದು ಆಗ್ರಹಿಸುತ್ತದೆ. ಆದರೆ ಸರಕಾರದ ಜಡಗೊಂಡ, ದಿಕ್ಕಿಲ್ಲದ ನೀತಿಯಿಂದಾಗಿ ಸಾರ್ವಜನಿಕ ಶಿಕ್ಷಣವು ಇಂದಿಗೂ ಸಾಂಪ್ರದಾಯಿಕ ಮಾದರಿಯ(ಕಲಾ, ವಾಣಿಜ್ಯ, ವಿಜ್ಞಾನ ಇತ್ಯಾದಿ) ಪದವಿ ಕಾಲೇಜುಗಳ ಸ್ವರೂಪದಲ್ಲಿದೆ. ಆದರೆ ಖಾಸಗಿ ವಿವಿಗಳಲ್ಲಿ ಬಹುಶಿಸ್ತೀಯ ಮತ್ತು ಅಂತರ್‌ಶಿಸ್ತೀಯ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ವಂಚಿತ ಸಮುದಾಯದ, ಬಡಕುಟುಂಬಗಳ ವಿದ್ಯಾರ್ಥಿಗಳು ಖಾಸಗಿ ವಿವಿಗಳ ದುಬಾರಿ ಶುಲ್ಕ ಭರಿಸಲು ಸಾಧ್ಯವಿಲ್ಲದೆ ಪರಿಚಿತ ಪದವಿಗಳನ್ನು ಬೋಧಿಸುವ ಸರಕಾರಿ ಕಾಲೇಜುಗಳನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ. ಕಡೆಗೆ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಉಳಿದುಕೊಳ್ಳುತ್ತಾರೆ. ಖಾಸಗಿ ವಿವಿಗಳಲ್ಲಿ ದುಬಾರಿ ಶುಲ್ಕ ತೆತ್ತು ಬಹುಶಿಸ್ತೀಯ, ಅಂತರ್‌ಶಿಸ್ತೀಯ ಪದವಿ ಪಡೆಯುವ ಅನುಕೂಲವಂತ ಕುಟುಂಬದ ವಿದ್ಯಾರ್ಥಿಗಳು ಉತ್ತಮ ವೇತನದ ಉದ್ಯೋಗ ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದು ಒಂದು ಟ್ರೆಂಡ್ ಅಲ್ಲ ಮತ್ತು ಇದು ಹೇಳಿದಷ್ಟು ಸರಳವಾಗಿಲ್ಲ ಎನ್ನುವುದು ನಿಜವಾದರೂ ಸಹ ಸದ್ಯದ ವಾಸ್ತವ. 2025ರ ಭಾರತ ಕೌಶಲ್ಯ ವರದಿಯ ಪ್ರಕಾರ ಪದವೀಧರರಿಗೆ ಉದ್ಯೋಗ ಪಡೆದುಕೊಳ್ಳಲು ಅಗತ್ಯವಿರುವ ಕೌಶಲ್ಯ ತರಬೇತಿ ಇಲ್ಲದಿರುವುದು ನಿರುದ್ಯೋಗಕ್ಕೆ ಮಖ್ಯ ಕಾರಣ ಎಂದು ಹೇಳಲಾಗಿದೆ.
ಕೊನೆಯಿರದ ಟಿಪ್ಪಣಿಗಳು
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ದೇಶದಲ್ಲಿ ಪ್ರಸ್ತುತ ಉನ್ನತ ಶಿಕ್ಷಣದಲ್ಲಿ ಶೇ.30ರಷ್ಟು ಪ್ರವೇಶಾತಿ(ಜಿಇಆರ್) ಸಾಧಿಸಿದ್ದೇವೆ ಎಂದು ಕೇಂದ್ರ ಶಿಕ್ಷಣ ಇಲಾಖೆ ಬೀಗುತ್ತಿದೆ. ಆದರೆ ಪದವಿ ಪಡೆದುಕೊಂಡ ನಂತರ ಉದ್ಯೋಗ ಅವಕಾಶಗಳ ಕೊರತೆಯಿಂದ ಬೇಸತ್ತ ಯುವಜನತೆ ಹತಾಶರಾಗಿದ್ದಾರೆ. ಇದರ ಕಾರಣದಿಂದ ಕಳೆದ ತಿಂಗಳು ಬೀದಿಗಿಳಿದ ಲಕ್ಷಾಂತರ ಯುವ ಭಾರತೀಯರ ಪ್ರತಿಭಟನೆಯ ತಾತ್ವಿಕತೆ ಹಾಗೂ ತಾತ್ಪರ್ಯ ಸರಕಾರಗಳಿಗೆ ಮನವರಿಕೆಯಾದಂತಿಲ್ಲ. ಹೀಗಾಗಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ವಿರುದ್ಧದ ಆಕ್ರೋಶದಿಂದ ಆರಂಭವಾದ ಜೆನ್ ಝಿಗಳ ಪ್ರತಿಭಟನೆ ಅಂತರ್ಯದಲ್ಲಿ ತಾವು ಪಡೆದುಕೊಂಡ ಶಿಕ್ಷಣಕ್ಕೂ ಉದ್ಯೋಗ ಮಾರುಕಟ್ಟೆಗೂ ಯಾವುದೇ ಸಂಬಂಧವಿಲ್ಲದ ವ್ಯವಸ್ಥೆಯ ವಿರುದ್ಧ ಆಕ್ರೋಶವಾಗಿತ್ತು. ಇದು ಕೆಲವೇ ವಾರಗಳಲ್ಲಿ ದೇಶದ ರಾಜಕೀಯ ನಾಯಕತ್ವ ತಮ್ಮನ್ನು ಕಡೆಗಣಿಸಿದೆ ಎಂದು ಭಾವಿಸುವ ಯುವಜನತೆಯ ವ್ಯಾಪಕ ಅಸಮಾಧಾನದ ಅಭಿವ್ಯಕ್ತಿಯಾಗಿ ಮಾರ್ಪಟ್ಟವು.
ಸಿಎಂಐಇ(ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ)ಯ ಕಾರ್ಯ ನಿರ್ವಾಹಕ ಮಹೇಶ್ ವ್ಯಾಸ್ ‘‘ಭಾರತದ ಆರ್ಥಿಕ ಬೆಳವಣಿಗೆ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ, ತನ್ನ ಮುಂದೆ ಲಭ್ಯವಿದ್ದ ಜನಸಂಖ್ಯೆ ಲಾಭವನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಯುವ ಪದವೀಧರರಿಗೆ ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಒದಗಿಸುವಲ್ಲಿಯೂ ಅದು ವಿಫಲವಾಗಿದೆ’’ ಎಂದು ಹೇಳುತ್ತಾರೆ. ಸಿಎಂಐಇ ದತ್ತಾಂಶದ ಪ್ರಕಾರ ಕಳೆದ ಹಣಕಾಸು ವರ್ಷದಲ್ಲಿ ಭಾರತದ ಒಟ್ಟಾರೆ ನಿರುದ್ಯೋಗ ಪ್ರಮಾಣ ಶೇ.6.9 ಆಗಿದ್ದರೆ, ಪದವೀಧರರ ನಿರುದ್ಯೋಗ ಪ್ರಮಾಣ ಶೇ.14.5 ಆಗಿತ್ತು. 20ರಿಂದ 24 ವರ್ಷದ ಯುವಜನತೆಯಲ್ಲಿ ಶೇ.36ರಷ್ಟು ನಿರುದ್ಯೋಗವಿದೆ. 2010ರಿಂದಲೇ ಉನ್ತತ ಶಿಕ್ಷಣ ಮತ್ತು ಉದ್ಯೋಗ ಮಾರುಕಟ್ಟೆ ನಡುವೆ ಯಾವುದೇ ತಾಳಮೇಳವಿಲ್ಲದ ವಾತಾವರಣ ಸೃಷ್ಟಿಯಾಗಿತ್ತು. ಗಾಯದ ಮೇಲೆ ಬರೆ ಇಟ್ಟಂತೆ 2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಒಂದೇ ರಾತ್ರಿ ಚಲಾವಣೆಯಿಂದ ಹಿಂಪಡೆಯುವ ನಿರ್ಧಾರದಿಂದ ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ತೀವ್ರ ಹಿನ್ನಡೆಯಾಗಿ ವಿಶಾಲವಾದ ಅನೌಪಚಾರಿಕ ಆರ್ಥಿಕತೆಯನ್ನು ತೀವ್ರವಾಗಿ ಹಾನಿಗೊಳಿಸಿತು. ನಂತರ ಸಂಕೀರ್ಣವಾದ ಜಿಎಸ್‌ಟಿ ವ್ಯವಸ್ಥೆಯನ್ನು ತುರ್ತಾಗಿ ಜಾರಿಗೆ ತರಲಾಯಿತು. ಇದರಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಹಾನಿಯಾಯಿತು. ಅದಾದ ಬಳಿಕ ಕೊರೋನ ಸಾಂಕ್ರಾಮಿಕದ ಸಂದರ್ಭದಲ್ಲಿ ಮೋದಿಯವರು ಯಾವುದೇ ಮುನ್ನೆಚ್ಚರಿಕೆ, ಮುನ್ಸೂಚನೆ ಇಲ್ಲದೆ ದೇಶವ್ಯಾಪಿ ಲಾಕ್‌ಡೌನ್ ಹೇರಿದರು. ಇದರಿಂದ ನಗರಗಳಿಗೆ ವಲಸೆ ಬಂದಿದ್ದ ಕೂಲಿ ಕಾರ್ಮಿಕರು ತಮ್ಮ ಗ್ರಾಮೀಣ ಪ್ರದೇಶಗಳಿಗೆ ರಿವರ್ಸ್ ವಲಸೆ ಹೋಗುವಂತಹ ದುರಂತ ಸೃಷ್ಟಿಯಾಯಿತು. ಈ ಆರ್ಥಿಕ ತಲ್ಲಣಗಳಿಗೂ ಯುವಜನತೆಯ ನಿರುದ್ಯೋಗಕ್ಕೂ ನೇರವಾದ ಸಂಬಂಧವಿದೆ.
2014ರಲ್ಲಿ ಅಧಿಕಾರಕ್ಕೆ ಏರಿದ ದಿನದಿಂದ ಮೋದಿಯವರು ಕೌಶಲ್ಯ ತರಬೇತಿ ಕುರಿತು ಸಾಕಷ್ಟು ಪ್ರಚಾರ ಮಾಡಿದ್ದರು ಮತ್ತು ಮಾಡುತ್ತಿದ್ದಾರೆ. ಅವರ ಮೊದಲ ಅವಧಿಯಲ್ಲಿ ಜಾರಿಗೊಂಡ ಪಿಎಂಕೆವಿವೈ(ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ) ಮೂಲಕ 2015ರಿಂದ 2025ರ ಅವಧಿಯಲ್ಲಿ ಸುಮಾರು 1.40 ಕೋಟಿ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. 2015-2022ರ ಅವಧಿಯಲ್ಲಿ ಕೌಶಲ್ಯ ತರಬೇತಿ ಯೋಜನೆಗೆ ರೂ. 14,450 ಕೋಟಿ ಮೊತ್ತ ಮೀಸಲಿಡುವುದಾಗಿ ಪ್ರಕಟಿಸಿದರು. ಅದರಲ್ಲಿ ರೂ. 10,194 ಕೋಟಿ ಹಂಚಿಕೆ ಮಾಡಿದರು. ಇದರಲ್ಲಿ ರೂ. 9,261 ಕೋಟಿ ಬಳಕೆಯಾಗಿದೆ. ಈ ಯೋಜನೆಯಲ್ಲಿ ಕೌಶಲ್ಯ ತರಬೇತಿ ಪಡೆದುಕೊಂಡು ಖಾಯಂ ಉದ್ಯೋಗ ಗಳಿಸಿದವರ ಪ್ರಮಾಣ ಶೇ.5ಕ್ಕಿಂತಲೂ ಕಡಿಮೆ ಇದೆ. ಶೇ.40ರಷ್ಟು ಜನಸಂಖ್ಯೆ ಅನೌಪಚಾರಿಕ, ಅಸಂಘಟಿತ ವಲಯದಲ್ಲಿದೆ. ಇದು ಪರೋಕ್ಷವಾಗಿ ನಿರುದ್ಯೋಗ ಎಂದೇ ಪರಿಗಣಿಸಲ್ಪಡುತ್ತದೆ. ಈ ಎಲ್ಲಾ ಕಾರಣಗಳಿಂದ ಕೌಶಲ್ಯ ತರಬೇತಿ ಯೋಜನೆ ನಿರೀಕ್ಷಿತ ಯಶಸ್ಸು ಕಾಣದೆ ಸಂಪೂರ್ಣವಾಗಿ ವಿಫಲಗೊಂಡಿದೆ. ಉದ್ಯೋಗ ಸೃಷ್ಟಿಯ ಕೊರತೆ, ಕಳಪೆ ತರಬೇತಿ ಗುಣಮಟ್ಟ ಮತ್ತು ಉದ್ಯಮಗಳ ಅವಶ್ಯಕತೆ ಹಾಗೂ ತರಬೇತಿ ನಡುವಿನ ಅಂತರವೇ ಪ್ರಮುಖ ಕಾರಣಗಳಾಗಿವೆ. ಇವು ಕೇವಲ ಪ್ರಮಾಣಪತ್ರಗಳ ಹಂಚಿಕೆಗೆ ಸೀಮಿತವಾಗಿವೆ. ಮುಖ್ಯವಾಗಿ
ಉದ್ಯೋಗಾವಕಾಶಗಳ ಕೊರತೆ: ತರಬೇತಿ ಪಡೆದ ಶೇ.70ಕ್ಕೂ ಹೆಚ್ಚು ಯುವಕ/ಯುವತಿಯರಿಗೆ ಸರಿಯಾದ ಉದ್ಯೋಗ ಅಥವಾ ನಿರೀಕ್ಷಿತ ವೇತನ ಸಿಗುತ್ತಿಲ್ಲ.
ಉದ್ಯಮಗಳ ಸಹಭಾಗಿತ್ವದ ಕೊರತೆ: ಉದ್ಯಮಗಳಿಗೆ ಬೇಕಾದ ನೈಜ ಕೌಶಲ್ಯಗಳ ಬಗ್ಗೆ ಪಠ್ಯಕ್ರಮ ರೂಪಿಸುವಲ್ಲಿ ಕಂಪೆನಿಗಳ ದೊಡ್ಡ ಮಟ್ಟದ ಪಾಲ್ಗೊಳ್ಳುವಿಕೆ ಇಲ್ಲ.
ಪ್ರಮಾಣಪತ್ರಗಳಿಗೆ ಮಾನ್ಯತೆ ಇಲ್ಲ: ಅನೇಕ ಉದ್ಯೋಗದಾತರು ಸರಕಾರಿ ಕೌಶಲ್ಯ ಪ್ರಮಾಣಪತ್ರಗಳನ್ನು ನೇಮಕಾತಿಗೆ ಗಂಭೀರವಾಗಿ ಪರಿಗಣಿಸುವುದಿಲ್ಲ.
ಭ್ರಷ್ಟಾಚಾರ ಮತ್ತು ದುರ್ಬಳಕೆ: ತರಬೇತಿ ಕೇಂದ್ರಗಳಲ್ಲಿ ನಕಲಿ ದಾಖಲೆ ಸೃಷ್ಟಿ ಹಾಗೂ ಸೌಲಭ್ಯಗಳ ದೊಡ್ಡ ಮಟ್ಟದ ಅವ್ಯವಹಾರಗಳು ವರದಿಯಾಗಿವೆ.
ಮಾರ್ಗಸೂಚಿ ಹಾಗೂ ಮೇಲ್ವಿಚಾರಣೆಯ ಕೊರತೆ: ಯೋಜನೆಗಳ ಪ್ರಗತಿಯನ್ನು ವೈಜ್ಞಾನಿಕವಾಗಿ ಮತ್ತು ನಿಖರವಾಗಿ ಟ್ರ್ಯಾಕ್ ಮಾಡಲು ಬಲವಾದ ವ್ಯವಸ್ಥೆ ಇಲ್ಲದಿರುವುದು
ಔಪಚಾರಿಕ ತರಬೇತಿಯ ಸೀಮಿತ ವ್ಯಾಪ್ತಿ: ಭಾರತದ ಕಾರ್ಮಿಕ ವರ್ಗದಲ್ಲಿ ಕೇವಲ ಸುಮಾರು ಶೇ.4.1ರಷ್ಟು ಜನರು ಮಾತ್ರ ಔಪಚಾರಿಕ ವೃತ್ತಿಪರ ತರಬೇತಿ ಪಡೆದಿದ್ದಾರೆ. ಒಂದು ದಶಕದ ಹಿಂದೆ ಇದು ಸುಮಾರು ಶೇ.2ರಷ್ಟಿತ್ತು. ಅಂದರೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ, ವೃತ್ತಿಪರ ತರಬೇತಿ ವ್ಯಾಪಕವಾಗಿ ಲಭ್ಯವಿರುವ ಒಇಸಿಡಿ ದೇಶಗಳ ಮಟ್ಟಕ್ಕೆ ಹೋಲಿಸಿದರೆ ಇದು ಬಹಳ ಕಡಿಮೆ.
ಸಿಎಜಿ ವರದಿಯ ಪ್ರಕಾರ ಈ ಕೌಶಲ್ಯ ತರಬೇತಿ ಯೋಜನೆಯಲ್ಲಿ 10,000 ಕೋಟಿ ಮೊತ್ತದ ಭ್ರಷ್ಟಾಚಾರದ ಹಗರಣ ನಡೆದಿದೆ.
ಒಟ್ಟಾರೆ ಶಿಕ್ಷಣ ಮತ್ತು ಉದ್ಯೋಗ ಎನ್ನುವುದು ಯುವಜನತೆಗೆ ಮರೀಚಿಕೆಯಂತಾಗಿದೆ ಅಥವಾ ಶಿಕ್ಷಣ ಪಡೆದಷ್ಟೂ ಉದ್ಯೋಗ ದೊರಕುವ ಸಾಧ್ಯತೆಗಳು ಕಡಿಮೆ ಎನ್ನುವ ಪರಿಸ್ಥಿತಿಯಿದೆ. ತಾವು ವಂಚನೆಗೆ ಒಳಗಾಗಿದ್ದೇವೆ ಎಂದು ಯುವಜನರು ಆಕ್ರೋಶಗೊಂಡಿದ್ದಾರೆ. ಅದು ಇಂದು ಬೀದಿಗಳಲ್ಲಿ ಪ್ರತಿಭಟನೆ ಸ್ವರೂಪ ಪಡೆದುಕೊಂಡಿದೆ. ಇದರ ತೀವ್ರತೆ ಯಾವ ರೀತಿಯಲ್ಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ.