ಎಎಸ್‌ಡಿಡಿಒ ಪಟ್ಟಿ ಪ್ರಕಟಣೆಯಲ್ಲೂ ಚುನಾವಣಾ ಆಯೋಗದ ಎಡವಟ್ಟು?
ಪಂಚಾಯತ್, ಸ್ಥಳೀಯ ಸಂಸ್ಥೆಗಳಲ್ಲಿ ಎಎಸ್‌ಡಿಡಿಒ ಪಟ್ಟಿ ಪ್ರಕಟಿಸಲು ಸೂಚನೆ
ಬೆಂಗಳೂರು, ಆ.13: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್)ಪ್ರಕ್ರಿಯೆಯಲ್ಲಿ ಮತದಾರರ ಹೆಸರನ್ನು ಎಎಸ್‌ಡಿಡಿಒ ಪಟ್ಟಿಗೆ ಸೇರಿಸಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಚುನಾವಣಾ ಆಯೋಗ ಮತ್ತೊಂದು ಎಡವಟ್ಟಿನ ಆರೋಪ ಕೇಳಿಬಂದಿದೆ.
ಆ.12ರಂದು ಚನಾವಣಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು, ಎಎಸ್‌ಡಿಡಿಒ ಪಟ್ಟಿಯನ್ನು ಎಲ್ಲ ಬೂತ್ ಮಟ್ಟದ ಅಧಿಕಾರಿಗಳಿಗೆ, ಇಆರ್‌ಒ ಮತ್ತು ಎಲ್ಲ ನೋಂದಾಯಿತ ರಾಜಕೀಯ ಪಕ್ಷಗಳ ಕಚೇರಿಗಳಿಗೆ ತಲುಪಿಸಲಾಗಿದೆ. ಅಲ್ಲದೆ, ಪಟ್ಟಿಯನ್ನು ಪಂಚಾಯತ್ ಭವನಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದರು.
ಆದರೆ, ಈ ಹೇಳಿಕೆಯ ಬೆನ್ನಲ್ಲೇ ನಾಗರಿಕ ಮತಕಾವಲು ಸಮಿತಿ ಮತ್ತು ಇತರ ಸಂಘಟನೆಗಳು ಪರಿಶೀಲಿಸಿದ ಬೆಂಗಳೂರಿನ ಪದ್ಮನಾಭನಗರ, ಶಾಂತಿನಗರ, ತುಮಕೂರು, ಹಾಸನ, ಚಿಕ್ಕಮಗಳೂರು, ರಾಯಚೂರು ಸಹಿತ ಇನ್ನಿತರ ಪ್ರದೇಶಗಳಲ್ಲಿನ ನೆಲಮಟ್ಟದ ಪರಿಶೀಲನೆಯಲ್ಲಿ ‘ಇದುವರೆಗೂ ಯಾವುದೇ ಪಂಚಾಯತ್‌ಗಳಲ್ಲಾಗಲಿ, ನಗರ ಸ್ಥಳೀಯ ಸಂಸ್ಥೆಗಳಲ್ಲಾಗಲಿ ಎಎಸ್‌ಡಿಡಿಒ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿರುವುದು ಕಂಡುಬಂದಿಲ್ಲ’ ಎಂಬ ಮಾಹಿತಿ ಲಭ್ಯವಾಗಿದೆ. ಇದು ಚುನಾವಣಾ ಆಯೋಗದ ಅಧಿಕೃತ ಹೇಳಿಕೆ ಮತ್ತು ನೆಲಮಟ್ಟದ ಪರಿಶೀಲನೆಯಲ್ಲಿ ಕಂಡುಬಂದ ಸ್ಥಿತಿಯ ನಡುವೆ ವ್ಯತ್ಯಾಸವಿರುವುದನ್ನು ಸೂಚಿಸುತ್ತದೆ.
ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ತಮ್ಮ ಹೆಸರು ಏಕೆ ಆ ಪಟ್ಟಿಗೆ ಸೇರಿದೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ವಿಶೇಷವಾಗಿ, ಶಾಶ್ವತವಾಗಿ ಅದೇ ವಿಳಾಸದಲ್ಲಿ ವಾಸಿಸುತ್ತಿರುವ ಹೆಸರುಗಳನ್ನೇ ‘ಶಾಶ್ವತ ಸ್ಥಳಾಂತರ’, ‘ಗೈರು’ ಅಥವಾ ಇತರ ಕಾರಣಗಳಡಿ ಎಎಸ್‌ಡಿಡಿಒ ಪಟ್ಟಿಗೆ ಸೇರಿಸಿರುವ ದೂರುಗಳು ಈಗಾಗಲೇ ಸಾಕಷ್ಟು ಕೇಳಿಬಂದಿವೆ. ಇಂತಹ ಸಂದರ್ಭದಲ್ಲಿ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಕೇವಲ ಆಡಳಿತಾತ್ಮಕ ಕ್ರಮ ಮಾತ್ರವಲ್ಲ; ಮತದಾರರಿಗೆ ತಮ್ಮ ಹೆಸರು ಪರಿಶೀಲಿಸಿಕೊಳ್ಳಲು ಮತ್ತು ತಪ್ಪಿದ್ದರೆ ಆಕ್ಷೇಪ ಸಲ್ಲಿಸಲು ಇರುವ ಮೂಲಭೂತ ಅವಕಾಶ.
ಆದರೆ ಪಂಚಾಯತ್ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಪಟ್ಟಿ ಸಾರ್ವಜನಿಕವಾಗಿ ಲಭ್ಯವಿಲ್ಲದಿದ್ದರೆ ಸಾಮಾನ್ಯ ಮತದಾರರು ತಮ್ಮ ಹೆಸರು ಎಎಸ್‌ಡಿಡಿಒ ಪಟ್ಟಿಯಲ್ಲಿದೆಯೇ? ಇಲ್ಲವೇ? ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕು?.
ಹೇಳಿಕೆ ನೆಲಮಟ್ಟಕ್ಕೆ ತಲುಪಿಲ್ಲವೇ? :
ಅನ್ಬುಕುಮಾರ್ ಅವರು ಎಎಸ್‌ಡಿಡಿಒ ಪಟ್ಟಿಯನ್ನು ಬಿಎಲ್‌ಒಗಳಿಗೆ ತಲುಪಿಸಲಾಗಿದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಸೂಚನೆ ನೀಡಿರುವುದಕ್ಕೂ ಅದನ್ನು ವಾಸ್ತವವಾಗಿ ಪ್ರಕಟಿಸಿರುವುದಕ್ಕೂ ವ್ಯತ್ಯಾಸವಿದೆ. ಹೀಗಾಗಿ ಚುನಾವಣಾ ಆಯೋಗವೇ ‘ಎಷ್ಟು ಪಂಚಾಯತ್‌ಗಳಲ್ಲಿ ಎಎಸ್‌ಡಿಡಿಒ ಪಟ್ಟಿಯನ್ನು ಪ್ರಕಟಿಸಲಾಗಿದೆ? ಎಷ್ಟು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಟ್ಟಿ ಪ್ರಕಟವಾಗಿದೆ? ಯಾವ ದಿನಾಂಕದೊಳಗೆ ಪಟ್ಟಿ ಪ್ರಕಟಿಸಲು ಸೂಚಿಸಲಾಗಿತ್ತು? ಪಟ್ಟಿ ಪ್ರಕಟಿಸಿರುವ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆಯೇ? ಪ್ರಕಟಿಸದ ಸ್ಥಳಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ? ‘ಪಟ್ಟಿ ಪ್ರಕಟಿಸಲಾಗಿದೆ’ ಎಂಬ ಮಾಹಿತಿ ಕಾಗದದಲ್ಲೇ ಉಳಿದಿದೆಯೇ?’ ಎಂಬ ವಿಷಯದ ಕುರಿತು ಸ್ಪಷ್ಟನೆ ನೀಡಬೇಕಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಈಗಾಗಲೇ ಎಎಸ್‌ಡಿಡಿಒ ಪಟ್ಟಿಯಲ್ಲಿರುವ ಮತದಾರರಿಗೆ ತಮ್ಮ ಹೆಸರು ಮರಳಿ ಪಡೆಯುವ ಅವಕಾಶದ ಬಗ್ಗೆ ಸಮರ್ಪಕ ಮಾಹಿತಿ ತಲುಪಿಲ್ಲ. ಒಂದು ಕಡೆ ಚುನಾವಣಾ ಆಯೋಗವು ಪಾರದರ್ಶಕತೆಗಾಗಿ ಎಎಸ್‌ಡಿಡಿಒ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಸೂಚಿಸಿದ್ದಾಗಿ ಹೇಳುತ್ತಿದೆ.
ಮತ್ತೊಂದು ಕಡೆ, ನೆಲಮಟ್ಟದಲ್ಲಿ ಪರಿಶೀಲಿಸಿದಾಗ ಆ ಪಟ್ಟಿ ಕಾಣಿಸುತ್ತಿಲ್ಲ. ಹೀಗಾಗಿ ಇದುವರೆಗೂ ಚುನಾವಣಾ ಆಯೋಗ ನೀಡಿದ ಎಲ್ಲ ಸೂಚನೆಗಳು ತಳಮಟ್ಟದ ಕಟ್ಟಕಡೆಯ ಅರ್ಹ ಮತದಾರರಿಗೂ ಮಾಹಿತಿ ತಲುಪುತ್ತಿದಿಯೇ? ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ನಾಗರಿಕ ಮತಕಾವಲು ಸಮಿತಿಯ ವರದರಾಜೇಂದ್ರ ಒತ್ತಾಯಿಸಿದ್ದಾರೆ.
ಆ.12 ರಂದು ನೀಡಿದ ಸೂಚನೆಗಳು ರಾಜ್ಯದ ಪ್ರತಿಯೊಂದು ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಯಲ್ಲಿ ಜಾರಿಯಾಗಿದೆಯೇ ಎಂಬುದನ್ನು ಚುನಾವಣಾ ಆಯೋಗ ತಕ್ಷಣ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ‘ಪಟ್ಟಿ ಪ್ರಕಟಿಸಲಾಗಿದೆ’
ಎಂಬ ಅಧಿಕೃತ ಹೇಳಿಕೆ ಮತ್ತು ನೆಲಮಟ್ಟದ ವಾಸ್ತವದ ನಡುವಿನ ವ್ಯತ್ಯಾಸಕ್ಕೆ ಚುನಾವಣಾ ಆಯೋಗವೇ ಉತ್ತರ ನೀಡಬೇಕು ಎಂದು ಬೆಂಗಳೂರಿನ ಮತದಾರ ಗಜೇಂದ್ರ ಎಂಬುವರು ಒತ್ತಾಯಿಸಿದ್ದಾರೆ.
ಮತ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಸಂಬಂಧಪಟ್ಟ ಮತದಾರರಿಗೆ ಎಎಸ್‌ಡಿಡಿಒ ಪಟ್ಟಿಯಲ್ಲಿನ ತಮ್ಮ ಹೆಸರು, ಅದರ ಸ್ಥಿತಿ ಕುರಿತು ರಾಜಕೀಯ ಪಕ್ಷಗಳಿಗೆ ಕೊಟ್ಟನಂತರ ಚುನಾವಣಾ ಆಯೋಗ ತನ್ನ ಕೆಲಸ ಮುಗಿದಿದೆ ಎಂದು ಕೈಚೆಲ್ಲಿ ಕೂರುವಂತಿಲ್ಲ. ಎಸ್‌ಐಆರ್ ಪ್ರಕ್ರಿಯೆಯನ್ನು ಆಗುವಂತೆ ಮಾಡುವುದು ರಾಜಕೀಯ ಪಕ್ಷಗಳ ಕೆಲಸವಲ್ಲ. ರಾಜಕೀಯ ಪಕ್ಷಗಳು ಮಾಡಲಿ ಬಿಡಲಿ, ಅದು ಆಗುವಂತೆ ಮಾಡುವುದು ಚುನಾವಣಾ ಆಯೋಗದ ಜವಾಬ್ದಾರಿ. ಹಾಗಾಗಿ ಸಾರ್ವಜನಿಕರಿಗೆ ಪಟ್ಟಿ ಲಭ್ಯವಾಗುವಂತೆ ಸೂಚನೆ ನೀಡಿರುವುದಾದರೆ, ಅದನ್ನು ಪರಿಣಾಮಕಾರಿಯಾಗಿ ಪ್ರಕಟಿಸಲಾಗಿದೆ ಎಂಬುದನ್ನು ಖಚಿತಪಡಿಸುವ ಜವಾಬ್ದಾರಿಯು ಚುನಾವಣಾ ವ್ಯವಸ್ಥೆಯ ಮೇಲಿದೆ.
-ವರದರಾಜೇಂದ್ರ, ನಾಗರಿಕ ಮತಕಾವಲು ಸಮಿತಿ