ಯಾದಗಿರಿ ಜಿಲ್ಲಾ ಕಾಂಗ್ರೆಸ್‌ಗೆ ಸಾರಥಿ ಯಾರು?

ಹಾಲಿ ಅಧ್ಯಕ್ಷರಿಗೇ ಮತ್ತೆ ಮಣೆ? ಹೊಸ ಮುಖಕ್ಕೆ ಅವಕಾಶ? ಪೈಪೋಟಿ ತೀವ್ರ

Update: 2026-08-14 11:26 IST

ಯಾದಗಿರಿ: ಜಿಲ್ಲಾ ಕಾಂಗ್ರೆಸ್ ಘಟಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೊಸ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು ಆರಂಭಿಸಿರುವ ಬೆನ್ನಲ್ಲೇ, ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಆಕಾಂಕ್ಷಿಗಳ ಕಣ್ಣು ನೆಟ್ಟಿದೆ. ಹಾಲಿ ಅಧ್ಯಕ್ಷ ಬಸರೆಡ್ಡಿ ಅನಪುರ ಅವರನ್ನೇ ಮುಂದುವರಿಸಲಾಗುತ್ತದೆಯೇ? ಅಥವಾ ಹೊಸ ಮುಖಕ್ಕೆ ಅವಕಾಶ ಕಲ್ಪಿಸಲಾಗುತ್ತದೆಯೇ? ಎಂಬ ಚರ್ಚೆ ಪಕ್ಷದ ವಲಯದಲ್ಲಿ ತೀವ್ರಗೊಂಡಿದೆ.

ಕಾಂಗ್ರೆಸ್ ಹೈಕಮಾಂಡ್ ರೂಪಿಸಿರುವ ‘ಸಂಘಟನ್ ಸೃಜನ್ ಅಭಿಯಾನ’ದ ಭಾಗವಾಗಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಎಂಟು ಬ್ಲಾಕ್ ಘಟಕಗಳಲ್ಲಿ ಸಭೆ ನಡೆಸಿ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಪಕ್ಷದ ಉಸ್ತುವಾರಿಗಳ ಮೂಲಕ ಸಂಗ್ರಹಿಸಲಾದ ಅರ್ಜಿಗಳು ಇದೀಗ ಎಐಸಿಸಿ ಅಂಗಳ ತಲುಪಿವೆ. ಇದೇ ತಿಂಗಳ ಆಗಸ್ಟ್ 30ರೊಳಗೆ ಹೊಸ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹೊಸ ಮುಖಕ್ಕೆ ಅವಕಾಶ? :

ಹಾಲಿ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ ಅವರನ್ನು ಮುಂದುವರಿಸುವ ಸಾಧ್ಯತೆಯೂ ಇದೆ. ಮತ್ತೊಂದೆಡೆ, ಪಕ್ಷದ ಸಂಘಟನೆಯನ್ನು ಹೊಸ ಉತ್ಸಾಹದೊಂದಿಗೆ ಮುನ್ನಡೆಸಲು ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯವೂ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.

ಮುಂಬರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲೆಯ ಎಲ್ಲ ಬಣಗಳು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸುವ ಸಾಮರ್ಥ್ಯ ಹೊಂದಿರುವ ನಾಯಕನಿಗೆ ಜಿಲ್ಲಾಧ್ಯಕ್ಷ ಪಟ್ಟ ನೀಡಬೇಕು ಎಂಬ ಅಭಿಪ್ರಾಯ ಆಕಾಂಕ್ಷಿಗಳಲ್ಲಿದೆ.

ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಮ್ಮ ರಾಜಕೀಯ ಸಂಪರ್ಕ, ಪಕ್ಷದೊಳಗಿನ ಬೆಂಬಲ ಹಾಗೂ ವೈಯಕ್ತಿಕ ಪ್ರಭಾವದ ಮೂಲಕ ವರಿಷ್ಠರ ಗಮನ ಸೆಳೆಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಹಿಂದುಳಿದ ವರ್ಗದ ನಾಯಕತ್ವದ ಬೇಡಿಕೆ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪೈಕಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಅವರ ಹೆಸರು ಕೂಡ ಪ್ರಮುಖವಾಗಿ ಕೇಳಿಬರುತ್ತಿದೆ. ಕೋಲಿ ಸಮಾಜಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದಾರೆ.

ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಗಳು ಕಾಂಗ್ರೆಸ್‌ಗೆ ಸವಾಲಿನದ್ದಾಗಿವೆ. ಹೀಗಾಗಿ ಯಾದಗಿರಿ ಜಿಲ್ಲೆಯಲ್ಲಿ ಪಕ್ಷವನ್ನು ಒಗ್ಗೂಡಿಸಿ, ಪ್ರತಿಪಕ್ಷಗಳ ಚುನಾವಣಾ ಲೆಕ್ಕಾಚಾರಕ್ಕೆ ತಿರುಗೇಟು ನೀಡಬಲ್ಲ ನಾಯಕನನ್ನು ವರಿಷ್ಠರು ಆಯ್ಕೆ ಮಾಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

ಅರ್ಜಿ ಸಲ್ಲಿಸಿರುವ ಪ್ರಮುಖರು :

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಾಲಿ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮರೆಪ್ಪ ಬಿಳ್ಳಾರ, ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೇಣಿಕಕುಮಾರ ಧೋಕಾ, ಬಸವರಾಜಪ್ಪಗೌಡ ತಂಗಡಗಿ, ಭೀಮರಾಯ ಠಾಣಾಗುಂದಿ, ಜಿಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಪೂಜಾರಿ, ಕಾಡಾ ಮಾಜಿ ಅಧ್ಯಕ್ಷ ವಿಜಯಕುಮಾರ ನಿರಟ್ಟಿ, ಕೆಂಭಾವಿ ಪುರಸಭೆ ನಾಮನಿರ್ದೇಶನ ಸದಸ್ಯ ರೇವಣಸಿದ್ದಪ್ಪ, ಹುಣಸಗಿ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ ದಂಡಿನ ಸಾಹುಕಾರ, ಶಹಾಪುರ ನೀಲಕಂಠ ಬಡಿಗೇರ, ಅಲ್ಲಾ ಪಟೇಲ್, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಾಹಿಣ್ಣ ಬೋರಬಂಡಾ, ವಿಶ್ವನಾಥ ನೀಲಳ್ಳಿ, ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದಾರೆ.

ಈಗಾಗಲೇ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಅರ್ಜಿಗಳು ದೆಹಲಿಗೆ ತಲುಪಿವೆ. ನಮ್ಮ ಸಮಾಜದ ನಾಯಕತ್ವಕ್ಕೂ ಅವಕಾಶಸಿಗಬೇಕು. ಕೋಲಿ ಸಮಾಜಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದರೆ, ಪಕ್ಷಕ್ಕೂ ಹಾಗೂ ಜಿಲ್ಲೆಯ ಹಿಂದುಳಿದ ವರ್ಗಗಳಿಗೂ ಸೂಕ್ತ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ. ಅಂತಿಮ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ.

-ಶರಣಪ್ಪ ಮಾನೇಗಾರ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ

ನಮ್ಮ ಜಿಲ್ಲೆಯಿಂದ ಬಹಳಷ್ಟು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಯಾರಿಗೆ ಜವಾಬ್ದಾರಿ ನೀಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಎಂಟು ಬ್ಲಾಕ್ ಘಟಕಗಳಲ್ಲಿ ಪಕ್ಷದ ವರಿಷ್ಠರು ಅಭಿಪ್ರಾಯ ಸಂಗ್ರಹಿಸಿಕೊಂಡು ಹೋಗಿದ್ದಾರೆ. ಅಂತಿಮವಾಗಿ ಯಾರಿಗೆ ಜವಾಬ್ದಾರಿ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

-ಬಸರೆಡ್ಡಿ ಅನಪುರ, ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರಬು ಬಿ.ನಾಟೇಕಾರ್ ಯಾದಗಿರಿ

contributor

Similar News