ಚುನಾವಣಾ ಆಯೋಗದ ಹೆಸರಿನಲ್ಲಿ ಸೈಬರ್ ವಂಚನೆ

► ‘ಅರ್ಜಿ ತಿರಸ್ಕೃತ’ ಎಂದು ಹೆದರಿಸಿ ಬ್ಯಾಂಕ್ ವಿವರ ಪಡೆಯಲು ಯತ್ನ ►‘ಎಸ್‌ಐಆರ್’ನ ತರಾತುರಿಯೇ ಇದಕ್ಕೆ ಮೂಲ ಕಾರಣ: ಆರೋಪ

Update: 2026-08-14 10:11 IST

ಬೆಂಗಳೂರು : ಕರ್ನಾಟಕದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭವನ್ನೇ ದುರುಪಯೋಗಪಡಿಸಿಕೊಂಡು, ಚುನಾವಣಾ ಆಯೋಗದ ಹೆಸರಿನಲ್ಲಿಯೇ ಸಾರ್ವಜನಿಕರಿಂದ ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆ ಮಾಹಿತಿಯನ್ನು ಪಡೆಯಲು ಸೈಬರ್ ವಂಚಕರು ಮುಂದಾಗಿರುವ ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಸೈಬರ್ ವಂಚನೆಯ ಪ್ರಯತ್ನಕ್ಕೆ ಗುರಿಯಾದ ವ್ಯಕ್ತಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ‘ಅವರಿಗೆ ಮೊದಲು ಎಸ್‌ಎಂಎಸ್‌ವೊಂದನ್ನು ಕಳುಹಿಸಲಾಗಿದ್ದು, ಅವರ ಚುನಾವಣಾ ಗುರುತಿನ ಚೀಟಿ ಹಾಗೂ ಎಸ್‌ಐಆರ್ ಅರ್ಜಿಯಲ್ಲಿ ತಂದೆಯ ಹೆಸರಿನಲ್ಲಿ ವ್ಯತ್ಯಾಸವಿದೆ ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನೀಡಲಾಗಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ, ತನ್ನನ್ನು ಚುನಾವಣಾ ಆಯೋಗದ ಅಧಿಕಾರಿ ಎಂದು ಪರಿಚಯಿಸಿಕೊಂಡ ‘ಚಂದ್ರಶೇಖರ್’ ಎನ್ನುವವರು ನಿಮ್ಮ ಎಸ್‌ಐಆರ್ ಅರ್ಜಿ ತಿರಸ್ಕೃತವಾಗಿದೆ’ ಎಂದು ಹೇಳಿದ್ದಾರೆ.

ಬಳಿಕ ವಾಟ್ಸ್‌ಆ್ಯಪ್ ಮೂಲಕ ಮತ್ತೊಂದು ಸಂದೇಶ ಕಳುಹಿಸಿ, ಆನ್‌ಲೈನ್ ಲಿಂಕ್‌ವೊಂದನ್ನು ಕಳುಹಿಸಲಾಗಿದೆ. ಅದರಲ್ಲಿ ವಿವರಗಳನ್ನು ಭರ್ತಿ ಮಾಡಿದ ಬಳಿಕ ಕೇವಲ 5 ರೂ. ಪಾವತಿಸುವ ನೆಪದಲ್ಲಿ ಮುಂದುವರಿಯುವಂತೆ ಸೂಚಿಸಲಾಗಿದೆ. ನೆಟ್ ಬ್ಯಾಂಕಿಂಗ್ ಆಯ್ಕೆ ಮಾಡಿದಾಗ ಬ್ಯಾಂಕ್‌ನ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಕೇಳಲಾಗಿದೆ. ಇದರಿಂದ ಅನುಮಾನಗೊಂಡ ವ್ಯಕ್ತಿ ನೆಟ್ ಬ್ಯಾಂಕಿಂಗ್ ಮೂಲಕ ಮುಂದುವರಿಯದೆ, ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಬಳಸಿದ್ದಾರೆ.

ಆದರೆ ಕ್ರೆಡಿಟ್ ಕಾರ್ಡ್‌ನ ಹೆಸರು, ಮಾನ್ಯತಾ ದಿನಾಂಕ ಹಾಗೂ ಸಿವಿವಿ ನಮೂದಿಸಿದ ನಂತರ ಎಟಿಎಂ ಪಿನ್ ಕೇಳಲಾಗಿದೆ. ಈ ಹಂತದಲ್ಲಿ ಇದು ಅಧಿಕೃತ ಚುನಾವಣಾ ಪ್ರಕ್ರಿಯೆಯಲ್ಲ, ಬದಲಾಗಿ ಸೈಬರ್ ವಂಚನೆಯ ಪ್ರಯತ್ನ ಎಂಬುದು ಅರಿವಾಗಿದೆ.

ಕೂಡಲೇ ಅವರು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಬಳಿಕ ವಾಟ್ಸ್‌ಆ್ಯಪ್‌ನಲ್ಲಿ ಆ ಸಂಖ್ಯೆಯನ್ನು ವಂಚನೆ ಎಂದು ವರದಿ ಮಾಡಿದ್ದಾರೆ. ಸಂಬಂಧಪಟ್ಟ ಕ್ರೆಡಿಟ್ ಕಾರ್ಡ್ ಬ್ಯಾಂಕ್‌ಗೆ ಕರೆ ಮಾಡಿ ಕಾರ್ಡ್ ಬ್ಲಾಕ್ ಮಾಡಲಾಗಿದೆ ಮತ್ತು ಹೊಸ ಕಾರ್ಡ್ ನೀಡುವಂತೆ ಮನವಿ ಮಾಡಲಾಗಿದೆ.

ನಂತರದಲ್ಲಿ ಅವರು ಸೈಬರ್ ವಂಚನೆಗೆ ಸಂಬಂಧಿಸಿದಂತೆ 1930ಕ್ಕೆ ದೂರು ನೀಡಲಾಗಿದ್ದು,

ಸೈಬರ್ ವಂಚನೆ ಕುರಿತು ‘ಸಂಚಾರ್ ಸಾತಿ’ ಮೂಲಕವೂ ವರದಿ ಮಾಡಲಾಗಿದೆ. ದೂರು ಸ್ವೀಕರಿಸಿದವರು ಇದೇ ರೀತಿಯ ವಂಚನೆಗೆ ಸಂಬಂಧಿಸಿದಂತೆ ಹಲವು ಕರೆಗಳು ಬರುತ್ತಿವೆ ಎಂದು ತಿಳಿಸಿದ್ದು, ಸಮಯಕ್ಕೆ ಸರಿಯಾಗಿ ಕಾರ್ಡ್ ಬ್ಲಾಕ್ ಮಾಡಿದ್ದರಿಂದ ಹಣ ಕಳೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

►ಎಸ್‌ಐಆರ್‌ನ ತರಾತುರಿಯೇ ಮೂಲ ಕಾರಣ :

ಎಸ್‌ಐಆರ್ ಪ್ರಕ್ರಿಯೆಯನ್ನು ಗೊಂದಲ ಮಾಡಿಟ್ಟಿರುವುದು ಮತ್ತು ಸೈಬರ್ ವಂಚಿಕರು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಬೇಕಾದ ಅವಕಾಶ ಸೃಷ್ಟಿಸಿರುವುದು ಮತ್ತು ಸೈಬರ್ ಪ್ರಕರಣಗಳು ಕಾಣಿಸಿಕೊಳ್ಳಲು ಪ್ರಕ್ರಿಯೆ ತರಾತುರಿಯಲ್ಲಿ ನಡೆಯುತ್ತಿರುವುದೇ ಇದಕ್ಕೆ ಮೂಲ ಕಾರಣ. ಎಸ್‌ಐಆರ್ ಪಾರದರ್ಶಕವಾಗಿ ಎಲ್ಲರಿಗೂ ಸುಲಭವಾಗಿ ಸಿಗುವ ಹಾಗೆ ಮಾಡಿದ್ದರೆ, ಯಾವ ವಂಚಕರಿಗೂ ಅಡ್ಡದಾರಿ ಹೊಳೆಯುತ್ತಿರಲಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ವಿ.ಎಸ್.ಶ್ರೀಧರ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಎಸ್‌ಐಆರ್ ಹೆಸರಿನಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ ಮತ್ತು ವ್ಯಾಪಕವಾಗಿ ಹರಡುತ್ತಿವೆ. ಚುನಾವಣಾ ಆಯೋಗ ಕೂಡಲೇ ಪೊಲೀಸರಿಗೆ ದೂರನ್ನು ನೀಡಬೇಕು. ಇದು ಯಾರು ಮಾಡುತ್ತಿದ್ದಾರೆಂದು ಸೈಬರ್ ಕ್ರೈಂ ಮೂಲಕ ಪತ್ತೆ ಹಚ್ಚಿ, ರಾಜ್ಯಾದ್ಯಂತ ಜಾಹಿರಾತು, ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಚುನಾವಣಾ ಆಯೋಗ ಯಾರ ಹತ್ತಿರವೂ ಹಣ ತೆಗೆದುಕೊಳ್ಳುತ್ತಿಲ್ಲ, ಯಾರೇ ಕೇಳಿದರೂ ಹಣ ಕೊಡಬಾರದು’ ಎಂದು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂದು ಪ್ರೊ.ವಿ.ಎಸ್.ಶ್ರೀಧರ ಒತ್ತಾಯಿಸಿದ್ದಾರೆ.

ಮಾತೆತ್ತಿದರೆ ಮೋದಿಯವರು Ease of Doing Business ಅಂತ ಮಾತಾಡುತ್ತಾರೆ. ಅಂದರೆ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಬರಬೇಕಾದರೆ ಒಂದೇ ಕಿಟಕಿಯಲ್ಲಿ ಎಲ್ಲ ಸವಲತ್ತು ಸಿಗಬೇಕು. ಅವರು ಒಂದು ಟೇಬಲ್ ಇಂದ ಮತ್ತೊಂದು ಟೇಬಲ್‌ಗೆ ಓಡಾಡಿಕೊಂಡು ಇರಬಾರದು ಎಂದು ಹೇಳುತ್ತಾರೆ. ಬಿಜಿನೆಸ್ ಮಾಡಲು ಬರುವರಿಗೆ Ease of Doing Business ಪಾಲಿಸಿ ಮಾಡಿದವರು, Ease a Procuring Documentsಯಾಕೆ ಮಾಡಿಲ್ಲ? Ease a becoming Citizen Inida ಅಂತ ಯಾಕೆ ಮಾಡಲಿಲ್ಲ?

-ವಿ.ಎಸ್.ಶ್ರೀಧರ, ನಿವೃತ್ತ ಪ್ರಾಧ್ಯಾಪಕ

ಎಚ್ಚರ ಅಗತ್ಯ

ಎಸ್‌ಐಆರ್‌ಗೆ ಸಂಬಂಧಿಸಿದೆ ಎಂದು ಹೇಳಿಕೊಂಡು ಬರುವ ಯಾವುದೇ ಅಪರಿಚಿತ ಲಿಂಕ್‌ಗಳನ್ನು ತೆರೆಯುವ ಮೊದಲು ಅದರ ಅಧಿಕೃತತೆಯನ್ನು ಪರಿಶೀಲಿಸುವುದು ಅಗತ್ಯ. ಚುನಾವಣಾ ಆಯೋಗದ ಹೆಸರಿನಲ್ಲಿ ಯಾರೇ ಕರೆ ಮಾಡಿ, ಬ್ಯಾಂಕ್ ಲಾಗಿನ್, ಪಾಸ್‌ವರ್ಡ್, ಎಟಿಎಂ ಡೆಬಿಟ್/ಕ್ರೆಡಿಟ್ ಕಾರ್ಡ್ ಪಿನ್, ಸಿವಿವಿ ಅಥವಾ ಒಟಿಪಿ ಕೇಳಿದರೆ ಯಾವ ಕಾರಣಕ್ಕೂ ನೀಡಬಾರದು. ಅಪರಿಚಿತ ವ್ಯಕ್ತಿಗಳು ಕಳುಹಿಸುವ ಲಿಂಕ್‌ಗಳ ಮೂಲಕ ಪಾವತಿ ಮಾಡುವುದು ಅಥವಾ ವೈಯಕ್ತಿಕ ಹಾಗೂ ಹಣಕಾಸು ಮಾಹಿತಿಯನ್ನು ನಮೂದಿಸುವುದರಿಂದ ದೂರವಿರಬೇಕು. ಅನುಮಾನಾಸ್ಪದ ಸಂದೇಶ ಅಥವಾ ಕರೆ ಬಂದರೆ ಸಂಬಂಧಪಟ್ಟ ಚುನಾವಣಾಧಿಕಾರಿಗಳ ಅಧಿಕೃತ ಸಂಪರ್ಕ ಮಾರ್ಗಗಳ ಮೂಲಕವೇ ಮಾಹಿತಿ ಪರಿಶೀಲಿಸಬೇಕು.

-ಮರಿಸ್ವಾಮಿ, ಹೈಕೋರ್ಟ್ ವಕೀಲ ಬೆಂಗಳೂರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮನೋಜ್ ಆಜಾದ್

contributor

Similar News