ಸಂಪೂರ್ಣ ಹದಗೆಟ್ಟ ಮಡಿಕೇರಿ ನಗರದ ಪ್ರಮುಖ ರಸ್ತೆಗಳು
ದುರಸ್ತಿಗೆ ಸಾರ್ವಜನಿಕರ ಒತ್ತಾಯ
ಮಡಿಕೇರಿ : ನಗರದ ಪ್ರಮುಖ ರಾಜಾಸೀಟ್ ಮಾರ್ಗದ ರಸ್ತೆ, ಕಾವೇರಿ ಕಲಾಕ್ಷೇತ್ರದ ಮುಂಭಾಗವಿರುವ ಮಂಗೇರಿರ ಮುತ್ತಣ್ಣ ವೃತ್ತ, ರಾಣಿಪೇಟೆ, ರೇಸ್ ಕೋರ್ಸ್ ರಸ್ತೆ, ಪೆನ್ಷನ್ ಲೈನ್, ಟಿಜಾನ್ ಲೇಔಟ್, ರಾಜರಾಜೇಶ್ವರಿ ದೇವಾಲಯಕ್ಕೆ ತೆರಳುವ ರಸ್ತೆ, ಸಂಪಿಗೆಕಟ್ಟೆ ರಸ್ತೆ ಸೇರಿದಂತೆ ಹಲವು ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದೆ.
ಮಳೆಗಾಲವಾದ್ದರಿಂದ ಗುಂಡಿಬಿದ್ದ ರಸ್ತೆಯಲ್ಲಿ ನೀರುನಿಂತ ಪರಿಣಾಮ ದ್ವಿಚಕ್ರ ಸವಾರರು ಹರಸಾಹಸಪಡುವಂತಾಗಿದೆ. ಹಾಗೂ ವಾಹನ ಸಂಚಾರಕ್ಕೆ ತೊಡಕಾಗಿ ರಸ್ತೆಯಲ್ಲಿ ಬೀಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅಪರಿಚಿತರು ಈ ರಸ್ತೆಯಲ್ಲಿ ಓಡಾಡಿ ನೀರು ತುಂಬಿಕೊಂಡಿರುವ ಹೊಂಡಗಳಿಗೆ ಬೀಳುವ ಸಾಧ್ಯತೆಗಳಿವೆ.
ನಗರದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಅಮೃತ್ 2.0 ಕಾಮಗಾರಿಯಿಂದ ಬಹುತೇಕ ರಸ್ತೆಗಳು ಹದಗೆಟ್ಟಿದೆ. ಅಲ್ಲದೆ ಅಮೃತ್ 2.0 ಕಾಮಗಾರಿಯಡಿ ನಗರದ ಹಲವು ರಸ್ತೆಗಳಲ್ಲಿ ಪೈಪ್ ಲೈನ್ ಅಳವಡಿಸಲಾಗಿತ್ತು. ನಂತರ ತೆಗೆದ ಗುಂಡಿಯನ್ನು ಮುಚ್ಚುವ ಭರದಲ್ಲಿ ರಸ್ತೆಗಳು ಹದಗೆಟ್ಟಿವೆ. ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚುವ ಕಾರ್ಯವೂ ನಡೆದಿಲ್ಲ. ಕೆಲವೆಡೆ ಕೇವಲ ಜೆಲ್ಲಿ ಹಾಕಿ ಮುಚ್ಚಿರುವುದರಿಂದ ಮಳೆ ಬಂದಲ್ಲಿ ಜೆಲ್ಲಿ ಕಲ್ಲು ರಸ್ತೆಯಲ್ಲಿ ಹರಡಿಕೊಳ್ಳುತ್ತಿವೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.
ಈಗಾಗಲೇ ಮಳೆಗಾಲ ಆರಂಭವಾಗಿ 2 ತಿಂಗಳು ಕಳೆದಿದ್ದು, ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ ದುಸ್ಥರವಾಗಿದೆ. ಈ ಬಗ್ಗೆ ಹಲವಾರು ಬಾರಿ ನಗರಸಭೆಗೆ ಮನವಿ ಮಾಡಿದ್ದರೂ ರಸ್ತೆ ದುರಸ್ತಿ ಬಗ್ಗೆ ನಗರಸಭೆ ಇಲ್ಲಿಯವರೆಗೆ ನೀಡಿದ್ದ ಆಶ್ವಾಸನೆಗಳು ಹುಸಿಯಾಗಿದೆ. ಅಲ್ಲದೆ, ನಗರಸಭೆ ಪ್ರತಿ ಬಾರಿ ನಿರ್ಲಕ್ಷ್ಯವಹಿಸುವುದರ ಜೊತೆಗೆ ತೇಪೆ ಹಾಕುವ ಕೆಲಸವನ್ನು ಮಾಡುತ್ತದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಕಾಟಚಾರಕ್ಕೆ ಗುಂಡಿ ಮುಚ್ಚುವ ಕಾರ್ಯ :
ವರ್ಷಂಪ್ರತಿ ಮಡಿಕೇರಿ ನಗರದ ರಸ್ತೆಗಳು ಗುಂಡಿಬೀಳುವುದು ಅದನ್ನು ಮುಚ್ಚುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ನಗರದ ರಾಜಾಸೀಟ್‌ಗೆ ತೆರಳುವ ರಸ್ತೆಗೆ ಕಲ್ಲು ಮಣ್ಣನ್ನು ಹಾಕಲಾಗಿತ್ತು. ಆದರೆ ಈಗ ಕಿತ್ತುಹೋಗಿ ಸಂಚಾರಕ್ಕೆ ಯೋಗ್ಯವಲ್ಲದಂತಾಗಿದೆ. ಪ್ರತಿ ಮಳೆಗಾಲದಲ್ಲೂ ರಸ್ತೆಗಳು ಗುಂಡಿ ಬಿದ್ದರೆ, ಬೇಸಿಗೆಯಲ್ಲಿ ಅದನ್ನು ಜೆಲ್ಲಿ ಹಾಕಿ ಮುಚ್ಚಲಾಗುತ್ತದೆ. ಆದರೆ ವರ್ಷಂಪ್ರತಿ ಈ ರಸ್ತೆಗಳು ಹದಗೆಡಲು ಕಾರಣವೇನು ಎಂಬುದು ಮಾತ್ರ ತಿಳಿದಿಲ್ಲ. ಆದರೆ ಇದರಿಂದ ಜನತೆಯ ತೆರಿಗೆ ಹಣ ಮಾತ್ರ ವರ್ಷಂಪ್ರತಿ ನೀರಿನಲ್ಲಿ ಹೋಮ ಮಾಡುತ್ತಿರುವುದು ದುರಂತ ಎಂದು ಸಾರ್ವಜನಿಕರೊಬ್ಬರು ಆರೋಪಿಸಿದ್ದಾರೆ.
ಜಿಲ್ಲೆಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ ಮೂಲಸೌಕರ್ಯಗಳ ಕೊರತೆಯಿಂದ ಬೇಸತ್ತ ಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ. ಇದರಿಂದ ನಗರಸಭೆಗೂ, ಜನಪ್ರತಿನಿಧಿಗಳಿಗೂ ಹಾಗೂ ಸ್ಥಳೀಯರಿಗೂ ಅಗೌರವವಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ನಗರಸಭೆ ಇದ್ದೂ ಇಲ್ಲದಂತಾಗುತ್ತದೆ.
-ಹರೀಶ್ ಜಿ.ಆಚಾರ್ಯ, ಜಿಲ್ಲಾಧ್ಯಕ್ಷ, ಹ್ಯೂಮೆನ್ ರೈಟ್ಸ್
ಮಳೆ ನಿಂತ ಕೂಡಲೇ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ರಾಜಾಸೀಟ್ ರಸ್ತೆಗೆ ಸಿಸಿ ರಸ್ತೆ ನಿರ್ಮಾಣದ ಟೆಂಡರ್ ಕರೆಯಲಾಗಿದೆ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ಬರೆ ಕುಸಿತ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕಿದ್ದು, ಶೀಘ್ರದಲ್ಲಿ ಸಂಚಾರಕ್ಕೆ ಅನುಕೂಲವಾಗಲಿದೆ. ಶೀಘ್ರದಲ್ಲೇ ರಾಜಾಸೀಟ್ ರಸ್ತೆ ಕಾಮಗಾರಿಗಳನ್ನು ಆರಂಭಿಸಲಾಗುವುದು.
-ಎಚ್.ಆರ್.ರಮೇಶ್, ಪೌರಾಯುಕ್ತರು, ಮಡಿಕೇರಿ ನಗರಸಭೆ
ನಗರದ ರಸ್ತೆ ದುರಸ್ತಿಪಡಿಸಲು ನಗರಸಭೆ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಕಾಟಚಾರಕ್ಕೆ ರಸ್ತೆಗಳಿಗೆ ಕಲ್ಲು ಮಣ್ಣು ಹಾಕಲಾಗುತ್ತಿದೆ. ರಸ್ತೆಗೆ ಹಾಕಿದ್ದ ಕಲ್ಲುಮಣ್ಣು ರಸ್ತೆಯ ಪಕ್ಕಕ್ಕೆ ಸರಿದಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಗುಂಡಿಬಿದ್ದ ರಸ್ತೆಯಲ್ಲಿ ವಾಹನ ಸವಾರರು ಹರಸಾಹಸ ಪಡುವಂತಾಗಿದೆ. ಇನ್ನಾದರೂ ನಗರಸಭೆ ಎಚ್ಚೆತ್ತು ಕೊಂಡು ಗುಂಡಿಬಿದ್ದ ರಸ್ತೆಗಳನ್ನು ದುರಸ್ತಿಗೊಳಿಸಬೇಕಾಗಿದೆ.
-ಜೆ.ರವಿಗೌಡ, ಅಧ್ಯಕ್ಷ, ಕೊಡಗು ಹಿತರಕ್ಷಣಾ ವೇದಿಕೆ