ಅಂಬೇಡ್ಕರ್‌ರವರ ದೃಷ್ಟಿಯಲ್ಲಿ ಶಿಕ್ಷಣ ವಿಮೋಚನೆಯ ಅಸ್ತ್ರ
ಅಭಿವೃದ್ಧಿ ಹೊಂದುತ್ತಿರುವ ಯಾವುದೇ ರಾಷ್ಟ್ರದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಗತ್ಯಗಳಿಗೂ ಮತ್ತು ಶಿಕ್ಷಣಕ್ಕೂ ಪರಸ್ಪರ ಸಂಬಂಧವಿದೆ ಎಂಬುದು ಡಾ. ಅಂಬೇಡ್ಕರ್ ಅವರ ನಿಲುವಾಗಿತ್ತು. ಶಿಕ್ಷಣ ಸಾಮಾಜಿಕ ಬದಲಾವಣೆಯ ಸಾಧನವಾಗಿರಬೇಕು ಹಾಗೂ ಕಾಲದ ಅಗತ್ಯ ಮತ್ತು ವಾಸ್ತವಗಳಿಗೆ ಅನುಗುಣವಾಗಿ ಅದನ್ನು ರೂಪಿಸಬೇಕು. ಸಾಮಾಜಿಕ ಪರಿವರ್ತನೆಗೆ ಶಾಲೆಯಲ್ಲಿನ ಶಿಕ್ಷಣ ಮಾತ್ರ ಸಾಕಾಗುವುದಿಲ್ಲ ಎಂದು ತಿಳಿದಿದ್ದ ಅವರು, ಸುದ್ದಿ ಪತ್ರಿಕೆ ಮತ್ತು ಇತರ ಮೂಲಗಳ ಮೂಲಕ ಮುಖ್ಯವಾಹಿನಿ ಶಿಕ್ಷಣದ ಜೊತೆಗೆ ಅನೌಪಚಾರಿಕ ಶಿಕ್ಷಣವೂ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದರು.
ಶಿಕ್ಷಣ-ಹೋರಾಟ-ಸಂಘಟನೆ ಇದು ಅಂಬೇಡ್ಕರ್‌ರವರು ದಮನಿತ ಹಾಗೂ ದುರ್ಬಲ ಸಮುದಾಯಗಳ ವಿಮೋಚನೆಗೆ ಕೊಟ್ಟ ಮೂಲ ಮಂತ್ರ. ದಮನಿತ ಸಮುದಾಯಗಳ ಹಲವು ನಾಯಕರು ಕೇವಲ ರಾಜಕೀಯ ಮತ್ತು ಅಧಿಕಾರಕ್ಕಾಗಿ ಕೋಮುವಾದಿ ಶಕ್ತಿಗಳ ಜೊತೆ ಕೈಜೋಡಿಸುತ್ತಿರುವ ಈ ಸಂದರ್ಭದಲ್ಲಿ, ಶಿಕ್ಷಣ ಕುರಿತಂತೆ ಅವರ ಚಿಂತನೆ ಏನಾಗಿತ್ತು ಮತ್ತು ಅದು ಹೇಗೆ ವಿಮೋಚನೆಯ ಪ್ರಬಲ ಅಸ್ತ್ರವಾಗಬಲ್ಲದು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಬೇಕಿರುವುದರಿಂದ ಆ ಕುರಿತು ಸಂಕ್ಷಿಪ್ತವಾಗಿ ಬೆಳಕು ಚೆಲ್ಲುವ ಲೇಖನ ಇದಾಗಿದೆ. ದಮನಿತ ಹಾಗೂ ದುರ್ಬಲ ಸಮುದಾಯಗಳನ್ನು ಎಲ್ಲಾ ಬಗೆಯ ದಾಸ್ಯದ ಸಂಕೋಲೆಗಳಿಂದ ವಿಮೋಚನೆಗೊಳಿಸಲು ಶಿಕ್ಷಣ ಅತ್ಯಂತ ಪರಿಣಾಮಕಾರಿ ಸಾಧನವೆಂದು ಅವರು ಬಲವಾಗಿ ನಂಬಿದ್ದರು. ಶಿಕ್ಷಣವು ಜಾತಿ, ಧರ್ಮ, ಸಾಮಾಜಿಕ ಸ್ಥಾನಮಾನದ ಹಂಗಿಲ್ಲದೆ ಎಲ್ಲರಿಗೂ ಸಮಾನವಾಗಿ ಲಭ್ಯವಿರಬೇಕೆಂಬುದು ಅವರ ನಿಲುವಾಗಿತ್ತು. ಸಾಮಾಜಿಕ ಗುಲಾಮಗಿರಿಯನ್ನು ಮತ್ತು ಅಸ್ಪಶ್ಯತೆಯನ್ನು ತೊಡೆದುಹಾಕಲು ಶಿಕ್ಷಣವು ಸಂಘಟಿತ ಹೋರಾಟಕ್ಕೆ ಬಲವಾದ ಅಸ್ತ್ರವಾಗಬಲ್ಲದು ಎಂದು ಅವರು ತಮ್ಮ ಅನುಭವದಿಂದ ತಿಳಿದಿದ್ದರು ಮತ್ತು ಅವರ ನೇತೃತ್ವದ ಎಲ್ಲಾ ಹೋರಾಟಗಳಲ್ಲಿ ಅಳವಡಿಸಿಕೊಂಡಿದ್ದರು.
ಅಭಿವೃದ್ಧಿ ಹೊಂದುತ್ತಿರುವ ಯಾವುದೇ ರಾಷ್ಟ್ರದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಗತ್ಯಗಳಿಗೂ ಮತ್ತು ಶಿಕ್ಷಣಕ್ಕೂ ಪರಸ್ಪರ ಸಂಬಂಧವಿದೆ ಎಂಬುದು ಡಾ. ಅಂಬೇಡ್ಕರ್ ಅವರ ನಿಲುವಾಗಿತ್ತು. ಶಿಕ್ಷಣ ಸಾಮಾಜಿಕ ಬದಲಾವಣೆಯ ಸಾಧನವಾಗಿರಬೇಕು ಹಾಗೂ ಕಾಲದ ಅಗತ್ಯ ಮತ್ತು ವಾಸ್ತವಗಳಿಗೆ ಅನುಗುಣವಾಗಿ ಅದನ್ನು ರೂಪಿಸಬೇಕು. ಸಾಮಾಜಿಕ ಪರಿವರ್ತನೆಗೆ ಶಾಲೆಯಲ್ಲಿನ ಶಿಕ್ಷಣ ಮಾತ್ರ ಸಾಕಾಗುವುದಿಲ್ಲ ಎಂದು ತಿಳಿದಿದ್ದ ಅವರು, ಸುದ್ದಿ ಪತ್ರಿಕೆ ಮತ್ತು ಇತರ ಮೂಲಗಳ ಮೂಲಕ ಮುಖ್ಯವಾಹಿನಿ ಶಿಕ್ಷಣದ ಜೊತೆಗೆ ಅನೌಪಚಾರಿಕ ಶಿಕ್ಷಣವೂ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದರು. ಅವರ ಮಾತಿನಲ್ಲಿಯೇ ಹೇಳುವುದಾದರೆ ಮನುಷ್ಯ ಮರ್ತ್ಯ. ವಿಚಾರ ಸಹ ಹಾಗೆಯೇ. ಸಸ್ಯಕ್ಕೆ ನೀರುಣಿಸುವ ಹಾಗೆ ವಿಚಾರಕ್ಕೆ ಪ್ರಸರಣ ಬೇಕು. ಇಲ್ಲದಿದ್ದರೆ ಎರಡೂ ಒಣಗಿ ಸಾಯುತ್ತವೆ.
ಅಂಬೇಡ್ಕರ್‌ರವರ ಶಿಕ್ಷಣದ ಗುರಿ ರಾಷ್ಟ್ರೀಯ ಏಕತೆ, ಸಾಮಾಜಿಕ ಅಭಿವೃದ್ಧಿ ಮತ್ತು ಮಾನವೀಯ ಮೌಲ್ಯಗಳ ಮೇಲೆ ಕೇಂದ್ರೀಕರಿಸಿದ್ದವು. ದೇಶದ ಜನರು ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಒಗ್ಗೂಡಬೇಕು ಎಂದು ಅವರು ಭಾವಿಸಿದರು. ಜನರಲ್ಲಿ ಜಾತ್ಯತೀತತೆಯನ್ನು ಉತ್ತೇಜಿಸುವ ಅಗತ್ಯವನ್ನು ಅವರು ಬಲವಾಗಿ ಪ್ರತಿಪಾದಿಸಿದರು. ಜಾತಿಯಿಂದ ಆರ್ಥಿಕ ಕಾರ್ಯಸಾಮರ್ಥ್ಯ ಉತ್ತಮವಾಗುವುದಿಲ್ಲ. ಜಾತಿ ಜನಾಂಗವನ್ನು ಉತ್ತಮಗೊಳಿಸುವುದಿಲ್ಲ. ಉತ್ತಮಗೊಳಿಸಲು ಅದಕ್ಕೆ ಸಾಧ್ಯವೂ ಇಲ್ಲ. ಜಾತಿ ಒಂದನ್ನು ಮಾತ್ರ ಸಾಧಿಸಿದೆ. ಅದೆಂದರೆ, ಜನರನ್ನು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಿ ನೀತಿಗೆಡಿಸಿದೆ. ಸಾಮರಸ್ಯವನ್ನು ಹಾಳುಮಾಡಿದೆ. ಮೇಲು ಕೀಳು ಭಾವನೆಯನ್ನು ಬಲಗೊಳಿಸಿದೆ.
ಅಂಬೇಡ್ಕರ್‌ರವರು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಗುರುಗಳಾಗಿದ್ದ ಜಾನ್ ಡ್ಯೂಯಿರವರ ಶಿಕ್ಷಣ ಹಾಗೂ ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಎತ್ತಿ ಹಿಡಿದಿದ್ದರು. ಡ್ಯೂಯಿ ಒಬ್ಬ ಪ್ರಮುಖ ಅಮೆರಿಕನ್ ವಾಸ್ತವಿಕವಾದಿ ತತ್ವಜ್ಞಾನಿ ಮತ್ತು ಶಿಕ್ಷಕರಾಗಿದ್ದರು. ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯದ ಹೊರತಾಗಿಯೂ, ಮನುಕುಲದ ಭವಿಷ್ಯಕ್ಕೆ ವೈಜ್ಞಾನಿಕ ಶಿಕ್ಷಣ ಪ್ರಮುಖ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಇಬ್ಬರೂ ಒಪ್ಪಿಕೊಂಡಿದ್ದರು. ಶಿಕ್ಷಣ ಒಂದು ಸಮಾಜದಲ್ಲಿನ ಸದಸ್ಯರನ್ನು ಸಾಮಾಜೀಕರಣಗೊಳಿಸುವ ಸಾಧನವಾಗಿದೆ. ಹೀಗಾಗಿ, ಭೇದಭಾವವಿಲ್ಲದೆ ಎಲ್ಲರಿಗೂ ಶಿಕ್ಷಣವನ್ನು ನೀಡುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಪ್ರತಿಪಾದಿಸಿದರು ಜೊತೆಗೆ, ಶಿಕ್ಷಣ ಆಧುನೀಕರಣಕ್ಕೆ ಒಂದು ಮಾರ್ಗ ಎಂದು ನಂಬಿದ್ದರು. ಶಿಕ್ಷಣ ಸಾಮಾಜಿಕ ಚಲನಶೀಲತೆಗೆ ದಾರಿಯಾಗುವುದರ ಜೊತೆಗೆ ಆಧುನೀಕರಣಕ್ಕೂ ಬಾಗಿಲು ತೆರೆಯುತ್ತದೆ. ಗ್ರಾಮೀಣ ಭಾಗದಲ್ಲಿ ಶ್ರೀಮಂತವರ್ಗದ ಅವಲಂಬನೆಯನ್ನು ಕಡಿಮೆ ಮಾಡಿ ಉದ್ಯೋಗ ಸ್ವರೂಪದಲ್ಲಿನ ದೊಡ್ಡ ಬದಲಾವಣೆಗೆ ಅವಕಾಶವನ್ನು ನೀಡುತ್ತದೆ. ಶಿಕ್ಷಣ ದಮನಿತ ಸಮುದಾಯಕ್ಕಾದ ಅವಮಾನ ಮತ್ತು ಗುಲಾಮಗಿರಿಯ ಬಗ್ಗೆ ಅರಿವು ಮೂಡಿಸುತ್ತದೆ. ಅಂತಿಮವಾಗಿ, ಶಿಕ್ಷಣ ವಿಮೋಚನೆ ಮತ್ತು ಸಬಲೀಕರಣದ ಸಾಧನವಾಗಿ ಹೊರಹೊಮ್ಮುತ್ತದೆ. ತುಳಿತಕ್ಕೊಳಗಾದವರು ಮತ್ತು ‘ಅಸ್ಪಶ್ಯರ’ ಮೋಕ್ಷಕ್ಕೆ ಖಚಿತವಾದ ಮಾರ್ಗವೆಂದರೆ ಉನ್ನತ ಶಿಕ್ಷಣ, ಉನ್ನತ ಉದ್ಯೋಗ ಮತ್ತು ಗುಣಾತ್ಮಕ ಜೀವನೋಪಾಯಕ್ಕೆ ಉತ್ತಮ ಗಳಿಕೆಯ ಮಾರ್ಗ ಎಂದು ಪ್ರತಿಪಾದಿಸಿದರು.
ಅಂಬೇಡ್ಕರ್ ಪ್ರಕಾರ, ಮನುಷ್ಯ ತನ್ನ ಮನಸ್ಸನ್ನು ತನಗಿರುವ ಸ್ವಾತಂತ್ರ್ಯವನ್ನು ಬಳಸಲು ತರಬೇತಿಗೊಳಿಸದ ಹೊರತು ಯಾವುದೇ ಮೌಲ್ಯಯುತ ಸ್ವಾತಂತ್ರ್ಯ ಇರಲು ಸಾಧ್ಯವಿಲ್ಲ. ಮನುಷ್ಯನ ಶಿಕ್ಷಣದ ಮೂಲಭೂತ ಹಕ್ಕು ಅವನ ಸ್ವಾತಂತ್ರ್ಯಕ್ಕೆ ಮೂಲಭೂತವಾಗುತ್ತದೆ. ಒಬ್ಬ ಮನುಷ್ಯನನ್ನು ಜ್ಞಾನದಿಂದ ವಂಚಿತಗೊಳಿಸಿದರೆ, ನೀವು ಅವನನ್ನು ಅನಿವಾರ್ಯವಾಗಿ ಅವನಿಗಿಂತ ಹೆಚ್ಚು ಅದೃಷ್ಟಶಾಲಿಗಳೆನಿಸಿಕೊಂಡವರ ಗುಲಾಮನನ್ನಾಗಿ ಮಾಡುತ್ತೀರಿ. ಜ್ಞಾನದ ಅಭಾವ ಸ್ವಾತಂತ್ರ್ಯವನ್ನು ದೊಡ್ಡ ಉದ್ದೇಶಗಳಿಗಾಗಿ ಬಳಸುವ ಶಕ್ತಿಯ ನಿರಾಕರಣೆಯಾಗಿದೆ. ಅಜ್ಞಾನಿ ಮನುಷ್ಯ ಸ್ವತಂತ್ರನಾಗಿರಬಹುದು, ಆದರೆ ಅವನ ಪರಿಪೂರ್ಣ ಸಂತೋಷದ ಭರವಸೆಗೆ ತನ್ನ ಸ್ವಾತಂತ್ರ್ಯವನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿತ್ತು.
ಎಲ್ಲರಿಗೂ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ಬಹಳ ಮುಖ್ಯ ಎಂದು ಅಂಬೇಡ್ಕರ್ ಅವರಿಗೆ ಪೂರ್ಣ ಮನವರಿಕೆಯಾಗಿತ್ತು. ದುರ್ಬಲ ವರ್ಗಗಳು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಲು ಅಗತ್ಯವಾದ ವೇದಿಕೆಯನ್ನು ಶಿಕ್ಷಣ ಒದಗಿಸುತ್ತವೆ. ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣದ ಮಹತ್ವವನ್ನು ಅರಿತಿದ್ದ ಅವರು, ಅದಕ್ಕಾಗಿ ಶಾಸನ ಸಭೆಯಲ್ಲಿ ಬಲವಾಗಿ ವಾದಿಸಿದರು.ಇದೇ ಸಂದರ್ಭದಲ್ಲಿ ಅವರು ದಮನಿತ ಸಮುದಾಯಕ್ಕೆ ನಾವು ಭೌತಿಕ ಪ್ರಯೋಜನಗಳನ್ನು ತ್ಯಜಿಸಬಹುದು, ಆದರೆ ನಾವು ನಮ್ಮ ಹಕ್ಕುಗಳನ್ನು ಬಿಟ್ಟುಕೊಡಬಾರದು ಮತ್ತು ನಮಗೆ ಸಿಗಬೇಕಾದ ಯಾವುದೇ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಎಚ್ಚರಿಸಿದ್ದರು. ಬಾಂಬೆ ಅಸೆಂಬ್ಲಿಯಲ್ಲಿ ನಡೆದ ಲೆಜಿಸ್ಲೇಟಿವ್ ಕೌನ್ಸಿಲ್ ಚರ್ಚೆಗಳಲ್ಲಿ ಗಮನಸೆಳೆದ ಅಂಬೇಡ್ಕರ್ ‘‘ಪ್ರಾಥಮಿಕ ಶಿಕ್ಷಣದ ಉದ್ದೇಶವು ಪ್ರತೀ ಮಗುವನ್ನು ಮುಟ್ಟುವುದಾಗಿದೆ. ಆದ್ದರಿಂದ, ಪ್ರಾಥಮಿಕ ಶಿಕ್ಷಣಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕು’’ ಎಂದು ಒತ್ತಿ ಹೇಳಿದ್ದರು ಮತ್ತು ವಾದಿಸಿದ್ದರು.
ಜೊತೆಗೆ, ಭಾರತದ ಸಂವಿಧಾನವನ್ನು ರೂಪಿಸುವ ಕೆಲಸವನ್ನು ಸಂವಿಧಾನ ಸಭೆಗೆ ವಹಿಸುವುದು ನಿಶ್ಚಯವಾದಾಗ, ಅಖಿಲ ಭಾರತ ಅನುಸೂಚಿತ ಜಾತಿಗಳ ಒಕ್ಕೂಟದ ಕಾರ್ಯಕಾರಿ ಸಮಿತಿಯು ಅನುಸೂಚಿತ ಜಾತಿಗಳ ಹಿತಾಸಕ್ತಿಗಳ ರಕ್ಷಣೆಯ ಬಗ್ಗೆ ಒಕ್ಕೂಟದ ಪರವಾಗಿ ಸಂವಿಧಾನ ಸಭೆಗೆ ಮಂಡಿಸಲು ಮನವಿ ಪತ್ರವೊಂದನ್ನು ಸಿದ್ಧಪಡಿಸಲು ಅಂಬೇಡ್ಕರ್‌ರವರನ್ನು ಕೇಳಿಕೊಂಡಾಗ ಅವರು ಒಪ್ಪಿ ಒಂದು ಕಿರುಪುಸ್ತಿಕೆಯನ್ನು (1947)ಸಿದ್ಧಪಡಿಸಿದರು. ಈ ಪುಸ್ತಿಕೆಯಲ್ಲಿನ ಭಾಗ-2ರಲ್ಲಿ ವಿಶೇಷ ಹೊಣೆಗಾರಿಕೆಯ ಬಗ್ಗೆ ಪ್ರಸ್ತಾಪಿಸಿರುವ ಅಂಬೇಡ್ಕರ್, ಖಂಡ 1 ರಲ್ಲಿ ಶಿಕ್ಷಣ ಕುರಿತಾದ ಅಂಶಗಳನ್ನು ಸ್ಪಷ್ಟವಾಗಿ ನಮೂದಿಸಿದ್ದರು. ಅವುಗಳೆಂದರೆ,
1. ಪರಿಶಿಷ್ಟ ಜಾತಿಗಳ ಉನ್ನತ ವಿದ್ಯಾಭ್ಯಾಸದ ಪೂರೈಕೆಗಾಗಿ ಕೇಂದ್ರ-ರಾಜ್ಯ ಸರಕಾರಗಳು ಹಣಕಾಸಿನ ಜವಾಬ್ದಾರಿಯನ್ನು ಹೊರುವುದಲ್ಲದೆ, ಆಯವ್ಯಯ ಪತ್ರಗಳಲ್ಲಿ ಅದಕ್ಕಾಗಿ ಸಾಕಷ್ಟು ಹಣ ಕಾದಿರಿಸತಕ್ಕದ್ದು. ಈ ಖರ್ಚು ಎಲ್ಲ ಸರಕಾರಗಳ ವಿದ್ಯಾ ಖಾತೆಯ ಖರ್ಚಿನಲ್ಲಿ ಮೊದಲ ಆದ್ಯತೆ ಪಡೆದಿರತಕ್ಕದ್ದು.
2. ಪರಿಶಿಷ್ಟ ಜಾತಿಗಳ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸದ ಖರ್ಚಿಗೆ ಹಣ ಕೊಡಿಸುವ ಜವಾಬ್ದಾರಿ ರಾಜ್ಯ ಸರಕಾರಗಳದ್ದು ಮತ್ತು ಆಯಾ ರಾಜ್ಯಗಳ ಪರಿಶಿಷ್ಟ ಜಾತಿಗಳ ಶೇಕಡಾವಾರು ಜನಸಂಖ್ಯೆಯ ಪ್ರಮಾಣದಷ್ಟು ಹಣವನ್ನು ತಮ್ಮ ಆಯವ್ಯಯಗಳಿಂದ ಈ ಬಾಬ್ತಿಗಾಗಿ ಖರ್ಚು ಮಾಡತಕ್ಕದ್ದು.
3. ಪರಿಶಿಷ್ಟ ಜಾತಿಗಳು ಹೊರದೇಶದಲ್ಲಿ ವಿದ್ಯಾರ್ಜನೆಗಾಗಿ ಮಾಡುವ ಖರ್ಚಿನ ಜವಾಬ್ದಾರಿ ಕೇಂದ್ರ ಸರಕಾರದ್ದು ಹಾಗೂ ಕೇಂದ್ರ ಆಯವ್ಯಯ ಪತ್ರದಲ್ಲಿ ಈ ಬಾಬ್ತಿಗಾಗಿ ವಾರ್ಷಿಕ ರೂ. 10 ಲಕ್ಷವನ್ನು ಕಾದಿರಿಸತಕ್ಕದ್ದು
4. ರಾಜ್ಯ ಸರಕಾರಗಳು ಎಲ್ಲರ ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡುವ ಹಣದಿಂದ ಈ ವಿಶೇಷ ಧನ ಮಂಜೂರಾತಿಗಳು ಹೊರತಾದವು ಮತ್ತು ವಿಶೇಷವಾದುದುವೆಂದೇ ಪರಿಗಣಿಸಬೇಕು.
ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಬಗ್ಗೆ ಅಂಬೇಡ್ಕರ್‌ರವರಿಗಿದ್ದ ಸ್ಪಷ್ಟತೆ ಮತ್ತು ಮುಂಗಾಣ್ಕೆ, ಸಂವಿಧಾನ ಸಭೆಯಲ್ಲಿ ಕರಡು ಸಂವಿಧಾನದಲ್ಲಿ ಶಿಕ್ಷಣ ಕುರಿತು ನಡೆದ ಚರ್ಚೆಗಳ ಸಮಯದಲ್ಲಿ ನಿಚ್ಚಳವಾಗಿ ಕಾಣುತ್ತದೆ. ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಮೂಲ ವಿಧಿ 36ರ ಅನ್ವಯ, ಪ್ರತಿಯೊಬ್ಬ ನಾಗರಿಕನೂ ಉಚಿತ ಪ್ರಾಥಮಿಕ ಶಿಕ್ಷಣಕ್ಕೆ ಅರ್ಹನಾಗಿರುತ್ತಾನೆ. ಸಂವಿಧಾನ ಜಾರಿಗೆ ಬಂದ ಹತ್ತು ವರ್ಷಗಳ ಅವಧಿಯಲ್ಲಿ, ಹದಿನಾಲ್ಕು ವರ್ಷ ವಯಸ್ಸಿನವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಲು ರಾಜ್ಯವು ಪ್ರಯತ್ನಿಸಬೇಕು ಎಂಬುದಾಗಿತ್ತು. ಈ ವಿಧಿಯ ಚರ್ಚೆಯ ಸಂದರ್ಭದಲ್ಲಿ, ಪಶ್ಚಿಮ ಬಂಗಾಳದ ಸದಸ್ಯರಾಗಿದ್ದ ನಝೀರುದ್ದೀನ್ ಅಹ್ಮದ್‌ರವರು ಸಂಪನ್ಮೂಲ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಹದಿನಾಲ್ಕು ವರ್ಷ ವಯಸ್ಸಿನ ಉಲ್ಲೇಖವನ್ನು ಹತ್ತು ವರ್ಷಕ್ಕೆ ಇಳಿಸಬೇಕು ಮತ್ತು ರಾಜ್ಯದ ಬದ್ಧತೆಯನ್ನು ಪ್ರಾಥಮಿಕ ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂಬ ಪ್ರಸ್ತಾವನೆಯನ್ನು ಮುಂದಿಡುತ್ತಾರೆ.
ಈ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಡಾ.ಬಿ.ಆರ್.ಅಂಬೇಡ್ಕರ್, ‘‘ನನ್ನ ಸ್ನೇಹಿತ ನಝೀರುದ್ದೀನ್ ಅಹ್ಮದ್ ಅವರ ತಿದ್ದುಪಡಿಯನ್ನು ಸ್ವೀಕರಿಸಲು ನಾನು ಸಿದ್ಧನಿಲ್ಲ. ಕಾರಣ ವಿಧಿ 36ರಲ್ಲಿನ ಷರತ್ತಿನ ಉದ್ದೇಶ ಮಗುವಿಗೆ ಹದಿನಾಲ್ಕು ವರ್ಷ ತುಂಬುವವರೆಗೆ ಪ್ರತೀ ಮಗು ಶಿಕ್ಷಣ ಸಂಸ್ಥೆಯಲ್ಲಿದ್ದು ಕಲಿಯಬೇಕು ಎಂಬುದಾಗಿದೆ. ನನ್ನ ಗೌರವಾನ್ವಿತ ಸ್ನೇಹಿತ ನಝೀರುದ್ದೀನ್ ಅಹ್ಮದ್ ಮೂಲಭೂತ ಹಕ್ಕುಗಳ ಭಾಗವಾಗಿರುವ ಆರ್ಟಿಕಲ್ 18ನ್ನು ಗಮನಿಸಬೇಕು. ಆರ್ಟಿಕಲ್ 18ರ ಅನ್ವಯ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗು ಬಾಲಕಾರ್ಮಿಕನಾಗಿ ಕೆಲಸ ಮಾಡುವುದನ್ನು ನಿಷೇಧಿಸುತ್ತದೆ. ಅಂದರೆ, ನಿಸ್ಸಂಶಯವಾಗಿ, 14ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಬಾಲಕಾರ್ಮಿಕರಾಗಬಾರದು ಎಂದರೆ, ಮಗು ಯಾವುದಾದರೂ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರಬೇಕು. ಆದ್ದರಿಂದ, ನಾನು ಅವರ ತಿದ್ದುಪಡಿಯನ್ನು ವಿರೋಧಿಸುತ್ತೇನೆ’’ ಎಂದು ಸ್ಪಷ್ಟವಾಗಿ ಉತ್ತರಿಸಿದರು.
ಅಂತಿಮವಾಗಿ ಸಂವಿಧಾನ ರಚನಾ ಸಭೆಯಲ್ಲಿ ಮೂಡಿದ ಒಮ್ಮತ ಅಭಿಪ್ರಾಯ ಸಂವಿಧಾನದಲ್ಲಿನ ವಿಧಿ 45ಕ್ಕೆ ಕಾರಣವಾಯಿತು. ಅಂಬೇಡ್ಕರ್ ರವರು ಉದ್ದೇಶಪೂರ್ವಕವಾಗಿ, ವಿಧಿ 45 ಅನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಒಂದು ಕಾಲಮಿತಿ ಕಾರ್ಯವನ್ನಾಗಿ ಸೇರಿಸಿದ್ದರು. ಸಂವಿಧಾನ ಪ್ರಾರಂಭವಾದ ಹತ್ತು ವರ್ಷಗಳ ಅವಧಿಯೊಳಗೆ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲು ರಾಜ್ಯ ಪ್ರಯತ್ನಿಸಬೇಕೆಂಬುದು ಇದರ ಮೂಲ ಆಶಯವಾಗಿತ್ತು. ಆದರೆ, ಸಂವಿಧಾನದ ಈ ಕಾಲಮಿತಿ ಆಶಯವನ್ನು ಈಡೇರಿಸಲು ನಾವು ದಯನೀಯವಾಗಿ ಸೋತೆವು.
1993ರಲ್ಲಿ ಸರ್ವೋಚ್ಚ ನ್ಯಾಯಾಲಯವು ಉನ್ನಿಕೃಷ್ಣನ್ ಹಾಗೂ ಆಂಧ್ರಪ್ರದೇಶ ರಾಜ್ಯ ಪ್ರಕರಣದಲ್ಲಿ 14 ವರ್ಷದವರೆಗೆ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕೆಂದು ಘೋಷಿಸಿತು. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪನ್ನು ಆಧರಿಸಿ, 2002ರಲ್ಲಿ ಸಂವಿಧಾನದ 86ನೇ ತಿದ್ದುಪಡಿಯ ಮೂಲಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಲಾಯಿತು. ಸಂವಿಧಾನದ ವಿಧಿ 21ಎ ಅನ್ವಯ ಭಾರತದಲ್ಲಿ 6ರಿಂದ 14 ವಯಸ್ಸಿನ ಎಲ್ಲಾ ಮಕ್ಕಳಿಗೆ ಶಿಕ್ಷಣ ಒಂದು ಮೂಲಭೂತ ಹಕ್ಕಾಗಿದ್ದು, ರಾಜ್ಯವು ರೂಪಿಸುವ ಕಾನೂನಿನ ರೀತಿಯಲ್ಲಿ ಒದಗಿಸಲಾಗುತ್ತದೆ. ಇದಕ್ಕಾಗಿ, ಕೇಂದ್ರ ಸರಕಾರವು 2009ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ 2009ನ್ನು ರೂಪಿಸಿ 2010ರಲ್ಲಿ ಜಾರಿಗೊಳಿಸಿತು. ಕಾಯ್ದೆ ಜಾರಿಯಾಗಿ 15 ವರ್ಷಗಳು ಕಳೆಯುತ್ತಾ ಬಂದರೂ, ಇಂದಿಗೂ ನಾವು ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಗುಣಾತ್ಮಕ ಶಿಕ್ಷಣವನ್ನು ಒದಗಿಸುವ ಆಶಯವನ್ನು ಈಡೇರಿಸಲಾಗಿಲ್ಲ ಎಂಬುದು ನೋವಿನ ಸಂಗತಿ. ಅಂಬೇಡ್ಕರ್‌ರವರ ಈ ಮುಂಗಾಣ್ಕೆಯನ್ನು ಈಗಲಾದರೂ ಸರಕಾರಗಳು ಈಡೇರಿಸಬೇಕಿದೆ. ಅಂಬೇಡ್ಕರ್‌ರವರ 134ನೇ ಜಯಂತಿಯ ವರ್ಷದ ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಿಯಾ ಯೋಜನೆಯನ್ನು ರೂಪಿಸಬೇಕಿದೆ. ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣವನ್ನು ಸಮಾನ ಅವಕಾಶದ ಮೂಲಕ ನೆರೆಹೊರೆಯ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಮೂಲಕ ಒದಗಿಸುವ ಮೂಲಕ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಗುಣಾತ್ಮಕ ಶಿಕ್ಷಣ ಭದ್ರ ಬುನಾದಿ ಎಂಬುದನ್ನು ಮಾಡಿ ತೋರಿಸಬೇಕಿದೆ. ಈ ನಿಟ್ಟಿನಲ್ಲಿ, ಕರ್ನಾಟಕ ಅಭಿವೃದ್ಧಿ ಮಾದರಿ ದೇಶಕ್ಕೆ ಮಾದರಿಯಾಗಬೇಕಿದೆ.