×
Ad

ಕೌಟುಂಬಿಕ ಉಳಿತಾಯ ಮತ್ತು ಆರ್ಥಿಕ ಪ್ರಗತಿ

Update: 2025-09-21 12:37 IST

ಉಳಿತಾಯದ ಹೆಚ್ಚಳಕ್ಕೆ ಸರಕಾರದ ಮಟ್ಟದಲ್ಲಿಯೇ ನಿರ್ದಿಷ್ಟವಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅಲ್ಪಾವಧಿಯಲ್ಲಿ ಉಳಿತಾಯಕ್ಕೆ ಉತ್ತೇಜನವನ್ನು ನೀಡಬೇಕಾಗುತ್ತದೆ. ಬಡ್ಡಿ ದರದ ಹೆಚ್ಚಳ, ಉಳಿತಾಯದ ಮೊತ್ತಕ್ಕೆ ಸೂಕ್ತವಾದ ತೆರಿಗೆ ವಿನಾಯಿತಿ ಮತ್ತು ಮರುಪಾವತಿಯ ಬಗ್ಗೆ ವಿಶ್ವಾಸ- ಈ ಕ್ರಮಗಳು ಕೆಲವು ಮಟ್ಟಿಗೆ ಪ್ರೋತ್ಸಾಹದಾಯಕವಾಗುತ್ತವೆ.

ಪ್ರಸಕ್ತ ಕಾಲಘಟ್ಟದಲ್ಲಿ ಭಾರತದ ಆರ್ಥಿಕತೆಯ ಕುರಿತಾದ ಚಿಂತನೆಗಳು ಮತ್ತು ಪ್ರಚಾರಗಳು, ದೇಶದ ಆರ್ಥಿಕ ಪ್ರಗತಿಯ ವೇಗ, ವಿಶ್ವದಲ್ಲಿ ಆರ್ಥಿಕತೆಯ ಗಾತ್ರ ಮತ್ತು 2047ರ ಹೊತ್ತಿಗೆ ಸಾಧಿಸಲಿರುವ ಆರ್ಥಿಕ ವಿಕಾಸ ಇವುಗಳ ಬಗ್ಗೆ ಆದ್ಯತೆ ನೀಡುತ್ತಿವೆ. ಈ ಅಬ್ಬರದ ನಡುವೆ ಭಾರತದ ಅರ್ಥವ್ಯವಸ್ಥೆಯ ಸುಸ್ಥಿರ ಪ್ರಗತಿಗೆ ಅಗತ್ಯವಾದ ರಾಷ್ಟ್ರೀಯ ಉಳಿತಾಯದ ಪ್ರಮಾಣ ಇತ್ತೀಚೆಗಿನ ವರ್ಷಗಳಲ್ಲಿ ಕುಸಿಯುತ್ತಿರುವ ಆತಂಕಕಾರಿ ಬೆಳವಣಿಗೆಯು ಮುನ್ನೆಲೆಗೆ ಬರುತ್ತಿಲ್ಲ.

50 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಉಳಿತಾಯ

ಭಾರತೀಯ ರಿಸರ್ವ್ ಬ್ಯಾಂಕು (ಆರ್‌ಬಿಐ) ಪ್ರಕಾರ ವಿತ್ತವರ್ಷ 2022-23ರಲ್ಲಿ ಭಾರತದ ನಿವ್ವಳ ಕೌಟುಂಬಿಕ ಉಳಿತಾಯವು (Net financial savings) ದೇಶದ ಒಟ್ಟು ದೇಶೀಯ ಆದಾಯ-ಜಿಡಿಪಿಯ ಶೇ. 5.3 ಆಗಿತ್ತು. (ನಿವ್ವಳ ಅಂದರೆ ಒಟ್ಟು ಉಳಿತಾಯದಿಂದ ಸಾಲಗಳನ್ನು ಕಳೆಯುವಾಗ ಲಭಿಸುವ ಮೊತ್ತ) ಇದು ಸುಮಾರು 50 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ.

2024ರ ಕೇಂದ್ರ ಸರಕಾರದ ಮುಂಗಡಪತ್ರದ ಜೊತೆಗೆ ಲಭ್ಯವಾದ ಮಾಹಿತಿಯ ಪ್ರಕಾರ 2020-23ರ ಮೂರು ವರ್ಷಗಳ ಅವಧಿಯಲ್ಲಿ ನಿವ್ವಳ ಕೌಟುಂಬಿಕ ಉಳಿತಾಯವು ಸುಮಾರು ರೂ. 9 ಲಕ್ಷ ಕೋಟಿಯಷ್ಟು ಅಂದರೆ ರೂ. 14.16 ಲಕ್ಷ ಕೋಟಿಗೆ ಇಳಿದಿದೆ; ಒಟ್ಟು ಕೌಟುಂಬಿಕ ಉಳಿತಾಯದ ಪ್ರಮಾಣವು ಜಿಡಿಪಿಯ ಶೇ. 22.7ರಿಂದ ಶೇ. 18.4ಕ್ಕೆ ಕುಸಿದಿದೆ.

ಕೌಟುಂಬಿಕ ಉಳಿತಾಯದ ಕಡಿತದ ಜೊತೆಗೆ ಕಂಪೆನಿಗಳ ಮತ್ತು ಸಾರ್ವಜನಿಕ ರಂಗದ ಉಳಿತಾಯದ ಪ್ರಮಾಣವೂ ಕುಗ್ಗುತ್ತಿದೆ ಎಂಬ ವರದಿಗಳು ಇವೆ. ಇದರ ಏರಿಳಿತವನ್ನು ದೇಶದ ಒಟ್ಟು ಹೂಡಿಕೆ ಮತ್ತು ಜಿಡಿಪಿಯ ಅನುಪಾತದ ಮೂಲಕ ಸೂಚಿಸಲಾಗುತ್ತದೆ. 2007ರಲ್ಲಿ ದೇಶದ ಹೂಡಿಕೆಯು ಜಿಡಿಪಿಯ ಶೇ. 41.9 ಇತ್ತು; 2022ಕ್ಕೆ ಅದು ಶೇ. 31.4ಕ್ಕೆ ಕುಸಿಯಿತು. ದೇಶದ ಹೂಡಿಕೆಯಲ್ಲಿ ಆಗುವ ಹಿಂಜರಿತಕ್ಕೆ ಒಂದು ಪ್ರಮುಖ ಕಾರಣ ಉಳಿತಾಯದ ಕುಸಿತ.

ಉಳಿತಾಯದ ಮಹತ್ವ

ಆರ್ಥಿಕ ವಿಕಾಸಕ್ಕೆ ಬಂಡವಾಳ ಹೂಡಿಕೆ ಅಗತ್ಯ. ಸರಳವಾಗಿ ಹೇಳುವುದಾದರೆ ಕೈಗಾರಿಕೆಗಳನ್ನು ಆರಂಭಿಸಿ ನಡೆಸಲು, ಸೇವೆಗಳನ್ನು ಒದಗಿಸಲು, ಸಾರಿಗೆ ಸಂಪರ್ಕಗಳ ಅಭಿವೃದ್ಧಿಗೆ, ಕೃಷಿಗೆ, ಶಿಕ್ಷಣಕ್ಕೆ-ಹೀಗೆ ಅನೇಕ ರಂಗಗಳಲ್ಲಿ ಬಂಡವಾಳದ ಅಗತ್ಯವಿದೆ. ಬಂಡವಾಳದ ಒಂದು ಪ್ರಮುಖ ಮೂಲ ದೇಶದ ನಾಗರಿಕರು ಉಳಿಸುವ ಹಣ. ಇದಲ್ಲದೆ, ಸರಕಾರಗಳು ಮತ್ತು ಉದ್ದಿಮೆದಾರರು ಸಾಲವನ್ನು ಪಡೆಯಬಹುದು; ಹಾಗೂ ವಿದೇಶಿ ವ್ಯಾಪಾರದಿಂದ ಸಂಪಾದಿಸಿದ ವಿದೇಶಿ ವಿನಿಮಯವನ್ನು ಹೂಡಿಕೆಗೆ ಉಪಯೋಗಿಸಬಹುದು. ಇವುಗಳಲ್ಲದೆ, ವಿದೇಶಿ ಹೂಡಿಕೆಯ ಸಂಸ್ಥೆಗಳು ನಮ್ಮ ದೇಶದಲ್ಲಿ ನೇರ ಅಥವಾ ಪರೋಕ್ಷವಾಗಿ ಬಂಡವಾಳವನ್ನು ಹೂಡಲೂ ಸಾಧ್ಯವಿದೆ.

ಬಂಡವಾಳದ ಪ್ರತಿಯೊಂದು ಮೂಲಕ್ಕೂ ತನ್ನದೇ ಆದ ತೊಡಕುಗಳು ಇವೆ. ಹೂಡಿಕೆಗೋಸ್ಕರ ಸರಕಾರವು ಸಾಲವನ್ನು ಪಡಕೊಂಡರೆ ಅದರ ಮೇಲೆ ಬಡ್ಡಿಯನ್ನು ತೆರಬೇಕಾಗುತ್ತದೆ, ಕೆಲವು ನಿರ್ಬಂಧಗಳಿಗೂ ಒಳಗಾಗುತ್ತದೆ. ವಿದೇಶಿ ವಿನಿಮಯದ ಮಿಗತೆಯು ಆಮದು-ರಫ್ತುಗಳ ಮೇಲೆ ಅವಲಂಬಿಸಿದೆ. ವಿದೇಶೀ ಸಂಸ್ಥೆಗಳ ಹೂಡಿಕೆಯು ಇಲ್ಲಿ ಎಷ್ಟು ಪ್ರತಿಫಲ ಸಿಗಬಹುದೆಂಬುದನ್ನು ಹೊಂದಿಕೊಂಡಿದೆ.

ಆದರೆ ದೇಶದ ನಾಗರಿಕರ ಉಳಿತಾಯದ ಪ್ರಮಾಣದಲ್ಲಿ ತೀವ್ರ ಏರಿಳಿತವಾಗುವುದಿಲ್ಲ; ಮಾತ್ರವಲ್ಲ ಅದನ್ನು ವಿನಿಯೋಗಿಸಲು ಸಾಮಾನ್ಯವಾಗಿ ಕಡಿದಾದ ನಿರ್ಬಂಧಗಳಿರುವುದಿಲ್ಲ. ಉಳಿತಾಯಕ್ಕೆ ಕಾಲಕಾಲಕ್ಕೆ ಬಡ್ಡಿ ಕೊಡುವ ಮತ್ತು ಅವಧಿ ಮುಗಿದಾಗ ಮರುಪಾವತಿ ಮಾಡುವ ಬಾಧ್ಯತೆ ಉಳಿತಾಯವನ್ನು ಶೇಖರಿಸಿದ ಸಂಸ್ಥೆ (ಸರಕಾರ, ಬ್ಯಾಂಕು, ಅಂಚೆ ವಿಭಾಗ ಇತ್ಯಾದಿ)ಗೆ ಇದೆ. ದೇಶದ ಹಿತದೃಷ್ಟಿಯಿಂದ ಈ ಬಾಧ್ಯತೆಯನ್ನು ಸಂಸ್ಥೆಗಳು ಪಾಲಿಸುತ್ತವೆ, ಹಾಗಾಗಿ ನಾಗರಿಕರಿಗೂ ಸಂಸ್ಥೆಗಳ ಮೇಲೆ ವಿಶ್ವಾಸ ಭದ್ರವಾಗಿ ಉಳಿಯುತ್ತದೆ.

ಭಾರತದ ಒಟ್ಟು ಉಳಿತಾಯದ ಶೇ. 60ರಷ್ಟು ಕೌಟುಂಬಿಕ ವಲಯದಿಂದಲೇ ಬರುತ್ತದೆ; ಹೂಡಿಕೆಗೆ ಅಗತ್ಯವಾದ ಹಣಕಾಸು ಸಂಪನ್ಮೂಲದ ಬಹುಭಾಗವನ್ನು ಒದಗಿಸುವುದೇ ಈ ವಲಯ. ಮಾತ್ರವಲ್ಲ ಉಳಿತಾಯವು ಕುಟುಂಬಗಳಿಗೆ ಸಾಮಾಜಿಕ ಭದ್ರತೆಯನ್ನು ನೀಡುತ್ತದೆ, ಹಿರಿಯ ನಾಗರಿಕರಿಗೆ ಬದುಕಿಗೆ ಆಸರೆಯನ್ನು ಕೊಡುತ್ತದೆ.

ಈ ಎಲ್ಲ ಕಾರಣಗಳಿಂದಾಗಿ ದೇಶದ ಹೂಡಿಕೆಗೆ ಉಳಿತಾಯವೇ ಪ್ರಧಾನ ಮತ್ತು ಭದ್ರವಾದ ಮೂಲವೆಂಬುದು ತಜ್ಞರ ಅಭಿಪ್ರಾಯ. ಹಾಗಾಗಿಯೇ ಪ್ರಗತಿಶೀಲ ದೇಶದ ವಿಕಾಸದಲ್ಲಿ ದೇಶದ ಉಳಿತಾಯ ಮಹತ್ವದ ಸ್ಥಾನವನ್ನು ಹೊಂದಿದೆ.

ಉಳಿತಾಯ ಮತ್ತು ಉದ್ಯಮಶೀಲತೆ

ಹೊಸ ಉದ್ದಿಮೆ ಆರಂಭಿಸಲು ಮೂಲಧನ ಅಗತ್ಯ. ನವೋದ್ದಿಮೆಯಲ್ಲಿ ತೊಡಗಿಸಿಕೊಳ್ಳುವ ಉದ್ದಿಮೆದಾರ ಸಾಮಾನ್ಯವಾಗಿ ತನ್ನ ಉಳಿತಾಯದ ಕೆಲವಂಶವನ್ನು ಉದ್ದಿಮೆಯಲ್ಲಿ ಹಾಕುತ್ತಾನೆ. ಹಣಕಾಸು ಸಂಸ್ಥೆಗಳು ಸಾಲ ನೀಡುವ ಮೊದಲು ಉದ್ದಿಮೆಯಲ್ಲಿ ಆತನ ಹೂಡಿಕೆ ಎಷ್ಟು ಎಂಬುದು ಪರಿಶೀಲಿಸುತ್ತವೆ. ಉದ್ದಿಮೆದಾರನ ಕನಿಷ್ಠ ಹೂಡಿಕೆ ಇಲ್ಲದಿದ್ದರೆ ಬ್ಯಾಂಕು ಕೂಡ ಸಾಲ ನೀಡುವುದಿಲ್ಲ.ಉದ್ಯಮಶೀಲ ಕುಟುಂಬದ ಉಳಿತಾಯದಲ್ಲಿ ಖೋತಾ ಆದಾಗ ಹೊಸ ಹೂಡಿಕೆಯಲ್ಲಿ ಹಿಂಜರಿಕೆ ಉಂಟಾಗುತ್ತದೆ.

ಕೌಟುಂಬಿಕ ಉಳಿತಾಯವನ್ನು ಸಾಮಾನ್ಯವಾಗಿ ಸುರಕ್ಷತೆಯ ದೃಷ್ಟಿಯಿಂದ ಬ್ಯಾಂಕುಗಳಲ್ಲಿ ಅಥವಾ ಅಂಚೆ ಕಚೇರಿಯ ಠೇವಣಿಗಳಲ್ಲಿ ಇಡುತ್ತಾರೆ. ಆ ಹಣವನ್ನು ಸರಕಾರ ತನ್ನ ಹೂಡಿಕೆಗಳಿಗೆ ಮತ್ತು ಬ್ಯಾಂಕು ಗಳು ಅರ್ಹರಿಗೆ ಸಾಲ ನೀಡಲು ವಿನಿಯೋಗಿಸುತ್ತವೆ. ಈ ಕಾರಣಕ್ಕಾಗಿಯೇ ಕೌಟುಂಬಿಕ ಉಳಿತಾಯವನ್ನು ರಾಷ್ಟ್ರೀಯ ಉಳಿತಾಯದ ಬುನಾದಿ ಎನ್ನಲಾಗುತ್ತದೆ.

ಉಳಿತಾಯದಲ್ಲಿ ಕಡಿತವನ್ನು ಎರಡು ದೃಷ್ಟಿಯಿಂದ ಪರಾಮರ್ಶಿಸಬೇಕು. ಆದಾಯ ಹೆಚ್ಚಿ ಸಂಪಾದನೆಯನ್ನು ಸರಕು ಮತ್ತು ಸೇವೆಗಳನ್ನು ಕೊಂಡುಕೊಳ್ಳಲು ವಿನಿಯೋಗಿಸಿದಾಗ ಅವುಗಳಿಗೆ ಬೇಡಿಕೆ ಹೆಚ್ಚಿ ಉತ್ಪಾದನೆಗೆ ಉತ್ತೇಜನ ನೀಡುತ್ತದೆ. ಆಗ ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ಉತ್ಪಾದನಾ ರಂಗಗಳಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ, ದುಡಿಯುತ್ತಿರುವ ಉದ್ಯೋಗಿಗಳ ಸಂಪಾದನೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಪರಿಸ್ಥಿತಿ ಪರಸ್ಪರ ಪೂರಕವಾಗಿ ಆರ್ಥಿಕತೆ ಚೇತರಿಸುತ್ತದೆ ಮತ್ತು ಅರ್ಥವ್ಯವಸ್ಥೆ ಪ್ರಗತಿಪಥದಲ್ಲಿ ಸಾಗುತ್ತದೆ. ಉಳಿತಾಯ ಮಾಡದೆ, ಎಲ್ಲ ಸಂಪಾದನೆಯನ್ನು ವ್ಯಯಿಸಿದರೂ ಆರ್ಥಿಕತೆಯ ಚೇತರಿಕೆಗೆ ಉತ್ತೇಜನ ಸಿಗುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಒಂದು ಅರ್ಥವ್ಯವಸ್ಥೆಯಲ್ಲಿ ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯುತ್ತದೆ ಮತ್ತು ಆರ್ಥಿಕತೆ ಸುಧಾರಿಸುತ್ತದೆ.

ಉಳಿತಾಯದ ಕುಸಿತಕ್ಕೆ ಕಾರಣಗಳೇನು?

ಹೋದ ಒಂದು ದಶಕದಲ್ಲಿ ಕೇಂದ್ರ ಸರಕಾರದ ಕೆಲವು ನಿರ್ಧಾರಗಳಿಂದ ಆರ್ಥಿಕತೆಗೆ ಹೊಡೆತ ಬಿತ್ತು. 2016ರ ನೋಟು ರದ್ದತಿ, 2017ರ ಹೊಸ ಜಿಎಸ್‌ಟಿ ಕಾನೂನು ಮತ್ತು 2020ರ ಕೋವಿಡ್ ಸಂದರ್ಭದ ದೇಶಾದ್ಯಂತ ಹೇರಲ್ಪಟ್ಟ ‘ಲಾಕ್‌ಡೌನ್’- ಈ ಕ್ರಮಗಳಿಂದ ಸಾವಿರಾರು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಬಾಗಿಲು ಹಾಕಬೇಕಾಗಿ ಬಂತು. ಉದ್ಯೋಗಗಳಿಗೆ ಹಾನಿಯಾಯಿತು. ಇವೆಲ್ಲದರ ಜೊತೆಗೆ ದೈನಂದಿನ ಬಳಕೆಯ ಸೇವೆ ಮತ್ತು ಸರಕುಗಳ ಬೆಲೆಗಳು ಏರಿವೆ. ಜನಸಾಮಾನ್ಯರ ಹಾಗೂ ಕೆಳ ಮಧ್ಯಮವರ್ಗದ ಸಂಪಾದನೆಯಲ್ಲಿ ತೀವ್ರ ಕುಸಿತವಾಗತೊಡಗಿತು.

ಸಂಪಾದನೆಯ ಕುಸಿತವಾದಾಗ ಕೆಲವೊಮ್ಮೆ ಅಗತ್ಯದ ವೆಚ್ಚವನ್ನು ನಿರ್ವಹಿಸಲು ಸಾಲ ಮಾಡಬೇಕಾಗುತ್ತದೆ. ಅದನ್ನು ಮರುಪಾವತಿಸಲು ಅಸಾಧ್ಯವಾದಾಗ ಬಡ್ಡಿಗೆ ಬಡ್ಡಿ ಸೇರುವುದೂ ಅಲ್ಲದೆ, ಸಾಲವಸೂಲಿಯ ‘ಏಜೆಂಟ’ರ ಹಾವಳಿಯೂ ಹೆಚ್ಚಾಗುತ್ತದೆ.

ಹೋದ ದಶಕದಲ್ಲಿ ಕೌಟುಂಬಿಕ ಸಾಲಗಳು ಎರಡು ಪಟ್ಟು ಹೆಚ್ಚಾಗಿವೆ. 2021-22ರಲ್ಲಿ ಈ ಸಾಲದ ಒಟ್ಟು ಪ್ರಮಾಣ ದೇಶದ ಜಿಡಿಪಿಯ ಶೇ. 3.8 ಇದ್ದರೆ 2022-23ಕ್ಕೆ ಅದು ಶೇ. 5.8ಕ್ಕೆ ಏರಿದೆ; ಹೆಚ್ಚುತ್ತಿರುವ ಕೌಟುಂಬಿಕ ಸಾಲಗಳ ಆಳವಾದ ಪರಿಶೀಲನೆಯ ಅಗತ್ಯವನ್ನು ಆರ್‌ಬಿಐಯು ಈ ವರ್ಷದ ಜೂನ್‌ನಲ್ಲಿ ಪ್ರಕಟಿಸಿದ ಹಣಕಾಸು ಸ್ಥಿರತೆಯ ವರದಿಯಲ್ಲಿ ಒತ್ತಿ ಹೇಳಿದೆ. ಈ ಎಲ್ಲ ಒತ್ತಡಗಳಿಂದಾಗಿ ಕುಟುಂಬಗಳ ಉಳಿತಾಯದ ಮೇಲೆ ಆಗುತ್ತದೆ.

ನಾಳೆಗಿಂತ ಇಂದಿನ ಅಗತ್ಯಕ್ಕೆ ವೆಚ್ಚ

ಭಾರತದಲ್ಲಿ ಉಳಿತಾಯ ಕುಸಿತದ ಇನ್ನೊಂದು ಮಜಲನ್ನು ಗಮನಿಸಬೇಕು. ಉಳಿತಾಯದ ಇಳಿತದ ಅರ್ಥ ಸಂಪಾದನೆಯನ್ನು ಹೆಚ್ಚು ಹೆಚ್ಚು ವಿನಿಯೋಗಕ್ಕೆ ಉಪಯೋಗಿಸುತ್ತಿದ್ದಾರೆ ಎಂದಲ್ಲ; ಬದಲಾಗಿ ಆಯವು ಸ್ಥಗಿತಗೊಂಡು ಬೆಲೆಗಳು ಏರುತ್ತಾ ಇದ್ದಾಗ ಕುಟುಂಬಗಳ ಮೇಲೆ ನಾಳೆಗೆ ಹಣ ಉಳಿಸುವ ಬದಲಾಗಿ ಇಂದಿನ ಉದರಂಭರಣೆಗೆ ಆದ್ಯತೆ ನೀಡುವ ಒತ್ತಡ ಬೀಳುತ್ತದೆ. ಅವರ ವೆಚ್ಚದ ಚಿತ್ರವೂ ಬದಲಾಗುತ್ತದೆ; ದೈನಂದಿನ ಬಳಕೆಯ ವಸ್ತುಗಳಾದ ಆಹಾರ ಧಾನ್ಯ, ಕನಿಷ್ಠ ತರಕಾರಿ ಮತ್ತು ಮಾಂಸ, ಹಾಲು, ಹಣ್ಣು, ಅಡುಗೆ ಅನಿಲ, ವಿದ್ಯುತ್, ಸಾರಿಗೆಗೇ ಪ್ರಾಶಸ್ತ್ಯ ಕೊಡಬೇಕಾಗಿ ಬಂದು ಉಳಿದ ಗೃಹೋಪಯೋಗಿ ವಸ್ತುಗಳ ಮೇಲೆ, ಮಕ್ಕಳ ವಿದ್ಯಾಭ್ಯಾಸದ ಮೇಲೆ, ಆರೋಗ್ಯ ರಕ್ಷಣೆಯ ಮೇಲೆ ವೆಚ್ಚ ಕಡಿತಗೊಳ್ಳುತ್ತದೆ. ಈ ಬದಲಾವಣೆಯಿಂದಾಗಿ ಉಳಿತಾಯದ ಖೋತವಾಗಿದ್ದರೂ ಸಂಪಾದನೆಯ ಬಹುಭಾಗವೂ ದೈನಂದಿನ ಅಗತ್ಯಕ್ಕೆ ವಿನಿಯೋಗಿಸಲ್ಪಟ್ಟು ಉಳಿದ ಸರಕುಗಳ ಬೇಡಿಕೆ ಕುಸಿಯುತ್ತದೆ. ಉಳಿತಾಯದ ಕುಸಿತ ಮತ್ತು ವೆಚ್ಚದ ಹೆಚ್ಚಳ ತಾತ್ವಿಕವಾಗಿ ಆರ್ಥಿಕತೆಗೆ ಉತ್ತೇಜನ ನೀಡಬೇಕಾದರೂ ಈ ಪರಿಸ್ಥಿತಿಯಲ್ಲಿ ಚಟುವಟಿಕೆಗೆ ಏಟು ಬೀಳುತ್ತದೆ. ಬೇಡಿಕೆಯೂ ಸೀಮಿತವಾಗುತ್ತದೆ; ಹೂಡಿಕೆಗೆ ಅಗತ್ಯವಾದ ಉಳಿತಾಯವೂ ಲಭ್ಯವಾಗುವುದಿಲ್ಲ.

ಅಗತ್ಯದ ಕ್ರಮಗಳು

ಉಳಿತಾಯದ ಹೆಚ್ಚಳಕ್ಕೆ ಸರಕಾರದ ಮಟ್ಟದಲ್ಲಿಯೇ ನಿರ್ದಿಷ್ಟವಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅಲ್ಪಾವಧಿಯಲ್ಲಿ ಉಳಿತಾಯಕ್ಕೆ ಉತ್ತೇಜನವನ್ನು ನೀಡಬೇಕಾಗುತ್ತದೆ. ಬಡ್ಡಿ ದರದ ಹೆಚ್ಚಳ, ಉಳಿತಾಯದ ಮೊತ್ತಕ್ಕೆ ಸೂಕ್ತವಾದ ತೆರಿಗೆ ವಿನಾಯಿತಿ ಮತ್ತು ಮರುಪಾವತಿಯ ಬಗ್ಗೆ ವಿಶ್ವಾಸ- ಈ ಕ್ರಮಗಳು ಕೆಲವು ಮಟ್ಟಿಗೆ ಪ್ರೋತ್ಸಾಹದಾಯಕವಾಗುತ್ತವೆ.

ದೀರ್ಘಾವಧಿಯಲ್ಲಿ ಸರಕಾರವು ಬೆಲೆಗಳ ಮೇಲೆ ನಿಯಂತ್ರಣ, ಅಗ್ಗವಾಗಿ ಸಾರ್ವಜನಿಕ ಸೇವೆಗಳ ಪೂರೈಕೆ, ಅತ್ಯಂತ ತಳಮಟ್ಟದಲ್ಲಿರುವ ನಾಗರಿಕರಿಗೆ ಉಚಿತವಾಗಿ ಅಗತ್ಯವಸ್ತುಗಳನ್ನು ಮತ್ತು ಸೇವೆಗಳನ್ನು ಒದಗಿಸುವುದು-ಈ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಸಾಮಾಜಿಕ ಭದ್ರತೆ-ಈ ಸಮಸ್ಯೆಗಳು ಮುನ್ನೆಲೆಗೆ ಬಂದಿದ್ದವು. ದೇಶದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಮತ್ತು ಭದ್ರಗೊಳಿಸಲು ಕೌಟುಂಬಿಕ ಉಳಿತಾಯಕ್ಕೆ ಉತ್ತೇಜನ ಕೊಟ್ಟು ಅದರ ಕುಸಿತವನ್ನು ತಡೆಯುವುದು ಮಾತ್ರವಲ್ಲ, ಅದು ಹೆಚ್ಚುವಂತೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ತುರ್ತು ದೇಶದ ಮುಂದೆ ಇದೆ.

ಕೊನೆಯ ಮಾತು

ಎರಡು ತಿಂಗಳ ಹಿಂದೆ ನಿವೃತ್ತ ಬ್ಯಾಂಕು ಅಧಿಕಾರಿಗಳ ಸಭೆಯೊಂದರಲ್ಲಿ ಸಿಕ್ಕಿದ ಅನೇಕ ಸಹೋದ್ಯೋಗಿಗಳ ಒಂದು ಪ್ರಶ್ನೆ: ನಮ್ಮ ನಿವೃತ್ತಿ ವೇತನ ಯಾವಾಗ ಪರಿಷ್ಕೃತವಾಗಲಿದೆ ಎಂದು. ನಿವೃತ್ತರಾಗುವಾಗ ಸಿಕ್ಕಿದಷ್ಟೇ ಪಿಂಚಣಿ ಇಂದು ಸಿಗುತ್ತಿದೆ; ಆದರೆ ದಿನಬಳಕೆಯ ಸರಕು, ಆರೋಗ್ಯ ವಿಮೆ, ವೈದ್ಯಕೀಯ ಚಿಕಿತ್ಸೆ, ಮನೆ ಬಾಡಿಗೆ ಎಲ್ಲವೂ ವರ್ಷದಿಂದ ವರ್ಷಕ್ಕೆ ತುಟ್ಟಿಯಾಗುತ್ತಿವೆ. ತಿಂಗಳು ತಿಂಗಳು ನಿವೃತ್ತಿ ವೇತನ ಸಿಗುವ ಹಿರಿಯ ನಾಗರಿಕರ ಪರಿಸ್ಥಿತಿ ಹೀಗಾದರೆ, ಉದ್ಯೋಗ ಕಳಕೊಂಡ ಮಧ್ಯ ವಯಸ್ಕರ, ಉದ್ಯೋಗ ಇಲ್ಲದ ಯುವಜನರ, ಕೂಲಿ ಮತ್ತು ಗುತ್ತಿಗೆ ಕಾರ್ಮಿಕರ ಸ್ಥಿತಿ ಏನು ಎಂಬ ಪ್ರಶ್ನೆ ಮನಸ್ಸಿನಲ್ಲಿ ಬಂತು. ಅದಕ್ಕೆ ಉತ್ತರ ದೇಶದ ನಾಯಕರೇ ನೀಡಬೇಕಷ್ಟೆ!

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಟಿ.ಆರ್. ಭಟ್

contributor

Similar News