ಗುಂಪು ಬಾಳೆ, ಮಿಶ್ರ ಬೇಸಾಯದಲ್ಲಿ ಯಶಸ್ಸು ಕಂಡ ತಂದೆ-ಪುತ್ರ
ಚಾಮರಾಜನಗರ: ತಂದೆ ಹಾಗೂ ಪುತ್ರ ಜೊತೆಗೂಡಿ ಸಾವಯವ ಕೃಷಿ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ. ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಅರಳಿಕಟ್ಟೆ ಗ್ರಾಮದ ರೈತ ಸದಾಶಿವಪ್ಪ ಮತ್ತು ಅವರ ಪುತ್ರ ಸಂಜೀವ್‌ಕುಮಾರ್ ಸಾವಯವ ಕೃಷಿಯಲ್ಲಿ ಯಶಸ್ವಿಯಾಗಿದ್ದು, ಗುಂಪು ಬಾಳೆ ಕೃಷಿಯೊಂದಿಗೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಅರಳಿಕಟ್ಟೆ ಗ್ರಾಮದಲ್ಲಿ ಸದಾಶಿವಪ್ಪರ ಸುಮಾರು 2.5 ಎಕರೆ ಜಮೀನಿನಲ್ಲಿ ಸುಮಾರು 150 ಗುಂಪು ಬಾಳೆ ಗಿಡಗಳಿವೆ. ಅರ್ಧ ಅಡಿ ಗುಂಡಿ ತೋಡಿ ಅದರೊಳಗೆ ತಿಪ್ಪೆ ಗೊಬ್ಬರ ಹಾಕಿ ಏಲಕ್ಕಿ ಬಾಳೆ ಕಂದು ನೆಡಲಾಗಿತ್ತು. ಈ ಗಿಡದ ಸುತ್ತ 10 ಅಡಿ ಉದ್ದ, 20 ಅಡಿ ಅಗಲ ಜಾಗ ಬಿಟ್ಟು ಮತ್ತೊಂದು ಕಂದು ಬಿತ್ತಿದ್ದರು. ಹೀಗೆ ದೂರ ದೂರದಲ್ಲಿ ಒಂದೊಂದು ಗಿಡ ನೆಟ್ಟು ಇದರ ಬುಡದಲ್ಲೇ ಬೆಳೆಯುವ ಮರಿ ಕಂದುಗಳನ್ನು ವಿಶಿಷ್ಟ ವಿಧಾನದಲ್ಲಿ ಕೃಷಿ ಮಾಡುತ್ತಿದ್ದಾರೆ.
ಬಾಳೆ ಬೆಳೆಯೊಂದಿಗೆ ತೆಂಗು, ಪರಂಗಿ, ಮುಸುಕಿನ ಜೋಳಕ್ಕೆ ಜೀವಾಮೃತ ನೀಡುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಈವರೆಗೂ ರಾಸಾಯನಿಕ ಔಷಧಗಳನ್ನು ಬಳಕೆ ಮಾಡಿಲ್ಲ. ವಿಷಮುಕ್ತ ಆಹಾರ ಬೆಳೆಯಬೇಕೆಂಬ ಉದ್ದೇಶದಿಂದ ಹಲವು ವರ್ಷಗಳಿಂದ ಸಾವಯವ ವಿಧಾನದಲ್ಲಿ ಕೃಷಿ ಮಾಡುತ್ತಿದ್ದಾರೆ. ಬೆಳೆಯಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕೊಳೆಸಿ ಅದನ್ನೇ ಗೊಬ್ಬರ ಮಾಡುತ್ತಿದ್ದಾರೆ. ತೆಂಗಿನ ಗರಿ, ಬಾಳೆಗೊನೆ, ಎಲೆ, ತೆಂಗಿನ ಕಾಯಿಯ ಸಿಪ್ಪೆ ಬಿದ್ದ ಜಾಗದಲ್ಲೇ ಬಿದ್ದು ಕೊಳೆತು ಗೊಬ್ಬರವಾಗುತ್ತಿದೆ. ಭೂಮಿಯ ಮಣ್ಣು ಫಲವತ್ತತೆಯಿಂದ ಕೂಡಿದೆ.
ಜೀವಾಮೃತದ ಹೊಂಡ: ಜಮೀನಿನಲ್ಲಿ 40 ಅಡಿ ಉದ್ದ, 40 ಅಡಿ ಅಗಲ, 10 ಅಡಿ ಆಳದ ಕೃಷಿ ಹೊಂಡವನ್ನು ತಾವೇ ನಿರ್ಮಾಣ ಮಾಡಿಕೊಂಡಿದ್ದಾರೆ. ಇದರಲ್ಲಿರುವ ನೀರಿಗೆ ಹಸುವಿನ ಗಂಜಲ, ಜೀವಾಮೃತ, ಸೆಗಣಿ ಹಾಕಿ ಮೋಟಾರ್ ಮೂಲಕ ಬೆಳೆಗಳಿಗೆ ಹಾಯಿಸುತ್ತಿದ್ದಾರೆ. ವಾರಕ್ಕೆ ಎರಡು ಡ್ರಮ್‌ನಲ್ಲಿ ತಯಾರಿಸಿದ ಜೀವಾಮೃತವನ್ನು ನೀರಿನ ಹೊಂಡಕ್ಕೆ ಸುರಿಯುತ್ತಿದ್ದಾರೆ. ದೊಡ್ಡ ಪೈಪ್‌ಗಳ ಮೂಲಕ ನೀರು ಹಾಯಿಸುತ್ತಿದ್ದಾರೆ. ಟ್ರ್ಯಾಕ್ಟರ್, ಜೆಸಿಬಿಯನ್ನು ಇಟ್ಟುಕೊಂಡಿದ್ದಾರೆ. ಕೃಷಿ ಇಲಾಖೆಯಿಂದ ಮರ ಹತ್ತುವ ಯಂತ್ರವನ್ನು ಪಡೆದಿರುವುದು ಬಿಟ್ಟರೆ, ಬೇರೆ ಯಾವ ಯೋಜನೆಗಳನ್ನೂ ಈ ರೈತ ಬಳಸಿಕೊಂಡಿಲ್ಲ.
ಯೂಟ್ಯೂಬ್ ನೋಡಿ ಕೃಷಿ:
ಎರೆಹುಳು ಗೊಬ್ಬರ ಸಾವಯವ ವಿಧಾನದಲ್ಲಿ ಕೃಷಿ ಮಾಡುತ್ತಿರುವ ಸದಾಶಿವಪ್ಪ ಮತ್ತು ಸಂಜೀವ್‌ಕುಮಾರ್ ಯೂಟ್ಯೂಬ್‌ನಲ್ಲಿ ಸಾವಯವ ಕೃಷಿಯ ವೀಡಿಯೊಗಳನ್ನು ನೋಡಿ ತಾವೂ ಪ್ರಯೋಗ ಮಾಡುತ್ತಿದ್ದಾರೆ. ಇಂತಹ ರೈತರಿಗೆ ಕೃಷಿ ಇಲಾಖೆ, ಕೃವಿ ವಿಜ್ಞಾನ ಕೇಂದ್ರಗಳಿಂದ ಉತ್ತಮ ಮಾರ್ಗದರ್ಶನ ದೊರೆತರೆ ಮತ್ತಷ್ಟು ಮಾದರಿ ಕೃಷಿಕರಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದ್ದಾರೆ.
ಜಮೀನಿನಲ್ಲೇ ಎರೆಹುಳು: ಎರೆಹುಳು ಗೊಬ್ಬರ ತಯಾರು ಮಾಡಿಕೊಳ್ಳುತ್ತಿರುವ ಸದಾಶಿವಪ್ಪ, ಸಂಜೀವ್ ಕುಮಾರ್, ಜಮೀನಿನ ಕೊಟ್ಟಿಗೆ ಬಳಿ ತಾತ್ಕಾಲಿಕವಾಗಿ ಟಾರ್ಪಾಲ್ ಹೊದಿಸಿದ ತೊಟ್ಟಿಯಲ್ಲಿ ಎರೆಹುಳು ಗೊಬ್ಬರ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಈ ಗೊಬ್ಬರವನ್ನು ತಾವು ಕೃಷಿ ಮಾಡುವ ಬೆಳೆಗೆ ಹಾಕುತ್ತಿದ್ದಾರೆ. ಜಮೀನಿನ ಮಣ್ಣು ಫಲವತ್ತತೆಯಿಂದ ಕೂಡಿರಲು ಇದೂ ಕಾರಣವಾಗಿದೆ.
ನಾಲ್ಕೈದು ಬಾಳೆ ಗಿಡಗಳು ಒಂದೇ ಕಡೆ ಬೆಳೆಸಿ ಗುಂಪು ಬಾಳೆ ಕೃಷಿ ಸಾವಯವ ಕೃಷಿ ರೈತರಾದ ಸದಾಶಿವಪ್ಪ ಮತ್ತು ಮಗ ಸಂಜೀವ ಕುಮಾರ್ ಸಾವಯವ ಮಾಡುತ್ತಿದ್ದಾರೆ. ತಾಯಿ ಬಾಳೆ ಫಲ ನೀಡುವ ಸ್ವಲ್ಪ ತಿಂಗಳಿಗೆ ಮರಿ ಕಂದುಗಳ ಬೆಳೆದು ಗೊನೆ ಬಿಡುತ್ತಿವೆ. ಇದರಿಂದ ರೈತರಾದ ತಂದೆ ಮತ್ತು ಮಗನಿಗೆ ನಿರಂತರವಾಗಿ ಆದಾಯ ಲಭಿಸುತ್ತಿದೆ. ಗುಂಪು ಬಾಳೆ ಕೃಷಿಯೊಂದಿಗೆ ತೆಂಗಿನ ಮರಗಳನ್ನೂ ಬೆಳೆಸಿದ್ದಾರೆ.
100 ತೆಂಗಿನ ಮರಗಳು, ಇದರ ನಡುವೆ ಪರಂಗಿ ಗಿಡಗಳನ್ನು ಹಾಕಿದ್ದಾರೆ. ಕರಿಮೆಣಸಿನ ಬಳ್ಳಿಯೂ ಹಬ್ಬಿದೆ. ಒಂದೆಲಗ ಸೊಪ್ಪುನೆಲದ ತುಂಬೆಲ್ಲಾ ಹರಡಿದೆ. ಗೆಣಸು ಬೆಳೆದಿದ್ದಾರೆ. ಹಸುಗಳನ್ನು ಸಾಕಿದ್ದು, ಅವುಗಳಿಗೆ ಮೇವು ಒದಗಿಸುವ ಸಲುವಾಗಿ ಮುಸುಕಿನ ಜೋಳ ಬೆಳೆದಿದ್ದಾರೆ.
ಗುಂಪು ಬಾಳೆ ಕೃಷಿ ಮಾಡುವುದು ಸುಲಭ ಮತ್ತು ಸರಳ ವಿಧಾನವಾಗಿದೆ. ಇದಕ್ಕೆ ಅಧಿಕ ಶ್ರಮ ಹಾಕುವ ಅಗತ್ಯವಿಲ್ಲ. ಹೆಚ್ಚು ಸಮಯ ಕೊಡಬೇಕಾಗಿಲ್ಲ. ಒಬ್ಬರೇ ಕೃಷಿ ಮಾಡಬಹುದು. ಬಾಳೆ ಬೆಳೆ ಕೃಷಿ ಜತೆ ನಾವು ಬೇರೆ ಕೆಲಸಗಳನ್ನೂ ಮಾಡಿ ಕೊಳ್ಳಬಹುದು. ಹೀಗಾಗಿ ಈ ವಿಧಾನ ನಮಗೆ ಹೆಚ್ಚು ಉಪಯೋಗಕಾರಿ.
-ಸಂಜೀವ್‌ಕುಮಾರ್, ರೈತ
ಈ ಹಿಂದೆ ಕಳೆನಾಶಕಗಳು, ರಾಸಾಯನಿಕ ಔಷಧ, ಗೊಬ್ಬರಗಳೇ ಇರಲಿಲ್ಲ. ಅವರು ಆರೋಗ್ಯಕರ ಆಹಾರ ಬೆಳೆಯುತ್ತಿದ್ದರು. ಆದರೆ ಈಗ ಹಣ ಮಾಡಲು ಹೋಗಿ ರಾಸಾಯನಿಕ ಬಳಕೆ ಮಾಡಿ ಆರೋಗ್ಯ ಕೆಡುತ್ತಿದೆ. ಮಣ್ಣಿನ ಫಲವತ್ತತೆ ಕಡಿಮೆಯಾಗಿ, ಜೀವಾಣುಗಳು ಸಾಯುತ್ತಿವೆ. ವಿಷಮುಕ್ತ ಆಹಾರ ಬೆಳೆಯುವ ಉದ್ದೇಶದಿಂದ ಸಾವಯವ ವಿಧಾನದಲ್ಲಿ ಗುಂಪು ಬಾಳೆ ಬೆಳೆಯುತ್ತಿದ್ದೇವೆ.
-ಸದಾಶಿವಪ್ಪ, ರೈತ