×
Ad

ರಾಯಚೂರು ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ

Update: 2025-07-29 11:32 IST

ರಾಯಚೂರು: ಜಿಲ್ಲೆಯಲ್ಲಿ ಅವಧಿಗೂ ಮುನ್ನವೇ ಮುಂಗಾರು ಆರಂಭವಾಗಿದ್ದರಿಂದ ಕೃಷಿ ಚಟುವಟಿಕೆಗಳು ಭರದಿಂದ ಸಾಗಿತ್ತು. ಆದರೆ ಈಗ ರೈತರಿಗೆ ರಸಗೊಬ್ಬರ ಸರಿಯಾಗಿ ಸಿಗದೇ ಕೃತಕ ಆಭಾವ ಸೃಷ್ಟಿಯಾಗಿ ರೈತರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯಾದ್ಯಂತ ರಸಗೊಬ್ಬರ ಕೊರತೆಯನ್ನು ರೈತರು ಎದುರಿಸುತ್ತಿರುವಾಗಲೇ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ವಿಎಸ್‌ಎಸ್‌ಎನ್)ದಿಂದ ಅಕ್ರಮವಾಗಿ ಯೂರಿಯಾ ರಸಗೊಬ್ಬರವನ್ನು ಎತ್ತುವಳಿ ಮಾಡಿಕೊಂಡು ರೈತರಿಗೆ ಹಂಚಿಕೆ ಮಾಡದೇ ಖಾಸಗಿಯಾಗಿ ಮಾರಾಟ ಮಾಡಲಾಗಿದೆ ಎಂಬುವುದು ರೈತರಿಂದ ಆರೋಪ ಕೇಳಿಬರುತ್ತಿದೆ.

ಕೃಷಿ ಬಿತ್ತನೆ ಚಟುವಟಿಕೆ ಸಾಗಿದ್ದು ರೈತರ ಬೇಡಿಕೆಗೆ ತಕ್ಕಂತೆ ಡಿಎಪಿ, ಯೂರಿಯಾ ಮತ್ತಿತರ ರಸಗೊಬ್ಬರ ಸಿಗದೆ ರೈತರು ಕೆಲ ಖಾಸಗಿ ಅಂಗಡಿಗಳಲ್ಲಿ ಹೆಚ್ಚಿನ ದರ ನೀಡಿ ಖರೀದಿಸುವಂತಾಗಿದೆ. ಸಹಕಾರ ಸಂಘಗಳ ಮೂಲಕ ರೈತರಿಗೆ ಗೊಬ್ಬರ ವಿತರಣೆ ಮಾಡಿದರೂ, ಸಹಕಾರ ಸಂಘದವರು ತಮ್ಮ ವ್ಯಾಪ್ತಿಯ ರೈತರಿಗೆ ಗೊಬ್ಬರ ವಿತರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಅರಕೇರಾ ಎಣ್ಣೆ ಬೀಜ ಸಹಕಾರ ಸಂಘ, ಹಿರೇಕೋಟ್ನೆಕಲ್ ಎಣ್ಣೆ ಬೀಜ ಸಹಕಾರ ಸಂಘ, ಕಲ್ಮಲಾ ಎಣ್ಣೆ ಬೀಜ ಸಹಕಾರ ಸಂಘ, ಕಲ್ಲೂರು ರೈತರ ಸೇವಾ ಸಹಕಾರಿ ಸಂಘ, ಗಿಲ್ಲೇಸೂಗೂರು ರೈತರ ಸೇವಾ ಸಹಕಾರಿ ಸಂಘದವರು ಕರ್ನಾಟಕ ಬೀಜ ನಿಗಮ ಹಾಗೂ ಮಾರ್ಕೆಟಿಂಗ್ ಫೆಡರೇಶನ್ ಮೂಲಕ ಗೊಬ್ಬರ ಖರೀದಿಸಿದ್ದಾರೆ. ಆದರೆ ಮೇಲಿನ ಎಲ್ಲ ಸಂಘದವರು ರೈತರಿಗೆ ಗೊಬ್ಬರ ವಿತರಿಸಿಲ್ಲ ಎಂದು ಆಯಾ ಸಹಕಾರ ಸಂಘ ಗಳ ವ್ಯಾಪ್ತಿಯ ರೈತರು ದೂರಿದ್ದಾರೆ.

ಕೆಲ ರೈತ ಉತ್ಪನ್ನ ಸಂಘಗಳು ಸಹ ಗೊಬ್ಬರ ಮಾರಾಟ ಮಾಡಲು ಪರವಾನಿಗೆ ಪಡೆದು ಅವರೂ ಸಹ ಕೃಷಿ ಇಲಾಖೆ ಒಂಟಿ ನಿರ್ದೇಶಕರಿಂದ ಗೊಬ್ಬರದ ಮಂಜೂರಾತಿ ಪಡೆದು ಖರೀದಿಸಿದರೂ ಅದರಲ್ಲಿ ಕೆಲವರು ರೈತರಿಗೆ ಸಮರ್ಪಕ ವಿತರಣೆ ಮಾಡುತ್ತಿಲ್ಲ ಎಂಬ ದೂರುಗಳಿವೆ.

ಜಿಲ್ಲೆಯಲ್ಲಿ 64 ರೈತ ಸೇವಾ ಸಹಕಾರ ಸಂಘಗಳಿದ್ದು ಅದರಲ್ಲಿ ಬಹುತೇಕ ಸಹಕಾರ ಸಂಘಗಳಿಗೆ ಗೊಬ್ಬರ ಸಂಗ್ರಹಿಸಲು ಗೋದಾಮುಗಳೇ ಇಲ್ಲ. ಅಂತಹ ಸಹಕಾರ ಸಂಘದವರು ಖಾಸಗಿ ಗೊಬ್ಬರ ವ್ಯಾಪಾರಿಗಳಿಂದ ರಾಯಚೂರು ನಗರದಲ್ಲಿ ಕೆಲ ಖಾಸಗಿ ರಸಗೊಬ್ಬರ ಮಾರಾಟಗಾರರು ಡಿಎಪಿ, ಯೂರಿಯ ಅಲ್ಲದೆ, ಇತರ ರಸಗೊಬ್ಬರ ದಾಸ್ತಾನು ಇಲ್ಲ ಎನ್ನುತ್ತಿದ್ದಾರೆ. ದಾಸ್ತಾನು ಇದ್ದರೂ ಮಾರಾಟ ಮಾಡುತ್ತಿಲ್ಲ. ಚೀಲಕ್ಕೆ 100 ರಿಂದ 200 ರೂ.ಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬುದು ರೈತರು ಆರೋಪಿಸುತ್ತಿದ್ದಾರೆ.

ತೆಲಂಗಾಣ, ಆಂಧ್ರಪ್ರದೇಶದ ರೈತಕೇಂದ್ರಗಳತ್ತ ಜಿಲ್ಲೆಯ ರೈತರ ಚಿತ್ತ: ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕವಾಗಿ ರಸ ಗೊಬ್ಬರ ಸಿಗುತ್ತಿಲ್ಲ ಎಂಬ ಕಾರಣಕ್ಕೆ ರಾಯಚೂರು ಗಡಿಭಾಗಕ್ಕೆ ಹಿಂದಿಕೊಂಡ ಕಾರಣ ನೆರೆಯ ತೆಲಂಗಾಣದ ಗದ್ವಾಲ್, ಗುಡೇಬಲ್ಲೂರು ಹಾಗೂ ಆಂಧ್ರಪ್ರದೇಶದ ಸಮೀಪದ ರೈತ ಸಂಪರ್ಕ ಕೇಂದ್ರಗಳತ್ತ ಜಿಲ್ಲೆಯ ರೈತರು ಹೋದರೆ ಸ್ಥಳೀಯ ರೈತರಿಗೆ ಕೊರತೆಯಾಗುತ್ತೆ ಎಂಬ ನೆಪದಲ್ಲಿ ಗೊಬ್ಬರ ನೀಡುತ್ತಿಲ್ಲ ಎಂದು ಜಿಲ್ಲೆಯ ರೈತರು ಹೇಳುತ್ತಿದ್ದಾರೆ. ಅಲ್ಲದೇ ರಾಯಚೂರು ಎಪಿಎಂಸಿಯಲ್ಲಿ ಹೆಚ್ಚಿನ ದರ ಇರುವುದರಿಂದ ನೆರೆಯ ರಾಜ್ಯದ ರೈತರು ಭತ್ತ, ಹತ್ತಿ, ತೊಗರಿ ಮಾರಾಟ ಮಾಡುತ್ತಾರೆ. ಅವರಿಗೆ ಯಾವುದೇ ತಾರತಮ್ಯವಿಲ್ಲದೇ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತಿದೆ ನಮಗೆ ಸೂಕ್ತ ರಸಗೊಬ್ಬರ ನೀಡದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಶೋಕಾಸ್ ನೋಟಿಸ್ ಜಾರಿ

ರಾಯಚೂರು ಜಿಲ್ಲೆಯ ಕಲ್ಲೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರಸಗೊಬ್ಬರ ಮಾರಾಟ ಗೋದಾಮಿ(ವಿಎಸ್‌ಎಸ್‌ಎನ್‌ಗೆ)ಗೆ ಜುಲೈ 24ರಂದು ಕೃಷಿ ಅಧಿಕಾರಿಗಳು ಭೇಟಿ ನೀಡಿದಾಗ ಗೋದಾಮಿನಲ್ಲಿ ರಸಗೊಬ್ಬರ ದಾಸ್ತಾನು ಕಂಡುಬಂದಿರುವುದಿಲ್ಲ. ಭಪರ್ ದಾಸ್ತಾನಿನಿಂದ 79 ಟನ್ ಯೂರಿಯಾವನ್ನು ಅವರು ಪಡೆಯಲಾಗಿದೆ. ಅಲ್ಲದೇ ಯಾವುದೇ ರೈತರಿಗೆ ರಸಗೊಬ್ಬರ ಹಂಚಿಕೆ ಮಾಡಿರುವ ಬಗ್ಗೆಯೂ ದಾಖಲೆಗಳಿಲ್ಲ. ಮೂರು ದಿನದೊಳಗಾಗಿ ಸೂಕ್ತ ಮಾಹಿತಿ ನೀಡದೇ ಇದ್ದರೆ, ಸಂಘಕ್ಕೆ ನೀಡಿರುವ ರಸಗೊಬ್ಬರ ಮಾರಾಟದ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಮಾನ್ವಿಯ ಸಹಾಯಕ ಕೃಷಿ ನಿರ್ದೇಶಕರು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಕೃತಕ ಅಭಾವ ಸೃಷ್ಟಿಸುವ ಹಾಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿದಲಾಗಿದೆ. ಗೊಬ್ಬರದ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ಎಷ್ಟು ದಾಸ್ತಾನು ಇದೆ ಎಂದು ಬೋರ್ಡ್ ಹಾಕಬೇಕು. ಕೃತಕ ಅಭಾವ ಸೃಷ್ಟಿಸಿ ಯೂರಿಯಾ ಗೊಬ್ಬರಕ್ಕಾಗಿ ರೈತರನ್ನು ಅಲೆದಾಡುವಂತೆ ಮಾಡಲಾಗುತ್ತಿದೆ. ಈ ಬಗ್ಗೆ ಎಲ್ಲ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.

-ಡಾ.ಶರಣಪ್ರಕಾಶ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ, ರಾಯಚೂರು

ರಾಯಚೂರು ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಎರಡನೇ ವಾರದವರೆಗೆ ವಾಡಿಕೆ ಮಳೆ 162.10 ಮಿ.ಮಿ ಆಗಬೇಕಾಗಿತ್ತು ಆದರೆ 274.10 ಮಿ.ಮಿ. ಆಗಿದೆ. ಶೇಕಡಾ 69 ರಷ್ಟು ಹೆಚ್ಚಾಗಿದೆ. ಮುಂಗಾರು ಹಂಗಾಮಿಗೆ 5,53,883 ಹೆಕ್ಟರ್ ಭೂಮಿಗೆ ಬಿತ್ತನೆ ಪ್ರದೇಶದ ಗುರಿ ಹೊಂದಿದ್ದು, ಈವರೆಗೆ 2,69,324 (ಶೇ.48.62) ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ರಾಯಚೂರು ತಾಲೂಕಿನಲ್ಲಿ 58,848 ಹೆಕ್ಟರ್ ಪ್ರದೇಶ(ಶೇ 50), ಮಾನ್ವಿ 23,414 ಹೆಕ್ಟರ್ ಪ್ರದೇಶ, ಸಿರವಾರ 24,468 ಹೆಕ್ಟರ್ ಪ್ರದೇಶ, ಸಿಂಧನೂರು ತಾಲೂಕಿನಲ್ಲಿ 20,325 ಹೆಕ್ಟರ್ ಪ್ರದೇಶ, ಲಿಂಗಸುಗೂರು 43,081 ಹೆಕ್ಟರ್ ಪ್ರದೇಶ(ಶೇ.93.93), ದೇವದುರ್ಗ ತಾಲೂಕು 68,750 ಹೆಕ್ಟರ್ ಪ್ರದೇಶ ಹಾಗೂ ಮಸ್ಕಿ 30,438 ಹೆಕ್ಟರ್ ಪ್ರದೇಶ (ಶೇ.46) ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

2025-26ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ರಾಯಚೂರು, ಸಹಕಾರ ಸಂಘಗಳಲ್ಲಿ 11250 ಮೆಟ್ರಿನ್ ಟನ್ ಹಾಗೂ ಖಾಸಗಿ ಮಾರಾಟಗಾರರಲ್ಲಿ 97,052 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 1,08,302 ಮೆಟ್ರಿಕ್ ಟನ್ ರಸಗೊಬ್ಬರ ಇಲ್ಲಿಯವರೆಗೆ ಪೂರೈಸಲಾಗಿದೆ. ಕಾಪು ದಾಸ್ತಾನು 18,88.29, ಮೆಟ್ರಿಕ್ ಟನ್ ಹಾಗೂ ಖಾಸಗಿ ಮಳಿಗೆಗಳಲ್ಲಿ 53,127.90 ಮೆಟ್ರಿಕ್ ಟನ್ ಸೇರಿ ಒಟ್ಟು ಜಿಲ್ಲೆಯಲ್ಲಿ 55,016.237 ಟನ್ ನಷ್ಟು ದಾಸ್ತಾನು ಲಭ್ಯವಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ ಚವ್ಹಾಣ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು

contributor

Similar News