ಪಂಚ ಗ್ಯಾರಂಟಿಗಳು ಮತ್ತು ಕರ್ನಾಟಕ ಸರಕಾರದ ಆರ್ಥಿಕತೆ
ಕರ್ನಾಟಕ ಸರಕಾರ ತನ್ನ ಬಜೆಟ್‌ನ 32.4ರಷ್ಟು ಹಣವನ್ನು ರಾಜ್ಯ ಸರಕಾರದ ಕಲ್ಯಾಣ ಯೋಜನೆಗಳಿಗೆ ವಿನಿಯೋಗ ಮಾಡುತ್ತಿದೆ. ಇದರಿಂದ ಪ್ರತೀ ಕುಟುಂಬಕ್ಕೆ ವಾರ್ಷಿಕ ರೂ.25,000ದಿಂದ ರೂ.55,000ವರೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೊರೆತಿವೆ. ಇದರಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಆಗುವುದಲ್ಲದೆ ಇದೇ ವರ್ಗ ಭವಿಷ್ಯ ದಲ್ಲಿ ನೂರಾರು ಲಕ್ಷಕೋಟಿ ರೂ.ಗಳ ಭೌತಿಕ ಅಭಿವೃದ್ಧಿ ಸೃಷ್ಟಿ ಮಾಡುತ್ತದೆ.
12ನೇ ಶತಮಾನದಲ್ಲಿ ಬಸವಣ್ಣನವರು ಜಗತ್ತಿಗೆ ಸಮಾಜವಾದವನ್ನು ಕಲಿಸಿದ ಮಹಾಮಾನವತಾವಾದಿ. ಅದೇ ಮಾದರಿಯನ್ನು ಭಾರತ ಸಂವಿಧಾನದ ವಿಧಿ 38ಮತ್ತು 39ರಲ್ಲಿ ಸಮಾಜವಾದ ಎಂಬ ಸಿದ್ಧಾಂತದ ಅಡಿಯಲ್ಲಿ ಸೇರಿಸಲಾಗಿದೆ. ಸಂಪತ್ತನ್ನು ಕ್ರೋಡೀಕರಿಸುವುದು ಬಂಡವಾಳವಾದರೆ ಸಮಾಜದ ಸಂಪತ್ತನ್ನು ಸಮಾನವಾಗಿ ಬಡವರಿಗೆ, ನಿರ್ಗತಿಕರಿಗೆ, ಮಹಿಳೆಯರಿಗೆ, ವಿಧವೆಯರಿಗೆ, ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ಅಂಗವಿಕಲರಿಗೆ ಹಂಚುವುದೇ ಸಮಾಜವಾದ. ಅದನ್ನೇ ಬಸವಣ್ಣ ಹೇಳಿದ್ದಾರೆ.
ಇಂದಿನ ಹಂಚಿ-ತಿನ್ನುವ ಈ ಕಾರ್ಯವೇ ಈಗಿನ ಸರಕಾರದ ಉಚಿತ ಕೊಡುಗೆಗಳು, ಗ್ಯಾರಂಟಿಗಳು. ಅಂದು ಬಸವಣ್ಣ ಮಾಡಿದ್ದು ಸರಿ ಇದ್ದರೆ, ಇಂದು ಸಿದ್ದರಾಮಯ್ಯನವರು ಮಾಡುವುದು ಕೂಡಾ ಸರಿಯಲ್ಲವೇ?.
ಕರ್ನಾಟಕ ಸರಕಾರ 2023ರಲ್ಲಿ ಚುನಾವಣಾ ವೇಳೆಯಲ್ಲಿ ತನ್ನ ಜನರಿಗಾಗಿ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಅವುಗಳನ್ನು ತನ್ನ ಪಕ್ಷದ ಪ್ರಣಾಳಿಕೆಯಲ್ಲಿಟ್ಟಿತು. ಈ ಕುರಿತು ಫಲಾನುಭವಿಗಳು ಇದರ ಸದುಪಯೋಗ ಪಡೆಯಲಾರಂಭಿಸಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಸರಕಾರದ ಈ ಪಂಚಯೋಜನೆಗಳಿಂದ ರಾಜ್ಯ ಸರ್ವನಾಶ ಆಯಿತೆಂದು ಬೊಬ್ಬಿರಿಯುತ್ತಿದ್ದಾರೆ.
ಆ ಯೋಜನೆಗಳ ಸ್ಥೂಲನೋಟವನ್ನು ನೋಡೋಣ.
1. ಗೃಹಜೋತಿ ಯೋಜನೆ
ಜುಲೈ 1 2023ರಿಂದ ಪ್ರತೀ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದು ಬಡವರ ಮನೆಯ ಅಂಧಕಾರ ದೂರ ಮಾಡುವ ಯೋಜನೆಯಾಗಿದೆ. ಈಗಾಗಲೇ ಈ ಹಿಂದೆ ಭಾಗ್ಯಜ್ಯೋತಿ, ಕುಟೀರಜ್ಯೋತಿ ಮತ್ತು ಅಮೃತಜ್ಯೋತಿ ಯೋಜನೆಗಳಿಗೆ ವಿರೋಧಿಸದಿರುವವರು ಈ ಯೋಜನೆಗೇಕೆ ವಿರೋಧಿಸುತ್ತಿದ್ದಾರೆ? ಬಡವರ ಮನೆಯಲ್ಲಿ ಬೆಳಕಿರಬಾರದೇ?
2. ಗೃಹಲಕ್ಷ್ಮಿಯೋಜನೆ
6 ಜೂನ್, 2023 ರಂದು ಕರ್ನಾಟಕ ಸರಕಾರ ಆದೇಶವನ್ನು ಹೊರಡಿಸಿ, ಮಹಿಳೆಯು ಕುಟುಂಬದ ಮುಖ್ಯಸ್ಥರಾಗಿರುವ ಕುಟುಂಬಕ್ಕೆ ಆಗಸ್ಟ್ 5ರಿಂದ ಪ್ರತೀ ತಿಂಗಳು 2,000 ರೂ. ನೀಡುವುದಾಗಿ ಹೇಳಿದೆ. ಈ ಯೋಜನೆಯ ಫಲಾನುಭವಿಗಳು ಬಡತನ ರೇಖೆಗಿಂತ ಕೆಳಗಿರಬೇಕು ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬಕ್ಕೆ ಸೇರಿದವರಾಗಿರಬೇಕು.
ಪ್ರಸಕ್ತ ಕರ್ನಾಟಕ ಸರಕಾರದ ಈ ಯೋಜನೆ ರಾಜ್ಯದ ಎಷ್ಟೋ ಮಹಿಳೆಯರು ತಲೆಯೆತ್ತಿ ಬದುಕುವಂತೆ ಮಾಡಿದೆ. ‘‘ನನ್ನಲ್ಲಿ ವಿಷಕುಡಿದು ಸಾಯೋಕೂ ಹತ್ತು ಪೈಸೆ ಇಲ್ಲ’’ ಎಂದು ಹಳ್ಳಿಯಲ್ಲಿ ಹೆಂಗಸರು ಮಾತಾಡುವುದನ್ನು ನಾನು ಕೇಳಿದ್ದೇನೆ. ಇಂದು ಗೌರವಯುತವಾಗಿ ಪ್ರತೀ ತಿಂಗಳು ಅವರ ಖಾತೆಗೆ ರೂ. 2,000 ಜಮೆಯಾಗುತ್ತಿದೆ. ಈ ಯೋಜನೆಗೆ ಸರಕಾರ ಎಷ್ಟು ಖರ್ಚು ಮಾಡುತ್ತದೆ ಎಂಬುದು ಮುಖ್ಯವಲ್ಲ. ಎಷ್ಟು ಬಡ ಹೆಂಗಸರ ಕಣ್ಣೀರು ಒರಸುತ್ತದೆ ಎಂಬುದು ಮುಖ್ಯ.
3. ಯುವ ನಿಧಿ ಯೋಜನೆ
ಕರ್ನಾಟಕದ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3,000 ರೂ. ಭತ್ತೆ ಸಿಗುತ್ತದೆ, ಡಿಪ್ಲೊಮಾ ಮಾಡಿದ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ. 1,500 ಸಿಗುತ್ತದೆ. ಫಲಾನುಭವಿಗಳಾಗಿ ಎರಡು ವರ್ಷಗಳಲ್ಲಿ ಉದ್ಯೋಗ ಪಡೆಯಬೇಕು. ಇಲ್ಲದಿದ್ದರೆ ಈ ಯೋಜನೆಯಿಂದ ಅವರ ಹಣ ಜಮೆ ಆಗುವುದನ್ನು ನಿಲ್ಲಿಸಲಾಗುತ್ತದೆ.
ಯುವಕರು ಈ ದೇಶದ ಆಶಾಕಿರಣ. ಇಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಉಚಿತ ಹಾಸ್ಟೆಲ್, ಬೈಸಿಕಲ್, ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿ ಊಟದಂತಹ ಯೋಜನೆಗಳನ್ನು ಎಲ್ಲಾ ಸರಕಾರಗಳು ನೀಡುತ್ತಾ ಬಂದಿವೆ. ಈ ಎಲ್ಲಾ ಯೋಜನೆಗಳಿಗೆ ಇಲ್ಲಿಯವರೆಗೆ ಯಾರೂ ವಿರೋಧಿಸಿಲ್ಲ. ಇಂದಿನ ಯೋಜನೆಗೆ ವಿರೋಧವೇಕೆ?
4. ಅನ್ನಭಾಗ್ಯಯೋಜನೆ
‘‘ಅನ್ನದೇವರ ಮುಂದೆ ಇನ್ನು ದೇವರುಂಟೆ? ಅನ್ನವಿರುವ ತನಕ ಪ್ರಾಣವು; ಜಗದೊಳಗನ್ನವೇ ದೈವ’’ ಎನ್ನುತ್ತಾನೆ ಸರ್ವಜ್ಞ.
ಕರ್ನಾಟಕ ಸರಕಾರ ಜುಲೈ 1, 2023ರಿಂದ ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಅಕ್ಕಿ ಉಚಿತವಾಗಿ ದೊರಕುವಂತೆ ಮಾಡಿದೆ. ಈಗಾಗಲೇ ಸಾರ್ವಜನಿಕ ಪಡಿತರ ವ್ಯವಸ್ಥೆ ತುಂಬಾ ವರ್ಷಗಳ ಹಿಂದೆಯೇ ಜಾರಿಯಲ್ಲಿದೆ. ಎಲ್ಲಾ ಸರಕಾರಗಳು ಬಡವನ ಹೊಟ್ಟೆ ತುಂಬಿಸಬೇಕೆಂದು ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿವೆ. ಅಂದು ಮಾಡದ ವಿರೋಧ ಇಂದೇಕೆ?
ಇಂತಹ ಯೋಜನೆಗಳು ಭಾರತದಂತಹ ದೇಶಗಳಿಗೆ ಅತ್ಯಗತ್ಯ. ದೇಶದ ಯಾವುದೇ ಪ್ರಜೆ ಹೊಟ್ಟೆ ಹಸಿದುಕೊಂಡು ಮಲಗಬಾರದು. ಇದುವೇ ಸಮಾಜವಾದದ ಪರಿಕಲ್ಪನೆ. ತಿನ್ನಲು ಅನ್ನ, ಕುಡಿಯಲು ನೀರು, ಮಾನ ಮುಚ್ಚಲು ಬಟ್ಟೆ, ಅಗತ್ಯವಾದ ಸೌಕರ್ಯಗಳನ್ನು ಕೊಡದಿದ್ದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಎಲ್ಲಿದೆ?
5. ಶಕ್ತಿ ಯೋಜನೆ
ಜೂನ್ 11, 2023ರಿಂದ ಕರ್ನಾಟಕದ ಮಹಿಳೆಯರು ರಾಜ್ಯದ ಯಾವುದೇ ಭಾಗಕ್ಕಾದರೂ ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡಬಹುದಾಗಿದೆ.
ಕೇವಲ ಹೆಣ್ಣು ಎಂಬ ಕಾರಣಕ್ಕೆ ಅವಳ ವಿದ್ಯಾಭ್ಯಾಸ, ಬಟ್ಟೆ ಬರೆ, ಊಟದಲ್ಲಿ ತಾರತಮ್ಯ ಮಾಡುತ್ತಲೇ ಬಂದಿದ್ದೇವೆ. ಅವಳ ಸ್ವಾತಂತ್ರ್ಯದ ಮೊದಲ ಹೆಜ್ಜೆಯೇ ಚಲನಶೀಲತೆ.
ಯಾವಾಗ ಹೆಣ್ಣು ಮನೆಯ ನಾಲ್ಕು ಗೋಡೆ ಬಿಟ್ಟು ಬಂದು ಚಲಿಸಲು ಪ್ರಾರಂಭಿಸುವಳೋ ಆಗವಳು ಸ್ವತಂತ್ರಳೆಂದು ಭಾವಿಸುತ್ತಾಳೆ. ಸ್ವತಂತ್ರವಾಗಿ ನಿರ್ಭೀತಿಯಿಂದ ಈ ನಾಡಲ್ಲಿ ಸಂಚರಿಸಲಿ ಎಂಬುದೇ ಸರಕಾರದ ಆಶಯವಾಗಿದೆ.
ಕರ್ನಾಟಕ ಸರಕಾರದ ಆರ್ಥಿಕತೆ
ಕರ್ನಾಟಕ ಸರಕಾರ 2024-25ರ ಬಜೆಟ್‌ನಲ್ಲಿ ರೂ. 53,674 ಕೋಟಿ ಮೊತ್ತವನ್ನು ಸರಕಾರ ಪಂಚ ಗ್ಯಾರಂಟಿಗಳಿಗೆ ನಿಗದಿ ಮಾಡಿತ್ತು. ಇದು ರಾಜ್ಯದ ಮೇಲೆ ಹೊರೆಯೇ ಆದರೂ ಬಡವರು, ನಿರ್ಗತಿಕರು, ಹೆಂಗಸರು, ಯುವಕರು ಈ ರಾಜ್ಯಕ್ಕೆ ಖಂಡಿತ ಭಾರವಲ್ಲ.
ಸಂವಿಧಾನದ ವಿಧಿ 21 ನಮಗೆಲ್ಲ ಘನತೆಯಿಂದ ಬದುಕುವ ಹಕ್ಕು ನೀಡಿದೆ. ದೇಶದ ಸ್ಥಿತಿ ನೋಡಿದರೆ ಶೇ. 90ರಷ್ಟು ಜನರ ಬದುಕುವ ಹಕ್ಕನ್ನು ಕಸಿಯಲಾಗಿದೆ. ಭಾರತದ ನಲವತ್ತರಷ್ಟು ಸಂಪತ್ತು ಕೇವಲ ಶೇ. ಒಂದರಷ್ಟು ಜನರ ಕೈಯಲ್ಲಿದೆ. ಸ್ಟೇಟ್‌ಆಫ್ ವರ್ಕಿಂಗ್ ಇಂಡಿಯಾ ರಿಪೋರ್ಟ್ 2023ರ ವರದಿಯನ್ನು ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾನಿಲಯ ಪ್ರಕಟಿಸಿದೆ. 1980ರಲ್ಲಿ ಮಹಿಳೆಯರು ಕೆಲಸದಲ್ಲಿ ಭಾಗವಹಿಸುವಿಕೆ ಶೇ. 52 ಇತ್ತು, ಅದೀಗ ಶೇ. 39.1 ಆಗಿದೆ. 25 ವರ್ಷದೊಳಗಿನ ಶೇ. 42ರಷ್ಟು ಪದವೀಧರರು ಇಂದು ದೇಶದಲ್ಲಿ ನಿರುದ್ಯೋಗಿಗಳು. ನರೇಗಾ ಯೋಜನೆ, ಪಡಿತರ ವ್ಯವಸ್ಥೆ ಶೇ. 50ರಷ್ಟು ಜನರನ್ನು ಬಡತನ ರೇಖೆಗಿಂತ ಕೆಳಗೆ ಹೋಗದಂತೆ ತಡೆದಿದೆ. ಈ ಯೋಜನೆ ನಿಲ್ಲಿಸಿದರೆ ರಾತ್ರೋರಾತ್ರಿ ಶೇ. 50ರಷ್ಟು ಜನರು ಬಡತನ ರೇಖೆಯ ಕೆಳಗೆ ಹೋಗುತ್ತಾರೆ.
ಸರಿಪಡಿಸಬೇಕಿರುವುದು ಯಾವುದನ್ನು?
ಹತ್ತು ವರ್ಷಗಳಲ್ಲಿ ಈ ದೇಶದ ಬಂಡವಾಳಶಾಹಿಗಳ ಸುಮಾರು ರೂ. 15 ಲಕ್ಷ ಕೋಟಿಗಳಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ. ಕಾರ್ಪೊರೇಟ್ ಕಂಪೆನಿಗಳ ತೆರಿಗೆಯನ್ನು ಶೇ. 30ರಿಂದ 22ಕ್ಕೆ ಇಳಿಸಲಾಗಿದೆ. ಇದರಿಂದ ವರ್ಷಕ್ಕೆ 1 ಲಕ್ಷಕೋಟಿ ಸ್ವೀಕೃತಿ ಪಡೆದ ಕಾರ್ಪೊರೇಟ್ ಕಂಪೆನಿಗಳು ದೇಶದ ಅಭಿವೃದ್ಧಿಗೆ ಕೈಜೋಡಿಸುವುದಿಲ್ಲ. ಅವುಗಳು ವೈಯಕ್ತಿಕ ಅಭಿವೃದ್ಧಿಗಷ್ಟೇ ಮುಂದಾಗಿವೆ. ದೇಶದ ಅಭಿವೃದ್ಧಿಎಂದರೆ ನಿರುದ್ಯೋಗದ ಅಭಿವೃದ್ಧಿ ಆದಂತಾಗಿದೆೆ. ಪ್ರಜಾಪ್ರಭುತ್ವದಲ್ಲಿ ಪ್ರಭು ಆದವರು ಬಹುತ್ವದ ಪ್ರತಿನಿಧಿ ಆಗಬೇಕೇ ಹೊರತು ಕುಲೀನರ ಕೈಯಾಳು ಆಗಬಾರದು. ಒಂದು ವೇಳೆ ಹಾಗಾದರೆ ಅದು ಡೆಮಾಕ್ರಸಿ ಅಲ್ಲ, ಅರಿಷ್ಟೊಕ್ರೆಸಿ ಆದಂತೆ.
ಕರ್ನಾಟಕ ಸರಕಾರ ತನ್ನ ಬಜೆಟ್‌ನ 32.4ರಷ್ಟು ಹಣವನ್ನು ರಾಜ್ಯ ಸರಕಾರದ ಕಲ್ಯಾಣ ಯೋಜನೆಗಳಿಗೆ ವಿನಿಯೋಗ ಮಾಡುತ್ತಿದೆ. ಇದರಿಂದ ಪ್ರತೀ ಕುಟುಂಬಕ್ಕೆ ವಾರ್ಷಿಕ ರೂ.25,000ದಿಂದ ರೂ.55,000ವರೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೊರೆತಿವೆ. ಇದರಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಆಗುವುದಲ್ಲದೆ ಇದೇ ವರ್ಗ ಭವಿಷ್ಯದಲ್ಲಿ ನೂರಾರು ಲಕ್ಷಕೋಟಿ ರೂ.ಗಳ ಭೌತಿಕ ಅಭಿವೃದ್ಧಿ ಸೃಷ್ಟಿ ಮಾಡುತ್ತದೆ.
ಸರಕಾರ ಮಾಡಬೇಕಿರುವುದು ಏನು?
ಗ್ಯಾರಂಟಿ ಘೋಷಿಸುವ ಮೂಲಕ ಸರಕಾರ ಬಡವರ ಪಾಲಿನ ಬಂಧು ಆಗಿದೆ ನಿಜ. ಆದರೆ ಮಾಡಿದ ಸಾಲವನ್ನು ತೀರಿಸಲು ತಕ್ಕ ಯೋಜನೆ ರೂಪಿಸಬೇಕು. ಅನರ್ಹ ಫಲಾನುಭವಿಗಳನ್ನು ಹುಡುಕಬೇಕು, ತೆರಿಗೆ ಸೋರಿಕೆಯನ್ನು ತಡೆಯಬೇಕು, ಕೇಂದ್ರ ಸರಕಾರದಿಂದತನಗೆ ನ್ಯಾಯಯುತವಾಗಿ ಬರಬೇಕಾದ ಪಾಲನ್ನು ತರಬೇಕು, ಸಮಾಜದ ಕೆಲವು ವರ್ಗಗಳಿಗೆ ನೀಡಿದ ಅನವಶ್ಯಕ ಐಷಾರಾಮಿ ಸೌಲಭ್ಯವನ್ನು ಹಿಂಪಡೆಯಬೇಕು.
ಕೊನೆಯ ನುಡಿ
ಗ್ಯಾರಂಟಿ ಯೋಜನೆಗಳಂತಹ ಸಮಾಜವಾದಿ ಯೋಜನೆಗಳನ್ನು ಕೆಲವು ಅಧಿಕಾರಿಗಳು, ಶ್ರೀಮಂತರು, ನ್ಯಾಯಾಧೀಶರು, ಪತ್ರಕರ್ತರು ಟೀಕಿಸಬಹುದು. ಆದರೆ ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ